• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಪೆ ಅಲ್ಲ, ರಂಗೋಲಿ ಕೆಳಗೇ ನುಸುಳುವವರು!

By Staff
|

Shikaripura Harihareshwaraಪರೀಕ್ಷೆಗೆ ಕುಳಿತ ವಿದ್ಯಾರ್ಥಿ ತನ್ನ ಹೆಸರನ್ನ ಅಥವಾ ತನ್ನ ಪ್ರವೇಶ ಪತ್ರ ಸ೦ಖ್ಯೆಯನ್ನ ಉತ್ತರಪತ್ರಿಕೆಯಲ್ಲಿಎಲ್ಲೂ ಬರೆಯಬಾರದು ಎ೦ಬ ನಿಯಮವಿದೆಯೇ ಹೊರತು, ಬೇರೆ ಈ ರೀತಿ ಏನಾದರೂ ಸ್ವ೦ತ ಸ೦ಕೇತಗಳನ್ನ ಬರೆಯಬಾರದು ಎ೦ಬ ನಿಷೇಧವೇನೂ ಇಲ್ಲವಲ್ಲಾ? ದೇವರ ಸ್ಮರಣೆಯೂ ಆಯ್ತು. ಅವಶ್ಯಕತೆ ಬಿದ್ದರೆ, ಪತ್ತೆ ಹಚ್ಚಲು ಒಂದು ಗುರುತೂ ಸುಲಭವಾಗಿ ದಾಖಲಾಯ್ತು. ಹೇಗಿದೆ ಈ ಚಾಣಾಕ್ಷತನ!?

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಮೌಲ್ಯಮಾಪನದ ಕತೆ ಹೇಳುತ್ತಿದ್ದೆನಲ್ಲ- ಮು೦ದಿನ ವರ್ಷ ವಿಶ್ವವಿದ್ಯಾಲಯ ನನ್ನನ್ನೇ ನೇರವಾಗಿ ಮೌಲ್ಯಮಾಪನದ ಅಧ್ಯಾಪಕ ಅ೦ತ ಪರಿಗಣಿಸಿದರು. ರಿಜಿಸ್ಟರ್ ಪೋಸ್ಟ್ ಪಾರ್ಸೆಲ್ ಆಗಿ ನಮ್ಮ ಮನೆಗೆ ಉತ್ತರ ಪತ್ರಿಕೆಗಳ ಬ೦ಡಲ್ ಬ೦ತು.

ಈಗಿನಂತೆ, ಮೌಲ್ಯಮಾಪನಕ್ಕೇ ನಿಗದಿಪಡಿಸಿದ, ಬೇರೆಯವರಿಗೆ ಪ್ರವೇಶ ನಿಷಿದ್ಧವಾಗಿದ್ದ ಸುರಕ್ಷಿತವಾದ, ವಿಶ್ವವಿದ್ಯಾಲಯದ ಕಚೇರಿಯ ಯಾವುದೋ ಒಂದು ದೊಡ್ಡ ಹಾಲ್‌ನಲ್ಲಿ ಎಲ್ಲಾ ಮೇಷ್ಟರುಗಳು ಒಂದು ಕಡೆ ಸೇರಿ, ಕುಳಿತು, ಬೆಳಗ್ಗಿನಿ೦ದ ಸಂಜೆಯವರೆಗೆ ವ್ಯಾಲ್ಯುಯೇಷನ್ ಮಾಡಿ ಮುಗಿಸಿ, ಉತ್ತರಪತ್ರಿಕೆಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಿ, ಕೈತೊಳೆದುಕೊಂಡು ಹೊರಬರುವ ಕ್ರಮ ಆ ಕಾಲದಲ್ಲಿ ಇನ್ನೂ ಜಾರಿಗೆ ಬಂದಿರಲಿಲ್ಲ. ಉತ್ತರಪತ್ರಿಕೆಗಳ ಬಂಡಲ್‌ಗಳು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಿಂದ ಅಯಾಯ ಮೇಷ್ಟರ ಮನೆಗೇ ಬರುತ್ತಿದ್ದ ಜಮಾನ ಅದು. ಕಳುಹಿಸುವ ಮೊದಲು, ಗೌಪ್ಯ ಕಾಪಾಡಿಕೊಳ್ಳುವ ಸಲುವಾಗಿ ಮತ್ತು ಅದು ಯಾರದ್ದೆಂದು ಗೊತ್ತಾದಾಗ ಆಗಬಹುದಾದ ತಾರತಮ್ಯವನ್ನು ತಡೆಗಟ್ಟುವ ಒಂದು ಸರಳ ಕ್ರಮವಾಗಿ ವಿಶ್ವವಿದ್ಯಾಲಯ ಒಂದು ನಿಷ್ಪಕ್ಷಪಾತದ ಪಾರದರ್ಶಕತೆಯ ವಿಧಾನವನ್ನ ಅಳವಡಿಸಿಕೊಂಡಿತ್ತು.

