ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ ಮತ್ತು ಒಂದು ರುಪಾಯಿ...

By Prasad
|
Google Oneindia Kannada News

Mother's love and value of money
ಇದು ಕಥೆಯಲ್ಲ, ಹಿಂದೊಮ್ಮೆ ನಡೆದು ಹೋದ ಪ್ರಸಂಗ. ಆದರೆ, ಈಗಿನ ಜಮಾನಾದವರಿಗೆ ಇದನ್ನು ನಂಬುವುದು ಕಷ್ಟ ಅನ್ನಿಸಬಹುದು. ಹಾಗಾಗಿ, ಇದು ಕಥೆ ಅಂದುಕೊಂಡರೆ ಕಥೆ, ಕಲ್ಪನೆ ಅಂದುಕೊಂಡರೆ ಕಲ್ಪನೆ. ಅನುಭವ ಅಂದುಕೊಂಡರೆ ಅನುಭವ. ಅಥವಾ ಇಪ್ಪತ್ತೈದು ವರ್ಷಗಳ ಹಿಂದಿನ ಮಧ್ಯಮ ವರ್ಗದ ಕುಟುಂಬವೊಂದರ ಬದುಕಿನ ಸಿಂಪಲ್ ಚಿತ್ರಣ ಅಂದುಕೊಂಡರೆ- ಅದು!

* ಎ.ಆರ್. ಮಣಿಕಾಂತ್

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ವ್ಯಾಪ್ತಿಯಲ್ಲಿರುವುದು ತಟ್ಟೇಕೆರೆ ಹಿರಿಯ ಪ್ರಾಥಮಿಕ ಶಾಲೆ. ಈ ಊರು ಕೆ.ಆರ್.ಪೇಟೆ-ನಾಗಮಂಗಲ ತಾಲೂಕುಗಳ ಮಧ್ಯೆ ಇದೆ. ಇಷ್ಟು ಹೇಳಿದರೆ ತಟ್ಟೇಕೆರೆ ಎಂಬ ಕುಗ್ರಾಮದ ಗುರುತು ತಕ್ಷಣಕ್ಕೆ ಸಿಗುವುದಿಲ್ಲ. ಹಾಗಾಗಿ ಜೋಗಾದಿ ಸಂತೆ ಮೈದಾನದಿಂದ ಸೀದಾ ಕೆಳಕ್ಕೆ, ಎರಡು ಮೈಲಿ ನಡೆದರೆ ಮೊದಲು ಆಯಿತನಹಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಅರ್ಧ ಕಿಲೋಮೀಟರು ನಡೆದರೆ ಸಿಗುವ ಊರೇ- ತಟ್ಟೇಕೆರೆ! ಒಂದು ಊರಿನ ವಿಳಾಸವನ್ನು ಹೀಗೆ ಸುತ್ತಿ ಬಳಸಿ ಹೇಳುವುದೇ ಬೇಡ ಎಂದುಕೊಂಡ ವಿದ್ಯಾವಂತರು- ಕವಿ ರಾಮಚಂದ್ರ ಶರ್ಮ ಅವರ ಹುಟ್ಟೂರು ಬೋಗಾದಿ. ಅಲ್ಲಿ ಯಾರನ್ನು ಕೇಳಿದರೂ ತಟ್ಟೇಕೆರೆಗೆ ದಾರಿ ತೋರಿಸ್ತಾರೆ. ಅರ್ಧಗಂಟೆ ನಡೆದರೆ ಸಾಕು, ಊರು ಸಿಕ್ಕಿಬಿಡುತ್ತೆ' ಎಂದು ಹೇಳಲು ಕಲಿತಿದ್ದರು. ಜತೆಗಿದ್ದವರಿಗೂ ಇದನ್ನೇ ಹೇಳಿಕೊಟ್ಟಿದ್ದರು!

ಅವತ್ತು ಏನಾಯಿತೆಂದರೆ-ಕನ್ನಡ ಪಾಠ ಮಾಡುತ್ತಿದ್ದ ಮರಿಯಪ್ಪ ಮಾಸ್ಟರು, ತಟ್ಟೇಕೆರೆಯ ಪ್ರಾಥಮಿಕ ಶಾಲೆಯ ಬೋರ್ಡಿನ ಒಂದು ತುದಿಯಲ್ಲಿ ನಿಂತು, ಎಡಗೈಲಿ ಪುಸ್ತಕ ಹಿಡಿದುಕೊಂಡು -
ವಸಂತ ಬಂದ ಋತುಗಳ ರಾಜ, ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಳಿಗಳೆ ಚೆಂದ
ಕೂವೂ, ಜಗ್‌ಜಗ್, ಪುವ್ವೀ, ಟೂವಿಟ್ಟವೂ!'

