• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗರಹಾವಿನಂಥವನನ್ನು ಪ್ರೀತಿಸು : ಆದರೆ ನಂಬಬೇಡ!

By Staff
|

ತುಂಬ ಒಳ್ಳೆಯವನು, ತುಂಬ ನಂಬಿಗಸ್ಥ, ಕಪಟವಿಲ್ಲದವನು ಅನ್ನಿಸಿಕೊಂಡು ಬಿಟ್ಟ ಮಾತ್ರಕ್ಕೆ ಒಬ್ಬನ ಮೇಲೆ ನಂಬಿಕೆ ಮೂಡುವುದಿಲ್ಲ. ಅವನು ಎಷ್ಟರ ಮಟ್ಟಿಗೆ ದಕ್ಷ ಎಂಬುದು ಮುಖ್ಯವಾಗುತ್ತದೆ. ನೀನು ಎಷ್ಟು ಪ್ರಾಮಾಣಿಕ ಎಂಬುದು ಎಷ್ಟು ಮುಖ್ಯವೋ, ನಿನ್ನ ಕರ್ತೃತ್ವ ಶಕ್ತಿ ಎಷ್ಟಿದೆ ಎಂಬುದೂ ಮುಖ್ಯವಾಗುತ್ತದೆ. ಅಂತಿಮವಾಗಿ ನಮ್ಮ ಕ್ಯಾರೆಕ್ಟರು ಎಂಬುದೊಂದಿರುತ್ತದಲ್ಲ? ಅದು ಇಡೀ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಗೆ ಬುನಾದಿಯಾಗುತ್ತದೆ.

* ರವಿ ಬೆಳಗೆರೆ

'ನಿನ್ನನ್ನ ತುಂಬ ಪ್ರೀತಿಸ್ತೀನಿ.'

'ನಿನ್ನನ್ನ ತುಂಬ ನಂಬುತ್ತೇನೆ.'

ಈ ಎರಡು ಹೇಳಿಕೆಗಳ ಪೈಕಿ ಎರಡನೆಯ ಹೇಳಿಕೆಯನ್ನೇ ಹೆಚ್ಚು ಇಷ್ಟಪಡುತ್ತೇನೆ. ಆದಕ್ಕೆ ವಯಸ್ಸು ಕಾರಣವಾ? ಗಳಿಸಿಕೊಂಡಿರುವ ಸ್ಟೇಟಸ್ ಕಾರಣವಾ? ಬದುಕಿನ ಇವತ್ತಿನ ಘಟ್ಟ ಕಾರಣವಾ? ಅಥವಾ ಇವೆಲ್ಲ ಸೇರಿಸಿ ಹೀಗಾಗುತ್ತದಾ? ಗೊತ್ತಿಲ್ಲ. 'ನಿನ್ನನ್ನ ಪ್ರೀತಿಸ್ತೀನಿ ರವೀ' ಅಂತ ಅನೇಕ ಸಲ ಅನ್ನಿಸಿಕೊಂಡಿದ್ದೇನೆ. ಹಾಗಂತ ಅಂದವರಿಂದಲೇ ವಂಚನೆಗೊಳಗಾಗಿದ್ದೇನೆ. ಇವತ್ತು, 'ರವೀ, ನಿನ್ನನ್ನು ತುಂಬ ನಂಬುತ್ತೇನೆ' ಅಂತ ಅನೇಕರು ಅನ್ನುತ್ತಾರೆ. ಯಾರಿಗೂ ನನ್ನಿಂದ ವಂಚನೆಯಾಗದಿರಲಿ ಅಂತ ಆಶಿಸುತ್ತೇನೆ. ಏಕೆಂದರೆ, ಪ್ರೀತಿಗಿಂತಲೂ ನಂಬಿಕೆ ದೊಡ್ಡದು ಅಂತ ಅರ್ಥವಾಗಿದೆ. ನಿಜ ಹೇಳಬೇಕೆಂದರೆ, ಅರ್ಥ ಯಾವತ್ತೋ ಆಗಿತ್ತು. ಮನದಟ್ಟಾಗಿರುವುದು ಇತ್ತೀಚಿಗೆ.