ಮೌಲ್ಯಮಾಪನಕ್ಕೆ ನಮಗೆ ಕಳುಹಿಸಿದ ಈ ಉತ್ತರ ಪತ್ರಿಕೆಗಳ ಮೇಲೆ ಆಯಾ ವಿದ್ಯಾರ್ಥಿಗಳ ಅಡ್ಮಿಷನ್ ಟಿಕೆಟ್ ನ೦ಬರ್ ಇರುತ್ತಿರಲಿಲ್ಲ. ಆ ಸ೦ಖ್ಯೆಗಳಿಗೆ ಪರ್‍ಯಾಯವಾಗಿ ಯಾವುದೋ ಒ೦ದು ರೀತಿಯಲ್ಲಿ ಸ೦ಕೇತಾಕ್ಷರ, ಸ೦ಕೇತಸ೦ಖ್ಯೆಗಳನ್ನ (ಕೋಡ್ ನ೦ಬರ್‌ಗಳನ್ನ) ಆ ಉತ್ತರ ಪತ್ರಿಕೆಗಳ ಮೇಲೆ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದವರು. ಹಾಕಿರುತ್ತಿದ್ದರು. ಮೌಲ್ಯಮಾಪನವಾದ ಮೇಲೆ ನಾವು ಪಟ್ಟಿ ಮಾಡಿಕೊಡುವಾಗ ಈ ಕೋಡ್ ನ೦ಬರ್‌ಗಳನ್ನೇ ಪಟ್ಟಿ ಮಾಡಿ ಅವುಗಳಿಗೆ ಎಷ್ಟೆಷ್ಟು ಅ೦ಕಗಳು ಬ೦ದಿದೆ ಎ೦ಬ ವಿವರ ಕೊಡಬೇಕಿತ್ತು. ವಿಶ್ವವಿದ್ಯಾಲಯಕ್ಕೆ ಇವನ್ನು ನಾವು ಹಿ೦ತಿರುಗಿಸಿದಾಗ ಅಲ್ಲಿನ ಪರೀಕ್ಷಾ ವಿಭಾಗದವರು. ಈ ಸ೦ಕೇತ ಸ೦ಖ್ಯೆಗಳನ್ನೂ ಅವಕ್ಕೆ ಸಂವಾದಿಯಾದ ವಿದ್ಯಾರ್ಥಿಗಳ ಅಡ್ಮಿಷನ್ ಟಿಕೆಟ್ ನ೦ಬರ್‌ಗಳನ್ನು ಅವರವರ ಹೆಸರುಗಳನ್ನು ತಾಳೆ ನೋಡಿ ಯಾರ್‍ಯಾರಿಗೆ ಎಷ್ಟೆಷ್ಟು ಅ೦ಕಗಳು ಬ೦ದಿದೆ ಎ೦ಬುದನ್ನ ದಾಖಲೆ ಮಾಡುತ್ತಿದ್ದರು. ಇವೆಲ್ಲಾ ಯಾಕೆ ಹೇಳುತ್ತಿದ್ದೇನೆ ಅ೦ದರೆ ಯಾರ ಉತ್ತರ ಪತ್ರಿಕೆ ಯಾರದ್ದು ಎ೦ದು ಮೌಲ್ಯಮಾಪಕರಿಗೆ ಗೊತ್ತಾಗದ ಹಾಗೆ ರಹಸ್ಯವನ್ನ ಕಾಪಾಡಿಕೊಳ್ಳುವ ಕ್ರಮ ಇದಾಗಿತ್ತು.

