• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಸುಬುಗಾರಿಕೆಯ ಮುಂದಿಟ್ಟುಕೊಂಡು ಮೂರೂವರೆ ಮಾತು

By Oneindia Staff Writer
|

*ಜಾನಕಿ

ಇನ್ನಾದರೂ ಕಲಿಯಬೇಕು;

ಹೊನ್ನ ಕಾಯಿಸಿ, ಹಿಡಿದು ಬಡಿದಿಷ್ಟದೇವತಾ

ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು.

ಗೋಪಾಲಕೃಷ್ಣ ಅಡಿಗರ ಈ ಸಾಲುಗಳನ್ನು ನೆನಪಿಸಿದ್ದು ಎಸ್‌. ಎಲ್‌. ಭೈರಪ್ಪ ಆಡಿದ ಒಂದು ಮಾತು ಮತ್ತು ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ. ಭೈರಪ್ಪನವರು ಆಕ್ಷೇಪಣೆ ಎತ್ತಬಹುದಾದ ಮಾತನ್ನೇನೂ ಆಡಿರಲಿಲ್ಲ. ಕಸುಬುಗಾರಿಕೆ ಕಲಿಯಬೇಕು ಅಂದಾಕ್ಷಣ ಸಿಟ್ಟಾಗುವ ಅಗತ್ಯವೂ ಇಲ್ಲ. ಆದರೂ ಮಲ್ಲಿಕಾ ಘಂಟಿ ಸಿಟ್ಟಾದರು. ಅವರನ್ನು ಮಲ್ಲಿಕಾ ಜಗಳಘಂಟಿ ಎಂದು ಕರೆದು ಸುಮ್ಮನಾಗೋಣ.

ಆದರೆ ಅಷ್ಟು ಸುಲಭವಾಗಿ ಸುಮ್ಮನಾಗುವ ಸಂಗತಿ ಇದಲ್ಲ. ಕಸುಬುಗಾರಿಕೆಯನ್ನು ಕಲಿಯಿರಿ ಎನ್ನುವ ಮಾತನ್ನು ಒಬ್ಬ ಬಡಗಿ ಮತ್ತೊಬ್ಬ ಬಡಗಿಗೆ ಹೇಳಿದರೆ ಇಂಥ ರಾದ್ಧಾಂತವಾಗುತ್ತಿರಲಿಲ್ಲ. ಒಬ್ಬ ಕಮ್ಮಾರ ಮತ್ತೊಬ್ಬ ಕಮ್ಮಾರನಿಗೆ ಹೇಳಿದರೂ ರಗಳೆಯಾಗುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಕಸುಬುಗಾರಿಕೆ ಅಂದರೆ ಕೆಲಸದಲ್ಲಿ ನಯ, ನಾಜೂಕು, ದಕ್ಷತೆ. ಒಂದೇ ಮಾತಲ್ಲಿ ಹೇಳುವುದಾದರೆ ಪ್ರೊಫೆಷನಲಿಸಂ.ಆದರೆ ಸಾಹಿತ್ಯದಲ್ಲಿ ಅದು ಅಷ್ಟು ಸರಳವಿಲ್ಲ. ಇಲ್ಲಿ ಪ್ರೊಫೆಷನಲಿಸಮ್ಮಿಗಿಂತ ಮುಖ್ಯವಾದ ಸಂಗತಿಗಳು ನೂರೆಂಟಿವೆ. ಛಂದೋಬದ್ಧವಾಗಿ ಬರೆಯುವುದಕ್ಕೆ ಗೊತ್ತಿದ್ದವನು ಕವಿಯಾಗುತ್ತಿದ್ದ ಕಾಲವೊಂದಿತ್ತು. ಕುಮಾರವ್ಯಾಸ, ಲಕ್ಷ್ಮೀಶ, ಕಾಳಿದಾಸ ಮುಂತಾದವರು ಬರೆಯುತ್ತಿದ್ದ ದಿನಗಳಲ್ಲಿ ಕತೆಯನ್ನು ರಂಜಿಸುವಂತೆ ಹೇಳಿದರೆ ಅಷ್ಟು ಸಾಕಿತ್ತು. ಕಾವ್ಯರಸಿಕರು ಕಾವ್ಯದ ಪದ-ಅರ್ಥಕ್ಕಾಗಿ ತುಡಿಯುತ್ತಿದ್ದರು. ಒಂದು ಅಪೂರ್ವ ಪ್ರತಿಮೆಯೋ ಒಂದು ಅಚ್ಚರಿಗೊಳಿಸುವ ರೂಪಕವೋ ಎದುರಾದರೆ ಖುಷಿಯಾಗುತ್ತಿದ್ದರು. ಧ್ವನ್ಯಾಲೋಕಲೋಚನದ ಪ್ರಾರಂಭದಲ್ಲಿ ಅಭಿನವಗುಪ್ತ ರಚಿಸಿರುವ ಈ ಸ್ತುತಿಪದ್ಯ ನೋಡಿ;