ಎಂದು ರಾಗವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರು. ವಸಂತ ಬಂದ ಎಂದು ಹೇಳುವಾಗ ಅವರು ಒಂದು ಬಾರಿ ಥೇಟ್ ಡಾಕ್ಟರ್ ರಾಜಕುಮಾರ್ ಶೈಲಿಯಲ್ಲಿ ಮೇಲಿಂದ ಕೆಳಗೆ ಕೈ ಮಾಡಿ ತೋರಿಸುತ್ತಿದ್ದರು. ಇನ್ನೊಮ್ಮೆ ಸೀದಾ ವಿದ್ಯಾರ್ಥಿಗಳನ್ನೇ ನೋಡಿ, ಹಾಡುತ್ತ, ಹುಬ್ಬು ಎಗರಿಸಿ, ನಗುತ್ತಾ ಹೇಳುತ್ತಿದ್ದರು. ಪದ್ಯ ಓದುತ್ತಾ ಓದುತ್ತಾ ಮೈಮರೆತು ಕುಣಿತದ ಧಾಟಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಅದನ್ನು ಕಂಡು ಹುಡುಗರಿಗೆ ವಿಪರೀತ ಖುಷಿಯಾಗುತ್ತಿತ್ತು.

ಹೀಗೆ, ಮಕ್ಕಳೊಂದಿಗೆ ಮಗುವಾಗಿ ನಲಿಯುತ್ತಾ ಮರಿಯಪ್ಪ ಮಾಸ್ಟರು ಪದ್ಯ ಓದುತ್ತಿದ್ದಾಗಾಲೇ ಬಾಗಿಲಲ್ಲಿ ಹೆಡ್‌ಮಾಸ್ಟರ್ ರಾಮೇಗೌಡರ ಮುಖ ಕಾಣಿಸಿತು. ತಕ್ಷಣವೇ ಮರಿಯಪ್ಪ ಮಾಸ್ಟರು ಪಾಠ ನಿಲ್ಲಿಸಿದರು. ಸಂಭ್ರಮದಿಂದಲೇ ಒಳಗೆ ಬಂದ ರಾಮೇಗೌಡರು, ಹರೀಶನಿಗೆ ಈ ವರ್ಷ ತಾಲೂಕಿಗೇ ಅತಿ ಹೆಚ್ಚು ಅಂಕ ಬಂದಿದೆ. ಹಾಗಾಗಿ 100 ರೂಪಾಯಿ ಸ್ಕಾಲರ್ ಶಿಪ್ ಬಂದಿದೆ' ಎಂದರು. ನಂತರ ಹರೀಶನನ್ನೇ ಕರೆದು ನೋಡೋ ಮರೀ, ಈ ಅರ್ಜೀನ ನಿಮ್ಮ ತಂದೆ ಕೈಲಿ ತುಂಬಿಸಿ, ಅದಕ್ಕೆ ಅವರ ಸಹಿ ಮಾಡಿಸ್ಕೊಂಡು ಬಾ. ಇದನ್ನು ನಾಳೇನೇ ನಮಗೆ ವಾಪಸ್ ಕೊಡಬೇಕು. ನೀನು ಈಗಲೇ ಹೋಗಿ ನಿಮ್ಮ ತಂದೆ ಹತ್ರ ಸೈನ್ ಮಾಡಿಸ್ಕೊಂಡು ಬಾ' ಅಂದರು-