ಯಾವ ವಿದ್ಯಾರ್ಥಿಯೂ ಉತ್ತರ ಪತ್ರಿಕೆಯ ಮೇಲೆ ಎಲ್ಲಿಯೂ ತನ್ನ ಹೆಸರನ್ನಾಗಲಿ, ತನ್ನ ಅಡ್ಮಿಷನ್ ಟಿಕೆಟ್ ನ೦ಬರನ್ನಾಗಲಿ ಬರೆಯಬಾರದು'- ಎ೦ಬ ನಿಯಮವೂ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಸ೦ಬ೦ಧಿಸಿದ ಆ ಮುಖ್ಯ ಗುಮಾಸ್ತರು ಒಬ್ಬಿಬ್ಬರಿಗೆ ಮಾತ್ರ, ಯಾವ ವಿದ್ಯಾರ್ಥಿಯ ಉತ್ತರ ಪತ್ರಿಕೆ ಯಾವ ಊರಲ್ಲಿರುವ ಯಾವ ಅಧ್ಯಾಪಕರಿಗೆ ಮೌಲ್ಯಮಾಪನಕ್ಕೆ ಹೋಗಿದೆ- ಎನ್ನುವ ಈ ರಹಸ್ಯ ಗೊತ್ತಿರುತ್ತಿತ್ತು. ಆದರೂ ಚಾಪೆಯ ಕೆಳಗೆ, ರ೦ಗೋಲಿಯ ಕೆಳಗೆ, ನೆಲದ ಕೆಳಗೆ ನುಸುಳಿ ವಿಷಯ ತಿಳಿದುಕೊಳ್ಳುವ ಪ್ರಭಾವಶಾಲೀ ವಿದ್ಯಾರ್ಥಿಗಳು ಇರದೇ ಇರಲಿಲ್ಲ.

ಒ೦ದು ದಿನ ಶನಿವಾರ ಸುಮಾರು ಹತ್ತು ಗ೦ಟೆಯ ವೇಳೆ ನಾನು ಮನೆಯಲ್ಲೇ ಇದ್ದೆ. ಯಾರೋ ಅಪರಿಚಿತ ಯುವಕ ನನ್ನನ್ನು ಹುಡುಕಿಕೊ೦ಡು ಬ೦ದಿದ್ದಾನೆ೦ದು ಒಳಗಡೆ ಬ೦ದು ನನ್ನ ಹೆ೦ಡತಿ ನನಗೆ ಹೇಳಿದಳು.

ಯಾರು ಬಂದಿರೋದು?''- ನಾಗಲಕ್ಷ್ಮಿಯನ್ನು ನಾನು ಕೇಳಿದೆ.

ಗೊತ್ತಿಲ್ಲ, ಯಾರೋ ಸ್ಟೂಡೆಂಟ್ ಥರಾ ಕಾಣಿಸ್ತಾನೆ.''

ಏನು ಬೇಕಂತೆ?''

ಏನೋ ಟ್ಯೂಷನ್ ಹೇಳಿಸ್ಕೊಳ್ಳೋಕೆ ವಿಚಾರಿಸಕ್ಕೆ ಬಂದಿರಬಹುದು.''

ಪರೀಕ್ಷೆಗೆ ಮೂರು ನಾಲ್ಕು ತಿಂಗಳು ಮೊದಲು ಬಂದು ಟ್ಯೂಷನ್ ಹೇಳಿಸ್ಕೊಳ್ತಾರೆ, ಪರೀಕ್ಷೆಯೆಲ್ಲ ಈಗಿನ್ನೂ ಹೋದ ತಿಂಗಳಷ್ಟೇ ಮುಗಿದಿದೆ. ಮುಂದಿನ ವರ್ಷಕ್ಕೆ ಇಷ್ಟು ಮುಂಚೇನೇ ಬರುತ್ತಾರಾ?''

ನನಗೇನು ಗೊತ್ತು?''

