ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ : ಹಳ್ಳಿ ಹುಡುಗನ ಮುಗ್ಧತೆಗೆ ಛಳ್ಳೆಂದು ಜಿನುಗುವ ನೀರು!

By Prasad
|
Google Oneindia Kannada News

ಬಿಳಿ ಅಂಗಿ ಚಣ್ಣ, ಸೊಂಟಕ್ಕೊಂದು ಬೆಲ್ಟು, ಕೊರಳಿಗೆ ಟೈ ಇಲ್ಲದ ಆ ಪುಟ್ಟ ಹುಡುಗ ದೈನ್ಯತೆಯಿಂದ ಮಾಸ್ತರ್ ಎದುರಲ್ಲಿ ಕೈಜೋಡಿಸಿ 'ಬ್ಯಾಡಾರಿ ಬ್ಯಾಡಾರಿ' ಅಂತ ಗೋಗರೆಯುವುದನ್ನು ನೋಡುತ್ತಿದ್ದರೆ ಒಂದೆಡೆ ನಗು ಉಕ್ಕುತ್ತದೆ, ಮತ್ತೊಂದೆಡೆ ಹುಡುಗನ ಮುಗ್ಧತೆ ನೋಡಿ ಛಳ್ಳನೆ ಕಣ್ಣಿಂದ ನೀರು ಜಿನುಗುತ್ತದೆ.

ಇದು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲೂ ಕನ್ನಡ ಶಾಲೆಗಳಲ್ಲಿ ಕಂಡುಬರುವ ದಿನನಿತ್ಯದ ದೃಶ್ಯ. ರೈತರ ಮಕ್ಕಳು ಹತ್ತಿರದ ಹಳ್ಳಿಗಳಿಂದ ಶಾಲೆಗೆ ಬರುವುದು, ಹೇಳಿದ ಮನೆಪಾಠ ಮಾಡದಿರುವುದು, ನೀಟಾಗಿ ಕಾಪಿ ಬರೆಯದಿರುವುದು, ಮಾಸ್ತರುಗಳಿಂದ ಬೈಸಿಕೊಳ್ಳುವುದು, ಹುಡುಗ ಒರಟನಾಗಿದ್ದರೆ ಮಾಸ್ತರಿಂದ ಬಡಿಸಿಕೊಳ್ಳುವುದು.

ವೈರಲ್ ವಿಡಿಯೋ: ಈ ಮಗುವಿನ ಕಣ್ಣೀರು ಶಿಕ್ಷಣ ವ್ಯವಸ್ಥೆಗೆ ಛಾಟಿಯೇಟು!ವೈರಲ್ ವಿಡಿಯೋ: ಈ ಮಗುವಿನ ಕಣ್ಣೀರು ಶಿಕ್ಷಣ ವ್ಯವಸ್ಥೆಗೆ ಛಾಟಿಯೇಟು!

ಇಲ್ಲಿ ಯಾವ ಪೋಷಕರೂ ಬಂದು ಹೀಗೇಕೆ ದಂಡಿಸುತ್ತೀರಿ ಎಂದು ಮೇಷ್ಟ್ರ ವಿರುದ್ಧ ಪ್ರತಿಭಟನೆ ನಡೆಸುವುದಿಲ್ಲ. ಮೇಷ್ಟ್ರುಗಳು ಕೂಡ ಅಷ್ಟೇ, ಓದುವುದಕ್ಕಿಂತ ದನ ಕಾಯುವುದನ್ನೇ ಹೆಚ್ಚು ಇಷ್ಟಪಡುವ ಮಕ್ಕಳನ್ನು ದಾರಿಗೆ ತರಲು, ಅವರ ತಲೆಗೆ ಒಂದಿಷ್ಟು ಪಾಠ ಹಾಕಲು ನಾನಾ ವಿಧಾನಗಳನ್ನು ಬಳಸುತ್ತಿರುತ್ತಾರೆ.

