ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಬಂಧ : ಸಂಜೀವನ ಪಿಂಕ್ ಸ್ಲಿಪ್ ಪ್ರಸಂಗ

By Staff
|
Google Oneindia Kannada News

Radhika M.G., Bangalore
ಟೀಂ ಮ್ಯಾನೇಜರ್, ಪೀಪಲ್ಸ್ ಪರ್ಸ್‌ನ್ ಶಿವು ಅಂಥವರು ಇರೋತನಕ ನಮ್ಮ ಸಂಜೀವಂಗೆ ಯಾರು ಏನ್ ಮಾಡಕ್ಕಾಗಲ್ಲ. ಸಂಜೀವ ಪಿಂಕ್ ಸ್ಲಿಪ್ ಗೂ ಹೆದರಲ್ಲ, ಸೋಡಾ ಚೀಟಿಗೂ ಅಂಜಲ್ಲ. ಈ ಚಿಕ್ ವಯಸ್ಸಿಗೇನೇ ಅವ್ನು ವಿಷಕಂಠನ ಔಟ್ ಲುಕ್ ಬೆಳೆಸಿಕೊಂಡಿದಾನೆ.

ರಾಧಿಕಾ ಎಮ್. ಜಿ, ಬೆಂಗಳೂರು

ಸಂತೋಷಕ್ಕೆ.. ಹಾಡೂ ಸಂತೋಷಕ್ಕೆ.. ಗುನುಗುನಿಸುತ್ತಾ ತನ್ನ ಕ್ಯೂಬಿಕಲ್‌ಗೆ ಬಂದ ಸಂಜೀವ. ಈ ಹಾಡು ಈಗ್ಯಾಕೆ ಅವನ ನೆನಪಿಗೆ ಬಂತು? ಕಂಪನಿ ಕೊಡದೇ ಇದ್ದರೂ ಚಿದಂಬರಂ ತೆರಿಗೆ ಬದಲಾವಣೆಗಳಿಂದ ಸಿಕ್ಕ ಮದ್ಯಂತರ ಸಂಬಳ ಏರಿಕೆಯಿಂದಲಾ ಅಂತ ಯೋಚನೆ ಮಾಡಿದಾಗ ಸಿಕ್ತು ಲಿಂಕ್. ಆವತ್ತು ಭಾನುವಾರ ರಾತ್ರಿ ಪಲ್ಲವಿ ಝ್ಹೀ ಟೀವಿಯಲ್ಲಿ ಲಿಟ್ಲ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಸ್ಪರ್ದೆಯಿಂದ ಹೊರಬಿದ್ದ ಪುಟಾಣಿಯೊಬ್ಬನನ್ನು ಹಾಡೂ ಹಾಡೂ ಅಂತ ಬಲವಂತ ಮಾಡಿದಾಗ ಆ ಪುಟ್ಟ ಹುಡುಗ ಗದ್ಗದಿತನಾಗಿ ಕಣ್ಣು ತುಂಬಿಕೊಂಡು ಹಾಡಿದ ಹಾಡು ಅದು.