ಅಪೂರ್ವಂ ಯದ್ವಸ್ತು ಪ್ರಥಯತಿ ವಿನಾ ಕಾರಣಕಲಾಂ

ಜಗದ್ಗ್ರಾವಪ್ರಖ್ಯಂ ನಿಜರಸಭರಾತ್‌ ಸಾರಯತಿ ಚ

ಕ್ರಮಾತ್‌ ಪ್ರಖ್ಯೋಪಾಖ್ಯಾ ಪ್ರಸರ ಸುಭಗಂ ಭಾಸಯತಿ ತತ್‌

ಸರಸ್ವತ್ಯಾಸ್ತತ್ವಂ ಕವಿಸಹೃದಯಾಖ್ಯಂ ವಿಜಯತೇ

ಇದರ ಅರ್ಥ ಇಷ್ಟೇ. ಯಾವುದು ಒಂಚೂರು ಕಾರಣವನ್ನೂ ಅಪೇಕ್ಷಿಸದೇ ಅಪೂರ್ವವಾದ ವಸ್ತುವನ್ನು ಪ್ರಕಟಿಸುತ್ತದೋ, ಯಾವುದು ಕಲ್ಲಿನಂಥ ಲೋಕವನ್ನು ತನ್ನ ರಸಪೂರ್ಣತೆಯಿಂದ ಕರಗಿಸಿ ಸಾರವತ್ತಾಗಿ ಮಾಡುತ್ತದೋ ಯಾವುದು ದರ್ಶನ ಮತ್ತು ವರ್ಣನೆಯಲ್ಲಿ ಮನೋಹರವಾಗಿ ಕಾಣುತ್ತದೆಯೋ ಆ ಕವಿ ಸಹೃದಯ ಎಂಬ ಸರಸ್ವತೀ ತತ್ವ ಇಲ್ಲಿ ಮೆರೆಯುತ್ತಿದೆ.

ಅಂದರೆ ಕವಿತೆಯ ಸಾಹಿತ್ಯದ ಉದ್ದೇಶ ಖುಷಿಕೊಡುವುದಷ್ಟೇ ಆಗಿತ್ತು. ಒಂದು ಘಟನೆಯನ್ನೋ ಸನ್ನಿವೇಶವನ್ನೋ ರಸಪೂರ್ಣವಾಗಿ ವಿವರಿಸಿದರೆ ರಸಿಕರು ಖುಷಿಯಾಗುತ್ತಿದ್ದರು. ಒಂದು ಕಾವ್ಯ ಕೇವಲ ವರ್ಣನೆಯಲ್ಲೇ ಮೈತುಂಬಿಕೊಂಡು ಮೆಚ್ಚುಗೆಯಾಗುತ್ತಿತ್ತು. ಗದಾಯುದ್ಧದ ಕೊನೆಯಲ್ಲಿ ಬರುವ ಈ ಸಾಲುಗಳು ಯಾರಿಗೆ ನೆನಪಿಲ್ಲ ಹೇಳಿ;

ಆ ರವಮಂ ನಿರ್ಜಿತ ಕಂ

ಠೀರವಮಂ ನಿರಸ್ತಘನರವಮಂ ಕೋ

ಪಾರುಣನೇತ್ರಂ ಕೇಳ್ದಾ

ನೀರೊಳಗಿರ್ದುಂ ಬೆಮರ್ತನುರಗಪತಾಕಂ.

