• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಅದ್ಭುತ ಬಾಲಕನಿಗೆ ಅಸಾಧ್ಯವೆಂಬುದೇ ಇಲ್ಲ

By * ಎಆರ್ ಮಣಿಕಾಂತ್
|

ಮುಂದೇನಾಯಿತು ಎಂಬುದನ್ನು ಸ್ಟೇಸಿ ವಿವರಿಸುವುದು ಹೀಗೆ : ನಿಕ್ ಹೇಳಿ ಕೇಳಿ ನನ್ನ ಮಗ. ಅದೂ ಏನು? ಕಡೆಯ ಮಗ. ಅವನನ್ನು ಮುದ್ದಿಸಬೇಕು ಅನಿಸುತ್ತಿತ್ತು. ಅವನ ಅಂಗಾಲುಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಳ್ಳಬೇಕು ಅನಿಸುತ್ತಿತ್ತು. ಅವನ ಪುಟ್ಟ ಕೈಗಳಿಂದ ಕೆನ್ನೆಗೆ ಹೊಡೆಸಿಕೊಂಡು ಖುಷಿ ಪಡಬೇಕು ಅನಿಸುತ್ತಿತ್ತು. ಆದರೆ ಅವನಿಗೆ ಕಾಲುಗಳೇ ಇರಲಿಲ್ಲ. ಒಂದು ಕೈ ಕೂಡ ಇರಲಿಲ್ಲ. ಇದು ನೆನಪಾದ ತಕ್ಷಣ ದುಃಖ ಉಮ್ಮಳಿಸಿ ಬರುತ್ತಿತ್ತು. ಶೌಚಾಲಯ ಮತ್ತು ಸ್ನಾನದ ಮನೆಯಲ್ಲಿ ಅವನಿಗೆ ತುಂಬ ಹಿಂಸೆಯಾಗುತ್ತಿತ್ತು. ಇವೆಲ್ಲ ಅನಿವಾರ್ಯ ಎಂದು ಇಬ್ಬರೂ ಹೇಳಿಕೊಟ್ಟೆವು. ಈ ಮಧ್ಯೆ ನಾವು ಪಾರ್ಟಿಗೋ, ಸಿನಿಮಾಕ್ಕೊ, ಹೋಟೆಲಿಗೋ ಹೋದಾಗ ಹತ್ತಾರು ಮಂದಿಯ ಕಾಕದೃಷ್ಟಿಗೆ ಬಲಿಯಾಗಬೇಕಿತ್ತು. ಅವರ ಕುತೂಹಲದ ಪ್ರಶ್ನೆಗೆ ಉತ್ತರ ಹೇಳಬೇಕಿತ್ತು. ಹಿಂದೆಯೇ ಅವರಿಂದ ಅನುಕಂಪದ ಮಾತುಗಳನ್ನೂ ಕೇಳಬೇಕಿತ್ತು.

ಇಂಥ ಸಂದರ್ಭಗಳಲ್ಲೆಲ್ಲ ಸಂಕಟವಾಗುತ್ತಿತ್ತು ನಿಜ. ಆದರೆ, ಈ ಸಂಕಟದ ಮಧ್ಯೆಯೇ ಬದುಕಲು ಮನಸ್ಸಾಗಲಿಲ್ಲ. ಆಗಿದ್ದು ಆಗಿ ಹೋಗಲಿ, ಈ ಮಗುವನ್ನು ಸ್ವಾವಲಂಬಿಯನ್ನಾಗಿ ಮಾಡಲೇಬೇಕು ಎಂದು ಅವತ್ತೇ ನಿರ್ಧರಿಸಿದೆ. ಮುಂದೆ ನಡೆದಿದ್ದೆಲ್ಲ ಪವಾಡ ಎಂದೇ ಹೇಳಬೇಕು. ಮೊದಲಿಗೆ ನಿಕ್‌ಗೆ ಓಡಾಡಲು ಅನುಕೂಲವಾಗುವಂತೆ ಸ್ಕೇಟಿಂಗ್ ತರದ ಒಂದು ಯಂತ್ರ ಖರೀದಿಸಿದೆವು. ಇದ್ದ ಒಂದೇ ಕೈಯನ್ನು ನೆಲಕ್ಕೆ ಊರಿ, ಇಡೀ ದೇಹದ ಶಕ್ತಿಯನ್ನು, ಅದರ ಮೇಲಿರಿಸಿ, ನೆಲದಿಂದ ಎರಡಿಂಚು ಮೇಲಕ್ಕೆ ಕುಪ್ಪಳಿಸಿ ಈ ಸ್ಕೇಟಿಂಗ್ ಯಂತ್ರದ ಮೇಲೆ ನಿಕ್ ಕೂರಬೇಕಿತ್ತು. ಇಲ್ಲವಾದರೆ ಸ್ವಲ್ಪ ಇಳಿಜಾರಿದ್ದ ಸ್ಥಳದಲ್ಲಿ ಆ ಯಂತ್ರವನ್ನಿಟ್ಟು ಇನ್ನೊಂದು ಕಡೆಯಿಂದ ನಿಕ್‌ನನ್ನು ಅದರ ಮೇಲೆ ಕೂರಿಸಬೇಕಿತ್ತು. ಇಂಥದೊಂದು ಬದಲಾವಣೆಗೆ ನಿಕ್‌ನನ್ನು ಒಗ್ಗಿಸಿದೆವು. ಪುಟಾಣಿ ಯಂತ್ರದ ಮೇಲೆ ಕೂತು ಮನೆಯ ತುಂಬಾ ಓಡಾಡಲು ಆರಂಭಿಸಿದ ನಿಕ್ ಓಹ್, ಈ ಹುಡುಗ ಬದುಕಲ್ಲಿ ಗೆಲ್ಲುತ್ತಾನೆ ಎಂದು ನಮಗೆ ಅನಿಸಿದ್ದೇ ಆಗ.

