ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಲ್ ಮಾಡೆಲ್‌ಗಳಾ ರೋಲ್‌ಕಾಲ್ ಮಾಡೆಲ್‌ಗಳಾ?

By Staff
|
Google Oneindia Kannada News

DB Chandregowda
ಜಯಪ್ರಕಾಶ್ ನಾರಾಯಣ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರಂಥ ರೋಲ್ ಮಾಡೆಲ್ ನಾಯಕರುಗಳು ಒಬ್ಬರಾದರೂ ಇದ್ದಾರಾ ಅಂತ ಹುಡುಕಿದೆ ಒಬ್ಬರೂ ಸಿಗುವುದಿಲ್ಲ. ಪಕ್ಷನಿಷ್ಠೆ ಸವಕಲು ನಾಣ್ಯದಂತಾಗಿದೆ, ಜನಪರ ಕಾಳಜಿ ನಗಣ್ಯವಾಗಿದೆ. ಇಂಥವರಿಂದ ಚುನಾವಣೆಯ ಸಮಯದಲ್ಲಿ ದುಡ್ಡು ಕಿತ್ತುಕೊಂಡರೇನು ತಪ್ಪು ಎಂಬುದು ಸಾಮಾನ್ಯ ಮತದಾರರ ಪ್ರಶ್ನೆ.

* ರವಿ ಬೆಳಗೆರೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗತೊಡಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ದಿಲ್ಲಿ ಮಟ್ಟದಲ್ಲಿ ತಮ್ಮ ಪ್ರಭಾವ ಹೆಚ್ಚಾಗಬೇಕೆಂದು ಎಲ್ಲ ಪಕ್ಷಗಳ ನಾಯಕರೂ ಬಯಸುತ್ತಿರುವುದರಿಂದ ಇಂತಹ ಕಾವು ಹೆಚ್ಚಾಗುತ್ತಿದೆ ಅನ್ನುವುದೂ ನಿಜವೇ.

ಆದರೆ, ನನಗೆ ಕಳವಳ ಆಗುತ್ತಿರುವುದೆಂದರೆ ಈ ಚುನಾವಣೆಯ ನಂತರ ಕರ್ನಾಟಕದ ಪರಿಸ್ಥಿತಿ ಮತ್ತಷ್ಟು ದಯನೀಯವಾಗುತ್ತದಾ ಅನ್ನುವ ಪ್ರಶ್ನೆ. ಸುಮ್ಮನೆ ನೋಡುತ್ತಾ ಹೋಗಿ, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಅನ್ನುವ ಕಾರಣಕ್ಕಾಗಿ ದಂಡಿಯಾಗಿ ದುಡ್ಡು ಸುರಿಯುತ್ತಿವೆ. ಹೀಗೆ ದುಡ್ಡು ಸುರಿಯುವ ಪಕ್ಷಗಳು, ನಾಯಕರು ನಾಳೆ ಇದನ್ನು ಹಿಂಪಡೆಯಬೇಕು ಅನ್ನುವ ಉದ್ದೇಶವಿಲ್ಲದೇ ಮಾಡಲು ಸಾಧ್ಯವಾ? ಖಂಡಿತ ಇಲ್ಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ರಣಾಂಗಣಕ್ಕಿಳಿದಿರುವ ರಾಜಕೀಯ ಪಕ್ಷಗಳು ಯಾವ ವಿಷಯವನ್ನಿಟ್ಟುಕೊಂಡು ಮಾತನಾಡುತ್ತಿವೆ?

ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋಮುವಾದಿ. ಅದು ಅಸ್ತಿತ್ವದಲ್ಲಿದ್ದರೆ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಅಂತ ಚೀರಾಡಿಕೊಂಡು ಹೋಗುತ್ತಿದ್ದರೆ ಇತ್ತ ಯಡಿಯೂರಪ್ಪನವರ ಸರ್ಕಾರದಲ್ಲಿರುವ ಜನ ತಮ್ಮ ಸರ್ಕಾರದ ಜನಪ್ರಿಯತೆಯನ್ನು ಕಂಡು ಪ್ರತಿಪಕ್ಷಗಳಿಗೆ ಹೊಟ್ಟೆ ಉರಿ, ಹೀಗಾಗಿ ಟೀಕಿಸುತ್ತಿವೆ ಅಂತೆಲ್ಲ ಮಾತಾಡಿಕೊಂಡು ಹೋಗುತ್ತಿದ್ದಾರೆ. ಇದೆಲ್ಲ ವ್ಯರ್ಥಾಪಾಲ ಅಂತ ಎಂಥವರಿಗೂ ಗೊತ್ತಾಗುತ್ತದೆ. ಆದರೆ ಇವತ್ತಿನ ರಾಜಕೀಯ ಸಂದರ್ಭದಲ್ಲಿ ನಮ್ಮ ನಾಯಕರು ಅನ್ನಿಸಿಕೊಂಡವರು ಹೇಗೆ ಬದಲಾಗುತ್ತಿದ್ದಾರೆ ನೋಡಿ.

