ಅಮೆರಿಕಾ ಚುನಾವಣೆಯ ಅಕ್ಕಪಕ್ಕ

Alaska governor Sarah Palin, Republican candidate for US Vice-presidentshipಯಾಕೋ ಒಣಒಣವಾಗಿ ಕಾಣುತ್ತಿದ್ದ ಅಮೆರಿಕಾದ ಪ್ರತಿಷ್ಠಿತ ಶ್ವೇತಭವನ ಚುನಾವಣಾ ಪರ್ವಕ್ಕೀಗ ಹೊಸಬೆಡಗು. ಹುಡುಗನಂತೆ ಕಾಣುವ ಒಬಾಮ ಮತ್ತು ಮುದುಕಪ್ಪನಂತೆ ಕಾಣಿಸುವ ಮೆಕೈನ್ ನಡುವೆ ಈಗ ಒಬ್ಬ ಸುಂದರಿ ಪ್ರತ್ಯಕ್ಷ. ಉಪಾಧ್ಯಕ್ಷ ಸ್ಥಾನಕ್ಕೆ ಎಲೆಕ್ಷನ್ ಪಂಟರ್ ರಿಪಬ್ಲಿಕನ್ ಪಕ್ಷದವರು ಕಡೆಗಳಿಗೆಯಲ್ಲಿ ಛೂಬಿಟ್ಟಿರುವ ಕನ್ನಡಕಧಾರಿ ಪ್ರಮೀಳೆಯ ಹೆಸರು ಸ್ಯಾರಾ ಪೇಲಿನ್. ಈಕೆ ಕತ್ತಲೆಯರಾಜ್ಯ ಅಲಾಸ್ಕಾದಿಂದ ಚಿಮ್ಮಿಬಂದ ಶೋಭಕ್ಕ!

ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್

ಕಳೆದ ವಾರ ಒಬಾಮಾ ಬೈಡನ್ ಜೋಡಿ ಡೆನ್ವರ್ ನಗರದಲ್ಲಿ ಡೆಮೋಕ್ರ್ಯಾಟಿಕ್ ಪಕ್ಷದ ಪ್ರತಿನಿಧಿಗಳ ಸಮಕ್ಷಮದಲ್ಲಿ "ಛೇಂಜ್" ಎಂಬ ಮಂತ್ರಪಠಣದೊಂದಿಗೆ ನವೆಂಬರ್‌ನಲ್ಲಿ ಬರಲಿರುವ ಚುನಾವಣೆಗೆ ಕಹಳೆ ಊದಿದ್ದನ್ನು ನೀವೆಲ್ಲ ದೂರದರ್ಶನದಲ್ಲಿ ನೋಡಿರಬಹುದು. ಈಗಿರುವ ದೇಶದ ಪರಿಸ್ಥಿತಿಯನ್ನು ಬದಲಾಯಿಸುವ ಸಂಕಲ್ಪದೊಂದಿಗೆ ಅವರಿಬ್ಬರೂ ಕಂಕಣವನ್ನು ಕಟ್ಟಿಸಿಕೊಂಡರು. ಇದೊಂದು ಚಾರಿತ್ರಿಕ ಸಂದರ್ಭ! ಸಾರಿಗೆ ವಾಹನಗಳಲ್ಲಿ ಬಿಳಿಯರ ಜೊತೆಗೆ ಕೂರಲು ಅವಕಾಶವಿಲ್ಲದ ಪರಿಸ್ಥಿತಿಯೊಂದಿತ್ತು ವರ್ಣೀಯರಿಗೆ, ಅಮೇರಿಕದಲ್ಲಿ. ಸಾರ್ವಜನಿಕ ಉಪಾಹಾರಗೃಹಗಳಿರಲಿ, ಸಾರ್ವಜನಿಕ ಮೂತ್ರಿಗಳಲ್ಲೂ ಪ್ರವೇಶದ ಅವಕಾಶವಿಲ್ಲದೇ ತೊಳಲುತ್ತಾ ಬಿಳಿಯರಿಂದ ಬೇರ್ಪಡಿಸಲ್ಪಟ್ಟಿದ್ದ, ತಾರತಮ್ಯಕ್ಕೊಳಗಾಗಿ ತುಳಿಯಲ್ಪಟ್ಟಿದ್ದ ಕಪ್ಪುಜನರ ಪ್ರತಿನಿಧಿಯೊಬ್ಬ ಅಮೇರಿಕದ ಮುಖ್ಯ ರಾಜಕೀಯಪಕ್ಷವೊಂದರ ಅಭ್ಯರ್ಥಿಯಾಗಿ ಆಯ್ಕೆಯಾದ. ಮಾರ್ಟಿನ್ ಲೂಥರ್ ಕಿಂಗ್ ತನ್ನ ಗೋರಿಯಲ್ಲಿ ಕುಣಿದಾಡಿದ್ದರೆ ಆಶ್ಚರ್ಯವೇನಿಲ್ಲ.

