ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಜನ್ಮದಲ್ಲಿ ಯಡಿಯೂರಪ್ಪ ಟೇಲರ್!

By Sridhar L
|
Google Oneindia Kannada News

Yeddyurappa inaugurating Varahi project
ಮಾನ್ಯ ಮುಖ್ಯಮಂತ್ರಿಗಳು ಇದೇ ರೀತಿ ವರ್ತಿಸುತ್ತಿದ್ದರೆ ಅವರಿಗೆ ಅನ್ಯ ಉದ್ಯೋಗವಿಲ್ಲ.

* ನಿಜಗುಣ

ಹೊಸ ಯೋಜನೆಗಳಿಗೆ ಕಾಮಗಾರಿ ಆರಂಭವಾಗುವ ಮುಂಚೆ ಸಾಂಕೇತಿಕ ಕಾಮಗಾರಿ ಶಾಸ್ತ್ರ ಮಾಡುವುದು ನಮ್ಮಲ್ಲಿ ರೂಢಿ. ಅಲ್ಲಿ ತಲೆ ಎತ್ತಲಿರುವ ಕಟ್ಟಡ ಮನೆಯಾಗಬಹುದು, ಕಚೇರಿ ಆಗಬಹುದು, ಭವನವಾಗಬಹುದು, ಅಣೆಕಟ್ಟಾಗಬಹುದು, ಶಿಶುವಿಹಾರ ಸ್ಮಾರಕ ಚಿತಾಗಾರವೇ ಆಗಿರಬಹುದು. ಯಾವುದೇ ಆಗಿರಲಿ, ಸುಮೂಹೂರ್ತದಲ್ಲಿ ಧಾರ್ಮಿಕ ವಿಧಿವಿಧಾನಗಳ ರೀತ್ಯ ಯೋಜನೆಗೆ ನಾಂದಿ ಹಾಡುವುದು ಹಿಂದೂ ಸಂಪ್ರದಾಯ.

ಈ ಕೈಂಕರ್ಯಕ್ಕೆ ಕೆಲವು ಹೆಸರುಗಳಿವೆ. ಶಂಕು ಸ್ಥಾಪನೆ ಮಾಡುವುದು, ಅಡಿಗಲ್ಲು ಹಾಕುವುದು, ಭೂಮಿ ಪೂಜೆ ನೆರವೇರಿಸುವುದು, ಟೇಪು ಕತ್ತರಿಸುವುದು, ತೆರೆ ಸರಿಸುವುದು ಮುಂತಾದವು. ಸಾಮಾನ್ಯವಾಗಿ ಶ್ರದ್ಧೆ ಭಯಭಕ್ತಿಗಳಿಂದಲೇ ಮಾಡುವ ಈ ಕೆಲಸಕ್ಕೆ ಪುರೋಹಿತರ ಸಹಕಾರ ಮತ್ತು ಬಂಧುಬಳಗದ ಉಪಸ್ಥಿತಿಯಷ್ಟೇ ಸಾಕಾಗುವುದಿಲ್ಲ. ಶಂಕು ಸ್ಥಾಪನೆ ನೆರವೇರಿಸುವುದಕ್ಕೆ ಹಿರಿಯರೋ ಅಥವಾ ಗಣ್ಯರೋ ಬೇಕು. ಅತಿಗಣ್ಯರಾದರೆ ಇನ್ನೂ ಲೇಸು.

ಗಣ್ಯರು ಲೊಕೇಶನ್ನಿಗೆ ಆಗಮಿಸಿ ಶಂಕುಸ್ಥಾಪನೆ ಮಾಡುವ ದೃಶ್ಯ ನೋಡುವುದಕ್ಕೆ ಸ್ವಾರಸ್ಯವಾಗಿರುತ್ತವೆ. ಅರ್ಧ ಕಟ್ಟಿರುವ ಒಂದು ಸಾಂಕೇತಿಗ ಗೋಡೆಗೆ ಮಹನೀಯರು ತಮ್ಮ ಅಮೃತ ಹಸ್ತ ಬಳಸಿ ಒಂದೇ ಒಂದು ಇಟ್ಟಿಗೆ ಇಡುತ್ತಾರೆ. ಕರಣಿಗೆ ಎತ್ತಿಕೊಂಡು ಸ್ವಲ್ಪ ಸಿಮೆಂಟು ತುಂಬಿ ಇಟ್ಟಿಗೆ ಮೇಲಿಟ್ಟು ಸವರುತ್ತಾರೆ. ಅಲ್ಲಿಗೆ ಪವಿತ್ರವಾದ ಆರಂಭಿಕ ಕೆಲಸಗಳು ಸಾಂಗವಾದಂತೆ.

