ಇರೋಕಿ ಒಬ್ಬೋಕಿ ಹೆಂಡ್ತಿ, ಅಕಿನೂ ತವರಮನಿಗೆ ಹೋಗ್ಯಾಳ!

By: ಪ್ರಶಾಂತ ಅಡೂರ, ಹುಬ್ಬಳ್ಳಿ
Subscribe to Oneindia Kannada

ಇದ ನನ್ನ ಹೊಸ್ದಾಗಿ ಮದುವಿ ಆದಾಗಿನ ಮಾತ, ಹಂಗ ನಾ ಮದುವಿ ಆಗಿದ್ದ ಲೋಕಲ ಕನ್ಯಾ ಹಿಂಗಾಗಿ ವಾರದಾಗ ಒಂದ್ಯಾರಡ ಸಲಾ ನನ್ನ ಹೆಂಡ್ತಿ ತವರ ಮನಿಗೆ ಹೋಗೊದ ಸಹಜ ಆಗಿತ್ತ. ನಾವು ಪಾಪ ದಣೇಯಿನ ಮದುವಿ ಆಗೇದ ಹಂಗ ತವರಮನಿದ ನೆನಪ ಆಗ್ತದ ಹೋಗಿ ಬರಲಿ ತೊಗೊ ಹೆಂಗಿದ್ದರೂ ಲೋಕಲ ಅಂತ ಸುಮ್ಮನ ಇದ್ವಿ.

ಹಂತಾದರಾಗ ಅಕಿ ಲಗಭಗ ಪ್ರತಿ ಸಂಡೆ ತವರ ಮನಿಗೆ ಹೋಗೇ ಹೋಗೊಕಿ. ನಾ ಎಷ್ಟ 'ಇವತ್ತ ಸಂಡೇ ನಾನು ಮನ್ಯಾಗ ಇರ್ತಿನಿ ಇವತ್ತ ಬ್ಯಾಡ' ಅಂದರು ನನ್ನ ಮಾತ ಕೇಳ್ತಿದ್ದಿಲ್ಲಾ 'ಬೇಕಾರ ನೀವು ಬರ್ರಿ ಅತ್ತಿ ಮನಿಗೆ' ಅಂತ ನನಗ ಗಂಟ ಬಿಳ್ತಿದ್ಲು. ಇನ್ನ ನಾ ಎಲ್ಲೆ ಅಲ್ಲೇ ಹೋಗಿ ಸಿಕ್ಕೋಳಿ ಅಂತ ಅಕಿನ್ನ ಒಬ್ಬೊಕಿನ್ನ ಅಟ್ಟಿ ಕೈ ತೊಳ್ಕೊಂಡ ಬಿಡ್ತಿದ್ದೆ.

ಇನ್ನ ನಮ್ಮ ಪೈಕಿ ಯಾರದರ ಫಂಕ್ಶನ್ ಇತ್ತಂದರ ಇಕಿ ಒಟ್ಟ ಬರ್ತಿದ್ದಿಲ್ಲಾ, ನಮ್ಮವ್ವರ ಹೊಸ್ದಾಗಿ ಲಗ್ನ ಆದೋರ ಗಂಡಾ ಹೆಂಡತಿ ಜೋಡಿಲೇ ಹೋಗಬೇಕ್ವಾ ಅಂತ ಎಷ್ಟ ಹೇಳಿದರೂ 'ಏ, ಅಲ್ಲೇ ಯಾರ ನಂಗ ಪರಿಚಯ ಇಲ್ಲಾ ಏನಿಲ್ಲಾ' ಅಂತ ನನ್ನ ಒಬ್ಬೊವನ ಕಳಿಸಿ ಬಿಡೋಕಿ. [ಗೂಗಲನಾಗ ಯಾವದರ ಕನ್ಯಾ ಇದ್ದರ ನೋಡಪಾ!]

