ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪತ್ರಿಕೆಗಳ ಮೌಲ್ಯಮಾಪನ-1

By Staff
|
Google Oneindia Kannada News

Shikaripura Harihareshwaraಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದಾಗ ನಡೆದ ಮತ್ತೊಂದು ಅವಿಸ್ಮರಣೀಯ ಅನುಭವದ ನೆನಪಿನ ಬಂಡಲ್ ಅನ್ನು ಲೇಖರು ಇಲ್ಲಿ ಬಿಚ್ಚಿಟ್ಟಿದ್ದಾರೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರ ಚರ್ಚೆಗಳನ್ನು ಕೇಳುವುದಕ್ಕಷ್ಟೇ ಸಾಧ್ಯವಿದ್ದ ಕಾಲದಲ್ಲಿ, ಅದೂ ಕಲಿಸುವಿಕೆಯ ಪ್ರಥಮ ಮೆಟ್ಟಿಲಿನ ಮೇಲಿದ್ದಾಗ ಮೌಲ್ಯಮಾಪನ ಮಾಡುವಂಥ ಅವಕಾಶ ತಾನಾಗೇ ಅರಸಿಕೊಂಡು ಬಂದ ಘಟನೆಯ ಮೆಲುಕನ್ನು ಹರಿ ಹಾಕಿದ್ದಾರೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ನಾನು ಆಗ ಒಂದು ಇಂಜನಿಯರಿಂಗ್ ಕಾಲೇಜಿನಲ್ಲಿ ಮೇಷ್ಟರಾಗಿದ್ದೆ. ಕಾಲೇಜಿನಲ್ಲಿ ನಡೆಯುವ ಮಧ್ಯ೦ತರ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನ ತಯಾರಿಸುವುದರಲ್ಲಿ ನಮ್ಮಂಥವರಿಗೆ ಅವಕಾಶವಿತ್ತು. ನಾನು ಯಾವ ವಿಷಯದಲ್ಲಿ ಪಾಠ ಹೇಳಿಕೊಡುತ್ತಿದ್ದೆನೋ ಆ ವಿಷಯದ ಪ್ರಶ್ನೆಪತ್ರಿಕೆಗಳು ಅವು. ಆದರೆ, ಇಬ್ಬರು ಮೂವರು ಅಧ್ಯಾಪಕರು ಒ೦ದೇ ವಿಷಯವನ್ನ ಬೇರೆ ಬೇರೆ ತರಗತಿಗಳಿಗೆ ಪಾಠ ಹೇಳುತ್ತಿದ್ದರೆ, ಆ ಎಲ್ಲಾ ಉಪಾಧ್ಯಾಯರೂ ಸೇರಿ ಒ೦ದು ಪ್ರಶ್ನೆಪತ್ರಿಕೆಯನ್ನ ತಯಾರು ಮಾಡಿಕೊಂಡು, ಆ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೂ ಅದನ್ನು ಪರೀಕ್ಷೆಯಲ್ಲಿ ಕೊಡುವ ಪದ್ಧತಿಯಿತ್ತು. ನಮ್ಮ ನಮ್ಮ ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ನೋಡಿ, ಮೌಲ್ಯಮಾಪನ ಮಾಡಿ, ಅ೦ಕಗಳನ್ನು ಕೊಡುವ ಜವಾಬ್ದಾರಿ ಆಯಾಯ ತರಗತಿಯ ಮೇಷ್ಟರುಗಳಿಗೇ ಇತ್ತು.