ಶಂಕರ್‌ನಾಗ್ "ಗೀತ" ಚಿತ್ರದಲ್ಲಿ ಹಾಡಿರುವ ಈ ಹಾಡು ಕೇಳಿದಾಗ ಎಲ್ಲರಿಗೂ ಕುಣಿಯುವ ಉತ್ಸಾಹ ಮೂಡಿ ಬರುತ್ತದೆ. ಆದ್ರೆ ಇಲ್ಲಿ ನೆರೆದಿದ್ದವರೆಲ್ಲರ ಕಣ್ಣುಗಳು ತೇವಗೊಂಡವು ಪುಟಾಣಿಯ ದುಃಖವನ್ನು ನೋಡಿ. ಎಲ್ಲಾ ಕಡೆ ಕಟ್‌ಥ್ರೋಟ್ ಕಾಂಪಿಟೇಷನ್. ಫನ್ ಸಿನೆಮಾದಲ್ಲಿ ಕೂತು ತಾರೆ ಜಮೀನ್ ಪರ್ ಚಿತ್ರ ನೋಡ್ತಾ ಕಣ್ತುಂಬಾ ಅತ್ಕೊಂಡು ಬಾಯ್ತುಂಬಾ ಬಿಟ್ಟಿ ಸಿಕ್ಕ ಕೋಕ್ ಬಸಿದುಕೊಂಡು ಅಮೀರ್ ಖಾನ್‌ನನ್ನು ಮತ್ತಷ್ಟು ಅಮೀರನನ್ನಾಗಿಸಿದ್ದಷ್ಟೇ ಬಂತು ಭಾಗ್ಯ. ಅಪ್ಪ ಅಮ್ಮ ಬದಲಾಗಲ್ಲ. ಇಂಥ ಸ್ಪರ್ಧೆಗಳಿಗೆ ತಮ್ಮ ಮಕ್ಕಳನ್ನು ತಳ್ತಾನೇ ಇರ್ತಾರೆ. ಆ ವಿಷಯದಲ್ಲಿ ಸಂಜೀವ ಅದೃಷ್ಟವಂತ. ಅವನಪ್ಪ ಅಮ್ಮ ಮನಸ್ಸಿಟ್ಟು ಶ್ರದ್ಧೆಯಿಂದ ಓದು ಅನ್ನುವುದನ್ನು ಬಿಟ್ಟರೆ ಮತ್ಯಾವ ಒತ್ತಡವನ್ನೂ ಅವನ ಮೇಲೆ ಹೇರಲಿಲ್ಲ.

ಔಟ್‌ಲುಕ್‌ನಲ್ಲಿ ರೆಡ್ ಅಲರ್ಟ್ ಹೊತ್ತ ಮೈಲ್ ಇತ್ತು. ಪ್ಲೀಸ್ ಮೀಟ್ ಮಿ ಇನ್ ಮೈ ಆಫೀಸ್ ಆಸ್ ಸೂನ್ ಆಸ್ ಯು ಕಂ ಅಂತ ಮ್ಯಾನೇಜರ್ ಶಿವಕುಮಾರ್ ಪಳನಿಯಪ್ಪನ್‌ನಿಂದ. ಎಲ್ರೂ ಶಿವ ಅಂತಲೇ ಕರೆಯೋದು. ಈಗಿನ್ನೂ 8.30. ತಿಂಡಿ ತಿಂದ್ಕೊಂಡು ಆಮೇಲೆ ಹೋದರಾಯ್ತು ಅಂದ್ಕೊಂಡ್ರೂ ಆಮೇಲೆ ಕೆಫಟೀರಿಯದಲ್ಲಿ ಇರೋದ್ರಲ್ಲಿ ಸ್ವಲ್ಪ ಎಡಿಬಲ್ ಆಗಿರೋ ಇಡ್ಲಿ ತಿನ್ತಾ ಕೂತರೆ ಅಲ್ಲಿಗೇ ಫೊನ್ ಬರುತ್ತೆ ಶಿವಂದು. ಮೈಲ್ ನೋಡ್ಲಿಲ್ವಾ ಅಂತ. ಇವನ್ದು ಸಹವಾಸ ಕಷ್ಟ. ಬೆಳಿಗ್ಗೆ 5 ಗಂಟೆಗೆ ತಯಾರಾಗಿದ್ದ ಇಡ್ಳಿ 8.30ಕ್ಕೆ ತಿನ್ನೋಷ್ಟೊತ್ತಿಗೆ ಮಲ್ಲಿಗೆ ಇಡ್ಲಿ ಅಂತ ನಾಮಕರಣ ಹೊಂದಿದ್ರೂ ಗೋರ್ಕಲ್ಲಿಗೆ ಸಮನಾಗಿರುತ್ತೆ. ಶಿವನ ಫೋನ್ ಬಂತು ಅಂತ ಇತ್ತ ಉಗುಳಲೂ ಆಗದೆ ನುಂಗಲೂ ಆಗದೆ ಇರುವ ಪರಿಸ್ಠಿತಿ ತಂದುಕೊಳ್ಳೋದಕ್ಕಿಂತ ಹೋಗಿ ಏನು ವಿಷಯಾ ಅಂತ ನೋಡೋಣ ಅಂದ್ಕೊಂಡ ಸಂಜೀವ.