My wife has gone to mother's house

ನಾ ಹೋದಲ್ಲೆ ಬಂದಲ್ಲೇ ಜನಾ ನಂಗ ಕೇಳೆ ಕೇಳೋರ... 'ಏನಲೇ ಹೊಸ್ದಾಗಿ ಮದುವಿ ಆಗಿ ಮಗನ, ಹೆಂಡ್ತಿನ ಬಿಟ್ಟ ಒಬ್ಬನ ಕೈಬಿಸ್ಗೋತ ಅಡ್ಡಾಡತಿಯಲಾ' ಅಂತ ಅನ್ನೋರ. ನಾ ಅವರಿಗೆ ಏನ ಹೇಳಬೇಕ ತಿಳಿಲಾರದ ಧಾರ್ಮಿಕ ಫಂಕ್ಶನ್ ಇದ್ದಾಗ 'ಇಲ್ಲಾ ಅಕಿ ಬರೋಹಂಗ ಇದ್ದಿದ್ದಿಲ್ಲಾ' ಅಂತ, ನಾನ್- ಧಾರ್ಮಿಕ ಫಂಕ್ಶನ್ ಇದ್ದರ ಹೆಂಡ್ತಿಗೆ ಆರಾಮ ಇಲ್ಲಾ ಅಂತ ಹೇಳಿ ಪಾರ ಆಗ್ತಿದ್ದೆ. ಹಂಗ ಹತ್ತರಾಗ ಐದ ಫಂಕ್ಶನ್ ಇದ್ದಾಗ ಇಕಿ ತವರಮನಿ ಒಳಗ ಇರ್ತಿದ್ಲ ಆ ಮಾತ ಬ್ಯಾರೆ. ನಂಗ ಹೆಂಡ್ತಿನ್ನ ಯಾಕ ಬಿಟ್ಟ ಬಂದಿ ಅಂತ ಕೇಳಿ ಕೇಳಿ ಜೀವಾ ತಿಂತಿದ್ದರು.

ಅಲ್ಲಾ ಹಂಗ ಹೆಂಡ್ತಿನ್ನ ನೋಡಿಲ್ಲಾ ಅನ್ನೋರಿದ್ದರ ಬ್ಯಾರೆ. ಯಾರನರ ಕರಕೊಂಡ ಹೋಗಿ ಅಕಿನ ನನ್ನ ಹೆಂಡ್ತಿ ಅಂತ ಪರಿಚಯ ಮಾಡಸಬಹುದಿತ್ತ ಬಿಡ್ರಿ. ಆದರ ಅದ ಸರಿ ಕಾಣಂಗಿಲ್ಲಾ. ಅದರಾಗ ಪ್ರತಿ ಫಂಕ್ಶನಗೆ ಎಲ್ಲೆ ಒಂದೊಂದ ಹೊಸಾ ಹೆಂಡ್ತಿ ಹುಡಕೊಂಡ ಬರ್ತೀರಿ? ಇಲ್ಲೇ ನೋಡಿದರ ಇದ್ದ ಬಿದ್ದ ವರಕ್ಕ ಕನ್ಯಾ ಸಿಗವಲ್ವು ಇನ್ನ ನಮಗೇಲ್ಲೆ ಭಾಡಗಿ ಹೆಂಡ್ತಿ ಸಿಗ್ತಾವ, ಆ ಮಾತ ಬ್ಯಾರೆ.

ಒಂದಿಷ್ಟ ಮಂದಿ ಅಂತು ನಿನ್ನ ಹೆಂಡತಿ ಎಲ್ಲಿ ಇದ್ದಾಳಪಾ ಕಾಣವಳ್ಳಲಾ ಅಂತ ಕೇಳೆ ಕೇಳೋರ. ನಾ ಕೆಲವೊಮ್ಮೆ ದೂರಿಂದ ಯಾರನರ ಕೈ ಮಾಡಿ ತೋರಿಸಿ ಅಲ್ಲೇ ಊಟಕ್ಕ ಪಾಳೆ ಹಚ್ಯಾಳ ಹಂಗ ಹಿಂಗ ಅಂತ ಸುಳ್ಳ ಹೇಳ್ತಿದ್ದೆ. [ಮನ್ಯಾಗ wifiನರ ಇರಬೇಕು ಇಲ್ಲಾ wifeರ ಇರಬೇಕು!]

