• search

ಭಲೇ ನಿಗೂಢ ಪ್ರಾಣಿ ಚಿರತೆಯ ಕುರಿತು ರೋಚಕ ಮಾಹಿತಿ

By ಗಗನ್ ಪ್ರೀತ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನಾವು ಪ್ರತಿ ಬಾರಿ ಕಾಡಿಗೆ ಹೋದಾಗಲೂ ಹೊಸ ಹೊಸ ಅನುಭವ ಆಗುತ್ತಲೇ ಇರುತ್ತದೆ. ಅನಿರೀಕ್ಷಿತವಾದ, ಊಹಿಸಲೂ ಸಾಧ್ಯವಾಗದ ಎಷ್ಟೋ ಪ್ರಸಂಗಗಳು ನಡೆಯುತ್ತವೆ. ಒಮ್ಮೆ ನಾವು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಿನಲ್ಲಿದ್ದೆವು. ಒಂದೆರೆಡು ದಿನ ಕಳೆದು, ಕೆಲವು ಸಫಾರಿಗಳನ್ನು ಮಾಡಿದೆವು. ಪ್ರಾಣಿಗಳ ಚಟುವಟಿಕೆ ತೀರಾ ಕಡಿಮೆ ಇತ್ತು.

  ಬಂಡೀಪುರದಲ್ಲಿ ಹುಲಿ ಕಾಡೆಮ್ಮೆಯನ್ನು ಬೇಟೆಯಾಡಿರುವ ಮಾಹಿತಿ ಬಂದಿತು. ಇಂತಹ ಸಂದರ್ಭಗಳಲ್ಲಿ ತಮ್ಮ ಬೇಟೆಯನ್ನು ಬೇರೆ ಪ್ರಾಣಿಗಳಿಂದ ಕಾಪಾಡಿಕೊಳ್ಳುವ ಸಲುವಾಗಿ, ಆ ಜಾಗದ ಸುತ್ತ ಮುತ್ತಲೆ ಆ ಪ್ರಾಣಿಯು ಓಡಾಡುತ್ತಿರುತ್ತದೆ. ಹಾಗಾಗಿ ಆ ಜಾಗದಲ್ಲಿ ಅದನ್ನು ನೋಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಮಾಹಿತಿಯನ್ನಾಧರಿಸಿ, ನಾವು ನಾಗರಹೊಳೆಯಿಂದ ಬಂಡೀಪುರಕ್ಕೆ ಹೋಗಿ, ಬೇಟೆಯಾಡಿದ ಪ್ರದೇಶಕ್ಕೆ ಹೋದೆವು.[ಕಾಡೆಂದರೆ ಬರೀ ಪ್ರಾಣಿಗಳಿರುವ ಜಾಗವಲ್ಲವೋ ಅಣ್ಣ!]

  ಅಷ್ಟೊತ್ತಿಗಾಗಲೇ ಆ ಹುಲಿಯು ಕಾಡೆಮ್ಮೆಯನ್ನು ಸುರಕ್ಷಿತಗೊಳಿಸಲು ಬೇಲಿಯೊಳಕ್ಕೆ ಎಳೆದು ಹಾಕಿತು. ನಮಗೆ ಆ ಬೇಟೆ ಕಾಣಿಸುತ್ತಿರಲಿಲ್ಲ. ಈ ಜಾಗ ಪೂರ್ತಿಯಾಗಿ ಸತ್ತ ದೇಹದ ವಾಸನೆಯಿಂದ ಕೂಡಿತ್ತು. ವಾಸನೆಯನ್ನು ಹಿಡಿದು, ಸುತ್ತಲೂ ರಣಹದ್ದುಗಳು ಕಿತ್ತು ತಿನ್ನಲು ಕಾದು ಕುಳಿತಿದ್ದವು. ಹುಲಿ ಏನಾದರು ಆಚೆ ಬರಬಹುದೇನೋ ಎಂದು ಸುಮಾರು ಹೊತ್ತು ಅಲ್ಲೇ ಕಾಯುತ್ತಿದ್ದೆವು.