ಹರೀಶನ ತಂದೆ ಕೆ.ಆರ್. ಪೇಟೆ ಎಂಬ ತಾಲೂಕಿನಲ್ಲಿ ಗುಮಾಸ್ತರಾಗಿದ್ದರು. ಸಣ್ಣ ಸಂಬಳದಲ್ಲಿ ಅವರು ದೊಡ್ಡ ಕುಟುಂಬವನ್ನು ಸಲಹಬೇಕಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಈಗಿನಂತೆ ಗಂಟೆಗೆ ಎರಡರ ಲೆಕ್ಕದಲ್ಲಿ ಬಸ್ಸುಗಳಿರಲಿಲ್ಲ. ಅಥವಾ ತಾಲೂಕಾಫೀಸಿನ ಗುಮಾಸ್ತರು ಬೈಕ್ ಇಟ್ಟುಕೊಳ್ಳುವ ಸಾಧ್ಯತೆ ಕೂಡ ಇರಲಿಲ್ಲ. ಹಾಗಾಗಿ, ಹರೀಶನ ತಂದೆ ತಾವು ನೌಕರಿಗಿದ್ದ ಊರಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಹುಟ್ಟೂರಿಗೆ ಬಂದು ಹೆಂಡತಿ ಹಾಗೂ ಕುಟುಂಬದವರ ಯೋಗಕ್ಷೇಮ ನೋಡಿಕೊಂಡು ಹೋಗುತ್ತಿದ್ದರು. ಈ ಎಲ್ಲ ವಿಷಯವೂ ಹೆಡ್ ಮಾಸ್ಟರ್ ರಾಮೇಗೌಡರಿಗೆ ಗೊತ್ತಿತ್ತು. ಈ ಕಾರಣದಿಂದಲೇ ಅವರು ಹರೀಶನಿಗೆ ಅರ್ಧ ದಿನದ ರಜೆ ನೀಡಿ ನಿಮ್ಮ ತಂದೆಯ ಬಳಿಗೆ ಹೋಗಿ ಸೈನ್ ಮಾಡಿಸಿಕೊಂಡು ಬಾ ಎಂದಿದ್ದರು.

ಆ ದಿನಗಳಲ್ಲಿ ಹರೀಶನಿದ್ದ ಊರಿಂದ ಕೆ.ಆರ್. ಪೇಟೆಗೆ ಬೆಳಗ್ಗೆ ಎಂಟೂವರೆಗೆ ಒಂದು, ಮಧ್ಯಾಹ್ನ ಎರಡು ಗಂಟೆಗೆ ಇನ್ನೊಂದು, ಸಂಜೆ ಆರೂವರೆಗೆ ಮತ್ತೊಂದು-ಹೀಗೆ ಮೂರು ಬಸ್‌ಗಳಿದ್ದವು. ಈ ಪೈಕಿ ಸಂಜೆಯ ಬಸ್ಸು, ಬಂದರೆ ಬಂತು, ಇಲ್ಲಾಂದ್ರೆ ಇಲ್ಲ! ಹಾಗಿತ್ತು. ಹೆಡ್‌ಮಾಸ್ಟರೇ ರಜೆ ನೀಡಿದ ಮೇಲೆ ಭಯವೆಲ್ಲಿದೆ? ಹರೀಶ, ಶಾಲೆಯಿಂದ ಒಂದೇ ಓಟದಲ್ಲಿ ಮನೆಗೆ ಬಂದ. ಒಂದೇ ನಿಮಿಷದಲ್ಲಿ ಅಮ್ಮನಿಗೆ ವಿಷಯ ತಿಳಿಸಿದ. ಈಗ್ಲೇ ಹೋಗ್ಬೇಕಂತೆ. ಬಸ್‌ಚಾರ್ಜ್‌ಗೆ ದುಡ್ಡು ಕೊಡವ್ವಾ ಎಂದ. ಅವನ ಮಾತಲ್ಲಿ ಅವಸರ-ಖುಷಿ ಎರಡೂ ಇತ್ತು. ಅವನ ಖುಷಿಗೆ ಒಂದಲ್ಲ, ಎರಡು ಕಾರಣಗಳಿದ್ದವು. ಮೊದಲನೆಯದು- ಅವನ ಊರಿಂದ ಕೆ.ಆರ್. ಪೇಟೆಗೆ ಹೋಗಲು ರೆಡಿಯಾದರೆ, ಅವನಿಗೆ ಬಸ್ ಜಾರ್ಜ್ ಎಂದು ಒಂದು ರೂಪಾಯಿ ಸಿಗುತ್ತಿತ್ತು. ಅದರಲ್ಲಿ ಬಸ್‌ಗೆ ತೊಂಬತ್ತು ಪೈಸೆ ಖರ್ಚಾಗಿ ಹತ್ತು ಪೈಸೆ ಉಳಿಯುತ್ತಿತ್ತು. (ಆ ಹತ್ತು ಪೈಸೆ ಇವತ್ತಿನ ಹತ್ತು ರೂಪಾಯಿಗೆ ಸಮ!) ಹಾಗೆ ಉಳಿದ ದುಡ್ಡಿಗೆ ಒಂದು ದೊಡ್ಡ ಸೈಜಿನ ಮೈಸೂರ್‌ಪಾಕ್ ಸಿಗುತ್ತಿತ್ತು. ಹಳದಿ-ಕಂದು ಮಿಶ್ರಣದ ಬಣ್ಣದಲ್ಲಿದ್ದ, ತುಂಬ ಗಟ್ಟಿಯೂ ಇರುತ್ತಿದ್ದ ಅದನ್ನು ಚೀಪುತ್ತ ಚೀಪುತ್ತಲೇ ಹರೀಶ, ಅರ್ಧ ಕಿಲೋಮೀಟರ್ ದೂರವಿದ್ದ ಅಪ್ಪನ ಮನೆ ತಲುಪಿಕೊಳ್ಳುತ್ತಿದ್ದ. ಎರಡನೇ ಕಾರಣವೆಂದರೆ- ಕೆ.ಆರ್. ಪೇಟೆಯಲ್ಲಿ ಒಂದು ಚಿತ್ರಮಂದಿರವಿತ್ತು. ಅಲ್ಲಿ ರಾಜ್‌ಕುಮಾರ್ ನಟಿಸಿದ ಯಾವುದೇ ಚಿತ್ರ ಓಡುತ್ತಿದ್ದರೂ ಹರೀಶನ ತಂದೆ ತಪ್ಪದೇ ಸಿನಿಮಾ ತೋರಿಸುತ್ತಿದ್ದರು. ಅಥವಾ ಪೌರಾಣಿಕ/ ಐತಿಹಾಸಿಕ ಸಿನಿಮಾಗಳಾದರೆ ಅವು ಬೇರೆ ಭಾಷೆಯವಾಗಿದ್ದರೂ ಸೈ. ಮಗನನ್ನು ಕರೆದೊಯ್ಯುತ್ತಿದ್ದರು.