ಮಹಿಳೆಯೊಬ್ಬಳನ್ನು ಶ್ವೇತಭವನಕ್ಕೆ ಕಳುಹುಸುತ್ತೇವೆಂದು ಆಸೆಯಿಂದ ನಿರೀಕ್ಷಿಸಿದ್ದ ಅನೇಕರಿಗೆ ನಿರಾಶೆ ಆಗಿದ್ದೇನೋ ನಿಜ. ಆದರೆ, ಡೆಮೋಕ್ರ್ಯಾಟಿಕ್ ಪಕ್ಷದ ಸದಸ್ಯರು ಒಬಾಮನನ್ನು ಇಡೀ ಪಕ್ಷದ ಪ್ರತಿನಿಧಿ ಎಂದು ಒಪ್ಪಿಕೊಂಡಿರುವಂತೆ ಕಾಣುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಆತ ಆಯ್ದುಕೊಂಡಿರುವ ಬೈಡನ್ ಒಳ್ಳೆಯ ಅಭ್ಯರ್ಥಿ. ಒಬಾಮಾನಲ್ಲಿರಬಹುದಾದ ಕೊರತೆಗಳನ್ನು ಆತ ನೀಗಬಹುದು.

ಈ ವಾರ ಸೇಂಟ್ ಪಾಲ್ ನಗರದಲ್ಲಿ ರಿಪಬ್ಲಿಕನ್ ಪಕ್ಷದ ಹುರಿಯಾಳುಗಳು ತಮ್ಮ ತಮಟೆ ಕಹಳೆಗಳೊಂದಿಗೆ ಸಜ್ಜಾಗಿದ್ದಾರೆ. ರಾಷ್ಟ್ರದ ರಕ್ಷಣಾಪಡೆಯ ಸೈನಿಕನಾಗಿ "ಯುದ್ಧವೀರ"ನೆಂದು ಹೆಸರುವಾಸಿಯಾಗಿರುವ ಜಾನ್ ಮೆಕ್ಕೇನ್ ಯಾರೂ ನಿರೀಕ್ಷಿಸದೇ ಇದ್ದ, ಜನರಿಗೆ ತೀರಾ ಅಪರಿಚಿತಳಾಗಿದ್ದ ಅಲಾಸ್ಕಾ ಗವರ್ನರ್ ಸ್ಯಾರಾ ಪೇಲಿನ್ ಎಂಬಾಕೆಯನ್ನು ತನ್ನ ಚುನಾವಣಾ ಸಂಗಾತಿಯಾಗಿ ಆಯ್ದುಕೊಂಡು ವಿರುದ್ಧಪಕ್ಷದ ಡೇರೆಗಳಲ್ಲಿ ಸಾಕಷ್ಟು ಗೊಂದಲವನ್ನುಂಟು ಮಾಡಿರುವಂತಿದೆ. ಹಾಗೆ ನೋಡಿದರೆ ರಿಪಬ್ಲಿಕನ್ ಪಕ್ಷದಲ್ಲೇ ಇದು ಅನಿರೀಕ್ಷಿತವಾದ ಬೆಳವಣಿಗೆ. ಎಂತೆಂಥಾ ಘಟಾನುಘಟಿಗಳನ್ನು ಬಿಟ್ಟು ಮಹಿಳೆಯನ್ನು ಉಪಾಧ್ಯಕ್ಷ ಪದವಿಗೆ ಆಯ್ದುಕೊಂಡಿರುವುದಕ್ಕೆ ಕೆಲವು ಕಾರಣಗಳಿವೆ. ಒಂದು : ಡೆಮೋಕ್ರ್ಯಾಟಿಕ್ ಪಕ್ಷ ಮಹಿಳೆಗೆ ಮೋಸ ಮಾಡಿದೆ, ನಾವು ಮಹಿಳೆಗೆ ಅವಕಾಶ ಕಲ್ಪಿಸಿದ್ದೇವೆ; ಎರಡು : ಹಿಲರಿಗಾದ ಅನ್ಯಾಯದಿಂದ ನಿರಾಶರಾದ ಕ್ಲಿಂಟನ್ ಕ್ಯಾಂಪಿನ ಮಹಿಳೆಯರೆಲ್ಲ ನಮ್ಮಪಕ್ಷಕ್ಕೆ ಓಟು ಹಾಕಲಿ; ಮೂರು : ತೀರಾ ಹುಡುಗನಂತೆ ಕಾಣುವ ಒಬಾಮಾ ಮುಂದೆ ಮುದುಕನಂತೆ ಕಾಣುವ ಮೆಕ್ಕೇನ್ ಜೊತೆಗೆ ಯುವತಿಯಂತೆ ಕಾಣುವ ಒಬ್ಬಾಕೆ ಇದ್ದರೆ ಒಳ್ಳೆಯದು; ಇತ್ಯಾದಿ, ಇತ್ಯಾದಿ.