  ಈ ಸಂದರ್ಭದಲ್ಲಿ ಆ ವಾಸನೆ ಗ್ರಹಿಸಿಕೊಂಡು ಚಿರತೆಯೊಂದು ಈ ಪ್ರದೇಶಕ್ಕೆ ಅನಿರೀಕ್ಷಿತವಾಗಿ ಬಂದುಬಿಟ್ಟಿತು. ಆ ಬೇಲಿಯ ಬಳಿ ಹೋಗಲು ಪ್ರಯತ್ನಿಸಿತು. ಆದರೆ ಆ ಹುಲಿಯು ಅಲ್ಲೇ ಇತ್ತು ಎಂದೆನಿಸುತ್ತದೆ. ಚಿರತೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿ ಹೋಗಲು ಪ್ರಾರಂಭಿಸಿತು. ನಮ್ಮ ಎದುರೇ ದಾಟಿ ಹೋಯಿತು. ಚಿರತೆಯು ನಮ್ಮ ಕ್ಯಾಮೆರಾ ಕಣ್ಣಿಗೆ ಅವತ್ತಿನ ಅತಿಥಿಯಾಯಿತು. ಹುಡುಕಿಕೊಂಡು ಹೋಗಿದ್ದೇ ಒಂದು ಸಿಕ್ಕಿದ್ದೇ ಮತ್ತೊಂದು.[ಸಫಾರಿಗೆ ಹೋಗುವ ಮುನ್ನ ಏನೇನು ಸಿದ್ಧತೆ ಮಾಡಿಕೊಳ್ಳಬೇಕು?]

  ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳು

  ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳು

  ಕಾಡಿನಲ್ಲಿ ಹುಲಿಯು ಮೋಡಗಳಂತೆ ಚಲಿಸಿದರೆ, ಚಿರತೆಗಳು ಮಂಜಿನಂತೆ ಸಾಗುತ್ತವೆ. ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳು. ಅವುಗಳ ಮೈ ಬಣ್ಣ ಚಿನ್ನ ಹಾಗು ಹೂವಿನ ಆಕಾರದಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಅವುಗಳ ಮುಖ್ಯ ಗುಣವೆಂದರೆ ಯಾವ ಪರಿಸರಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ. ಕೊರೆವ ಚಳಿ ಪ್ರದೇಶದಿಂದ ಹಿಡಿದು ಸುಡುವ ಬಿಸಿಲಿನ ಪ್ರದೇಶದವರೆಗೂ ಎಲ್ಲ ಜಾಗಗಳಲ್ಲಿ ಇವುಗಳು ಬದುಕಬಲ್ಲವು. ಸುಮಾರು 10 ದಿನದವರೆಗೂ ನೀರಿಲ್ಲದೆ ಬದುಕುವ ತಾಕತ್ತು ಅವಕ್ಕಿದೆ.

  ಚಿರತೆಗಳಿಗಿಂತ ನಿಗೂಢ ಪ್ರಾಣಿ ಬೇರೆ ಇಲ್ಲ

  ಚಿರತೆಗಳಿಗಿಂತ ನಿಗೂಢ ಪ್ರಾಣಿ ಬೇರೆ ಇಲ್ಲ

  ಚಿರತೆ ಸಾಮಾನ್ಯವಾಗಿ ಒಂಟಿ ಜೀವಿಗಳು. ಇರುಳಿನ ಸಮಯದಲ್ಲಿ ಇವುಗಳ ಚಟುವಟಿಕೆ ಹೆಚ್ಚು. ಚಿರತೆಗಳು ಸರಾಗವಾಗಿ ಮರಗಳನ್ನು ಹತ್ತ ಬಲ್ಲವು. ಗಂಟೆಗೆ 58 ಕಿಲೋಮೀಟರ್ ವೇಗವಾಗಿ ಓಡಬಲ್ಲವು. ಇವುಗಳಿಗಿಂತ ನಿಗೂಢ ಪ್ರಾಣಿ ಬೇರೆ ಇಲ್ಲವೆಂದೇ ಹೇಳಬೇಕು. ಹುಲಿಯ ಹಾವ ಭಾವಗಳನ್ನು ಊಹಿಸಬಹುದು, ಆದರೆ ಚಿರತೆಯ ಹಾವಭಾವಗಳನ್ನು ಊಹಿಸುವುದು ಅಸಾಧ್ಯ.