ಉದಾಹರಣೆಗೆ ನಮ್ಮ ಡಿಬಿ ಚಂದ್ರೇಗೌಡರು. ಒಂದು ಕಾಲದ ಸೆಕ್ಯುಲರ್ ರಾಜಕೀಯದ ಪ್ರತೀಕದಂತೆ ಇದ್ದ ಡಿಬಿಸಿ ಇವತ್ತು ಥೇಟು ಬಿಜೆಪಿ ಮನುಷ್ಯನಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಏನು ಪಾಕಿಸ್ತಾನದಲ್ಲಿರುವ ಪಕ್ಷವಾ? ಅನ್ನುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದರೆ, ಎಪ್ಪತ್ತರ ಗಡಿ ದಾಟುವತನಕ ಚಂದ್ರೇಗೌಡ ಎಂಬ ರಾಜಕಾರಣಿ ಮಾತಾಡಿಕೊಂಡು ಬಂದಿದ್ದೆಲ್ಲ ಸುಳ್ಳಾ? ಅಥವಾ ರಾಜಕೀಯ ಲಾಭಕ್ಕಾಗಿ ಅವರು ಈ ವ್ಯವಸ್ಥೆಯ ಜತೆ ರಾಜಿಯಾಗಿಬಿಟ್ಟರಾ ಅನ್ನಿಸುತ್ತದೆ. ಹಾಗಂತ ನಾವು ನಾಯಕರ ಬಗ್ಗೆ ತೀರಾ ಸಿನಿಕರಾಗುವ ಅಗತ್ಯವೇನಿಲ್ಲ. ಕೇವಲ ಮೂರು ವರ್ಷಗಳ ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಮುಖ್ಯಮಂತ್ರಿ ಆಗುವ ಕಾಲಕ್ಕೆ ನಮ್ಮ ಕುಮಾರಸ್ವಾಮಿಗೆ ಸೆಕ್ಯುಲರ್ ಪದದ ಅರ್ಥ ಏನೂಂತ ಗೊತ್ತಿರಲಿಲ್ಲ. ಹಾಗಂತಲೇ ಯಾರೇ ಕೇಳಿದರೂ ಸೆಕ್ಯುಲರ್ ಅನ್ನುವ ಪದದ ಅರ್ಥ ಏನ್ರೀ? ನನಗೆ ಯಾವ ಡಿಕ್ಷನರಿಯಲ್ಲೂ ಅದರ ಅರ್ಥ ಸಿಗುತ್ತಿಲ್ಲ ಅಂತ ಯಬಡೇಸಿಯಂತೆ ಮಾತನಾಡುತ್ತಿದ್ದರು. ಆದರೆ ಅದೇ ಕುಮಾರಸ್ವಾಮಿ ಇವತ್ತು ಸೆಕ್ಯುಲರ್ ವ್ಯವಸ್ಥೆಯ ಆಧಾರ ಸ್ತಂಭದಂತೆ ಪೋಜು ಕೊಡುತ್ತಿದ್ದಾರೆ.