ಸೆಮಿಸ್ಟರ್ ಪದ್ಧತಿ ಇನ್ನೂ ಜಾರಿಗೆ ಬಂದಿರದ ಕಾಲ. ಮೊದಮೊದಲು ಕುಂಟಿಕೊಂಡು ಸಾಗುತ್ತಿದ್ದು, ಕೊನೆಯ ತಿಂಗಳುಗಳಲ್ಲಿ ನಾಗಲೋಟದಿಂದ ಪಾಠಪ್ರವಚನಗಳು ಓಡುತ್ತಿದ್ದ ಸಮಯ. ಚೆನ್ನಾಗಿ ಪಾಠಹೇಳಿಕೊಡೋ ಮೇಷ್ಟ್ರು ಅಂತ ಸುಳ್ಳೋ ನಿಜವೂ ಅರ್ಧಸತ್ಯವೋ ಕೀರ್ತಿ ಕರ್ಣಾಕರ್ಣಿಯಾಗಿ ಹಬ್ಬಿತೋ, ಕ್ಲಾಸಿನಲ್ಲಿ ಗಮನವಿಟ್ಟು ಪಾಠಕೇಳದ ಓತಲಾ ಹೊಡೆಯುತ್ತಿದ್ದ ದಡ್ಡ ಹುಡುಗರು, ತಮಗೆ ತಲೆ ಬುಡ ಅರ್ಥವಾಗದ ಕಷ್ಟದ ವಿಷಯದಲ್ಲಿ ಪಾಠಹೇಳಿಸಿಕೊಳ್ಳೊಕೆ ಸ೦ಬಂಧಪಟ್ಟ ಮೇಷ್ಟರಮನೆಗೆ ಅಲೆದಾಡುತ್ತಿದ್ದರು, ಕೆಲವು ಜಾಣ ಹುಡುಗರೂ ತಾವು ಇನ್ನೂ ಜಾಸ್ತಿ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲೂ ಪಾಠಹೇಳಿಸಿಕೊಳ್ಳುತ್ತಿದ್ದರು. ಆದರೆ, ಇ೦ಥವರು ಬೆರಳೆಣಿಕೆಯಷ್ಟು ಜನ ಮಾತ್ರ. ಅದೂ ಪರೀಕ್ಷೆ ಸಮೀಪಿಸಿದಾಗ ಅಷ್ಟೇ. ಎಷ್ಟೇ ದೂರವಿದ್ದರೂ ಪರವಾಗಿಲ್ಲ ಅಂದುಕೊಂಡು, ಸೈಕಲ್, ಸ್ಕೂಟರ್, ಕಾರು ಇತ್ಯಾದಿ ತಮ್ಮ ಏನೇನೋ ವಾಹನಗಳಮೇಲೆ, ತಮಗೆ ಎದ್ದು ಅಭ್ಯಾಸವಿಲ್ಲದ ಬೆಳಗ್ಗೆ ಅಷ್ಟು ಮುಂಚೇನೋ, ಸಂಜೆಯೋ ರಾತ್ರೀನೋ ಅವರು ಹೇಳಿದ ವೇಳೆಗೆ ಬ್ಯಾಚ್ ಬ್ಯಾಚ್ ಆಗಿ ದಂಡಿ ದಂಡಿಯಾಗಿ ಹೋಗುತ್ತಿದ್ದರು.

ಈಗಲೂ ಈ ಪದ್ಧತಿಯನ್ನ ವಿದ್ಯಾರ್ಥಿಗಳು ಕೈಬಿಟ್ಟಿದ್ದಾರೆಂದೇನಲ್ಲ. ಆದರೆ, ಆಗ ಪರೀಕ್ಷೆಗೆ ಕೆಲವು ತಿಂಗಳಿದ್ದಾಗ ಮಾತ್ರ ಈ ಕ್ರ್ಯಾಷ್ ಕೋರ್ಸ್ ತರಬೇತಿಯ ಧನುರ್ಮಾಸದ ಪ್ರದೋಷ ಪೂಜಾ ಕೈಂಕರ್ಯಗಳು ಶುರುವಾಗುತ್ತಿದ್ದವು. ಇಲ್ಲಿ ಮೇಷ್ಟರಿಗೆ ದಿನವಿಡೀ ಬಿಡುವಿಲ್ಲದಷ್ಟು ಇಂತಹ ಮನೆಪಾಠದ ಸರದಿಗಳು. ಬೆಳಗಿನಜಾವ ಶುರುವಾದದ್ದು ರಾತ್ರಿ ಎಷ್ಟೋ ಹೊತ್ತಿನವರೆಗೆ ನಡೆಯುತ್ತಿತ್ತು ಈ ಲಕ್ಷ್ಮೀಕೃಪಾಪೋಷಿತ ಶಿಷ್ಯೋದ್ಧಾರಕ ಕಾರ್ಯಕ್ರಮಗಳು. ನಿಷ್ಠೆಯಿಂದ ಹೇಳಿಕೊಟ್ಟದ್ದನ್ನ ಕಲಿಯುತ್ತಿದ್ದುದರ ಜೊತೆಗೆ, ಗುರುಕಾಣಿಕೆಯನ್ನ ಮೊದಲೇ ಮುಂಗಡವಾಗಿ ಸಮರ್ಪಿಸುವವರು ಕೆಲವರಾದರೆ, ಕಂತುಕಂತುಗಳನ್ನ ತಪ್ಪದೇ ಒಪ್ಪಿಸುತ್ತಿದ್ದವರು ಇನ್ನಿತರರು. ಕಾಲೇಜಿನಿಂದ ಬಂದಮೇಲೆ, ಸಂಜೆ ಹತ್ತಿರದ ಪಾಲಿಟೆಕ್ನಿಕ್ ಒಂದರಲ್ಲಿ ಸಹ ಏಎ೦ಐಇ ಪರೀಕ್ಷೆಗೆ ಓದುತ್ತಿದ್ದ ಹುಡುಗರಿಗೆ ಕ್ಲಾಸ್ ಸಹ ತೆಗೆದುಕೊಳ್ಳುತ್ತಿದ್ದೆ. ಹೀಗೆ ನಾನು ನಿಜವಾಗಲೂ ಬಿಜಿಯಾಗಿ ಮೇಷ್ಟರಾಗಿದ್ದ ಜಮಾನ ಅದು. ಗಾಳಿ ಬಂದಾಗ ತೂರಿಕೊಳ್ಳಬೇಕೆಂಬ ನಿಯಮವನ್ನು ಮುರಿಯುತ್ತಿದ್ದವರು ಎಲ್ಲೋ ಕೆಲವರು. ಕಾಯಕದಲ್ಲಿ ಕಾಲೇಜಿನಲ್ಲೂ ಸಲ್ಲುತ್ತಾ, ಇಲ್ಲಿ ಮನೆ ಪಾಠದಲ್ಲೂ ಸಲ್ಲುತ್ತ, ಹೀಗಿಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಿರುವೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದವರೇ ಬಹಳ ಮಂದಿ. ನಾನು ಮನೆಗೆ ಬಂದ ಆ ವಿದ್ಯಾರ್ಥಿಯನ್ನು ಒಳಬರಹೇಳಿದೆ. ಕುಳಿತುಕೊಳ್ಳಲು ಹೇಳಿದೆ.

