ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಟುಲಾಯರಿ ಮುಂಚಾಮಿ ಟೈಂ ಪಾಸ್ ವಿಡಂಬನೆ

|
Google Oneindia Kannada News

ಊರಿನಲ್ಲಿ ಪ್ರಥಮವಾಗಿ ಸತ್ಯವಂತರಾರು ಅನ್ನುವ ಪ್ರಶ್ನೆ ಏಳಲು ಕಾರಣವಾದುದು, ಕಳೆದ ರಾತ್ರಿ ವೆಂಕಟಾಪುರದ ರಾಜಮ್ಮ ಭಾಗವತಾರಿಣಿ ಮಾಡಿದ 'ಸತ್ಯಹರಿಶ್ಚಂದ್ರ' ಕಥೆ. ಕಥೆ ಕೇಳಿ ನಿದ್ದೆ ಕೆಟ್ಟರೂ ಅದರ ಮಂಪರು ಏರದ ಕೆಲವರು ಊರಾಚೆಯ ಹುಣಿಸೆ ಮರದಡಿ 'ಕಾಸುಗಳಾಟ' ಆಡಲು ಸೇರಿದ್ದವರಲ್ಲಿ ಗುಂಡ್ರಳ್ಳಿ ರಂಗನು ಈ ಪ್ರಶ್ನೆ ಎತ್ತಿದ್ದ. ನೀನೇ ಹೇಳು ಅಂದದ್ದಕ್ಕೆ ಸುಳ್ಳು ಹೇಳದೋರು ಅಂದ.

ಅದಕ್ಕೆ ಏಳನೆಯ ಕ್ಲಾಸಿನಲ್ಲಿ ಕನ್ನಡವೊಂದೇ ಪಾಸಾಗಿ ಶಾಲೆ ಬಿಟ್ಟಿದ್ದ ಮುನಿರಾಜ, ಅದು ಅದಕ್ಕೆ ವಿರುದ್ಧ ಪದ ಅಷ್ಟೆ. ಅರ್ಥ ಅಲ್ಲವೆಂದ. ಕನ್ನಡ ಪಾಸು ಮುನಿರಾಜಪ್ಪನೋರೇ ನೀವೇ ಹೇಳಿ ಅರ್ಥ ಅನ್ನುವುದು ರಂಗನ ಸವಾಲು. ಸತ್ಯ ಅಂದ್ರೆ ಮಿತ್ಯ ಅಲ್ಲದ್ದು ಎಂದು ಸವಾಲಿಗೆ ಜವಾಬು ಕೊಟ್ಟ.

ಎಂಟನೆಯ ತರಗತಿ ಸರ್ಟಿಫಿಕೇಟ್ ಹೋಲ್ಡರ ದ್ವಾರಕನು ಮಿತ್ಯ ಅಲ್ಲೋ ಮಿಥ್ಯ ಅದು ಎಂದು ಮೇಷ್ಟರನಂತೆ ಫೋಜು ಕೊಟ್ಟ. ಆಯ್ತು ಮೇಸ್ಟ್ರೇ ನೀವೇ ಹೇಳಿ ಅಂದ ವೆಂಕಟಬೋವಿ. ಇವನು ನಾಲ್ಕನೆಯ ತರಗತಿ ಪದವೀಧರ. ದಡ್ಡ ನನ್ನ ಮಕ್ಳಾ, ನಮ್ಮೂರಲ್ಲಿ ಸತ್ಯವಂತರಾರು ಅನ್ನೋದು ಪ್ರಶ್ನೆ. ಅರ್ಥಪರ್ತ ಅಲ್ಲ ಎಂದು ಮಧ್ಯೆ ಬಾಯಿ ಹಾಕಿದ ಮೂರು ಬಾರಿ ಹತ್ತನೆಯ ತರಗತಿ ಪರೀಕ್ಷೆಗೆ ಕೂತು ಅತ್ಯಂತ ಯಶಸ್ವಿಯಾಗಿ ಫೇಲಾಗಿ ರೇಷ್ಮೆಹುಳು ಸಾಕಾಣಿಕೆಗಿಳಿದಿದ್ದ ಚೌಡಪ್ಪ.

ಕೊಟ್ರಗುಳಿಯ ಕೋಣಾಪಹರಣ ಪ್ರಹಸನ; ಅಮಲಲಿದ್ದು ಅಡ್ಡಕಸುಬಿಗಳಾದರು!ಕೊಟ್ರಗುಳಿಯ ಕೋಣಾಪಹರಣ ಪ್ರಹಸನ; ಅಮಲಲಿದ್ದು ಅಡ್ಡಕಸುಬಿಗಳಾದರು!

