• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮನೇ ಇರಲಿಲ್ಲ ಅನ್ನುವುದಾದರೆ ಮುರುಗ ಎಲ್ಲಿಂದ ಬಂದ?

By ಪ್ರತಾಪ್ ಸಿಂಹ, ಬೆಂಗಳೂರು
|

ದೇವರನ್ನೇ ನಿರ್ನಾಮ ಮಾಡಲು ಹೊರಟ ಭಂಡಗೇಡಿ ಪೆರಿಯಾರ್ ಮತ್ತು ಅವರ ಶಿಷ್ಯೋತ್ತಮ ಎಂ.ಕರುಣಾನಿಧಿಯವರಿಗೆ ಒಂದು ಬಹಿರಂಗ ಪತ್ರ. ಈ ಪತ್ರದ ಇಂಗ್ಲಿಷ್ ಮತ್ತು ತಮಿಳು ಭಾಷಾಂತರವನ್ನು ಕನ್ನಡ ಕಲಿಯದ ಕರುಣಾನಿಧಿಯವರಿಗೆ ತಲುಪಿಸುವ ದೇಶಪ್ರೇಮಿಗಳು ಇಲ್ಲಾರಾದರೂ ಇದ್ದಾರಾ?


Pratap Simhaಒಂದು ಸಾರಿ ಮನೆಯಲ್ಲಿ ಭಾರೀ ಪೂಜೆ-ಪುನಸ್ಕಾರ ನಡೆಯುತ್ತಿರುತ್ತದೆ. ಆದರೆ ಮುಂದಿದ್ದ ಶಿವನ ವಿಗ್ರಹದ ಮೇಲೆ ಇಲಿಗಳು ಅಂಕೆಯಿಲ್ಲದೆ ಓಡಾಡುತ್ತಿರುತ್ತವೆ. ಇದನ್ನು ಕಂಡ ಸ್ವಾಮಿ ದಯಾನಂದ ಸರಸ್ವತಿಯವರ ಮನದಲ್ಲಿ 'ಪ್ರಶ್ನೆಗಳೇಳುತ್ತವೆ. ನಾವು ಶಿವನನ್ನು ಸರ್ವಶಕ್ತ ಎನ್ನುತ್ತೇವೆ. ಜಗತ್ತಿನ ರಕ್ಷಕ ಅಂತ ಆರಾಧಿಸುತ್ತೇವೆ. ಆದರೆ ತನ್ನ ಮೈಮೇಲೆ ಓಡಾಡುತ್ತಿರುವ ಇಲಿಗಳನ್ನೇ ಓಡಿಸಲಾರದವನು ಜಗತ್ತನ್ನು ಹೇಗೆತಾನೆ ರಕ್ಷಿಸಿಯಾನು? ಆತ ಸರ್ವಶಕ್ತನಾಗಿರಲು ಹೇಗೆ ಸಾಧ್ಯ?

ಹೀಗೆ ಉದ್ಭವವಾದ ಪಶ್ನೆಗಳು ಜಿಜ್ಞಾಸೆಗೆ ದಾರಿಮಾಡಿ ಕೊಡುತ್ತವೆ. ನಾವು ಆರಾಧಿಸುವ ದೇವರು ವಿಗ್ರಹಗಳಲ್ಲಿಲ್ಲ. ವಿಗ್ರಹಗಳನ್ನು ಸೃಷ್ಟಿಸಿಕೊಂಡಿರುವುದು ನಾವೇ ಎಂಬುದು ದಯಾನಂದ ಸರಸ್ವತಿಯವರಿಗೆ ಅರಿವಾಗುತ್ತದೆ. ಅಂದಿನಿಂದ ವಿಗ್ರಹಾರಾಧನೆಯನ್ನು, ಪೂಜಾರಿಗಳ ಡಾಂಭಿಕತೆಯನ್ನು ವಿರೋಧಿಸಲು ಆರಂಭಿಸುತ್ತಾರೆ. ಆರ್ಯ ಸಮಾಜವನ್ನು ಆರಂಭಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗುತ್ತಾರೆ.

