ಸಮಸ್ಯೆಗಳ ಬೆಟ್ಟ ಹತ್ತಿ ಕನ್ನಡ ಧ್ವಜ ಹಾರಿಸೋಣ ಬನ್ನಿ!

By: ಜಯನಗರದ ಹುಡುಗಿ
Subscribe to Oneindia Kannada

ಮತ್ತೊಂದು ರಾಜ್ಯೋತ್ಸವ, ಮತ್ತೆ ಕೆಂಪು ಹಳದಿಯನ್ನ ಹೊರ ತೆಗೆಯುವ ಸಮಯ. ರೋಶಾವೇಶದ ಮಾತುಗಳಲ್ಲಿ ನಮ್ಮ ಉತ್ಸವವನ್ನ ಕಳೆದುಕೊಳ್ಳದೆ ಮತ್ತೆ ಯಾವುದಕ್ಕೆ ಈ ರಾಜ್ಯ ಸ್ಥಾಪನೆಯಾಯ್ತೋ, ಯಾವ ಉದ್ದೇಶಕ್ಕಾಗಿ ಜನ ಇದಕ್ಕೆ ಮನೆ ಮಠ ಮಾರಿಕೊಂಡು ಬೀದಿಗೆ ಬಂದರೋ ಇವೆಲ್ಲವೂ ನಮಗೆ ನೆನಪಾಗಬೇಕು.

ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ!

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯ ಉಳಿಸುವಿಕೆಯ ಪರಿಸ್ಥಿತಿಗೆ ಈಗ ಬಂದಿದ್ದೇವೆ. ಒಮ್ಮೊಮ್ಮೆ ಖೇದವಾದರೂ ಸರಿಯೇ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳೋದು ಒಳಿತು. ನಾ ಬಾರ್ಸಿಲೋನಾದಲ್ಲಿದ್ದಾಗ ಭಾಷೆಯ ಕೆಲವು ಆಯಾಮಗಳು ತಿಳಿಯಿತು. ಪುಟ್ಟ ಊರುಗಳು, ನಗರಗಳು ಹೇಗೆ ಅವರ ಭಾಷೆಯನ್ನ ಬಿಟ್ಟುಕೊಡದೇ ಇದ್ದಾರೆ ಎಂಬುದನ್ನು ಕಂಡರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಬಾರ್ಸಿಲೋನಾದಲ್ಲಿ ಕತಲಾನ್ ಅನ್ನೋ ಭಾಷೆ ಮಾತಾಡುತ್ತಾರೆ. ಅಲ್ಲಿನ ಶಾಲೆಗಳ ಮಾಧ್ಯಮ ಅದೊಂದೆ. ದುಡ್ಡು ಕೊಡೋದಕ್ಕೆ ಅನುಕೂಲವಾದವರಿಗೆ ಆಂಗ್ಲ ಮಾಧ್ಯಮ.

Service to Kannada is not just hoisting flag on 1st November

ಸ್ಪೇನ್ ಇಂದ ದೂರವಾಗುವ ಇಚ್ಛೆ ಇದ್ದುದರಿಂದ, ಆ ಭಾಷೆಯನ್ನ ಅವರ ಮೇಲೆ ಹೇರಿದ್ದ ಕಾರಣ ಆ ಭಾಷೆಯನ್ನ ಕಲಿಯೋ ಸಾಹಸ ಕೆಲವರು ಮಾಡಿಲ್ಲ. ಹೀಗೆ ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದವರು ತಮ್ಮ ಸ್ನಾತಕೋತ್ತರ ಪದವಿಯವರೆಗೆ ಅವರ ಭಾಷೆಯಲ್ಲಿಯೇ ಓದುವ ಅವಕಾಶ, ನಂತರ ಅದಕ್ಕೆ ತಕ್ಕುದಾದ ಕೆಲಸಕ್ಕೆ ಸಹ ಅವರ ಭಾಷೆ ಬರಲೇಬೇಕಾದ ಕಡ್ಡಾಯ ನಿಯಮ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋದರೂ ಸಹ ಈ ನಿಯಮವನ್ನ ಪಾಲಿಸಲೇಬೇಕು.