ಇಲ್ಲಿ ನೀರೊಳಗಿದ್ದೂ ಬೆವರಿದ ಅನ್ನುವುದು ಇವತ್ತಿಗೂ ಸಾಹಿತ್ಯದ ವಿದ್ಯಾರ್ಥಿಗಳಿಗಷ್ಟೇ ಅಲ್ಲ , ಕಾವ್ಯರಸಿಕರಿಗೆಲ್ಲ ನೆನಪಿರುವ ಸಾಲು. ಕ್ರಮೇಣ ಇದೇ ನವೋದಯದ ಕಾವ್ಯದಲ್ಲೂ ಮುಂದುವರಿಯಿತು. ಮಹಾರಾಜರನ್ನೋ ಚಕ್ರವರ್ತಿಗಳ ಶೌರ್ಯವನ್ನೋ ದೇವಾನುದೇವತೆಗಳನ್ನೋ ಹೊಗಳಲಿಕ್ಕೆ ಮೀಸಲಾಗಿದ್ದ ಕಾವ್ಯ ಹೊಸಗನ್ನಡಕ್ಕೆ ಕಾಲಿಡುವ ಹೊತ್ತಿಗೆಲ್ಲ ಪ್ರಕೃತಿಯ ಆರಾಧನೆಗೆ ತೊಡಗಿತ್ತು. ಇವತ್ತಿಗೂ ಅನೇಕರಿಗೆ ಕವಿಗಳು ಸುಂದರವಾದ ಪರಿಸರದಲ್ಲಿ ಜುಳುಜುಳು ಹರಿಯುವ ನದಿಯ ದಂಡೆಯಲ್ಲಿ, ಹಸಿರು ಬೆಟ್ಟಗಳ ತಪ್ಪಲಿನಲ್ಲಿ ಕುಳಿತು ಕವಿತೆ ಬರೆಯುತ್ತಾರೆ ಎಂಬ ನಂಬಿಕೆಯಿದೆ. ಅದಕ್ಕೆ ಕಾರಣ ಆರಂಭದಲ್ಲಿ ಪ್ರಕೃತಿಯ ಕುರಿತು ಬಂದ ಕವಿತೆಗಳು.

ಅಲ್ಲಿಂದೀಚೆಗೆ ನಿಧಾನವಾಗಿ ಮನುಷ್ಯನ ಭಾವನೆಗಳನ್ನು ಕುರಿತು ಬರೆಯುವುದಕ್ಕೆ ಕವಿಗಳು ಮನಸ್ಸು ಮಾಡಿದರು. ಬಿಎಂಶ್ರೀ ಕಾರಿಹೆಗ್ಗಡೆಯ ಮಗಳು ಕವಿತೆ ಬರೆದರು. ಅವರ ಸಮಕಾಲೀನರೂ ತಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆ ಬರೆದರು. ಹೀಗೆ ದೈವಿಕವಾಗಿದ್ದ ಕವಿತೆ ಪ್ರಕೃತಿಗಿಳಿದು ನಂತರ ಹುಲುಮಾನವರ ತನಕ ಬಂತು. ಪ್ರೇಯಸಿಯನ್ನು ಹೆಣ್ಣನ್ನು ಹೊಗಳುವ ಕವಿತೆಗಳು ಬಂದವು. ಮಹಾಕಾವ್ಯಗಳಲ್ಲೂ ಹೆಣ್ಣನ್ನು ಹೊಗಳಿದ ಚಿತ್ರಣಗಳಿದ್ದವು. ಆದರೆ ಅಲ್ಲೆಲ್ಲ ಕಲ್ಪನೆಯ ಸುಂದರಿಯನ್ನೋ ಕಥಾನಾಯಕಿಯನ್ನೋ ಕವಿ ಹೊಗಳುತ್ತಿದ್ದ. ನವೋದಯದ ರೊಮ್ಯಾಂಟಿಕ್‌ ಕವಿಗಳು ಇಹದ ಹೆಣ್ಣನ್ನು ಹಾಡಿ ಹೊಗಳಿದರು. ಅದು ಯಾವ ಹೆಣ್ಣಿಗೂ ಹೋಲುವ ಹೋಲಿಕೆ ಎಂಬಂತೆ ಬರೆದರು. ಬಾ ಚಕೋರಿ, ಬಾ ಚಕೋರಿ, ಚಂದ್ರಮಂಚಕೆ ಅನ್ನುವುದು ಎಲ್ಲ ಪ್ರೇಮಿಗಳ ಗೀತೆಯೂ ಆಯಿತು.