ಕೆಲವೇ ದಿನಗಳಲ್ಲಿ ನಿಕ್ ನಮಗೆ ಇನ್ನೊಂದು ಅಚ್ಚರಿ ನೀಡಿದ. ತನ್ನ ಅಣ್ಣಂದಿರು ಬರೆಯುವುದನ್ನು ಕಂಡು, ಎಡಗೈನಲ್ಲಿದ್ದ ಮೂರೇ ಬೆರಳುಗಳ ಮಧ್ಯೆ ಪೆನ್ ಸಿಕ್ಕಿಸಿಕೊಂಡು ಏನೇನೋ ಗೀಚಲಾರಂಬಿಸಿದ. ಗೀಚಲು ಬಂದರೆ, ಅಕ್ಷರ ಬರೆಯುವುದು ಬಂದಂತೆಯೇ ಅನ್ನಿಸಿತು. ತಕ್ಷಣವೇ ಒಂದೊಂದೇ ಅಕ್ಷರ ತೋರಿಸಿಕೊಟ್ಟೆ. ಅದನ್ನು ಬರೆಯವಂತೆ ಒತ್ತಾಯಿಸಿದೆ. ಪ್ರೋತ್ಸಾಹಿಸಿದೆ. ಪೂಸಿ ಹೊಡೆದೆ. ಏನೇನೋ ಆಸೆ ತೋರಿಸಿದೆ. ಪರಿಣಾಮ ಏನಾಯಿತೆಂದರೆ, ನಿಕ್, ನನ್ನ ನಿರೀಕ್ಷೆಯನ್ನು ಮೀರಿ ಪ್ರಗತಿ ಸಾಧಿಸಿದ. ನೋಡನೋಡುತ್ತಲೇ ಅಕ್ಷರ ಕಲಿತೇಬಿಟ್ಟ.

ಸ್ಕೂಲಿಗೆ ಸೇರಿಸುವ ಸಂದರ್ಭದಲ್ಲಿ ಅವನಿರುವ ಪರಿಸ್ಥಿತಿ ಹಾಗೂ ಶಾಲೆಯ ಜನರಿಂದ ಆಗಬೇಕಿರುವ ಸಹಾಯದ ಬಗ್ಗೆ ಆಡಳಿತ ಮಂಡಳಿಗೆ ವಿವರಿಸಿದೆವು. ಅವರು ಖುಷಿಯಿಂದ ಒಪ್ಪಿಕೊಂಡರು. ನಿಕ್‌ನನ್ನು ತರಗತಿಯೊಳಕ್ಕೆ ಕರೆದೊಯ್ಯಲು ಸಹಪಾಠಿಗಳು ಕ್ಯೂ ನಿಂತರು. ಶಿಕ್ಷಕ ವರ್ಗದವರು ಈ ಹುಡುಗನ ಮೇಲೆ ವಿಶೇಷ ಮಮತೆ ತೋರಿದರು. ಅವನಿಗೆಂದೇ ವಿಶೇಷ ಆಸನವೂ ಸಿದ್ಧವಾಯಿತು. ಪರಿಣಾಮ, ನಿಕ್ ಪ್ರತಿ ವರ್ಷವೂ ಡಿಸ್ಟಿಂಕ್ಷನ್ ವಿದ್ಯಾರ್ಥಿ ಎನ್ನಿಸಿಕೊಂಡ. ಒಂದೊಂದೇ ಬಹುಮಾನಗಳಿಗೆ ಭಾಜನನಾದ.