ವರ್ಷದ ಕೊನೆಯಲ್ಲಿ ನಡೆಸುವ ಸಾರ್ವಜನಿಕ (ಪಬ್ಲಿಕ್) ಪರೀಕ್ಷೆಯ ವಿಚಾರ ಬೇರೆ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ, ಎಷ್ಟೋ ವರ್ಷಗಳ ಅನುಭವ ಇರುವ ಪ್ರಾಧ್ಯಾಪಕರುಗಳಿಗೆ ಮಾತ್ರ ಈ ಪ್ರಶ್ನೆಪತ್ರಿಕೆ ತಯಾರು ಮಾಡುವ ಅವಕಾಶ ಸಿಗುತ್ತಿತ್ತು. ಅಲ್ಲದೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡುವ ಅವಕಾಶವೂ ಸಹ ಸಾಕಷ್ಟು ವರ್ಷಗಳ ಅನುಭವ ಇರುವ ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಸಿಗುತ್ತಿತ್ತು. ಪ್ರಶ್ನೆಪತ್ರಿಕೆಗಳನ್ನ ತಯಾರಿಸುವ ಹೊಣೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಜವಾಬ್ದಾರಿ ಒಬ್ಬ ಮೇಷ್ಟರಿಗೆ ಸಿಕ್ಕಿದೆ- ಎ೦ದರೆ ಅವನಿಗೆ ತು೦ಬಾ ಗೌರವ. ನಮ್ಮ ಇ೦ಜಿನಿಯರಿ೦ಗ್ ವಿಭಾಗದಲ್ಲಿ ಅಧ್ಯಾಪಕರೆಲ್ಲಾ ಸ್ಟಾಫ್ ರೂಮಿನಲ್ಲಿ ತರಗತಿಗಳು ಪ್ರಾರ೦ಭವಾಗುವ ಮುನ್ನವೋ ಲ೦ಚ್ ವೇಳೆಯಲ್ಲೋ, ಬೇರೆ ಇನ್ನಾವುದೋ ವಿಶೇಷ ಸ೦ದರ್ಭಗಳಲ್ಲೋ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾಗ, ಈ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನದ ಮಾತುಗಳು ಆಗಾಗ್ಗೆ ಬರುತ್ತಿದ್ದವು. ಆಗಿನ್ನೂ ಕೆಲಸಕ್ಕೆ ಸೇರಿದ ಬಚ್ಚಾಗಳ ತರಹ ಇದ್ದ ನಾನು ಮತ್ತು ನನ್ನಂತಹ ಇನ್ನು ಮೂರು ನಾಲ್ಕು ಜನ ಅಧ್ಯಾಪಕರು ಅ೦ತಹ ಮಾತುಗಳನ್ನ ಬಾಯಿಬಿಟ್ಟುಕೊ೦ಡು ಕೇಳುತ್ತಿದ್ದೆವು. ಎಷ್ಟೋ ರೋಚಕ ಕಥೆಗಳನ್ನ ಅವರುಗಳು ಹೇಳುತ್ತಿದ್ದರು. ನಮಗೂ ಆಸೆ ಈ ರೀತಿ ನಮಗೂ ಅವಕಾಶ ಸಿಗಬೇಕು' ಅ೦ತ. ಆದರೆ ನಿಯಮದ ಪ್ರಕಾರ ನಾವು ನಮ್ಮ ಕಾಲಕ್ಕಾಗಿ ಕಾಯಬೇಕಿತ್ತು.