The innocence, purity and knowledge of a village child

ಈ ವಿಡಿಯೋ ನೋಡಿ, ಬಾಗಲಕೋಟೆ ಜಿಲ್ಲೆಯ ಹಳ್ಳಿಯೊಂದರ ಶಾಲೆಯ ಮೇಷ್ಟ್ರು ಪುಟಾಣಿ ಹುಡುಗ ನೀಟಾಗಿ ಬರೆದಿಲ್ಲವೆಂದು ಕೈಯಲ್ಲಿ ದೊಡ್ಡದಾದ ಸ್ಟೇಪ್ಲರ್ ಹಿಡಿದುಕೊಂಡು ಹೆದರಿಸುತ್ತಿದ್ದಾರೆ. ಹುಡುಗ ಕಣ್ಣಲ್ಲಿ ನೀರು ತುಂಬಿಕೊಂಡು, "ಬ್ಯಾಡಾರಿ ಬ್ಯಾಡರಿ, ಹೋಂವರ್ಕ್ ಮಾಡ್ತೇನ್ರಿ, ಚಂದಾಗಿ ಬರೀತೇನ್ರಿ..." ಅಂತ ಗೋಗರೆಯುತ್ತಿದ್ದಾನೆ.

ತಂಟೆ ಮಾಡುವ ಹುಡುಗರಿಗೆ ಅಪ್ಪನನ್ನು ಶಾಲೆಗೆ ಕರೆದುಕೊಂಡು ಬಾ ಅಂತ ಹೆದರಿಸುವುದು ಇಲ್ಲಿ ಸಾಮಾನ್ಯ. ಆ ಹುಡುಗ ಅಷ್ಟೇ ವಿಧೇಯತೆಯಿಂದ ಕರಕೊಂಡು ಬರ್ತೇನ್ರಿ ಅಂತ ಹೇಳುತ್ತ, ಮೇಷ್ಟ್ರು ಕೇಳಿದ ಪ್ರಶ್ನೆಗಳಿಗೆಲ್ಲ, ಹಳ್ಳಿ ಬನಹಟ್ಟಿ ರಿ, ತಾಲೂಕು ಜಮಖಂಡಿ ರಿ, ಜಿಲ್ಲಾ ಬಾಗಲಕೋಟೆ ರಿ, ರಾಜ್ಯ ಕರ್ನಾಟಕ ರಿ... ಅನ್ನುತ್ತಲೇ ಕರ್ನಾಟಕದ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ 'ಮನೆಗೆ ಹ್ವಾದ' ಸಿದ್ದರಾಮಯ್ಯನ ಹೆಸರು ತೆಗೆದುಕೊಳ್ಳುತ್ತಾನೆ.

ನಾವು ಈ ಹುಡುಗನಷ್ಟು ಚಿಕ್ಕವರಾಗಿದ್ದಾಗ, ನಾವು ನಮ್ಮೂರು ಜಿಲ್ಲೆ ಇತ್ಯಾದಿ ಮಾಹಿತಿಯ ಜೊತೆ ಕರ್ನಾಟಕದ ಮುಖ್ಯಮಂತ್ರಿಯ ಹೆಸರಾದರೂ ಗೊತ್ತಿತ್ತೋ ಇಲ್ವೋ, ರೈತ ಉಮೇಶ್ ಎನ್ನುವವರ ಮಗನಾದ ಈ ಹುಡುಗ ಮಾತ್ರ ಸಿದ್ದರಾಮಯ್ಯನವರ ಹೆಸರೊಂದನ್ನು ಬಿಟ್ಟು, ಎಲ್ಲ ಪ್ರಶ್ನೆಗಳಿಗೂ ನಿಖರವಾದ ಉತ್ತರ ಕೊಟ್ಟಿದ್ದಾನೆ. ಇದ್ದಕ್ಕಿದ್ದಂತೆ ಆತನಿಗೆ ನರೇಂದ್ರ ಮೋದಿ ಹೆಸರು ನೆನಪಿಗೆ ಬರುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಮೋದಿರಿ ಅಂತ ಮುಗ್ಧವಾಗಿ ಹೇಳುತ್ತಾನೆ. ಮುಂದಿನ ನಡೆಯುವ ಸಂಭಾಷಣೆಯೇ ಮಜವಾಗಿದೆ.

