ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜಾಲತರಂಗ’ಕ್ಕೆ ನಲ್ನುಡಿಯ ಕನ್ನಡಿ!

By Super
|
Google Oneindia Kannada News

('ಜಾಲತರಂಗ" ಪುಸ್ತಕ ರೂಪ ಪಡೆಯುತ್ತಿದ್ದು, ವಿಶ್ವಕನ್ನಡ ಸಮ್ಮೇಳನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ನಲ್ನುಡಿ, ಜಾಲತರಂಗಕ್ಕೆ ಕನ್ನಡಿ ಹಿಡಿದಿದೆ. ನಲ್ನುಡಿಯ ಅಂತಿಮ ಭಾಗ ನಿಮ್ಮ ಮುಂದಿದೆ - ಮೈ.ಶ್ರೀ. ನಟರಾಜ್‌, ಅಂಕಣಕಾರ)

(ಹಿಂದಿನ ಸಂಚಿಕೆಯಿಂದ)

ನಿರೂಪಣಾಕಲೆಯ ಹಾಗೆಯೇ ಸಂದರ್ಶನಕಲೆಯೂ ಒಂದು ವಿಶಿಷ್ಟಕಲೆ. ಸಂದರ್ಶನವನ್ನು ಯಾರು ಬೇಕಾದರೂ ಮಾಡಬಹುದು, ಆದರೆ, ಸಮಯೋಚಿತ ಪ್ರಶ್ನೆಗಳಿಂದ ವ್ಯಕ್ತಿಯ ವ್ಯಕ್ತಿತ್ವ, ವೈಶಿಷ್ಟ್ಯ, ಸಾಧನೆಗಳು, ಹೊರಬರುವಂತೆ ಸಂದರ್ಶನಮಾಡುವುದು ಸುಲಭವಲ್ಲ. ಕೆಲವೇ ಪ್ರಶ್ನೆಗಳಲ್ಲಿ, ಕಲಾವಿದನ, ಸಾಹಿತಿಯ, ಅಂತರಂಗ ಬಯಲಾಗಬೇಕು. ಕೆಲವು ಪತ್ರಿಕಾಸಂದರ್ಶಕರು ಇದಕ್ಕೆ ಮಾದರಿ ಆಗಿದ್ದಾರೆ. ನಟರಾಜರು ನಡೆಸಿದ ಬನ್ನಂಜೆ ಸಂದರ್ಶನ, ಆರ್‌. ಕೆ. ಶ್ರೀಕಂಠನ್‌ ಸಂದರ್ಶನದ ಬರಹಗಳಿಂದ ವಿದ್ವಾಂಸರನ್ನು, ಕಲಾವಿದರನ್ನು ಭೇಟಿಯಾದಾಗ ಹೇಗೆ ಸಂದರ್ಶಿಸಬೇಕು ಎಂಬ ಎಚ್ಚರ ನಟರಾಜರಿಗಿರುವುದು ವ್ಯಕ್ತವಾಗುತ್ತದೆ. ಸಂದರ್ಶಕರಿಗೆ, ಸಂದರ್ಶನಮಾಡುವಾಗ ಮತ್ತು ಸಂದರ್ಶನವನ್ನು ಕುರಿತು ಬರೆಯುವಾಗ ಅನೇಕ ಸಮಸ್ಯೆಗಳೂ ಸಂದೇಹಗಳೂ ಬರುತ್ತವೆ. ಅವುಗಳನ್ನು ಎಚ್ಚರದಿಂದ ಗಮನಿಸಬೇಕಾಗುತ್ತದೆ.