ಒಬ್ಬರು ಹೇಳುತ್ತಿದ್ದರು: ಪರೀಕ್ಷೆಯ ಫಲಿತಾಂಶಗಳು ತಾಂತ್ರಿಕ ಕಾರಣಗಳಿಗಾಗಿ ತಡವಾಗಿ ಪ್ರಕಟಣೆಗೊಳ್ಳುತ್ತಿವೆ. ಈ ವಿಳಂಬಕ್ಕೆ ಸಂಬಂಧಪಟ್ಟವರು ತಾಳ್ಮೆಯಿಂದ ಇರಬೇಕೆಂದು ವಿನಂತಿಸಿಕೊಳ್ಳುತ್ತೇವೆ""- ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆ ಹೊರಡಿಸುತ್ತಾರಲ್ಲ, ಆ ತಾಂತ್ರಿಕ ಕಾರಣದ ಒಳಗುಟ್ಟು ಇಷ್ಟೇ: ಯಾರೋ ಒಬ್ಬಿಬ್ಬರು ಹಳೇ ಹುಲಿಗಳು ಇನ್ನೂ ತಮ್ಮ ಮೌಲ್ಯಮಾಪನ ಮಾಡಿ ಅಂಕಪಟ್ಟಿ ಕಳಿಸಿಲ್ಲ, ಇವತ್ತು ನಾಳೆ ಅಂತ ಸತಾಯಿಸುತ್ತಾ ಇದ್ದಾರೆ. ಆ ಪ್ರಭಾವೀ ಪ್ರಾಧ್ಯಾಪಕರು ಯಾವಾಗಲೂ ಇಂಥಾ ತಲೇನೋವಿನ ಗಿರಾಕಿಗಳೇ. ಬಿಸಿ ತುಪ್ಪ, ನುಂಗೋ ಹಾಗಿಲ್ಲ, ಉಗುಳೋ ಹಾಗೂ ಇಲ್ಲ.
ಇನ್ನೊಬ್ಬರು ದನಿಗೂಡಿಸಿದರು: ಅಯ್ಯೋ ಅಂಥವರದ್ದು ಬಿಡಿ, ನಮ್ಮ ಪ್ರೊ| ಘ' ಇದ್ದಾರಲ್ಲ. ನಿಜವೋ ಸುಳ್ಳೋ ಗೊತ್ತಿಲ್ಲ. ಮೇಲಿಂದ ಮೇಲೆ ರಿಜಿಸ್ಟ್ರಾರ್ ಕಛೇರಿಯಿಂದ ದುಂಬಾಲಿನ ಫೋನ್‌ಕಾಲ್‌ಗಳ ಸುರಿಮಳೆ ಆದಮೇಲೆ, ಮೌಲ್ಯಮಾಪನದ ಅಂಕಪಟ್ಟಿ ಮಾತ್ರ ಸೀಲ್ ಮಾಡಿದ ಕವರ್‌ನಲ್ಲಿ ಆಫೀಸ್ ಜವಾನನನ ಕೈಯಲ್ಲಿ ಸುರಕ್ಷಿತವಾಗಿ ಕಳಿಸಿ ಬಿಡುತ್ತಾರೆ; ಉತ್ತರಪತ್ರಿಕೆಗಳ ಕಟ್ಟನ್ನ ಆಮೇಲೆ ನಾನೇ ತಂದುಕೊಡುತ್ತೇನೆ'- ಅಂತ ಹೇಳಿ ಕಳಿಸಿಬಿಡುತ್ತಾರೆ. ದೇವರಿಗೇ ಗೊತ್ತು- ಬೀಜ ಮೊದಲೋ, ಮರ ಮೊದಲೋ!

ಮತ್ತೊಬ್ಬರು ಮಧ್ಯೆ ಬಾಯಿಹಾಕಿದರು: ಅವರ ಕತೆ ಬಿಡಿ. ನಮ್ಮ ವೈಶಂಪಾಯನ ಕಾಲದ ಪ್ರೊಫೆಸರ್ ಇದ್ದಾರಲ್ಲ. ಆ ವಿಷಯ ಪಾಠ ಹೇಳಿ ಎಷ್ಟು ವರ್ಷ ಆಗಿರುತ್ತೋ ಏನೋ ಅವರಿಗೆ, ಅಂಥವರು ವ್ಯಾಲ್ಯುಯೇಷನ್ ಮಾಡ್ತಾರಂತೆ, ವ್ಯಾಲ್ಯುಯೇಷನ್. ಪ್ರಶ್ನಪತ್ರಿಕೆಗೆ ಸರಿಯಾದ ಉತ್ತರಗಳ ಒಂದು ಕೀ' ಯನ್ನೂ ದಯವಿಟ್ಟು ಕೊಟ್ಟು ಬಿಡೀಪ್ಪಾ, ಯೂನಿಫಾರ್ಮ್ ಆಗಿ ವ್ಯಾಲ್ಯುಯೇಷನ್ ಮಾಡಬೇಕಲ್ಲ, ಕನ್ಸಿಸ್ಟೆನ್ಸಿ ಕಾಪಾಡಿಕೊಳ್ಳ ಬೇಕಲ್ಲ, ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದಲ್ಲ'- ಅಂತ ಸೋಗು ಹಾಕುತ್ತ, ಪ್ರಶ್ನಪತ್ರಿಕೆ ಸೆಟ್ ಮಾಡಿದ ಮೇಷ್ಟರಿಗೆ ಅಹವಾಲು ಮಾಡಿಕೊಳ್ಳುತ್ತಾರೆ. ಕೀ' ಸ್ವಲ್ಪ ವಿವರವಾಗಿಯೇ ಇದ್ದರೆ ಒಳ್ಳೆಯದು- ಅನ್ನುವ ಜನ ಇವರು.

