• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!

By ಜಯನಗರದ ಹುಡುಗಿ
|

ಮಹಾಭಾರತ ಮನೆಯ ಮನೆಯ ಕಥೆ ಇದ್ದಂತೆ. ಆ ಮಹಕಾವ್ಯದಲ್ಲಿ ನಡೆಯುವ ಸುಮಾರು ಘಟನೆಗಳು ನಮ್ಮ ಮನೆಯಲ್ಲಿಯೋ, ಊರಲ್ಲಿಯೋ, ದೇಶದಲ್ಲಿಯೋ ನಡೆದೇ ಇರುತ್ತದೆ. ಇದು ಕಾವ್ಯವೋ, ಇತಿಹಾಸವೋ ಅಥವಾ ನೈಜ ಘಟನೆಯೋ ಎಂದು ಅರಿವಿಗೆ ಬರುವ ಮುನ್ನವೇ ನಮ್ಮ ಮನಸಿನಲ್ಲಿ ಅಚ್ಚೊತ್ತಾಗಿರುವ ಈ ಭಾರತವು ಕನ್ನಡದ ಎಷ್ಟೋ ಕವಿಗಳು, ಪಂಡಿತರು ಕನ್ನಡೀಕರಿಸಿ ನಮ್ಮಂತಹ ಪಾಮರರಿಗೂ ತಿಳಿಯುವ ಹಾಗೆ ಮಾಡಿದ್ದಾರೆ.

ಲಕ್ಷೀಶನ ಜೈಮಿನ ಭಾರತ, ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಸಾಹಸಭೀಮವಿಜಯ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ಇವರೆಲ್ಲರೂ ಭಾರತವನ್ನು ಮನೆಮನೆಗೆ ತಲುಪೋಹಾಗೆ ಮಾಡಿದ್ದಾರೆ. ಶಾಲೆಯಲ್ಲಿ ಓದಿದ ಇವೆಲ್ಲವೂ ಇನ್ನೂ ಮನದಲ್ಲಿ ಅಚ್ಚಳಿಯದೆ ಇರುವುದು ಕಥೆಯ ವಸ್ತುವಿನಿಂದಲೇ. ಒಂದರಲ್ಲಿ ಭೀಮ ನಾಯಕ, ಒಂದರಲ್ಲಿ ಅರ್ಜುನ ಮತ್ತೊಂದರಲ್ಲಿ ಕರ್ಣ ಹೀಗೆ ಅವರೆಲ್ಲರ ಕಣ್ಣಿಂದಲೂ ಮಹಾಭಾರತದ ಕಥಾನಕವು ಬಹಳ ಆಪ್ಯಾಯಮಾನವಾಗಿದೆ.

"ನೀರೊಳಗಿರ್ದುಂ ಬೆಮರತನ್ ಉರಗ ಪತಾಕ" ಎಂದು ರನ್ನ ಹೇಳಿದ ಮಾತುಗಳು ಇನ್ನು ನಮ್ಮನ್ನ ವೈಶಂಪಾಯನ ಸರೋವರದ ತುದಿಯಲ್ಲಿ ಭೀಮ - ದುರ್ಯೋಧನರ ಕಾಳಗವನ್ನ ಈಗಲೇ ನೋಡುವಂತೆ ಭಾಸವಾಗುತ್ತದೆ. ಪ್ರಾಯಶಃ ಚಿಕ್ಕಮಕ್ಕಳಿಗೂ ಈ ಕಥೆಗಳು ಜನಜನಿತ.