ಆಗಲೂ ರಸಭಂಗವಾಗಲಿಲ್ಲ. ಕಾವ್ಯದಲ್ಲಿ ಸಾಮಾಜಿಕ ಸ್ಥಿತಿಗತಿಗಳು ಪ್ರತಿಬಿಂಬಿಸಲಿಲ್ಲ. ಬಡತನ, ಸಂಕಷ್ಟಗಳು ಕಾವ್ಯಾತ್ಮಕವಾಗಿಯೇ ಇದ್ದವು. ಅವುಗಳನ್ನು ಓದಿ ಸಮಾಧಾನ ಪಟ್ಟುಕೊಳ್ಳುವವರಿದ್ದರು. ಜನಪದದಲ್ಲೂ ಸೀತಾಮಾತೆಯನ್ನೂ ದ್ರೌಪದಿಯನ್ನೂ ನೆನೆದು,

ಸುಖಾ ಎಲ್ಲಾರಿಗೆಲ್ಲೈತವ್ವಾ

ದುಃಖ ತುಂಬ್ಯಾವ ಮನುಷ್ಯಾದ ಮ್ಯಾಲ.

ನಾ ಮಾಡಿದ ಪಾಪ ನಾ ತೊಳೆಯಬೇಕಾ

ಸಿವನ ಮ್ಯಾಲ್ಯಾಕ ಸಿಟ್ಟಾಗಬೇಕಾ...

ಎಂಬ ಭಾವ ವ್ಯಕ್ತವಾಗಿತ್ತು.

ಆದರೆ ಅದು ಕಾವ್ಯವನ್ನು ಮೀರಿ ಹೊರಬಂದದ್ದು ಪ್ರಗತಿಶೀಲರ ದಿನಗಳಲ್ಲಿ. ಮೊದಲು ಅದು ಗದ್ಯದಲ್ಲಿ ವ್ಯಕ್ತವಾಯಿತು. ಯಾರದೋ ಕಾಲ್ಪನಿಕ ಕತೆ ಬರೆಯುವ ಬದಲು ನಮ್ಮ ಸಮಾಜದ ಓರೆಕೋರೆಗಳ ಬಗ್ಗೆ ಬರೆಯುವುದು ಒಳ್ಳೆಯದು ಎಂಬ ಭಾವನೆ ಬಂತು. ಹೀಗಾಗಿ ನಮ್ಮಲ್ಲಿ ಕಡುಕಷ್ಟಕ್ಕೆ ಒಳಗಾದವರ ಬದುಕಿನ ಚಿತ್ರಣಗಳು ಮೂಡಿ ಬಂದವು. ಇವುಗಳಲ್ಲೆಲ್ಲ ಸ್ಥಾಯಿಯಾಗಿದ್ದದ್ದು ಪ್ರಗತಿಯ ಹಂಬಲ. ಸಮಾಜದಲ್ಲಿ ಕೆಳಸ್ತರದಲ್ಲಿರುವವನು ಮೇಲೆ ಬರಬೇಕು ಎಂಬ ಹಪಹಪಿ ಮತ್ತು ಹಂಬಲ. ಹೀಗಾಗಿ ಇವನ್ನು ಪ್ರಗತಿಶೀಲ ಸಾಹಿತ್ಯ ಎಂದರು. ಉಳ್ಳವರ ಮತ್ತು ಇಲ್ಲದವರ ನಡುವಿನ ಕಂದರ ಅಕ್ಷರರೂಪದಲ್ಲಿ ವ್ಯಕ್ತವಾಗತೊಡಗಿತು.