ಅಂಕಣಕಾರ ತನ್ನದೇ ಆದ, ವ್ಯಕ್ತಿತ್ವ, ವಿಚಾರಲಹರಿ, ಧ್ಯೇಯ-ಧೋರಣೆಯುಳ್ಳವನು. ಅವನ ವೈಯಕ್ತಿಕ ಅಭಿಪ್ರಾಯ ಬರಹಗಳಲ್ಲಿ ಕಾಣಿಸಿಕೊಂಡಾಗ ಕೆಲವೊಮ್ಮೆ ತೀವ್ರ ಪ್ರತಿಕ್ರಿಯೆಗಳು ಓದುಗರಿಂದ ಹೊರಬೀಳುತ್ತವೆ. ಇದಕ್ಕೆ ಅವರು ''ನೋಡಲಾರೆ ನಾ ಕನ್ನಡ ಚಿತ್ರ"" ಲೇಖನದಲ್ಲಿ 'ತುಂಟಾಟ" ಎಂಬ ಕನ್ನಡಚಿತ್ರದ ಬಗ್ಗೆ ಬರೆದ ಬರಹ ಒಂದು ನಿದರ್ಶನ. ಇದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ, ಪ್ರವಾಹ, ಬಿರುಗಾಳಿ, ತಂಗಾಳಿ, ದಾಳಿ ಎಲ್ಲ ಸುಳಿದಿವೆ. ಕೆಲವು ಮನನೀಯ ಪ್ರತಿಕ್ರಿಯೆಗಳೂ ಬಂದಿವೆ: ''ರೇಷ್ಮೆ ಸೀರೆಯುಟ್ಟಿರಲಿ, ಹರಕು ಸೀರೆಯುಟ್ಟಿರಲಿ, ನಮ್ಮ ತಾಯಿ ನಮಗೆ ಪ್ರಿಯಳೇ ಆಗಿರುತ್ತಾಳೆ"" ಎಂಬ ಪ್ರತಿಕ್ರಿಯೆ ಮನಸೆಳೆಯುತ್ತದೆ.

ಲೇಖಕರ ಸ್ವಾನುಭವದಿಂದ ಬಂದ ಬರಹಗಳು ಯಾವಾಗಲೂ ತೀವ್ರಪರಿಣಾಮ ಉಂಟುಮಾಡಬಲ್ಲವು ಮತ್ತು ಕಟು ವಾಸ್ತವಿಕ ಸತ್ಯ ಸಂಗತಿಗಳಿಂದ ಕೂಡಿರುತ್ತವೆ. ಅಮೆರಿಕೆಯ ಕನ್ನಡ ಸಂಘ ಸಂಸ್ಥೆಗಳಲ್ಲಿ ದುಡಿದಿರುವ ಮತ್ತು ಅವುಗಳ ಒಳ-ಹೊರನೋಟಗಳನ್ನೆಲ್ಲ ಚೆನ್ನಾಗಿ ಬಲ್ಲ ನಟರಾಜರು ಈ ಸಂಗ್ರಹದಲ್ಲಿ ಕಟುಸತ್ಯದ ಲೇಖನಗಳನ್ನು ಬರೆದಿದ್ದಾರೆ. ''ಸಂಘಸಂಚಾಲಕರ ಸಂಕಷ್ಟಗಳು"", ''ಇದು ಮನಸುಗಳ ಬೆಸೆಯುವ ಹೊನ್ನಿನ ಸೇತುವೆ"", ''ಸಾಂಸ್ಕೃತಿಕ ಸಂಘಗಳು ಮತ್ತು ಚುನಾವಣೆ"" ಲೇಖನಗಳು ಅನುಭವಪೂರ್ಣವಾಗಿವೆ. ಸಂಘಸಂಸ್ಥೆಗಳಲ್ಲಿ ದುಡಿಯುವವರಿಗೆ ಕಣ್ತೆರೆಸುತ್ತವೆ.