ಸಾರ್ವಜನಿಕ ಕ್ಷೇತ್ರದಲ್ಲಿ ಇಂಥ ಶಂಕುಸ್ಥಾಪನೆಗಳು ನಿತ್ಯ ಜರಗುತ್ತಿರುತ್ತವೆ. ಸರಕಾರಿ, ಅದರಲ್ಲೂ ಪಿಡಬ್ಲ್ಯೂಡಿ ಕಟ್ಟಡಗಳಾದರೆ ಮಂತ್ರಿ ಮಹೋದಯರು ಬಂದೇ ಬರುತ್ತಾರೆ. ನಮ್ಮ ರಾಜ್ಯದಲ್ಲಿ ಇಂಥ ಅಡಿಗಲ್ಲು ಪರಾಕ್ರಮಗಳು ಸಾವಿರಾರು, ಲಕ್ಷಾವಾರು ನಡೆದುಹೋಗಿವೆ. ಕೆಲವು ಕಟ್ಟಡಗಳು ನಿಜಕ್ಕೂ ಪೂರ್ಣತಲೆ ಎತ್ತಿ ನೀರುನೆರಳು ಕೊಟ್ಟರೆ ಅನೇಕ ಕಟ್ಟಡಗಳು ಸಚಿವರು ಇಟ್ಟ ಇಟ್ಟಿಗೆಗಿಂತ ಇನ್ನೊಂದು ಮೆಟ್ಟಿಲು ಮೇಲೇಳವು.

ಹೀಗೆ ಶಂಕುಸ್ಥಾಪನಾ ಮಹೋತ್ಸವವನ್ನು ಕಂಡು ಮತ್ತೆ ತಲೆ ಎತ್ತಲಾಗದ ಕಟ್ಟಡಗಳ ಬಗೆಗೆ ಪತ್ರಿಕೆಗಳಲ್ಲಿ ಆಗಾಗ ಸುದ್ದಿ ಬಂದು ಕಣ್ಮರೆಯಾಗುತ್ತವೆ. ಸುದ್ದಿ ಓದಿ ಪತ್ರಿಕೆ ಮಡಿಚಿಟ್ಟ ನಂತರವೂ ಕಟ್ಟಡ ಕಾಮಗಾರಿಗಳು ಮುಂದುವರೆಯವು. ಕೇವಲ ಅಡಿಗಲ್ಲು ಮಾತ್ರ ಕಂಡು ಸೊರಗುವ ಯೋಚನೆಗಳು ಕರ್ನಾಟಕದಲ್ಲಿ ಬಹಳಷ್ಟಿದ್ದು ಅವು ಎಲ್ಲೆಲ್ಲಿವೆ, ಕಲ್ಲು ಯಾರು ಹಾಕಿದ್ದು, ಸಿಮೆಂಟಿನ ಚೀಲಗಳು ಎಲ್ಲಿ ಹೋದವು ಎಂಬಿತ್ಯಾದಿ ವಿವರಗಳನ್ನು ಆಮೂಲಾಗ್ರವಾಗಿ ಅಭ್ಯಸಿಸಲು ಸ್ನಾತಕೋತ್ತರ ವಿದ್ಯಾರ್ಥಿಗಳ ಅಗತ್ಯವಿದೆ. ಯಾರಾದರೂ ಈ ವಿಷಯವನ್ನು ಪಿಎಚ್ ಡಿ ಡೆಸರ್ಟೇಷನ್ನಿಗೆ ಆಯ್ಕೆ ಮಾಡಿಕೊಳ್ಳಬಾರದೇ?

ಶಂಕು+ಸ್ಥಾಪನೆ ಅಂದರೆ ಅಂಕೆಶಂಕೆಗಳಿಗೆ ಆಸ್ಪದ ಕೊಡುವ ಆವಾಹನಾ ಸಮೋಸವಾಗಿದೆ. ಅಡಿ +ಕಲ್ಲು =ಅಡಿಗಲ್ಲು . ಇದಂತೂ ಕಂಟ್ರಾಕ್ಟುದಾರರರಿಗೆ ಆಗಮಸಂಧಿ. ಒಳ್ಳೆ ರೆಪ್ಯೂಟೆಡ್ ವಿಶ್ವವಿದ್ಯಾಲಯದ ಸಮರ್ಥ ಮಾರ್ಗದರ್ಶಕರಲ್ಲಿ ಪಿಎಚ್ ಡಿಗೆ ನೊಂದಾಯಿಸಿಕೊಂಡು ಈ ಎರಡು ಮಂತ್ರ ಜಪಿಸುತ್ತಾ ಸ್ಟಡಿ ಮಾಡಿದರೆ ಮೂಡಿಬರಲಿರುವ ಗ್ರಂಥ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುವುದರಲ್ಲಿ ಶಂಕೆಯಿರುವುದಿಲ್ಲ. ಇದಲ್ಲದೆ, ಯಾರ್ಯಾರು, ಯಾವಾಗ, ಎಲ್ಲಿ, ಏತಕ್ಕಾಗಿ, ಯಾರಿಗೋಸ್ಕರ ಶಂಕುಸ್ಥಾಪನೆ ಮಾಡಿದರು ಎನ್ನುವ ವಿವರಗಳು ಅತಿಮುಖ್ಯವಾಗುತ್ತವೆ.

