ಬೆಂಗಳೂರು ಕರಗದಂದು ಪಾಯಸ ಮಾಡಿ ಜಮಾಯಿಸಿ

By: ಜಯನಗರದ ಹುಡುಗಿ
Subscribe to Oneindia Kannada

ಆಗ ನಾನಿನ್ನೂ ಚಿಕ್ಕವಳು. ರಾತ್ರಿ ಕರಗ ಇದೆ ಅಂತ ಅಮ್ಮ ಹಾಗೂ ಜಾನು ಅಜ್ಜಿ ಮಾತಾಡಿಕೊಳ್ಳುತ್ತಿದ್ದರು. ನಾನು ಇದೇನು ರಾತ್ರಿ ಯಾರು ಹಬ್ಬ ಮಾಡುತ್ತಾರೆ ಅಂತ ಪ್ರಶ್ನೆ ಕೇಳುತ್ತಾ ಕುಳಿತಿದ್ದೆ. ಬೇಗ ಮಲಗಬೇಕು, ಭೂತಗಳು ಓಡಾಡುವ ಸಮಯ ಎಂದು ತಾತ ಗದರಿಸುತ್ತಿದ್ದರು. ಪಟ್ಟುಬಿಡದ ನಾನು, ಕರಗದ ಕಥೆ ಹೇಳಿ ಅಂತ ಮನೆಯವರನೆಲ್ಲ ಸಭೆ ಕರೆದು ಅವರವರ ಅನುಭವ, ಕಥೆ, ಉಪಕಥೆಗಳನ್ನು ಕೇಳುತ್ತಿದ್ದೆ.

ಬೆಂಗಳೂರು ಕರಗ ವಿಶ್ವ ಪ್ರಸಿದ್ಧ. ಅದಕ್ಕೂ ಒಂದು ಭವ್ಯ ಇತಿಹಾಸ ಇದೆ. ಬೆಂಗಳೂರಲ್ಲಿ ಧರ್ಮರಾಯನ ದೇವಸ್ಥಾನವಿದೆ, ದ್ರೌಪದಮ್ಮನ ಕರಗ ನಡೆಯುತ್ತೆ ಅಂತ ಕಥೆ ಶುರು ಮಾಡಿದ್ದರು.[ಮಲ್ಲಿಗೆಯ ಕಂಪು ಬೀರುವ ಐತಿಹಾಸಿಕ 'ದ್ರೌಪದಿ ಕರಗ'ಕ್ಕೆ ಬೆಂಗಳೂರು ಸಜ್ಜು]

Bengaluru Karaga, the oldest and important festival

ಮಹಾಭಾರತದಿಂದ ಈ ಕಥೆ ಶುರುವಾಗುತ್ತದೆ. ಪಾಂಡವರು ಯುದ್ಧವಾದ ನಂತರ ಸ್ವರ್ಗಕ್ಕೆ ಹೋಗುವಾಗ ಅವರಿಗೆ ಸ್ವಲ್ಪ ಮಟ್ಟದ ನರಕದ ದರ್ಶನವೂ ಆದಾಗ, ತ್ರಿಪುರಾಸುರ ಇನ್ನು ಬದುಕಿರುವ ವಿಷಯ ತಿಳಿಯುತ್ತದೆ. ದ್ರೌಪದಿ ದೇವಿ ಶಕ್ತಿದೇವತೆಯ ಅವತಾರ ತಾಳಿ, ವೀರಕುಮಾರರು ಎಂಬ ಸೈನಿಕರನ್ನು ಸೃಷ್ಟಿಸಿ ಅವರೆಲ್ಲರ ಸಹಾಯದಿಂದ ಅಸುರನನ್ನು ಸಂಹಾರ ಮಾಡುತ್ತಾಳೆ. ನಂತರ ಆ ವೀರಕುಮಾರರು ದ್ರೌಪದಿಯನ್ನು ಅವರ ಜೊತೆಯಲ್ಲಿಯೇ ಇರಲು ಕೇಳಿಕೊಂಡಾಗ, ದ್ರೌಪದಿ ಹೊಸವರ್ಷದ ಮೊದಲ ಹುಣ್ಣಿಮೆಯ ದಿವಸ ಅವತಾರವಾಗಿ ಬರುತ್ತೀನಿ ಎಂದು ಮಾತು ಕೊಡುತ್ತಾಳೆ. ಆವಾಗ ನಡೆಯುವುದೆ ದ್ರೌಪದಿಯ ಕರಗ.

