• search

ಯಲವಳ್ಳಿಯ ಮುನೆಂಕಟಪ್ಪನ ಮಾತೂ ಹಾಡೇ, ಹಾಡೂ ಹಾಡೇ

By ಸ ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಹಗೆ, ದಗೆ ಇರದ ನಗೆ 'ಮನೋಭಾವದ ನಗೆ'. ಇಂಥ ನಗೆಯವರು ಆರೋಗ್ಯವಂತರು. ಹೀಗೆ ಆರೋಗ್ಯವಂತನಾದ ಮನುಷ್ಯನೊಬ್ಬನೊಂದಿಗೆ ಒಂದು ದಿನ ಕಳೆಯುವ ಅವಕಾಶ ಸಿಕ್ಕಿತು. ಆಗಿನ ಅನುಭವ ಈ ಲೇಖನ.

  ಪಕ್ಕಾ ಹಳ್ಳಿಗನಾದ ಯಲವಳ್ಳಿಯ ಮುನೆಂಕಟಪ್ಪನಿಗೆ ಬಿ.ರಾಚಯ್ಯ ಅನ್ನೋದು ಅವನೇ ಇಟ್ಟುಕೊಂಡ ಉರುಫ್ ನಾಮಧೇಯ. ದೇವರಾಜ ಅರಸರ ದರಬಾರಿನಲ್ಲಿ ಮಂತ್ರಿಯಾಗಿದ್ದವರು ರಾಚಯ್ಯ. ಅವರು ಯಲವಳ್ಳಿಗೆ ಬಂದಿದ್ದಾಗ ಇವನಿಗೆ ಕೆಲವರು ಅವರಂತೆ ಡ್ರೆಸ್ ಹಾಕಿಸಿ ನಿಲ್ಲಿಸಿದ್ದರಂತೆ. ಇದು ಅವರಿಗೂ ಮೆಚ್ಚುಗೆಯಾಗಿತ್ತಂತೆ. ಆ ನೆನಪಿನಲ್ಲೇ ಈಗಲೂ ಇದ್ದಾನೆ.

  ಅರವತ್ತು ದಾಟಿರುವ ಮುನೆಂಕಟಪ್ಪ ನಾಲ್ಕನೇ ಕ್ಲಾಸಿನ ಓದಿನವರೆಗೆ ಕಲಿತ ಬರವಣಿಗೆಯನ್ನು ಬರೆಯುವ ವ್ಯವಹಾರವಿಲ್ಲದೆ ಮರೆತಿದ್ದಾನೆ. ಹೊಲ ಗದ್ದೆಗಳಲ್ಲಿ ದುಡಿಯುವ ಕೂಲಿಕಾರ. ಚಂದ್ರ, ಸುಂದ್ರ, ಸೊಟ್ಟಪ್ಪ ಹೀಗೆ ನಾಲ್ಕಾರು ಅಡ್ಡ ಹೆಸರುಗಳನ್ನು ಇಟ್ಟವರು ಕೂಲಿಕಾರ ಹೆಂಗಸರು. ಯಾಕೆಂದರೆ 'ನಾನಂದ್ರೆ ಅವರಕೆಲ್ಲ ಬೋ ಬ್ಯಮೆ'(ಪ್ರೀತಿ) ಅನ್ನುತ್ತಾನೆ.

  ಸರಳ ಸಂಸಾರಿ ಸಂತನ 'ಸುಖ'ದ ಪಾಠಕ್ಕೆ ಶುಲ್ಕವಿಲ್ಲ, ವೆಚ್ಚವಿಲ್ಲ

  ಅಜ್ಜಿ- ಅಮ್ಮನ ಸೆರಗು ಹಿಡಿದು ಬೆಳೆದವನು. ಅವರೊಂದಿಗಿದ್ದವರೂ ಕೂಲಿ ಹೆಂಗೆಳೆಯರೆ. ಹಾಗಾಗಿ ಅಜ್ಜಿ, ಅಮ್ಮನಿಂದ ಕಲಿತ ಹಾಡುಗಳನ್ನು ಇವರೊಂದಿಗೆ ಗಟ್ಟಿ ಮಾಡಿಕೊಂಡ. ತೆಲುಗು ಪ್ರಭಾವ ಮಾತಿನಲ್ಲಿದ್ದು 'ನ' 'ಣ' ಆಗಿಬಿಡುವುದರಿಂದ ತಾನು ಹಾಡುವುದು ಜಾಣಪದ.