ಅಂಕಣಬರಹಗಳ ವೈಶಿಷ್ಟ್ಯವೆಂದರೆ ತಾನು ಬಣ್ಣಿಸುವ ಸಂಗತಿ, ವ್ಯಕ್ತಿ ವಿಚಾರಗಳ ಸಂದರ್ಭದಲ್ಲಿ ತನ್ನ ಬದುಕಿನ ಅನುಭವಗಳ ಸಂಗತಿಗಳನ್ನು, ತಾನು ಕಂಡ ವ್ಯಕ್ತಿಗಳನ್ನು ಪ್ರಸ್ತಾಪಿಸುವುದು ಸಹಜ. ಇದನ್ನು ಎಲ್ಲಾ ಅಂಕಣಕಾರರ ಬರಹಗಳಲ್ಲೂ ನೋಡಬಹುದು. ವ್ಯಕ್ತಿಚಿತ್ರಣ ಕೊಡುವಾಗ ಆ ವ್ಯಕ್ತಿ ಬಗ್ಗೆ ತನ್ನ ಪರಿಚಯ, ಸ್ನೇಹ, ಸಂಬಂಧಗಳನ್ನು ಅಂಕಣಕಾರ ಸಹಜವಾಗಿ ಪ್ರಸ್ತಾಪಿಸುತ್ತಾನೆ. ಹಾಮಾನಾ ಮೊದಲಾದವರ ಅಂಕಣ ಬರಹಗಳಲ್ಲಿ ಇದನ್ನು ವಿಶೇಷವಾಗಿ ಕಾಣಬಹುದು. ನಟರಾಜರು ಇಲ್ಲಿಯ ಕೆಲವು ಬರಹಗಳಲ್ಲಿ ತಮ್ಮ ಆತ್ಮಕಥೆಯ ತುಣುಕುಗಳನ್ನು ಮುಂದಿಟ್ಟಿದ್ದಾರೆ.

ಆ ತುಣುಕುಗಳಲ್ಲಿ ಕಂಡುಬರುವ ವ್ಯಕ್ತಿಚಿತ್ರಗಳು ಗಾಢವಾಗಿ ಓದುಗನ ಮನತಟ್ಟುತ್ತವೆ. ನೆಲಮಾಳಿಗೆಯಂಗಳದಲ್ಲಿ ಸುಳಿದ ನೆನಪುಗಳನ್ನು ಹೇಳುವಾಗ, ಹೊಸಮನೆಗೆ ಬಂದಾಗ ಅಲ್ಲಿ ಕಾಶೀನಾಥ್‌ ದಂಪತಿಗಳ ಸಂಗೀತಕಚೇರಿ ಏರ್ಪಡಿಸಿದಬಗ್ಗೆ ಬರೆಯುತ್ತಾ ತಮ್ಮ ತಾಯಿಯ ಹಾಗೂ ಅಜ್ಜಿಯ ಸಂಗೀತಪ್ರೇಮದ ಸೊಗಸಾದ ಚಿತ್ರಣ ನೀಡಿದ್ದಾರೆ. ತಾತ ಕೇಶವಯ್ಯನವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ''ಸಂಗೀತ ಕಲಾನಿಧಿ ವಾಸುದೇವಾಚಾರ್ಯರು ತಮ್ಮ 'ನೆನಪುಗಳು" ಗ್ರಂಥದಲ್ಲಿ, ನಮ್ಮನ್ನು ಕರೆಸಿಕೊಂಡು ಸಂಗೀತ ಕಚೇರಿ ಮಾಡಿಸಿದಾಗ ಐದು ರೂ ಸಂಭಾವನೆ ಕೊಟ್ಟು ಆದರಿಸುತಿದ್ದ ಔದಾರ್ಯದ ಮಹಾನುಭಾವರು ಎಂದು ಕೇಶವಯ್ಯನವರನ್ನು ನೆನಪಿಸಿಕೊಂಡಿದ್ದಾರೆ"" ಎಂಬ ಒಂದೇ ಮಾತಿನಲ್ಲಿ ಅವರ ವ್ಯಕ್ತಿತ್ವವನ್ನು ಬೇಲೂರು ಶಿಲಾಬಾಲಿಕೆಯ ಕೆತ್ತನೆಯಹಾಗೆ ಆಕರ್ಷಕವಾಗಿ ನಿರೂಪಿಸಿದ್ದಾರೆ.

