ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಗಳು ಅಲ್ಲದ ‘ತಿಂಗಳು’

By * ಮಾವೆಂಸ ಪ್ರಸಾದ್
|
Google Oneindia Kannada News

Kannada monthly Tingalu from Mysuru
ಮೂರು ತಿಂಗಳ ಹಿಂದಿನ ಮಾತು. ಬಹುಷಃ ಹೊನ್ನಾವರದಿಂದ ಪ್ರಕಟಗೊಳ್ಳುವ 'ನಾಗರಿಕ" ವಾರಪತ್ರಿಕೆಯಲ್ಲಿ ಓದಿದ ನೆನಪು ಎಂದು ಕಾಣುತ್ತದೆ. ಅದರಲ್ಲಿ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರರು ಮೈಸೂರಿನಿಂದ ಪ್ರಕಟಗೊಳ್ಳುವ ಪತ್ರಿಕೆಯೊಂದರ ಬಗ್ಗೆ ಸ್ತುತಿಸಿ ಬರೆದಿದ್ದರು. ಹೆಬ್ಬಾರರು ಮೆಚ್ಚಿರುವರೆಂದರೆ ಅದರಲ್ಲಿ ತಥ್ಯವಿರಲೇಬೇಕು ಎನಿಸಿತು. ಸುದ್ದಿಯ ಜೊತೆಗಿದ್ದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದೆ. ವಾರವೊಪ್ಪತ್ತಿನಲ್ಲಿ ನನ್ನ ಕೈ ಸೇರಿತ್ತು 'ತಿಂಗಳು". ನಿಜ, ಪತ್ರಿಕೆಯ ಹೆಸರು ಶಾನೆ ವಿಚಿತ್ರ.

ಮಾಸಪತ್ರಿಕೆಯ ಅನ್ವರ್ಥನಾಮವೇ ಅದರ ಹೆಸರೂ ಕೂಡ ಆಗಿದೆ ಇಲ್ಲಿ. ಪತ್ರಿಕೋದ್ಯಮದಲ್ಲಿ, ಪ್ರಮುಖವಾಗಿ ಪ್ರಜಾವಾಣಿಯಲ್ಲಿ ದುಡಿದ ಜಿ.ಪಿ.ಬಸವರಾಜು 'ತಿಂಗಳು" ಸಂಪಾದಕರು. ಅವರ ಸಂಪರ್ಕ ಅಗಾಧವಾಗಿದೆ ಎಂಬುದಕ್ಕೆ ಬರೀ ನಾಲ್ಕು ಸಂಚಿಕೆಗಳನ್ನಷ್ಟೇ ಕಂಡರೂ ಖ್ಯಾತ ಬರಹಗಾರರ ಬಳಗವೇ ಬರೆಯುತ್ತಿರುವುದನ್ನು ಸಾಕ್ಷಿಯಾಗಿ ಹೇಳಬಹುದು. 'ಮಲ್ಲಿಗೆ" ಮಾಸಪತ್ರಿಕೆಯ ಆಕಾರ, ವಿನ್ಯಾಸವನ್ನು ಇದು ತುಸು ಹೋಲುತ್ತದೆ. ತಿಂಗಳ ಹೂರಣ ಮಾತ್ರ ಅದಕ್ಕಿಂತ ಹೆಚ್ಚು ಗಟ್ಟಿ. ಅದರಲ್ಲಿ ಬರೆದಿರುವ ಕೆಲವು ಲೇಖಕರ ಹೆಸರನ್ನು ಮಾತ್ರ ಬರೆದು ಇತರರಿಗೆ ಅಗೌರವ ಮಾಡುವುದು ಬೇಡ. ಗಂಭೀರ ಸಾಹಿತ್ಯ ಓದುವ ಕನಸು ಕಾಣುವವರು 164 ಪುಟಗಳ ಈ ಮಾಸಿಕವನ್ನು ಓದಲೇಬೇಕು. ಅಷ್ಟಕ್ಕೂ ಬಿಡಿ ಪ್ರತಿ ಬೆಲೆ ಕೇವಲ12 ರೂ.

