ಮನ್ಯಾಗ wifiನರ ಇರಬೇಕು ಇಲ್ಲಾ wifeರ ಇರಬೇಕು!

By: ಪ್ರಶಾಂತ ಅಡೂರ, ಹುಬ್ಬಳ್ಳಿ
Subscribe to Oneindia Kannada

ಇವತ್ತ ನಮ್ಮ ಪರಿಸ್ಥಿತಿ ಹೆಂಗ ಆಗೇದ ಅಂದರ ಮನ್ಯಾಗ ಒಂದು wi-fiನರ ಇರಬೇಕು ಇಲ್ಲಾ wife ಅಂದರ ಹೆಂಡ್ತಿನರ ಇರಬೇಕು ಅನ್ನೊಹಂಗ ಆಗೇದ. ಅಲ್ಲಾ ಹಂಗ ಒಂದ ಒಪ್ಪತ್ತ ಹೆಂಡ್ತಿ ಇಲ್ಲಾ ಅಂದರ ನಡದಿತ್ತ, ಆದರ wi-fi ಅಂತೂ ಇರಬೇಕು. ಅಷ್ಟ ನಾವ ಇವತ್ತ internet ಮ್ಯಾಲೆ ಡಿಪೆಂಡ ಆಗಿಬಿಟ್ಟೇವಿ.

ದೇವರ ಮನಿ ಒಳಗ ಗಾಯತ್ರಿ ಮಂತ್ರ ಮೊಬೈಲನಾಗ ಹಚಗೊಂಡ ಸಂಧ್ಯಾವಂದನಿ ಮಾಡೋದರಿಂದ ಹಿಡದ ಬಾಥ್ ರೂಮ ಒಳಗ ಕ್ಯಾಂಡಿ ಕ್ರಶ್ ಸಾಗಾ ಕ್ಲೀಯರ್ ಆಗಲಿಕ್ಕೆ ಸಹಿತ wi-fi ಬೇಕ. ಹಂತಾ ಪರಿಸ್ಥಿತಿ ಇವತ್ತ ಬಂದದ.

ಅಲ್ಲಾ ಈಗ ಎಲ್ಲಾ ಬಿಟ್ಟ wi-fi ಮ್ಯಾಲೆ ಯಾಕ ಬಂತು ವಿಷಯ ಅನಲಿಕ್ಕೆ ಮೊನ್ನೆ ರಶ್ಯಾದವರು ಇನ್ನಮ್ಯಾಲೆ ಸುಡಗಾಡ ಗಟ್ಟಿ (cemetary) ಒಳಗೂ ಫ್ರೀ wi-fi ಕೊಡಬೇಕು ಅಂತ ಡಿಸೈಡ ಮಾಡ್ಯಾರಂತ. ಅಲ್ಲಾ ಸತ್ತ ಮ್ಯಾಲೂ ಫ್ರೀ ನೆಟವರ್ಕ ಇರಲಿ, ಸತ್ತವರ ಸ್ವರ್ಗದಿಂದನೂ ಜೀವಂತ ಇದ್ದವರಿಗೆ ಪಿಂಗ್ ಮಾಡಲಿ ಅಂತ. ಅಲ್ಲಾ ಮತ್ತ, ಅಲ್ಲೇ ಸುಡಗಾಡಗಟ್ಟಿಗೆ ಬಂದ ಮಂದಿಗೆ ಹೆಣಾ ಹುಗಿಯೋತನಕ ಟೈಮ ಪಾಸ ಮಾಡಲಿಕ್ಕೆ ಫ್ರೀ ಇಂಟರ್ನೆಟ್ ಸಿಗಲಿ ಅಂತ ಹಂಗ ಮಾಡ್ಯಾರ. [ವೈಲ್ಡ್ ಲೈಫ್ ಭಾಷಣಾ ಮತ್ತು ವೈಲ್ಡ್ ವೈಫ್ ರಕ್ಷಣಾ!]