ನಾ ಮೊದಲು ಭಾರತವನ್ನ ಕೇಳಿದ್ದು ತಾತನ ಬಾಯಿಂದ. ಆಗ ಅರ್ಜುನ, ಕರ್ಣ, ಭೀಷ್ಮ, ಅಭಿಮನ್ಯು ಮಾತ್ರ ನಾಯಕರು. ಅಲ್ಲಿ ಕುಂತಿ, ಶಕುನಿಯ ಕುಟಿಲತನ, ದ್ರೌಪದಿಯ ಅಸಹಾಯಕಥೆಯನ್ನ ಅರ್ಥ ಮಾಡಿಕೊಳ್ಳುವ ವಯಸ್ಸಾಗಿರಲ್ಲಿಲ್ಲ. ರಾಜನಿಗೆ 5 ಜನ ಹೆಂಡತಿಯರಿರುವ, ಅಷ್ಟೆ ಸಹಜವಾಗಿ ರಾಣಿಗೆ 5 ಜನ ಗಂಡಂದಿರು ಇರುವುದನ್ನು ಒಪ್ಪಿಕೊಳ್ಳುವ ಮನಸ್ಸು. ಆಮೇಲೆ ಅವರು ದೇವರು, ದೇವತೆಗಳಾದ್ದರಿಂದ ಏನು ಬೇಕಾದರೂ ಮಾಡಬಹುದು ಎಂಬ ಕಲ್ಪನೆಯೂ ಇತ್ತು.

ತಾತನ ಕಥೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವು "ದ್ರೌಪದಿಗೆ ಅವಮಾನ ಮಾಡಿಬಿಟ್ರು ಎಲ್ಲರ ಮುಂದೆ" ಎಂದಷ್ಟೆ ದಾಖಲಾಗಿತ್ತು. ಮಕ್ಕಳ ಮುಂದೆ ಈ ಘೋರ ಕೃತ್ಯವನ್ನ ಹೇಳುವ ಮನಸ್ಸು ತಾತನಿಗಿರಲ್ಲಿಲ್ಲವೇನೋ, ಅಥವಾ ಮುಗ್ಧ ಮನಸ್ಸುಗಳಿಗೆ ಈ ಪರಿಚಯವೇ ಆಗಬಾರದೆಂದು ಸುಮ್ಮನಿದ್ದರೋ ತಿಳಿಯದು. ಸ್ವಲ್ಪ ದೊಡ್ಡವರಾದ ನಂತರ ಕುಂತಿ ಮತ್ತು ದ್ರೌಪದಿಯಿಂದಲೇ ಭಾರತ ನಡೆದ್ದದ್ದು, ಹೆಣ್ಣುಮಕ್ಕಳೆಲ್ಲ ಕಲಹ ಪ್ರಿಯರು ಎಂಬ ಅತಿ ಕೆಟ್ಟ ಜೋಕ್ ಓದಿದ ನಂತರವೇ ಈ ಹೆಣ್ಣು ಮಕ್ಕಳ ಬಗ್ಗೆ ಓದುವ, ತಿಳಿದುಕೊಳ್ಳುವ ಮನಸ್ಸಾಗಿದ್ದು.

ಮೊದಲು ಸಿಕ್ಕಿದ್ದು ಮಹಾಭಾರತದ 16 ಸಂಪುಟಗಳು. ಅದರಲ್ಲಿ ದ್ರೌಪದಿಯ ಅಸಹಾಯಕತೆಯನ್ನ ಚಿತ್ರಿಸಲಾಗಿತ್ತು. ಒಂದು ಹೆಣ್ಣು/ ಹೆಣ್ಣನ್ನ ಒಂದೇ ಎಂದು ಭಾವಿಸಿ ಹಂಚಿಕೊಂಡಿರುವ ವಿಷಯ ನನಗೆ ಮಹಾಭಾರತ ಮೇಲೆ ಅಸಹ್ಯ ಬರುವ ಹಾಗೆ ಮಾಡಿತ್ತು. ಇದೆಂತಹ ಕಥೆ ಮಾರಾಯ, ಇದನ್ನೆಲ್ಲ ಇಷ್ಟೊಂದು ಮನಸ್ಸಿಟ್ಟು ಓದಿದ್ನಲ್ಲ ಎಂದು ಅನ್ನಿಸತೊಡಗಿತ್ತು. ಭಾರತದಲ್ಲಿ ನಡೆಯುವ ಭಗವದ್ಗೀತೆಯ "ಕರ್ಮ, ಕಾರ್ಯಗಳ್ಯಾವುದು" ಅವಳ ವಸ್ತ್ರಾಪಹರಣಕ್ಕೆ ಸಮಂಜಸವಾದ ಉತ್ತರವನ್ನ ನೀಡಲ್ಲಿಲ್ಲ.