ಅಪ್ಪನೊಂದಿಗೆ ಸಿನಿಮಾ ನೋಡಿ ಬಂದು ಮರುದಿನ ಶಾಲೆಯ ಎಲ್ಲ ಗೆಳೆಯರಿಗೂ ಸ್ಟೋರಿ, ಹಾಡು ಹೇಳಿ ಸ್ಕೋಪ್ ತಗೋಬಹುದಲ್ಲ? ಅದನ್ನು ನೆನಪು ಮಾಡಿಕೊಂಡೇ ಖುಷಿಯಾಗುತ್ತಿದ್ದ ಹರೀಶ. ಜತೆಗೆ ಬಸ್‌ನಲ್ಲಿ ಕಂಡಕ್ಟರ್ ಏನಾದರೂ ಟಿಕೇಟ್ ಕೊಡದೇ ಹೋದರೆ ಅವನಿಗೆ ಸ್ವಲ್ಪ ಹಣವನ್ನಷ್ಟೇ ನೀಡಿ ಉಳಿದಿದ್ದರಲ್ಲಿ ಪೆನ್ಸಿಲ್-ರಬ್ಬರ್ ಖರೀದಿಸುವ ಯೋಚನೆ ಕೂಡ ಹರೀಶನಿಗಿತ್ತು. ಈ ಎಲ್ಲಾ ಲೆಕ್ಕಾಚಾರಗಳ ಮಧ್ಯೆಯೇ ಹರೀಶ ಗಬಗಬನೆ ಊಟ ಮಾಡುತ್ತಿದ್ದ. ಸರಿಯಾಗಿ ಎರಡು ಗಂಟೆಗೆ ಬಸ್ಸು ಬರುತ್ತಿದ್ದುದರಿಂದ ಅವನು ಆದಷ್ಟು ಬೇಗ ಮನೆ ಬಿಟ್ಟು ಅರ್ಧ ಕಿಲೋ ಮೀಟರು ದೂರವಿದ್ದ ಬಸ್‌ನಿಲ್ದಾಣಕ್ಕೆ ಬಂದು ಬಸ್ ಹಿಡಿಯಬೇಕಿತ್ತು.