ಮಗದೊಬ್ಬರು ಅಪ್ಪಣೆ ಕೊಡಿಸಿದರು: ಫೇಲ್ ಮಾಡಿಸಿದರೆ ತಾನೇ ತಾಪತ್ರಯ. ಯಾರೂ ಫೇಲ್‌ಏ ಆಗದ ಹಾಗೆ, ಎಲ್ಲರಿಗೂ ಐವತ್ತರ ಮೇಲೇ ಕೊಟ್ಟು ಬಿಟ್ಟರೆ ಯಾರಪ್ಪನ ಮನೆ ಗಂಟು ಹೋಗುತ್ತೆ. ಸ್ವಲ್ಪ ಲಿಬರಲ್ ಆಗಿ ಇರಬೇಕಪ್ಪ. ವಿದ್ಯಾರ್ಥಿಗೆ ವಿಷಯಗೊತ್ತಿದೆಯಾ ಅ೦ತ ತಿಳಿದುಕೊಳ್ಳ ಬೇಕು. ಭಾಗಶ: (ಪಾರ್ಷಿಯಲ್) ಉತ್ತರಕ್ಕೂ ಗಮನ ಹರಿಸಬೇಕು. ಲೆಕ್ಕ ಕೊಟ್ಟಾಗ, ಮೊದಲೇ ಊಹಿಸಿಕೊಳ್ಳಬೇಕಾದ ಕೆಲವು ಅಂಕೆ-ಸಂಖ್ಯೆಗಳು ಸ್ವಲ್ಪ ಏರುಪೇರಾಗಿರಬಹುದು; ಕೊನೇ ಉತ್ತರಮಾತ್ರ ಮುಖ್ಯ ಅಂತ ಆಗಿರಬಾರದು. ಅಷ್ಟೇ ಅಲ್ಲ; ಹೆಂಡತಿ ಮೇಲಿನ ಕೋಪಾನ ಉತ್ತರ ಪತ್ರಿಕೆಯ ಮೇಲೆ ತೋರಿಸಿಕೊಳ್ಳೋ ಮುಠ್ಠಾಳರೂ ಇರ್ತಾರಲ್ಲ.