ರಿಪಬ್ಲಿಕನ್ ಪಕ್ಷದ ಜನರು ಚುನಾವಣೆ ಗೆಲ್ಲುವುದರಲ್ಲಿ ನಿಸ್ಸೀಮರು. ನ್ಯಾಯಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದೇ ಹೋದಾಗ ತಮ್ಮದೇ ಆದ ಚಮತ್ಕಾರಗಳನ್ನು ಪ್ರಯೋಗಿಸುವುದರಲ್ಲಿ ಪ್ರವೀಣರು. ಅವರು ಕುನೀತಿಯಲ್ಲಿ ಎಷ್ಟು ಪ್ರವೀಣರೋ, ಡೆಮೋಕ್ರ್ಯಾಟಿಕ್ ಪಕ್ಷದ ಜನ ಅಷ್ಟೇ ನರಪೇತಲರು, ಒದ್ದರೆ ಒದಿಸಿಕೊಂದು ಸುಮ್ಮನಾಗುವ ಗುಂಪಿನವರು. ಉದಾಹರಣೆಗೆ, ಇನ್ನೇನು ಚುನಾವಣೆ ದಿನ ಹತ್ತಿರ ಬಂತೆಂದರೆ ಸರಿ, ಯಾವನೋ ಒಬ್ಬ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಖೈದಿ ಯಾರನ್ನೋ ಬಲಾತ್ಕಾರಕ್ಕೊಳಪಡಿಸಿದ್ದಕ್ಕೆ ಡೆಮೋಕ್ರ್ಯಾಟಿಕ್ ಪಕ್ಷದ ಅಭ್ಯರ್ಥಿಯೇ ಕಾರಣ ಎಂಬ ನಂಬಿಕೆ ಮೂಡುವಂತೆ ಪ್ರಚಾರಮಾಡುವ ಖದೀಮತನ ಅವರಿಗಿದೆ. ಅಷ್ಟೇ ಯಾಕೆ, ಯುದ್ಧದಲ್ಲಿ ಪೆಟ್ಟುತಿಂದು ವೀರ ಎಂಬ ಬಿರುದನ್ನು ಪಡೆದ ಅಭ್ಯರ್ಥಿಯನ್ನು ಹೇಡಿ ಮತ್ತು ದೇಶದ್ರೋಹಿ ಎಂದು ಜನ ನಂಬುವಂತೆ ಮಾಡುವ ನೈಪುಣ್ಯ ಅವರಿಗಿದೆ. ಸೈನ್ಯಕ್ಕೆ ಸೇರಿದ್ದರೂ ಒಂದು ದಿನವೂ ಕವಾಯ್ತಿಗೂ ಹೋಗದೇ ಕಳ್ಳಾಟವಾಡುತ್ತಾ ಕಾಲ ಕಳೆದ ತಮ್ಮ ಪಕ್ಷದ ಅಭ್ಯರ್ಥಿ ಮಹಾ ದೇಶಭಕ್ತ ಎಂಬ ನಂಬಿಕೆ ಬರುವಂತೆ ನಾಟಕ ಹೂಡುವ ಉಪಾಯವೂ ಅವರಿಗೆ ಗೊತ್ತುಂಟು.