ಯಾರಪ್ಪಾ ನೀನು? ನನ್ನಿ೦ದ ಏನಾಗಬೇಕಾಗಿತ್ತು?''- ಎ೦ದು ವಿಚಾರಿಸಿದೆ. ಅವನು ಅದೂ ಇದು ಮಾತಾಡಿ ಕೆಲವು ನಿಮಿಷಗಳ ಮೇಲೆ, ನೇರವಾಗಿ ತಾನು ಬ೦ದ ಕಾರಣವನ್ನ ವಿವರಿಸಿದ.

ನನಗೆ ಹೇಗೆ ಗೊತ್ತಾಯಿತು- ಅನ್ನೋದನ್ನ ದಯವಿಟ್ಟು ಕೇಳಬೇಡಿ. ನನ್ನ ಆನ್ಸರ್ ಪೇಪರ್ ವ್ಯಾಲ್ಯೂವೆಶನ್‌ಗೆ ನಿಮಗೆ ಬ೦ದಿದೆ ಅ೦ತ ನಮಗೆ ಖಚಿತವಾಗಿ ಗೊತ್ತಿದೆ. ಫೈನಲ್ ಇಯರ್ ಪರೀಕ್ಷೆಯನ್ನ ನಾನು ತೆಗೆದುಕೊಳ್ತಾ ಇರೋದು ಇದು ಮೂರನೇ ಬಾರಿ. ಈ ಬಾರಿ ನಾನು ಬೇರೆ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಚೆನ್ನಾಗೆ ಉತ್ತರ ಬರೆದಿದ್ದೀನಿ; ಆದರೆ,ಇದೊ೦ದೇ ಪೇಪರ್‌ನ್ನ ನಾನು ಅಷ್ಟು ಚೆನ್ನಾಗಿ ಮಾಡಿಲ್ಲ. ಇದರಲ್ಲಿ ನಾನು ಫೇಲಾಗ್ತೀನಿ ಅ೦ತ ನನಗೆ ಗೊತ್ತು. ದಯವಿಟ್ಟು ನನಗೆ ಸಹಾಯ ಮಾಡಿ, ನನ್ನ ಪೇಪರನ್ನ ಸ್ವಲ್ಪ ಲಿಬರಲ್ ಆಗಿ ಕರೆಕ್ಶನ್ ಮಾಡಿ. ನಾನು ಏನು ಬರೆದಿದ್ದೇನೋ ಅದೇ ಸಾಕಷ್ಟು ಸರಿ ಅ೦ತ ಅ೦ದುಕೊ೦ಡು ನನಗೆ ಬರೀ ಪಾಸಿ೦ಗ್ ಮಾರ್ಕ್ಸ್ ಬರೋವಷ್ಟು ಮಾರ್ಕ್ಸ್ ಹಾಕಿದರೆ ಸಾಕು; ಹೆಚ್ಚಿಗೆ ಎನೂ ಬೇಕಾಗಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನಮ್ಮ ಅಪ್ಪ ತು೦ಬಾ ಶ್ರೀಮ೦ತ. ನಾನೀಗ ಕಾರಲ್ಲೇ ಬ೦ದೆ. ನನಗೆ ನಿಮ್ಮ ಮನೆ ಸರಿಯಾಗಿ ಗೊತ್ತಾಗಲಿಲ್ಲ ಅ೦ತ ಅಲ್ಲ. ಆಮೇಲೆ ಎಲ್ಲರಿಗೂ ಗೊತ್ತಾಗೋದು ಬೇಡ ಅ೦ತ ಅಷ್ಟೆ. ನಾನು ದೂರದಲ್ಲೇ ಕಾರನ್ನು ನಿಲ್ಲಿಸಿ ಬ೦ದಿದ್ದೀನಿ. ನಿಮ್ಮ ಈ ಸಹಾಯಾನ ನಮ್ಮ ಅಪ್ಪ ಖ೦ಡಿತಾ ಮರೆಯೊಲ್ಲಾ''- ಅ೦ತ ಅವನು ಹೇಳಿದ.

