• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖಪುಟ

By Staff
|
ವಿಚಿತ್ರಾನ್ನ - ತುತ್ತು 1 Sampige marada hasirele naduve...
*ಶ್ರೀವತ್ಸ ಜೋಶಿ

Srivathsa Joshi Thatskannada columnistಗಜಮುಖನೆ ಗಣಪತಿಯೆ ನಿನಗೆ ಒಂದಾಣೆ ।

ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ.... ।।

ಗಣೇಶಸ್ತುತಿಯಾಂದಿಗೆ ಈ ಹೊಸ ಅಂಕಣ ‘ವಿಚಿತ್ರಾನ್ನ’ದ ಶುಭಾರಂಭ. ಗಣೇಶ ಸ್ತುತಿಯೇ ವಿಚಿತ್ರವಾಗಿದೆಯಲ್ಲ ಅಂತ ನೀವು ಅಂದುಕೊಂಡದ್ದು ನೂರು ಪಾಲು ಸತ್ಯ. ಇದು ಕಂತುಗಳಲ್ಲಿ (ಇನ್ಸ್ಟಾಲ್‌ಮೆಂಟ್ಸ್‌) ಗಣೇಶ ಮಹಾರಾಜನಿಗೆ ಕಪ್ಪ ಕಾಣಿಕೆ ಸಲ್ಲಿಸುವ ವಿಧಾನ. ಕಂತುಪಿತನ ದಿವ್ಯನಾಮ ಮಂತ್ರವನ್ನು ಜಪಿಸುವವಗೆ... ಹಾಗಾಗಿ ಕಂತುಗಳಲ್ಲಿ ಕಾಣಿಕೆ. ಇವತ್ತು ಒಂದಾಣೆ. ಬಾಕಿ ನಾಲ್ಕಾಣೆಯ ಸಂಗತಿ ಆಮೇಲೆ.

ಯಾಕೆ ಕಂತುಗಳಲ್ಲಿ ?

ಈ ಹೊಸ ಅಂಕಣ (ಕಾಲಮ್‌) ಇವತ್ತಿನ ಮಟ್ಟಿಗೆ ಅಂದರೆ ವರ್ತಮಾನ ಕಾಲಮ್‌ನಲ್ಲಿ ಇದೆ ಸರಿ. ನಿಮಗೆ, ಅರ್ಥಾತ್‌ ಓದುಗರಿಗೆ, ಇಷ್ಟವಾಗದಿದ್ದರೆ ಮುಂದಿನ ವಾರಗಳಲ್ಲಿ , ಅಂದರೆ ಭವಿಷ್ಯತ್‌ ಕಾಲಮ್‌ನಲ್ಲಿ ಇರುತ್ತದೆಂದು ಏನು ಗ್ಯಾರಂಟಿ? ಗಣೇಶ ಹೇಗೂ ಎಲ್ಲಾ ಅಡ್ವಾನ್ಸ್‌ ಈಗಲೇ ಬೇಕು ಅಂತ ಕೇಳುವ ಕಂಟ್ರಾಕ್ಟರ್‌ ಅಲ್ಲ. ಹಾಗಾಗಿ ವಿಚಿತ್ರಾನ್ನ ಕಾಲಮ್‌ ಭವಿಷ್ಯತ್‌ ಕಾಲಮ್‌ಗೆ ಒಂದೊಂದು ವಾರದಂತೆ ಕಾಲಿಡುತ್ತಿದ್ದಂತೆಯೇ ಗಣೇಶನ ಕಪ್ಪಕಾಣಿಕೆಯ ಕಂತು ರಿಲೀಸ್‌. ಇದು ಗಣೇಶನೊಂದಿಗೆ ನಮ್ಮ ‘ಮೆಮೊರಾಂಡಮ್‌ ಆಫ್‌ ಅಂಡರ್‌ಸ್ಟಾಂಡಿಂಗ್‌’