ಇತ್ತ “ಶಾಲಾ ಹಂತದಲ್ಲೇ ನನ್ನ ವಿದ್ಯಾಭ್ಯಾಸ ನಿಂತು ಹೋಯಿತು. ಆದರೇನಂತೆ, ನನ್ನಲ್ಲಿದ್ದ ಜಾಣ್ಮೆಯನ್ನು ಗುರುತಿಸಿದ ಅಪ್ಪ ವ್ಯಾಪಾರ ನೋಡಿಕೊಳ್ಳಲು ಅಂಗಡಿಗೆ ಕಳುಹಿಸಿದರು. ಗೋಣಿ ಚೀಲಗಳ ಮೇಲೆ ವಿಳಾಸ ಬರೆಯುವುದು, ಸರಕು ತುಂಬಿದ ಚೀಲಗಳನ್ನು ಹರಾಜು ಹಾಕುವುದು ನನ್ನ ಕೆಲಸವಾಗಿತ್ತು. ಆದರೆ ಬಿಡುವಿನ ವೇಳೆಯಲ್ಲಿ ನಮ್ಮ ಪುರಾಣ-ಪುಣ್ಯಕಥೆಗಳನ್ನು ವಿರೋಧಿಸುತ್ತಿದ್ದೆ. ಆ ಕಾಲದಲ್ಲಿ ಈ ಸನ್ಯಾಸಿಗಳು, ಪಂಡಿತರು, ಪೂಜಾರಿಗಳಿಗೆ ನಮ್ಮ ಮನೆಯಲ್ಲಿ ಭಾರೀ ಮರ್ಯಾದೆ ನೀಡಲಾಗುತ್ತಿತ್ತು. ಆದರೆ ನನ್ನಲ್ಲಿ ಅವರ ಬಗ್ಗೆ ಯಾವುದೇ ಗೌರವವಿರದಿದ್ದ ಕಾರಣ ಅವರು ಹೇಳಿದ್ದನ್ನೆಲ್ಲ ವಿರೋಧಿಸಲು ಪ್ರಾರಂಭಿಸಿದೆ. ಗೇಲಿಯನ್ನೂ ಮಾಡುತ್ತಿದ್ದೆ. ಕಾಲಾಂತರದಲ್ಲಿ ಗೇಲಿ ಮಾಡುವುದೇ ಒಂದು ಅಭ್ಯಾಸವಾಯಿತು" ಎಂದು “ಫಾದರ್ ಆಫ್ ದಿ ತಮಿಳ್ ರೇಸ್" ಎಂದೇ ಖ್ಯಾತರಾಗಿರುವ ಪೆರಿಯಾರ್ ಈ.ವಿ. ರಾಮಸ್ವಾಮಿ ನಾಯ್ಕರ್ ಅವರೇ ಹೇಳಿಕೊಳ್ಳುತ್ತಾರೆ.

ಸ್ವಾಮಿ ದಯಾನಂದ ಸರಸ್ವತಿಯವರಿಗೂ ಪೆರಿಯಾರ್‌ಗೂ ಇರುವ ವ್ಯತ್ಯಾಸವೂ ಅದೇ.

ಯಾವ ವಿಚಾರಗಳು ದಯಾನಂದ ಸರಸ್ವತಿಯವರ ಮನದಲ್ಲಿ ಜಿಜ್ಞಾಸೆ ಮೂಡಿಸಿದವೋ, ಶೋಧನೆಗೆ ಹಚ್ಚಿದವೋ ಅದೇ ವಿಚಾರಗಳು ಪೆರಿಯಾರ್‌ಗೆ ಗೇಲಿಯ ವಸ್ತುಗಳಾದವು! ಅಂತಹ ವಿಶ್ವವಿಖ್ಯಾತ ಬ್ರಿಟಿಷ್ ತತ್ತಜ್ಞಾನಿ ಬರ್ಟಂಡ್ ರಸೆಲ್ ಕೂಡ “ವೈ ಆಮ್ ನಾಟ್ ಎ ಕ್ರಿಶ್ಚಿಯನ್"ಎಂಬ ಪ್ರಬಂಧವನ್ನೇ ಬರೆದಿದ್ದಾರೆ. ಹಾಗೆ ಬರೆದರೂ ಕ್ರಿಸ್‌ಮಸ್ ಆಚರಣೆ, ಅದರಲ್ಲಿರುವ ಸಂಭ್ರಮ ಸಡಗರದ ಬಗ್ಗೆ ರಸೆಲ್ ಹಿತವಾಗಿಯೂ ಬರೆಯುತ್ತಾರೆ. ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ನಿರಾಕರಿಸಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ಅಂತಹ 'ಸೆನ್ಸ್ ಆಫ್ ಡಿಫರೆನ್ಸಿಯೇಶನ್", 'ರ್‍ಯಾಶನಲ್ ಥಿಂಕಿಂಗ್"(Rational Thinking) ಅನ್ನು ಅವರಲ್ಲಿ ಕಾಣಬಹುದು.

