• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಎಸ್ಕೆ.ಶಾಮಸುಂದರ

By ಎಸ್ಕೆ.ಶಾಮಸುಂದರ
|

*ಎಸ್ಕೆ.ಶಾಮಸುಂದರ

ಉತ್ತರ ಅಮೆರಿಕಾದ ಪಶ್ಚಿಮ ತುತ್ತತುದಿಯಲ್ಲಿರುವ ರಾಜ್ಯ ಕ್ಯಾಲಿಫೋರ್ನಿಯ. ಇಲ್ಲಿ ಎದ್ದು ಕಾಣುವ ಮೂರು ಮುಖ್ಯ ಧಾತುಗಳಲ್ಲಿ ಮೊದಲನೆಯದು ಪೆಸಿಫಿಕ್‌ ಮಹಾಸಾಗರ. ಎರಡನೆಯದು ಸಿಯಾರಾ ಪರ್ವತ ಶ್ರೇಣಿ. ಮೂರನೆಯದು ವಲಸೆ ಬಂದ ಭಾರತೀಯರು. ಈ ಪ್ರಾಂತ್ಯಕ್ಕೆ ಸಿಲಿಕಾನ್‌ ಕಣಿವೆಯೆಂದೂ ಹೆಸರು. ರಾಜ್ಯವನ್ನು ಭೌಗೋಳಿಕವಾಗಿ ದಕ್ಷಿಣ ಮತ್ತು ಉತ್ತರ ಕ್ಯಾಲಿಫೋರ್ನಿಯ ಎಂದು ವಿಭಾಗಿಸಲಾಗಿದೆ. ಈ ಪ್ರದೇಶದಲ್ಲಿ ಭಾರತೀಯರ ಸಂಖ್ಯೆ ಸುಮಾರು 59,000. ಅವರೆಲ್ಲ ಮುಖ್ಯವಾಗಿ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ನಿರತರು. ಅನೇಕರು ಇಂಟೆಲ್‌, ಒರಾಕಲ್‌, ಮೈಕ್ರೋಸಾಫ್ಟ್‌, ಸನ್‌ ಮೈಕ್ರೋ, ಸಿಸ್ಕೋ ಮುಂತಾದೆಡೆ ನೌಕರರಾಗಿ ಜೀವನ ನಡೆಸುತ್ತಿದ್ದರೆ, ಕೆಲವರು ತಮ್ಮದೇ ಆದ ಉದ್ಯಮ ನಡೆಸುವರು. ಆ ಉದ್ಯಮಗಳೂ ಕೂಡ ಹೆಚ್ಚೂ ಕಡಿಮೆ ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಸಂಬಂಧಿಸಿರುವುದೇ ಆಗಿರುತ್ತದೆ. ಉದ್ಯೋಗಿಗಳಷ್ಟೇ ಅಲ್ಲ, ವಿದ್ಯಾರ್ಥಿಗಳೂ ಉಂಟು. ದುಡಿಯುವ ಕನ್ನಡ ಮಣ್ಣಿನ ಮಕ್ಕಳ ತಂದೆ ತಾಯಿ ಅಣ್ಣ ತಂಗಿ ಮುಂತಾದ ಕುಟುಂಬ ಸದಸ್ಯರು ಕೆಲ ಕಾಲಕ್ಕಾದರೂ ಕ್ಯಾಲಿಫ್‌ನಲ್ಲಿ ಠಿಕಾಣಿ ಹೂಡುವರು.

ಇಲ್ಲಿ ತಳವೂರಿರುವ ಭಾರತೀಯ ಸಮುದಾಯದವರಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ? ನಿಖರವಾದ ಅಂಕೆಸಂಖ್ಯೆಗಳು ಸಿಕ್ಕಿಲ್ಲ. ಕೆಲವರು ಅಂದಾಜು ಮಾಡುವಂತೆ ಕನ್ನಡ ನಾಡಿನ ಮೂಲೆಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಕನ್ನಡಿಗರ ಪಾಲು 10 ಅಥವಾ 12 ಸಾವಿರ.