ಅವರ ಖದೀಮತನ ಅಥವಾ ನೀಚತನವನ್ನು ಹೊರಪಡಿಸಲು ಯತ್ನಿಸುವ ಪತ್ರಿಕೆ ಮತ್ತು ದೂರದರ್ಶನ ಮಾಧ್ಯಮದ ಪ್ರತಿನಿಧಿಗಳು ಕೆಲಸಕಳೆದುಕೊಂಡು ಕಂಗಾಲಾಗುವಂತೆ ಮಾಡುವ ತಾಕತ್ತೂ ಅವರಿಗಿದೆ. ಏನೂ ನಡೆಯದಿದ್ದರೆ, ಯಾವುದೋ ಅಬ್ಬೇಪಾರೀ ದೇಶದ ಮೇಲೆ ಬಾಂಬ್ ಎಸೆದು ಧೂಳೆಬ್ಬಿಸಿ, ಡೆಮೋಕ್ರ್ಯಾಟರು ತೀರ ನಿಶ್ಶಕ್ತರು, ರಾಷ್ಟ್ರದ ರಕ್ಷಣೆಯನ್ನು ಅವರ ಕೈಯಲ್ಲಿಟ್ಟರೆ ದೇವರೇ ಗತಿ ಎಂಬ ಭಯವನ್ನು ಮೂಡಿಸುವುದು ಅವರ ಪದ್ಧತಿ. ಹಿರಿಯ ಬುಷ್ಷನ ಕಾಲದ ಗಲ್ಫ್ ಯುದ್ಧ, ಕಿರಿಯ ಬುಷ್ಷನ ಕಾಲದ ಇರಾಕ್ ಯುದ್ಧ ಜೀವಂತ ಉದಾಹರಣೆಗಳು. ಅಷ್ಟೇ ಏಕೆ, ಈಗ ನಡೆಯುತ್ತಿರುವ ಜಾರ್ಜಿಯಾ ಮತ್ತು ರಷ್ಯಾ ನಡುವಿನ ಯುದ್ಧದ ಹಿಂದೆಯೂ ಇವರ ಕೈವಾಡವಿದೆ ಎಂಬ ಗುಮಾನಿಗಳಿವೆ!

ಇನ್ನು ನವೆಂಬರ್ ಚುನಾವಣೆಗೆ ಮುನ್ನ ಇನ್ನೇನೇನು ಅನಾಹುತಗಳಾಗುತ್ತವೋ ಕಾದು ನೋಡಬೇಕು. ಈಗಾಗಲೇ ಟ್ರಿಲಿಯನ್ ಗಟ್ಟಲೆ ಸಾಲದಲ್ಲಿ ಮುಳುಗಿರುವ ದೇಶದ ಖಜಾನೆಯನ್ನು ಮತ್ತಷ್ಟು ಲೂಟಿಮಾಡಲು ಸಾಕಷ್ಟು ಶಕ್ತಿಗಳು ತೋಳಗಳಂತೆ ಕಾದಿವೆ. ಬಡತನದಲ್ಲಿ ತೊಳಲುತ್ತಿರುವವರ ಬಗ್ಗೆ ಯಾವ ಸಹಾನುಭೂತಿಯೂ ಇಲ್ಲದ, ಮಧ್ಯಮವರ್ಗದ ತಲೆಯಮೇಲೆ ತಡೆದುಕೊಳ್ಳಲಾಗದಷ್ಟು ತೆರಿಗೆ ಹೇರುವ ಮತ್ತು ದೊಡ್ಡ ದೊಡ್ಡ ಕಂಪನಿಗಳು ಬಿಲಿಯನ್ ಗಟ್ಟಲೆ ಲಾಭಮಾಡಿದರೂ ಒಂದು ಕಾಸೂ ತೆರಿಗೆ ಕೊಡದೇ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ನೀತಿಯನ್ನು ಪ್ರತಿಪಾದಿಸುವ ಪಕ್ಷದ ಬಗ್ಗೆ ಮತದಾರರು ಎಚ್ಚರಿಕೆಯಿಂದ ಇರುವರೆಂದು ನಂಬೋಣ. ರಿಪಬ್ಲಿಕನ್ ಪಕ್ಷದ ಕನ್‌ವೆನ್‌ಷನ್ ನಡೆಯುವ ದೃಶ್ಯಗಳನ್ನು ಗಮನವಿಟ್ಟು ನೋಡಿ, ಅಲ್ಲಿ ಬಿಳಿಯರಮುಖಗಳಲ್ಲದೇ ಮತ್ಯಾರಾದರೂ ಸವರ್ಣೀಯರು ಕಾಣಿಸಿದರೆ ಎಣಿಸಿ ನೋಡಿ!