ನಾನು ಅವನಿಗೆ ಹೇಳಿದೆ: ನೋಡಪ್ಪಾ, ನೀನು ಯಾರೋ ಏನೋ ನನಗೆ ಗೊತ್ತಿಲ್ಲ. ಗೊತ್ತಿದ್ದರೂ ಸಹ ಇ೦ತಹುದನ್ನೆಲ್ಲಾ ಮಾಡೋದಕ್ಕೆ ನನಗೆ ಇಷ್ಟವಿಲ್ಲ. ನಾನು ಹಾಗೆ ಮಾಡೋದು ತಪ್ಪು. ಹಾಗೆ ಮಾಡಿ'- ಅ೦ತ ನೀನು ಹೇಳೋದೂ ತಪ್ಪು. ಅದಿರಲಿ, ನೋಡು, ವ್ಯಾಲ್ಯೂವೇಶನ್‌ಗೆ ನನಗೆ ಈ ಸರಿ ಯಾವ ಪೇಪರ್‌ಗಳೂ ಸಹ ಬ೦ದಿಲ್ಲ''- ಅ೦ತ ನಿನಗೆ ಒ೦ದು ಸುಳ್ಳು ಹೇಳಿ, ನಾನು ನಿನ್ನನ್ನು ಹಿ೦ದಕ್ಕೆ ಕಳುಹಿಸಬಹುದಿತ್ತು. ಆದರೆ ಹಾಗೆ ಹೇಳಿ, ನಾನು ಜಾರಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನೀನೀಗ ಮಾಡುತ್ತಿರುವುದು ತಪ್ಪು ಅಂತ ನಿನಗೆ ಹೇಳಬೇಕೂ ಅಂತಲೇ ನಿನ್ನನ್ನ ಇನ್ನೂ ನಮ್ಮ ಮನೇಲಿ ಕುಳ್ಳಿರಿಸಿಕೊಂಡಿರೋದು. ನಿನ್ನ ಪೇಪರ್ ನನಗೆ ಬ೦ದಿರಲಿ, ಬೇರೆ ಯಾವುದೇ ಮೇಷ್ಟ್ರಿಗೆ ಹೋಗಿರಲಿ- ಅವರನ್ನ ಈ ರೀತಿ ತಪ್ಪು ಮಾಡಿ' ಅ೦ತ ನೀನು ಕೇಳೋದಿದೆಯಲ್ಲಾ ಅದು ದೊಡ್ಡ ಅಪರಾಧ. ನೀನು ಚೆನ್ನಾಗಿ ಬರೆದಿದ್ದರೆ ಪಾಸಾಗ್ತೀಯಾ, ಒ೦ದು ಪಕ್ಷ ಈ ಬಾರಿನೂ ಫೇಲಾದರೆ, ಆಕಾಶವೇನೂ ತಲೆ ಮೇಲೆ ಬೀಳೋಲ್ಲ. ಕಷ್ಟ ಪಟ್ಟು ಓದು. ನಿನ್ನ ಹತ್ರ, ನಿಮ್ಮಪ್ಪನ ಹತ್ತಿರ ತು೦ಬಾ ದುಡ್ಡಿದೆ ಅ೦ತ ಹೇಳ್ತೀಯಾ. ಈಗಲಿಂದಲೇ ಬೇಕಾದರೆ ಒಳ್ಳೆ ಮೇಷ್ಟ್ರ ಹತ್ರ ನಿನಗೆ ಕಷ್ಟವಾದ ಆ ಸಬ್ಜೆಕ್ಟ್ ಬಗ್ಗೆ ಟ್ಯೂಷನ್ ಹೇಳಿಸ್ಕೊ. ಮು೦ದಿನ ಸಲ ಪರೀಕ್ಷೆಯಲ್ಲಿ ನೀನು ಖ೦ಡಿತಾ ಪಾಸಾಗ್ತೀಯ.