ನೀವು ಯಾವುದೋ ಕಾಗಕ್ಕ ಗುಬ್ಬಕ್ಕನ ಕತೆ ಹೇಳ್ತಾ ಇದ್ದೀರಾ, ನನ್ನ ಜೀವನದಲ್ಲೇ ನಡೆದ ನಿಜವಾದ ಒಂದು ಘಟನೆ ಕೇಳಿದರೆ ನೀವೇನು ಹೇಳ್ತೀರೋ''- ಅಂತ ಪ್ರಾರಂಭಿಸಿದರು, ಅಲ್ಲಿದ್ದ ಒಬ್ಬರು ತಮ್ಮ ಶಿಕ್ಷಕವೃತ್ತಿಯ ಆರಂಭದ ದಿನಗಳನ್ನು ನೆನಸಿಕೊಂಡು. ಹೇಳಿ, ಹೇಳಿ''- ಎಂದೆವು, ನಾವೆಲ್ಲ. ಕತೆ ಹೇಳೋದರಲ್ಲಿ ಅವರೂ ನಿಸ್ಸೀಮರೇ; ಅವರು ಹೇಳಿದ್ದು ಇದು:

ನಾನು ಹಿಂದೆ ಕೆಲಸ ಮಾಡ್ತಾ ಇದ್ದೆನಲ್ಲ ಆ ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು (ಅವರೀಗ ಸ್ವರ್ಗಸ್ಥರಾಗಿದ್ದಾರೆ!) ಒ೦ದು ದಿನ ನನ್ನನ್ನ ತಮ್ಮ ಆಫೀಸ್ ರೂಮಿಗೆ ಕರೆದು, ಸ೦ಜೆ ನಮ್ಮ ಮನೆಗೆ ಬರುತ್ತೀರಾ? ನಿಮ್ಮ ಹತ್ತಿರ ಸ್ವಲ್ಪ ಮಾತನಾಡುವುದಿದೆ''- ಎ೦ದರು. ವಿಷಯ ಏನು ಅ೦ತ ಹೇಳಲಿಲ್ಲ. ಏನಿರಬಹುದು ಅ೦ತ ಏನೇನೋ ಯೋಚನೆ ಮಾಡಿಕೊ೦ಡು ಆ ಸ೦ಜೆ ಅವರ ಮನೆಗೆ ನಾನು ಹೋದೆ. ಮನೆಯ ಹೊರಗಿನ ವರಾ೦ಡದಲ್ಲೇ ಕುರ್ಚಿಯ ಮೇಲೆ ಕುಳಿತು ನಾವಿಬ್ಬರೂ ಸ೦ಭಾಷಣೆಗೆ ತೊಡಗಿದೆವು. ಅವರು ಹೇಳಿದರು- ನೋಡಿ, ನೀವು ಕಾಲೇಜಿನಲ್ಲಿ ಚೆನ್ನಾಗಿ ಪಾಠ ಮಾಡುತ್ತಿದ್ದಿರಿ- ಅ೦ತ ಬಹಳ ಜನ ವಿದ್ಯಾರ್ಥಿಗಳು ನಿಮ್ಮ ಸಹೋದ್ಯೋಗಿ ಮೇಷ್ಟ್ರುಗಳು ನಿಮ್ಮನ್ನ ತು೦ಬಾ ಹೊಗಳುತ್ತಾರೆ. ವಿಷಯಾನ ನೀವು ಚೆನ್ನಾಗಿ ತಿಳಿದುಕೊ೦ಡು ಪಾಠ ಹೇಳ್ತಾ ಇದ್ದೀರಿ ಅನ್ನೋದು ನನಗೆ ಗೊತ್ತು. ನಿಮ್ಮ೦ಥ ಯುವಕ ಅಧ್ಯಾಪಕರಿಗೆ ಒಳ್ಳೋಳ್ಳೆ ಅವಕಾಶಗಳು ಬೇಗ ಬೇಗ ಸಿಗಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ನಿಮಗೆ ಅನುಭವ ಆಗಬೇಕು. ಇದರಿ೦ದ ಮು೦ದೆ ನಿಮಗೆ ತು೦ಬಾ ಅನುಕೂಲಗಳಿವೆ.'' ಹೀಗೆಲ್ಲಾ ಬಣ್ಣ ಬಣ್ಣದ ಮಾತುಗಳನ್ನ ಅವರು, ಒಳಮನೆಯಿಂದ ಆಳಿನ ಕೈಯ್ಯಲ್ಲಿ ತರಿಸಿಕೊಟ್ಟ ಕಾಫಿ ಕುಡಿಯುತ್ತಿದ್ದ ನನಗೆ ಹೇಳಿದರು. ವಿಷಯ ಏನು ಅ೦ತ ಇನ್ನೂ ಹೇಳಿರಲಿಲ್ಲ ನಾನು ಊಹಿಸಿಕೊಳ್ತಾನೆ ಥ್ಯಾ೦ಕ್ಸ್ ಸರ್'' ಅ೦ತ ಹೇಳಿದೆ.
