ದೀಪದ ಕೆಳಗೆ ಯಾವತ್ತಿದ್ದರೂ ಕತ್ತಲೆ! ದೀಪಾವಳಿ ಶುಭಾಶಯಗಳು!
ದೀಪಾವಳಿ ಹತ್ತಿರ ಬರುತ್ತಿದ್ದಂತೆ ಎಲ್ಲರ ಮನೆಯಲ್ಲೂ ಒಂದೊಂದು ಸಂಭ್ರಮ. ಮೂಲ ಬೆಂಗಳೂರಿಗರಿಗೆ ಹಬ್ಬದ ಸಾಲು ಬಂತೆಂದರೆ ರಸ್ತೆಯಲ್ಲಿ ಜನರು ಕಡಿಮೆ, ಟ್ರಾಫಿಕ್ ಇಲ್ಲದಿರುವ ಖುಷಿ. ಮತ್ತಷ್ಟು ಜನಕ್ಕೆ ಮಕ್ಕಳು ಮನೆಗೆ ಬರುವ, ಸಿಹಿ ತಿಂಡಿ ಮಾಡುವ ಸಂಭ್ರಮ. ದೀಪಗಳ ಸಾಲುಗಳು ದೀಪಾವಳಿಯನ್ನ ಇನ್ನೂ ಚೆಂದಗಾಣಿಸುತ್ತದೆ.
ಪ್ಲಾಸ್ಟಿಕ್ಕಿನ ಯಾವ ಅಂಶವೂ ಬೇಡ ಹಬ್ಬದಲ್ಲಿ ಎಂದು ಅಕ್ಷರ, ನನಗೆ ದೀಪಗಳನ್ನ ತಗೋಳ್ಳೋದಕ್ಕೆ ಸಹಾಯ ಮಾಡು ಎಂದು ಗಾಂಧಿ ಬಜಾರಿಗೆ ಕರೆದುಕೊಂಡು ಹೋದ. ಮನೆಯಲ್ಲಿ ಎಲ್ಲರೂ ಒಂದೊಂದು ಜವಾಬ್ದಾರಿ ತೆಗೆದುಕೊಂಡಾಗ ಮನೆಯ ಹಬ್ಬಗಳು ಚೆನ್ನಾಗಿರುತ್ತವೆ. ನಮ್ಮ ಮನೆಗೆ ನಾವೇ ಅತಿಥಿಗಳಾಗಿ, ಬೇಜವಾಬ್ದಾರಿಯಿಂದಿದ್ದರೆ ಹಬ್ಬಗಳು ಖುಷಿ ಕೊಡುವುದಿಲ್ಲ.
ಗಾಂಧಿ ಬಜಾರು ಹಬ್ಬದ ಒಂದು ವಾರದ ಮುಂಚೆಯೇ ಹಬ್ಬದ ವಾತಾವರಣವನ್ನ ತುಂಬಿಕೊಂಡಿರುತ್ತದೆ. ತಾತ ಹೇಳುತ್ತಿದ್ದ ಹೂವಿನ ಮಾರುಕಟ್ಟೆ, ತರಕಾರಿ ಅಂಗಡಿಗಳು, ದೀಪದ ಅಂಗಡಿಗಳೆಲ್ಲಾ ಅಲ್ಲೇ ಇವೆ. ದೀಪಗಳನ್ನ ಆರಿಸಿಕೊಳ್ಳಲು ಅಲ್ಲಿ ಹೋದಾಗ ಕಂಡಿದ್ದು ಹೊಸ ಪ್ರಪಂಚವೇ. ಚಿಕ್ಕ ಮಕ್ಕಳು, ವೃದ್ಧರು, ಹೆಣ್ಣುಮಕ್ಕಳು ನಿಂತು ವ್ಯಾಪಾರವನ್ನ ಮಾಡುತ್ತಿದ್ದರು.