ಅಲ್ದೇ ರೆಡ್ ಅಲರ್ಟ್ ಬೇರೆ ಇದೆ ಏನು ವಿಷಯಾನೋ ಅಂತ ಡೋರ್ ನಾಕ್ ಮಾಡಿ ಒಳಗೆ ಹೋದ. ಯಾವ್ದೋ ಈ ಮೆಯ್ಲ್ ನೋಡ್ತಾ ಇದ್ದವ್ನು ಹೈ ಸಂಜೀವ ಪ್ಲೀಸ್ ಕಂ ಅಂತ ಕೂತ್ಕೊಳ್ಳೋಕೆ ಹೇಳಿ ತನ್ನ ಔಟ್‌ಲುಕ್ ಮಿನಿಮೈಸ್ ಮಾಡಿ ವಾಟ್ಸ್ ಅಪ್ ಮ್ಯಾನ್ ಹೌ ಈಸ್ ಯುವರ್ ಫ್ರೆಂಡ್ ಜೀವನಿ ಅಂದ. ವ್ಯಾಲೆಂಟೈನ್ಸ್ ಡೇ ದಿವಸ ಲೀವಿಂಗ್ ಅರ್ಲಿ ಮೆಯ್ಲ್ ಕಳ್ಸಿದ್ದಕ್ಕಾ ಈ ಪ್ರಶ್ನೆ ಅನ್ನಿಸಿದ್ರೂ ಯಾಕೋ ಈ ಪ್ರಶ್ನೆ ಬೆಳಿಗ್ಗೆ ಬೆಳಿಗ್ಗೆ ಕೇಳಿದ್ದು ಸ್ವಲ್ಪ ಅಸಂಬದ್ಧ ಅನ್ನಿಸ್ತು ಸಂಜೀವಂಗೆ. ಟೀಮ್ ಔಟಿಂಗ್‌ಗೆ ಅಂತ ಹೊರಗೆ ಹೋದಾಗ ಅಥವಾ ಸಿಗರೇಟ್ ಸೇದುವಾಗ ಕಂಪನಿಗೆ ಅಂತ ಟೀಮ್ ಹುಡ್ಗರನ್ನ ಹೊರಗೆ ಕರ್ಕೊಂಡು ಹೋಗಿ ಅವರ ಪರ್ಸನಲ್ ವಿಷಯಾನ ತಿಳ್ಕೊಂಡು ಹಾಗೇ ಜ್ಞಾಪಕ ಇಟ್ಕೊಳ್ಳೋದು ಸಮಯಕ್ಕೆ ತಕ್ಕ ಹಾಗೆ ಉಪಯೋಗಿಸಿಕೊಳ್ಳೋದು ಶಿವನಿಗೆ ಕರಗತ. ಪೀಪಲ್ಸ್ ಮ್ಯಾನ್ ಅಂದ್ರೆ ನಿಜಕ್ಕೂ ಇವನೇ.

