ಮಿಕ್ಸಿ, ಗ್ರೈಂಡರ್ ಏನೇ ಬಂದರೂ ಹಸಿಕಲ್ಲ ಬಳಕೆ ಜೀವಕ್ಕೆ ಖುಷಿ

Posted By: ಸ ರಘುನಾಥ
Subscribe to Oneindia Kannada

ಪರಂಪರೆಯ ಜೀವಂತಿಕೆಯಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದು. ಇವರು ಬಳಕೆಯಲ್ಲಿ ಉಳಿಸಿಕೊಳ್ಳುವ ವಸ್ತು, ಸಾಮಗ್ರಿಗಳು ಆಧುನಿಕ ವಸ್ತು-ಸಾಮಗ್ರಿಗಳ ಚರಿತ್ರೆಗೆ ಆಕರಗಳಾಗುತ್ತವೆ. ಯಾವುದು ಹೇಗೆ ರೂಪಾಂತರಗೊಂಡು -ಪರಿವರ್ತನೆಗೊಂಡು - ಇಂದಿನ ರೂಪಕ್ಕೆ ಬಂದವೆಂದು ಸಾರುತ್ತವೆ.

ಒರಳು, ಬೀಸುವಕಲ್ಲು, ರುಬ್ಬುಗುಂಡು ಇಂಥವು ಉದಾಹರಣೆಗಳಷ್ಟೆ. ಇಂಥವುಗಳಲ್ಲಿ ರುಬ್ಬುಗುಂಡಿಗೂ ಹಿಂದಿನದಾದ ಹಸಿಕಲ್ಲು ಅಥವಾ ಅಸೇಕಲ್ಲು ಒಂದು.

ದೇವತೆಗಳು ಅಮೃತ ಕೊಟ್ಟರೂ ಬದಲಿಗೆ ರೊಟ್ಟಿ- ಹುಚ್ಚೆಳ್ಳು ಚಟ್ನಿ ಕೊಡಲ್ಲ...

ಗ್ರಾಮೀಣ ಜನ ಜೀವನದಲ್ಲಿ ಆಧುನಿಕತೆ ಪ್ರವೇಶ ಮಾಡಿದರೂ ಸಂಪ್ರದಾಯ, ಪದ್ಧತಿಗಳು ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಅಂತೆಯೇ ವಸ್ತು- ಸಾಮಗ್ರಿಗಳ ಬಳಕೆಯು ಜೀವಂತವಾಗಿರುತ್ತದೆ ಎಂಬುವುದಕ್ಕೆ ಹಸಿಕಲ್ಲು ಎಂದು ಕರೆಸಿಕೊಳ್ಳುವ ಖಾರ ಅರೆಯುವ ಕಲ್ಲು ಸಾಕ್ಷಿ.

After coming mixer, grinder villagers still using Hasikallu

ಇವು ಒಂದೇ ಗಾತ್ರದವಲ್ಲ. ಸಾಮಾನ್ಯ ರುಬ್ಬುಗುಂಡಿನ ಗಾತ್ರದಿಂದ ಹಿಡಿದು ದೊಡ್ಡದಾಗಿರುತ್ತದೆ. ಇದರಿಂದ ಖಾರ ಅರೆಯುವವರ ರೆಟ್ಟೆಗಳಲ್ಲಿ ತಾಕತ್ತು ಇರಬೇಕು. ಗೌನಿಪಲ್ಲಿಯ ಗಂಡುಹೆಣ್ಣು ಅನ್ನಿಸಿಕೊಂಡಿದ್ದ ಡಬ್ಬಾನಾರೆಮ್ಮ ತನ್ನ ಮಗಳು ಸಾವಿತ್ರಿಗೆ 'ಮುಡ್ಡಿ ತಿರುವಿಕ್ಯಂಡು ಓಡಾಡಂಗಲ್ಲಮ್ಮಣ್ಣಿ ಖಾರುದ ಕಲ್ಲು ತಿರುವೋದು. ಕಸ್ಟಬಿದ್ದು ಕಲಕೊ. ಅತ್ತಿ ಮನೇನಾಗ ಪೇರುಕ (ಹೆಸರಿಗೆ) ಬತ್ತಿ' ಎಂದು ಹೇಳುತ್ತಿದ್ದಳು.

'ನೆಲ್ಲು ಕುಟ್ಟೆ ಸೊಸಿಮುದ್ದೆ ಅಂದ್ರೆ, ಅಸಕಲ್ಲು ಎಲ್ಲದೆ ಅತ್ತೆಮ್ಮ ಅಂದ್ಲಂತೆ' ಎಂಬ ಗಾದೆಯೂ ಇದೆ. ಇದನ್ನು ಹೇಳಿದವಳೂ ಡಬ್ಬಾನಾರೆಮ್ಮನೇ.

