ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಡಿದಿರೋದು ಹಂದಿಜ್ವರವಲ್ಲ ಸ್ವಾಮೀ ಹಿಂದಿಜ್ವರ!

By Staff
|
Google Oneindia Kannada News

Guru Kulkarni, Dharwad
ಹಂದಿಜ್ವರದಿಂದ ನಿಧಾನವಾಗಿ ಹೊರಬರುತ್ತಿರುವ ಬೆಂಗಳೂರಿನ ನಿರಭಿಮಾನಿ ಕನ್ನಡಿಗ ಹಿಂದಿಜ್ವರದಿಂದ ತೀವ್ರವಾಗಿ ಬಳಲುತ್ತಿದ್ದಾನೆ. ವಿಪರ್ಯಾಸವೆಂದರೆ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಯಾವ ಪ್ರಯತ್ನವನ್ನೂ ಆತ ಮಾಡುತ್ತಿಲ್ಲ. ತೀವ್ರ ಉಲ್ಬಣಾವಸ್ಥೆಗೆ ತಲುಪುತ್ತಿರುವ ಈ ರೋಗಕ್ಕೆ ಮದ್ದಾದರೂ ಇದೆಯಾ?

* ಗುರು ಕುಲಕರ್ಣಿ, ಧಾರವಾಡ

ಪ್ರಶ್ನೆ : ಹಂದಿ ಜ್ವರ ಕೇಳಿದ್ದೆ, ಇದೇನಿದು ಹಿಂದಿ ಜ್ವರ ?

ಉತ್ತರ : ಇದರ ವೈಜ್ಞಾನಿಕ ಹೆಸರು ABCD – Acute Bihariness Compulsive Disorder. ಅಂದರೆ ಅತೀ ಬಿಹಾರಿತನದ ಗೀಳಿನ ರೋಗ. ಸಾಮಾನ್ಯವಾಗಿ ಇದನ್ನು ಹಿಂದಿ ಜ್ವರ ಎನ್ನುತ್ತಾರೆ. ಇದು ಒಂದು ಅಪಾಯಕಾರಿ ರೋಗ. ಈ ರೋಗ ಬಂದಲ್ಲಿ, ಕರ್ನಾಟಕದಲ್ಲಿಯೇ ಹುಟ್ಟಿ-ಇಲ್ಲಿಯೇ ಬೆಳೆದಿರುವ ರೋಗಿಯು, ಬಿಹಾರಿ / ಉತ್ತರಭಾರತೀಯರ ಭಾಷೆಯಾದ ಹಿಂದಿಯನ್ನು ಉಪಯೋಗಿಸುವ ಕೆಟ್ಟ ಗೀಳನ್ನು ಬೆಳೆಸಿಕೊಂಡಿರುತ್ತಾನೆ.

ಈ ರೋಗ ವ್ಯಕ್ತಿಗಳಿಗಷ್ಟೇ ಅಲ್ಲದೇ, ಸಂಸ್ಥೆಗಳಿಗೂ ಬರಬಹುದು.

ಪ್ರಶ್ನೆ : ಈ ರೋಗದ ಮುಖ್ಯ ಲಕ್ಷಣಗಳೇನು?

ಉತ್ತರ :

1. ರೋಗಿಯು ಕೀಳರಮೆಯಿಂದ ಬಳಲುತ್ತಿರುತ್ತಾನೆ : ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರಪೂಜೆ ಎಂದು ಎಲ್ಲ ಆರೋಗ್ಯವಂತ ಮನಸ್ಸುಗಳು ಯೋಚಿಸುತ್ತವೆ. ಆದರೆ ಈ ರೋಗ ಬಂದ ಮನಸ್ಸಿಗೆ ಕನ್ನಡದ ಜಾಗಕ್ಕೆ ಹಿಂದಿ ಭಾಷೆ ತಂದು ಕೂರಿಸುವ ಚಟ. ಈ ರೋಗ ಬಂದವನು ತನ್ನ ನೆಲದಲ್ಲಿಯೇ ತನ್ನ ಬಗ್ಗೆಯೇ ಕೀಳರಮೆ ಬೆಳೆಸಿಕೊಂಡು, ನಿರಭಿಮಾನಿಯಾಗಿ, ನಿರ್ಲಜ್ಜನಾಗಿ ಹಿಂದಿಯ ದಾಸನಾಗುತ್ತಾನೆ.

2. ರೋಗಿಯು ವಿವೇಕಶೂನ್ಯ ಆಗಿರುತ್ತಿದ್ದಾನೆ : ಕನ್ನಡ ಗ್ರಾಹಕನನ್ನು ತಲುಪಬೇಕಾದರೆ ಜಾಹಿರಾತು ಕನ್ನಡದಲ್ಲಿರಬೇಕು ಎನ್ನುವುದು ವಿವೇಕ. ಆದರೆ ಈ ರೋಗ ಬಡಿದಾಗ ಕನ್ನಡನಾಡಿನಲ್ಲಿಯೂ ಹಿಂದಿ ಜಾಹೀರಾತಿಗೆ ಕಾಸು ಚೆಲ್ಲುವ ಹುಚ್ಚು ಬರುತ್ತದೆ.