  ಹುಲಿಗಳಷ್ಟೇ ಅಪಾಯಕಾರಿ ಈ ಚಿರತೆ

  ಹುಲಿಗಳಷ್ಟೇ ಅಪಾಯಕಾರಿ ಈ ಚಿರತೆ

  ಗಾತ್ರ ಹುಲಿಗಳಿಗಿಂತ ಚಿಕ್ಕದಾದರೂ, ಹುಲಿಗಳಷ್ಟೇ ಅಪಾಯಕಾರಿ. ದವಡೆ ಎಷ್ಟು ಗಟ್ಟಿಯೆಂದರೆ ತಮ್ಮ ಬೇಟೆಯನ್ನು ಸುಲಭವಾಗಿ ಮರದ ಮೇಲೆ ಎಳೆದುಕೊಂಡು ಹೋಗಿಬಿಡುತ್ತವೆ. ಹೊಟ್ಟೆ ತುಂಬಿದ ಬಳಿಕ ಮರದ ಮೇಲೆ ಭರ್ತಿ ವಿಶ್ರಾಂತಿ. ಮರ ಹತ್ತಲು ಹಾಗು ಬೇಟೆಯಾಡುವಾಗ ಸಮತೋಲನ ಕಾಯ್ದುಕೊಳ್ಳಲು ಉದ್ದ ಬಾಲ ಉಪಕಾರಿ. ಇವುಗಳು ಉತ್ತಮವಾಗಿ ಈಜಬಲ್ಲವು. ಹೇಗೆ ಪ್ರತಿಯೊಬ್ಬ ಮನುಷ್ಯನ ಹೆಬ್ಬೆಟ್ಟು ಗುರುತು ಭಿನ್ನವೋ ಹಾಗೆ ಪ್ರತಿ ಚಿತರೆಯ ಚರ್ಮದ ಚುಕ್ಕೆಗಳ ಆಕಾರ ಭಿನ್ನವಿರುತ್ತದೆ.

  ಚಿರತೆಗಳಿಗೆ ಮೇಟಿಂಗ್ ಸೀಸನ್ ಅಂತ ಇಲ್ಲವೇ ಇಲ್ಲ

  ಚಿರತೆಗಳಿಗೆ ಮೇಟಿಂಗ್ ಸೀಸನ್ ಅಂತ ಇಲ್ಲವೇ ಇಲ್ಲ

  ಚಿರತೆಗಳಿಗೆ ಮೇಟಿಂಗ್ ಸೀಸನ್ ಅಂತ ಇರುವುದಿಲ್ಲ. ವರ್ಷದ ಯಾವುದೇ ಕಾಲದಲ್ಲಿ ಒಂದಾಗಬಲ್ಲವು. ಗರ್ಭಾವಸ್ಥೆ ಮೂರರಿಂದ ಮೂರುವರೆ ತಿಂಗಳು. 2ರಿಂದ 4 ಮರಿಗಳನ್ನು ಹೆರುವ ಚಿರತೆ, ಬಂಡೆಗಳ ಮಧ್ಯ ಅಥವಾ ಗುಹೆಗಳಲ್ಲಿ ಮರಿ ಇಡುತ್ತವೆ. ಮರಿಗಳು 4ರಿಂದ 9 ದಿನದ ನಂತರ ಕಣ್ಣು ಬಿಡುತ್ತವೆ. ಮೂರು ತಿಂಗಳ ನಂತರ ಅವುಗಳು ತಮ್ಮ ಗುಹೆಯನ್ನು ಬಿಟ್ಟು ತಾಯಿಯೊಡನೆ ಓಡಾಡಲು ಶುರು ಮಾಡುತ್ತವೆ. 2 ವರ್ಷಗಳ ಕಾಲ ತಾಯಿಯೊಡನೆ ಕಳೆಯುತ್ತವೆ. ನಂತರ ಬೇರ್ಪಡೆಯಾಗುತ್ತವೆ. ಅರಣ್ಯದಲ್ಲಿ ಚಿರತೆಯ ಮರಿಗಳು ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ.