ಸಂಖ್ಯೆ ಎಷ್ಟೇ ಇರಲಿ.

ಉತ್ತರ ಮತ್ತು ದಕ್ಷಿಣ ಕ್ಯಾಲಿಫ್‌ನಲ್ಲಿ ಕನ್ನಡಿಗರ ಕನ್ನಡ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ನಡೆಯುತ್ತವೆ. ಮುಖ್ಯವಾಗಿ ಬೇ ಏರಿಯಾದ ಕನ್ನಡ ಜೀವನಾಡಿ ಪ್ರದೇಶಗಳಾದ ಕುಪರ್ಟಿನೋ, ಸ್ಟಾಕ್‌ಟನ್‌, ಮಿಲ್ಪಿಟಾಸ್‌ನಲ್ಲಿ ಕಾರ್ಯಕ್ರಮಗಳು ನಡೆಯುವುದು ಹೆಚ್ಚು. ಕಾರ್ಯಕ್ರಮಗಳ ಸ್ವರೂಪದಲ್ಲಿ ವೈವಿಧ್ಯವಿರುವುದನ್ನು ನೀವು ಗಮನಿಸಬೇಕು. ಸಂಕ್ರಾಂತಿಯಿಂದ ರಥಸಪ್ತಮಿಯ ತನಕ, ಕಾರಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಕನ್ನಡದ ಹಬ್ಬಗಳನ್ನು ನಮ್ಮವರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ದೊಡ್ಡ ಹಬ್ಬಗಳಿಗೆ ಕೂಟದ ಆಶ್ರಯ ಸಿಕ್ಕರೆ, ಪುಡಿಪುಡಿ ಹಬ್ಬಗಳು ಮನೆ ಮಟ್ಟಿಗೆ ನಡೆಯುವುದು ಸಾಮಾನ್ಯ.ಹಬ್ಬಗಳ ಜತೆಜತೆಗೇ ಭಾರತ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವದಂತಹ ನಾಡಹಬ್ಬಗಳಿಗೂ ವಿಶೇಷ ಮಹತ್ವ ಕೊಡಲಾಗುತ್ತದೆ. ಹಬ್ಬಗಳನ್ನು ಹೊರತುಪಡಿಸಿ ಇಣುಕಿ ನೋಡಿದರೆ ನಿಮಗೆ ಕಾಣುವುದು ಸಂಗೀತ, ಧಾರ್ಮಿಕ ಕಾರ್ಯಕ್ರಮಗಳು. ಪ್ರವಾಸೀ ಗಾಯಕರಿಂದ ಕರ್ನಾಟಕ, ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ, ಸಿನಿಮಾ ಕಲಾವಿದರಾದರೆ ಹಾಡು, ಕುಣಿತ ಸಂತೋಷ . ಅಂತೆಯೇ ಇಲ್ಲೇ ಜನಿಸಿದ ಸ್ವರ ರಾಗ ತಾಳಕ್ಕೆ ಮನಸೋತ ‘ಇಂಚರ’, ‘ರಾಗ’ ತಂಡಗಳು ಮನರಂಜನೆಯನ್ನು ಒದಗಿಸಲು ಶ್ರಮಿಸುತ್ತವೆ.