ಇಷ್ಟೂ ಅಲ್ಲದೆ, ಕೇವಲ ಇಟ್ಟಿಗೆ ಕಲ್ಲು ಇಟ್ಟು ಅಡಿಗಲ್ಲು ಹಾಕುವುದಲ್ಲದೆ, ಕೆಲವು ಗಣ್ಯರು ಸಂದರ್ಭೋಚಿತವಾಗಿ ಯೋಜನೆಯನ್ನು ನವನವೀನ ರೀತಿಯಲ್ಲಿ ಆರಂಭಿಸಿ ಹರಸುವುದುಂಟು. ಮುಖ್ಯಮಂತ್ರಿಯಾಗಿದ್ದಾಗ ಎಸ್. ಬಂಗಾರಪ್ಪನವರು ಡೊಳ್ಳು ಬಾರಿಸಿ ಒಂದು ಕ್ರೀಡಾಕೂಟ ಉದ್ಘಾಟನೆ ಮಾಡಿದ್ದರು. ಈಚೀಚೆಗಂತೂ ಅನೇಕ ಕಾರ್ಯಕ್ರಮಗಳು ಡೊಳ್ಳು, ತಮಟೆ, ತಬಲ ಬಾರಿಸುವುದರ ಮೂಲಕ ಅನಾವರಣಗೊಳ್ಳುತ್ತವೆ. ಈ ಚಾಳಿಗೆ ಅಡಿಗಲ್ಲು ಹಾಕಿದವರು ಬಂಗಾರಪ್ಪ ಎಂದು ನಿಸ್ಸಂದೇಹವಾಗಿ ದಾಖಲಿಸಬಹುದು. ದಿವಂಗತ ಮುಖ್ಯಮಂತ್ರಿ ಗುಂಡೂರಾವ್ ಕಡಿಮೆಯೇನಲ್ಲ. ಅವರು ಬಸವನಗುಡಿ ಈಜುಕೊಳಕ್ಕೆ ದಬಾರಂತ ಡೈವ್ ಹಾಕುವುದರ ಮೂಲಕ ಉದ್ಘಾಟನೆ ಮಾಡಿದ್ದರು.

ಈಚೀಚೆಗಂತೂ ಕರ್ನಾಟಕವನ್ನು ಆಳುತ್ತಿರುವ ಮುಖ್ಯಮಂತ್ರಿಗಳಿಗಾಗಲೀ, ಸಾದಾ ಮಂತ್ರಿಗಳಿಗಾಗಲೀ ಉದ್ಘಾಟನೆಗೆ, ಶಂಕುಸ್ಥಾಪನೆಗೆ ಹೊಸ ಐಡಿಯಾಗಳು ಹೊಳೆಯುವುದಿಲ್ಲ. ವಾರಾಹಿ ವಿದ್ಯುತ್ ಯೋಜನೆಯನ್ನು ಯಡಿಯೂರಪ್ಪನವರು ಮೊನ್ನೆ ಯಥಾಪ್ರಕಾರ ರಿಬ್ಬನ್ ಕಟಾವು ಮಾಡುವುದರ ಮೂಲಕ ದೇಶಕ್ಕೆ ಅರ್ಪಿಸಿದ್ದರು. ಇವತ್ತು ಶಿವಮೊಗ್ಗದಲ್ಲಿ ದಂಡಾವತಿ ನೀರಾವರಿ ಯೋಜನೆ ಉದ್ಘಾಟಿಸುವವರಿದ್ದಾರೆ. ಹೇಗೆ ಉದ್ಘಾಟನೆ ಮಾಡುತ್ತಾರೆ ಎಂಬ ಕುತೂಹಲ ನನ್ನದು. ಪುನಃ ಅವರು ಟೇಪು ಕತ್ತರಿ ಪ್ರಯೋಗ ಮಾಡಿದ್ದೇ ಆದಲ್ಲಿ ಅವರು ಮುಂದಿನ ಜನ್ಮದಲ್ಲಿ ಟೇಲರ್ ಆಗಿ ಹುಟ್ಟುವುದು ಅಥವಾ ಹುಟ್ಟಿದರೆ ಟೇಲರ್ ಆಗುವುದು ನಿಸ್ಸಂಶಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X