ಅಲ್ಲಾ ನಮ್ಮ ದೋಸ್ತ ಒಬ್ಬೊಂವಾ, ತನ್ನ ಮಗಳ ಹೊಸ್ದಾಗಿ ಅಪ್ಪಾ - ಅಮ್ಮನ್ನ ಗೊತ್ತ ಹಿಡಿಬೇಕಾರ, ನಾಲ್ಕ ಮಂದಿ ಹೆಣ್ಣ ಮಕ್ಕಳ ನಿಂತಾಗ 'ಪುಟ್ಟಿ ಅಮ್ಮಾ ಎಲ್ಲೇ ಇದ್ದಾಳ' ಅಂತ ಕೇಳೋಂವಾ. ಅಕಿ ಪಾಪ ಎರಡ ವರ್ಷದ ಕೂಸ, ಇದ್ದದ್ದರಾಗ ಛಂದನ ಯಾವದರ ಹೆಣ್ಣಮಕ್ಕಳನ ತೊರಸ್ತಿತ್ತ.

ಇಂವಾ 'ಏ ಅಕಿ ಅಲ್ಲಾ, ನಿಮ್ಮಮ್ಮ... ನಿಮ್ಮಮ್ಮ ಎಲ್ಲೇ ಇದ್ದಾಳ' ಅಂತ ಮತ್ತ ಮತ್ತ ಕೇಳೋಂವಾ ಆ ಕೂಸ ಮತ್ತ ಬ್ಯಾರೆಯವರನ ತೊರಸ್ತಿತ್ತ. ಆ ಕೂಸ ಕಂಡ ಕಂಡ ಛಂದ ಛಂದನಿ ಹೆಣ್ಣಮಕ್ಕಳಿಗೆಲ್ಲಾ ನಮ್ಮಮ್ಮ ಅಂತ ತೊರಸೋದ ನೋಡಿ ಈ ಮಗಾ ಮನಸ್ಸಿನಾಗ ಮಂಡಗಿ ತಿಂತಿದ್ದಾ. ಅಲ್ಲಾ ಹಂಗ ಇಂವಾ ಒಟ್ಟ ಒಂದ ನಾಲ್ಕ ಮಂದಿ ಹೆಣ್ಣಮಕ್ಕಳ ಸೇರಿದಾಗೊಮ್ಮೆ ತನ್ನ ಮಗಳಿಗೆ ಅಮ್ಮ ಎಲ್ಲೆ ಇದ್ದಾಳ ಅಂತ ಕೇಳೊಂವಾ. ಪುಣ್ಯಾಕ ನಾ ನನ್ನ ಹೆಂಡ್ತಿನ್ನ ಬಿಟ್ಟ ಹೋಗಿರ್ತಿದ್ದೆ! [ಕನ್ಯಾ ಏನ ಗಿಡದಾಗ ಹುಟ್ಟತಾವ? ಮತ್ತಿನ್ನೇನ! ಬೇಕೇನ?]

ಒಂದ ದಿವಸ ತಲಿಕೆಟ್ಟ ನಾ ಆ ಕೂಸಿನ ಕರದ 'ಪುಟ್ಟಿ, ನಿಮ್ಮಪ್ಪ ಯಾರ ಅಂತ ತೊರಸ' ಅಂತ ಒಂದ ಸರತೆ ಅಂದೆ. ಪಾಪ ಆ ಕೂಸ ಆವಾಗ ಯಾರ ಬೇಕಾದವರನ ಒಟ್ಟ ಪ್ಯಾಂಟ ಶರ್ಟ ಹಾಕ್ಕೊಂಡವರನ ತೋರಸಲಿಕ್ಕೆ ಹತ್ತ. ಆವಾಗ ನೋಡ್ರಿ ನಮ್ಮ ದೋಸ್ತಗ ತಲಿ ಕೆಟ್ಟತ ಅವತ್ತಿನಿಂದ ಆ ಮಗಾ ಹೋದಲ್ಲೆ ಬಂದಲ್ಲೆ 'ಪುಟ್ಟಿ, ನಿಮ್ಮಮ್ಮ ಯಾರ ತೊರಸ' ಅಂತ ಅನ್ನೊದನ್ನ ಬಿಟ್ಟ ಬಿಟ್ಟಾ.