ಅವರಪ್ಪ ದೇವೆಗೌಡರ ಮಾತಂತೂ ಬಿಟ್ಟೇ ಬಿಡಿ. ಬಿಜೆಪಿ ಜತೆ ಹೋದ್ರೂ ಕುಮಾರ ಚೆನ್ನಾಗೇ ಕೆಲಸ ಮಾಡ್ತಿದಾನೆ ಅಂತ ಸರ್ಟಿಫಿಕೇಟು ಕೊಟ್ಟ ಭೂಪ ಅವರು. ಹೀಗೇ ನೀವು ಒಂದೆಡೆಯಿಂದ ನೋಡುತ್ತಾ ಹೋದರೆ ತಾವು ಹಿಂದಾಡಿದ ಮಾತಿಗೇ ಅವಮಾನವಾಗುವಂತೆ ನಡೆದುಕೊಳ್ಳುತ್ತಿರುವ ಡಜನ್ನುಗಟ್ಟಲೆ ನಾಯಕರು ಹೆಜ್ಜೆಗಿಬ್ಬರಂತೆ ಸಿಗುತ್ತಾರೆ. ಅದು ಬಂಗಾರಪ್ಪ ಇರಬಹುದು, ನಾಗಮಾರಪಲ್ಲಿ ಇರಬಹುದು, ಗೋವಿಂದರಾಜ ನಗರದ ಸೋಮಣ್ಣ ಇರಬಹುದು. ಹೀಗೆ ಯಾರ್ಯಾರಿಗೆ ತಮ್ಮ ಅನುಕೂಲ ಎಲ್ಲಿದೆ ಅಂತ ಗೊತ್ತಾಗುತ್ತಿದೆಯೋ ಅವರೆಲ್ಲ ಅಲ್ಲಲ್ಲಿಗೆ ಹೋಗಿ ನಿಂತು ಮಾತಾಡುತ್ತಿದ್ದಾರೆ.

ಇದನ್ನೆಲ್ಲ ನೋಡಿದರೆ ನಿಜಕ್ಕೂ ವಿಷಾದವಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋಗಿ ನೋಡಿದರೂ ನಮಗೆ, ನಮ್ಮ ಮಕ್ಕಳಿಗೆ ರೋಲ್ ಮಾಡೆಲ್ ಆಗುವಂಥ ನಾಕರೇ ಇಲ್ಲವಲ್ಲ ಎಂಬ ನೆನಪಾಗಿ ಖೇದವಾಗುತ್ತದೆ. ಒಂದು ಕಾಲದಲ್ಲಿ ಗಾಂಧಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ಲೋಹಿಯಾ ಅವರಂತಹ ರೋಲ್ ಮಾಡೆಲ್‌ಗಳು ಕಣ್ಣಮುಂದಿದ್ದರು. ಆದರೆ ಇವತ್ತು ಅಂತಹವರು ಎಲ್ಲಿದ್ದಾರೆ? ನನ್ನ ದೃಷ್ಟಿಯಲ್ಲಿ ರೋಲ್ ಮಾಡೆಲ್‌ಗಳು ಎಂದರೆ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ಒಂದೇ ಆಗಿರುವಂತಹ ನಾಯಕರು. ದೇಶವನ್ನು ಸರ್ವಾಧಿಕಾರದ ಬಲೆಯಿಂದ ಬಿಡಿಸಲು ಹೋರಾಡಿದ ಜೆಪಿ ಅಂತಹ ಹೋರಾಟದ ಕಾಲದಲ್ಲಿ ಎಷ್ಟು ತಪಸ್ವಿಯ ಥರ ಇದ್ದರೆಂದರೆ ಟೀಕುಡಿಯುವ ಸಲುವಾಗಿ ತಮ್ಮ ಪತ್ನಿ ಒಳ್ಳೆ ಲೋಟಗಳನ್ನು ತಂದರೆ ಸಿಡಿಮಿಡಿಗೊಂಡುಬಿಟ್ಟಿದ್ದರು. ತುತ್ತು ಅನ್ನಕ್ಕೂ ಬಡಿದಾಡುವ ಜನ ದೇಶದಲ್ಲಿರುವಾಗ ಇಂತಹ ಲೋಟಗಳಲ್ಲಿ ಟೀ ಕುಡಿಯುವುದೂ ಐಷಾರಾಮ ಅನ್ನುವುದು ಜೆಪಿ ಭಾವನೆಯಾಗಿತ್ತು.