Wife of WiFi? Choice is yours, both can't be together

ಇತ್ತೀಚಿಗೆ ಮಂದಿ ಎಲ್ಲೇ ಹೋಗಬೇಕಂದರು ಮೊದ್ಲ ಅಲ್ಲೇ wi-fi ಅದನೋ ಇಲ್ಲೊ ಅನ್ನೋದನ್ನ ಚೆಕ್ ಮಾಡಿ ಹೋಗ್ತಾರಲಾ, ಅದಕ್ಕ ಜನಾ ಎಲ್ಲರ wi-fi ಇಲ್ಲಾ ಅಂತ ಸತ್ತವರನ ಮಣ್ಣ ಮಾಡಲಿಕ್ಕೆ ಬರೋದ ಬಿಟ್ಟ ಗಿಟ್ಟಾರಂತ ಸ್ಮಶಾನದಾಗೂ free wi-fi ಕೊಡಸೋರ ಇದ್ದಾರ. ಹಂಗ ಕ್ಯಾಂಟಿನದಾಗ, ಹೋಟೆಲದಾಗ, ಮಾಲ್ ಒಳಗ, ರೇಲ್ವೆ ಸ್ಟೇಶನ ಒಳಗ, ಬಸ ಸ್ಟ್ಯಾಂಡಿನಾಗ, ಏರಪೋರ್ಟನಾಗ, ಶಾಪಿಂಗ ಕಾಂಪ್ಲೇಕ್ಸ್ ಒಳಗ ಫ್ರೀ wi-fi ಅಂತು ಇದ್ದ ಇದ್ವು. ಸುಡಗಾಡದಾಗ ಒಂದ ಇದ್ದಿದ್ದಿಲ್ಲಾ. ಇನ್ನ ಮುಂದ ಅಲ್ಲೇನೂ ಬರ್ತದ.

ಇಷ್ಟ
ಅಲ್ಲಾ ಯಾರೋ ಹೇಳಿದ್ದರಂತ when I die I want my tombstone to have wi-fi so that people visit me more often. ಅಂದರ ನಾಳೆ ನಾ ಸತ್ತ ಮ್ಯಾಲೆ ನನ್ನ ಗೋರಿ ಮ್ಯಾಲೆ free wi-fi ಕೊಡ್ರಿ, ಅಂದರರ ನಮ್ಮ ಜನಾ ನನ್ನ ನೆನಪ ಮಾಡ್ಕೊಂಡ ನನ್ನ ಗೋರಿಗೆ ಬಂದು ಹೋಗಿ ಮಾಡ್ತಾರ ಅಂತ ಹೇಳಿ.

ಬಹುಶಃ ಇದನ್ನ ರಶ್ಯಾದವರ ಭಾಳ ಸೀರಿಯಸ್ ತೊಗೊಂಡ ಎಲ್ಲೆ ಒಂದೊಂದ ಗೋರಿಗೆ ಒಂದೊಂದ wi-fi ಕೊಡ್ಕೋತ ಹೋಗೊದು ಅಂತ ಈಡಿ ಸ್ಮಶಾನನ wi-fi zone ಮಾಡಲಿಕತ್ತಾರ. ಹಂಗ ಕಬರನಾಗ ಇದ್ದೋರ ಯಾರರ ಮೊಬೈಲ್ ತೊಗೊಂಡ ಹೋಗಿದ್ದರ ಒಬ್ಬರಿಗೊಬ್ಬರ ಚಾಟ್ ಮಾಡಬಹುದು ಏನೊ ಆ ದೇವರಿಗೆ ಗೊತ್ತ! [ನಮ್ಮ ಮನೆಯವರಿಗೆ Ig Nobel ಅವಾರ್ಡ ಕೊಡರಿ]

ಹಂಗ ನಮ್ಮ ಮನ್ಯಾಗೂ wi-fi ಅದ ಮ್ಯಾಲೆ ಅದಕ್ಕ ಅಡ್ಡಗಾಲ ಹಾಕಲಿಕ್ಕೆ ವೈಫು ಇದ್ದಾಳ. ಒಮ್ಮೆ ಮನಿಗೆ ಬಂದ್ವಿಲ್ಲೋ ಮುಗಿತು ಹೆಂಡ್ತಿ, wi-fi ಎರಡು ಒಂದ ಅಳತಿ ನಮ್ಮ ಬೆನ್ನ ಹತ್ತಿರ್ತಾವ. ಹಂಗ ಆವಾಗ ಇವಾಗ wi-fi signal week ಆಗಬಹುದು ಆದರ wife signal ಮಾತ್ರ ಯಾವಾಗಲೂ connected and always strong.

