ನೈತಿಕತೆಗೂ ಕಾನೂನಿಗೂ ವ್ಯತ್ಯಾಸ ಇದೆ : ರೇಣುಕಾಚಾರ್ಯ

Subscribe to Oneindia Kannada
Morality and law are diffrent, Renukacharya
ಬೆಂಗಳೂರು ಜ. 31 : ಸಂಪಂಗಿ ಲಂಚ ಪ್ರಕರಣದ ಬಗೆಗೆ ತೀವ್ರವಾದ ಪ್ರತಿಕ್ರಿಯೆ ನೀಡಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ "ನೈತಿಕತೆ ಮತ್ತು ಕಾನೂನಿನ ನಡುವೆ ಬಹಳ ವ್ಯತ್ಯಾಸ ಇದೆ" ಎಂದಿದ್ದಾರೆ.

ಲಂಚದ ಆರೋಪ ಹೊತ್ತಿರುವ ಕೆಜಿಎಫ್ ಶಾಸಕ ವೈ ಸಂಪಂಗಿಯವರನ್ನು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ ಅವರು "ನೈತಿಕತೆ ಮತ್ತು ಕಾನೂನು ಎರಡೂ ಬೇರೆ ಬೇರೆ. ಅವೆರಡರ ನಡುವೆ ತುಂಬಾ ವ್ಯತ್ಯಾಸ ಇದೆ. ಸಂಪಂಗಿ ಎರಡನ್ನೂ ಮುರಿದಿರಬಹುದು. ಆದರೆ, ನೈತಿಕತೆ ಮತ್ತು ಕಾನೂನುಗಳ ನಡುವೆ ವ್ಯತ್ಯಾಸ ಇದೆ ಎನ್ನುವುದನ್ನು ಮಾತ್ರ ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ" ಎಂದರು.

***
ಸಂಪಂಗಿ ಪ್ರಕರಣದ ಬಗೆಗೆ ಜನರ ಸಂತಸ

ಸಂಪಂಗಿ ಪ್ರಕರಣದ ಬಗೆಗೆ ರಾಜ್ಯದ ಜನರಲ್ಲಿ ವಿವಿಧ ಬಗೆಯ ಅಭಿಪ್ರಾಯಗಳು ಮನೆ ಮಾಡಿದ್ದು ಹಲವರು ಈ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

Morality and law are diffrent, Renukacharya
ಶಾಸಕ ಸಂಪಂಗಿ ಚೆಕ್ ಮೂಲಕ ಲಂಚ ಪಡೆಯುತ್ತಿದ್ದುದನ್ನು ಉತ್ತಮ ಬೆಳವಣಿಗೆ ಎಂದೆನ್ನುವ ಸದಾಶಿವ ನಗರದ ಎಂಬಿಎ ವಿದ್ಯಾರ್ಥಿನಿ ಸುಮನ್ ಮಜುಂದಾರ್, "ಚೆಕ್ ಮೂಲಕ ಲಂಚ ತೆಗೆದುಕೊಂಡರೆ ಜನರಿಗೂ ಸುಲಭ ಆಗುತ್ತೆ. ಜೊತೆಗೇ ಕಪ್ಪುಹಣದ ತೊಂದರೆ ಸಹ ಇರೋದಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಲಂಚ ತೆಗೆದುಕೊಳ್ಳುವ ವ್ಯವಸ್ಥೆಯಿದ್ದರೆ ಇನ್ನೂ ಒಳ್ಳೆಯದು" ಎನ್ನುತ್ತಾರೆ.

ಆದರೆ ಶಾಸಕ ಸಂಪಂಗಿಯವರ ಸ್ವಕ್ಷೇತ್ರದಲ್ಲಿ ಈಬಗೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಜಿಎಫ್ ಹೈಸ್ಕೂಲ್ ಶಿಕ್ಷಕಿ ಮರಗತಂ ಶಾಸಕ ಸಂಪಂಗಿಯವರನ್ನು ಬಂಧಿಸಿರುವ ಲೋಕಾಯುಕ್ತರ ಕ್ರಮವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. "ಇದು ತುಂಬಾನೇ ಒಳ್ಳೆಯದು" ಎನ್ನುವ ಮರಗತಂ "ಸಂಪಂಗಿ ಲಂಚ ಸ್ವೀಕಾರ ಮಾಡಿದ್ದಕ್ಕಿಂತ, ವಾವ್! ನಮ್ಮೂರಿಗೂ ಒಬ್ಬರು ಎಂಎಲ್ಎ ಇದ್ದಾರೆ ಅಂತಾ ತಿಳಿದು ನಿಜಕ್ಕೂ ಆಶ್ಚರ್ಯ, ಸಂತೋಷ ಆಯ್ತು. ಲೋಕಾಯುಕ್ತರು ಹೀಗೇ ಎಲ್ಲಾ ಊರಿನ ಶಾಸಕರನ್ನೂ ಬಂಧಿಸುತ್ತಿದ್ದರೆ, ಯಾವ ಯಾವ ಊರಿಗೆ ಶಾಸಕರಿದ್ದಾರೆ? ಅವರ ಹೆಸರು ಏನು? ಅಂತಾ ಒಂದು ವರ್ಷದಲ್ಲಿ ಇಡೀ ರಾಜ್ಯಕ್ಕೇ ಗೊತ್ತಾಗುತ್ತೆ" ಎನ್ನುತ್ತಾರೆ.

ಆದರೆ ಸಂಪಂಗಿಯವರ ಅಭಿಮಾನಿಗಳ ಪ್ರಕಾರ ಲೋಕಾಯುಕ್ತರ ಕ್ರಮ ದೊಡ್ಡ ಸಾಧನೆ ಏನೂ ಅಲ್ಲ. ಉದಾಹರಣೆಗೆ ಕೆಜಿಎಫ್ ರಿಯಲ್ ಎಸ್ಟೇಟ್ ಉದ್ಯೋಗಿ ಮತ್ತು ಸಮಾಜ ಸೇವಕ ವೇಲಾಯುಧಂ ಪ್ರಕಾರ ತಪ್ಪು ಮಾಡುವವರನ್ನ ಲಂಚ ಪಡೆಯುತ್ತಿದ್ದಾಗ ಹಿಡಿದು ಬಂಧಿಸುವುದು ದೊಡ್ಡದೇನೂ ಅಲ್ಲ. "ಲೋಕಾಯುಕ್ತರು ಅಷ್ಟೊಂದು ಬುದ್ಧಿವಂತರಿದ್ದರೆ ಏನೂ ತಪ್ಪು ಮಾಡದ ಶಾಸಕರು ಯಾರಾದರೂ ಇದ್ದರೆ ಅವರನ್ನು ಮೊದಲು ಗುರುತಿಸಲಿ. ಆಮೇಲೆ ಅವರಿಗೆ ಲಂಚದ ಮೇಲೆ ಆಸೆ ಹುಟ್ಟುವಂತೆ ಮಾಡಲಿ. ಅನಂತರ ಅವರು ಲಂಚ ಸ್ವೀಕರಿಸುತ್ತಿದ್ದಾಗ ಮಾರು ವೇಷದಲ್ಲಿ ಹೋಗಿ ಹಿಡಿಯಲಿ. ಸಾಧನೆ ಎಂದರೆ ಅದು" ಎನ್ನುತ್ತಾರೆ ಅವರು.

(ಮಜಾವಾಣಿ ವಾರ್ತೆ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...