  ಈ ಜಾನಪದಗಳೊಂದಿಗೆ ಶಾಲೆಯಲ್ಲಿ ಕಲಿತ 'ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ, ನಾಯಿಮರಿ ನಾಯಿಮರಿ ತಿಂಡಿ ಬೇಕೆ' ಪದ್ಯಗಳನ್ನೂ ಹೊಲಗದ್ದೆಗಳಲ್ಲಿ ಹಾಡುವವನೆ. ಇವನಿಗೆ ಹಾಡುವ ಗೀಳು, ಇವನೊಂದಿಗೆ ಕೆಲಸಕ್ಕಿಳಿದವರಿಗೆ ಹಾಡು ಕೇಳುವ ಖಯಾಲಿ. ಇವನು ಹಾಡಿದ್ದೆಲ್ಲ ಅವರಿಗೆ ಹಾಡೇ. ನಾಯಿಮರಿ ಪದ್ಯಾನೂ ಹಾಡೆ. ಅದು ಹಾಡಲ್ಲದೆ ಇನ್ನೇನು? ಹೀಗಾಗಿ ಇವನಿದ್ದರೆ ಹೆಣ್ಣಾಳುಗಳಿಗೆ ಖುಷಿ ಅಂದರೆ ಖುಷಿ. ಏಕೆಂದರೆ ಇವನಂತೆ ಹಾಡೋನು, ನಗಿಸೋನು ಅವರಿಗಿಲ್ಲ. ಇವನ ಮಾತುಗಳಿಗೆ ಶ್ಲೀಲ- ಅಶ್ಲೀಲಗಳ ಗೆರೆಯಿಲ್ಲ. ಇವುಗಳಿಗೆಲ್ಲ ಅತೀತನಿವ

  ಅರ್ಥದ ಗೊಡವೆ ಎಲ್ಲಿಯದು?

  ಅರ್ಥದ ಗೊಡವೆ ಎಲ್ಲಿಯದು?

  ಹಾಡಿಗರ್ಥ ಇವನಿಗೂ ಬೇಡ, ಅವರಿಗೂ ಬೇಡ. ಹಾಗಾಗಿ ಇವನು ಜೋಡಿಸಿ ಹಾಡಿದ ಶಬ್ದಗಳೆಲ್ಲಾ ಹಾಡೇ. ರಂಜನೆ ಮುಖ್ಯವಾದಾಗ ಅರ್ಥದ ಗೊಡವೆ ಎಲ್ಲಿಯದು? ಕುರಿತೋದಿದವರು ಬರೆದವಲ್ಲೂ ಇಂಥವು ಉಂಟಲ್ಲ, ಅಸಂಗತ ಎಂಬ ಹೆಸರಿನಲ್ಲಿ. ಎರಡು ಸಾಲುಗಳನ್ನು ಕಟ್ಟಿ ನಾಲ್ಕು ಸಲ ಹಾಡಿದರೆ ಹಾಡು.

  ಮೂರು ಸಾಲಿನದೊಂದು ಹಾಡು ಹೇಳಿದ, 'ಬಾಪನೋಲ್ಲ ಪಾಪೇಮೋ ಬಾಗುಂದಿರಾ/ ಮಾಲೋಲ್ಲ ಪಾಪಕು ಮಾಟಾಯೆರಾ/ ...ಪಾಪಕು... ವಚ್ಚೆರಾ' (ಹಾರುವರ ಹುಡಿಗಿಯೇನೊ ಚೆಂದಾಗವ್ಳೆ/ ಮಾದಿಗರ ಹುಡುಗಿಗೆ ಮಾತಾಗದೆ/....ಹುಡುಗಿಗೆ... ಬಂದಿತೊ). ಬ್ರಾಹ್ಮಣರ ಹುಡುಗಿ ಚೆನ್ನಾಗಿರುವುದಕ್ಕೂ, ಮಾದಿಗರ ಹುಡುಗಿಗೆ ಮಾತಾದುದಕ್ಕು, .... ಹುಡುಗಿಗೆ .... ಬಂದುದಕ್ಕೂ ಏನು ಸಂಬಂಧ? ನಮಗೆ ತಿಳಿಯದು. ಆದರೆ ಅವನು ಬಲ್ಲ.