ಮಕ್ಕಳಿಗೆ ಎಳವೆಯಲ್ಲೇ ಭಾರತೀಯ ಚಿಂತನೆಗಳ ಪರಿಚಯವಾಗಲಿ ಎನ್ನುವ ಉದ್ದೇಶದಿಂದ ಕೆಲವರು ತಮ್ಮ ಮಕ್ಕಳನ್ನು ಚಿನ್ಮಯಾನಂದ ಶಿಶುವಿಹಾರಗಳಿಗೆ ಕರೆದುಕೊಂಡು ಹೋಗುವುದು ಉಂಟು. ರಾಘವೇಂದ್ರ ಹೆಬ್ಬಳಲು ಮತ್ತು ಅವರ ಶ್ರೀಮತಿ ಸಂಸ್ಕೃತ ತರಗತಿಗಳನ್ನು, ಶಿಬಿರಗಳನ್ನು ಏರ್ಪಡಿಸುತ್ತಾರೆ. ಇನ್ನು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್ತು, ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗು ಮುಂತಾದ ಸೈದ್ಧಾಂತಿಕ ಮತ್ತು ಮನಸ್ಸನ್ನು ಶಾಂತಿಯಲ್ಲಿಡಲು ಪ್ರೇರೇಪಿಸುವ ಘಟಕಗಳೂ ಕಾರ್ಯೋನ್ಮುಖಿಯಾಗುತ್ತವೆ. ಅಂತೆಯೇ ಕ್ಯಾಲಿಫ್‌ಗೆ ಬರುವ ಕನ್ನಡ ಕವಿ, ರಾಜಕಾರಣಿ, ಮುತ್ಸದ್ದಿ, ಆಡಳಿತಗಾರರು, ಗಾಯಕರು, ಗಾಯಕಿಯರು, ನಾಟಕಕಾರರು, ಬರಹಗಾರರು, ಪಂಡಿತರು ಮತ್ತು ಪುರುಷೋತ್ತಮರಿಂದ ಭಾಷಣ, ಚರ್ಚೆ, ಗಾಯನ, ಸಂವಾದಗಳು ಹೇರಳವಾಗಿ ಏರ್ಪಾಟಾಗುತ್ತದೆ.

ವರ್ಷಕ್ಕೆ 6 ರಿಂದ 7 ಇಂಚು ಮಳೆ ಕಾಣುವ ಈ ಬೆಂಗಾಡು ಕನ್ನಡ ಸಾಹಿತ್ಯ ಚಟುವಟಿಕೆಗಳ ದೃಷ್ಟಿಕೋನದಿಂದ ಗಮನಿಸಿದರೆ ಮಲೆನಾಡು. ಆರ್ಥಿಕ ಹಿಂಜರಿತದ ಪ್ರಭಾವ ಎಷ್ಟೇ ತೀವ್ರವಾಗಿರಲಿ, ನಿರುದ್ಯೋಗದ ಪ್ರಮಾಣ 7.9 ಮುಟ್ಟಿರಲಿ, ಕನ್ನಡಿಗರ ಬರವಣಿಗೆಯ ಕೃಷಿ ಇಲ್ಲಿ ಸೊರಗುವುದಿಲ್ಲ. ವಿಶೇಷವಾಗಿ ಇಲ್ಲಿ ಕನ್ನಡ ಲೇಖಕ, ಲೇಖಕಿಯರ ಸಂಖ್ಯೆ ಗಣನೀಯವಾದದ್ದು. ಕವನ, ಕಥೆ, ವೈಚಾರಿಕ ಲೇಖನ, ಸಾಹಿತ್ಯ ವಿಮರ್ಶೆ, ಅನುವಾದ, ಸಂಶೋಧನಾತ್ಮಕ ಲೇಖನಗಳು ಹೀಗೆ ಶ್ರದ್ಧೆಯಿಂದ, ಪ್ರೀತಿಯಿಂದ, ಪ್ರತಿಫಲ ಲೆಕ್ಕಿಸದೆ ಬರೆಯುತ್ತಾ ಹೋಗುತ್ತಾರೆ.