ಈ ಪ್ಲಾಸ್ಟಿಕ್ ಯುಗದಲ್ಲಿ ಮಣ್ಣಿನ ಹಣತೆಯನ್ನ ತರುವ ಜನರನ್ನ ನೋಡಿ ನನಗೆ ಖುಷಿಯಾಯಿತು. ಅಮ್ಮ ಕೂಡ ದೀಪಗಳನ್ನ ಹಾಗೆ ಆಯ್ದುಕೊಳ್ಳುತ್ತಾಳೆ. ಪ್ರತಿ ವರ್ಷ ಹೊಸತಾದ ಆಕಾಶಬುಟ್ಟಿಯನ್ನ ಅವಳೂ ಮತ್ತು ತಂಗಿ ಸೇರಿ ಮಾಡುತ್ತಾರೆ ಅಥವಾ ತರುತ್ತಾರೆ. ಅಮ್ಮನಿಗಿಂತ ಮುಂಚೆ ನಾನೂ ದೀಪ ತರಲು ಹೋದೆ. "2 ಡಝನ್ ಸಾಕು" ಎಂದು ನಾನು, "4 ಬೇಕು" ಎಂದು ಅಕ್ಷರ. ಕಡೆಯಲ್ಲಿ ಆ ದಿಸೈನ್, ಈ ಡಿಸೈನ್ ಎಂದು ಪೂರ್ತಿ ಅಂಗಡಿ ಕೊಳ್ಳುವುದರಲ್ಲಿದ್ದೆವು.
ಅಪ್ಪನಿಗೆ ಸಹಾಯವಾಗಿ ಒಂದು ಪುಟಾಣಿ ಹುಡುಗಿ ಬಹಳ ಜಾಗರೂಕತೆಯಿಂದ ಹಣತೆಗಳನ್ನ ಕಾಗದದಲ್ಲಿ ಸುತ್ತಿ ಕೊಡುತ್ತಿದ್ದಳು. ಚಿಕ್ಕ ಮಕ್ಕಳೊಂದಿಗೆ ನನಗೆ ಚೌಕಾಸಿ ಕಷ್ಟ. ಹಂಗಾಗಿಯೂ 10 ರುಪಾಯಿ ಕಡಿಮೆ ಕೇಳಿ, ಮತ್ತೆ ಗಾಡಿಯಲ್ಲಿ ಹೋಗುವಾಗ ಆ ಹತ್ತು ರುಪಾಯಿ ಉಳಿಸಿ ಏನು ಘನಂದಾರಿ ಕೆಲಸ ಮಾಡುತ್ತಿದ್ದೆ ಎಂದೂ ಯೋಚನೆ ಮಾಡುತ್ತಿದ್ದೆ.
ಅವರೆಲ್ಲರನ್ನೂ ಮಾತಾಡಿಸಲ್ಲಿಲ್ಲವೆಂದು ನಾನು ಮರುದಿವಸ ಕಛೇರಿಯ ಹತ್ತಿರವೇ ಇದ್ದ ಅಂಗಡಿಗಳಿಗೆ ಹೋಗಿ ಒಂದಷ್ಟು ಮಾತಾಡಿಸಿಕೊಂಡು ಬರೋಣವೆಂದು ಹಣತೆ ಹುಡುಕಹೊರಟೆ. ಅದೇ ಪುಟ್ಟ ಹುಡುಗಿ ನಿಂತಿದ್ದಳು. ಶಾಲೆಗೆ ಮಕ್ಕಳನ್ನ ಅದೂ ಹೆಣ್ಣು ಮಕ್ಕಳನ್ನ ಆ ವರ್ಗದ ಜನರು ಕಳಿಸದಿರುವ ಬಗ್ಗೆ ಗೊತ್ತಿತ್ತು.