ನಾನು ಮೊದಲು ನನ್ನ ಸುತ್ತಲಿನ ಸಂಬಂಧಗಳನ್ನೇ ನೋಡಿಕೊಂಡೆ. ನನ್ನ ಕುಟುಂಬದವರು, ಸಂಬಂಧಿಕರು, ಗೆಳೆಯರು, ನನ್ನೊಂದಿಗೆ ಕೆಲಸ ಮಾಡುವವರು, ನನ್ನ ಓದುಗರು : ಇವರೆಲ್ಲ ನನ್ನನ್ನು ಪ್ರೀತಿಸುತ್ತಾರಾ? ಅದಕ್ಕಿಂತ ಜಾಸ್ತಿ ನನ್ನನ್ನು ನಂಬುತ್ತಾರಾ? ಪ್ರೀತಿಸುವ ಬಗ್ಗೆ ನನಗೆ ಖಾತರಿಗಳಿಲ್ಲ. ನನ್ನನ್ನು ಹುಚ್ಚುಹತ್ತಿದಂತೆ ಪ್ರೀತಿಸುವವರಿದ್ದಾರೆ. ಅವರ ಪ್ರೀತಿಗೆ ಹೆಸರಿಡಲಾರೆ. ಆ ಮಟ್ಟಕ್ಕೆ ಹೋಗಿ ಅವರನ್ನು ಪ್ರೀತಿಸುವುದೂ ನನ್ನಿಂದಾಗದು. ಆದರೆ ನನ್ನ ಸುತ್ತಲಿನವರಲ್ಲಿ ಹೆಚ್ಚು ಜನ ನನ್ನನ್ನು ನಂಬುತ್ತಾರೆ. ನನಗೆ ಹೆಚ್ಚಿನ ಸಂತೋಷ ನೀಡುವುದು ಅದೇ. ಹಾಗಂತ ಪ್ರೀತಿಯನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ, ರವಿ ಇದ್ದಾನೆ ಬಿಡು ಎಂಬ ನಂಬಿಕೆಯನ್ನು ನಾನು ಎಷ್ಟೆಷ್ಟು ಜನರಲ್ಲಿ ಉಂಟು ಮಾಡಿತ್ತೇನೋ ಅಷ್ಟಷ್ಟು ಹೆಚ್ಚಿನ ಸಾರ್ಥಕ್ಯ ಅನುಭವಿಸುತ್ತೇನೆ.

