ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಸಾಹಿತ್ಯಕ್ಕೆ ಕಾಯ್ಕಿಣಿ ಸ್ಪರ್ಶ!

By Staff
|
Google Oneindia Kannada News

Jayanth Kaikini
* ವಿಧೇಯಕಗಳ ಸಾಹಿತ್ಯಕ ಮೌಲ್ಯ ಹೆಚ್ಚಿಸಲು ಶಾಸಕಾಂಗದ ಕ್ರಮ
* ವಿಧಾನ ಮಂಡಲಕ್ಕೆ ಜ್ಞಾನಪೀಠ; ರಮೇಶ್ ಕುಮಾರ್ ಆಶಯ
* ಪಕ್ಷಬೇಧ ಮರೆತ ಶಾಸಕರು
ಬೆಂಗಳೂರು, ಫೆ.16: ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಪ್ರಥಮ ಶಾಸಕಾಂಗ ಎಂಬ ಹೆಗ್ಗಳಿಕೆ ಕರ್ನಾಟಕ ವಿಧಾನ ಮಂಡಲಕ್ಕೆ ಮುಂದೊಮ್ಮೆ ಪ್ರಾಪ್ತವಾದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ್ ನುಡಿದಿದ್ದಾರೆ.

ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುವ ವಿಧೇಯಕಗಳ ಸಾಹಿತ್ಯಕ ಮೌಲ್ಯವನ್ನು ಹೆಚ್ಚಿಸಲು ಶಾಸಕಾಂಗ ತೆಗೆದುಕೊಂಡಿರುವ ಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಿಗೆ ವಿವರ ನೀಡುತ್ತಿದ್ದ ಅವರು, ಮೊಟ್ಟ ಮೊದಲಾಗಿ ವಿಧೇಯಕಗಳಲ್ಲಿನ ಒಣ ಭಾಷೆಯನ್ನು ಬದಲಿಸಿ, ಕಾವ್ಯಾತ್ಮಕತೆ, ಆರ್ದ್ರತೆ ತರಲು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರ ನೆರವನ್ನು ಕೋರಿರುವುದಾಗಿ ತಿಳಿಸಿದರು.

"ವಿಧಾನ ಮಂಡಲದಲ್ಲಿ ಮಂಡಿಸುವ ಬಹುಪಾಲು ವಿಧೇಯಕಗಳ ಭಾಷೆ ತುಂಬಾ ಒಣಕಲಾಗಿರುತ್ತೆ. ಹೀಗಾಗಿ ಅದನ್ನು ಯಾರೂ ಓದುವುದೇ ಇಲ್ಲ. ಹಿಂದಿನ ಅಧಿವೇಶನದಲ್ಲಿ ಹಿಪ್ಪು ನೇರಳೆ ಬೆಳೆಯುವ ಟೊಮೇಟೋ ಬೆಳೆಗಾರರಿಗೆ ಬೆಂಬಲ ಬೆಲೆಯ ಬಗೆಗೆ ಒಂದು ವಿಧೇಯಕ ಮಂಡಿಸಿದ್ದೆ. ಅದು ಯಾರೂ ಓದದಯೇ ಫೇಲ್ ಆಯ್ತು. ಅದನ್ನು ಮತ್ತಷ್ಟು ಉತ್ತಮಗೊಳಿಸಿ ಇನ್ನೊಮ್ಮೆ ಮಂಡಿಸಲು ಪ್ರಯತ್ನಿಸುತ್ತಿದ್ದಾಗ ನನಗೇ ಅದನ್ನು ಓದಲು ಬಹಳ ಬೇಸರ ಆಯ್ತು. ನನ್ನ ಸಹೋದ್ಯೋಗಿಗಳ ಜೊತೆಗೆ ಮಾತನಾಡುತ್ತಿದ್ದಾಗ ಇದು ನನ್ನೊಬ್ಬನ ಅನುಭವ ಅಲ್ಲ. ವಿಧೇಯಕಗಳನ್ನು ಮಂಡಿಸುವ ಪ್ರತಿಯೊಬ್ಬ ಶಾಸಕನಿಗೂ ಇಂತಹ ಅನುಭವವಾಗಿರುವ ವಿಚಾರ ಹೊರಗೆ ಬಿತ್ತು.