ಆದರೆ ಎಲ್ಲಿದ್ದಾರೆ ಇಂತಹ ಜನ? ಎಲ್ಲ ರೋಲ್‌ಕಾಲ್ ಮಾಡೆಲ್‌ನವರೇ. ಯಾವ ಪಕ್ಷವನ್ನು ತೆಗೆದು ನೋಡಿದರೂ ಅಷ್ಟೇ. ತಾವು ಭ್ರಷ್ಟರೇ ಅಲ್ಲ ಅಂತ ಹೇಳಿಕೊಳ್ಳುವ ಜನ ಎಲ್ಲ ಸರ್ಕಾರಗಳ ಕಾಲದಲ್ಲಿ ಒಬ್ಬಿಬ್ಬರು ಇರುತ್ತಾರಾದರೂ ಅವರೂ ತಮ್ಮ ಭ್ರಮೆಯಲ್ಲಿ ಮುಳುಗಿ ಔಟ್ಡೇಟೆಡ್ ಆಗಿ ಹೋಗಿರುತ್ತಾರೆ.

ಯಡಿಯೂರಪ್ಪ, ದೇವೆಗೌಡ, ಕುಮಾರಸ್ವಾಮಿ ಎಲ್ಲರೂ ರೈತರ ಹೆಸರು ಹೇಳುತ್ತಾರೆ. ಯಾರಾದರೊಬ್ಬರು ಸರಳವಾಗಿ, ಸಾಮಾನ್ಯ ಜನರಿಗೆ ರೋಲ್ ಮಾಡೆಲ್ ಗಳು ಅನ್ನಿಸುವ ಹಾಗೆ ಬದುಕಿದ್ದಾರಾ ಅಂತ ನೋಡಿದರೆ ಉಹೂಂ, ಎಲ್ಲರೂ ಬಂಗಲೆಯಲ್ಲಿ ಕುಳಿತು ರೈತರ ಬಗ್ಗೆ, ಬಡವರ ಬಗ್ಗೆ ಯೋಚಿಸುವವರೇ. ಈ ಪೈಕಿ ಕುಮಾರಸ್ವಾಮಿಯಂತೂ ರೈತರ ಬಗ್ಗೆ ಧೇನಿಸಲು ಮಾರಿಷಸ್ಸಿಗೆ, ದುಬೈಗೆ ಹೋಗಿ ಬರುತ್ತಿರುತ್ತಾರೆ. ಇಂತಹ ಜನ ನಮ್ಮ ರೋಲ್ ಮಾಡೆಲ್ಲುಗಳಾದರೆ ಮತದಾರರು ಹೇಗೆ ತಾನೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಂಬಿಕೆ ತಾಳುತ್ತಾರೆ?

ಕೆಲವೇ ದಿನಗಳ ಹಿಂದೆ ಉಪಚುನಾವಣೆಗಳು ನಡೆದವಲ್ಲ? ಆ ಸಂದರ್ಭದಲ್ಲಿ ಮಧುಗಿರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನ ರಾಜಕೀಯ ಪಕ್ಷಗಳ ನಾಯಕರ ಬಳಿ ನೇರವಾಗಿ ಹಣ ಕೇಳುತ್ತಿದ್ದುದನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿದವು. ಅವತ್ತು ನಮ್ಮ ಜನ ಇಷ್ಟು ಕೆಟ್ಟುಹೋದರಾ ಅಂತ ಕೇಳಿದವರಿದ್ದರು. ಹಣಕ್ಕಾಗಿ ಮತ ಮಾರಿಕೊಳ್ಳುವ ಈ ದೇಶಕ್ಕೆ ಭವಿಷ್ಯವಿರಲು ಸಾಧ್ಯವಾ ಅಂದವರಿದ್ದರು. ಆದರೆ ನಮ್ಮ ಮತದಾರರು ಹೀಗಾಗಲು ಕಾರಣರಾದವರು ಯಾರು? ರಾಜಕಾರಣಿಗಳೇ ತಾನೆ? ತಾವು ಜನಸೇವೆ ಮಾಡಲೆಂದು ರಾಜಕೀಯಕ್ಕೆ ಬಂದಿದ್ದೇವೆ ಅಂತ ಜನ ನಂಬುವಂತೆ ಇವರು ಬದುಕಿದರೆ? ಹಾಗಂತ ಇವತ್ತು ಯಾವೊಬ್ಬ ನಾಯಕನಾದರೂ ಹೇಳಲಿ ನೋಡೋಣ. ಜನ ನಗಬಾರದ ಜಾಗದಿಂದೆಲ್ಲ ನಗುತ್ತಾರೆ.