ಅವಳ ಕಣ್ಣಿಂದ ಮಹಾಭಾರತವನ್ನ ನೋಡುವ ಮನಸ್ಸಾಯಿತು. ಅದ್ಯಾವುದು ರಂಗದ ಮೇಲೆ ಬಂದಿದ್ದು ನಾ ಕಾಣೆ. ಒಂದೆರಡು ಬಂದಿದ್ದರೂ ಅವನ್ನ ಆಫೀಸಿನಿಂದ ಮಿಸ್ ಮಾಡಿದ್ದೆ ಎಂಬುದಂತೂ ಸತ್ಯ. ಇಂತಹ ಒಂದು ಅನನ್ಯ ಪ್ರಯೋಗ ಮಾಡಿದ್ದು ಮಲ್ಲೇಶ್ವರದ ಸೇವಾಸದನದಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್ ಡಿ ಎಸ್ ಶ್ರೀವತ್ಸ ಮತ್ತು ವಿದೂಷಿ ಡಾ|| ಸೌಂದರ್ಯ ಶ್ರೀವತ್ಸ ಅವರು.

ಹೆಸರನ್ನೂ ಸಹ ಗೀತಾಭಿನಯವೆಂದೇ ಇಟ್ಟಿದ್ದರು. ಅನನ್ಯದ ಹೊಸ ಅನನ್ಯ ಪ್ರಯೋಗವದು. ದ್ರೌಪದಿಯ ಪ್ರಲಾಪಗಳಿಗೆ ಅವತ್ತು ಪಕ್ಕವಾದ್ಯದ ಹಂಗಿರಲ್ಲಿಲ್ಲ. ಥೇಟ್ ವ್ಯಾಸರ ಹಾಗೆ ಶ್ರೀವತ್ಸರವರು ಸುಲಲಿತವಾಗಿ ಕನ್ನಡದಲ್ಲಿಯೇ ಹಾಡುತ್ತಾ ಹೋದರು, ಸೌಂದರ್ಯರವರು ಅವತ್ತು ಥೇಟ್ ದ್ರೌಪದಿಯೇ ಆಗಿದ್ದರು.

ಅವಳ ಹುಟ್ಟು, ಹುಟ್ಟೋದಕ್ಕೆ ಕಾರಣ, ಸ್ವಯಂವರ ಇದೆಲ್ಲದರಲ್ಲಿ ಆಕೆ ತೋರಿಸುವ ದರ್ಪ, ದುರ್ಯೋಧನ ಅರಮನೆಯಲ್ಲಿ ಬಿದ್ದಾಗ ಅವಳ ಕುಹಕ, 5 ಜನ ಗಂಡಂದಿರು ಎಂದು ತಿಳಿಸುವ ಅತ್ತೆಯ ಮೊಂಡುತನಕ್ಕೆ ಉತ್ತರವಾಗಿ ಮುಖದ ಮೇಲಿನ ಅಸಹ್ಯ, ವಸ್ತ್ರಾಪಹರಣವಾದಾಗ ಅವಳು ಧರ್ಮರಾಯನ್ನನ್ನ "ನೀನೆ ಪಣವಾಗಿ ಸೋತವನು, ನೀ ಹೇಗೆ ನನ್ನನ್ನ ಪಣವಾಗಿ ಇಡುತ್ತೀಯ?" ಎಂದು ಏಕವಚನದಲ್ಲಿ ಪ್ರಶ್ನೆ ಮಾಡುವ ಕೋಪ, ಭೀಷ್ಮ, ಕೃಪ, ಗಾಂಧಾರಿ ಇವರೆಲ್ಲರ ಸುಮ್ಮನಿರುವಿಕೆಯನ್ನ ಬೈಯ್ಯುವ ಪರಿ ನಿಜವಾಗಲೂ ಕಣ್ಣಿಗೆ ಕಟ್ಟಿದ ಹಾಗೆ ಇತ್ತು.