ಹರೀಶ ಹೀಗೆ ಗಡಿಬಿಡಿಯಲ್ಲಿ ಊಟ ಮುಗಿಸಿದ ಹೊತ್ತಿನಲ್ಲೇ ಆ ಕಡೆ ಅವನ ತಾಯಿ ಕಾವೇರಮ್ಮ ಬಸ್‌ಚಾರ್ಜ್‌ಗೆ ಬೇಕಾದ ಒಂದು ರೂಪಾಯಿಗಾಗಿ ಆರು ಮನೆಗಳಲ್ಲಿ ಸಾಲ ಕೇಳಿದ್ದಳು. ಆರನೇ ಮನೆಯವರು ಕಡೆಗೂ ಕನಿಕರ ತೋರಿ, ನಾಡಿದ್ದು ವಾಪಸ್ ಕೊಡಬೇಕು ಎಂದು ಎಚ್ಚರಿಸಿಯೇ ದುಡ್ಡು ಕೊಟ್ಟಿದ್ದರು. ಮನೆಗೆ ಬಂದು ಬೆವರು ಒರೆಸಿಕೊಳ್ಳುತ್ತಾ ನೀಲಿ ಕಲರಿನ ಆ ಒಂದು ರೂಪಾಯಿ ನೋಟನ್ನು ಮಗನ ಜೇಬಿಗಿಟ್ಟಳು ಕಾವೇರಮ್ಮ. ಅದೇ ವೇಳೆಗೆ, ದೂರದಲ್ಲಿ ಪ್ರೇಂ ಎಂದು ಬಸ್‌ನ ಹಾರ್ನ್ ಸದ್ದಾಯಿತು. ಬಸ್ಸು ಬರುತ್ತಿದೆ ಎಂದು ಗೊತ್ತಾದ ತಕ್ಷಣ, ಹರೀಶ ಕೈತೊಳೆಯುವುದನ್ನೂ ಮರೆತು ಪೇರಿಕಿತ್ತ. ಹಿಂದೆಯೇ ಓಡಿಬಂದ ಕಾವೇರಮ್ಮ, ಬಸ್ ಹತ್ತುವಾಗ ಹುಷಾರು, ಕಿಟಕಿಯಿಂದ ಹೊರಗೆ ಕೈ ಹಾಕಬೇಡ. ಪೂರ್ತಿ ಕಿಟಕಿ ತೆಗೆದು ಕೊತ್ಕೋಬೇಡ, ಟಿಕೆಟ್ ತಗೊಳ್ಳಲು ಮರೀಬೇಡ ಎಂದೆಲ್ಲಾ ಹೇಳಿದಳು. ಅಮ್ಮನ ಎಲ್ಲ ಮಾತಿಗೂ ಹೂಂ ಹೂಂ ಅಂದ ಹರೀಶ ಒಂದೇ ಸಮನೆ ಓಟಕಿತ್ತ. ಅವನು ಏದುಸಿರು ಬಿಡುತ್ತಾ ಬಸ್‌ನಿಲ್ದಾಣಕ್ಕೆ ಬರುವುದಕ್ಕೂ ಕೆಎಸ್‌ಆರ್‌ಟಿಸಿ ಬಸ್ ಬಂದು ನಿಲ್ಲುವುದಕ್ಕೂ ಸರಿಹೋಯಿತು.

ತಡಬಡಾಯಿಸುತ್ತಲೇ ಬಸ್ ಹತ್ತಿದ ಹರೀಶ ಕಿಟಕಿ ಪಕ್ಕದ ಸೀಟಿನಲ್ಲಿ ಕೂತ. ಮರುಕ್ಷಣವೇ ಬಸ್ ಹೊರಟಿತು. ಒಂದೆರಡು ನಿಮಿಷದ ನಂತರ ದೂರದಲ್ಲಿ ಕಾಣುತ್ತಿದ್ದ ತನ್ನ ಊರನ್ನೇ ನೋಡಲು ಮುಂದಾದ ಹರೀಶ, ಇದ್ದಕ್ಕಿದ್ದಂತೆ ಕಂಗಾಲಾದ. ಏಕೆಂದರೆ, ಆ ಕಾಲುದಾರಿಯಲ್ಲಿ ಕಾವೇರಮ್ಮ ತನ್ನ ಕಿರಿಯ ಮಗನನ್ನೂ ಕಂಕುಳಲ್ಲಿ ಇಟ್ಟುಕೊಂಡು ಹರೀ, ಹರೀ, ಹರೀಶಾ, ಹರೀಶಾ ಎಂದು ಚೀರುತ್ತಾ ಓಡೋಡಿ ಬರುತ್ತಿದ್ದಳು. ಅವ್ವ ಕೂಗುತ್ತಿರುವುದು ತನ್ನನ್ನೇ ಎಂದು ಗೊತ್ತಾದ ತಕ್ಷಣ ಹರೀಶ, ಬಸ್‌ನ ಒಳಗಿಂದಲೇ -