'ಜೀವನಪ್ರೀತಿ ಮತ್ತು ಜೀವದ ಪ್ರೀತಿ" ಬರಹದಲ್ಲಿ ಮೂಡಿರುವ ಟರ್ರಿಶಿಯಾವೊ ವ್ಯಕ್ತಿ ಚಿತ್ರಣದ ಜತೆಗೆ ತಮ್ಮ ತಂದೆಯವರ ಕೊನೆಗಾಲದ ಚಿತ್ರಣವನ್ನು ಹೃದಯಂಗಮವಾಗಿ ನಿರೂಪಿಸಿದ್ದಾರೆ. ಅಮೆರಿಕೆಯಲ್ಲಿ ಮನೆಬದಲಿಸಿದಾಗ ತಮ್ಮ ತವರೂರಿನಲ್ಲಿದ್ದ ಹಳೇಮನೆಯ ಚಿತ್ರಣವನ್ನು ಸುಂದರವಾಗಿ 'ಮನೆಯಿಂದಮನೆಗೆ" ಲೇಖನದಲ್ಲಿ ನೀಡುತ್ತಾರೆ. ಹೀಗೆ ಹೃದಯಸ್ಪರ್ಶಿ ಜೀವನಾನುಭದ ತುಣುಕುಗಳು ಔಚಿತ್ಯಪೂರ್ಣವಾಗಿ ಇಲ್ಲಿಯ ಬರಹಗಳಲ್ಲಿ ಇಣುಕಿವೆ.

ಕವಿಗಳಾದ ನಟರಾಜ್‌ ಅವರು ಸಾಹಿತ್ಯದ ಬೇರೆಬೇರೆ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದರೂ ಕವಿತೆ ಬಗ್ಗೆ ಅವರಿಗೆ ಹೆಚ್ಚಿನ ವ್ಯಾಮೋಹ. ಇಲ್ಲಿಯ ಬರಹಗಳಲ್ಲಿ ಪ್ರತ್ಯೇಕ ಕವನ ಸಂಕಲನವಾಗುವಷ್ಟು ಅವರದೇ ಆದ ಕವನಗಳು ಉದ್ಧೃತವಾಗಿವೆ. ಕನ್ನಡದ ಅಂಕಣದ ಬರಹಗಳಲ್ಲಿ ಈ ರೀತಿ ಉಂಡುಂಡೆಯಾಗಿ ಸಾಕಷ್ಟು ಪೂರ್ಣ ಕವನಗಳು ಸುಳಿದಿರುವುದು ಈ ಗ್ರಂಥದಲ್ಲೇ ಎಂದರೆ ತಪ್ಪಾಗಲಾರದು. ಈ ಕಾರಣದಿಂದ ಕವನಪ್ರಿಯರಿಗೂ ಈ ಗ್ರಂಥ ಇಷ್ಟವಾಗುತ್ತದೆ.

ನಟರಾಜ್‌ ಅವರ ಬರಹದ ಆಕರ್ಷಣೆ ಎಂದರೆ ಸರಳ ನಿರೂಪಣೆ, ಆಂಗ್ಲಪದಗಳ ಮಿತಬಳಕೆ. ಅಗತ್ಯ ಬಿದ್ದರೆ, ಕನ್ನಡ ಪದನಿರ್ಮಾಣ ಅವರ ಹಿರಿಮೆ. ಪಚ್ಚೆಪರವಾನಗಿ (ಗ್ರೀನ್‌ ಕಾರ್ಡ್‌), ಜೊತೆಪೆಟ್ಟಿಗೆ (ಪುಟ್ಟ ಕ್ಯಾರಿ ಆನ್‌ ಸೂಟ್‌ಕೇಸ್‌), ಕೈಪೆಟ್ಟಿಗೆ (ಬ್ರೀಫ್‌ ಕೇಸ್‌) ತೀರ್ಥಮಂಟಪ (ವೆಟ್‌ ಬಾರ್‌), ಇತ್ಯಾದಿ, ಕೆಲವು ನಿದರ್ಶನಗಳಷ್ಟೆ. ವಿಶಾಲ ಓದಿನ ಹವ್ಯಾಸದ ನಟರಾಜರು ಒಳ್ಳೆಯ ವಿಮರ್ಶಕರೂ ಹೌದು; ಸಹೃದಯರೂ ಹೌದು. ಹಾಗಾಗಿ, ಇಲ್ಲಿ ಹಲವಾರು ಗ್ರಂಥಗಳ ವಿಮರ್ಶೆ ಮತ್ತು ರಸನಿರೂಪಣೆ ಮಾಡಿದ್ದಾರೆ.