ಅಷ್ಟೇಕೆ ನಮ್ಮವರೇ ಆದ ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್ ರಾಯ್ ಮುಂತಾದವರು ಹಿಂದೂ ಧರ್ಮದಲ್ಲಿರುವ ಮೌಢ್ಯಗಳ ಬಗ್ಗೆ ಕಟುವಾಗಿಯೇ ಮಾತನಾಡಿದರೂ ಅವರಲ್ಲಿ ವೈಚಾರಿಕತೆಯೂ ಇತ್ತು, ಅಧ್ಯಾತ್ಮಿಕತೆಯನ್ನೂ ಕಾಣಬಹುದಾಗಿತ್ತು. ಅದೇ ರೀತಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶೀನಾರಾಯಣ ಗುರುಗಳೂ ಹಿಂದೂ ಧರ್ಮದಲ್ಲಿದ್ದ ತಾರತಮ್ಯಗಳ ಬಗ್ಗೆ ಧ್ವನಿಯೆತ್ತಿದರು. ಟೀಕಾ ಪ್ರಹಾರ ಮಾಡಿದರು. ಹಾಗಂತ ಸಮಾಜವನ್ನು ಒಡೆಯಲು ಯತ್ನಿಸಲಿಲ್ಲ. ಬದಲಿಗೆ ದುರ್ಬಲ ವರ್ಗಗಳನ್ನು ಒಗ್ಗೂಡಿಸಿದರು, ಪರ್ಯಾಯ ಮಾರ್ಗ ತೋರಿದರು. ಅಂತಹ ಆಳವಾದ ಯೋಚನೆ, ದೂರದೃಷ್ಟಿ ಅವರಲ್ಲಿ ಇದ್ದಿದ್ದರಿಂದ ಅದು ಸಾಧ್ಯವಾಯಿತು. ಇತ್ತ “ಥಿಯರಿ ಆಫ್ ರಿಲೇಟಿವಿಟಿ" ಕೊಟ್ಟ ಐನ್‌ಸ್ಟೀನ್, “ಥಿಯರಿ ಆಫ್ ಅನ್‌ಸರ್ಟೈನಿಟಿ" ಕೊಟ್ಟ ಹೈಸೆನ್‌ಬರ್ಗ್ ಕೂಡ ಪ್ರಾರಂಭದಲ್ಲಿ “ಮಾಡರ್ನ್ ಸೈನ್ಸ್" ಅನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಬಿಡಿಸಿ ಹೇಳಿದಾಗ ಮೆತ್ತಗಾದರು, ಒಪ್ಪಿಕೊಂಡರು. ಅವರು ಜೀನಿಯಸ್ ಮಾತ್ರವಲ್ಲ, ತೆರೆದ ಮನಸ್ಥಿತಿ, humbleness ಕೂಡ ಅವರಲ್ಲಿತ್ತು.

ಹಾಗಾಗಿ ಅವರು explore ಕೂಡ ಮಾಡಿದರು, ಜತೆಗೆ ಬೇರೆಯವರು ಹೇಳಿದ್ದನ್ನು accept ಕೂಡ ಮಾಡಿದರು. ಆದರೆ ಆಳವಾದ ಚಿಂತನೆಗಳೇ ಇಲ್ಲದ, ಪರ್ಯಾಯಗಳೇ ಗೊತ್ತಿಲ್ಲದಿದ್ದ ವ್ಯಕ್ತಿಯೆಂದರೆ ಪೆರಿಯಾರ್. ಅವರು ಬೇರೆಯವರು ಹೇಳಿದ್ದನ್ನು ಒಪ್ಪಿಕೊಳ್ಳುತ್ತಲೂ ಇರಲಿಲ್ಲ, ಸ್ವತಃ ಶೋಧನೆಯನ್ನೂ ಮಾಡಲಿಲ್ಲ. ಹಾಗಾಗಿಯೇ ಸಾಮಾಜಿಕ ಕ್ರಾಂತಿಯ ಹೆಸರಿನಲ್ಲಿ 'ಭಂಡ"ವಾದ ಆರಂಭಿಸಿದರು. ಅಂತಹ ಭಂಡವಾದಕ್ಕೆ ವೈಚಾರಿಕತೆಯ ಹೆಸರು ಕೊಟ್ಟು ಅದನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿದರು.