ಕರಗವೆಂದರೆ ಕ - ಕೈಯಲ್ಲಿ ಮುಟ್ಟದೆ, ರ - ರುಂಡದಲ್ಲಿ ಧರಿಸಿ ಮತ್ತು ಗ - ಗತಿಸುವುದು / ಚಲಿಸುವುದು. ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತಿಕೊಂಡು ದೇವಿಯನ್ನು ನೆನೆವುದು ಭಕ್ತರ ಕೆಲಸ. ಹನ್ನೊಂದು ದಿವಸದ ನಿಯಮ - ನೇಮಗಳನ್ನು ಮಾಡುತ್ತಾರೆ. ಈ ಕರಗವನ್ನು ಗಂಡಸರು ಹೊರುವುದು ಅಭ್ಯಾಸ. ಈ ಮೆರವಣಿಗೆಯನ್ನು ನೋಡುವುದು ಒಂದು ಅದ್ಭುತ. ನಮ್ಮ ತಾತ ಮೊದಲು ಜರ್ನಲಿಸ್ಟ್ ಕಾಲೋನಿಯಲ್ಲಿದ್ದ ಕಾರಣ ಹತ್ತಿರವೆ ಕರಗ ನಡೆಯುತ್ತಿದ್ದರಿಂದ ಮಕ್ಕಳನ್ನು ಮಧ್ಯರಾತ್ರಿ ಅವರ ತಂಗಿ ತಮ್ಮ ಕರೆದುಕೊಂಡು ಹೋಗಿ ತೋರಿಸುತ್ತಿದ್ದರಂತೆ. ವೀರಾವೇಶದಿಂದ ಕರಗ ಹೊರುವುದು, ಅವರ ಸುತ್ತಮುತ್ತ ಕತ್ತಿ ಝಳಪಿಸಿ ನಡೆಯುವ ವೀರಕುಮಾರರು ಇವೆಲ್ಲವನ್ನು ನೋಡುವುದು ಸಂಭ್ರಮವೋ ಸಂಭ್ರಮ.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

Bengaluru Karaga, the oldest and important festival

ಬೆಂಗಳೂರು ಎಂದರೆ ಕರಗಕ್ಕೆ ಹೆಸರು ವಾಸಿ. ಆದರೆ ಇಲ್ಲಿಯ ಹಲವಾರು ಜನರಿಗೆ ಅದರ ತಿಳಿವಳಿಕೆ ಸಹ ಇಲ್ಲ. ಮಧ್ಯರಾತ್ರಿ ಇಂಥದ್ದೇನೋ ನಡೆಯುತ್ತೆ ಬೆಂಗಳೂರಲ್ಲಿ ಎಂಬುದು ಊಹಿಸಲಸಾಧ್ಯ. ಇದು ನಿಜಕ್ಕೂ ವಿಪರ್ಯಾಸ.

ಇದು ಬೆಂಗಳೂರಿಗೇ ಸೀಮಿತವಾ ಎಂದು ಹುಡುಕುತ್ತಿರುವಾಗ, ಅದು ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸಹ ನಡೆಯುತ್ತದೆ ಎಂದು ತಿಳಿದುಬಂತು. ದ್ರೌಪದಿಯ ವಸ್ತ್ರಾಪಹರಣ, ವನವಾಸ, ಮಕ್ಕಳ ಸಾವು ಇವೆಲ್ಲವನ್ನೂ ಮೀರಿ ಅವಳು ಶಕ್ತಿದೇವತೆಯಾಗಿ ಪರಿವರ್ತನೆಯಾಗುತ್ತಾಳೆ ಎಂಬ ನಂಬಿಕೆ ಹಲವರಲ್ಲಿ ಇದೆ. ಈ ಆಚರಣೆಯನ್ನು ವೀರಕುಮಾರರ ಸಂತತಿಯೇ ಈವಾಗಲೂ ನಡೆಸಿಕೊಂಡು ಬರುವುದು ಸಂಪ್ರದಾಯ.