ಅಕ್ಕಅಲ್ಲ, ಚೊಕ್ಕ ಸಮ್ಮೇಳನ!! : ಈ ಎರಡು ಪ್ರಮುಖ ಕನ್‌ವೆನ್‌ಷನ್‌ಗಳ ನಡುವೆ ದೀರ್ಘವಾರಾಂತ್ಯದಲ್ಲಿ ಬಂದ ಅಕ್ಕ ಸಮ್ಮೇಳನ ಚೊಕ್ಕವಾಗಿ ನಡೆದು, ಬಂದವರೆಲ್ಲ ಖುಷಿಯಿಂದ ಹಿಂದಿರುಗಿದ್ದು ಈಗಾಗಲೇ ಹಳೆಯ ಸುದ್ದಿ. ಇದರಬಗ್ಗೆ ಸಾಕಷ್ಟು ವರದಿಗಳು ಬಂದಿರುವುದರಿಂದ ಹೊಸದೇನನ್ನೂ ಬರೆಯುದು ಶಕ್ಯವಿಲ್ಲ. ಆದರೂ ನನಗನ್ನಿಸಿದ ನಾಲ್ಕು ಮಾತುಗಳನ್ನು ಮಂಡಿಸುತ್ತೇನೆ. ಮೊಟ್ಟ ಮೊದಲನೆಯದಾಗಿ ವಿದ್ಯಾರಣ್ಯ ಕನ್ನಡ ಕೂಟದ ಸ್ವಯಂಸೇವಕರು ಕಷ್ಟಪಟ್ಟು ದುಡಿದು ಎಲ್ಲವೂ ಸುಗಮವಾಗುವಂತೆ ನೋಡಿಕೊಂಡಿದ್ದು ಶ್ಲಾಘನೀಯ. ಊಟದ ವ್ಯವಸ್ಥೆಗೆ "ಎ" ಗ್ರೇಡ್. ನೂರಿನ್ನೂರು ಜನ ಸೇರುವ ಕೂಟದ ಫಂಕ್ಷನ್‌ಗಳಲ್ಲೇ ಹದಿನೈದಿಪ್ಪತ್ತು ನಿಮಿಷ ಊಟಕ್ಕಾಗಿ ಕಾಯುವುದು ಮಾಮೂಲು. ಆದರೆ, ಮೂರು ಸಾವಿರ ಜನರು ಸೇರಿದೆಡೆ ಐದು ನಿಮಿಷವೂ ಕಾಯದಂತೆ ಸಾಲುಗಳು ಸರಸರ ಕರಗುವಂತೆ ಅನೇಕ ಸ್ಥಳಗಳಲ್ಲಿ ಊಟವನ್ನಿಟ್ಟು ಎಲ್ಲರೂ ಕೂರಲು ಸ್ಥಳ, ಪ್ರತಿ ಮೇಜಿನಲ್ಲೂ ಕುಡಿಯುವ ನೀರಿನ ಸರಬರಾಜು, ಉತ್ತಮ ಆಹಾರ, ಸಾಕಷ್ಟು ವೈವಿಧ್ಯ, ಶುಚಿ, ರುಚಿಯಿಂದ ಕೂಡಿ ಆಹ್ಲಾದಕರವಾಗಿತ್ತು. ಕಾಫಿಯ ಸರಬರಾಜೂ ಚೆನ್ನಾಗೇ ಇತ್ತು. ಒಟ್ಟಿನಲ್ಲಿ ಮೆಚ್ಚಬೇಕಾದ್ದು. ತುಂಬಾ ಯೋಚಿಸಿ, ಎಲ್ಲವನ್ನೂ ಮುಂಗಡ ಯೋಜಿಸಿ, ಯೋಜಿಸಿದ್ದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅವರು ಯಶಸ್ವಿಗಳಾದರು.