ಅದರ ಫಲವೇ ಮೂರ್ತಿಭಂಜನೆ. ಇಡೀ ದೇಶಕ್ಕೇ ಸ್ವಾತಂತ್ರ್ಯದ ಜ್ವರ ಬಂದಿದ್ದ ಕಾಲದಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ಅಂತ ಸಮಾಜವನ್ನು ಒಡೆಯಲು ಯತ್ನಿಸಿದರು. ಬ್ರಾಹ್ಮಣರ ಮೇಲೆ ತಮಗಿದ್ದ ದ್ವೇಷವನ್ನು ತೀರಿಸಿಕೊಳ್ಳುವ ಸಲುವಾಗಿ ನಮ್ಮ ದೇವ-ದೇವತೆಗಳ ವಿಗ್ರಹಗಳಿಗೆ ಚಪ್ಪಲಿ ಹಾರ ಹಾಕಿ ತಮಿಳುನಾಡಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುತ್ತೇನೆ ಎಂದು ಹೊರಟ ಪೆರಿಯಾರ್ ಅನ್ಯಾಯದ ವಿರುದ್ಧ ಹೋರಾಡುವ ಬದಲು ದೇವರನ್ನೇ ದಾಳಿಯ ಕೇಂದ್ರವಾಗಿಸಿಕೊಂಡರು. ಮೂಢನಂಬಿಕೆ, ಡಾಂಭಿಕತೆಯನ್ನು ಹೋಗಲಾಡಿಸುವ ಬದಲು ದೇವರನ್ನೇ ನಿರ್ನಾಮ ಮಾಡಲು ಹೊರಟರು.

Tamilnadu Chief Minister M. Karunanidhiರಾಮ ಬೇಡ, ಬ್ರಹ್ಮ ಬೇಡ, ಕೃಷ್ಣ ಬೇಡ, ವಿಷ್ಣು ಬೇಡ ಅಂದರು! ಹಾಗಂತ ಬರೀ ದೇವರು, ದೇವಸ್ಥಾನಗಳನ್ನ ಕೆಡವುವುದನ್ನೇ ಹೇಳಿಕೊಟ್ಟರೆ ಆ ಜಾಗದಲ್ಲಿ ಇಡುವುದು ಏನನ್ನ? ಜನರಲ್ಲಿರುವ ನಂಬಿಕೆಗಳನ್ನೇ ಒಡೆದರೆ ಸಮಾಜವನ್ನು ಒಗ್ಗೂಡಿಸುವುದು ಹೇಗೆ? ಈ ಯಾವ ವಿಚಾರಗಳಿಗೂ ಪೆರಿಯಾರ್ ಬಳಿ ಪರ್ಯಾಯವೇ ಇರಲಿಲ್ಲ. ಅವರದ್ದೇನಿದ್ದರೂ ಬರೀ ಭಂಡವಾದ. ಇಂತಹ ಭಂಡವಾದದ ಶಿಶುವೇ ಕರುಣಾನಿಧಿ.