ಸುಮಾರು ನೃತ್ಯ ಸಂಗೀತ ಕಾರ್ಯಕ್ರಮಗಳು ಪಕ್ಕವಾದ್ಯದ ವಿಪರೀತ ಪ್ರಯೋಗಗಳು ಮತ್ತು ನೃತ್ಯದವರ ವಿಪರೀತ ಪರಿಣಿತಿಗಳಲ್ಲಿಯೇ ಮುಗಿದುಹೋಗುತ್ತದೆ, ಈ ಟೆಕ್ನಿಕಾಲಿಟೀಸ್ ಅನ್ನುತ್ತಾರಲ್ಲ ಅದು. ಆದರೆ ಈ ಗೀತಾಭಿನಯ ಪೂರ್ತಿ ಒಂದು ಹಾಡು ಬರೀ ಶೃತಿಯೊಂದಿಗೆ, ಮತ್ತೊಂದು ನೃತ್ಯ ಅಭಿನಯದೊಂದಿಗೆ ಗೆಜ್ಜೆಯ ಶಬ್ದದಲ್ಲಿ ಪಾಂಚಾಲಿಯನ್ನ ರಂಗದ ಮೇಲೆ ತಂದ್ದದ್ದು ಒಂದು ವಿಶಿಷ್ಟವೇ ಸರಿ.

ಯಾವುದೇ ಸಂಗೀತ, ನೃತ್ಯ ಪ್ರಕಾರವು ಸಾಮಾನ್ಯ ಜನರಲ್ಲಿ ಹೊಸ ಭಾವನೆ ಮತ್ತು ಕಲಿಕೆಯನ್ನ ಹುಟ್ಟಿಸಬೇಕು. ಗೊತ್ತಿರದ್ದಿದ್ದ ಸಂಗತಿಗಳನ್ನ ತಿಳಿಸಬೇಕು, ವಿಷಯಾಂತರ ಮಾಡಬಾರದು, ತಪ್ಪು ವಿಷಯಗಳನ್ನ ತಿಳಿಸಲೇ ಬಾರದು. ಮುಗಿದ ನಂತರ ವೇದಿಕೆ ಮೇಲೆ ಮಾಡಿದ ಕಲಾವಿದರ ಭಾವ ಮತ್ತು ನೋಡುತ್ತಿರುವ ಭಾವ ಒಂದೇ ಆದಾಗ ಆ ಪ್ರಯೋಗ ಯಶಸ್ವಿಯಾಗುತ್ತದೆ.

ಅದೆಲ್ಲದಕ್ಕೂ ಒಂದು ಚೂರೂ ಉತ್ಪ್ರೇಕ್ಷೆಯಿಲ್ಲದೆ ಚೆಂದವಾಗಿ ನಡೆದುಹೋಗಿದ್ದು ಈ ಪ್ರಯೋಗ. ಕರ್ಣನ ಮೇಲೆ ಸ್ವಯಂವರದಲ್ಲಿ ಮನಸ್ಸಾಗಿದ್ದು, ಕೃಷ್ಣ ಅದನ್ನ ತಡೆದ್ದದ್ದು, ದ್ರುಪದನ ದ್ವೇಷಕ್ಕೆ ಹುಟ್ಟಿದವಳು ಎಂಬ ಹೊಸ ವಿಷಯ ಈ ಪ್ರಯೋಗದಿಂದಲೇ ತಿಳಿದ್ದಿದ್ದು. ಎಲ್ಲದಕ್ಕಿಂತ ಹೆಚ್ಚಾಗಿ ತಿಳಿಗನ್ನಡದಲ್ಲಿ ಭಾರತವನ್ನ ಪಾಂಚಾಲಿಯ ಕಣ್ಣಲ್ಲಿ ಹೇಳಿದ್ದು ನನಗೆ ಅತ್ಯಂತ ಇಷ್ಟವಾದ್ದದ್ದು. 2500 ವರ್ಷಗಳ ಇತಿಹಾಸ ಇರುವ ಕನ್ನಡದಲ್ಲಿ ಮಹಾಭಾರತ ಉಲಿದಿದ್ದು ಭಾಷೆಗೆ ಸಂದ ಗೌರವ. ಶಾಸ್ತ್ರೀಯ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿ ಒಂದು ಘಂಟೆ ಭರ್ತಿ ಅಚ್ಚ ಸ್ವಚ್ಚ ಕನ್ನಡ ಕರ್ಣಾನಂದವನ್ನ ನೀಡಿದ್ದು ಪುಣ್ಯವೇ ಸರಿ.

