ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಐತಾಳರ ಎರಡು ಪುಸ್ತಕ-ಮಿಮರ್ಶೆ

By Staff
|
Google Oneindia Kannada News

Naga Aithals works, book review by MSN
ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ' ಮತ್ತು ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ.

* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್

ಶಿವರಾಮ ಕಾರಂತರ ಊರಿನವರಾದ ನಾಗ ಐತಾಳರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಹಿರಿಯರು. ಜೀವರಸಾಯನಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿ ಸಾರ್ಥಕ ವೃತ್ತಿಜೀವನ ಮುಗಿಸಿ ಈಗ ವಿಶ್ರಾಂತರಾಗಿದ್ದಾರೆ. ಅಮೇರಿಕಾ ಮತ್ತು ಭಾರತಗಳ ನಡುವೆ ಓಡಾಡುತ್ತ, ಇಲ್ಲಿ ತಮ್ಮ ಮಕ್ಕಳು ಮೊಮ್ಮೊಕ್ಕಳೊಂದಿಗೆ ಒಂದಿಷ್ಟು ದಿನ ಕಳೆದರೆ, ಅಲ್ಲಿ ಕನ್ನಡನಾಡಿನಲ್ಲಿ ತಮ್ಮ ನೆಂಟರಿಷ್ಟರ ನಡುವೆ ಒಂದಿಷ್ಟು ದಿನಗಳೆಯುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಮೊದಲಿನಿಂದಲೂ ಕನ್ನಡದಲ್ಲಿ ಬರೆಯುವ ಹವ್ಯಾಸ ಇವರಿಗೆ ಇದ್ದೇ ಇತ್ತು. ಈಗ ವೃತ್ತಿಜೀವನದಿಂದ ಬಿಡುವು ಪಡೆದಮೇಲೆ ಬರವಣಿಗೆ ಹೆಚ್ಚು ಹೆಚ್ಚು ತೀವ್ರಗೊಳ್ಳುತ್ತಾ ಬಂದಿದೆ. 2002ರಲ್ಲಿ ಅವರು ಪ್ರಕಟಿಸಿದ "ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ" (ವಸಂತ ಪ್ರಕಾಶನ, ಬೆಂಗಳೂರು) ಅವರ ಆತ್ಮಕಥೆ. ಅದಕ್ಕೂ ಮುನ್ನ 2000ದಲ್ಲಿ "ಕಾರಂತ ಚಿಂತನ" (ಅಕ್ಷರ ಪ್ರಕಾಶನ, ಹೆಗ್ಗೋಡು) ಎಂಬ ಗ್ರಂಥದ ಸಂಪಾದಕರಾಗಿ ಅಮೆರಿಕನ್ನಡಿಗ ಲೇಖಕರ ಬರಹಗಳನ್ನು ಬೆಳಕಿಗೆ ತಂದವರಿವರು. ಅದೇ ರೀತಿ ವರಕವಿ ಪುತಿನ ಬಗ್ಗೆ "ಯದುಗಿರಿಯ ಬೆಳಕು" ('ಸಾಹಿತ್ಯಾಂಜಲಿ"-ಕ್ಯಾಲಿಫೋರ್ನಿಯ ಮತ್ತು 'ಅಭಿನವ" ಬೆಂಗಳೂರು ಜಂಟಿ ಪ್ರಕಟಣೆ, 2004), ಜ್ಞಾನಪೀಠ ಪುರಸ್ಕೃತ ಮಾಸ್ತಿಯವರ ಬಗ್ಗೆ "ಕನ್ನಡದಮರಚೇತನ" (ಸಾಹಿತ್ಯಾಂಜಲಿ, ಅಭಿನವ, 2006) ಗ್ರಂಥಗಳ ಸಂಪಾದನೆ ಇವರ ಹೆಗ್ಗಳಿಕೆ.