ನಾ ನನ್ನ ಹೆಂಡತಿಗೆ ಕಾಡಸಲಿಕ್ಕೆ "ಏನಲೇ wi-fi ಇದ್ದಂಗ ಇದ್ದಿ ನೋಡ ನಾ ಬರೋದ ತಡಾ ಒಂದ ಸಮನಾ ಪೀಡಾ ಗಂಟ ಬಿದ್ದಂಗ ಬೆನ್ನ ಹತ್ತಿ ಬಿಡ್ತಿ" ಅಂತ ನಾ ಅಂದರ... "ಅಯ್ಯ ಸಾಕ ಸುಮ್ಮನೀರ್ರಿ, ಹೆಂಡತಿ wi-fi ಆದರ ಗಂಡಂದರ bluetooth ಇದ್ದಂಗ ಮುಂದ ಹೆಂಡ್ತಿ ಇದ್ದರ ಇಷ್ಟ ಕನೆಕ್ಟೆಡ್ ಇರ್ತೀರಿ. ಒಂದ ಸ್ವಲ್ಪ ನಾವಿಲ್ಲಾ ಅಂದರ ಸಾಕ ಮತ್ತ ಯಾವದರ ಹೊಸಾ ಡಿವೈಸಿಗೆ ಬೆನ್ನ ಹತ್ತಿರಿ" ಅಂತ ನಂಗ ಮಾರಿ ತಿವದ್ಲು.

ಮೊನ್ನೆ ಯಾರೋ ಒಂದ ಜೋಕ ಕಳಸಿದ್ದರು. ಮನಿಗೆ ಭಿಕ್ಷಾ ಬೇಡಲಿಕ್ಕೆ ಬಂದವ ಸಹಿತ "ಯಮ್ಮಾ ತಾಯಿ ಒಂದ ಸ್ವಲ್ಪ wfi-fi ಆನ್ ಮಾಡರಿ, ಮೂರ ದಿವಸದಿಂದ ಫೇಸ್ ಬುಕ್ಕ ನೋಡಿಲ್ಲಾ" ಅಂತ wi-fi ಸಂಬಂಧ ಭಿಕ್ಷಾ ಬೇಡ್ತಾನಂತ. ಏನ್ಮಾಡ್ತೀರಿ ಇಷ್ಟ ಪ್ರಭಾವ ಅದ ಈ wi-fiದ್ದ. [ಓಣ್ಯಾಗಿನ ಹೆಂಗಸ್ರಿಂದ ಕ್ರಾಸ್ಡ್ ಲೆಗ್ ಮೂವ್ಮೆಂಟ್!]

ಅಲ್ಲಾ ನನಗಂತೂ ಇವತ್ತ ಈ wi-fi, wife ಕಿಂತ ಅನಿವಾರ್ಯ ಆಗೇದ ಬಿಡ್ರಿ. ಸುಳ್ಳ ಯಾಕ ಹೇಳ್ಬೇಕು? ಒಂದ ನಿಮಿಷ wi-fi ಡೌನ ಆದರ ಸಾಕ ಜೀವ ಹೋದಂಗ ಆಗ್ತದ. ಒಂದ ಮುಂಜಾನೆ ಎದ್ದವಿ ಅಂದರ ರಾತ್ರಿ ಮಲ್ಕೋಬೇಕಾರ ಸಹಿತ wi-fi ಆನ್ ಇಟ್ಟ ಮೊಬೈಲ ತಲಿದಿಂಬ ಬುಡಕ ಇಟ್ಕೊಂಡ ಮಲ್ಕೋತೇವಿ. ಅಷ್ಟ wi-fiಗೆ ಅಡಿಕ್ಟ್ ಆಗೇವಿ. ಹಂಗ wife ಮಲ್ಕೊಂಡ ಮ್ಯಾಲೆ ಅಕಿ ಸಿಗ್ನಲ್ ಡೌನ ಆಗಬಹುದು, ಆದರ wi-fi ಸಿಗ್ನಲ್ ಮಾತ್ರ ಯಾವಾಗಲೂ ಸ್ಟ್ರಾಂಗ್ ಇರಬೇಕು.

ಅಲ್ಲಾ ಇದ ನಂದ ಒಬ್ಬೊಂದ ಕಥಿ ಅಲ್ಲಾ ಬಿಡ್ರಿ ನಿಂಬದು ಎಲ್ಲಾ ಇದ ಹಣೇಬರಹ. ನಾ ಇದ್ದದ್ದನ್ನ ಹಂಚಗೋತೇನಿ ನೀವ ಹಂಚಗೊಳಂಗಿಲ್ಲಾ ಇಷ್ಟ ಫರಕ. ಆದ್ರೂ ಈ ಸುಡಗಾಡ wi-fi ಅನ್ನೋದ ಹೆಂತ technology ಅಂತೇನಿ. ಜಗತ್ತ ಎಲ್ಲಿಂದ ಎಲ್ಲೆಗೆ ಬಂತ ನೋಡ್ರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wife of WiFi? Which is your choice? Because, both can't be together. These days we are so much addicted to WiFi. We want Wifi everywhere, even in burial ground. What is your opinion about this? Please share your thoughts. A humorous write up by Prashant Adur, Hubballi.
Please Wait while comments are loading...