ಕನ್ನಡ ಕೂಟ ಹೊರತರುತ್ತಿರುವ ಈ ಬಾರಿಯ ಸ್ಮರಣ ಸಂಚಿಕೆ ಇನ್ನೇನು ಹೊರಬರುತ್ತದೆ. ದತ್ತಾತ್ರಿ ರಾಮಣ್ಣ, ಜ್ಯೋತಿ ಮಹದೇವ್‌ ಮತ್ತು ಸಮಾನ ಆಸಕ್ತರ ಆ ತಂಡದ ಉತ್ಸಾಹ ಹಾಗೂ ಶ್ರಮವನ್ನು ನೀವು ಆ ಸಂಚಿಕೆಯಲ್ಲಿ ಸದ್ಯದಲ್ಲೇ ಕಾಣುವಿರಿ. ಕನ್ನಡ ಬಳಗದ ಎಲ್ಲ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿ ನಿಲ್ಲುವವರು ಸನ್ನಿವೇಲ್‌ ದೇವಸ್ಥಾನದ ಗಜಾನನ ಜೋಷಿಯವರು. ಅವರ ಉತ್ಸಾಹ ಮತ್ತು ಪ್ರೋತ್ಸಾಹಕ್ಕೆ ದಟ್ಸ್‌ಕನ್ನಡ ಮತ್ತು ಸೂಜಿಮಲ್ಲಿಗೆ ಬಳಗದ ಶುಭಾಶಯಗಳು. ಅವರ ಮುಂದಾಳತ್ವದಲ್ಲಿ ನಡೆದ ಸನ್ಮಾನ ಸಮಾರಂಭಗಳು ಅದೆಷ್ಟೋ. ನಾವು ಇಲ್ಲಿಂದಲೇ ಗೌರವಪೂರ್ವಕವಾಗಿ ಹೊದಿಸುತ್ತಿರುವ, ಅಕ್ಷರಗಳಲ್ಲಿ ನೇಯ್ದ ಶಾಲನ್ನು ಮಾನ್ಯ ಜೋಷಿಯವರು ಸ್ವೀಕರಿಸುತ್ತಾರೆಂಬ ವಿಶ್ವಾಸ ನಮ್ಮದು !

ಕನ್ನಡದ ಗಂಧ ಗಾಳಿ ಬೀಸದ ಪ್ರಾಂತ್ಯಗಳು ಅಮೆರಿಕಾದಲ್ಲಿ ಬೇಕಾದಷ್ಟಿವೆ. ವರ್ಷಕ್ಕೆ ಒಂದೋ ಎರಡೋ ಕಾರ್ಯಕ್ರಮ ಮಾಡಿ ಅಷ್ಟರಲ್ಲೇ ಧನ್ಯತಾಭಾವ ತಾಳುವ ಕನ್ನಡ ಕೂಟಗಳು ಹಲವಾರು. ‘ಸಂಗಮ’, ‘ಭೂಮಿಕಾ’, ‘ಅಂಜಲಿ’, ‘ಪ್ರಸ್ತಾಪ’ ಮಂತಾದ ಆಸಕ್ತ ಸಂಘಟನೆಗಳು ಆಯಾ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಕಟಿಬದ್ಧವಾಗಿವೆ. ಆದರೆ, ಒಂದೇ ಪ್ರದೇಶದಲ್ಲಿ ಎರಡು ಸಾಹಿತ್ಯಿಕ ಸಂಘಟನೆಗಳು ಕಾರ್ಯೋನ್ಮುಖವಾಗಿರುವುದು ಉತ್ತರ ಕ್ಯಾಲಿಫ್‌ನ ಹೆಚ್ಚುಗಾರಿಕೆ. ಇಲ್ಲಿನ ಕನ್ನಡ ಬಳಗ ಮತ್ತು ಕನ್ನಡ ಸಾಹಿತ್ಯ ಗೋಷ್ಠಿ ಅಂಥ ಎರಡು ಸಂಸ್ಥೆಗಳು. ತನ್ಮಯತೆಯಿಂದ ಕನ್ನಡದ ಬಗೆಗಿನ ಶುದ್ಧ ಪ್ರೀತಿಯಿಂದ ಇಲ್ಲಿನ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಯಾರೂ ಕಡಿಮೆ ಇಲ್ಲ. ಆಕಾಶ ನೋಡುವುದಕ್ಕೆ ನೂಕು ನುಗ್ಗಲೇ ?