ಒಂದು ಕಡೆಯಿಂದ ನೋಡುತ್ತ ಬಂದರೆ ಇಡೀ ಮನುಷ್ಯ ಸಂಬಂಧದ ಬ್ರಹ್ಮಾಂಡವೇ 'ನಂಬಿಕೆ' ಎಂಬ ಮೂರೂವರೆ ಅಕ್ಷರಗಳ ಮೇಲೆ ನಿಂತಿದೆ. ರೇಲ್ವೆ ಕೌಂಟರಿನಲ್ಲಿ ನೀವು ಹಣ ಕೊಟ್ಟಿರಿ, ಅವನು ಟಿಕೆಟ್ ಕೊಟ್ಟ. ಇಬ್ಬರ ಮಧ್ಯೆ ಒಂದು ಕ್ಷಣದಲ್ಲಿ ವರ್ಕೌಟ್ ಆದದ್ದು ಕೇವಲ ನಂಬಿಕೆ. ಇಂಥದೇ ನಂಬಿಕೆ ತಂದೆ-ಮಕ್ಕಳ ಮಧ್ಯೆ, ಗಂಡ-ಹೆಂಡತಿಯ ಮಧ್ಯೆ, ಮಾಲೀಕ-ನೌಕರರ ಮಧ್ಯೆ - ಹೀಗೆ ಜಗತ್ತಿನ ಕೋಟ್ಯಂತರ ಜೀವಿಗಳ ಮಧ್ಯೆ ಪ್ರತಿನಿತ್ಯ, ಪ್ರತಿಕ್ಷಣ ಉಸಿರಾಡುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ನಮಗೆ ಹೇಗೆ ನಂಬಿಕೆ ಬೆಳೆಯುತ್ತ ಬರುತ್ತದೆ ಎಂಬುದನ್ನು ಗಮನಿಸಿ. ಪ್ರೇಮಿಗಳ ಮಧ್ಯೆ ಕುರುಡಾಗಿ ಬೆಳೆದು ನಿಲ್ಲುವಂಥ ನಂಬಿಕೆಗಿಂತ ಡಿಫರೆಂಟ್ ಆದದ್ದು ಇದು. ಆವತ್ತಿನವತ್ತು ಬೆಳೆದು ನಿಲ್ಲುವಂತಹುದಲ್ಲ. Over a period ಅಂತೀವಲ್ಲ? ಅಂತಹ ನಂಬಿಕೆ ಯಾವ್ಯಾವ ಕಾರಣಗಳಿಂದಾಗಿ ಬೆಳೆದು ನಿಲ್ಲುತ್ತದೆ ಅಂತ ಯೋಚಿಸಿ. ಕೆಲವು ನಿರ್ದೇಶಕರು ಮಾಡಿದ ಸಿನೆಮಾಗಳಿಗೆ ನಾವು ಕಣ್ಣು ಮುಚ್ಚಿಕೊಂಡು ಹೋಗುತ್ತೇವೆ. ಕೆಲವು ಲೇಖಕರ ಕಥೆ ಕಾದಂಬರಿಗಳನ್ನು blind ಆಗಿ ಖರೀದಿಸುತ್ತೇವೆ. ಅವರು ನಮಗೆ ಇಷ್ಟವಾಗಿರುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ ಅವರ ಸಿನೆಮಾ, ಅವರ ಕಥೆ ಅಥವಾ ನಿರೂಪಣೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಬೆಳೆದಿರುತ್ತದೆ. ಅಂತಹುದೊಂದು ನಂಬಿಕೆಯನ್ನು ಆತ ತನ್ನ ಹಿಂದಿನ ಸಿನೆಮಾ ಅಥವಾ ಬರಹಗಳ ಮೂಲಕ ಬೆಳೆಸಿರುತ್ತಾನೆ.

ಕೆಲವರು 'ನಾಳೆ ಸಂಜೆ 5 ಗಂಟೆಗೆ ಸಿಕ್ತೀನಿ' ಅಂದರೆ ಆ ಮಾತು ಖಂಡಿತ ಅಂತಲೇ, ನೀವು ಗಡಿಯಾರದ ಮುಳ್ಳಿನ ಮೇಲೆ ಕಣ್ಣಿರಿಸಿ ಅವರಿಗೋಸ್ಕರ ಕಾಯುತ್ತ ಇದ್ದು ಬಿಡಬಹುದು. ಅದನ್ನು reliability ಅನ್ನುತ್ತೇವೆ. ಮದುವೆಯ ಮಾತಿನಿಂದ ಹಿಡಿದು ವ್ಯಾಪಾರ ವ್ಯವಹಾರಗಳ ತನಕ ಆ ರಿಲಯಬಿಲಿಟಿಯ ಪ್ರಸ್ತಾಪ ಬರುತ್ತಲೇ ಇರುತ್ತದೆ. ಒಬ್ಬ ಮನುಷ್ಯ ಮದುವೆ ಮನೆಯೊಂದರಲ್ಲಿ ಇಂತಿಷ್ಟು ಸಾವಿರ ಜನಗಳಿಗೆ ಅಡುಗೆ ಮಾಡಿ ಬಡಿಸಬಲ್ಲ ಎಂಬ ನಂಬಿಕೆ ಅಥವಾ ವಿಶ್ವಾಸಾರ್ಹತೆ ಹುಟ್ಟುವುದು ಆತ ಈ ತನಕ ಮಾಡಿ ಬಡಿಸಿದ ಅಡುಗೆಗಳ ಸಂಖ್ಯೆಯಿಂದಾಗಿ. ಇದನ್ನು consistency ಅನ್ನುತ್ತೇವೆ. ಬೆಂಗಳೂರಿನ ಎಂಟಿಆರ್ ನಲ್ಲಿ ದೋಸೆ ಚೆನ್ನಾಗಿರುತ್ತದೆ ಎಂಬುದು ನಿರಂತರವಾಗಿ, ವರ್ಷಗಟ್ಟಲೆ ಅವರು ನಿರೂಪಿಸಿರುವುದರಿಂದ ದೃಢಗೊಂಡಿರುವ ಸಂಗತಿ.