ಉತ್ತರ ಅಮೆರಿಕೆಯ ಕನ್ನಡ ಸಾಹಿತ್ಯ ರಂಗದ ಎಲ್ಲಾ ಪ್ರಕಟಣೆಗಳಿಗೂ ಇವರ ಸಹಕಾರ, ಸಹಯೋಗ ಮತ್ತು ಸಹಸಂಪಾದಕತ್ವ. ಇವೇ ಅಲ್ಲದೇ ಇನ್ನೂ ಹಲವು ಯೋಜನೆಗಳು ಇವರ ರಚನಾತ್ಮಕ ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಇವೆ. ಇವುಗಳ ನಡುವೆ, 2007ರಲ್ಲಿ ಸಾಹಿತ್ಯಾಂಜಲಿ ಮತ್ತು ಬೆಂಗಳೂರಿನ ಅಭಿನವ ಜೊತೆಗೂಡಿ ಪ್ರಕಟಿಸಿರುವ ಇವರ ಎರಡು ಪುಸ್ತಗಳು ಲೋಕಾರ್ಪಣೆಗೊಂಡಿವೆ. ನಿವೃತ್ತಿಯ ನಂತರ ಪೂರ್ವತೀರದಿಂದ ಪಶ್ಚಿಮತೀರಕ್ಕೆ ಓಡಾಡುತ್ತಿರುವ ಐತಾಳರ ಜೀವನದ ಪ್ರಧಾನ ರಂಗಸ್ಥಳ ಶಿಕಾಗೋ ನಗರ ಪ್ರದೇಶವಾಗಿತ್ತು. ಅಲ್ಲಿದ್ದಾಗ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಚನಾತ್ಮಕ ಬರವಣಿಗೆಯಲ್ಲಿ ತೊಡಗಿ, 'ಆಹಿತಾನಲ" ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವರು. ಇವರ ಇತ್ತೀಚಿನ ಕಟ್ಟುಕಥೆಗಳ ಸಂಗ್ರಹ (ಒಂದಾನೊಂದು ಕಾಲದಲ್ಲಿ) ಮತ್ತು ಕಿರುಗಾದಂಬರಿ (ಕಾದೇ ಇರುವಳು ರಾಧೆ) ಸಾಹಿತ್ಯಾಂಜಲಿ ಮತ್ತು ಅಭಿನವ ಸಂಸ್ಥೆಗಳ ಜಂಟಿ ಪ್ರಕಟಣೆ 2007 ರಲ್ಲಿ ಲೋಕಾರ್ಪಣೆಗೊಂಡಿವೆ.

ಒಂದಾನೊಂದು ಕಾಲದಲ್ಲಿ:

ಇದೊಂದು ಕಟ್ಟು ಕಥೆಗಳ ಸಂಕಲನ. ಈ ಪುಸ್ತಕದ ಮುಖ್ಯ ಆಕರ್ಷಣೆ ಎಂದರೆ ಇದು ಸುಲಭವಾಗಿ ಓದಿಸಿಕೊಳ್ಳುವ ಪುಸ್ತಕ. ಒಂದೇ ಸಲಕ್ಕೆ ಓದಬೇಕಾಗಿಲ್ಲ, ಅದೊಂದು ಅನುಕೂಲ. ಈ ಸಂಗ್ರಹದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಥೆಗಳಿವೆ. "ಇವು ನನ್ನ ಸ್ವಂತ ಕಥೆಗಳಲ್ಲ" ಎಂದು ಮೊದಲೇ ತಿಳಿಸಿ ತಾವು ಕೇಳಿದ, ಓದಿದ ಕಥೆಗಳನ್ನು ತಮ್ಮದೇ ಆದ ಭಾಷೆಯಲ್ಲಿ ಸ್ವಾರಸ್ಯಕರವಾಗಿ ಮತ್ತೆ ಹೇಳಿದ್ದಾರೆ. ಈ ಕಥೆಗಳೆಲ್ಲವೂ ನಾವೂ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಥವಾ ಶಾಲಾ ಉಪಾಧ್ಯಾಯರಿಂದ ಕೇಳಿರಬಹುದಾದ ಕಥೆಗಳೇ. ಆದರೂ ಪ್ರತಿಯೊಬ್ಬರಿಗೂ ಹಲವಾದರೂ ಹೊಸ ಕಥೆಗಳು ಇಲ್ಲಿವೆ. ಕಾಗೆ ಗುಬ್ಬಿ, ಕಾಗೆ ನರಿ, ಕಾಗೆಸರ್ಪ, ಭೂತ ಬೇತಾಳ, ದೆವ್ವ ಪಿಶಾಚಿ, ರಾಜಕುಮಾರ ರಾಜಕುಮಾರಿ, ಮುದುಕ ಮುದುಕಿ, ರಾಜ ಮಂತ್ರಿ, ಹೀಗೇ ಒಂದೇ ಎರಡೇ ಇಲ್ಲಿರುವ ಪಾತ್ರಗಳು? ಪಂಚತಂತ್ರದ ಕಥೆಗಳು ಇಲ್ಲಿ ಸುಳಿದಾಡುತ್ತವೆ. ಚಂದಮಾಮಾದ ಕಥೆಗಳು ಹೊಳೆಯುತ್ತವೆ. ಅಡಗೂಲಜ್ಜಿಯ ಕಥೆಗಳು ತಮ್ಮದೇ ಆದ ಸೌಂದರ್ಯವನ್ನು ಪಡೆದು ಇಲ್ಲಿ ಪುನರ್ಜನ್ಮ ಪಡೆಯುತ್ತವೆ.