ನಮ್ಮ ಸೀಮೆ ಹಳ್ಳಿ ಬಾಡು, ಊಟದ ಬಗ್ಗೆ ಒಂದು ನೀಟಾದ ವಿವರಣೆ

ಈ ಕಲ್ಲಿನಿಂದ ಅರೆದದ್ದು ಒರಳಿನಲ್ಲಿ ಅರೆದದ್ದರಷ್ಟೇ ರುಚಿಯಾಗಿರುತ್ತದೆ ಮತ್ತು ಬೇಗ ನುರಿಯುತ್ತದೆ. ಈ ಕಲ್ಲು ಸಾಮಾನ್ಯವಾಗಿ ಮನೆಗಳ ಅಂಗಳದ ಒಂದು ಅಂಚಿನಲ್ಲಿರುತ್ತದೆ. ದಿನ ನಿತ್ಯದ ಅಡುಗೆಗಲ್ಲದೆ ವಿಶೇಷ ಮಸಾಲೆ ಅರೆಯಲು ಈ ಹಸಿಕಲ್ಲನ್ನು ಬಳಸುತ್ತಾರೆ. ರುಬ್ಬುವಂತಹುದು ಇದ್ದರೆ ಅದನ್ನು ಮನೆಯೊಳಗಿನ ಒರಳಿನಲ್ಲಿ ರುಬ್ಬಿಕೊಳ್ಳುತ್ತಾರೆ.

After coming mixer, grinder villagers still using Hasikallu

ಹಸಿಕಲ್ಲು ಅಥವಾ ಖಾರದ ಕಲ್ಲಿನಲ್ಲಿ ಖಾರ ಅರೆಯುವುದು ಎಂದರೆ ಸುಮ್ಮನೆ ಅರೆಯುತ್ತಾ ಕುಳಿತುಕೊಳ್ಳುವ ಕೆಲಸವಲ್ಲ. ಖಾರ ಅರೆಯುತ್ತಲೆ ದನ-ಕರುಗಳ ಮುಂದೆ ಹುಲ್ಲು ಇದೆಯೋ-ಇಲ್ಲವೋ ಎಂದು ಗಮನಿಸಬಹುದು. ಕೋಳಿಗಳಿಗೆ ಕಾಳು- ನೀರು ಇಟ್ಟಿದೆಯೋ ಇಲ್ಲವೋ ಎಂದು ನೋಡಬಹುದು.

ಈ ಎಲ್ಲಕಿಂತ ಹೆಚ್ಚಾಗಿ ಹೋಗಿಬರುವವರೊಂದಿಗೆ ಮಾತುಕತೆ ನಡೆಸಬಹುದು. ಈ ಕಾರಣಗಳಿಂದ ಅತ್ತೆಯರೇ ಹೆಚ್ಚಿಗೆ ಅರೆಯಲು ಕುಳಿತುಕೊಳ್ಳುತ್ತಿದ್ದರು. ಆಕೆಗೆ ಬಿಡುವಿಲ್ಲದಿದ್ದಾಗ ಮಾತ್ರ ಸೊಸೆಯರು ಈ ಕಲ್ಲಿನ ಮುಂದೆ ಕೂರುತ್ತಿದ್ದರು. ನನ್ನ ಗಮನಕ್ಕೆ ಬಂದಂತೆ ಅಡುಗೆ ಮಾಡುವ ಸಂದರ್ಭ ಬಂದರೂ ಗಂಡಸರು ಬಳಸಿದಂತಿಲ್ಲ. ಮನೆ ಹೊರಗಿರುವುದರಿಂದ ನಾಚಿಕೆ ಇದ್ದೀತು. ಅಥವಾ ಇದು ಹೆಂಗಸರ ಬಳಕೆಗಷ್ಟೇ ಮೀಸಲಿದ್ದೀತು.

ಈ ಅಂಶವನ್ನು ಗಮನಿಸಿದಾಗ, ಇದನ್ನು ಪೂಜಿಸುವವರಲ್ಲಿ ಹೆಂಗಸರೇ ಪ್ರಮುಖರಾದುದರಿಂದ ಇದು ವ್ಯಾಕರಣದ ರೀತ್ಯಾ ನಪುಂಸಕಲಿಂಗವಾದರೂ ಜಾನಪದರಿಗೆ ಹೆಣ್ಣಿನ ರೂಪವಾಗಿರುವುದರಿಂದ, ಆ ದೃಷ್ಟಿಯಿಂದ ಇದೂ ಒರಳು, ರಾಗಿಕಲ್ಲುಗಳಂತೆ ಸ್ತ್ರೀಲಿಂಗವೇ. ಇದಕ್ಕೆ ಪುಷ್ಟಿ ಕೊಡುವಂತೆ ಈ ಜಾನಪದ ಪದವಿದೆ:

ಅಸಿಕಲ್ಲಮ್ಮನಕ ಮೊಕ್ಕಿ ಖಾರ ಅರಿಯೇಳೆ ಮಗುಳೆ

ಗಣುಸೂರು ಇಟ್ಟುಕ ಬರುವೊ | ವತ್ತಾತು

ಒಲಿ ಮ್ಯಾಲ ಎಸರು ಇಟ್ಟಾತು (ಹಾಡಿದವರು: ಗುಳ್ಳೇನಳ್ಳಿ ಸಿದ್ದಮ್ಮ, ಮಲಿಯಪ್ಪನಹಳ್ಳಿ)