''ಪುತಿನ ಅವರ ನೆನಪು"" ಲೇಖನದಲ್ಲಿ, 'ಎಂಭತ್ತರ ನಲುಗು" ಕವಿತಾಸಂಗ್ರಹದಲ್ಲಿನ ಪುತಿನ ಅವರ ಕನ್ನಡಾಭಿಮಾನ ಮತ್ತು ರಸಿಕತೆಯನ್ನು ಗುರುತಿಸಿದ್ದಾರೆ. ವಸಂತಮಾಧವಿ ಅವರ ಸಂಗೀತಶಾಸ್ತ್ರ ಕುರಿತ ಆಂಗ್ಲ ಪುಸ್ತಕದಬಗ್ಗೆ ಬರೆದ ಲೇಖನದಲ್ಲಿ ಪುಸ್ತಕದ ಸಾರಸಂಗ್ರಹವನ್ನು ನೀಡಿದ್ದಾರೆ. ''ಲಾಮಾಮೃತಸಿಂಚನ""ದಲ್ಲಿ ದಲೈ ಲಾಮಾರ ಗ್ರಂಥಗಳಿಂದ ಸುಭಾಷಿತಗಳನ್ನು ಹೆಕ್ಕಿದ್ದಾರೆ. ಮಾಸ್ತಿಯವರ ಸಣ್ಣ ಕತೆಗಳ ಸರಳಪರಿಚಯ ನೀಡಿದ್ದಾರೆ. ತಮ್ಮ ಗುರುಗಳಾಗಿದ್ದ ಯು.ಆರ್‌. ಅನಂತಮೂರ್ತಿಯವರ 'ದಿವ್ಯ" ಕಾದಂಬರಿಯನ್ನು ದಿಟ್ಟತನದಿಂದ ವಿಮರ್ಶಿಸಿದ್ದಾರೆ.

ಈ ಅಂಕಣಸಾಹಿತ್ಯದ ಮುಖ್ಯಭಾಗ ಎಂದರೆ, ಅಮೆರಿಕೆಯ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕುರಿತು ಆಳವಾಗಿ ಚಿಂತಿಸಿರುವ ಲೇಖನಗಳು. ಸಾಮಾಜಿಕ ಕ್ಷೇತ್ರಕ್ಕೆ ಸೇರಿದಂತೆ -- ''ಸುಖ, ಸಂತೋಷ, ಖುಷಿ,"" ಅಮೆರಿಕೆಯಲ್ಲಿ ಹಿಂದೂಧರ್ಮ, ''ಅಗ್ನಿಸಾಕ್ಷಿಯೋ, ಮನಸ್ಸಾಕ್ಷಿಯೋ,"" ''ಮದುವೆ ಮತ್ತು ದಾಂಪತ್ಯಗಳಮೇಲೆ ಇತ್ತೀಚಿನ ಸವಾಲು,"" ''ನೀನಾರಿಗಾದೆಯೋ ಎಲೆ ಬ್ರಾಹ್ಮಣ,"" ''ಬಾಯ್ಕಿಣ್ಣ ಬಾಯ್ಬಿಟ್ಟ,"" ''ಮರಣದಂಡನೆಯೋ ಜೀವಾವಧಿ ಶಿಕ್ಷೆಯೋ"" ಮೊದಲಾದ ಬರಹಗಳು, ಅಮೆರಿಕೆಯ ಧಾರ್ಮಿಕ, ಲೈಂಗಿಕ, ಶೈಕ್ಷಣಿಕ ರಂಗಗಳ ವಿವಿಧಮುಖಗಳ ಸತ್ಯದರ್ಶನ ಮಾಡಿಸುತ್ತವೆ. ಈ ಲೇಖನಗಳಲ್ಲಿ ನಟರಾಜರು ಗಂಭೀರಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ, ಅಮೆರಿಕೆಯ ಸಲಿಂಗವಿವಾಹ ಕುರಿತು ಗಂಭೀರಚಿಂತನೆ ಮಾಡುತ್ತಾರೆ. ತೂಕವಾದ ಬರಹಗಳು ಇಲ್ಲಿವೆ.