ಬೆಂಗಳೂರು ಟ್ರಾಫಿಕ್ ಸಂತೆಯ ಗದ್ದಲದಲ್ಲಿ ಸದ್ದಿಲ್ಲ!

ನಮ್ಮ ದೇಶ ಇಡೀ ಯುರೋಪನ್ನ ಪ್ರತಿನಿಧಿಸಿದರೂ ನಮ್ಮಲ್ಲಿನ ಭಾಷೆಯ ಯೋಜನೆಗಳು ಅಧೋಗತಿಯಲ್ಲಿವೆ. ಒಂದೇ ದೇಶ ಒಂದೇ ಭಾಷೆಯೆಂಬ ಹುಚ್ಚು ಸದ್ಯಕ್ಕೆ ನಮ್ಮನ್ನಾವರಿಸಿದೆ. ಆ ಹುಚ್ಚಿನಲ್ಲಿ ಕನ್ನಡ ಎಲ್ಲಿ ಕಳೆದುಹೋಗತ್ತೋ ಅನ್ನೋ ಭಯ ಕಾಡುವುದರಲ್ಲಿ ಸಂಶಯವಿಲ್ಲ. ನಾ ಕನ್ನಡ ಹೇಳಿಕೊಡುವ ಕಡೆ ನನ್ನ ವಿದ್ಯಾರ್ಥಿಗಳಿಗೆ ಅವರು ಕನ್ನಡ ಯಾಕೆ ಕಲಿತಿದ್ದಾರೆ ಎಂಬ ಪ್ರಶ್ನೆ ಕೇಳಿದಾಗ ಅಥವಾ ಇಲ್ಲೆಷ್ಟು ವರ್ಷದಿಂದ ಇದ್ದೀರ ಎಂಬ ಉತ್ತರಕ್ಕೆ ನಾನು ಹೌಹಾರಿದ್ದೇನೆ.

Service to Kannada is not just hoisting flag on 1st November

ಒಬ್ಬರಂತೂ 25 ವರ್ಷದಿಂದ ಕನ್ನಡ ಕಲಿಯದೇ ಒಂದು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಅಲ್ಲಿನ ಜನಕ್ಕೂ ಕನ್ನಡದ ಅವಶ್ಯಕತೆ ಇರಲ್ಲಿಲ್ಲ. ಅವರ ಸಹೋದ್ಯೋಗಿಗಳು ಇವರ ಭಾಷೆಯಲ್ಲಿ ಮಾತಾಡಿಸಿದ್ದಾರಂತೆ. ಇನ್ನು ಅವರಿದ್ದ ಜಾಗ ಸಹ ಹಾಗೆಯೇ ಇತ್ತಂತೆ. ಮಕ್ಕಳನ್ನು ಕನ್ನಡ ಕಲಿಸದೇ ಇದ್ದ ಶಾಲೆಗೆ ಸೇರಿಸಿದ್ದರಂತೆ. ಸಂಸ್ಥೆಯ ವಾಹನ, ಚಾಲಕ ಇದ್ದುದ್ದರಿಂದ ಅವರು ಕನ್ನಡ ಕಲಿಯುವ ಅವಶ್ಯಕತೆಯೇ ಬರಲ್ಲಿಲ್ಲವಂತೆ.