ಮೋದಿ ದೇಶದ ಪ್ರಧಾನ ಮಂತ್ರಿ. ಕರ್ನಾಟಕದ ಮುಖ್ಯಮಂತ್ರಿ ಗೊತ್ತೈತಿಲ್ಲ?

ಮುಖ್ಯಮಂತ್ರಿ ಸಿದ್ದರಾಮಯ್ಯರಿ.

ಸಿದ್ದರಾಮಯ್ಯ ಮನಿಗೆ ಹ್ವಾದ. ಈಗಿನ ಮುಖ್ಯಮಂತ್ರಿ ಯಾರು?

ಗೊತ್ತಿಲ್ರಿ, ಸಿದ್ದರಾಮಯ್ಯ ಯಾರಂತ ಗೊತ್ತಿಲ್ರಿ.

ಸಿದ್ದರಾಮಯ್ಯ ಯಾರಂತ ಗೊತ್ತಿಲ್ಲ? ಮನಿಗೆ ಬಂದಿದ್ದನಿಲ್ಲ?

ಬಂದಿದ್ದರಿ.

ಬಂದ ಏನ ಮಾಡಿದ?

ಊಟ ಮಾಡಿದರಿ. ಊಟ ಮಾಡಿ ಹ್ವಾದರಿ.

ನರೇಂದ್ರ ಮೋದಿ ಬಂದಿದ್ದನಿಲ್ಲ?

ಬಂದಿದ್ದರಿ. ಮನ್ನಿ ಜಾತ್ರಿ ಇತ್ತಲ್ರಿ, ಆವಾಗ ಬಂದಿದ್ದರಿ.

ನೀ ಮೋದಿ ಮನಿಗೆ ಹೋಗಿದ್ದೇನ?

ಹೋಗಿದ್ದೆರಿ.

ಹೋದಾಗ ಮೋದಿ ಏನ ಕೊಟ್ರ?

ಎಲ್ಲಾ ಕೊಟ್ರರಿ. ಕೇಕ, ಮಮ್ಮ, ಸಾರಾ, ಬಟ್ಟಿ ಎಲ್ಲಾ ಕೊಟ್ರರಿ...

ಹಳ್ಳಿ ಜೀವನ, ಶಾಲೆ, ಪರಿಸರ, ಮಕ್ಕಳ ಬುದ್ಧಿವಂತಿಕೆ, ಅವರ ನೇರವಂತಿಕೆ, ಮೇಷ್ಟ್ರುಗಳು ಪಾಠ ಮಾಡುವ ರೀತಿ, ಮಕ್ಕಳೊಂದಿಗೆ ವ್ಯವಹರಿಸುವ ರೀತಿ, ಪ್ರತಿಯಾಗಿ ಮಕ್ಕಳು ಕೂಡ ಶಿಕ್ಷಕರೊಂದಿಗೆ ತುಸು ಹೆದರಿಕೆ, ತುಸು ಗೌರವ, ಒಂದು ಹಿಡಿಯಷ್ಟು ಮುಗ್ಧತೆಯಿಂದ ನಡೆದುಕೊಳ್ಳುವ ರೀತಿಗೆ ಇದೊಂದು ಉದಾಹರಣೆಯಷ್ಟೆ. ನಮ್ಮ ನಗರದ ಮಕ್ಕಳು ಕೂಡ ಹಳ್ಳಿ ಮಕ್ಕಳಂತಾಗುವುದು, ಅವರಿಗೆ ಅಂತಹ ವಾತಾವರಣ ಸಿಗುವುದು ಕನಸಿನ ಮಾತು.

English summary
The innocence, purity and knowledge of a village child is unmatchable. This video going viral on social media showcases the purest form of innocence. Do you know who is the chief minister of Karnataka? Don't know? Ask this kid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X