ಸಮ್ಮೇಳನದ ಸಭಾಂಗಣ ಉತ್ತಮವಾಗಿತ್ತು. ವಿಮಾನ ನಿಲ್ದಾಣಕ್ಕೆ ತೀರ ಹತ್ತಿರವಾಗಿದ್ದು ತುಂಬಾ ಸಹಾಯಕವಾಗಿತ್ತು, ಅಷ್ಟೇ ಅಲ್ಲ, ಷಟಲ್ ಸರ್ವಿಸ್ ಸಹ ಇದ್ದದ್ದು ತುಂಬಾ ಅನುಕೂಲವಾಗಿತ್ತು. ಇಳಿದುಕೊಂಡ ಹೋಟೆಲುಗಳು ಪಕ್ಕದಲ್ಲೇ ಇದ್ದವು. ಹೋಗಿಬರುವುದು ಆರಾಮವಾಗಿತ್ತು. ರಸ್ತೆಯನ್ನು ದಾಟಲು ಪೋಲಿಸರು ತುಂಬಾ ಸಹಾಯಕರಾಗಿದ್ದರು. ಸಭಾಂಗಣದ ಅಲಂಕಾರ ಚೆನ್ನಾಗಿತ್ತು. ಧ್ವನಿವರ್ಧಕಗಳ ಮತ್ತು ಬೆಳಕಿನ ವ್ಯವಸ್ಥೆ ಸಮರ್ಪಕವಾಗಿತ್ತು. ಮುಕ್ಕಾಲುಮೂರುಪಾಲು ಕಾರ್ಯಕ್ರಮಗಳ ಗುಣಮಟ್ಟವೂ ಉತ್ಕೃಷ್ಟವಾಗಿತ್ತು. ಎಲ್ಲವನ್ನೂ ನೋಡುವುದಕ್ಕೆ ಅಥವಾ ಎಲ್ಲದರಲ್ಲೂ ಭಾಗವಹಿಸುವುದಕ್ಕೆ ಇಂಥಾ ಸಮ್ಮೇಳನಗಳಲ್ಲಿ ಸಾಧ್ಯವಾಗುವುದಿಲ್ಲ. ಪರ್ಯಾಯ ಕಾರ್ಯಕ್ರಮಗಳೂ ಸಾಕಷ್ಟು ಇದ್ದವು, ಯಾವುದಕ್ಕೆ ಆದ್ಯತೆ ಕೊಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಎಲ್ಲರಿಗೂ ಇತ್ತು. ಸಾಧ್ಯವಾದಷ್ಟು ಜನರು ಬಂದು ಭಾಗವಹಿಸಲಿ ಎಂಬ ಉದ್ದೇಶ ಪ್ರತಿಬಾರಿಯೂ ಇದ್ದೇ ಇರುತ್ತದೆಯಾಗಿ, ಇಲ್ಲೂ ಕಾರ್ಯಕ್ರಮಗಳ ಬಾಹುಳ್ಯ ಒಂದು ಅನಿವಾರ್ಯ "ಋಣ" (ನೆಗೆಟಿವ್) ಆಗಿತ್ತು. ಕಾರ್ಯಕ್ರಮವನ್ನು ಯೋಜಿಸುವಾಗ ಮತ್ತು ಅದಕ್ಕೆ ಬೇಕಾಗುವ ಸಮಯವನ್ನು ಲೆಕ್ಕಹಾಕುವಾಗ ಸೆಟಪ್ ಟೈಮ್ ಮತ್ತು ತಪ್ಪಿಸಲಾಗದ ಕೆಲವು ಸಮಯದ ನಷ್ಟವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇಹೋದರೆ ಆಗುವ ಕಷ್ಟ ಇಲ್ಲೂ ಇತ್ತು. ಹೀಗಾಗಿ ಹಲವಾರು ಕಾರ್ಯಕ್ರಮಗಳು ವಿಧಿಯಿಲ್ಲದೇ ಮುಂದೂಡಲ್ಪಟ್ಟವು, ಕಾರ್ಯಕ್ರಮ ಕೊನೆಗೊಳ್ಳುವಾಗ ನಿದ್ರೆಗೆ ಅವಕಾಶವೇ ಇಲ್ಲದಷ್ಟು ರಾತ್ರಿ ತುಂಡಾಯಿತು. ಈ ಬಗ್ಗೆ ಮುಂದಿನ ಸಮ್ಮೇಳನಗಳಲ್ಲಿ ಏನಾದರೊಂದು ಮಾರ್ಗ ಕಂಡುಹಿಡಿದುಕೊಳ್ಳಬೇಕು.