ಕೇವಲ ಸಮಸ್ಯೆಗಳ ಚಿತ್ರಣವಷ್ಟೆ ಅಲ್ಲ, ಪರಿಹಾರೋಪಾಯ ತೋರುವ ಲೇಖನಗಳೂ ಇವೆ. ಇದಕ್ಕೆ ನಿದರ್ಶನವೆಂದರೆ, ''ಅಗ್ನಿಸಾಕ್ಷಿಗೆ ಬದಲು ಮನಸ್ಸಾಕ್ಷಿ - ಹೀಗೊಂದು ಮದುವೆ" ಈ ಲೇಖನದಲ್ಲಿ ಭಾರತೀಯ ಮದುವೆ ಪದ್ಧತಿ ವಿವರಗಳೊಂದಿಗೆ ಸಪ್ತಪದಿಯನ್ನೂ ಕ್ಯಾಥೊಲಿಕ್‌ ಸಂಪ್ರದಾಯದ ವಿಧಿಗಳನ್ನೂ ನೀಡಿ ಕುಮಾರಿ ದೀಪಾ ಮತ್ತು ಬೆನ್‌ ವಿವಾಹದಬಗ್ಗೆ ಸ್ವಾರಸ್ಯವಾಗಿ ಬರೆದಿದ್ದಾರೆ.

ಸಪ್ತಪದಿ ಮಂತ್ರಗಳ ಅನುವಾದ, ಕ್ಯಾಥೊಲಿಕ್‌ ಪದ್ಧತಿಯ ವರನ ಪ್ರಮಾಣವಚನ, ತಾಯಿಯ ಅನಿಸಿಕೆ, ಕನ್ಯಾಪಿತೃವಿನ ಕಾವ್ಯವಾಚನ, ಅತಿಥಿಗಳಿಗೆ ಹಂಚಿದ ಕರಪತ್ರದ ವಿವರ ಮೊದಲಾದವನ್ನು ನೀಡಿ ಸರಳವಿವಾಹದ ಮಾದರಿಯನ್ನು ಕಣ್ಣೆದುರಿಗೆ ನಿಲ್ಲಿಸುತ್ತಾರೆ. ಭಾರತೀಯರ ದುಬಾರಿ ಮದುವೆ ಪದ್ಧತಿಗಳನ್ನು ಖಂಡಿಸುತ್ತಾರೆ. ಈ ಸಂದರ್ಭದಲ್ಲಿ, ಸರಳವಿವಾಹಕ್ಕಾಗಿ ಕುವೆಂಪು ಸಿದ್ಧಪಡಿಸಿದ ವಿವಾಹಮಂಗಳ ಸಾಹಿತ್ಯವನ್ನು ಆ ಪ್ರಕಾರ ಸರಳ ಮದುವೆ ಆಗಿರುವವರ ವಿಚಾರವನ್ನು ಲೇಖಕರು ಪ್ರಸ್ತಾಪಿಸಬೇಕಿತ್ತು. ಕುವೆಂಪು ಸೂಚಿಸಿದ ಸಾಮಾಜಿಕ ಸುಧಾರಣೆಗಳಲ್ಲಿ ವಾಸ್ತವಿಕದಲ್ಲಿ ಆಚರಣೆಗೆಬಂದ ಸುಧಾರಣೆ ಇದು. ಭಾರತೀಯ ಮತ್ತು ಅಮೆರಿಕದ ಸಮಾಜಶಾಸ್ತ್ರದ ಅಭ್ಯಾಸಿಗಳಿಗೆ ಇಲ್ಲಿಯ ಲೇಖನಗಳು ಸಾಕಷ್ಟು ಸಾಮಗ್ರಿ ಒದಗಿಸುತ್ತವೆ.