ಅವ್ವಾ, ಏನವ್ವಾ? ಬಸ್ ಸಿಕ್ಕಿದೆ, ಹೋಗ್ತಾ ಇದೀನಿ' ಎಂದು ಜೋರಾಗಿ ಕೂಗಿ ಹೇಳಿದ. ಹರೀಶ ಹೀಗೆ ಉತ್ತರಿಸಿದ ನಂತರವೂ, ಕಾವೇರಮ್ಮ ಕಾಲುದಾರಿಯಲ್ಲಿದ್ದ ಹೊಲಗಳ ಮಧ್ಯೆ ಏದುಸಿರು ಬಿಡುತ್ತಾ ಓಡಿ ಬರುತ್ತಿದ್ದಳು. ಮಧ್ಯೆ ಮಧ್ಯೆ ಹರೀ, ಹರೀಶಾ, ಹರೀಶಾ... ಎಂದು ಕೂಗುತ್ತಿದ್ದಳು. ಅವ್ವನ ಈ ಅವತಾರ ಕಂಡೇ ಏನೋ ಯಡವಟ್ಟಾಗಿದೆ ಎಂದು ಹರೀಶನಿಗೆ ಖಚಿತವಾಗಿ ಹೋಯಿತು. ಅವನು ಕಿಟಕಿಯಿಂದಲೆ- ಅವ್ವಾ, ಬಸ್ ಸಿಕ್ಕಿದೆ ಹೋಗ್ತಾ ಇದೀನಿ. ಹೆದರಬೇಡ. ನಂಗೇನೂ ತೊಂದ್ರೆ ಇಲ್ಲ' ಎನ್ನುತ್ತಿದ್ದವನು, ಛಕ್ಕನೆ ಮಾತು ನಿಲ್ಲಿಸಿ, ಸೀದಾ ಡ್ರೈವರ್ ಬಳಿ ಬಂದು- ಸಾರ್, ನಮ್ಮಮ್ಮ ಓಡಿ ಬರ್‍ತಾ ಇದಾರೆ. ನಾನು ಇಳ್ಕೋತೀನಿ. ಬಸ್ ನಿಲ್ಸಿ ಸಾರ್' ಎಂದು ಗೋಗರೆದ. ಈ ಮಾತು ಕೇಳಿಸಲೇ ಇಲ್ಲ ಎಂಬಂತೆ ಡ್ರೈವರ್ ಕೂತಿದ್ದಾಗ ಮತ್ತೊಮ್ಮೆ ಅದೇ ಮಾತು ಹೇಳಿ ಕೈ ಮುಗಿದ.

ಆ ವೇಳೆಗೆ, ದೂರದಲ್ಲಿ ಓಡೋಡಿ ಬರುತ್ತಿದ್ದ ಕಾವೇರಮ್ಮ ಡ್ರೈವರ್‌ಗೂ ಕಾಣಿಸಿದಳು. ಆತ ತಕ್ಷಣವೇ ಬಸ್ ನಿಲ್ಲಿಸಿದ. ಹರೀಶ ಬಸ್ ಇಳಿದು ಅಮ್ಮನ ಬಳಿ ಓಡೋಡಿ ಬಂದಾಗ, ಆ ಕಡೆ ಬಸ್ ಹೋಗೇಬಿಟ್ಟಿತು. ಹರೀಶ, ಕೆದರಿದ ತಲೆ, ನಡುಗುತ್ತಿದ್ದ ಕೈಕಾಲು, ಸಂಕಟದ ಮೋರೆಯಲ್ಲಿದ್ದ ತಾಯಿಯ ಮುಂದೆ ನಿಂತು - ಯಾಕವ್ವಾ, ಏನಾಯ್ತು?' ಅಂದ.