ಓಕೆ. ಪ್ರಾರ್ಥನೆಯ ನಂತರ ಈಗ ಸ್ವಾಗತ (ಸ್ವಗತ?) ಭಾಷಣ. ಈ ಅಂಕಣಕ್ಕೆ ವಿಚಿತ್ರಾನ್ನ ಅಂತ ಯಾಕೆ ಹೆಸರು? ವಿಚಿತ್ರ + ಅನ್ನ = ವಿಚಿತ್ರಾನ್ನ ಅಂತ ವಿಶೇಷಣ ಪೂರ್ವಪದ ಕರ್ಮಧಾರಯ ಸಮಾಸ ಮತ್ತು ವಿಚಿತ್ರ+ಅನ್ನ = ವಿಚಿತ್ರಾನ್ನ ಅಂತ ಸವರ್ಣದೀರ್ಘ ಸಂಧಿ - ಎರಡಕ್ಕೂ ದಿವ್ಯವಾದ ಉದಾಹರಣೆಯಾಗಿರುವ ವಿಚಿತ್ರಾನ್ನ ಚೆನ್ನಾಗಿಲ್ಲವೆ? ಆಯ್ತಪ್ಪಾ, ನಿಮಗೆ ವ್ಯಾಕರಣ ಕಬ್ಬಿಣದ ಕಡಲೆಯಾದರೆ, ವಿಜಯದಶಮಿಯಂದು ಆರಂಭವಾದ ಅಂಕಣ -ಚಿತ್ರ ವಿಚಿತ್ರ ಮನರಂಜನೆಯ ಗ್ರಾಸವನ್ನು (ಅನ್ನವನ್ನು) ನಿಮ್ಮ ಮನಸ್ಸಿಗೆ ಒದಗಿಸಲಿದೆ(?)ಯಾದ್ದರಿಂದ ವಿಚಿತ್ರಾನ್ನ (ವಿ ಫಾರ್‌ ವಿಜಯದಶಮಿ). ಅದೂ ಬೇಡ, ನಾವು-ನೀವು ಆಧುನಿಕರು. 21 ನೇ ಶತಮಾನದ ಯಾಂತ್ರಿಕ ಜೀವನ ನಡೆಸುವ ಮಾನವರು. ನಮಗೆಲ್ಲವೂ ‘ವಿ’ ಪ್ರಿಫಿಕ್ಸ್‌ ಇದ್ದದ್ದೇ ಆಗಬೇಕು. ಈ-ಮೈಲ್‌ = ವಿ-ಅಂಚೆ; ಈ-ಬಿಸಿನೆಸ್‌/ಕಾಮರ್ಸ್‌ = ವಿ-ವಾಣಿಜ್ಯ, ಈ-ಗ್ರೀಟಿಂಗ್‌ = ವಿ-ಶುಭಾಶಯ... ಇತ್ಯಾದಿ. (ಆದರೆ ಈ-ಟೀವಿಯನ್ನು ಅಂದರೆ ಈನಾಡು ಟೆಲಿವಿಷನ್‌ನ ಕನ್ನಡ ಚಾನೆಲ್‌ ಅನ್ನು ವಿ-ಟೀವಿ ಎಂದು ಕರೆದರೆ ರಿಮೋಟ್‌ ಕಂಟ್ರೊಲ್‌ ಇಲ್ಲದೇನೆ ಈಟೀವಿ ಯಿಂದ ವಿ-ಚಾನೆಲ್‌ಗೆ ಚೇಂಜ್‌ ಮಾಡಿದಂತೆ!). ಅಂತಹ ವಿ-ಪ್ರಪಂಚದಲ್ಲಿರುವ ನಮಗೆ ನಿಮಗೆ ವಿ-ಚಿತ್ರಾನ್ನ. ವರ್ಚ್ಯುವಲ್‌ ಚಿತ್ರಾನ್ನ ಅಥವಾ ವಿಚಿತ್ರಾನ್ನ. ಸರಿಯೇ?

Vichitraanna !!ನಿಮಗೆ ಇದುವರೆಗೆ ಗೊತ್ತಿದ್ದ ಚಿತ್ರಾನ್ನಕ್ಕೂ ಈ ವಿಚಿತ್ರಾನ್ನಕ್ಕೂ ಬಹಳ ಹೋಲಿಕೆಯಿದೆ. ಒಗ್ಗರಣೆ-ಉಪ್ಪು-ಖಾರ-ಹುಳಿ ಎಲ್ಲ ಸಮಪ್ರಮಾಣದಲ್ಲಿದ್ದು ರುಚಿರುಚಿಯಾಗಿರುತ್ತದೆ ಎಂಬುದಂತೂ ಖಂಡಿತ. ಅಲಂಕಾರಕ್ಕೆ ಮಾತ್ರ ಇದ್ದು ತಿನ್ನುವಾಗ ತೆಗೆದಿಡುವ ಕರಿಬೇವು ಸೊಪ್ಪು ಈ ವಿಚಿತ್ರಾನ್ನದಲ್ಲಿದೆ, ಆದರೆ ಹದವಾಗಿ. ಹಾಗೆಯೇ ಇದನ್ನು ಸೇವಿಸಿ ‘ಇಂಗು ತಿಂದ ಮಂಗ’ನಂತೆ ನಿಮ್ಮ ಮುಖ ಆಗುವುದು ನಮಗಿಷ್ಟವಿಲ್ಲವಾದ್ದರಿಂದ ಇಂಗು ಇದ್ದೂ ಇಲ್ಲದಂತೆ ಭಾಸವಾಗುವಷ್ಟೇ ಹಾಕಲಾಗಿದೆ. ಎಟುಕದ ದ್ರಾಕ್ಷಿ ಹುಳಿ ಎಂದು ನೀವು ಇದನ್ನು ಬಿಟ್ಟು ಬೇರೆ ಜಾಲತಾಣಗಳಿಗೆ ಹೋಗುವ ಪ್ರಮೇಯ ಬಾರದಂತೆ ಹುಳಿ ಕಡಿಮೆ ಇರುವ ಲಿಂಬೆಹಣ್ಣುಗಳ ಉಪಯೋಗವಾಗಿದೆ. ಹುರಿದ ಶೇಂಗಾಬೀಜ, ಅರಿಸಿನ, ಕೊತ್ತುಂಬ್ರಿ ಸೊಪ್ಪು ಎಲ್ಲ ಮಿಳಿತವಾಗಿವೆ. ಒಂದೊಂದು ಕಲ್ಲು ಸಿಕ್ಕರೆ ಅದಕ್ಕೆ ನಾವು ಜವಾಬ್ದಾರರಲ್ಲ. ಪಡಿತರ ಇಲಾಖೆಯವರು ಕೊಡುವ ರೇಷನ್‌ ಅಕ್ಕಿಯಲ್ಲಿ ಅಲ್ಲದೆ ಬೇರೆಲ್ಲಿ ಕಲ್ಲು ಸಿಗುತ್ತದೆ?

ಇಂತು ಈ ಪರಿಯಲ್ಲಿ ವಿಚಿತ್ರಾನ್ನದ ಪಕ್ಷಿನೋಟ. ಒಗಟು, ಹಾಸ್ಯ, ಪನ್‌, ವಿಡಂಬನೆ, ಅಣಕುಹಾಡು, ಜಾಣ್ಮೆಲೆಕ್ಕ, ತರ್ಕ-ಕುತರ್ಕ, ಕ್ಷೇಮ-ಸಮಾಚಾರ... ಎಲ್ಲ ಬರಲಿದೆ ಈ ವಿಚಿತ್ರಾನ್ನ ಅಂಕಣದಲ್ಲಿ . ಪಾಂಡಿತ್ಯ ಪ್ರದರ್ಶನ ಇಲ್ಲ , ಎಕೆಂದರೆ ನಾನು ಪಂಡಿತ ಅಲ್ಲ. ನಾನಂದದ್ದೇ ವೇದವಾಕ್ಯ ಅಂತಿಲ್ಲ, ಯಾಕೆಂದರೆ ಆ ಅಹಂಭಾವ ಖಂಡಿತ ಇಲ್ಲ. ಒಟ್ಟಿನಲ್ಲಿ ನಾವೂ, ನೀವೂ ಮನಸೋದಿಚ್ಛ ನಗುನಗುತ್ತ ಮಾತಾಡಿ ‘ಯೂ ಮೇಡ್‌ ಮೈ ಡೇ..’ ಎಂದು ದಿನವನ್ನು ಉಜ್ವಲವಾಗಿಸುವ ಒಂದು ಪುಟ್ಟ ಆಸೆ-ಅಭಿಲಾಷೆಯನ್ನಿಟ್ಟುಕೊಂಡು ವಿಚಿತ್ರಾನ್ನ ಎಂಬ ‘ಲೈಟಾಗಿರುವ ಆದರೆ ಲೈಟ್‌ ಬೀರುವ’ ಅಂಕಣದ ಮೊದಲ ‘ತುತ್ತ’ನ್ನು ನಿಮ್ಮ ಕೈಯಲ್ಲಿಡುತ್ತಿದ್ದೇನೆ.

ತಿನ್ನಿ; ವ್ಹಾ! ಚೆನ್ನಾಗಿದೆ ಎನ್ನಿ. ಸಂಕೋಚವಿಲ್ಲದೆ, ನಿಮ್ಮ ಗೆಳೆಯನೆಂದು ಭಾವಿಸಿ, ಹೇಗಿದೆಯೆಂದು ತಿಳಿಸಿ. ವಿ-ಅಂಚೆಯಲ್ಲಿ : sjoshim@hotmail.com

Thank you for choosing Thatskannada.com

shami.sk@greynium.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X