ನಮ್ಮಲ್ಲಿ, ಸಾಹಿತಿಗಳಿಗೆ ರಾಜಕೀಯ ವಿದ್ಯಮಾನಗಳ ಗಾಢಪರಿಚಯ ಸಾಮಾನ್ಯವಾಗಿ ಇರುವುದಿಲ್ಲ. ಆದರೆ, ಕೆಲವು ಸಾಹಿತಿಗಳು ಇದಕ್ಕೆ ಅಪವಾದ. ಹಿಂದಿನ ಕಾಲದ ಹಿರಿಯ ಸಾಹಿತಿಗಳು ಈ ರಂಗದಲ್ಲೂ ನುರಿತಿದ್ದರು. ವೀರಕೇಸರಿ ಸೀತಾರಾಮಶಾಸ್ತ್ರಿ, ತಿ.ತಾ. ಶರ್ಮ, ಮಾಸ್ತಿ, ಸಿದ್ದವನಹಳ್ಳಿ, ಆಲೂರು, ಮುಂತಾದವರ ರಾಜಕೀಯ ಬರಹಗಳನ್ನು ಗಮನಿಸಿದರೆ ಬೆಕ್ಕಸಬೆರಗಾಗುತ್ತೇವೆ.

ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟವಾದ ರಾಜಕೀಯ ವಿದ್ಯಮಾನಗಳನ್ನು ಕುರಿತ ಲೇಖನಗಳ ಸಂಗ್ರಹವಾದ ''ಸಂಪಾದಕೀಯಗಳು"" ಹೊತ್ತಿಗೆಗಳು ಇಂದಿಗೂ ಅಧ್ಯಯನಯೋಗ್ಯವಾಗಿವೆ. ನಟರಾಜ್‌ ಅವರು, ಅಮೆರಿಕೆಯ ರಾಜಕೀಯ ವಿದ್ಯಮಾನಗಳನ್ನು ಹೊರಗೆನಿಂತೇ ಸಾಕಷ್ಟು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ''ನಂಬಿದಂತಿರಬೇಕು, ನಂಬದೆಲೆ ಇರಬೇಕು,"" ''ಆಕಾಶಮಾರ್ಗದಲಿ ಕಠೋಪನಿಷತ್ತು,"" ''ಚುನಾವಣೆ ಮತ್ತು ಚರ್ಚಾಸ್ಪರ್ಧೆ,"" ''ಮಾನವಜೀವಕ್ಕೇನು ಬೆಲೆ,"" ''ಅಧ್ಯಕ್ಷಭಾಷಣಕ್ಕೆ ಜೈ ಎನ್ನುವಿರೋ, ಛೀ ಎನ್ನುವಿರೋ"" ಮುಂತಾದ ಲೇಖನಗಳಲ್ಲಿ ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಸೂಕ್ಷ್ಮನೋಟಗಳು ಸೊಗಸಾಗಿ ನಿರೂಪಿತವಾಗಿವೆ. ಸಾಹಿತಿ ನಟರಾಜ್‌ ಅವರಿಗೆ ಇಷ್ಟೊಂದು ಆಳವಾದ ರಾಜಕೀಯ ವಿದ್ಯಮಾನಗಳ ಅರಿವಿರುವುದು ಅಚ್ಚರಿಯ ಸಂಗತಿ.

