ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ.ರಘುನಾಥ್ ಅಂಕಣ: ಹದಿನೆಂಟು ರೂಪಾಯಿ ಇಪ್ಪತ್ತು ಪೈಸೆ

|
Google Oneindia Kannada News

ನರಸಿಂಗರಾಯ ಐದು ಸಾವಿರವನ್ನು ಅಪ್ಪಯ್ಯನ ಮುಂದಿಟ್ಟು ನಡೆದ ಪ್ರಸಂಗವನ್ನು ತಿಳಿಸಿದ. ಎದ್ದು ಒಳಹೋದ ಅಮ್ಮಯ್ಯ, ದೇವರ ಮುಂದಿದ್ದ ಮಣ್ಣಿನ ಹುಂಡಿಯನ್ನು ಕೈಗೆತ್ತಿಕೊಂಡು, ತಿಮ್ಮಪ್ಪ ಊರಿನ ಸೇವೆ ನಿನ್ನ ಸೇವೆಯಲ್ಲವೆ? ಆದರೂ ಇದು ನಿನ್ನದು. ನಿನ್ನ ಪ್ರೇರಣೆ ಇರದೆ ಇದಕ್ಕೆ ಕೈ ಹಾಕುತ್ತಿದ್ದೆನೆ? ಆದರೂ ತಪ್ಪು. ಇದಕ್ಕಾಗಿ ಮೂರು ಶನಿವಾರ ನಿಟ್ಟುಪವಾಸ ಮಾಡುತ್ತೇನೆ ಎಂದು ಕಣ್ಣಿಗೊತ್ತಿಕೊಂಡು ಬಂದು ಊದುಗೊಳವೆಯಿಂದ ಅದನ್ನು ಒಡೆದಳು.

ಎಣಿಸಿದಾಗ ಎರಡುಸಾವಿರದ ಮೂರು ರೂಪಾಯಿಗಳಿದ್ದವು. ಇದು ತಿಮ್ಮಪ್ಪನ ಪ್ರಸಾದವೆಂದು ಹೇಳಿದಳು. ಸುನಂದ ಕೊರಳಿಗೆ ಕೈ ಹಾಕಿದಾಗ, ಅಪ್ಪಯ್ಯ ತಡೆದ. ನೀನು ಮಾಡುತ್ತಿರುವುದೇ ದೊಡ್ಡದು ಎಂದ. ಮನೆಯವರದೆಂದು ಅಪ್ಪಯ್ಯ ಎರಡು ಸಾವಿರದ ತೊಂಬತ್ತೇಳು ರೂಪಾಯಿಗಳನ್ನು ಸೇರಿಸಿದ.

ಅಮ್ಮಯ್ಯ ದೇವರ ಹುಂಡಿ ಒಡೆದ ವಿಷಯ ಮುನೆಕ್ಕನಿಂದ ಅಂಗಡಿಗೆ ಬಂದವರಿಗೆ ತಿಳಿಯಿತು. ಹಲವರ ಮನೆ ಹುಂಡಿಗಳು ಒಡೆದವು. ಕೆಲವರು ಮುನೆಕ್ಕನ ಅಂಗಡಿ ಪುಸ್ತಕದಲ್ಲಿ ನೂರಿನ್ನೂರು ರೂಪಾಯಿ ಸಾಲ ಬರೆಸಿ ತಂದು ಕೊಟ್ಟರು. ನೀಲಗಿರಿ ತೋಪಿನ ಮಾರಾಟದ ಹಣವೂ ಬಂದು, ಹದಿನೈದು ಸಾವಿರ ಕೂಡಿಕೊಂಡತು. ಹಿರಿಯರೆಲ್ಲ ಕೈ ಬಿಚ್ಚಿ ನೀಡಿದರು.