ಲೀಟರು ಹಾಲಿಗೆ ಅರ್ಧ ಲೀಟರು ನೀರು ಹಾಕೊ ರಂಗಕ್ಕನೇ ನಮ್ಮೂರ ಸತ್ಯವಂತಳು ಎಂದು ಸಾರಿದ ವೆಂಕಟಬೋವಿ. ಹೇಗೆ ಹೇಳ್ತಿ ಅನ್ನುವುದು ಎಲ್ಲರ ಪ್ರಶ್ನೆ. ಹಾಲಿಗೆ ನೀರು ಹಾಕಿದರೆ ಅದೂ ಹಾಲಾಗುತ್ತೆ ಅನ್ನೊ ಸತ್ಯ ತಿಳಿದೋಳು. ಅದಕ್ಕೇ ಹಾಲಿಗೆ ನಿಯತ್ತಿಂದ ನೀರು ಹಾಕ್ತಾಳೆ. ಅವಳೇ ಸತ್ಯವಂತಳು ಎಂದು ಘೋಷಿಸಿದ.

ಊರಿಗೆಲ್ಲ ಮುನಿಶಾಮಪ್ಪನೇ ಸತ್ಯವಂತ
ರಂಗಕ್ಕನಿಂದ ಪ್ರಾರಂಭವಾದ ಮಾತು, ಪೂಟುಲಾಯರಿ ಮುನಿಶಾಮಪ್ಪನವರೆಗೆ ಬಂದಿತು. ಹೇಗೆ ಅವನು ನಮ್ಮೂರಿನ ಸತ್ಯವಂತ ಎಂದು ಚರ್ಚೆಗೆ ಬರುಷ್ಟರಲ್ಲಿ, ಬರಬೇಕಿದ್ದವರು ಬಂದುದರಿಂದ ಕಾಸಿನ ಆಟ ಪ್ರಾರಂಭವಾಯಿತು. ಚರ್ಚೆ ನಡೆಯಲಿಲ್ಲವಾಗಿ, ವಿರೋಧವೂ ವ್ಯಕ್ತವಾಗಲಿಲ್ಲವಾಗಿ ಮುನಿಶಾಮಪ್ಪನೇ ಊರಿಗೆಲ್ಲ ಸತ್ಯವಂತ, ಅಥವಾ ಅಲ್ಲ ಎಂದು ನಿಶ್ಚಯಿಸದ, ಆ ಪಡ್ಡೆಹುಡುಗರು ಕಾಸಿನ ಆಟಕ್ಕೆ ಇಳಿದ ವಿಷಯ ತಿಳಿದ ಮುನಿಶಾಮಪ್ಪ, ಇದು ಕಾಣದ ಕೈಯ್ಯ ಆಟವೆಂದು ವಾದಿಸಿದ.

ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಬಯಸುವವರು ಪೂಟುಲಾಯರಿ ಮುನಿಶಾಮಪ್ಪನ ಬಗ್ಗೆ ತಿಳಿಯಬೇಕಾದುದು ಜರೂರತ್ತಿನ ಸಂಗತಿ.

ಊರಿನಲ್ಲಿ ಎಂಟು ಜನ ಮುನಿಶಾಮಪ್ಪರಿದ್ದರು. ಆವರನ್ನು ಗುರುತಿಸಲು ಅಡ್ಡಹೆಸರುಗಳನ್ನು ಊರವರು ಇಟ್ಟಿದ್ದರು. ಗಿತ್ತ(ಗಿಡ್ಡ)ಮುಂಚಾಮಿ, ಚಿಕ್ಕಮುಂಚಾಮಿ, ದೊಡ್ಡಮುಂಚಾಮಿ, ಸಾರಾಯಿ ಮುಂಚಾಮಿ, ಪೂಜಾರಿ ಮುಂಚಾಮಿ, ಕಡ್ಡಿಪುಡಿ(ತಂಬಾಕು ಕಾಂಡದ ಪುಡಿ) ಮುಂಚಾಮಿ, ನಿಕ್ರು (ನಿಕ್ಕರ್)ಮುಂಚಾಮಿ. ಎಂಟನೆಯವನು ಪೂಟುಲಾಯರಿ ಮುಂಚಾಮಿ.