ಮೆಲ್ಲಗೆ ಮತ್ತೆ ಹಣತೆಯನ್ನ ವಿಚಾರಿಸಿ ತೆಗೆದುಕೊಳ್ಳುವಾಗ ಆಕೆಗೆ "ಶಾಲೆ ಇಲ್ಲವಾ?" ಎಂದೆ. "ಇಲ್ಲಾ ಈ ವಾರ ಪೂರ್ತಿ ಹಬ್ಬಕ್ಕೆ ರಜಾ" ಎಂದು ಹೇಳಿದಳು. ಗಡಿ ಭಾಗದಿಂದ ವಲಸೆ ಬಂದು, ಇಲ್ಲಿ ಅವಿನ್ಯೂ ರೋಡಿನ ಹತ್ತಿರ ಮಣ್ಣಿನ ಹಣತೆಗಳನ್ನ ದೀಪಾವಳಿಯ ಸಮಯದಲ್ಲಿ ತೆಗೆದುಕೊಂಡು ಮಾರಿ ಜೀವನ ಸಾಗಿಸುವ ಜನ ಇವರೆಲ್ಲ. ದಸರಾ ಸಮಯದಲ್ಲಿ ಬೊಂಬೆಗಳು, ಸಂಕ್ರಾಂತಿಯ ಸಮಯ ಎಳ್ಳು ಬೀರುವ ಡಬ್ಬಿಗಳು, ಗೌರಿ ಹಬ್ಬಕ್ಕೆ ಮೊರದ ಜೊತೆ ಹೀಗೆ ಹಬ್ಬಕ್ಕನುಗುಣವಾಗಿ, ಜಾತ್ರೆಯ ಅನುಗುಣವಾಗಿ ವ್ಯಾಪಾರ ಇವರದ್ದು. ಮಾರುವ ಲಾಭದಲ್ಲಿ ಮಕ್ಕಳ ಶಾಲೆ, ಅಲ್ಲೇ ಜಾಗ ಹೊರಟುಹೋಗುತ್ತದೆ ಎಂದು ಒಬ್ಬರು ಫುಟ್ಪಾತಿನಲ್ಲಿ ಮಲಗೋದು ಇವೆಲ್ಲ ಅವರಿಗೆ ಮಾಮೂಲಿನ ವಿಷಯ.
ದೀಪಾವಳಿ ವಿಶೇಷ ಪುರವಣಿ
ಮುಂಚೆ ಅವರು ಮಣ್ಣಿನ ಮಡಿಕೆಗಳನ್ನ, ಥರಥರದ ವೇಸ್ ಗಳನ್ನ, ಹಣತೆಗಳನ್ನ, ಮತ್ತೆಲ್ಲಾ ಮಣ್ಣಿನ ವಸ್ತುಗಳನ್ನ ಮಾಡುವ ಕೆಲಸ ಮಾಡುತ್ತಿದ್ದರಂತೆ. ಪ್ಲಾಸ್ಟಿಕ್ ಬಿಂದಿಗೆಗಳು, ಪ್ಲಾಸ್ಟಿಕ್ ದೀಪಗಳು ಬಂದು ಇವರ ವ್ಯಾಪಾರವೆಲ್ಲ ಕುಗ್ಗಿಹೋಯಿತಂತೆ. ಹಂಗೂ ಪಟ್ಟಣದ ಮಂದಿ ಒಂದಷ್ಟು ಜನ ಹಣತೆಯ ವ್ಯಾಪಾರವನ್ನ ವೃದ್ಧಿಸುತ್ತೇವೆ ಎಂದು ಏನೇನೋ ಮಾಡಿ ಇದ್ದ ಬದ್ದ ದೀಪಗಳನ್ನೆಲ್ಲಾ ಅರ್ಧ ರಾತ್ರಿಯಲ್ಲಿ ಹೊತ್ತುಕೊಂಡು ಹೋದವರನ್ನ ಈಗ ಕಂಡುಹಿಡಿಯಲು ಸಾಧ್ಯವೇ ಇಲ್ಲವೆಂದು ದುಃಖ ಪಡುತ್ತಿದ್ದಾರೆ. ಹಾಗಾಗಿಯೂ "ಈಗಿನ ಕಾಲದವ್ರು ದೀಪ ಅಚ್ತೀರಲ್ಲ ಅದೇ ಜಾಸ್ತಿ, ತಗೊಳ್ಳಿ" ಎಂದು ಖುಷಿ ಪಟ್ಟು ವ್ಯಾಪಾರ ಮಾಡುವವರು.