ಅದಕ್ಕಾಗಿಯೇ ಇವತ್ತು ಸಾಮಾನ್ಯ ಮತದಾರರಲ್ಲಿ ಹಲವು ಜನ ರಾಜಕಾರಣಿಗಳು ತಮ್ಮ ಮನೆ ಬಾಗಿಲಿಗೆ ಬಂದರೆ ಕಾಸು ಮಡಗಿ ಅನ್ನುವುದು. ಕಾರಣ? ದರೊಡೆ ಮಾಡಿಲ್ವಾ? ಯಾರಪ್ಪನ ಮನೆ ದುಡ್ಡು ಕೊಡ್ತಾನೆ, ಕೊಡ್ಲಿಬಿಡಿ ಸ್ವಾಮಿ ಅನ್ನುವುದು ಅವನ ಗುನುಗು. ಅವನ ದೃಷ್ಟಿಯಲ್ಲಿ ಅದು ತಪ್ಪಲ್ಲ. ಇವತ್ತು ಅರವತ್ತೈದು ಸಾವಿರ ಕೋಟಿ ರುಪಾಯಿ ಟರ್ನ್ ಓವರ್ ಇರುವ ಸರ್ಕಾರ ಎಂಬ ಸಾರ್ವಜನಿಕ ಸಂಸ್ಥೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಸೇರಿ ಯಾವ ಪರಿ ದರೊಡೆ ಮಾಡುತ್ತಿದ್ದಾರೆ ಅಂತ ಕೇಳಲು ಹೋದರೆ ಅದೇ ದೊಡ್ಡ ಕತೆ.

ಕುಡಿಯುವ ನೀರಿನ ಯೋಜನೆಯಿಂದ ಹಿಡಿದು ರಸ್ತೆ ನಿರ್ಮಾಣದವರೆಗೆ, ಕರೆಂಟಿನಿಂದ ಹಿಡಿದು ಬಡವರ ಕಾರ್ಯಕ್ರಮಗಳವರೆಗೆ ಯಾವುದೆಂದರೆ ಆ ಯೋಜನೆಯಲ್ಲಿ ನಲವತ್ತು-ಐವತ್ತು ಪರ್ಸೆಂಟು ಹಣವನ್ನು ನಾಚಿಕೆಯಿಲ್ಲದೇ ಹೊಡೆದು ತಿನ್ನಲಾಗುತ್ತಿದೆ. ಇವತ್ತು ಎಲ್ಲ ರಾಜಕೀಯ ಪಕ್ಷಗಳಿಗೆ ನಿಜವಾದ ಜನಪರ ಕಾಳಜಿ ಅಂತಿದ್ದರೆ ಈ ಹಣ ಹೊಡೆದು ತಿನ್ನುವ ನೀಚತನದ ಬಗ್ಗೆ ಚರ್ಚೆ ಮಾಡುವ ಪ್ರಾಮಾಣಿಕತೆ ಪ್ರದರ್ಶಿಸಬೇಕಿತ್ತು. ಎಲ್ಲೆಲ್ಲಿ ಹಿಗೆ ಸಾರ್ವಜನಿಕ ಹಣದ ಸೋರಿಕೆಯಾಗುತ್ತಿದೆ? ಅದನ್ನು ತಡೆಗಟ್ಟುವುದು ಹೇಗೆ? ಅನ್ನುವುದರ ಕುರಿತು ಚರ್ಚಿಸಬೇಕಿತ್ತು.

ಆದರೆ ಯಾವ ಪಕ್ಷದ, ಯಾವನಾದರೂ ಒಬ್ಬ ನಾಯಕ ಈ ಬಗ್ಗೆ ಮಾತನಾಡುತ್ತಿದ್ದಾನಾ ಹೇಳಿ? ಇಂಥವರು ಹೇಗೆ ಜನರ ರೋಲ್ ಮಾಡೆಲ್‌ಗಳಾಗುತ್ತಾರೆ? ಇವರಿಂದ ರಾಜ್ಯಕ್ಕೆ ಹೇಗೆ ಉಪಕಾರವಾಗುತ್ತದೆ? ಇವರನ್ನು ಯಾವ ಕಾರಣಕ್ಕಾಗಿ ಬೆಂಬಲಿಸಬೇಕು? ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹೋಗುವ ಮುನ್ನ ಈ ಬಗ್ಗೆ ಯೋಜಿಸಿ ನೋಡಿ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X