ಈ ತರಹದ ಪತ್ರಿಕೆಗಳಲ್ಲಿ 'ತುಷಾರ"ವನ್ನು ಹೊರತುಪಡಿಸಿ 'ಮಯೂರ" ಹೊಸ ಉತ್ಸಾಹದಿಂದ ಪ್ರಕಟಗೊಳ್ಳುತ್ತಿದೆ. ಅದರ ಪುಟ ವಿನ್ಯಾಸವಂತೂ ಭವ್ಯವಾಗಿದೆ. ಆ ಮಟ್ಟಿಗೆ 'ತಿಂಗಳು" ಪ್ರಯತ್ನವೂ ಸಣ್ಣದಲ್ಲ. ಆರಂಭವಾಗಿ ಅರ್ಧ ವರ್ಷವೂ ಕಳೆಯದಿರುವ ಕ್ಲುಪ್ತ ಅವಧಿಯಲ್ಲಿ ಅದರದು ಗಮನ ಸೆಳೆಯುವ ಪ್ರಯತ್ನ. ಎರಡೂವರೆ ಸಹಸ್ರ ಪ್ರಥಮ ಬಹುಮಾನದ ಕಥಾ ಸ್ಪರ್ಧೆಯನ್ನು ಪ್ರತಿ ತಿಂಗಳೂ ನಡೆಸುವಂತ ಸಾಹಸಕ್ಕೂ ತಿಂಗಳು ಅಡಿಯಿಟ್ಟಿದೆ.

ತಿಂಗಳು ಬೇಕೆನ್ನುವವರು ಮೊಬೈಲ್ ಸಂಖ್ಯೆ 99805 60013ಕ್ಕೆ ಕರೆ ಮಾಡಿ. ವಾರ್ಷಿಕ ಚಂದಾ 150 ರೂಪಾಯಿಯನ್ನು : ಸಂಪಾದಕರು, ತಿಂಗಳು, ಅಭಿರುಚಿ ಪ್ರಕಾಶನ, 386, 14ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಸರಸ್ವತೀ ಪುರಂ, ಮೈಸೂರು-570009ಕ್ಕೆ ತಲುಪಿಸಬಹುದು.

ಕೊನೆಮಾತು : ಈ ವ್ಯಾವಹಾರಿಕ ದಿನಗಳಲ್ಲಿ 'ತಿಂಗಳು"ವಿನ ಇನ್ನೊಂದು ಒಳ್ಳೆಯತನವನ್ನು ನೆನೆಯಲೇಬೇಕು. ಈ ಪತ್ರಿಕೆ ನಮ್ಮಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ. ಇದನ್ನು ತಿಳಿಸಿದ ತಕ್ಷಣ ನನಗೆ ಅಂಚೆಯಲ್ಲಿ ಪತ್ರಿಕೆ ಬರಲಾರಂಭಿಸಿದೆ. ಅನಿವಾರ್ಯ ಕಾರಣಗಳಿಂದಾಗಿ ಇಂದಿಗೂ ಚಂದಾ ತಲುಪಿಸಲಾಗಿಲ್ಲ. ಊಹ್ಞೂ, ಪತ್ರಿಕೆ ಬರುವುದು ಮಾತ್ರ ನಿಂತಿಲ್ಲ. ಈ ವಿಶ್ವಾಸ ದೊಡ್ಡದು. ತಡವಾಗಿಯಾದರೂ ಚಂದಾ ಕಳುಹಿಸುವೆ. ಆದರೆ ನೀವು ಮಾತ್ರ ನನ್ನಂತೆ ಮಾಡದಿರಿ. ಚಂದಾವನ್ನು ಕಳಿಸಿ ಒಂದು ಒಳ್ಳೆಯ ಪತ್ರಿಕೆಯನ್ನು ಬೆಂಬಲಿಸಿ.

* ಅಂಕಣಕಾರರ ವಿಳಾಸ : ಮಾ.ವೆಂ.ಸ. ಪ್ರಸಾದ್, ಮಾವಿನಸರ, ಪೋಸ್ಟ್-ಎಡಜಿಗಳೇಮನೆ, ಸಾಗರ ತಾ. ಶಿವಮೊಗ್ಗ ಜಿಲ್ಲೆ. 577401. ಫೋನ್ 08183 236068, 296543, ಸೆಲ್ 98864 07592
ಇ ಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X