ಮೊನ್ನೆ ವ್ಯಾಲೆಂಟೈನ್ಸ್ ಡೇ ದಿವಸ ಮದ್ಯಾಹ್ನ ಅಜಯ್ ತನ್ನ ವುಡ್‌ಬಿ ಜೊತೆ APACHE ಏರಿಕೊಂಡು ಹೋಗ್ತಾ ಇರುವಾಗ ಹೆಡ್ ಆನ್ ಕೊಲಿಶನ್ ತಪ್ಪಿಸಿಕೊಂಡ್ರೂ ಹುಡುಗಿಯ ಕೈಬೆರಳ ಮೂಳೆ ಮುರಿದು ಏನು ಮಾಡಬೇಕು ಅಂತ ತೋಚದೆ ಅಳುತ್ತಾ ಶಿವನಿಗೆ ಫೋನ್ ಮಾಡ್ದಾಗ ಡೋಂಟ್ ವರಿ ಮ್ಯಾನ್ ಐಯಾಮ್ ದೇರ್ ಅಂತ ಹೇಳಿ ಪೋಸ್ಟ್ ಲಂಚ್ ಮೀಟಿಂಗ್ ರದ್ದು ಮಾಡಿ ಆಕ್ಸಿಡೆಂಟ್ ಆದ ಸ್ಥಳಕ್ಕೆ ಹೋಗಿ ಕಾರಲ್ಲಿ ಇಬ್ರನ್ನೂ ಕರ್ಕೊಂಡು ಹೋಗಿ ಹುಡ್ಗೀಗೆ ಚಿಕಿತ್ಸೆ ಕೊಡಿಸಿ ಮತ್ತೆ ಮನೆವರೆಗೂ ಕರ್ಕೊಂಡು ಹೋಗಿ ಬಿಟ್ಟಿದ್ದ.

ಒರಿಸ್ಸಾದಿಂದ ವಲಸೆ ಬಂದಿರುವ ಬಿಸ್ವಜಿತ್ ಬರೀ ನಾನ್‌ವೆಜ್ ತಿಂದೂ ತಿಂದೂ ಪೈಲ್ಸ್ ತೊಂದರೆ ಬಂದು ಆಫೀಸಿಗೆ 3 ದಿವ್ಸ ಬರದೇ 4ನೇ ದಿವ್ಸ ಸರ್ಜರಿ ಹೇಳಿದ್ದಾರೆ ಡಾಕ್ಟರ್ ಅಂತ ಫೋನ್ ಮಾಡ್ದಾಗ ಅದೆಲ್ಲಾ ಏನೂ ಬೇಡ ಮಣಿಪಾಲ್ ಆಸ್ಪತ್ರೇಲಿ ಡಯೆಟಿಶಿಯನ್ ಆಗಿರೋ ತನ್ನ ದೊಡ್ಡಮ್ಮನ ಮಗನನ್ನು ಭೇಟಿ ಮಾಡು ಅಂತ ಹೇಳಿದ. ನಾರು, ಹಣ್ಣು, ತರಕಾರಿಗಳ ಸಸ್ಯಾಹಾರದ ಡಯೆಟ್ ಪರಿಣಾಮ ಮತ್ತೆ ಮೂರು ದಿವ್ಸ ಬಿಟ್ಟ್ಕೊಂಡು ಆರಾಮಾಗಿ ಆಫೀಸಿಗೆ ಬಂದ ಬಿಸ್ವಜಿತ್ ಮುಂಚೆ ಹತ್ತು ಗಂಟೆ ಕೆಲ್ಸ ಮಾಡ್ತಿದ್ದವ್ನು ಈಗ ಸಮಯ ಅಂದ್ರೆ 12-14 ಗಂಟೆ ಕೆಲ್ಸಕ್ಕೂ ರೆಡಿ!.