ರಾಮನೇ ಇರಲಿಲ್ಲ ಅನ್ನುತ್ತಾರೆ. ರಾಮ ಕುಡುಕ ಅಂತ ವಾಲ್ಮೀಕಿಯೇ ಬರೆದಿದ್ದ ಎಂದೂ ಹೇಳುತ್ತಾರೆ. ಅಷ್ಟಕ್ಕೂ, ರಾಮನೇ ಇರಲಿಲ್ಲ ಅನ್ನುವುದಾದರೆ ತಮಿಳರ ಆರಾಧ್ಯ ದೈವನಾದ “ಮುರುಗ" (ಸುಬ್ರಹ್ಮಣ್ಯ) ಎಲ್ಲಿಂದ ಬಂದ? ಸುಬ್ರಹ್ಮಣ್ಯ ಶಿವನ ಮಗ. ಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ತ್ರಿಮೂರ್ತಿಗಳಲ್ಲಿ ಮತ್ತೊಬ್ಬನಾದ ವಿಷ್ಣುವಿನ ಅವತಾರವೇ ರಾಮ. ಅಂತಹ ರಾಮನೇ ಇರಲಿಲ್ಲ ಎಂದಾದರೆ ತ್ರಿಮೂರ್ತಿಗಳೂ ಇರಲಿಲ್ಲ ಎಂದಾಯಿತು. ತ್ರಿಮೂರ್ತಿಗಳೇ ಇರಲಿಲ್ಲ ಎಂದರೆ ಸುಬ್ರಹ್ಮಣ್ಯ ಹೇಗೆ ಜನ್ಮ ತಳೆದ? ರಾಕ್ಷಸರನ್ನು ಮಟ್ಟ ಹಾಕಿದ ಸುಬ್ರಹ್ಮಣ್ಯ ಅಥವಾ ಮುರುಗನೇ ದೇವತೆಗಳ ಸೇನಾಧಿಪತಿ ಅಂತ ಆರಾಧಿಸುತ್ತೇವೆ. ದೇವರೇ ಇಲ್ಲ ಅನ್ನುವುದಾದರೆ ಸೇನಾಧಿಪತಿ ಎಲ್ಲಿಂದ ಬಂದ?

ಕರುಣಾನಿಧಿಗೆ ತಾಕತ್ತಿದ್ದರೆ ತಮಿಳರ ಭಕುತಿಗೆ ಭಾಜನನಾಗಿರುವ ಮುರುಗನೂ ಇರಲಿಲ್ಲ ಅಂತ ಹೇಳಿಕೆ ಕೊಡಲಿ ನೋಡೋಣ? ಯೇಸುಕ್ರಿಸ್ತ ನಿಜವಾಗಿಯೂ ನೀರಿನ ಮೇಲೆ ನಡೆದಿದ್ದನೆ? ತನ್ನ ಸ್ಪರ್ಶದಿಂದ ನೀರನ್ನು ವೈನ್ ಆಗಿ ಪರಿವರ್ತಿಸಿದ್ದನೆ? ಯಹೂದಿಗಳನ್ನು ಕರೆದೊಯ್ಯುತ್ತಿದ್ದ ಮೋಸೆಸ್, ದೇವರಿಗೆ ಮೊರೆಯಿಟ್ಟಾಗ ಕೆಂಪು ಸಮುದ್ರ ದಾರಿ ಬಿಟ್ಟಿತ್ತೇ? ಶ್ರೀನಗರದ 'ಹಝರತ್ ಬಾಲ್" ಮಸೀದಿಯಲ್ಲಿರುವುದು ಮೊಹಮದ್ ಪೈಗಂಬರ್ ಅವರ ಕೇಶವೇ? ಅಡಮ್ ಮತ್ತು ಈವ್ ಅವರಿಂದಲೇ ಮನುಕುಲ ಸೃಷ್ಟಿಯಾಯಿತು ಎಂಬುದಕ್ಕೆ ಐತಿಹಾಸಿಕ ದಾಖಲೆಯಿದೆಯೇ? ಈ ರೀತಿಯಾಗಿಯೂ ಪ್ರಶ್ನಿಸುವ ಧೈರ್ಯ ಕರುಣಾನಿಧಿಗೆ ಇದೆಯೇ?