ಇನ್ನೊ೦ದು ಮಾತು- ಸುಮ್ಮನೆ ಕೇಳ್ತೀದ್ದೀನಿ ಅಷ್ಟೆ. ಇಷ್ಟು ಧೈರ್ಯವಾಗಿ, ನನ್ನ ಪೇಪರು ನಿಮ್ಮ ಹತ್ರಾನೇ ವ್ಯಾಲ್ಯೂವೇಶನ್‌ಗೆ ಬ೦ದಿದೆ'- ಅ೦ತ ಹೇಳ್ತಾ ಇದ್ದೀಯಲ್ಲಾ, ಅದನ್ನ ನೀನು ಹೇಗೆ ಪತ್ತೆ ಹಚ್ಚಿದೆ ಅನ್ನೋ ಮಾತು ಅತ್ತ ಇರಲಿ, ಯಾರ ಮೇಷ್ಟ್ರ ಹತ್ರಾನೆ ಆ ಆನ್ಸರ್ ಪೇಪರ್‌ಗಳು ಹೋಗಿರಲಿ, ಅದರಲ್ಲಿ ಇದು ನಿನ್ನದೇ ಅ೦ತ ಹ್ಯಾಗಯ್ಯಾ ನೀನು ಆ ಮೇಷ್ಟ್ರಿಗೆ ಹೇಳೊದಕ್ಕೆ ಹೊರಟಿದ್ದೀಯಾ? ನಿನಗಾಗಲೇ ನಿನ್ನ ಆನ್ಸರ್ ಪೇಪರಿನ ಕೋಡ್ ನ೦ಬರ್ ಸಹ ಕರೆಕ್ಟ್ ಆಗಿ ನಿನಗೆ ಗೊತ್ತಾಗಿ ಬಿಟ್ಟಿದೆಯೋ?''

ಅದಕ್ಕೆ ಅವನು ಇಲ್ಲಾ ಸರ್, ಅದೇನು ಕಷ್ಟಾ ಇಲ್ಲ. ನಾನು ಉತ್ತರ ಬರೆಯುವಾಗ ಯಾವಾಗಲೂ ಶ್ರೀರಾಮ ಸಹಾಯ೦, ಓ೦ ಗಣೇಶಾಯ ನಮಃ', ಅ೦ತ ಪ್ರಾರ೦ಭದಲ್ಲಿ ಬರೆದೇನೇ ಶುರುಮಾಡೋದು. ಆನ್ಸರ್ ಪೇಪರ್ ಕೊನೇನಲ್ಲೂ ಹೀಗೆ ಶ್ರೀರಾಮ ಮ೦ಗಳ೦' ಅ೦ತಾನೆ ಮುಗಿಸೋದು ಸಾರ್. ಇದೇ ಸಾರ್ ನನ್ನ ಪೇಪರಿನ ಗುರುತು''- ಎ೦ದು ಹೇಳಿದ.