ಹೇಗೆ ಮಾತು ಮುಂದುವರೆಸಬೇಕು ಅಂತ ಗೊಂದಲದಲ್ಲಿದ್ದವನ ಹಾಗೆ ಶಿವ ತನ್ನ ಟೇಬಲ್ ಮೇಲೆ ಸರಿಯಾಗೇ ಇದ್ದ ಪೇಪರ್, ಪುಸ್ತಕಗಳನ್ನು ಮತ್ತೆ ಜೋಡಿಸಿ ಸಂಜೀವನತ್ತ ತಿರುಗಿ ಅಮೇರಿಕಾದಲ್ಲಿ ಏನು ನಡೀತಾ ಇದೆ ಗೊತ್ತಾ ಅಂದ. ಓ ಗೊತ್ತು ಹಿಲರಿ, ಒಬಾಮ ನಮ್ಮ ಯೆಡ್ಯೂರಪ್ಪ, ಕುಮಾರಣ್ಣನಂಗೇ ಓಪನ್ ಆಗಿ ಜಗ್ಳಾ ಆಡ್ತಾ ಇದ್ದಾರೆ ಅಂತ ಅನ್ನಬೇಕು ಅಂದ್ಕೊಂಡವನು ಕಷ್ಟ ಪಟ್ಟು ತಡ್ಕೊಂಡ ಯಾಕೋ ಮ್ಯಾಟರ್ ಸೀರಿಯಸ್ ಆಗಿದೆ ಅಂತ ಅನ್ಸಿ. ಐ ಡೋಂಟ್ ಲೈಕ್ ಟು ಬೀಟ್ ಅರೌಂಡ್ ದ ಬುಶ್. ನೆನ್ನೆ ರಾತ್ರಿ ಮೀಟಿಂಗ್ ಇತ್ತು ವೀಪಿ ಜೊತೆಗೆ. ಆರ್ಗನೈಜೇಷನ್ ರಿಸ್ಟ್ರಕ್ಚರ್ ಆಗ್ತಾ ಇದೆ ಕೆಲವು ಕಠಿಣವಾದ ನಿರ್ಧಾರಗಳನ್ನ ತೊಗೋಬೇಕಾಯ್ತು ಅಂದ ಶಿವ.

ತಂಪಾದ ಏ.ಸಿ ರೂಮಲ್ಲೂ ದೇಹದ ಸುತ್ತ ಬಿಸಿಯಾದ ಗಾಳಿ ಆವರಿಸಿದ ಹಾಗಾಯ್ತು ಸಂಜೀವಂಗೆ. ಎರ್ಡು ದಿವ್ಸದಿಂದ್ಲೂ ಕಣ್ಣು ಅದುರ್ತಾ ಇತ್ತು. ಎಡಗಣ್ಣೋ ಬಲಗಣ್ಣೋ ಜ್ನಾಪಕಕ್ಕೆ ಬರ್ಲಿಲ್ಲ. ಹುಡ್ಗರಿಗೆ ಬಲಗಣ್ಣು ಅದುರಿದ್ರೆ ಒಳ್ಳೇದಂತೆ ಅಥವಾ ಹುಡ್ಗೀರ್ಗಾ? ಯಾಕೋ ತಲೆ ಖಾಲಿ ಖಾಲಿ ಬುದ್ಧಿ ಓಡ್ತಾ ಇಲ್ಲ ಅನ್ನಿಸ್ತು. ಶಿವ ಯಾವ ವಿಷಯ ಹೇಳಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕ್ತಾ ಇದ್ದಾನೆ ಅಂತ ಸುಳಿವು ಸಿಕ್ಕಿತು ಸಂಜೀವಂಗೆ.