Sa.Raghunath Column: Eighteen Rupees Twenty Paise Story

ಭಜನೆಯ ದಿನ ಎಲ್ಲ ಲೆಕ್ಕ ಹಾಕಿದಾಗ ಎರಡುಲಕ್ಷದ ಎಂಟುನೂರ ಮುವ್ವತ್ತಾರು ರೂಪಾಯಿಗಳಿದ್ದವು. ಅದು ಹಂಚಿಕೆಯಾಬುವ ಮಾತು ಪ್ರಾರಂಭವಾಗಲಿದ್ದಾಗ 'ನಾನು ಕೊಡಲಾ?' ಎಂಬ ಮಾತು ಕೇಳಿಸಿತು. ಎಲ್ಲರ ಕೊರಳು ಅತ್ತ ತಿರುಗಿತು. ವಾರದಿಂದ ಊರಿನಲ್ಲಿಯೇ ಉಳಿದು ತಿರುಪೆ ಬೇಡುತ್ತಿದ್ದ ಕುಂಟಲಚ್ಮಿ ಬೊಗಸೆಯಲ್ಲಿ ಚಿಲ್ಲರೆ ಹಿಡಿದು ನಿಂತಿದ್ದಳು.

ಕೂಡಲೇ ಅಪ್ಪಯ್ಯ ಶಬರಿ ಅಂದ. ತೇವಗೊಂಡ ಕಣ್ಣುಗಳಿಂದ ನರಸಿಂಗರಾಯ ಅವಳನ್ನು ನೋಡುತ್ತ ನಿಂತ. ಸುನಂದ ಹೋಗಿ ಸೇರಗಿಗೆ ಹಾಕಿಸಿಕೊಂಡು, ಅವಳ ಕಾಲು ಮುಟ್ಟಿ ನಮಸ್ಕರಿಸಿದಳು. ಭಜನಾ ಸಭೆಯೇ ಎದ್ದುನಿಂತಿತು. ಹೃದಯಗಳಷ್ಟೇ ಮಾತನಾಡುತ್ತಿದ್ದವು.

ಚಿಲ್ಲರೆಯನ್ನು ಎಣಿಸಿದಾಗ ಹದಿನೆಂಟು ರೂಪಾಯಿ ಇಪ್ಪತ್ತು ಪೈಸೆಗಳಿದ್ದವು. ಎಂಬತ್ತೊಂದು ರೂಪಾಯಿ ಎಂಬತ್ತು ಪೈಸೆ ನಾನು ಕೊಡುತ್ತೇನೆ. ನೂರು ರೂಪಾಯಿಬಂದ ಮಾಡಿ ಲಚ್ಮಕ್ಕನ ಹೆಸರಿನಲ್ಲಿ ಬರೆಯಿರಿ ಅಂದ ದುಗ್ಗಪ್ಪ. ಹಾಗೆ ಬೇಡ, ಅವಳ ಹೆಸರಿನಲ್ಲಿ ಅದಷ್ಟೇ ಇರಲಿ ಎಂದ ನರಸಿಂಗರಾಯ. ಸುನಂದ ಕೂಡಲೆ ಲಚ್ಮಕ್ಕ(ಶಬರಿ) -18-20 ಎಂದು ಬರೆದಳು.

ಎರಡುಲಕ್ಷ ಎಂಟುನೂರ ಐವತ್ತನಾಲ್ಕು ರೂಪಾಯಿ ಇಪ್ಪತ್ತು ಪೈಸೆಗಳಲ್ಲಿ 'ನಮ್ಮೂರ ಹೆಣ್ಣುಗಳ ಕಲಿಕೆಯ ಮಡಿಲು' ನಿರ್ವಹಣೆಗೆ ಇಪ್ಪತ್ತುಸಾವಿರ, 'ನಮ್ಮೂರ ಶಿಕ್ಷಣ ನಿಧಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ, ಗರಡಿ ಮನೆಗೆ ಇಪ್ಪತ್ತೈದು ಸಾವಿರ, ಸಂಗೀತ ಕಲಿಕೆ ಸಾಧನಗಳಿಗೆ ಹದಿನೈದು ಸಾವಿರ, ಚರ್ಮದ ತಮಟೆ ಮಾಡಿಸಲು ಹತ್ತು ಸಾವಿರ, 'ನಮ್ಮೂರ ಕಲ್ಯಾಣ ಸಂಘ'ಕ್ಕೆ ಹತ್ತುಸಾವಿರದ ಎಂಟುನೋರ ಐವತ್ತನಾಲ್ಕು ರೂಪಾಯಿ ಇಪ್ಪತ್ತು ಪೈಸೆಯಂತೆ ಹಂಚಲಾಯಿತು.