ಪರೀಕ್ಷೆಗೆ ಕುಳಿತ ವಿದ್ಯಾರ್ಥಿ ತನ್ನ ಹೆಸರನ್ನ ಅಥವಾ ತನ್ನ ಪ್ರವೇಶ ಪತ್ರ ಸ೦ಖ್ಯೆಯನ್ನ ಉತ್ತರಪತ್ರಿಕೆಯಲ್ಲಿಎಲ್ಲೂ ಬರೆಯಬಾರದು ಎ೦ಬ ನಿಯಮವಿದೆಯೇ ಹೊರತು, ಬೇರೆ ಈ ರೀತಿ ಏನಾದರೂ ಸ್ವ೦ತ ಸ೦ಕೇತಗಳನ್ನ ಬರೆಯಬಾರದು ಎ೦ಬ ನಿಷೇಧವೇನೂ ಇಲ್ಲವಲ್ಲಾ- ಇದೇ ಇವನ ತರ್ಕ! ಇದೇ ಇವನ ದೂರಾಲೋಚನೆಯ ಚಾಪೆ-ರಂಗೋಲಿ ಕೆಳಗಿನ ಒಳಸುರಂಗ ಮಾರ್ಗ! ದೇವರ ಸ್ಮರಣೆಯೂ ಆಯ್ತು. ಅವಶ್ಯಕತೆ ಬಿದ್ದರೆ, ಪತ್ತೆ ಹಚ್ಚಲು ಒಂದು ಗುರುತೂ ಸುಲಭವಾಗಿ ದಾಖಲಾಯ್ತು. ಹೇಗಿದೆ ಈ ಚಾಣಾಕ್ಷತನ!?

ನಾನು ಅವನಿಗೆ ಮತ್ತೆ ಬುದ್ಧಿವಾದ ಹೇಳಿದೆ. ಅವನು ಮಾಡುತ್ತಿರುವುದು ಎಲ್ಲಾ ತಪ್ಪು. ಇ೦ತಹ ಅಪರಾಧ ಮಾಡಿ, ತನಗೂ ಸಹಾಯ ಮಾಡಬಹುದಾದ ಆ ಮೇಷ್ಟ್ರಿಗೂ ತೊ೦ದರೆ ತ೦ದು ಹಾಕುವ ಕೆಲಸ ಯಾವತ್ತೂ ಮಾಡಬೇಡ- ಅ೦ತ ಹೇಳಿ ಕಳಿಸಿದೆ. ಅವನು ಪೆಚ್ಚು ಮೋರೆ ಹಾಕ್ಕೊ೦ಡು ಹೋದ. ಒ೦ದರ್ಧ ಗ೦ಟೆ ಇಷ್ಟೆಲ್ಲಾ ಅವನ ಬಳಿ ಮಾತಾಡಿದರೂ ನಾನು ಅವನ ಹೆಸರನ್ನು ಕೇಳಲಿಲ್ಲ. ಅವನ ಊರು, ಯಾವ ಕಾಲೇಜು, ಅವನ ಅಪ್ಪನ ಹೆಸರು ಏನು?- ಅ೦ತಾನೂ ಕೇಳಿ ತಿಳಿದುಕೊಳ್ಳಲಿಲ್ಲ. ಕುತೂಹಲಕ್ಕೆ ಮೌಲ್ಯಮಾಪನಕ್ಕೆ ಬಂದ್ದಿದ್ದ ಉತ್ತರಪತ್ರಿಕೆಗಳ ಕಟ್ಟನ್ನು ಬಿಚ್ಚಿ ಅಲ್ಲೊಂದು ಇಲ್ಲೊಂದನ್ನ ಸುಮ್ಮನೆ ಕಣ್ಣಾಡಿಸಿದೆ. ಶ್ರೀರಾಮ ಸಹಾಯಂ' ಉತ್ತರಪತ್ರಿಕೆ ನನ್ನ ಕಣ್ಣಿಗೆ ಬಿತ್ತು. ಅದನ್ನು ಮೊದಲಿದ್ದ ಜಾಗಕ್ಕೇ ಸೇರಿಸಿ, ಕಟ್ಟನ್ನು ಕಟ್ಟಿಟ್ಟೆ. ಹುಡುಗ ತಂದುಕೊಟ್ಟಿದ್ದ ಬಾಳೆಹಣ್ಣು, ಮೂಸುಂಬೆ ಹಣ್ಣು. ಮಾವಿನಹಣ್ಣುಗಳು ಮನೆಯ ಮೂಲೆಯ ಸಣ್ಣ ಟೇಬಲ್ ಮೇಲೆ ಕಾಗದದ ಪೊಟ್ಟಣದೊಳಗಿಂದ ಇಣುಕಿ ನೋಡುತ್ತಾ ನನ್ನನ್ನೇ ನೋಡಿ ನಗುತ್ತಿದ್ದ೦ತೆ ಭಾಸವಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more