ವಾರದಿಂದ ಪತ್ರಿಕೆಗಳಲ್ಲಿ ಅದೇ ಸುದ್ದಿ. ಕೆಫಿಟೇರಿಯದಲ್ಲೂ ಗುಸುಗುಸು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೌಕರರ ಉಚ್ಛ್ಚಾಟನೆ. ತಾನು ಕೂತಿರೋ ಸ್ವಿವೆಲ್ಲಿಂಗ್ ಚೇರ್ ನಿಧಾನಕ್ಕೆ ಕುಸಿಯುತ್ತಾ ಇದೆಯೇನೋ ಅನ್ನಿಸಿ ಸಾಧ್ಯವಾದಷ್ಟೂ ನೇರವಾಗಿ ಕೂತ್ಕೊಳ್ಳೋಕೆ ಪ್ರಯತ್ನ ಮಾಡಿದ. ಆಕಸ್ಮಾತ್ ಚೇರ್ ನಿಜಕ್ಕೂ ಕುಸಿದು ತಾನು ಕೂತಿರೋ ನೆಲವನ್ನು ತೂರಿಕೊಂಡು ಬೇಸ್ಮೆಂಟ್ನಲ್ಲಿ ಧೊಪ್ ಅಂತ ಬಿದ್ದು ಸೆಕ್ಯೂರಿಟಿಯವರೆಲ್ಲ ಓಡಿ ಬಂದು . . ವಿಲಕ್ಷಣವಾಗಿ ಓಡ್ತಾ ಇತ್ತು ಬುದ್ದಿ ಯಾಕೋ . ಐ ಆಮ್ ಹೆಲ್ಪ್‌ಲೆಸ್ಸ್ ಸಂಜೀವ. ಸಾಧ್ಯವಾದಷ್ಟೂ ಹೊಸದಾಗಿ ಸೇರಿರುವವರನ್ನು ಕೆಲಸದಿಂದ ತೆಗೀಬೇಕು ಅಂತ ನಿರ್ಧಾರ ತೊಗೊಂಡಿದ್ದಾನೆ ವೀಪಿ. ನನ್ನ ಟೀಮ್‌ನಿಂದ ನೀನು ಹೊರಗೆ ಹೋಗ್ಬೇಕಾಗುತ್ತೆ LIFO (ಲಾಸ್ಟ್ ಇನ್ ಫರ್ಸ್ಟ್ ಔಟ್) ಗೊತ್ತಲ್ವಾ ಅಂತ ಪೇಲವ ನಗೆ ನಕ್ಕ.

ಈ ಅಲ್ಗಾರಿದಮ್‌ಗಳನ್ನು ಅರೆದು ಕುಡಿದದ್ದಕ್ಕೇ ಅಲ್ವಾ ನಾನಿವತ್ತು ಈ ಕಂಪನಿಯಲ್ಲಿ ಕೆಲ್ಸ ಗಿಟ್ಟಿಸ್ಕೊಂಡಿದ್ದು. ಆರ್. ಇ. ಸಿ ಯಲ್ಲಿ ಕ್ಯಾಂಪಸ್ ರಿಕ್ರೂಟ್ಮೆಂಟ್ ಡ್ರೈವ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವರ್ಷಕ್ಕೆ ಹನ್ನೆರಡು ಲಕ್ಷ ಸಂಬಳದ ಕೆಲಸ ಸಿಕ್ಕಾಗ ದೇವರು ಇದಕ್ಕಿಂತ ಹೆಚ್ಚಿನದೇನನ್ನೂ ನನಗೆ ಕೊಡಲು ಸಾಧ್ಯಾ ಇಲ್ಲ ಅನ್ಸಿತ್ತು ಸಂಜೀವಂಗೆ. ಕೆಲ್ಸಕ್ಕೆ ಸೇರಿ ಒಂದ್ವರ್ಷ ಆಗ್ತಾ ಬಂತು. ಒಳ್ಳೇ ಹೆಸರು ತೊಗೊಂಡಿದ್ದ. ಬೆಸ್ಟ್ ನ್ಯೂ ಕಮರ್ ಅವಾರ್ಡ್ ಎಂದು ಇದೇ ವೀಪೀ ಎರ್ಡು ತಿಂಗ್ಳ ಹಿಂದೆ ಬೆಂಗ್ಳೂರಿಗೆ ಬಂದಾಗ ಗೋಲ್ಡನ್ ಪಾಮ್‌ನ್‌ಲ್ಲಿ ಆದ ಪಾರ್ಟಿಯಲ್ಲಿ ಇಪ್ಪತ್ತೈದು ಸಾವಿರ ರುಪಾಯಿ ಚೆಕ್ ಕೊಟ್ಟಿದ್ದ. ಇನ್ನೂ ಅದನ್ನ ಖರ್ಚು ಮಾಡಿಯೇ ಆಗಿಲ್ಲ ಆಗಲೇ ಶಾಪ್ ಕ್ಲೋಸ್ ಮಾಡಿಕೊಂಡು ಮನೆಗೆ ಹೋಗು ಅಂತಾ ಇದ್ದಾನೆ!