ಅದಾದ ನಂತರ ನವ್ಯ ಬಂತು. ವ್ಯಕ್ತಿಗೆ ಸಮಾಜಕ್ಕಿಂತ ತಾನು ಮುಖ್ಯವಾದ. ವ್ಯಕ್ತಿವಿಶಿಷ್ಟ ಸಿದ್ಧಾಂತ ಬಂತು. ಸಮಾಜದಲ್ಲಿರುವ ಹಾಗೆಯೇ ನಮ್ಮೊಳಗೂ ಏರುಪೇರಿದೆ, ಕೊಳಕಿದೆ, ಸುಖದುಃಖ ಎರಡೂ ಇದೆ. ಮೊದಲು ನಮ್ಮ ಅಂತರಂಗದ ನೋವು ಹಾಡಾಗಿ ಹೊರಬರಬೇಕು. ಮನುಷ್ಯ ಬಿಚ್ಚಿಕೊಳ್ಳಬೇಕು ಎಂದು ನವ್ಯದವರು ಸ್ವಕೇಂದ್ರಿತ ಕತೆಗಳನ್ನೂ ಕವಿತೆಗಳನ್ನೂ ಬರೆದರು. ಅಲ್ಲಿ ಕವಿಗೆ ಮುಖ್ಯವಾದದ್ದು ತನ್ನೊಳಗಿನ ತಲ್ಲಣಗಳು. ಈ ಕಾರಣಕ್ಕೇ ಇವು ಆಪ್ತವಾದವು. ಸಾಹಿತಿ ಮೊದಲ ಬಾರಿಗೆ ತನ್ನ ಕೀಳರಿಮೆಯನ್ನೂ ಅವಮಾನವನ್ನೂ ಬರೆದುಕೊಂಡ. ತನ್ನ ದೌರ್ಬಲ್ಯಗಳ ಬಗ್ಗೆ ಬರೆದ.

ಮುಂದೆ ಬಂದದ್ದು ಸಿಡಿದೆದ್ದವರು ಎದ್ದು ನಿಂತ ಬಂಡಾಯ ಸಾಹಿತ್ಯ. ಇಲ್ಲಿಂದೀಚೆಗೆ ಸಾಹಿತ್ಯ ಎರಡಾಗಿ ಒಡೆದುಕೊಂಡಿತು. ಉಳ್ಳವರ ಪರ ಮತ್ತು ಇಲ್ಲದವರ ಪರ ಎಂಬ ಎರಡು ಕವಲುಗಳಾಗಿ ಒಡೆಯಿತು. ಉಳ್ಳವರು ಸಾಹಿತ್ಯದಲ್ಲಿ ಶ್ರೇಷ್ಠತೆ ಮುಖ್ಯ ಎಂದರು. ಉಳಿದವರು ಶ್ರೇಷ್ಠತೆಗಿಂತ ಶತಶತಮಾನಗಳಿಂದ ಅದುಮಿಟ್ಟ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೊಂದು ಹೊರದಾರಿ ಮುಖ್ಯ ಅಂದರು. ಕಪ್ಪುನೆಲ ಕೆಂಪುಕಾಲು, ಕೆಂಡದ ಮಳೆ ಮುಂತಾದ ಕಲ್ಪನೆಗಳು ಗರಿಯಾಡೆದವು.

ಆಮೇಲೆ ಬಂದದ್ದು ದಲಿತ ಸಾಹಿತ್ಯ. ದಲಿತರು ಬಂದರು ದಾರಿಬಿಡಿ, ದಲಿತರ ಕೈಗೆ ರಾಜ್ಯ ಕೊಡಿ ಎಂಬ ಘೋಷಣೆ ಮೊಳಗಿತು. ದಲಿತರು ತಮ್ಮ ಅನಿಸಿಕೆಗಳಿಗೆ ಮಾತು ಕೊಟ್ಟರು. ನಿರಕ್ಷರರ ಎದೆಯಾಳದ ಮಾತುಗಳು ಅಕ್ಷರವಾದವು.