3. ರೋಗಿಯು ಭ್ರಮಾಧೀನನಾಗಿರುತ್ತಾನೆ : ರೋಗಿಯಲ್ಲಿ ಹಿಂದಿಯ ಬಗೆಗೆ ಹತ್ತು ಹಲವು ಭ್ರಮೆಗಳು ಇರುತ್ತವೆ. ಸಂವಿಧಾನದ ಮುಖ್ಯ ಆಶಯವೇ ಸಮಾನತೆ, ಆದ್ದರಿಂದ ಒಂದು ಭಾಷೆಗೆ ಇನ್ನೊಂದು ಭಾಷೆಗಿಂತ ಹೆಚ್ಚಿನ ಪ್ರಾಧಾನ್ಯತೆ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು, ಎಲ್ಲ ಹದಿನೇಳು ಭಾಷೆಗಳೂ ನಮ್ಮ ರಾಷ್ಟ್ರಭಾಷೆಗಳೇ ಎಂದು ನೀವು ಎಷ್ಟೇ ಶಂಖ ಊದಿದರೂ ರೋಗಿಯ ಮೆದುಳಿನಲ್ಲಿರುವ ಹಿಂದಿ-ರಾಷ್ಟ್ರಭಾಷೆ ಎಂಬ ಭ್ರಮೆ ಹೋಗುವುದಿಲ್ಲ. ಹಿಂದಿಯಿಂದ ಮಾತ್ರ ಭಾರತದ ಉದ್ಧಾರ ಎಂಬುದು ರೋಗಿಗಳ ಇನ್ನೊಂದು ಭ್ರಮೆ. ಹಿಂದಿಗೆ ಇಡೀ ಭಾರತವನ್ನೇ ಉದ್ಧಾರ ಮಾಡುವ ದೈವಿ ಶಕ್ತಿ ಇದ್ದರೆ, ಬಿಹಾರ- ಉತ್ತರ ಪ್ರದೇಶಗಳೇಕೆ ದಟ್ಟ ದರಿದ್ರ ಪ್ರದೇಶಗಳಾಗಿ ಉಳಿದಿರುತ್ತಿದ್ದವು ಎಂದು ವಿಚಾರಿಸುವಷ್ಟು ಶಕ್ತಿ ಈ ರೋಗಿಗಳಿಗಿರುವುದಿಲ್ಲ.

ಪ್ರಶ್ನೆ : ಈ ರೋಗ ಹೇಗೆ ಹರಡುತ್ತದೆ?

ಉತ್ತರ : ಮೊದಮೊದಲು ಈ ರೋಗಪೀಡಿತರು ಮಾತ್ರ ಇದನ್ನು ಹರಡುತ್ತಿದ್ದರು. ನಂತರ ಈ ರೋಗವನ್ನು ಹರಡಲೆಂದೇ ಕೆಲ ಸಭೆ-ಸಂಸ್ಥೆಗಳು ಹುಟ್ಟಿಕೊಂಡಿದವು. ಈಗೀಗ ರೇಡಿಯೋಗಳು, ಸಿನೆಮಾಗಳು ಈ ರೋಗ ಹರಡುವ ಪ್ರಮುಖ ಮಾಧ್ಯಮಗಳಾಗಿವೆ.

ಪ್ರಶ್ನೆ : ಈ ರೋಗಕ್ಕೆ ಮದ್ದು ಇದೆಯೇ?

ಉತ್ತರ : ಇವೆ. ಡಾ| ಆಲೂರು ವೆಂಕಟರಾಯರು ಅರ್ಧಶತಮಾನದ ಹಿಂದೆಯೇ ತಯಾರಿಸಿದ ಮದ್ದುಗಳು ಉದಾ : ಕರ್ನಾಟಕ ಗತವೈಭವ, ಕರ್ನಾಟಕತ್ವದ ವಿಕಾಸ, ರಾಷ್ಟ್ರೀಯತೆಯ ಮಿಮಾಂಸೆ, ಇಂದಿಗೂ ಈ ರೋಗಕ್ಕೆ ರಾಮಬಾಣದಂತಿವೆ. ನಂತರದ ಕೆಲ ವೈದ್ಯರುಗಳು,- ಉದಾ: ಡಾ| ಅನಕೃ, ಡಾ| ಚಿಮೂ- ಕೂಡ ಈ ರೋಗವನ್ನು ವಾಸಿಮಾಡುವುದಷ್ಟೇ ಅಲ್ಲ, ವ್ಯಕ್ತಿತ್ವವನ್ನು ಗಟ್ಟಿ ಮಾಡುವಂತಹ ಅನೇಕ ಔಷಧಿ ಸೂತ್ರಗಳನ್ನು ನಾಡಿಗೆ ಕೊಟ್ಟಿದ್ದರೆ.

ರೋಗ ಉಲ್ಬಣ ಅವಸ್ಥೆಯಲ್ಲಿದ್ದರೆ, ಅದೂ ವಿಶೇಷವಾಗಿ ಸಂಸ್ಥೆಗಳಿಗೆ, ಶಸ್ತ್ರಚಿಕಿತ್ಸೆಗಳೂ ಫಲ ಕೊಟ್ಟ ನಿದರ್ಶನಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X