ಇಷ್ಟು ಬೇಗ ನಾನು, ನನ್ನ ಪ್ರತಿಭೆ ಈ ಕಂಪನಿಗೆ ಬೇಡ್ವಾಯ್ತಾ? ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸ್ಬೇಕು ಅಂತ ಗೊತ್ತಾಗ್ದೇ ಸುಮ್ನೆ ಹಾಗೇ ಕೂತ ಸಂಜೀವ. ವೆನಿಲ್ಲಾ ಬೆಳೆ ಹಾಳಾದ್ರೂ ಸಾಲ ಹುಲುಸಾಗಿ ಬೆಳೆದು ಅಡಿಕೆ ಬೆಳೆದ್ರೂ ತೀರದೆ ಈಗ ತಮ್ಮೆಲ್ಲ ಕಷ್ಟಗಳನ್ನು ಪಾರು ಮಾಡಲೆಂದೇ ದೇವರು ಇಷ್ಟು ಒಳ್ಳೇ ಕೆಲ್ಸ ಮಗನಿಗೆ ಕೊಟ್ಟಿದ್ದಾನೆ ಅಂತ ಧನ್ಯರಾದ ತಂದೆ, ಅಂತೂ ದೇವ್ರು ಕಣ್ಣು ಬಿಟ್ಟ, ಒಳ್ಳೇ ಮಗನ್ನ ಹೆತ್ತೆ ಅಂತ ಹೆಮ್ಮೆ ಪಡುವ ಅಮ್ಮ, ತಮ್ಮನ ಉತ್ತಮ ಹುದ್ದೆ ತನ್ನನ್ನು ಒಳ್ಳೇ ಮನೆಗೆ ಸೇರಿಸಲು ಪರವಾನಗಿ ಎಂಬ ಆಶಾ ಭಾವ ಹೊತ್ತ ಅಕ್ಕ ಎಲ್ಲರ ಮುಖಗಳೂ ಮನಸ್ಸಲ್ಲಿ ಹಾದು ಹೋದವು. ಕತ್ತಿನ ಸುತ್ತ ಕಂಪನಿಯ ಗುರುತಿನ ಪಟ್ಟಿಯಿಲ್ಲದೆ ಇದ್ರೆ ಚಿದಂಬರಂ ಕೊಟ್ಟ ಟ್ಯಾಕ್ಸ್ ರಿಲೀಫ್, ಕುಸಿಯುತ್ತಿರುವ ಷೇರು ಮಾರುಕಟ್ಟೆ, ತಾನು ಧರಿಸಿರುವ ಅಡಿಡಾಸ್ ಷೂ, ವೆಸ್ಟ್‌ಸೈಡ್ ಬಟ್ಟೆ, ದುಬಾರಿ ವಾಚು ಇವೆಲ್ಲಕ್ಕೂ ತಾನು ಅಪರಿಚಿತ ಅನ್ನಿಸತೊಡಗಿತು ಸಂಜೀವಂಗೆ. ತನ್ನೊಡನೆ ಅವುಗಳ ಸಂಬಂಧ ಕಂಪನಿ ಕೊಡುವ ದುಡ್ಡಿದ್ರೆ ಮಾತ್ರ ಅನ್ನೋ ಸತ್ಯ ನಿಧಾನಕ್ಕೆ ಗೋಚರವಾಯ್ತು. ಹೇ ಸಂಜೀವ್ ವಾಟ್ ಹ್ಯಾಪ್ಪನ್ಡ್ ಅಂತ ಶಿವ ಎಚ್ಚರಿಸಿದಾಗಲೇ ವಾಸ್ತವಕ್ಕೆ ಬಂದಿದ್ದು. ಇಟ್ ಈಸ್ ನಾಟ್ ದ ಎಂಡ್ ಆಫ್ ದ ವರ್ಲ್ಡ್ ಮ್ಯಾನ್ ಟೇಕ್ ಹಾರ್ಟ್ ಅಂದ ಶಿವ. ಹೃದಯ ಬಡಿತ ಹಿಡಿತಕ್ಕೆ ಸಿಗಲ್ವೇನೋ ಅನ್ನೋ ಹಾಗೆ ಜೋರಾಗಿ ಬಡ್ಕೋತಾ ಇತ್ತು.