  ಹುಲಿಯಂತೆ ಚಿರತೆ ಗಣತಿ ಯಾಕೆ ಮಾಡಿಲ್ಲ?

  ಹುಲಿಯಂತೆ ಚಿರತೆ ಗಣತಿ ಯಾಕೆ ಮಾಡಿಲ್ಲ?

  ಆನೆಗಳ ಗಣತಿ ಹಾಗು ಹುಲಿಗಳ ಗಣತಿ ಮಾಡಿದಂತೆ ಚಿರತೆಗಳ ಗಣತಿ ಮಾಡಲಾಗಿಲ್ಲ. ಆದರೂ ನಮ್ಮ ದೇಶದಲ್ಲಿ 12ರಿಂದ 14 ಸಾವಿರ ಚಿರತೆಗಳು ಇರಬಹುದೆಂಬ ಅಂದಾಜಿದೆ. ಸಾಮಾನ್ಯವಾಗಿ ಹುಲಿ ಅಥವಾ ಚಿರತೆ ಸಮೀಪದಲ್ಲಿರುವುದು ಭಾಸವಾದಾಗ ಜಿಂಕೆಗಳು ಹಾಗು ಸಿಂಗಳೀಕಗಳು ಎಚ್ಚರಿಕೆಯ ಕರೆ ನೀಡುತ್ತವೆ (ಅಲಾರಾಂ ಕಾಲ್ಸ್). ಜಿಂಕೆಗಳ ಈ ಕರೆ ಹುಸಿಯಾಗಬಹುದು, ಆದರೆ ಸಿಂಗಳೀಕಗಳು ಕರೆ ನೀಡಿದಲ್ಲಿ ಹುಲಿ ಅಥವಾ ಚಿರತೆಗಳು ಖಂಡಿತವಾಗಿ ಆ ಪ್ರದೇಶದಲ್ಲಿ ಇದ್ದೇ ಇರುತ್ತವೆ.

  ಕಪ್ಪು ಚಿರತೆ ಅರ್ಥಾತ್ ಬ್ಲಾಕ್ ಪ್ಯಾಂಥರ್

  ಕಪ್ಪು ಚಿರತೆ ಅರ್ಥಾತ್ ಬ್ಲಾಕ್ ಪ್ಯಾಂಥರ್

  ನಾಗರಹೊಳೆ ಕಾಡಿನ ಕಬಿನಿ ಭಾಗದಲ್ಲಿ ಕಪ್ಪು ಚಿರತೆಯೊಂದು ಇತ್ತೀಚಿಗೆ ಕಾಣಿಸುತ್ತಿದೆ. ಕಪ್ಪು ಚಿರತೆಯನ್ನು ಬ್ಲಾಕ್ ಪ್ಯಾಂಥರ್ ಎಂದು ಕರೆಯುತ್ತಾರೆ. ಜಂಗಲ್ ಬುಕ್ ನಲ್ಲಿ ಬರುವ ಬಗೀರ ಎಂಬ ಹೆಸರುವಾಸಿ ಕಪ್ಪು ಚಿರತೆಯೇ ಈ ಬ್ಲಾಕ್ ಪ್ಯಾಂಥರ್. ಅಂದಹಾಗೆ ಬ್ಲಾಕ್ ಪ್ಯಾಂಥರ್, ಚಿರತೆಯ ಬೇರೆ ತಳಿಯೇನಲ್ಲ. ಮೆಲನಿಸಂನಿಂದಾಗಿ ಕಪ್ಪು ಬಣ್ಣವಿರುತ್ತದೆ ಅಷ್ಟೇ. ಇವುಗಳು ಕೂಡ ಕಾಡಿನಲ್ಲಿ ಕಾಣುವುದು ತುಂಬಾ ಅಪರೂಪ. ಸುಮಾರು ಬಾರಿ ಕಬಿನಿಯಲ್ಲಿ ಸಫಾರಿ ಮಾಡಿದರೂ, ನಮ್ಮ ಕಣ್ಣಿಗೆ ಕಂಡಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The leopard (Panthera pardus) is one of the five big cats in the genus Panthera. It is very difficult to judge how this majestic wild animal bahaves in the jungle. It looks small but as strong as Tiger. Kannada column by Gagan Preeth, wildlife photographer.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more