ಈ ಬೆರಗಿನ ಹಬ್ಬ ಇಷ್ಟಕ್ಕೆ ನಿಲ್ಲಲಿಲ್ಲ. ತನ್ನ ಅಣ್ಣಂದಿರಿಬ್ಬರು ಈಜು ಹೊಡೆಯುವುದನ್ನು ಕಂಡಾಗ ತಾನೂ ನೀರಿಗಿಳಿಯುವುದಾಗಿ ನಿಕ್ ಹಟ ಹಿಡಿದ. ನಿನಗೆ ಕಾಲೇ ಇಲ್ಲವಲ್ಲ? ಹೇಗೆ ಈಜು ಹೊಡೀತೀಯ ಎಂದು ಕೇಳಿದರೆ ಅವನಿಗೆ ಘಾಸಿಯಾಗಬಹುದು ಅನ್ನಿಸಿತು. ಹಾಗಾಗಿ ಏನೂ ಹೇಳಲಿಲ್ಲ. ಒಂದೇ ಕೈನಿಂದ ನೀರನ್ನು ಹಿಂದೆ ನೂಕಿ ಈಜುವ ವಿಧಾನ ಹೇಳಿಕೊಟ್ಟೆವು. ಕಾಲಿಲ್ಲದಿದ್ದರೂ ಮೀನು ಈಜುತ್ತದೆ. ನೀನೂ ಅದೇಥರ ಎಂದು ತಮಾಷೆ ಮಾಡಿದೆವು. ಬಹುಶಃ ನಮ್ಮ ಮಾತಿನ ಹಿಂದಿದ್ದ ನೋವು ಹಾಗೂ ತನ್ನ ಇತಿಮಿತಿ ಏನೆಂದು ಚೆನ್ನಾಗಿ ಗೊತ್ತಿದ್ದರಿಂದ, ನಿಕ್ ಪ್ರತಿ ಕ್ಷಣವನ್ನೂ ಗೆಲ್ಲುತ್ತಲೇ ಬದುಕಿದ. ಈಜು ಕಲಿತ ಮೇಲೆ ಪಿಯಾನೋ ನುಡಿಸ್ತೀನಿ ಅಂದ. ಕೀ ಬೋರ್ಡ್‌ನ ನುಡಿಸಲು ಕಲೀತೀನಿ ಅಂದ. ಮಮ್ಮೀ, ಡ್ರಮ್ಸ್ ಬಾರಿಸ್ಬೇಕಲ್ಲ ಎಂದು ಪಿಸುಗುಟ್ಟಿದ. ಅವನ ಯಾವುದೇ ಆಸೆಗೂ ತಣ್ಣೀರೆರಚುವುದು ಬೇಡ ಅನಿಸಿದ್ದರಿಂದ ಎಲ್ಲಕ್ಕೂ ವ್ಯವಸ್ಥೆ ಮಾಡಿದ್ವಿ. ಹೀಗೆ, ಒಂದೊಂದೇ ವಿದ್ಯೆ ಕಲಿತ ನಿಕ್ ಕಡೆಗೊಂದು ದಿನ- ಮಮ್ಮೀ, ದಿನಾಲೂ ಈ ಸ್ಕೇಟಿಂಗ್ ಮೆಷಿನ್ ಮೇಲೆ ಓಡಾಡ್ತಾ ಇದೀನಿ ಅಲ್ವ? ಹಾಗಾಗಿ ಸ್ಕೇಟಿಂಗ್ ಕಾಂಪಿಟಿಷನ್‌ಗೆ ಹೋಗ್ಲಾ ಅಂದ! ಬೇಡ' ಅಂದುಬಿಟ್ಟರೆ ಅವನಿಗೆ ನೋವಾಗಬಹುದು ಅನ್ನಿಸಿತು. ಹಾಗಾಗಿ ಹೋಗಿದ್ದು ಬಾ. ಗೆಲುವಾಗಲಿ' ಅಂದೆ. ನನ್ನ ಮಗ ಗೆದ್ದೇ ಬಂದ!