ಆಸಕ್ತಿ ಇರುವ ಯಾರು ಬೇಕಾದರೂ ಕನ್ನಡ ಕೆಲಸ ಮಾಡಬಹುದು ಎನ್ನುವುದೇ ಬಹುಜನರ ನಿಲುವು. ಇಂಚರ ಇರಬಹುದು, ರಾಗ ತಂಡ ಇರಬಹುದು, ರವಿ ಆಗಬಹುದು, ಅಲಮೇಲು ಆಗಬಹುದು, ಕನ್ನಡ ಕೂಟ, ಗೋಷ್ಠಿ ..ಯಾವುದೇ ಆಗಬಹುದು. ಸಂಘಟನೆಯಿಂದ, ಬಹು ಜನರ ಬೆಂಬಲದಿಂದ ದೊಡ್ಡ ಜವಾಬ್ದಾರಿಯನ್ನೂ ಹೂವು ಎತ್ತಿದಷ್ಟೇ ಸುಲಭವಾಗಿ ಮಾಡಿ ಮುಗಿಸಬಹುದು. ಇಲ್ಲಿಯವರೆಗೆ ಇದು ಸಾಧ್ಯವಾಗಿರುವುದು ಮತ್ತು ಇನ್ನೂ ಸಾಧ್ಯವಾಗಿರಬೇಕಾಗಿರುವುದು ಸಾಂಘಿಕ ಪ್ರಯತ್ನದಿಂದಲೇ ವಿನಾ ವ್ಯಕ್ತಿ ಪ್ರಯತ್ನದಿಂದಲ್ಲ. ಯಾಕೆಂದರೆ, ವಿಶೇಷವಾಗಿ ಅಮೆರಿಕದಂಥ ಪರಿಸರದಲ್ಲಿ ಏಕಲವ್ಯ ಪ್ರಯತ್ನಗಳಿಗೆ ಸಾಂಸ್ಕೃತಿಕ ಯಶಸ್ಸು ಹಾಗೂ ಮನ್ನಣೆ ದೊರೆಯುವುದು ಕಷ್ಟ.

ಸಾಹಿತ್ಯ ಗೋಷ್ಠಿಯ ಸ್ಥಾಪಕ ಸದಸ್ಯರು ವಿಶ್ವನಾಥ್‌ ಹುಲಿಕಲ್‌. ಅವರು ಈಗ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮೊನ್ನೆ ಅವರ ಸಂದರ್ಶನವೊಂದು ನಮ್ಮಲ್ಲಿ ಬೆಳಕು ಕಂಡಿದೆ. ನೀವು ಅದನ್ನು ಮಿಸ್‌ ಮಾಡಿಕೊಂಡಿದ್ದರೆ ಇಲ್ಲಿ ಮತ್ತೆ ಆ ಲಿಂಕ್‌ ಅನ್ನು ಕೊಟ್ಟಿದ್ದೇನೆ. ಜತೆಗೆ ಈ ಗೋಷ್ಠಿಯಲ್ಲಿ ಸಕ್ರಿಯವಾಗಿರುವ ಕೆಲವು ಬರಹಗಾರರರ ಒಂದೊಂದು ಬರಹಗಳ ಸ್ಯಾಂಪಲ್‌ ಲಿಂಕುಗಳನ್ನು ಇಲ್ಲಿ ಕೊಟ್ಟಿದ್ದೇನೆ. ಹುಡುಕಿದರೆ ಇನ್ನೂ ಕೆಲವು ಬರಹಗಳು ನಮ್ಮ ಕನ್ನಡ ಸರ್ಚ್‌ ಇಂಜಿನ್‌ನಲ್ಲಿ ಸಿಕ್ಕೀತು. ಓದಿದ್ದರೆ ಮತ್ತೊಮ್ಮೆ, ಇಲ್ಲದಿದ್ದರೆ ನಿಮ್ಮ ಮೊದಲ ಓದು ಇಲ್ಲಿಂದ ಶುರುವಾಗಲಿ !

English summary
Kannadigas in north california organize and participate in various activities. Includes literature, religion, music, film, language and other interests
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X