ಕಾವೇರಮ್ಮ ಸಂಕಟದ ಮುಖ ಮಾಡಿಕೊಂಡು-ಹರೀ, ನಿಮ್ಮ ಅಪ್ಪನ ಹತ್ರ ಸೈನ್ ಮಾಡಿಸಬೇಕಲ್ಲ; ಆ ಅರ್ಜಿ ಎಲ್ಲಿ?' ಅಂದಳು. ಬಸ್ ಹಿಡಿಯುವ ಅವಸರದಲ್ಲಿ ತಾನು ಅರ್ಜಿಯನ್ನೇ ತಗೊಂಡಿಲ್ಲ ಎಂಬುದು ಹರೀಶನಿಗೆ ಆಗ ನೆನಪಾಯಿತು. ಮುದುರಿಕೊಂಡಿದ್ದ ಅದನ್ನು ಹರೀಶನಿಗೆ ಕೊಡುತ್ತಾ ಕಾವೇರಮ್ಮ ಹೇಳಿದಳು : ಬಸ್‌ಚಾರ್ಜ್‌ಗೆ ಒಂದು ರೂಪಾಯಿ ಹೊಂದಿಸಬೇಕು ಮಗಾ. ಅಷ್ಟು ದುಡ್ಡೇ ಇರಲಿಲ್ಲ ನನ್ನ ಹತ್ರ. ಅದನ್ನೂ ಸಾಲ ತಂದುಕೊಟ್ಟೆ. ಈಗ ನೀನು ಹೋಗಿಬಿಟ್ಟಿದ್ರೆ, ಅರ್ಧ ದಾರಿಯಿಂದ ವಾಪಸ್ ಬರಬೇಕಿತ್ತು. ಆಗ ಮತ್ತೆ ಹೋಗಲು ಇನ್ನೂ ಒಂದ್ರುಪಾಯಿ ಸಾಲ ಮಾಡಬೇಕಿತ್ತು. ಮತ್ತೆ ಯಾರಲ್ಲಿ ಸಾಲ ಕೇಳಲಿ? ಅದನ್ನು ತಪ್ಪಿಸಬೇಕು ಅಂತಾನೇ ನಾನೂ ಓಡೋಡಿ ಬಂದೆ... ಸಂಜೆಯ ಬಸ್‌ಗೆ ಹೋದರಾಯ್ತು. ಮನೆಗೆ ಹೋಗೋಣ ಬಾ...'

***
ಪ್ರಿಯ ಓದುಗಾ, ಇವತ್ತು ಹರೀಶ ಈ ಬಡಾ ಬೆಂಗಳೂರಲ್ಲಿ ನೌಕರಿಯಲ್ಲಿದ್ದಾನೆ. ಅವನಿಗೆ ಭರ್ತಿ 22 ಸಾವಿರ ಸಂಬಳ ಬರುತ್ತದೆ. ಹಾಗಿದ್ದರೂ ಮೂವತ್ತು ವರ್ಷಗಳ ಹಿಂದಿನ ಒಂದು ರೂಪಾಯಿ ನೋಟು ಅವನ ಬಳಿ ಈಗಲೂ ಇದೆ. ಇವತ್ತು ಯಾವ್ಯಾವುದೋ ಕಾರಣಕ್ಕೆ ಹರೀಶ ವಾರವಾರವೂ ಸಾವಿರಾರು ರೂಪಾಯಿ ಕಳೆಯುತ್ತಾನೆ. ಅಂಥ ಸಂದರ್ಭದಲ್ಲೆಲ್ಲ ಅವನಿಗೆ ಅಮ್ಮನ ನೆನಪಾಗುತ್ತದೆ. ಈಗ, ಊರಿಗೆ ಹೋದಾಗಲೆಲ್ಲ ಅಮ್ಮನ ಕೈಗೆ ಐನೂರರ ನೋಟುಗಳನ್ನೇ ಇಟ್ಟು ಬರುತ್ತಾನೆ ನಿಜ. ಆದರೆ, ಅಮ್ಮ ಕೊಟ್ಟಿದ್ದ ಆ ಒಂದು ರೂಪಾಯಿಗಿದ್ದ ಬೆಲೆ, ಆ ಅಂಗೈಯಗಲದ ನೋಟಿನ ಸಂಪಾದನೆಗೆ ಅವಳು ಪಟ್ಟ ಕಷ್ಟ ನೆನಪಾದರೆ ಅವನಿಗೆ ಕಣ್ತುಂಬಿ ಬರುತ್ತದೆ. ಆಗೆಲ್ಲ ಹರೀಶ ಬಿಕ್ಕಳಿಸುತ್ತಾ ಹೇಳುತ್ತಾನೆ: ಅಮ್ಮಾ, ಯು ಆರ್ ಗ್ರೇಟ್...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X