ಅಲ್ಲಾ ಹಂಗ ನನಗ ಎಲ್ಲಾರೂ ನಿನ್ನ ಹೆಂಡ್ತಿ ಯಾರಲೇ ಅಂತ ಕೇಳ್ತಾರಲಾ ಅದಕ್ಕ ಈ ವಿಷಯ ನೆನಪಾತ ಇಷ್ಟ. ನನ್ನ ಹಣೇಬರಹಕ್ಕ ಹಂಗ ಕಂಡ ಕಂಡೊರನ ನನ್ನ ಹೆಂಡತಿ ಅಂತ ಆ ಕೂಸಿನ ಗತೆ ತೊರಸಲಿಕ್ಕೂ ಬರಂಗಿಲ್ಲಾ. ಹಿಂಗಾಗಿ 'ಎಲ್ಲೆ ನಿನ್ನ ಹೆಂಡತಿ' ಅಂದಾಗೊಮ್ಮೆ 'ಅಕಿ ತವರಮನಿಗೆ ಹೋಗ್ಯಾಳ' ಅಂತ ಹೇಳಲಿಕ್ಕೆ ಶುರು ಮಾಡಿದೆ.

ಅಲ್ಲಾ ಆ ಮಾತಿಗೆ ಈಗ ಹದಿನೈದ ವರ್ಷ ಆಗಿರಬಹುದು. ಆದರ ಇವತ್ತೂ ನನ್ನ ಹೆಂಡ್ತಿಗೇನ ತವರ ಮನಿ ಹುಚ್ಚ ಕಡಿಮಿ ಆಗಿಲ್ಲಾ, ಇವತ್ತೂ ಮಕ್ಕಳ ಸಾಲಿ ಸೂಟಿ ಆತ ಅಂದರ ಮಕ್ಕಳಕಿಂತಾ ಇಕಿಗೆ ಜಾಸ್ತಿ ಖುಷಿ ಆಗ್ತದ. ಯಾಕಂದರ ಮಕ್ಕಳ ಸಾಲಿ ಸೂಟಿ ಅಂದರ ಸಾಕ ಅಕಿ ತವರ ಮನಿಗೆ ಜಿಗದ ಬಿಡ್ತಾಳ.

ಒಟ್ಟ ಒಂದ ಮಾತಿನಾಗ ಹೇಳ್ಬೇಕಂದರ ನನ್ನ ಹಣೆಬರಹದಾಗ 'ಇರೋಕಿ ಒಬ್ಬೋಕಿ ಹೆಂಡ್ತಿ.. ಅಕಿನೂ ತವರಮನಿಗೆ ಹೋಗ್ಯಾಳ' ಅನ್ನೊಹಂಗ ಆಗಿ ಬಿಟ್ಟದ. ಅದೇನೊ ಅಂತಾರಲಾ...

"ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ;
ಜಾಲಿಯ ಮರವು ನೆರಳಲ್ಲ;
ಬಾಳಿಯ ಮರವು ಸ್ಥಿರವಲ್ಲ;
ನನಮಗಳೇ ತಾಯಿ ಮನೆಯು ನಿನದಲ್ಲ!" ಈ ಮಾತ ನನ್ನ ಹೆಂಡ್ತಿ ತಲ್ಯಾಗ ಎಷ್ಟ ಹೇಳಿದ್ರು ಹೋಗವಲ್ತ ಆಗೇದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
I have only one wife and she has gone to her mother's house. What to do? I have no other wife to show, when some relative asks, why your wife has not come! A humorous and satire by Prashant Adur, Hubballi.
Please Wait while comments are loading...