ಇಂದಿಗೂ ಈ ಕಲ್ಲನ್ನು ಹೆಚ್ಚಿಗೆ ಬಳಕೆಯಲ್ಲಿ ಇಟ್ಟಿರುವವರೆಂದರೆ ಮರಗಳ ಕೆಳಗೆ ಬೀಡುಬಿಡುವ ಅಲೆಮಾರಿಗಳು, ಭಿಕ್ಷುಕರು. ಇವರು ಗುಡಾರ ಹಾಕಿದ ಕಡೆ ಹಸಿಕಲ್ಲನ್ನು ಬಳಸಿರುವ ಕುರುಹುಗಳನ್ನು ಕಾಣಬಹುದು. ಇವರು ಸಾಮಾನ್ಯ ಅಡುಗೆ ಮಾಡುವಾಗ ಈ ಕಲ್ಲನ್ನು ಬಳಸುವುದಕ್ಕಿಂತಲೂ ಬೇಟೆಯಾಡಿ ತಂದದ್ದನ್ನು ಸಾರು ಮಾಡಲು ಮಸಾಲೆ ಅರಿಯುವುದಕ್ಕೆ ಈ ಕಲ್ಲನ್ನು ಬಳಸುತ್ತಾರೆ.

ಆಸುಪಾಸಿನಲ್ಲಿ ಹುಡುಕಿ ಚಪ್ಪಟೆಯಾದ ಅಡಿಗಲ್ಲು ಮತ್ತು ಅರೆಯಲು ಗುಂಡನ್ನು ಆರಿಸಿ ತಂದಿಟ್ಟುಕೊಳ್ಳುತ್ತಾರೆ. ಇವರು ಬಿಡಾರ ಎತ್ತಿದ ಬಳಿಕ ಆ ಕಲ್ಲುಗಳು ಅನಾಥವಾಗುತ್ತವೆ. ಒಮ್ಮೊಮ್ಮೆ ಇವರ ನಂತರ ಅಲ್ಲಿ ಬಿಡಾರ ಹೂಡುವವರು ಈ ಕಲ್ಲುಗಳನ್ನು ಬಳಸುವುದು ಉಂಟು.

ಜನಪದರಿಗೆ ಒರಲಿನಂತೆಯೇ ಈ ಕಲ್ಲು ಸಹ ಪವಿತ್ರವಾದುದು. ಹಾಗಾಗಿ ಒರಲನ್ನು ಪೂಜಿಸಿದಂತೆಯೇ ಇದನ್ನು ಪೂಜಿಸುತ್ತಾರೆ. ಅಲೆಮಾರಿಗಳು ಪೂಜಿಸಲಾಗದಿದ್ದರೂ ಮೊದಲ ಸಲ ಬಳಸುವಾಗ ನಮಸ್ಕರಿಸುವುದುಂಟು. ಯಾವ ಕಾರಣಕ್ಕೂ ಇದನ್ನು ಕಾಲಿನಿಂದ ಮುಟ್ಟುವುದಿಲ್ಲ. ಇದು ಅವರಿಗೆ ಒರಳು ಕಲ್ಲಿನಷ್ಟೇ ಪವಿತ್ರ. ಒನಕೆಯೊಂದಿಗೆ ಒರಳು ರಾಗಿಕಲ್ಲಿನಷ್ಟೇ ಪವಿತ್ರ. ಇದೂ ನಮ್ಮ ಜಾನಪದರ ಆಚರಣೆಗಳಲ್ಲಿ ಒಂದಾಗಿದೆ.

ಇಂದಿನ ಮಿಕ್ಸಿ, ಗ್ರೈಂಡರುಗಳ ಅರೆಯುವ ವಿಧಾನ ಒರಳು-ರುಬ್ಬುಗುಂಡಿನಂತೆಯೆ. ಕಾಳನ್ನು ಹಿಟ್ಟು ಮಾಡುವ ಯಂತ್ರದಲ್ಲಿ ಬೀಸಲು ಇರುವ ಪ್ಲೇಟುಗಳು ಬೀಸುವ ಕಲ್ಲಿನ ರೂಪದಲ್ಲಿಯೇ ಇರುವುದನ್ನು ಕಂಡಿದ್ದೇವೆ. ಇವಕ್ಕೆ ನಿತ್ಯಪೂಜೆಯ ಭಾಗ್ಯವಿಲ್ಲವಾದರೂ ಆಯುಧಪೂಜೆಯ ದಿನವಂತೂ ಪೂಜಿಸಿಕೊಳ್ಳುವ ಭಾಗ್ಯವುಂಟು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oneindia Kannada columnist Sa Raghunatha explains the usage, importance of Hasikallu in villages.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X