ಮಗನ ಚೈತ್ರ ಯಾತ್ರೆಯನ್ನು ಹೀಗೆ ವಿವರಿಸುತ್ತಾ ಹೋಗುತ್ತಾಳೆ ಸ್ಟೇಸಿ. ಮುಂದೆ ನಡೆದಿರುವುದೆಲ್ಲ ಗೆಲುವಿನ ಕಥೆಯೇ. ಇತ್ತೀಚೆಗಷ್ಟೇ 14ನೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ನಿಕ್, ಈಗ ತ್ರಿಚಕ್ರ ವಾಹನ ಓಡಿಸುವುದರಲ್ಲಿ ಪಳಗಿದ್ದಾನೆ. ಪೇಂಟಿಂಗ್‌ನಲ್ಲಿ ಮಿಂಚಿದ್ದಾನೆ. ಓದಿನ ವಿಷಯದಲ್ಲೂ ಮುಂದಿದ್ದಾನೆ. ಸ್ಕೇಟಿಂಗ್ ಯಂತ್ರದ ಮೇಲೆ ಕೂತೇ ಅತ್ತಿಂದಿತ್ತ ಸರಸರನೆ ಓಡಾಡುತ್ತಾ ಬೇಸ್‌ಬಾಲ್ ಆಡುತ್ತಾನೆ. ಇಂಥವೇ ಹತ್ತಾರು ಒಂದೊಂದೇ ಸಾಧನೆಗಳಿಂದ ಸುತ್ತಮುತ್ತಲಿನ ಎಲ್ಲರನ್ನು ಬೆರಗಾಗಿಸಿದ್ದಾನೆ.ಇದೆಲ್ಲ ಹೇಗಯ್ಯ ಸಾಧ್ಯವಾಯ್ತು? ನಿನ್ನ ದೇಹ ಪ್ರಕೃತಿ ನಿನಗೆ ಹಿಂಸೆ ಕೊಡಲಿಲ್ವಾ ಎಂದರೆ - ಅಂಗವೈಕಲ್ಯ ಒಂದು ಕೊರತೆ ಅಂತ ಈವರೆಗೂ ನನಗೆ ಅನ್ನಿಸಿಯೇ ಇಲ್ಲ. ನನಗಂತೂ sky is the limit ಅಂತಷ್ಟೇ ಅನ್ನಿಸಿದೆ' ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾನೆ.

ಮಗನ ಈ ಸಾಧನೆಯ ಬಗ್ಗೆ ಮೈಕೇಲ್-ಸ್ಟೇಸಿ ದಂಪತಿಗೆ ಹಿಗ್ಗೋ ಹಿಗ್ಗು. ಇಂಥ ಮಗನ ಅಪ್ಪ- ಅಮ್ಮ ಎಂದು ಹೇಳಿಕೊಳ್ಳಲು ನಮಗಂತೂ ಹೆಮ್ಮೆ. ನೂರು ಮಂದಿಗೆ ಆದರ್ಶವಾಗಬಲ್ಲ ಹೀರೋ ನಮ್ಮ ಮನೇಲೇ ಇದ್ದಾನೆ. ಅವನನ್ನು ನೋಡಿಕೊಂಡೇ ಬದುಕಲು ಕಲಿಯಿರಿ' ಎಂದು ಉಳಿದಿಬ್ಬರು ಮಕ್ಕಳಿಗೂ ಕಿವಿ ಮಾತು ಹೇಳಿದ್ದೇವೆ ಎನ್ನುತ್ತಾರೆ ಮೈಕೇಲ್-ಸ್ಟೇಸಿ. ಅಮೆರಿಕದ ಪತ್ರಿಕೆಗಳೆಲ್ಲ ಈ ಹುಡುಗನ ಬಗ್ಗೆ ಪ್ರೀತಿಯಿಂದ ಬರೆದಿವೆ. ಇವನ ಸಂದರ್ಶನ ಪ್ರಕಟಿಸಿವೆ. ಹೀರೋಗಳನ್ನು ಮೀರಿಸಿದ ಹೀರೋ ಎಂದು ಹೊಗಳಿವೆ. ಚಾನೆಲ್‌ಗಳಂತೂ ಪೈಪೋಟಿಗೆ ಬಿದ್ದು ಇವನ ಸಾಹಸ'ಗಳನ್ನು ಪ್ರಸಾರ ಮಾಡಿವೆ.

ಬದುಕಿನ ಹೋರಾಟದಲ್ಲಿ ಗೆಲ್ಲಬೇಕೆಂದು ಬಯಸುವ ಎಲ್ಲರಿಗೂ ರೋಲ್‌ಮಾಡೆಲ್ ಆಗುವಂಥ ಈ ಹುಡುಗನ ಸಾಹಸದ ಬಗ್ಗೆ ಇನ್ನಷ್ಟು ಮಾಹಿತಿ ಬೇಕೆಂದರೆ ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ limbless boy ಎಂದು ಸರ್ಚ್ ಮಾಡಿ. ಅಲ್ಲಿ ನಿಕ್‌ನ ಸಾಹಸೀ ಬದುಕಿನ ಪರಿಚಯವಿದೆ. ಪ್ರದರ್ಶನವೂ ಇದೆ.

« ಕಾಲಿಲ್ಲದ ಹುಡುಗ ಸ್ಕೇಟಿಂಗ್ ಪ್ರವೀಣ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more