  ಬ್ರಾಹ್ಮಣರ ಮನೆ ಹುಡುಗಿ ಸುಂದರಿಯಾದರೂ ಅವರ ಮನೆಗಳಲ್ಲಿ ಮದುವೆ ಆಗುವುದು ತಡ. ಮಾದಿಗರ ಮನೆ ಹುಡುಗಿ ಚಿಕ್ಕವಳಾದರೂ ಸೋದರಿಕೆಯ ಗಂಡಿನೊಂದಿಗೆ ಬೇಗ ಮದುವೆಯಾಗಿಬಿಡುತ್ತದೆ. ...ಹುಡುಗಿಗೆ ... ಬಂದು ಅವಳು ಬಟ್ಟೆ ಒಗೆಯುವಾಗ ಕಣ್ಣು ಚದರುತ್ತದೆ ಎಂದು ಹೇಳುತ್ತಾನೆ. ಸುತ್ತಲಿನ 'ಗೋಪಿಕೆ'ಯರು ಮುಸುಮುಸು ನಗುತ್ತಾರೆ.

  ಎತ್ತಕ ಹೊಂಟಿ ಮಾಮ?

  ಎತ್ತಕ ಹೊಂಟಿ ಮಾಮ?

  ಇವನು ಬೆಳಗ್ಗೆ ಬೀದಿಯಲ್ಲಿ ಹೊರಟನೆಂದರೆ ಅಂಗಳ ಗುಡಿಸುವ, ಸಾರಿಸುವ ಹೆಂಗಸರು 'ಎತ್ತಕ ಹೊಂಟಿ ಮಾಮ' ಎಂದರೆ, 'ಪಂಗ'(ಕೆಲಸ) ಒಪ್ಕೊಂಡಿವ್ನಿ ಬರ್ರೆ ಮುಂಡಿಗ್ಳ ಅಂದರೆ ಸಾಕು ನಾನು, ನಾನು ಎಂದು ಹೊರಡುವವರೇ. ರೆಡ್ಡಿ, ಗೌಡರುಗಳು ಕರೆದರೆ 'ಬರಾಣಿಲ್ಲ' ಅನ್ನುವವರು ಇವನು ಇರುತ್ತಾನೆ ಎಂದರೆ 'ಬತ್ತೀನೇಳು' ಅನ್ನುತ್ತಾರೆ.

  ಹೋಲಿಸುವುದಾದರೆ ಇವನು ಕೃಷ್ಣ, ಅವರು ಗೋಪಿಕೆಯರು. ಕೃಷ್ಣನ ಕೊಳಲಿಗೆ ಒಲಿದು ಹೋದ ಗೋಪಿಕೆಯರನ್ನು ಅವರ ಗಂಡಂದಿರು ಆಕ್ಷೇಪಿಸುತ್ತಿರಲಿಲ್ಲವಂತೆ. ಹಾಗೆಯೇ ಇವನ ಮಾತುಗಳಿಗಾಗಿ, ಹಾಡುಗಳಿಗಾಗಿ ಹೋಗುವ ಹೆಂಗಸರನ್ನು ಅವರ ಗಂಡಂದಿರು ಆಕ್ಷೇಪಿಸಿದ್ದಿಲ್ಲ. ಅವರೊಂದಿಗೂ ಸಲಿಗೆಯವನೇ. ಇವನಿಂದ ತಮ್ಮ ಹೆಂಗಸರಿಗೆ ಕೆಡುಕಿಲ್ಲ, ತಮಗೆ ಅವಮಾನವಿಲ್ಲ ಎಂದೇ ನಂಬಿಕೆ.

  ನಾನು ಸಾಯೋವಾಗ ಸುತ್ತ ಎಣ್ಣೆಂಗುಸ್ರು ಇರ್ಬೇಕು

  ನಾನು ಸಾಯೋವಾಗ ಸುತ್ತ ಎಣ್ಣೆಂಗುಸ್ರು ಇರ್ಬೇಕು

  ಮುನೆಂಕಟಪ್ಪ ಹೇಳುತ್ತಾನೆ, 'ನಾನು ಸಾಯೋವಾಗ ನನ ಚುಟ್ಟೂ (ಸುತ್ತಲೂ) ಎಣ್ಣೆಂಗುಸ್ರು ಇರ್ಬೇಕು' ಎಂದು. ಯಾಕೆಂದರೆ ಅವರಿದ್ರೆ 'ಮೋಚ್ಚ' (ಮೋಕ್ಷ) ಅಂತೆ. ಅವರೆಲ್ಲ ತಾಯಂದಿರಂತೆ. ಸಂಸಾರಿ, ಮಕ್ಕಳ ತಂದೆಯಾದ ಇವನದು 'ಕಾಮ'ವಿಲ್ಲದ 'ಶೃಂಗಾರದ' ಮಾತುಗಳು, ಹಾಡುಗಳು. ಜಾನಪದ ಮೋಜಿನ ಶೃಂಗಾರ ಇವನಲ್ಲಿ ತುಂಬಿ ತುಳುಕುತ್ತದೆ. ತನ್ನನ್ನೂ ನಗೆಗೀಡು ಮಾಡಿಕೊಳ್ಳುತ್ತ ಇತರರನ್ನೂ ಅದರೊಳಕ್ಕೆ ತರುತ್ತಾನೆ. ಚೇಷ್ಟೆ ಇಲ್ಲದ ಇವನ ಶೃಂಗಾರದ ಮಾತುಗಳು ಗಂಡು ಹೆಣ್ಣಿಬ್ಬರಿಗೂ ಪ್ರಿಯವೆ.