ದ್ರೌಪದಿಯ ಕಥೆ ಶುರುವಾದ್ದದ್ದು "ಅಗ್ನಿಯಿಂದ ಜನಿಸಿದವಳು ನಾನು, ಅಗ್ನಿಯಲ್ಲೇ ಬೇಯುತ್ತಿರುವೆ ನಾನು" ಎಂದು. ಒಂದು ದಾಳವಾಗಿ ಹುಟ್ಟಿನಿಂದ ಬಂದ ದ್ರೌಪದಿ ತನ್ನ ಇಷ್ಟವಲ್ಲದವರನ್ನ ವರಿಸಿ, 5 ಜನಕ್ಕೆ ಹೆಂಡತಿಯಾಗಿ, ಸಭಾ ಮರ್ಯಾದೆಯೂ ಕಳೆದುಕೊಂಡು, ಕಡೆಗೆ ಯುದ್ಧದಲ್ಲಿ ತನ್ನ ಮಕ್ಕಳನ್ನೂ ಕಳೆದುಕೊಂಡ ಅವಳ ದುರ್ವಿಧಿ, ವಿಷಾದವನ್ನ ಸೌಂದರ್ಯರವರು ಕೂತಿರುವವರ ಕಣ್ಣಲ್ಲಿಯೂ ಕಾಣಿಸುವ ಹಾಗೆ ಮಾಡಿ, ಕಣ್ಣೀರಾಗಿಸಿದ್ದು ಸುಳ್ಳಲ್ಲ. ಇಂತಹ ಪ್ರಯೋಗಗಳು, ಭಾರತದ ವಿವಿಧ ಆಯಾಮಗಳು ಈಗಿನ ಪೀಳಿಗೆಗೆ ಬೇಕು, ಮಕ್ಕಳಿಗೆ ಈಗಿನ ಚರಿತ್ರೆಯಲ್ಲಿ ಇದೂ ಒಂದು ಕಲಿಕೆಯಾಗಬೇಕು.

"ಅಗ್ನಿಯಲ್ಲಿ ಜನಿಸಿದೆ ನಾನು, ಅಗ್ನಿಯಲ್ಲಿ ಬೇಯುತ್ತಿರುವೆ ನಾನು" ಎಂಬುದು "ಅಗ್ನಿಯಾಗಿ ದಹಿಸಿ, ನಂದಿಸಿದೆ" ಎಂದೂ ಮುಂದಿನ ಭಾರತವಾಗಲಿ, ಹಾಗೆ ನಮ್ಮ ಹೆಣ್ಣುಮಕ್ಕಳಾಗಲಿ ಎಂಬುದೇ ನನ್ನ ಅರಿಕೆ.

English summary
Draupadi comes alive on stage in a dance drama by Vidwan D S Srivatsa and Soundarya Srivatsa as Draupadi of Mahabharata. Meghana Sudhindra says such experiments are necessary to understand the real Draupadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X