ನಂಗೊತ್ತು ಇದನ್ನ ಫೇಸ್ ಮಾಡಕ್ಕೆ ಕಷ್ಟ ಅಂತ ಆದ್ರೆ ದೇರ್ ಈಸ್ ಆಲ್ವೇಸ್ ಎ ವೇ. ನನ್ನ ಕ್ಲಾಸ್‌ಮೇಟ್ ಪ್ರಮೋದ್ ಲೀಡಿಂಗ್ ಟೆಲಿಕಾಮ್ ಕಂಪನಿಯಲ್ಲಿ ಕಂಟ್ರಿ ಹೆಡ್ ಆಗಿದ್ದಾನೆ. ನಿನ್ನ ರೆಸ್ಯುಮೆ ನಂಗೆ ಕಳ್ಸು. ಇಲ್ಲಿನ ಫಾರ್ಮಾಲಿಟೀಸ್ ಮುಗಿಯೋ ಹೊತ್ತಿಗೆ ಅಲ್ಲಿಂದ ಆಫರ್ ಸಿಗುತ್ತೆ ಅಂದ. ಒಳ್ಳೇ ಹೈಕ್ ಕೂಡಾ ಸಿಗುತ್ತೆ ಐ ನೋ ಯೂ ಆರ್ ಕೇಪಬಲ್. ಇಲ್ಲಿ ಯಾರಿಗೂ ಈ ವಿಷ್ಯ ಗೊತ್ತಾಗೋದು ಬೇಡ. ಲೆಟ್ ಅಸ್ ಪ್ಲಾನ್ ಫಾರ್ ಎ ಕ್ಲೀನ್ ಎಕ್ಸಿಟ್ ಅಂದ ಶಿವ. ಯಾಕೋ ಟೀವಿ ನೈನ್ ಕಾರ್ಯಕ್ರಮದ ಟೈಟಲ್ ಹೀಗೂ ಉಂಟೆ ನೆನ್ಪಾಯ್ತು! ತಾನು ಮಾಡಿದ್ದ ಫಿಕ್ಸ್‌ನಿಂದಾಗಿ ಸಿಸ್ಟಮ್ ಕ್ರ್ಯಾಶ್ ಆಗಿದೆ ಅಂತ ಎಸ್ಕಲೇಶನ್ ಮಾಡಿದ್ದ ಕಸ್ಟಮರ್ ಆಮೇಲೆ ಇಲ್ಲ ಅದು ತನ್ನ ಎನ್ವಿರಾನ್ಮೆಂಟ್‌ನಿಂದಾ ಆಗಿದ್ದು ನಿಂದಲ್ಲ ತಪ್ಪು ಅಂತ ಮೆಯ್ಲ್ ಕಳ್ಸಿದಾಗ ಆದಷ್ಟೇ ಖುಶಿ ಆಯ್ತು! ಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಗುನುಗುನಿಸುತ್ತಾ ನಿರಾಳವಾಗಿ ಶಿವನ ರೂಮಿಂದ ಹೊರ ಬಂದ ಸಂಜೀವ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X