ನಟರಾಜರ ಜಾಲತರಂಗದ ಲೇಖನಗಳನ್ನು ಓದುತ್ತಾಹೋದಂತೆಲ್ಲಾ, ಒಬ್ಬ ಸಾಹಿತಿ, ಕವಿ, ಕಲಾಪ್ರಿಯ, ಪತ್ರಿಕಾವರದಿಗಾರ, ವಿಮರ್ಶಕ, ಸಂದರ್ಶಕ, ನಿರೂಪಕ, ಮೊದಲಾದ ಬರಹಪ್ರಪಂಚದ ವಿವಿಧಲೇಖಕರೆಲ್ಲಾ ಒಬ್ಬರಲ್ಲೇ ಆವಿರ್ಭವಿಸಿದಂತೆ ಭಾಸವಾಗುತ್ತದೆ. ನಟರಾಜ್‌ ಅವರ ಬಹುಮುಖ ಪ್ರತಿಭೆಗೆ ರನ್ನಗನ್ನಡಿ ಈ ಅಂಕಣಬರಹಗಳ ಗ್ರಂಥ. ಯಂತ್ರನಾಶದೊಂದಿಗೆ ಅಳಿಸಿಹೋಗಬಹುದಾದ, ಪತ್ರಿಕೆಗಳಲ್ಲಿ ಓದಿ, ಸಭೆಗಳಲ್ಲಿ ಕೇಳಿ, ಆಕಾಶವಾಣಿಯಲ್ಲಿ ಆಲಿಸಿ ಆನಂತರ ಕಣ್ಮರೆಯಾಗಿಬಿಡಬಹುದಾದ ಬರಹಗಳನ್ನೆಲ್ಲ ಒಂದೆಡೆ ಒಟ್ಟುಗೂಡಿಸಿ ಸ್ಥಿರವಾಗಿ ಸಿಗುವಂತೆ ಪುಸ್ತಕರೂಪದಲ್ಲಿ ಪ್ರಕಟಿಸಿ ಕನ್ನಡಸಾರಸ್ವತಲೋಕಕ್ಕೆ ಒಳ್ಳೆಯ ಕೊಡುಗೆಯನ್ನು ನಟರಾಜ್‌ಅವರು ನೀಡಿದ್ದಾರೆ.

ಕೆಲವು ಲೇಖನಗಳು ದೀರ್ಘವೆನಿಸಿದರೂ, ಹಲವು ಪತ್ರಿಕಾವರದಿಗಳಂತೆ ಸಾಮಾನ್ಯವೆನಿಸಿದರೂ, ಮತ್ತೆ ಕೆಲವು ಅಷ್ಟೇನೂ ಮಹತ್ವದ್ದಲ್ಲವೆನಿಸಿದರೂ, ಅವುಗಳ ಸಂಖ್ಯೆ ಅತ್ಯಲ್ಪ. ಬಹುತೇಕ ಲೇಖನಗಳು, ಸಾರವತ್ತಾಗಿವೆ, ಅರ್ಥಪೂರ್ಣವಾಗಿವೆ, ಸಕಾಲಿಕವಾಗಿವೆ, ವಿಚಾರಪ್ರಚೋದಕವಾಗಿವೆ, ಮಾಹಿತಿಯುಕ್ತವಾಗಿವೆ, ಸುಧಾರಕರಿಗೆ ಸವಾಲಾಗಿವೆ, ಓದುಗರಿಗೆ ರಸದೌತಣವಾಗಿವೆ, ಕನ್ನಡ ಅಂಕಣಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

ಕನ್ನಡಕ್ಕೆ ಅಮೆರಿಕನ್ನಡ ಸಾಹಿತಿಗಳು ನೀಡಿದ ಶ್ರೇಷ್ಠಕೃತಿಗಳಲ್ಲಿ ಒಂದಾಗಿದೆ ಈ ಗ್ರಂಥ. ಇಂಥಾ ಕೃತಿಗಳನ್ನು ಹೆಚ್ಚುಹೆಚ್ಚಾಗಿ ಮಿತ್ರ ನಟರಾಜ್‌ ಅವರು ರಚಿಸಲಿ. ಅದಕ್ಕೆ ತಕ್ಕ ಪ್ರೋತ್ಸಾಹವನ್ನು ಇನ್ನೂ ಹೆಚ್ಚುಹೆಚ್ಚಾಗಿ ಅಮೆರಿಕೆಯ ಕನ್ನಡಿಗರೂ ಹೊರಗಿನ ಕನ್ನಡಿಗರೂ ಉದಾರಮನದಿಂದ ನೀಡಲಿ ಎಂದು ಹಾರೈಸುತ್ತೇನೆ.

ಪ್ರೊ. ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕ
ಬೆಂಗಳೂರು

ಬಿಡಾರ: 9012 ನೆಲ್ಸನ್‌ ವೇ
ಕೊಲಂಬಿಯ, ಮೇರಿಲ್ಯಾಂಡ್‌, 21045
ಅಮೆರಿಕದ ಸಂಯುಕ್ತ ಸಂಸ್ಥಾನಗಳು

English summary
Preface to Dr.M.S.Nararajs Jalataranga by G.Ashwathanarayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X