ಕರೆಯದೆ ಬಂದು, ಹೇಳದೇ ಹೋದ ಕಕ್ಕಮ್ಮನವರ ಕರುಳಿನ ಭಾವಗೀತೆಕರೆಯದೆ ಬಂದು, ಹೇಳದೇ ಹೋದ ಕಕ್ಕಮ್ಮನವರ ಕರುಳಿನ ಭಾವಗೀತೆ

ಇವನ ಪರಿಚಯವಿಲ್ಲದವರು ಯಾರಾದರೂ ಊರಲ್ಲಿ ಇದ್ದಾರೆ ಅಂದರೆ ಅವರು ಊರಿನಲ್ಲಿದ್ದೂ ದಂಡ ಅಂತಲೇ ಹೇಳಬೇಕು. ಇವನು ಇತರೆ ಮುನಿಶಾಮಪ್ಪರಿಗಿಂತ ಶಾಲೆಯಲ್ಲಿ ಒಂದು ಪೇಜು ಜಾಸ್ತಿ ಓದಿಕೊಂಡಿದ್ದ. ಅಂದರೆ ಹತ್ತನೆಯ ತರಗತಿ ಫೇಲು.

Transition of foot lawyer Munishamappa to Congress leader

ಹಲವು ನಾಮಗಳವನು ಇವನೊಬ್ಬನೇ
ಇವನು ಮುನಿಶಾಮಪ್ಪ ಬಿನ್ ಲಗುಮಪ್ಪ. ಹಾಗಾಗಿ ಎಲ್.ಮುನಿಶಾಮಪ್ಪ. ಈಗ ಆ 'ಎಲ್' ಅಂದರೆ ಲಗುಮಪ್ಪ ಅಂತ ಅಲ್ಲ. ಲಾಯರ್ ಅಂತ. ಕುಹಕಿಗಳು ಆ ಎಲ್ ನ ಹಿಂದೆ 'ಪಿ' ಸೇರಿಸಿ 'ಪಿ.ಎಲ್.' ಮಾಡಿದ್ದರು. ಹಾಗಾಗಿ ಎಲ್.ಮುನಿಶಾಮಪ್ಪ ಉರುಫ್ ಎಸ್.ಎಲ್.ಸಿ. ಮುನಿಶಾಮಿ ಉರುಫ್ ಲಾಯರ್ ಮುನಿಶಾಮಿ, ಉರುಫ್ ಪಿ.ಎಲ್.(ಪೂಟಲಾಯರಿ) ಮುನಿಶಾಮಿ(ಮುಂಚಾಮಿ). ಊರಿನ ಮುನಿಶಾಪ್ಪರಲ್ಲಿ ಹಲವು ನಾಮಗಳವನು ಇವನೊಬ್ಬನೇ.

ಸಿವಿಲ್ ಲಾಯರ್ ಸೊಣ್ಣೇಗೌಡನ ಬಳಿ ಜಮೀನು ವಿಚಾರವಾಗಿ ಅಣ್ಣತಮ್ಮಂದಿರ ಮೇಲೆ ಕೇಸು ಹಾಕಿ, ಅದು ಏಳು ವರ್ಷಕ್ಕೆ ಇವನ ಪರವಾಗಿ ಆಗಿತ್ತು. ಈ ಕಾಲದಲ್ಲಿ ಸೊಣ್ಣೇಗೌಡನ ಹಿಂದೆ ಅಲೆದು ಕೆಲವು ಕಾನೂನುಗಳ ಹೊರಗನ್ನು ತಿಳಿದುಕೊಂಡಿದ್ದ. ಅದನ್ನು ಬಳಸಿ ಸಿವಿಲ್ ತಕರಾರುಗಳನ್ನು ಆ ವಕೀಲನಿಗೆ ಕೊಡಿಸುತ್ತಿದ್ದುದರಿಂದ, ಇವನನ್ನು ಮೆಚ್ಚಿಸಲು 'ಮುನಿಶಾಮಪ್ಪ ಲಾ ಓದಿದ್ದರೆ ಒಳ್ಳೇ ಲಾಯರ್ ಆಗಿರುತ್ತಿದ್ದ' ಎಂದ ಮಾತೇ ಸಾಕಾಗಿ ತನ್ನ ಹೆಸರಿಗೆ ಲಾಯರ್ ಎಂದು ತಗುಲಿಸಿಕೊಂಡ.

ಅವರವರಲ್ಲೇ ಇತ್ಯರ್ಥವಾಗುವಂತಹ ತಂಟೆ, ತಕರಾರುಗಳನ್ನು ತೀರ್ಮಾನವಾಗಲು ಬಿಡದೆ, ಕೋರ್ಟಿಗೆ ಹತ್ತಿಸುತ್ತಿದ್ದುದರಿಂದ ಪೂಟುಲಾಯರಿ ಎಂದು ಜನ ಕರೆದದ್ದು ಕಸಿವಿಸಿಯೇ ಆದರೂ ಲಾಯರಿ ಎಂಬುದು ಉಳಿದಿದ್ದರಿಂದ ಸಮಾಧಾನಪಟ್ಟುಕೊಂಡಿದ್ದ.