Bengaluru Karaga, the oldest and important festival

ಹಳೆ ಬೆಂಗಳೂರಿನ ಮಧ್ಯಭಾಗದಲ್ಲಿ ಇದು ನಡೆಯತ್ತೆ. ಮಡಿಕೇರಿಯಲ್ಲಿ ಸಹ ದಸರೆಯ ಸಮಯದಲ್ಲಿ ಇದು ನಡೆಯತ್ತೆ. ಶಕ್ತಿದೇವತೆ ಇದ್ದ ಕಡೆ ಅಮ್ಮನ ಕರಗ ಹೊರುವುದು ಸಾಮಾನ್ಯ. ರಾಮಗೊಂಡನಹಳ್ಳಿಯಲ್ಲಿ ಕಾಮನ ಹುಣ್ಣಿಮೆ ದಿವಸ ಕರಗ ಹೊರುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

ನಮ್ಮ ಕಾಸ್ಮೋಪಾಲಿಟನ್ ನಗರಕ್ಕೆ ಈ ಧಾರ್ಮಿಕ ಆಚರಣೆಯ ಮಜಾ, ಮಹತ್ವ ಗೊತ್ತಿಲ್ಲ ಅಥವಾ ಗೊತ್ತೇ ಇಲ್ಲ. ಈ ಕರಗ ಶುರುವಾಗುವುದು ಧರ್ಮರಾಯನ ದೇವಸ್ಥಾನದಿಂದ, ನಂತರ ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರೋಡ್, ಅಕ್ಕಿಪೇಟೆ, ಬಳೇಪೇಟೆ, ನಗರ್ತ್ ಪೇಟೆ ಮುಂತಾದ ಸ್ಥಳಗಳಿಗೆ ಹೋಗುತ್ತದೆ. ಬೆಂಗಳೂರಿನ ಹಬ್ಬಕ್ಕೆ ಇದೊಂದು ಉದಾಹರಣೆ.

ಇದಕ್ಕೆ ಸಿದ್ದತೆಯು ಬಹಳ ಸುಂದರ. ಪ್ರಥಮ ದಿನ ಧ್ವಜಾರೋಹಣ ಇರುತ್ತದೆ. ಹಳದಿಯ ಬಟ್ಟೆಯನ್ನ ಹಾರಿಸಿ, ಕರಗ ಹೊರುವವರು ಕೈಗೆ ಕಂಕಣ ಕಟ್ಟಿಕೊಂಡು ಸಿದ್ಧರಾಗಿತ್ತಾರೆ. ಪ್ರತಿ ದಿವಸ ಆರತಿ ನೇಮ ಎಲ್ಲವೂ ನಡೆಯುತ್ತೆ. ನಂತರ ಅಲಂಕಾರ, ಆಮೇಲೆ ಉತ್ಸವ. ಮದುವಣಗಿತ್ತಿಯ ಹಾಗೆ ಕರಗ ಹೊರುವವರು ಸಿದ್ಧರಾಗುತ್ತಾರೆ.