  ಗಂಡನ ಮೇಲೆ ಸಿಡಿಸಿಡಿ ಅನ್ನುವ ಹೆಣ್ಣಾಳಿಗೆ ಇವನು ಹೇಳಿದ್ದು 'ತಿತ್ಯಾಗ (ಎಲೆ ಅಡಿಕೆ ಚೀಲ) ಎಲಡ್ಕೆ ಮಡಿಕ್ಕೊಂಡಂಗೆ ಗಣ್ಣ(ಗಂಡನನ್ನು) ಮಡಿಕ್ಕೊಳ್ಳೆ ಮುಂಡೆ ಸುಕಪಡ್ತಿ.' ಹೆಂಡತಿ ಗಂಡನನ್ನ, ಗಂಡ ಹೆಂಡತಿಯನ್ನ 'ಇತ್ತಕ(ಇತ್ತ) ಬಾ, ಇತ್ತಕ ಬಾ' ಅಂತಿರಬೇಕಂತೆ. 'ಅತ್ಕಿರು (ಅತ್ತ ಇರು) ಅತ್ಕಿರು' ಅಂತಿದ್ದರೆ ಸಂಸಾರ ಅತ್ತತ್ತಲೇ ಆಗಿಬಿಡುತ್ತದಂತೆ. ಇವನಲ್ಲಿ ಇಂಥ ಸಂಸಾರ ಕೂಡಿಸುವ ಮಾತಿಗೆ ಕೊರತೆ ಇಲ್ಲ.

  ಗುಂಡೆಂದರೆ ಸಾಕು ಸಾವಿರ ಮಾತಾಡಬಲ್ಲ, ಹಾಡುಗಳನ್ನು ಹಾಡಬಲ್ಲ. ಮೂಡಿಗಾಗಿ ಗುಂಡು, ಗುಂಡಿನ ಗಮ್ಮತ್ತಿನಲ್ಲಿ ಹಾಡು. ಈ ಎರಡೂ ನಾಲ್ಕೂರಿನಲ್ಲಿ ಪ್ರಸಿದ್ಧಿ. ಈ ಊರುಗಳಿಗೆ ಅಡಿ ಇಟ್ಟರೆ 'ಬಾ ಮಾಮ' ಎಂದು ಕರೆಯುವವರೇ ಹೆಚ್ಚು. ಬಂದನೋ ಸರಿ. ಎಲೆ ಅಡಿಕೆ. 'ಬತ್ತೀನಿರು' ಎಂದರೆ ಗುಂಡಿನಂಗಡಿಗೆ ಹೊರಟಿದ್ದಾನೆ ಎಂದಷ್ಟೆ. ಅವನೇ ಹೇಳುತ್ತಾನೆ 'ತಾನು ರಾಜ, ತನ್ನದು ರಾಜಾ' (ರಾಜ ವಿಸ್ಕಿ) ಎಂದು.

  ವಯಸ್ಸಾದವರೂ ಇವನ ಕಣ್ಣಲ್ಲಿ ಯವತಿಯರೇ

  ವಯಸ್ಸಾದವರೂ ಇವನ ಕಣ್ಣಲ್ಲಿ ಯವತಿಯರೇ

  ಮುನೆಂಕಟಪ್ಪ ಕೂಲಿಗೆ ಬರಲು ತಡ ಮಾಡುವ ಹೆಂಗೆಳೆಯರನ್ನು ಅವರ ಮನೆ ಬಾಗಿಲಲ್ಲಿ ನಿಂತು, 'ಬಿರನ ಬಾರೇ ಸುಂದರಿ, ಕಾಂತಾಮಣಿ/ ನಿನಕ ಕೊಡುತೀನಿ ಕಡ್ಡೀಪುಡಿ/ ಬಾರೆ ಬಾರೆ ಮ್ಯಾನಕೆ, ರಂಬೆ ನೀನೆ..' ಎಂದು ಕರೆಯುವುದೇ ಸೊಗಸು. ವಯಸ್ಸಾದವರೂ ಇವನ ಕಣ್ಣಲ್ಲಿ ಯವತಿಯರೇ. ಶಬ್ದಗಳಲ್ಲಿ ಹೆಂಗಸರಿಗೆ ವಯಸ್ಸಾಗದು ಎಂದು ಹೇಳಲಾರನಾದರೂ ಭಾವದಲ್ಲಿ ಅದನ್ನು ತೋರಿಸಬಲ್ಲ.