2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಈಗ ನಿವೃತ್ತರಾಗಿದ್ದಾರೆ, ತಮ್ಮದೇ ಸ್ವಂತ ಮನೆ ಕಟ್ಟಿಕೊಂಡು ಜಯನಗರಕ್ಕೆ ಬಂದವರಿಗೆ ಸುತ್ತ ಮುತ್ತಲೂ ಕನ್ನಡ ಮಾತ್ರ ಕೇಳಿಸಿದೆ, ಇನ್ನು ಓಲಾ, ಆಟೋದಲ್ಲಿ ಕನ್ನಡ ಮಾತಾಡೋದು ಕಡ್ಡಾಯವಾದ್ದರಿಂದ ಈವಾಗ ಅವರಿಗೆ ಕನ್ನಡ ಕಲಿಯುವ ಅವಶ್ಯಕತೆ ಬಿದ್ದಿದೆ. ಅವರ ಈ ಕಥೆ ಕೇಳಿ ನಾ ತಲೆ ತಿರುಗಿ ಬೀಳೋದೊಂದು ಬಾಕಿ ಇತ್ತು. ಭಾಷೆಯನ್ನ ಕಲೀಬಾರದೆಂಬ ಅವರ ಧೋರಣೆಯೂ ಇಲ್ಲಿ ಕೆಲಸ ಮಾಡಿದೆ. ಇಷ್ಟೊಂದು ಹಠ ನಡೆಯುವುದು ನಮ್ಮ ಊರಿನಲ್ಲಿ ಮಾತ್ರ.

2ನೇ ದಿವಸಕ್ಕೆ ಬಾರ್ಸಿಲೋನಾದಲ್ಲಿ ಭಾಷೆ ಅರ್ಥವಾಗದ್ದಿದ್ದ ಕಾರಣ ನಾನು ಮನೆಗೆ ಕರೆ ಮಾಡಿ ಜೋರಾಗಿ ಅತ್ತಿದ್ದೆ. ವಾಪಸ್ಸು ಬರುವ ಯೋಚನೆಯನ್ನ ಸಹ ಮಾಡಿದ್ದೆ. ಯಾಕೋ ನಮ್ಮ ಹೃದಯ ವೈಶಾಲ್ಯತೆಯನ್ನ ಬಹಳ ನೆನಪಿಸಿಕೊಂಡ ಸಮಯ. ಸರ್ಕಾರಿ ಕಛೇರಿಯಲ್ಲಂತೂ ತಡ ಬಡ ಎಂದು ಮಾತಾಡೋ ಕತಲಾನ್ ಗೆ ನನ್ನ ಉಸಿರು ಕಟ್ಟುತ್ತಿತ್ತು. ಕಡೆಗೆ ನಾನು ಸೇರಿಕೊಂಡಿದ್ದ ಕೆಲಸದ ಕರಾರು ಸಹ ಅವರ ಭಾಷೆಯಲ್ಲಿಯೇ ಇತ್ತು. ನನ್ನ ಗಣಕಯಂತ್ರ ಹಾಳಾಗಿ ಹೊಸದನ್ನು ತೆಗೆದುಕೊಳ್ಳುವ ಪ್ರಮೇಯ ಬಂದಾಗ ನಾನು ಒಂದು ವಾರ ಇಂಗ್ಲೀಷ್ ಕೀಲಿಮಣೆ ಇರುವ ಗಣಕೆ ಯಂತ್ರಕ್ಕೆ ಕಾಯಬೇಕಾಗಿ ಬಂತು. ಆ ಮಟ್ಟಕ್ಕೆ ಅವರು ಭಾಷೆಯನ್ನ ಬಳಸುತ್ತಾರೆ.