ಅದಿರಲಿ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿರುವ ತಮ್ಮ ಪುತ್ರಿ ಸೆಲ್ವಿಯವರ ಮನೆಯ ಮೇಲೆ ಕಲ್ಲು ಎಸೆದಿರುವುದು ರಾಮಸೇವಕರ ಸಂಸ್ಕೃತಿ ಎಂಥದ್ದೆಂಬುದನ್ನು ತೋರಿಸುತ್ತದೆ ಎಂದಿರುವ ಈ ಕರುಣಾ ನಿಧಿಯವರ ಸಂಸ್ಕೃತಿ ನಮಗೆ ಗೊತ್ತಿಲ್ಲವೆ? ಹಿಂದೂ ವಿಗ್ರಹಗಳಿಗೆ ಚಪ್ಪಲಿ ಹಾರ ಹಾಕಿ ಬೀದಿಯಲ್ಲಿ ಕೊಂಡೊಯ್ದ ಪೆರಿಯಾರ್ ಅನುಯಾಯಿಗಳ ಸಂಸ್ಕೃತಿ ಯಾವುದು? ಈಗ್ಗೆ ಕೆಲವೇ ತಿಂಗಳುಗಳ ಹಿಂದಷ್ಟೆ ಸಮೀಕ್ಷೆಯೊಂದನ್ನು ಪ್ರಕಟಿಸಿದ 'ದಿನಕರನ್" ಎಂಬ ತಮಿಳು ದಿನಪತ್ರಿಕೆಯ ಕಚೇರಿ ಮೇಲೆ ದಾಳಿ ಮಾಡಿ ನಾಲ್ವರು ಉದ್ಯೋಗಿಗಳನ್ನು ಕೊಂದು ಹಾಕಿದ ಕರುಣಾನಿಧಿಯವರ ಹಿರಿಯ ಪುತ್ರನ ಬೆಂಬಲಿಗರು ಯಾವ ಸಂಸ್ಕೃತಿ ತೋರಿದ್ದರು?

ಸೂಕ್ಷ್ಮತೆಗಳನ್ನು ಕಳೆದುಕೊಂಡ ನಾಸ್ತಿಕತೆ ಅಥವಾ ಆಸ್ತಿಕತೆಯಿಂದ ಯಾವುದೇ ಲಾಭವಿಲ್ಲ. ಒಂದು ವೇಳೆ ಕರುಣಾನಿಧಿಯವರು ನಿರೀಶ್ವರವಾದಿಯೇ ಆಗಿದ್ದರೆ ಅದನ್ನು ಹಿಂದೂ ಧರ್ಮವನ್ನು ತೆಗಳುವ ಮೂಲಕ ಸಾಬೀತು ಪಡಿಸಬೇಕಾದ ಅಗತ್ಯವಿಲ್ಲ. ಅಷ್ಟಕ್ಕೂ, ಕರುಣಾನಿಧಿಯವರು ದೇವರನ್ನೇ ನಂಬುವುದಿಲ್ಲ ಅನ್ನುವುದಾದರೆ ಇತ್ತೀಚೆಗೆ ತಾನೆ ಹಜ್‌ಯಾತ್ರೆಗೆ ಹೊರಟ ಮೊದಲ ತಂಡಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಿ ಬೀಳ್ಕೊಟ್ಟು ಬಂದಿದ್ದೇಕೆ? ದೇವರೇ ಇಲ್ಲ ಅನ್ನುವುದಾದರೆ ಧರ್ಮದ ಆಧಾರದ ಮೇಲೆ ಮೀಸಲು ನೀಡಬೇಕೆಂದು ಪ್ರತಿಪಾದಿಸುವುದೇಕೆ?

ಅಷ್ಟೇಕೆ, ತಮ್ಮ ಅಳಿಯ ಮುರಸೋಳಿ ಮಾರನ್ ತೀರಿಕೊಂಡಾಗ ಹಿಂದೂ ಧರ್ಮದ ವಿಧಿ-ವಿಧಾನಕ್ಕನುಗುಣವಾಗಿ ಅಂತ್ಯಕ್ರಿಯೆ ಮಾಡಿದಾಗ ಎಲ್ಲಿಗೆ ಹೋಗಿತ್ತು ಇವರ ನಿರೀಶ್ವರವಾದ? ಬೆಂಗಳೂರಿನಲ್ಲಿರುವ ಸೆಲ್ವಿಯವರ ಮನೆಯ ಮುಂದೆ ಕಾಣುವ ರಂಗೋಲಿ ಹಿಂದೂ ಸಂಸ್ಕಾರದ ಪ್ರತಿರೂಪವೇ ಅಲ್ಲವೆ? ಅರುವತ್ತು, ಎಪ್ಪತ್ತರ ದಶಕದಲ್ಲಿದ್ದ ಒಣ ವಿಚಾರವಾದವನ್ನೇ ಇಂದಿಗೂ ಕೆದಕುತ್ತಿದ್ದಾರೆಂದರೆ ಕರುಣಾನಿಧಿಯವರ ಬುದ್ಧಿಮಟ್ಟ ಎಷ್ಟಿರಬಹುದು? ದೇವರನ್ನ ಅಥವಾ ಪ್ರಸಿದ್ಧ ವ್ಯಕ್ತಿಗಳನ್ನು ಬೈದು 'ಸೆಂಟರ್ ಸ್ಟೇಜ್"ಗೆ ಬರಲು ಯತ್ನಿಸುವ ಚಾಳಿಯನ್ನು ಬಿಡುವುದು ಯಾವಾಗ?