ವ್ಯಕ್ತಿಗತ ಸಂಬಂಧಗಳಲ್ಲೂ ಈ ನಂಬಿಕೆ ಬಹಳ ವಿಚಿತ್ರ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಮ್ಮನ್ನು ನೀವು ಎಷ್ಟರ ಮಟ್ಟಿಗೆ ಗೌರವಿಸಿಕೊಳ್ಳುತ್ತೀರಿ ಮತ್ತು ಇತರರನ್ನು ಎಷ್ಟು ಗೌರವಿಸುತ್ತೀರಿ ಎಂಬುದರ ಮೇಲೆ ನಿಮಗೂ-ಇನ್ನೊಬ್ಬರಿಗೂ ಮಧ್ಯೆ ನಂಬಿಕೆಯ ಸೇತುವೆ ಬೆಳೆದು ನಿಲ್ಲುತ್ತದೆ. ಆಗಲೇ ಹೇಳಿದೆನಲ್ಲ? ಇದು ಒಂದೆರಡು ಸಂಗತಿಗಳಿಗೆ ಸಂಬಂಧಿಸಿದುದಲ್ಲ. ಅವನು ನನ್ನ ಮಗ ಎಂಬ ಕಾರಣಕ್ಕೆ ಅವನನ್ನು ನಾನು ಪ್ರೀತಿಸಬಹುದು. ಆದರೆ ನಂಬಿಕೆಯ ವಿಷಯಕ್ಕೆ ಬಂದಾಗ ಮಗನಿಗಿಂತಲೂ ಹೆಚ್ಚಾಗಿ, ನಾನು ನನ್ನ ಸಹಾಯಕರನ್ನು ನಂಬುತ್ತೇನೇನೋ? ಹಾಗಂತ ಮಗನ ಮೇಲೆ ಅಪನಂಬಿಕೆ ಇದೆ ಅಂತಲ್ಲ, ಅವನ ನ್ಯಾಯ ನಿರ್ಣಯ, ದಕ್ಷತೆ, ಪ್ರಾಮಾಣಿಕತೆ - ಇವೆಲ್ಲ ನನಗೆ ಇನ್ನಷ್ಟು ಮನವರಿಕೆಯಾಗಬೇಕು.