ಯಾರು ಎಷ್ಟೇ ಕೇಳಿಕೊಂಡರೂ ಲಚ್ಮಕ್ಕ ತಾನು ಚಲ್ಲಾಪುರಮ್ಮನ ಗುಡಿಯ ಮುಂದೆಯೇ ಇರುವುದಾಗಿ ಹೇಳಿಬಿಟ್ಟಳು. ಮಾರನೇ ದಿನದಿಂದ ಪಕ್ಕದ ಊರುಗಳಿಗೂ ಭಿಕ್ಷೆಗಾಗಿ ಹೋಗಿ ಬರತೊಡಗಿದಳು. ಎರಡು ಹೊತ್ತಿನ ಊಟ ಅವಳು ಹೋದ ಮನೆಯಲ್ಲಿ ಆಗುತ್ತಿದ್ದುದರಿಂದ, ಭಿಕ್ಷೆಬೇಡಿ ಬಂದ ಕಾಳು, ಹಿಟ್ಟುಗಳನ್ನು ಮುನೆಕ್ಕನ ಅಂಗಡಿಯಲ್ಲಿ ಮಾರಿ, ಚಿಲ್ಲರೆಕಾಸನ್ನೂ ಸೇರಿಸಿ ಮುನೆಕ್ಕನ ಅಂಗಡಿಯಲ್ಲಿ ಇಟ್ಟಿದ್ದ ತನ್ನ ಲೆಕ್ಕಕ್ಕೆ ಬರೆಸುತ್ತಿದ್ದಳು. ತಿಂಗಳಿಗೊಮ್ಮೆ ಲೆಕ್ಕ ತೆಗೆಸಿ, ಸುನಂದಳ ಸಲಹೆಯಂತೆ ನಮ್ಮೂರ ಕಲ್ಯಾಣ ಸಂಘ'ಕ್ಕೆ ಕೊಡುತ್ತಿದ್ದಳು. ಇದರಿಂದ ಆ ನಿಧಿಗೆ ತಿಂಗಳಿಗೆ ಮುನ್ನೂರರಿಂದ ಆರುನೂರು ರೂಪಾಯಿಗಳು ಸೇರುವಂತಾಯಿತು.

ವಿದ್ಯಾರ್ಥಿ ನಿದ್ಧಿ, ಕಲ್ಯಾಣ ನಿಧಿ ಹಣದಿಂದ ಎರಡು ಚೀಟಿಗಳನ್ನು ನಡೆಸಿ ನಿಧಿಯನ್ನು ಬೆಳೆಸುವ ಸಲಹೆ ಹಿರಿಯರ ಸಮಿತಿಯಿಂದ ಬಂದಿತು. ಇದು ಒಪ್ಪಿತವಾಗಿ ಚೀಟಿ ಪ್ರಾರಂಭವಾಯಿತು. ಇದರಿಂದ ಹಣಕಾಸಿನ ತೊಂದರೆ ಇದ್ದವರಿಗೆ ನಿಗದಿತ ಬಡ್ಡಿಯಲ್ಲಿ ಸಾಲ ಸಿಗುವಂತಾಯಿತು. ನರಸಿಂಗರಾಯನಿಗೆ ಕೊಂಚ ಉಸಿರಾಡುವಂತಾದಾಗ, ಅವನಲ್ಲಿ ಹುಟ್ಟಿಕೊಂಡಿದ್ದ ಆಲೋಚನೆಯೊಂದಕ್ಕೆ ಕೈಕಾಲು ಮೂಡತೊಡಗಿತು.

English summary
Narasingaraya told the story of five thousand Rs. put it in front of Appayya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X