ಸ್ಮರಣ ಸಂಚಿಕೆ ಆಕರ್ಷಕವಾಗಿ ಕಾಣುತ್ತಿದೆ, ಇನ್ನೂ ಓದುವ ಅವಕಾಶವಾಗಿಲ್ಲ, ಸಾವಕಾಶವಾಗಿ ಓದುವಷ್ಟು ಉತ್ತಮ ಸಾಮಗ್ರಿಯಂತೂ ಇದೆ. ಸಾಹಿತ್ಯಗೋಷ್ಠಿಗಳು ಉತ್ತಮವಾಗಿದ್ದವು. ಅಲ್ಲಿ ಭಾಗವಹಿಸಿದ ಕಾರಣದಿಂದ ಅನೇಕ ಉತ್ತಮ ಕಾರ್ಯಕ್ರಮಗಳನ್ನು ನೋಡುವ ಅವಕಾಶವಿಲ್ಲವಾಯಿತು. ಅವರಿವರು ಹೇಳಿದ ಮಾತುಗಳಿಂದ ಎಷ್ಟೋ ಉತ್ತಮ ಕಾರ್ಯಕ್ರಮಗಳಿದ್ದವೆಂದು ತಿಳಿದು ಅವು ತಪ್ಪಿದ್ದಕ್ಕೆ ಕೈಕೈ ಹಿಸುಕಿಕೊಳ್ಳುವಂತಾಯಿತು. ಆದರೆ ಏನು ಮಾಡುವುದು, ಇದು ಅನಿವಾರ್ಯ. ಉದ್ಘೋಷಕ/ಉದ್ಘೋಷಕಿಯರು ಉತ್ತಮವಾಗಿ ಕನ್ನಡವನ್ನು ಬಳಸಿಕೊಳ್ಳುತ್ತಿದ್ದುದು ಸಂತೋಷದ ವಿಷಯ. ಇನ್ನೂ ಒಂದಿಷ್ಟು ಜನರನ್ನು ಬಳಸಿಕೊಳ್ಳಬಹುದಾಗಿತ್ತು ಎನ್ನಿಸಿತು. ನಡುನಡುವೆ ಕಂಡ, ಕೇಳಿದ ಎರಡನೆಯ ಪೀಳಿಗೆಯ ಮಕ್ಕಳ ಹಾಡುಗಳು ನೃತ್ಯಗಳು ಮನಸ್ಸಿಗೆ ಮುದವನ್ನು ಕೊಟ್ಟವು. ಕೆಲವು ಮಕ್ಕಳಂತೂ ಒಳ್ಳೆಯ "ಪ್ರೋ"ಗಳಂತೆ ಹಾಡಿದರು, ಕುಣಿದರು. ಗಾಳಿನಗರದಲ್ಲಿ ಹೆಚ್ಚೇನೂ ಗಾಳಿಯಿರಲಿಲ್ಲ, ಗಾಳಿಯೇನು ಮಳೆಯೂ ಇರಲಿಲ್ಲ (ಇದು ಅದೃಷ್ಟ). ಒಟ್ಟಿನಲ್ಲಿ ಅತ್ಯಂತ ಹಳೆಯ ಕನ್ನಡಸಂಘಗಳಲ್ಲೊಂದಾಗಿ ವಿದ್ಯಾರಣ್ಯಕ್ಕೆ ಭೇಷ್, ಶಾಭಾಷ್, ಉಘೇ ಕೊನೆಯದಾಗಿ, ಹಳೆಯ ಮಿತ್ರರನ್ನು ಕಾಣುವ ಖುಷಿ ಇಲ್ಲೂ ಇತ್ತು. ನನಗಿಂತ ಕೆಲ ವರ್ಷಗಳು ಹಿರಿಯರಾದ ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷ ಜಗನ್ನಾಥ ನಾಯಕರನ್ನು ನಿಲ್ಲಿಸಿ ಹಲವು ದಶಕಗಳ ಹಿಂದೆ ಯುವಿಸಿಯಿನಲ್ಲಿ ನಡೆದ ಒಂದು ಪ್ರಸಂಗವನ್ನು ಅವರಿಗೆ ನಾನು ನೆನಪಿಸಿದಾಗ ಅವರಿಗೆ ಅಚ್ಚರಿಯೋ ಅಚ್ಚರಿ! ಅವರೂ ದಂಗಾಗಿ ಖುಷಿಪಟ್ಟರು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+