"ಅಮೆಜಾನ್ ಅಲ್ಲಿ ದೀಪಕ್ಕೆಷ್ಟು?" ಎಂದು ಕೇಳಿದಾಗ ನಾನು ಬೆಚ್ಚಿಬಿದ್ದೆ. ಹಂಗಾಗಿಯೂ ತೆಗೆದು ನೋಡಿ "2 ಡಝನ್ ಗೆ 250" ಅಂದೆ. "ಅಷ್ಟು ಕೊಟ್ಟು ತಗೋತಾರಾ" ಎಂದು ಮತ್ತೆ ಕೇಳಿದ್ರು, "ಹೂ, ಸಮಯ ಜನಕ್ಕಿಲ್ಲ, ಇಲ್ಲಿಗೆಲ್ಲ ಬರೋದು ಅವರಿಗೆ ಕಷ್ಟ, ತಗೋತಾರೆ" ಎಂದು ಅಂದೆ. "ನಂದೆಲ್ಲಾ ಅಲ್ಲಿ ಹಾಕ್ಬೋದಾ?" ಎಂದೂ ಕೇಳಿದ್ರು. ವಿಚಾರಿಸಿ ಹೇಳ್ತೀನಿ ಎಂದು ಸುಮ್ಮನಾದೆ. ಇಷ್ಟು ಜೋಪಾನವಾಗಿ ಕಾಪಾಡಿ ನಮಗೆ ಡೆಲಿವರಿ ಬರುವಷ್ಟರಲ್ಲಿ 4-5 ದೀಪಗಳು ಒಡೆದೇ ಹೋಗಿರುತ್ತದೆ ಎಂದು ಸಹೋದ್ಯೋಗಿ ಹೇಳಿದಳು.
ಒಂದಷ್ಟು ಪ್ಯಾಕ್ ಮಾಡಿ ತೆಗ್ದುಕೊಂಡು ಹೋಗುವಾಗ, "ನಿಮ್ಮ ಮನೆಯಲ್ಲಿ ಬೆಳಕು, ನಮಗಿನ್ನೂ ಕತ್ತಲು" ಎಂದು ಮಾರ್ಮಿಕವಾಗಿ ನುಡಿದರು. ದೀಪದ ಕೆಳಗೆ ಕತ್ತಲಲ್ಲವೇ ಎಂದು ನಾನೂ ಯೋಚನೆ ಮಾಡುತ್ತಾ ಬಂದೆ. ಅವರೆಲ್ಲರ ಜೀವನ ಹೇಗೆ ಸುಧಾರಿಸಬಹುದು ಎಂದೂ ಯೋಚಿಸುತ್ತಾ ಬಂದೆ. ಅಮೆಜಾನ್ ಅಲ್ಲಿ ಹಾಕಿದರೇ ಮಾತ್ರವಾಗುತ್ತದಾ ಅಥವಾ ನಾವು ಇನ್ನೂ ಹಳೆಯ ಕಾಲದ ಥರ ಮಣ್ಣಿನ ಹಣತೆಗಳನ್ನ ಕೊಂಡು ಹಚ್ಚಿ, ನಮ್ಮ ಮನೆಗೆ ಬೆಳಕು, ಅವರಿಗೂ ಬೆಳಕು ನೀಡುವ ಶಕ್ತಿ ಕೇಂದ್ರಗಳಾಗುತ್ತೀವಾ ನೋಡಬೇಕು..
ಹ್ಯಾಪಿ ದೀಪಾವಳಿ!












Click it and Unblock the Notifications