ಇದಕ್ಕೆ ಕಾಂಗ್ರೆಸ್, ಬಿಜೆಪಿ. ಜೆ.ಡಿ.ಎಸ್. ಎಂಬ ಪಕ್ಷಬೇಧವಿಲ್ಲ" ಎಂದ ರಮೇಶ್ ಕುಮಾರ್, "ಸ್ವಲ್ಪ ಯೋಚಿಸಿ ನೋಡಿದಾಗ ಈ ಸಮಸ್ಯೆಗೆ ಪರಿಹಾರ ತಾನೇ ತಾನಾಗಿ ಹೊಳೆಯಿತು. ವಿಧೇಯಕಗಳ ಭಾಷೆಗೆ ಆರ್ದ್ರತೆ ತಂದು ಅವುಗಳ ಸಾಹಿತ್ಯಕ ಮೌಲ್ಯ ಹೆಚ್ಚಿಸಿದರೆ ಅವುಗಳನ್ನು ಓದುವರ ಸಂಖ್ಯೆ ಹೆಚ್ಚಿಸಬಹುದು ಎಂಬ ವಿಚಾರ ಹೊಳೆದ ಕೂಡಲೆ ಜಯಂತ ಕಾಯ್ಕಿಣಿಯವರನ್ನು ಸಂಪರ್ಕಿಸಿದೆ. ಪಕ್ಷಬೇಧ ಮರೆತು ಎಲ್ಲಾ ಪಕ್ಷದ ಶಾಸಕರೂ ಇದನ್ನು ಬೆಂಬಲಿಸಿರುವುದು ಅತ್ಯಂತ ಸಂತೋಷದ ವಿಚಾರ" ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಜಯಂತ ಕಾಯ್ಕಿಣಿ, ರಮೇಶ್ ಕುಮಾರ್ ತಮ್ಮನ್ನು ಸಂಪರ್ಕಿಸಿದಾಗ ತಮಗೆ ಆಶ್ಚರ್ಯವಾಯಿತು ಎಂದರು. "ಮೊದಲು, ವಿಧೇಯಕ ಎಲ್ಲಿ, ಕಾವ್ಯ ಎಲ್ಲಿ, ಅಂತ ಅನ್ನಿಸಿತು. ಸ್ನೇಹಿತ ವಿವೇಕ್ ಶಾನುಭಾಗರ ಜೊತೆ ಇದರ ಕುರಿತು ಚರ್ಚಿಸಿದೆ. ಶಾಸಕಾಂಗದಲ್ಲಿ ಮಂಡಿಸುವ ವಿಧೇಯಕಗಳಿಗೆ ಕಾವ್ಯ-ಕತೆ ಓದದ, ಸಿನೆಮಾ ನೋಡದ, ಸಿನೆಮಾ ಸಂಗೀತ ಕೇಳದವರನ್ನೂ ಮುಟ್ಟುವ-ತಟ್ಟುವ ಶಕ್ತಿಯಿದೆಯೆಂದು ಮನದಟ್ಟಾದಾಗ, ತಟ್ಟನೆ ಒಪ್ಪಿಕೊಂಡೆ" ಎಂದ ಅವರು ಮೊಟ್ಟ ಮೊದಲಾಗಿ ಟೊಮೇಟೋ ಕುರಿತಾದ ವಿಧೇಯಕಕ್ಕೆ ಒಲವು ಮತ್ತು ವಿಸ್ಮಯಗಳನ್ನು ತುಂಬಿ ಅದಕ್ಕೆ ಕಾವ್ಯಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ ಅದಕ್ಕೊಂದು ಗೇಯಾತ್ಮಕ ರೂಪ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

ಅನಂತರ ಮಾತನಾಡಿದ ಸಚಿವ ಕರುಣಾಕರ ರೆಡ್ಡಿ, "ಸಾಹಿತ್ಯ ಎಂದರೆ ಕಾವ್ಯವೊಂದೇ ಅಲ್ಲ, ಇಂದು ಕನ್ನಡದಲ್ಲಿ ರವಿ ಬೆಳಗೆರೆ ಅವರಿಗಿರುವಷ್ಟು ಓದುಗರು ಇನ್ನಾವ ಲೇಖಕರಿಗೂ ಇಲ್ಲ. ವಿಧೇಯಕಗಳನ್ನು ಶಾಸಕರೂ ಸೇರಿದಂತೆ ಎಲ್ಲರೂ ಓದಬೇಕೆಂದರೆ, ಅವುಗಳನ್ನು ಬೆಳಗೆರೆಯವರಿಂದ ಬರೆಯಿಸುವುದು ಒಳಿತು. ಆಗ ಅವುಗಳಿಗೊಂದು ಥ್ರಿಲ್ ಬರುವುದರಲ್ಲಿ ಸಂದೇಹವೇ ಇಲ್ಲ" ಎಂದರು.
(ಮಜಾವಾಣಿ ವಿಧಾನಸಭೆ ವರದಿಗಾರ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X