ಸಾಹಿತ್ಯ ಚರಿತ್ರೆ ಸದ್ಯಕ್ಕೆ ಇಲ್ಲಿಗೆ ನಿಂತಿದೆ. ನವ್ಯದ ನೆರಳುಗಳಂತೆ ಕೆಲವರು ಬರೆಯುತ್ತಿದ್ದಾರೆ. ಬಂಡಾಯವೆಂಬ ಕೆಂಡದ ಮಳೆ ನಿಂತ ಮೇಲಿನ ಹನಿಕಿಡಿಗಳಂತೆ ಅಲ್ಲಲ್ಲಿ ಕೆಲವು ಕತೆಗಳು ಪ್ರಕಟವಾಗುತ್ತವೆ. ದಲಿತ ಸಾಹಿತ್ಯವನ್ನು ಒಂದು ನೆಲೆಯನ್ನಾಗಿ ಮಾಡಿಕೊಂಡು ಆ ಮೂಲಕ ಇಡೀ ಸಾಹಿತ್ಯಚರಿತ್ರೆಯನ್ನೇ ನೋಡುವ ಲ್ಯಾಟೆರಲ್‌ ಥಿಂಕಿಂಗೂ ಶುರುವಾಗಿದೆ.

***

ಇವೆಲ್ಲದರ ನಡುವೆ ಮಹಿಳಾ ಸಾಹಿತ್ಯ ಎಲ್ಲಿದೆ?

12ನೆಯ ಶತಮಾನದಲ್ಲಿ ಅಕ್ಕಮಹಾದೇವಿ ಬರೆದ ಕ್ರಾಂತಿಕಾರಿ ವಚನಗಳನ್ನು ಬಿಟ್ಟರೆ ಮೇಲೆ ಹೇಳಿದ ಯಾವ ಚಳವಳಿಯಲ್ಲೂ ಲೇಖಕಿಯರು ಅಷ್ಟಾಗಿ ಭಾಗವಹಿಸಲಿಲ್ಲ. ನವೋದಯದಲ್ಲೂ ಅವರ ದನಿಯಿರಲಿಲ್ಲ. ನವ್ಯದಲ್ಲೂ ಪ್ರಮುಖ ಎನ್ನಬಹುದಾದ ಲೇಖಕಿಯರು ಅಷ್ಟಾಗಿ ಬರಲಿಲ್ಲ. ಬಂಡಾಯಕ್ಕೂ ದಲಿತದನಿಗೂ ಅವರು ಹರಿಕಾರರಾಗಲಿಲ್ಲ.

ಆದರೆ ಈ ಎಲ್ಲಾ ಸಾಹಿತ್ಯ ಪ್ರಕಾರಗಳ ಜೊತೆಗೇ ಮಹಿಳಾದನಿಯೂ ಒಂದಿತ್ತು. ಕ್ರಮೇಣ ಅದು ಸ್ತ್ರೀವಾದವಾಗಿ ಒಂದು ಸಿದ್ಧಾಂತದ ರೂಪು ತಳೆಯಿತು. ಸ್ತ್ರೀವಾದ ಕೂಡ ಒಂದು ರೀತಿಯಲ್ಲಿ ಬಂಡಾಯ ಸಾಹಿತ್ಯವೇ. ಸಿಡಿದೆದ್ದ ಮಹಿಳೆ ತನಗೊಂದು ಸ್ಥಾನಮಾನ ಬೇಕು ಅಂತ ಗುರುತಿಸಿಕೊಳ್ಳಲು ಆರಂಭಿಸಿದ್ದ ದಿನಗಳವು. ಸ್ತ್ರೀಸಮಾನತೆಯ ನೆಲೆಯಿಂದ ಹೊರಟ ಸ್ತ್ರೀವಾದ ನಿಧಾನವಾಗಿ ಪುರುಷಪ್ರಧಾನ ಸಾಹಿತ್ಯವನ್ನು ನಿರಾಕರಿಸುತ್ತಾ ತನ್ನದೇ ಆದ ಜಾಡಿನಲ್ಲಿ ಮುಂದುವರಿಯುವ ಉತ್ಸಾಹವನ್ನೂ ತೋರಿಸಿತು. ಆದರೆ ಅಲ್ಲಿ ಅಷ್ಟಾಗಿ ಬರಹಗಾರರಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಹಿಳಾವಾದದ ಆಳಕ್ಕಿಳಿದು ನೋಡಬಲ್ಲ ವಿಮರ್ಶಕಿಯರೂ ಇರಲಿಲ್ಲ. ಮಹಿಳಾವಾದ ಕೇವಲ ವಾದವೋ ಸಿದ್ಧಾಂತವೋ ಆಗಿ ಉಳಿಯಿತೇ ವಿನಾ ಪ್ರಗತಿಶೀಲದಂತೆ, ದಲಿತಪ್ರಜ್ಞೆಯಂತೆ ಅದು ಸಾಹಿತ್ಯವಾಗಿ ಹೊರಹೊಮ್ಮಲಿಲ್ಲ. ಕೆಲವೊಂದು ಕೃತಿಗಳಲ್ಲಿ ಸ್ತ್ರೀವಾದದ ನೆರಳಿದ್ದರೆ, ಮತ್ತೆ ಕೆಲವು ಮಹಿಳಾವಾದನ್ನು ಒತ್ತಾಯಪೂರ್ವಕ ಹೇರಿಕೊಂಡ ಕೃತಿಗಳಂತ ಕಂಡವು.