ನೀವು ಎಷ್ಟರ ಮಟ್ಟಿಗೆ ಬಹಿರಂಗಗೊಳ್ಳುತ್ತೀರಿ, ನಿಮ್ಮಲ್ಲಿ ಎಷ್ಟರ ಮಟ್ಟಿಗೆ openness ಇದೆ ಎಂಬುದು ಕೂಡ ನಂಬಿಕೆಯನ್ನು ಉಂಟುಮಾಡುತ್ತದೆ. ತೀರ ಒಳ ಮುಚ್ಚುಗದಂಥವರನ್ನು ನಂಬುವುದು ಕಷ್ಟ. ಹಾಗೆಯೇ, ಆಡೋದೊಂದು-ಮಾಡೋದೊಂದು ಎಂಬಂತಹ ವರ್ತನೆಯಿಂದಾಗಿ ಅವರಲ್ಲಿ ನಂಬಿಕೆ ಮೂಡುವುದಿಲ್ಲ. ತುಂಬ ಒಳ್ಳೆಯವನು, ತುಂಬ ನಂಬಿಗಸ್ಥ, ಕಪಟವಿಲ್ಲದವನು ಅನ್ನಿಸಿಕೊಂಡು ಬಿಟ್ಟ ಮಾತ್ರಕ್ಕೆ ಒಬ್ಬನ ಮೇಲೆ ನಂಬಿಕೆ ಮೂಡುವುದಿಲ್ಲ. ಅವನು ಎಷ್ಟರ ಮಟ್ಟಿಗೆ ದಕ್ಷ ಎಂಬುದು ಮುಖ್ಯವಾಗುತ್ತದೆ. ನೀನು ಎಷ್ಟು ಪ್ರಾಮಾಣಿಕ ಎಂಬುದು ಎಷ್ಟು ಮುಖ್ಯವೋ, ನಿನ್ನ ಕರ್ತೃತ್ವ ಶಕ್ತಿ ಎಷ್ಟಿದೆ ಎಂಬುದೂ ಮುಖ್ಯವಾಗುತ್ತದೆ. ಅಂತಿಮವಾಗಿ ನಮ್ಮ ಕ್ಯಾರೆಕ್ಟರು ಎಂಬುದೊಂದಿರುತ್ತದಲ್ಲ? ಅದು ಇಡೀ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಗೆ ಬುನಾದಿಯಾಗುತ್ತದೆ.

ಇಬ್ಬರ ನಡುವೆ ನಂಬಿಕೆ ಇಲ್ಲದಾದಾಗ ಅದಕ್ಕಿಂತ ದುರ್ಭರ ಪರಿಸ್ಥಿತಿ ಮತ್ತೊಂದಿಲ್ಲ. ರೇಲಿನಲ್ಲಿ ಪಕ್ಕಕ್ಕೆ ಕುಳಿತಿರುವವನು ಸೂಟ್ ಕೇಸ್ ಕಳ್ಳ ಅಂತ ಅನ್ನಿಸಿಬಿಟ್ಟರೆ ಪ್ರಯಾಣವನ್ನೇ ಎಂಜಾಯ್ ಮಾಡಲಿಕ್ಕಾಗುವುದಿಲ್ಲ. ಅಪನಂಬಿಕೆ ಹೆಚ್ಚಾದಾಗ ದುಗುಡ ಬೆಳೆಯಲಾರಂಭಿಸುತ್ತದೆ. ಮಾತು ಕಡಿಮೆಯಾಗಿ ಬಿಡುತ್ತವೆ. ಕಿರಿಕಿರಿ, ಸಿಟ್ಟು ಪ್ರತಿನಿತ್ಯದ ಸಂಗತಿಗಳಾಗುತ್ತವೆ. ಬೇಕೆಂತಲೇ ಪರಸ್ಪರರನ್ನು ಧಿಕ್ಕರಿಸುತ್ತೇವೆ. ಒಟ್ಟಿಗೆ ಕೆಲಸ ಮಾಡಲಾಗುವುದಿಲ್ಲ. ಅನುಮಾನ ಹೆಡೆಯಾಡುತ್ತದೆ. ಪರಸ್ಪರ ಗೌರವ ಉಳಿದಿರುವುದಿಲ್ಲ.

ಅದಕ್ಕೆ ಮೊನ್ನೆ ಸಿಕ್ಕ ಹುಡುಗಿಯೊಬ್ಬಳಿಗೆ ಹೇಳಿದೆ : ನಾಗರಹಾವಿನ ಮರಿಯಂತಿರುವವನನ್ನು ನೀನು ಪ್ರೀತಿಸುತ್ತೀಯಾದರೆ ಪ್ರೀತಿಸು ; ನನ್ನ ತಕರಾರಿಲ್ಲ. ಆದರೆ ಅವನನ್ನು ನಂಬೋದು ಮಾತ್ರ ಸರಿಯಲ್ಲ! ಪ್ರೀತಿ ಮತ್ತು ನಂಬಿಕೆ ಎಷ್ಟು ಬೇರೆ ಸಂಗತಿಗಳಲ್ಲವೆ?

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X