ಅವರು ಹೇಳಿದರು: ನಿಮಗೆ ಒ೦ದು ಉಪಕಾರ ಮಾಡಬೇಕು ಅ೦ತ ನನಗೊ೦ದು ಐಡಿಯಾ ಹೊಳೆದಿದೆ. ಈ ಪೇಪರ್ ವ್ಯಾಲ್ಯುಯೇಷನ್ ಇದೆಯಲ್ಲಾ, ಇದನ್ನು ಮಾಡೋದಕ್ಕೂ ಒ೦ದು ನ್ಯಾಕ್ ಇರಬೇಕು. ಜಾಣ್ಮೆ ಕುಶಲತೆ ಬೇಕು. ತನ್ನಷ್ಟಕ್ಕೆ ತಾನೇ ಅದು ಬರೋದಿಲ್ಲ. ಮಾಡಿ ಮಾಡಿ, ಅಭ್ಯಾಸಬಲದಲ್ಲಿ ಈ ಮೌಲ್ಯಮಾಪನ ಕೆಲಸದಲ್ಲಿ ನೀವು ಪರಿಣತರಾಗಬಹುದು. ಆದರೆ ನಿಮಗೆ ಮೊದಲು ಅವಕಾಶಗಳು ಸಿಗಬೇಕಲ್ಲಾ. ಅದೇನೋ ಹೇಳ್ತಾರಲ್ಲಾ, ಮದುವೆಯಾಗದೆ ಹುಚ್ಚು ಬಿಡೊಲ್ಲಾ; ಹುಚ್ಚು ಬಿಡದೆ ಮದುವೆ ಆಗೋಲ್ಲ' ಆ ರೀತಿ. ಅಭ್ಯಾಸ ಇಲ್ಲದೆ ಎಕ್ಸ್‌ಪರ್ಟ್ ಆಗೊಲ್ಲ; ಎಕ್ಸ್‌ಪರ್ಟ್ ಅಲ್ಲದೇ ಹೋದರೆ ಅಭ್ಯಾಸಕ್ಕೆ ಅವಕಾಶಾನೇ ಕೊಡೊಲ್ಲಾ! ಅದಕ್ಕೆ ನಾನೊ೦ದು ಐಡಿಯಾ ಹಾಕಿದ್ದೀನಿ. ಆದರೆ ಇದು ಸ್ವಲ್ಪ ಕಾನ್ಫಡೆನ್ಷಿಯಲ್ ಆಗೇ ಮಾಡಬೇಕು. ನಾನೇನೋ ನಿಮಗೆ ಸಹಾಯ ಮಾಡ್ತೀನಿ ಅನ್ನೋದು ಹೋಗಿ, ಇದು ನನಗೇ ತೊ೦ದರೆ ಆಗೋ ಹಾಗೆ ಆಗಬಾರದು. ನಿಮಗೂ ತೊಂದರೆ ಆಗಬಾರದು. ನಿಮಗೆ ಒಪ್ಪಿಗೇನ?''- ಅ೦ತ ಅವರು ಕೇಳಿದರು.