ಹುಣಿಸೇ ಮರದಿಂದ ಉಳಿದುಕೊಂಡ ಜೀವ ಇದು; ಕರ್ಮವನ್ನೂ ಮೀರಿದ ಧರ್ಮದ ಫಲಹುಣಿಸೇ ಮರದಿಂದ ಉಳಿದುಕೊಂಡ ಜೀವ ಇದು; ಕರ್ಮವನ್ನೂ ಮೀರಿದ ಧರ್ಮದ ಫಲ

ದಿನವೂ ಲಾಯರನ ಬಳಿಗೆ ಹೋಗುತ್ತಿದ್ದುದರಿಂದ ಇವನ ಕೇಂದ್ರ ಲಾಯರು ಆಫೀಸಾಗಿತ್ತು. ಕಕ್ಷೀದಾರರನ್ನು ಕರೆ ತರುತ್ತಿದ್ದುರಿಂದ ಲಾಯರಿಗೆ ಇವನ ನಿತ್ಯ ಹಾಜರಿ ಅಗತ್ಯವಾಗಿತ್ತು. ಸಂಜೆ ಹಿಂದಿರುಗುವಾಗ ಅಲ್ಲಿರುತ್ತಿದ್ದ ನ್ಯೂಸ್ ಪೇಪರುಗಳಲ್ಲಿ ಯಾವುದಾದರೊಂದನ್ನು ಊರಿಗೆ ತರುತ್ತಿದ್ದ. ಊರಿಗೆಲ್ಲ ಏಕೈಕ ಪತ್ರಿಕೆ ಅದೊಂದೇ. ಇದರಿಂದಾಗಿ ಪೇಪರ್ ಮುಂಚಾಮಿ ಎಂಬ ಹೆಸರೂ ಬಂದಿತ್ತು.

ಹೆಡ್ಡಿಂಗುಗಳನ್ನು ಮಾತ್ರ ಗಮನವಿಟ್ಟು ಓದುತ್ತಿದ್ದ
ಮುನಿಶಾಮಿ ಪೇಪರಿನ ಎಲ್ಲ ಅಕ್ಷರಗಳನ್ನೂ ಓದುತ್ತಿದ್ದವನಲ್ಲ. ಹೆಡ್ಡಿಂಗುಗಳನ್ನು ಗಮನವಿಟ್ಟು ಓದಿ, ಅದನ್ನು ಹಿಡಿದೇ ಮನೆಯ ಜಗುಲಿಯ ಮೇಲೆ ಕುಳಿತು, ಮಾಡಲು ಕೇಮೆಯಿಲ್ಲದೆ ಬರುತ್ತಿದ್ದವರಿಗೆ ಸೆಕ್ಸು, ಕ್ರೈಮು, ರಾಜಕೀಯದ ಸುದ್ದಿಗಳನ್ನು ವಿಶ್ಲೇಷಿಸಿ, ವ್ಯಾಖ್ಯಾನಿಸಿ, ವಿಮರ್ಶಿಸಿ ಹೇಳಿ, ವಾರೆವಾ ಅನ್ನಿಸಿಕೊಳ್ಳುತ್ತಿದ್ದ.

ರಂಗಕ್ಕ ಮಾರುತ್ತಿದ್ದ ನೀರುಹಾಲನ್ನು ತರಿಸಿ, 'ಕ್ಲೈಂಟು'ಗಳ ಹಣದಿಂದ ತಂದ ಕಾಫಿ ಪುಡಿಯಿಂದ ಹೆಂಡತಿಯ ಕೈಲಿ ಕಾಫಿ ಮಾಡಿಸಿ ಕೊಟ್ಟು, ಅವರಿಂದ ಲೀಡರ್ ಮುನಿಶಾಮಪ್ಪ ಎಂದು ಕರೆಸಿಕೊಂಡ.