ಹಿಂದೂಗಳೂ ಶಾಂತಿಪ್ರಿಯರು. ಹಾಗಂತ ಆಗಾಗ್ಗೆ ಹೇಳುವ ಮೂಲಕ ಹಿಂದೂಗಳನ್ನು ಕೈಕಟ್ಟಿ ಕೂರಿಸುವ ಯತ್ನವೂ ನಡೆಯುತ್ತಲೇ ಬರುತ್ತಿದೆ. ಆದರೆ ಧರ್ಮದ ಮೇಲೆ ಪದೇ ಪದೆ ಏಟು ಬೀಳುತ್ತಲೇ ಇದ್ದರೆ ಪ್ರತಿರೋಧವೂ ಕಂಡು ಬಂದೇ ಬರುತ್ತದೆ. 1992ರ ಕೋಮು ಹಿಂಸಾಚಾರ, ಗೋಧ್ರಾ ತರುವಾಯ ನಡೆದ ಘಟನೆಗಳು ಇಂತಹ ರಿಯಾಕ್ಷನ್ಗಳೇ. ಅಷ್ಟಕ್ಕೂ ಹಿಂದೂಗಳು ಶಾಂತಿ ಕಾಲದಲ್ಲಷ್ಟೇ ಶಾಂತಿಪ್ರಿಯರು. ಶಾಂತಿ ಕದಡಿದರೆ ಒಂದು ದೇಶವನ್ನೇ ಒಡೆದು ಬಾಂಗ್ಲಾದೇಶವನ್ನೂ ಸೃಷ್ಟಿಸಬಲ್ಲರು.

ಅಷ್ಟಕ್ಕೂ ರಾಮ ಅಂದರೆ ಯಾರು?

ರಾಮ ಅನ್ನೋ ವ್ಯಕ್ತಿ ಇದ್ದನೋ, ಇರಲಿಲ್ಲವೋ ಅಥವಾ ಈಗಲೂ ಇದ್ದಾನೋ, ಇಲ್ಲವೋ ಅನ್ನುವುದು ನಮಗೆ ಮುಖ್ಯವಲ್ಲ. ಅವನನ್ನು ದೇವರು ಅಂತ ಕಾಣುವುದಕ್ಕಿಂತ ಹೆಚ್ಚಾಗಿ ಒಬ್ಬ ಆದರ್ಶ ವ್ಯಕ್ತಿಯಾಗಿ ನಾವು ನೋಡುತ್ತೇವೆ. ಮರ್ಯಾದಾ ಪುರುಷೋತ್ತಮ ಅನ್ನುವುದು ಅದಕ್ಕೇ. ಅವನು ನಮ್ಮ ಆದರ್ಶ. ನಮ್ಮ ಮೌಲ್ಯವನ್ನು ಪ್ರತಿಪಾದಿಸುತ್ತಾನೆ. ಅವನೇ ಒಂದು ಮಾದರಿ. ಅದಕ್ಕೇ ಗಾಂಧೀಜಿಯವರು “ರಾಮ ರಾಜ್ಯ" ನಿರ್ಮಾಣ ಮಾಡಬೇಕು ಅಂತ ಕನವರಿಸುತ್ತಿದ್ದರು. ಅಂತಹ ರಾಮನ ಬಗ್ಗೆ ಕರುಣಾನಿಧಿಯವರು ಆಡಿರುವ ಮಾತುಗಳು ನಮ್ಮ ನಂಬಿಕೆಗೇ ಕುಟಾರಘಾತ. ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಸತ್ಯ ಕರುಣಾನಿಧಿಯವರಿಗೆ ಆದಷ್ಟು ಬೇಗ ಅರ್ಥವಾದರೆ ಒಳಿತು.

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X