***

ಹಾಗೆ ನೋಡಿದರೆ ಯಾವುದೇ ಸಾಹಿತ್ಯ ಪ್ರಕಾರದ ಉದ್ದೇಶ ಮನುಷ್ಯ ಸಂಬಂಧಗಳನ್ನು ಬೆಸೆಯುವುದು. ಇನ್ನೊಬ್ಬರ ಬಗ್ಗೆ ತಿಳಿಯುವ ಮೂಲಕ ಮನುಷ್ಯ ಆರ್ದ್ರನಾಗುತ್ತಾನೆ ಅನ್ನುವುದು ಬಂಡಾಯ ಸಾಹಿತ್ಯದ ವಿಚಾರದಲ್ಲಿ ಸುಳ್ಳಾಯಿತು. ಬಂಡಾಯದ ಸಿದ್ಧಾಂತ ಸಾಹಿತ್ಯವನ್ನು ಎರಡಾಗಿ ಕತ್ತರಿಸಿತು. ದಲಿತ ಸಾಹಿತ್ಯ ಕೂಡ ಅಷ್ಟೇ. ಇದೀಗ ಬಂದಿರುವ ಸ್ತ್ರೀವಾದೀ ನೆಲೆಯ ಸಾಹಿತ್ಯ ಕೂಡ ಮತ್ತೆ ಎಲ್ಲವನ್ನೂ ಧಿಕ್ಕರಿಸಿ ನಿಲ್ಲುವ ಛಾತಿ ಮತ್ತು ಗೀಳಿಗೆ ಒಳಗಾದಂತಿದೆ.

ಸಾಹಿತ್ಯಲೋಕದಲ್ಲಿ ಇಂಥ ಪ್ರಬೇಧಗಳು ನಿಜಕ್ಕೂ ಬೇಕಾ? ಉತ್ತರಿಸುವುದು ಅಷ್ಟೊಂದು ಸುಲಭವಲ್ಲ. ಬೇಕೋ ಬೇಡವೋ ಇವೆಲ್ಲ ನಡೆಯುತ್ತಲೇ ಇದೆ. ಒಂದು ಕೃತಿ ಬಿಡುಗಡೆಯಾದ ತಕ್ಷಣ ಅದು ಯಾವ ಪಂಗಡಕ್ಕೆ ಸೇರುತ್ತದೆ ಅಂತ ಗುರುತಿಸದ ಹೊರತು ಅದಕ್ಕೆ ಸಿಗಬೇಕಾದ ಮಾನ್ಯತೆ ಸಿಗುವುದಿಲ್ಲ. ಬಂಡಾಯವಾಗಿದ್ದರೆ ಒಂದು ವರ್ಗಕ್ಕೆ ಅಸಮಾಧಾನ, ದಲಿತ ಎಂದಿದ್ದರೆ ಮತ್ತೊಂದೆರಡು ವರ್ಗದವರಿಗೆ ದೂರ, ಮಹಿಳಾವಾದಿ ಆಗಿದ್ದರೆ ಈ ಎಲ್ಲರಿಗೂ ಅಪಥ್ಯ. ಸರಳವಾಗಿ ಯಾವುದೇ ಹಂಗಿಲ್ಲದೆ ಇದ್ದರೆ...