Service to Kannada is not just hoisting flag on 1st November

ನಮ್ಮಲ್ಲಿ ಕನ್ನಡವನ್ನ ಮ್ಯಾಕ್ ಬುಕ್ಕಿಗೆ ಸೇರಿಸಲು ಹೊರಗಡೆಯಿಂದ ಸಿಗುವ ಕೀಲಿಮಣೆಯ ಸಾಫ್ಟ್ವೇರನ್ನ ಬಳಸಬೇಕು. ಕನ್ನಡದವರಿಗೇ ಎಷ್ಟೋ ಮಟ್ಟಿಗೆ ಕಿರಿಕಿರಿಯಾಗುವ ಕೆಲಸವಿದು. ಇದೆಲ್ಲಾ ಸಮಸ್ಯೆ ಕನ್ನಡಕ್ಕಿದೆ. ಯಾವುದೇ ಭಾಷೆ ಜಗತ್ತಲ್ಲಿ ಆಗುವ ಬದಲಾವಣೆಗೆ ತೆರೆದುಕೊಳ್ಳಲ್ಲಿಲ್ಲವೆಂದರೆ ಅದನ್ನ ಬಳಸುವ ಜನ ಕಡಿಮೆಯಾಗುತ್ತಾರೆ. ವಿದೇಶದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗನಿಗೆ ಕನ್ನಡ ಪುಸ್ತಕ ಕಿಂಡಲ್ ನಲ್ಲಿ ಸಿಗುವುದಿಲ್ಲ. ಜಗತ್ತಿನ ಯಾವಯಾವುದೋ ಭಾಷೆಯ ಪುಸ್ತಕಗಳು ಅಲ್ಲಿ ಲಭ್ಯ, ಆದ್ರೆ ಕನ್ನಡ ಲಭ್ಯವಿಲ್ಲ. ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳು ಬೆಟ್ಟದಷ್ಟಿದೆ.

ಕನ್ನಡ ಕಲಿಸುವಿಕೆಯಿಂದ ಹಿಡಿದು ನಮ್ಮ ಗಣಕಯಂತ್ರವೂ ಕನ್ನಡ ಮಾತಾಡಿದರೆ ಮಾತ್ರ ಮುಂದಿನ ಪೀಳಿಗೆ ನಮ್ಮ ಭಾಷೆಯನ್ನ ಬಳಸುತ್ತದೆ, ಇಲ್ಲವೆಂದರೆ ಸುಲಭಕ್ಕೆ ಸಿಗುವ ಫಾಸ್ಟ್ ಫುಡ್ ಭಾಷೆಯನ್ನ ಕಲಿಯುವ ಮನಸಾಗುತ್ತದೆ.

ಒಟ್ಟಿನಲ್ಲಿ ರಾಜ್ಯೋತ್ಸವ ಬರೀ ಅವತ್ತಿನ ದಿವಸ ಬಾವುಟ ಹಾರಿಸಿ, ನಾಡಗೀತೆ ಹಾಡಿ, ಆಕ್ರೋಶದಿಂದ ಮಾತಾಡಿ, ಮಯೂರ ಚಲನಚಿತ್ರದ ಒಂದೆರಡು ಸಾಲುಗಳನ್ನ ಹಾಡಿ ಹೊಗಳಿ, ಮುಗಿಸುವ ಕಾರ್ಯಕ್ರಮಕ್ಕೆ ತಡೆಹಾಕಿ, ಕನ್ನಡ ಕಲಿಸುವ, ಕನ್ನಡದಲ್ಲಿಯೇ ಮಾತಾಡುವ, ಕನ್ನಡವನ್ನ ನಮ್ಮ ದಿನನಿತ್ಯದ ಕೆಲಸ ಹಾಗೂ ತಂತ್ರಾಂಶಗಳನ್ನ ಅಭಿವೃದ್ದಿ ಪಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳೋಣ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಧ್ಯೇಯ ವಾಕ್ಯವನ್ನ ಪಾಲಿಸುವ ಪ್ರಯತ್ನ ಮಾಡೋಣ. ರಾಜ್ಯೋತ್ಸವದ ಶುಭಾಶಯಗಳು. ಮನೆ ಮನಸಿನಲ್ಲಿ ಕನ್ನಡ ರಾರಾಜಿಸಲಿ. ಜೈ ಭುವನೇಶ್ವರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Service to Kannada is not just hoisting flag on 1st November every year. Make every non-Kannadiga learn our Kannada language, use Kannada on internet, let's breath Kannada every second. An article on the occasion of Kannada Rajyotsava by Meghana Sudhindra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