ಲೀಡರ್ ಎಂದು ಕರೆಸಿಕೊಂಡ ಮೇಲೆ ಮುನಿಶಾಮಿ ಸೆಕ್ಸ್, ಕ್ರೈಮು ಸುದ್ದಿ ಕೈ ಬಿಟ್ಟು, ರಾಜಕೀಯ ಸುದ್ದಿ ಕುರಿತು ಮಾತನಾಡತೊಗಿದ. ಬಿಜೆಪಿ ಅವರದು ಬರೀ ಮಾತು, ಜೆಡಿಎಸ್ ಅವರಿಗೆ ಗೋಗರೆಯೋದುಷ್ಟೇ ಗೊತ್ತು, ಕಾಂಗ್ರೆಸ್ ನವರಿಗೆ ಭಾಷಣವಷ್ಟೇ ಕೈಲಾಗೋದು, ಕಮ್ಯೂನಿಸ್ಟರು ಒಪ್ಪೋದ್ಯಾವುದು, ಬಿಡೋದ್ಯಾವುದು ಅನ್ನೋದೇ ತಿಳಿಯದು ಎಂದು ಟೀಕಸುತ್ತಿದ್ದುದರಿಂದ ಇವನ ಗುಂಪಿನವರಿಗೆ ಮುನಿಶಾಮಪ್ಪನದು ಯಾವ ಪಾರ್ಟಿ ಎಂದು ತಿಳಿಯುತ್ತಿರಲಿಲ್ಲ.

ಕಾಂಗ್ರೆಸ್ ಮುನಿಶಾಮಪ್ಪ ಆಗಿಬಿಟ್ಟ
ಕೆಲವರು ನೀನು ಇಂಡಿಪೆಂಡೆಂಟ್ ಅಲ್ಲವೇ ಎಂದು ಕೇಳಿದ್ದೇ, ಲೀಡರ್ ಮುನಿಶಾಮಪ್ಪ ಇಂಡಿಪೆಂಡೆಂಟ್ ಮುನಿಶಾಮಪ್ಪನಾಗಿಬಿಟ್ಟ. ಸೊಣ್ಣೇಗೌಡ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷನಾದುದು ಈ ದಿನಗಳಲ್ಲೆ. ಅವನು ತನ್ನ ಕಚೇರಿಯಲ್ಲಿ ಇವನಿಗೊಂದು ನೆಹರೂ ಟೋಪಿ ಹಾಕಿದ್ದೇ ಇಂಡಿಪೆಂಡೆಂಟ್ ಮುನಿಶಾಮಪ್ಪ ಕಾಂಗ್ರೆಸ್ ಮುನಿಶಾಮಪ್ಪ ಆಗಿಬಿಟ್ಟ. ಕೆಲವೇ ದಿನಗಳಲ್ಲಿ ಬೂತು ಮಟ್ಟದ ಸಮಿತಿಗೆ ಅಧ್ಯಕ್ಷನೂ ಆದ.

ತಲೆಗೆ ಟೋಪಿ ಬಂದಾಗ ಬದಲಾದ ಮಾತಿನ ಧಾಟಿ ಈಗ ಮತ್ತಷ್ಟು ಬದಲಾಯಿತು. ನೋಡೋಣ, ಮಾಡೋಣ, ವಿಚಾರಿಸೋಣ, ಹೇಳೋಣ ಇವು ಮುನಿಶಾಮಪ್ಪನ ಮಾತುಗಳ ಕ್ರಿಯಾಪದಗಳಾದವು. ಗುಟ್ಟಾಗಿ ತನ್ನ ಜೇಬು ಭಾರ ಮಾಡಿದವರಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ಪಕ್ಷದ ಟಿಕೆಟ್ಟು ಕೊಡಿಸಿ, ತಾನೂ ನಿಂತು ಗೆದ್ದ. ಕೆಲವರು ಸದಸ್ಯರಿಗೆ ಬೆಂಗಳೂರು ಪ್ರವಾಸ ಮಾಡಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷನಾದ.

ಮುನಿಶಾಮಪ್ಪ ಅಧ್ಯಕ್ಷನಾಗಿ ಏನೇನು ಮಾಡಿದ, ಏನೇನು ಮಾಡಲಿಲ್ಲವೆಂದು ಊರಿನವರನ್ನು ಕೇಳಬೇಕು. ಮಾಡಿದ್ದೇನೂ ಇಲ್ಲವೆಂದು ಯಾರಾದರೂ ಹೇಳಿದರೆ ಅದು ವಿರೋಧಿಗಳು ಹೇಳಿಸಿದ ಮಾತೆಂದು ಮುನಿಶಾಮಪ್ಪ ಹೇಳುವುದಿಲ್ಲ; ಅವನ ಕಡೆಯುವರು ಹೇಳುತ್ತಾರೆ. ಏನೇನು ಮಾಡಿದ್ದೇನೆ ಎಂದೂ ಅವನು ಹೇಳುವುದಿಲ್ಲ. ಅವನ ಕಡೆಯವರು ಹೇಳುತ್ತಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲು ಅಡ್ಡಿಯಿಲ್ಲ.

English summary
Here is an interesting light article of Transition of foot lawyer Munishamappa to Congress leader. Oneindia Kannada columnist Sa Raghunath writes strong political satire article at the right time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X