  ‘ಸಿಗುರು ಸಿಗುರು ಸಿನ್ನದಿ/ ಸಿಂತ ಸಿಗುರಿ ಸಿನ್ನದಿ' (ಚಿಗುರು ಚಿಗುರು ಹುಡುಗಿ/ ಹುಣಿಸೆ ಚಿಗುರು ಹುಡುಗಿ) ಎಂದು ವಯಸ್ಸಿನವರನ್ನು ಕುರಿತು ಹಾಡಿದಂತೆ ಮುದುಕಿಯರಿಗೂ ಹೇಳಿ ನಾಚಿಸುತ್ತಾನೆ. ಆಂಗಿಕ ಅಭಿನಯವಿಲ್ಲದೆ ಮಾತನಾಡಲಾರ. ಬಾಯಲ್ಲಿ ತುಂಬಿದ ಎಲೆಯಡಿಕೆ ರಸದಂತೆ ಮಾತಿನಲ್ಲಿ ರಸ ತುಂಬಿ ಆಡುತ್ತಾನೆ, ಹಾಡುತ್ತಾನೆ. ಇವನ ಒಂದೆರಡು ಹಾಡನ್ನು ಕೇಳಿ.

  ಅರಿವು ಹೃದಯದಲ್ಲಿರುತ್ತದೆ

  ಅರಿವು ಹೃದಯದಲ್ಲಿರುತ್ತದೆ

  ಚಿಕ್ಕಮಿಕಳು ದೊಡ್ಡಮ್ಮಿ / ದೊಡ್ಡಮಿಕಳು ಚಿಕ್ಕಮ್ಮಿ / ಚಿಕ್ಕಮಿಕಳು ನಾದಿನಿ/ ನಾದಿನಿಕೆ ಲಕ್ಕಯ್ಯ
  ಮದುವೆ ಒಂದಾಗುತೈತೆ/ ಆಹಾ ಮದುವೆ ಒಂದಾಗುತೈತೆ

  ಉತ್ತನೂರು ಉಳ್ಳಿಕಾಳು/ ಮಾಲೂರು ಬೆಂಡೆಕಾಯಿ/ ಚಿತ್ತೂರು ಸೀಗೆಕಾಯಿ
  ಮದುವೆ ಒಂದಾಗುತೈತೆ/ ಆಹಾ ಮದುವೆ ಒಂದಾಗುತೈತೆ
  ಇಲಿ ಮಕದ ಈರಕ್ಕ/ ಬೆಕ್ಕು ಮಕದ ಬೆಳ್ಳಕ್ಕ/ ನಾಯಿ ಮಕದ ನಾರಕ್ಕ
  ಮದುವೆ ಒಂದಾಗುತೈತೆ/ ಆಹಾ ಮದುವೆ ಒಂದಾಗುತೈತೆ

  ಸೀಟಿ ಶಾಲೆ ಸಿನ್ನಕ್ಕ / ಬಿಗುವು ರೈಕೆ ಬೀರಕ್ಕ / ದೊಡ್ಡ ಪಿರ್ರೆ ದ್ಯಾವಕ್ಕ
  ಮದುವೆ ಒಂದಾಗುತೈತೆ/ ಆಹಾ ಮದುವೆ ಒಂದಾಗುತೈತೆ.

  ‘ಸಿತ್ತೆ (ಚಿತ್ತೆ) ಮಳೆ ನಾಯಿ'ಗಳೆಂದು ವಿಮರ್ಶಿಸುವ ಇವನು, ಅವರೊಂದಿಗೆ 'ಸರದಾಗ'(ಸರಸದಿಂದ) ಇರಬೇಕು. ಬೀದಿ ನಾಯಿಯಂತಲ್ಲ ಅನ್ನುತ್ತಾನೆ. ಇವನ ಮಾತುಗಳನ್ನು ಕೇಳಿದರೆ ಅರಿವು ಹೃದಯದಲ್ಲಿರುತ್ತದೆ ಅನ್ನಿಸುತ್ತದೆ. ಅರಿವು ಸಂಸ್ಕಾರವೂ ಹೌದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Yaluvalli Munenkatappa is rural talent. His songs and personality attract men- women in village. Human interest story by One India columnist Sa Raghunatha.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more