Bengaluru Karaga, the oldest and important festival

ಕೆಂಪೇಗೌಡರು, ಟಿಪ್ಪುಸುಲ್ತಾನನ ಕಾಲದಲ್ಲೂ ಸಹ ಇದು ಆಚರಣೆಯಲ್ಲಿತ್ತಂತೆ. ರಾಜಮಹಾರಾಜರು ಸಹ ಈ ಆಚರಣೆಯನ್ನು ಬಿಡದೆ ಪಾಲಿಸುತ್ತಿದ್ದರು. ಶಕ್ತಿಯನ್ನು ಆರಾಧನೆ ಮಾಡುವ ಯಾವ ನಿಯಮವನ್ನೂ ಮುರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜರದ್ದಾಗಿತ್ತು. ಬೆಂಗಳೂರು ಎಂಬ ದೊಡ್ಡ ನಗರ ಒಂದು ರಾತ್ರಿಯ ಮಟ್ಟಿಗೆ ಒಂದು ಸಣ್ಣ ಹಳ್ಳಿಯಾಗಿ ಪರಿವರ್ತನೆಗೊಳ್ಳುವುದು ವಿಶೇಷ. ಎಷ್ಟೋ ಮನೆಯಲ್ಲಿ ಈಗಲೂ ಕರಗದ ದಿವಸ ಪಾಯಸ ಮಾಡಿ ಊಟ ಮಾಡುತ್ತಾರೆ.

ಈ ಆಚರಣೆಗಳು ನಮ್ಮ ಸಂಪ್ರದಾಯವನ್ನು ಮತ್ತೆ ಮತ್ತೆ ನೆನಪಿಸುತ್ತವೆ. ಪ್ರಾಯಶಃ ಕರಗದ ಕಲ್ಪನೆಯೇ ಎಷ್ಟು ಸುಂದರ. ಬಾಗದೆ, ಬೀಗದೆ, ಬಳುಕದೆ ಒಂದು ಹೆಜ್ಜೆ ತಪ್ಪಿದರೂ ಮೃತ್ಯು ನಮ್ಮ ಜೀವನದಲ್ಲಿ ಖಚಿತ ಎಂಬುವ ಸಂದೇಶ ತಲುಪಿಸುತ್ತದೆ. ನಮ್ಮ ಹಬ್ಬಗಳಲ್ಲಿ ಎಷ್ಟು ದೇವರ ಕಲ್ಪನೆ ಇರುತ್ತದೋ ಅಷ್ಟೆ ನಮ್ಮ ಜೀವನಕ್ಕೂ ಸಂದೇಶವಿರುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೆ ಬೇಕಾಗುವ ಶ್ರದ್ಧೆ, ನಿಯಮಗಳೆಲ್ಲವೂ ನಮಗೆ ಶಿಸ್ತನ್ನು ದಯಪಾಲಿಸುತ್ತದೆ. ಪ್ರಾಯಶಃ ಕರಗವೂ ಹಾಗೆಯೇನೋ. ಈ ಬಿರು ಬೇಸಿಗೆಯಲ್ಲಿ ಕರಗದ ದಿವಸ ಮಳೆಬರುವುದು ಅತ್ಯಂತ ಸಹಜವಂತೆ.

ಇಷ್ಟೆಲ್ಲ ನಮ್ಮ ಬೆಂಗಳೂರಲ್ಲೆ ಕುಳಿತುಕೊಂಡು ಬರೆಯುವುದು, ಮಳೆಗೆ ಕಾಯುವುದು ಅಭ್ಯಾಸವಾಗಿದೆ. ಬಾರ್ಸಿಲೋನದಲ್ಲಿ ಈಸ್ಟರ್ ಆದ್ದರಿಂದ ರಜಾ. ಪ್ರತಿ ವರ್ಷದಂತೆ ಈವಾಗಲೂ ಮಳೆ ಬರುತ್ತಾ ನೋಡಬೇಕು. ಯೇಸುದಾಸ್ ಕಛೇರಿಗೆ ಬರದೆ ಮೋಸ ಮಾಡಿತ್ತು ಈ ಹಾಳಾದ ಮಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Karaga is one of the oldest festivals celebrated in the heart of Bengaluru. Bengaluru Karaga is primarily a well-known tradition of Thigala community in southern Karnataka. Meghana Sudhindra from Barcelona write about this wonderful festival.
Please Wait while comments are loading...