ಅದು ಸಾಹಿತ್ಯ ಚರಿತ್ರೆಯ ಒಂದು ಭಾಗವಾಗುವುದಿಲ್ಲ. ಇವತ್ತು ವಿನಾಕಾರಣ ಬರೆದು ಖುಷಿಪಡುವ ಕಾಲ ನಮ್ಮ ಮುಂದಿಲ್ಲ. ಒಂದಾಗುವ ನೆಪದಲ್ಲಿ ಎರಡಾಗುವುದು ಮೂರಾಗುವುದು ಬೇರಾಗುವುದು ನಡೆಯುತ್ತಿದೆ. ಭೈರಪ್ಪನವರು ಹೇಳಿದ ಕಸುಬುಗಾರಿಕೆ ಹಿಂದೆ ನಿಂತು ಸಿದ್ಧಾಂತಗಳು ಮುಖ್ಯವಾಗುತ್ತಿವೆ. ಒಂದು ಹೆಣ್ಣಿಗೆ ಏನನ್ನಿಸುತ್ತದೆ ಅನ್ನುವುದಕ್ಕಿಂತ ಮುಖ್ಯವಾಗಿ ಆಕೆ ಪ್ರತಿಯಾಂದನ್ನು ಸ್ತ್ರೀವಾದೀ ದೃಷ್ಟಿಕೋನದಿಂದಲೇ ನೋಡಬೇಕು ಎಂದು ಸಾಹಿತ್ಯ ಒತ್ತಾಯಿಸುತ್ತಿದೆ. ಬೇರೆ ಸಾಹಿತ್ಯ ಪ್ರಕಾರಗಳೂ ಅಷ್ಟೇ.

ಮತ್ತೆ ಅಡಿಗರೇ ನೆನಪಾಗುತ್ತಾರೆ; ಅವರು ಬರೆದದ್ದು ನವ್ಯವೇ ಆಗಿದ್ದರೂ ಅಲ್ಲಿದ್ದದ್ದು ಕಸುಬುಗಾರಿಕೆ ಮಾತ್ರ. ಅವರು ಬರೆದ ಈ ಒಂದು ಸಾಲಲ್ಲಿ ಎಲ್ಲವೂ ಇತ್ತು ;

ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು;

ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ ಹಾಗೆ

ಗಾಳಿಗಲ್ಲಾಡಿ ಬಳುಕಾಡಿ ತಾಳುವುದನು ್ನ;

ಕಲಿಸು ಸವಾರಿಕುದುರೆಯಾಗದ ಹಾಗೆ

ಕಾಡುಕುದುರೆಯ ಕೆನೆತಕೊಬ್ಬನನ್ನು....

ಸವಾರಿ ಕುದುರೆಯಾಗದೇ ಕಾಡು ಕುದುರೆಯಾಗುವುದು ಎಂಥ ಬಂಡಾಯ. ಹಾಗಾದಾಗ ಯಾರು ದಲಿತರು? ಅಲ್ಲಿ ಎಲ್ಲವೂ ನವ್ಯ, ಎಲ್ಲರೂ ದಿವ್ಯ!

ಮರೆತಮಾತು; ಕಸುಬುಗಾರಿಕೆ ಎಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಘಂಟಿನ ಪ್ರಕಾರ ಕೆಲಸ, ಉದ್ಯೋಗ, ಸೂಳೆಗಾರಿಕೆ.

ಭೈರಪ್ಪನವರೂ ಕಸುಬುಗಾರಿಕೆ ಕಲಿಯಲಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
literary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more