ಇವುಗಳನ್ನು ಓದುವಾಗ, ನಾವು ಮಕ್ಕಳ ಹಾಗೆ ಹಸುಳೆಯ ಮನಸ್ಸಿನಿಂದ ಓದಬೇಕು. ಇಲ್ಲದಿದ್ದರೆ, ಕಥೆ ರುಚಿಸುವುದಿಲ್ಲ. ನಮಗೆ ಗೊತ್ತಿರುವ ಕಥೆಯೇ ಆದರೂ ಅಂತ್ಯ ಗೊತ್ತಿಲ್ಲ ಎನ್ನುವಂತೆ ನಟಿಸುತ್ತಾ ಸಾಗಬೇಕು. ಅಜ್ಜ ಅಜ್ಜಿ ಅಥವಾ ಅಪ್ಪ ಅಮ್ಮ ಹೇಳಿದ ಕಥೆಗಳನ್ನೇ ಎಷ್ಟೊಂದು ಸಾರಿ ಹೇಳುತ್ತಿದ್ದರು, ನಾವು ಬೇಸರವಿಲ್ಲದೇ ತದೇಕಚಿತ್ತರಾಗಿ ಕೇಳುತ್ತಿರಲಿಲ್ಲವೇ? ಈಗಲೂ ಅಂಥಾ ಕಥೆಗಳನ್ನು ಬರೆಯಲು ಮತ್ತು ಓದಲು ಸ್ವಾರಸ್ಯ ಇರುವುದನ್ನು ನೋಡಿದರೆ, ಮನುಷ್ಯನಿಗೆ ಕಥೆಯನ್ನು ಹೇಳುವ ಮತ್ತು ಕೇಳುವ ಚಟ ವಯಸ್ಸಾದಂತೆ ಹೆಚ್ಚಾಗುತ್ತದೆಯೇ ಹೊರತು ಕಮ್ಮಿಯಾಗುವುದಿಲ್ಲ ಎನ್ನಿಸುತ್ತದೆ. ಆ ರೀತಿಯ ಆಕರ್ಷಕಶಕ್ತಿ ಅಡಗಿದೆ ಇಲ್ಲಿ ಸಂಗ್ರಹವಾಗಿರುವ ಕಥೆಗಳಲ್ಲಿ. ಹಳೆಯ ಕಥೆಗಳನ್ನು ಹೊಸದಾಗಿ ಹೇಳಿದ, ನೆನಪಿಗೆ ತಂದ ಐತಾಳರಿಗೆ ಓದುಗರ ಮೆಚ್ಚುಗೆ ಸಿಕ್ಕುತ್ತದೆ.

ಮನಸ್ಸಿಗೆ ಮುದವನ್ನು ಕೊಟ್ಟ ಅನೇಕ ಕಥೆಗಳು ಇಲ್ಲಿದ್ದರೂ ಅವುಗಳಲ್ಲಿ ನನ್ನನ್ನು ಸೆಳೆದ ಒಂದು ಕಥೆಯ ಬಗ್ಗೆ ಬರೆಯದೇ ಈ ಪುಸ್ತಕದ ವಿಚಾರವನ್ನು ಮುಗಿಸಲಾರೆ. ಅದರ ಹೆಸರು "ರಾಮ'ನಾತ"ಪುರ." ಅದು ನನ್ನ ಗಮನವನ್ನು ಸೆಳೆದದ್ದಕ್ಕೆ ಕಾರಣಗಳು ಎರಡು: ಒಂದು:ಇದನ್ನು ಐತಾಳರಿಗೆ ಹೇಳಿದವರು ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿದ್ದ ಸುಪ್ರಸಿದ್ಧ ಕಥೆಗಾರ ಏ.ಕೆ. ರಾಮಾನುಜನ್; ಇನ್ನೊಂದು: ಈ ಕಥೆಯಲ್ಲಿ ಬರುವ ಊರು ಹಾಸನ ಜಿಲ್ಲೆಯಲ್ಲಿರುವ "ರಾಮನಾಥಪುರ"ಕ್ಕೆ ಸಂಬಂಧ ಪಟ್ಟದ್ದು. ಸೀತೆಯನ್ನು ಹುಡುಕುತ್ತಾ ಹುಡುಕುತ್ತಾ ಬಸವಳಿದು ಬೆವರಿ ಮೈಯೆಲ್ಲಾ ಕೊಳಕಾಗಿ ಸ್ನಾನಕ್ಕೆಂದು ನೀರನ್ನು ಹುಡುಕುತ್ತಾರೆ, ರಾಮ ಲಕ್ಷ್ಮಣರು.

ಕೊನೆಗೆ ಒಂದು ಹಳ್ಳಿಯಲ್ಲಿ ಒಂದು 'ಸರೋವರ"ವನ್ನು ಕಂಡು ಜಳಕಮಾಡಲು ಉತ್ಸುಕರಾಗುತ್ತಾರೆ. ಭ್ರಾತೃಭಕ್ತ ಲಕ್ಷ್ಮಣನಾದರೋ, ಅಣ್ಣನಿಗೆ ಹಣ್ಣು ಹಂಪಲು ತರುವುದಾಗಿ ಹೇಳಿ ಅಣ್ಣನಿಗೆ ಮೊದಲು ಸ್ನಾನದ ಅವಕಾಶ ಕೊಡುತ್ತಾನೆ. ತನ್ನ ಮೈಯ್ಯಿನ ಕೊಳೆಯನ್ನೆಲ್ಲಾ ತೊಳೆದು ಇಡೀ ಸರೋವರದ ನೀರು ನಾರುವಂತೆ ಮಾಡುತ್ತಾನೆ, ಶ್ರೀರಾಮ. ತಮ್ಮ ಹಿಂದಿನಿಂದ ಬಂದು ನೀರಿನಲ್ಲಿ ಧುಮುಕಿದರೆ ತಾಳಲಾರದಷ್ಟು 'ನಾತ," ಲಕ್ಷ್ಮಣ ಮೂಗು ಮುಚ್ಚಿಕೊಳ್ಳುತ್ತಾನೆ. ರಾಮನಿಂದ ನಾತವನ್ನು ಪಡೆದ ಆ ಸರೋವರಕ್ಕೆ "ರಾಮನಾತ ಸರೋವರ"ವೆಂದೂ ಆ ಹಳ್ಳಿಗೆ "ರಾಮನಾತ" ಪುರವೆಂದೂ ಹೆಸರಾಗುತ್ತದಂತೆ. ಕಾಲಕ್ರಮೇಣ ಯಾರೋ (ಸಂಸ್ಕೃತ ಪಂಡಿತರು ??) ಇದನ್ನು "ರಾಮನಾಥಪುರವೆಂದು ತಿದ್ದಿರಬೇಕು ಎಂಬುದು ಕಥೆಯ ಸಾರಾಂಶ!

ಈ ಕಥೆಯನ್ನೋದಿ ರಾಮಾನುಜನ್ ಅವರ ಮೇಲೆ ಸ್ವಲ್ಪ ಕೋಪ ಬಂತು. ಅವರು ಪ್ರಾಯಶಃ ರಾಮನಾಥಪುರಕ್ಕೆ ಹೋಗಿರಲಾರರು. ನನಗೆ ತಿಳಿದಿರುವಂತೆ ಅಲ್ಲಿ ಯಾವ ಸರೋವರವೂ ಇಲ್ಲ. ಅಲ್ಲಿ ಪವಿತ್ರ ಕಾವೇರಿ ನದಿ ಹರಿಯುತ್ತದೆ. ಎಷ್ಟೇ ಕೊಳಕು ಮೈಯ್ಯಿನವರು ಬಂದರೂ ಅವರ ದೇಹವನ್ನೂ (ಅವರ ಪಾಪವನ್ನೂ) ತೊಳೆಯುವ ಶಕ್ತಿ ನಮ್ಮ ಕಾವೇರೀ ತಾಯಿಗಿದೆ. ಅಲ್ಲಿ ನದಿಯ ಇಕ್ಕೆಲಗಳಲ್ಲೂ ದೇವಸ್ಥಾನಗಳು, ಒಂದಕ್ಕಿಂತ ಒಂದು ದೊಡ್ಡದು. ಅಗಸ್ತ್ಯೇಶ್ವರ, ಸುಬ್ರಹ್ಮಣ್ಯೇಶ್ವರ, ರಾಮನಾಥೇಶ್ವರ, ಲಕ್ಷ್ಮಣೇಶ್ವರ (ಈಗ ಈ ದೇವಸ್ಥಾನ ಪಾಳು ಬಿದ್ದಿದೆ), ಮುಂತಾದ ಪ್ರಸಿದ್ಧ ದೇವಾಲಯಗಳಿರುವ ನಮ್ಮ ಹಾಸನ ಜಿಲ್ಲೆಯ "ರಾಮನಾಥ ಪುರ" ಎಂದೆಂದಿಗೂ "ರಾಮ'ನಾತ"ಪುರವಾಗಲಾರದು.

ಈ ಕಥೆಯನ್ನೋದಿದಾಗ, 'ರಾಮಾನುಜನ್" (=ಲಕ್ಷ್ಮಣ!) ಎಂಬ ಹೆಸರಿಟ್ಟುಕೊಂಡವರಿಗೆ ಇಂಥಾ ಕಥೆ ಊಹೆಯಲ್ಲೂ ಬರಬಾರದಲ್ಲವೇ, ಎನ್ನಿಸಿದ್ದೇನೋ ನಿಜ! ಇರಲಿ, ಮಿಕ್ಕೆಲ್ಲಾ ಕಥೆಗಳ ನಡುವೆ ಇದೊಂದು ಮನಸ್ಸಿನಲ್ಲಿ ಉಳಿದಿದ್ದರ ಕಾರಣ ನನ್ನ ಜನ್ಮಭೂಮಿಯ ಮೇಲಿನ ಪ್ರೀತಿಯಲ್ಲದೇ ಮತ್ತೇನೂ ಅಲ್ಲ. ನೀವೂ ಈ ಸಂಕಲನವನ್ನು ಓದಿ ಆನಂದಿಸಿರಿ, ನೀವು ಹಿಂದೆ ಓದಿಲ್ಲದ/ಕೇಳಿಲ್ಲದ ಹಲವು ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲುವ ಕಥೆಗಳು ಅಲ್ಲಿವೆ ಎಂದು ಧೈರ್ಯವಾಗಿ ಹೇಳಬಲ್ಲೆ.

ಕಾದೇ ಇರುವಳು ರಾಧೆ : ಕಾದಂಬರಿ ವಿಮರ್ಶೆ »ನಾಗ ಐತಾಳರಿಗೆ ನಿಮ್ಮ ಪತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X