ನೀವು ನನಗೆ ಸಹಾಯ ಮಾಡ್ತೀನಿ ಅ೦ತ ಹೇಳ್ತೀರಿ, ಉಪಕಾರ ಅ೦ತ ಸೂಚಿಸ್ತೀರಿ, ನನಗೆ ಅನುಕೂಲ ಅ೦ತ ಹೇಳ್ತೀರಿ, ಗುಟ್ಟಾಗಿ ಇರಬೇಕು ಅ೦ತ ಸಲಹೆ ಕೊಡ್ತೀರಿ. ಆದರೆ ಅದು ಏನು ಅ೦ತಾನೇ ಹೇಳ್ತಾ ಇಲ್ವಲ್ಲಾ ಸರ್. ನನಗೆ ಅರ್ಥವಾಗ್ತಾ ಇಲ್ಲ''- ಅ೦ತ ನಾನು ಹೇಳಿದೆ.

ಅದಕ್ಕೆ ಅವರು, ನೋಡಿ ಕಾಲೇಜಿನಲ್ಲಿ ನೀವು ಪಾಠ ಮಾಡ್ತಾ ಇದ್ದಿರಲ್ಲಾ, ಆ ವಿಷಯದ್ದೇ ಪರೀಕ್ಷೆಯ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ, ವ್ಯಾಲ್ಯೂವೇಷನ್‌ಗೆ ನನಗೆ ಬ೦ದಿವೆ. ಎಷ್ಟೋ ವರ್ಷಗಳಿ೦ದ ನಾನು ಈ ಮೌಲ್ಯಮಾಪನದ ಕೆಲಸ ಮಾಡ್ತಾನೇ ಇದ್ದೀನಿ. ಇದೋ ನನಗೆ ಬಹಳ ರೊಟೀನು. ಬೇಗ ಬೇಗ ಮಾಡಿ ಮುಗಿಸಾಕಬಹುದು. ನನಗೇನೂ ಕಷ್ಟವಿಲ್ಲ. ಯಾವ್ಯಾವುದೋ ಮೀಟಿ೦ಗ್, ಸೆಮಿನಾರ್, ಸಿಂಪೋಜಿಯಂ, ಕಾನ್ಫರೆನ್ಸ್- ಅ೦ತ ಎನೇನೋ ಆಫೀಸ್ ಕೆಲಸಗಳಲ್ಲಿ ನಾನು ಸ್ವಲ್ಪ ಬಿಜಿ ನಿಜ. ಆದರೂ ಸಹ ಈ ಪೇಪರ್‌ಗಳನ್ನ ವ್ಯಾಲ್ಯೂವೇಷನ್ ಮಾಡೋದಕ್ಕೆ ನನಗೇನು ಕಷ್ಟವಾಗೊಲ್ಲ. ಆದರೂ ನನಗೊ೦ದು ಐಡಿಯಾ ಹೊಳಿತು.''

ಅವರು ಏನು ಹೇಳಹೊರಟಿದ್ದಾರೆ ಎ೦ಬುದನ್ನ ತಿಳಿದುಕೊಳ್ಳಲು ನನ್ನ ಕುತೂಹಲ ಕೆರಳುತ್ತಿತ್ತು. ಅವರು ಮು೦ದುವರಿಸಿದರು: ನೋಡಿ, ಈಗ ನನಗೆ ಬ೦ದಿರೋ ಬ೦ಡಲುಗಳಲ್ಲಿ ಒ೦ದಿಷ್ಟನ್ನು ನಿಮಗೆ ಕೊಡೋಣ ಅಂದುಕೊಂಡಿದ್ದೀನಿ. ಆ ಉತ್ತರ ಪತ್ರಿಕೆಗಳನ್ನ ನೀವು ವ್ಯಾಲ್ಯೂವೇಷನ್ ಮಾಡಿ; ಹೇಗೆ ಮಾಡಬೇಕೋ, ಏನು ಸಿಸ್ಟಮ್ ಅಡಾಪ್ಟ್ ಮಾಡಬೇಕೋ- ಎಲ್ಲಾ ನಿಮಗೆ ಹೇಳಿಕೊಡ್ತೀನಿ. ಎಷ್ಟು ದಿನದೊಳಗೆ ಮಾಡಬೇಕು, ಅದನ್ನೂ ನಿಮಗೆ ಹೇಳ್ತೀನಿ. ಈಗ ಕಾಲೇಜಿಗೆ ಹೇಗೂ ರಜಾ ಇದೆ. ಇದನ್ನೆಲ್ಲಾ ನೀವು ನಿಮ್ಮ ಮನೆಗೆ ತೆಗೆದುಕೊ೦ಡು ಹೋಗಿ. ನಿಮ್ಮ ಮನೇಲೆ ಕುಳಿತುಕೊ೦ಡು ವ್ಯಾಲ್ಯೂಯೇಷನ್ ಮಾಡಿ, ನನಗೆ ತ೦ದು ಕೊಡಿ. ನಾನೊ೦ದು ಸಲ ಅದರ ಮೇಲೆ ಕಣ್ಣಾಡಿಸುತ್ತೀನಿ. ನೀವು ಸರಿಯಾಗೆ ಮಾಡಿರುತ್ತೀರಿ' ಅ೦ತ ನನಗೆ ನ೦ಬಿಕೆಯೇನೋ ಇದೆ. ಆದರೂ ನೋಡಿ, ಎಲ್ಲಾ ಜವಾಬ್ದಾರಿ ನನ್ನದೇ ಅಲ್ವೇ? ಆದ್ದರಿ೦ದ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕು ಅ೦ದರೆ ನಾನೇ ಮಾಡ್ಕೋತ್ತೀನಿ. ಬಹುಶಃ ಅದರ ಅವಶ್ಯಕತೆ ಬೀಳಲ್ಲ. ಬಹಳ ಜವಾಬ್ದಾರಿಯಿ೦ದ ಕಾನ್ಫಡೆನ್ಶಿಯಲ್ ಆಗಿ ನೀವು ಈ ಕೆಲಸ ಮಾಡೋಕೆ ಇಷ್ಟಪಟ್ಟರೆ, ಆ ಪೇಪರ್‌ಗಳ ಬ೦ಡಲನ್ನು ಇವತ್ತು ನಾನು ನಿಮಗೆ ಕೊಡ್ತೀನಿ, ಏನ್ ಹೇಳ್ತೀರಿ?''- ಎ೦ದರು ಅವರು.

ರಜೆ, ಬೋಧಕ ವಿಷಯಗಳ ಆಯ್ಕೆ ಇತ್ಯಾದಿ ಯಾವ್ಯಾವುದೋ ವಿಚಾರಗಳಲ್ಲಿ ಹಿ೦ದೆ ನನಗೆ ಸಹಾಯ ಮಾಡಿದ ಪ್ರಾಧ್ಯಾಪಕರು ಅವರು. ನನ್ನ ಒಳ್ಳೇಯದಕ್ಕೇನೇ ಈ ಕೆಲಸಾನ ನನಗೆ ನಿರ್ವಹಿಸುತ್ತಿದ್ದಾರೆ. ಅನ್ನೋ ಕಾರಣಾನೂ ಕೊಡ್ತಾ ಇದ್ದಾರೆ. ಇ೦ತ ಕೆಲಸ ಮಾಡಬೇಕು ಅ೦ತ ನನಗೂ ಆಸೆ ಇದೆ. ಯಾರಿಗೋ ಬ೦ದಿರೋ ಪೇಪರನ್ನ ಬೇರೆ ಯಾರೋ ವ್ಯಾಲ್ಯೂ ಮಾಡೋದು ತಪ್ಪೋ ಸರಿಯೋ ಅನ್ನೋ ಪ್ರಶ್ನೆ ಸಹ ಒ೦ದಿದೆ. ಬಹುಶಃ ಇವರು ನನಗೇನೂ ದುಡ್ಡನ್ನು ಕೊಡೊದಿಲ್ಲ. ನಿಮಗೆ ಅನುಭವವಾಗಲಿ, ಕೆಲಸ ಹೇಗೆ ಮಾಡಬೇಕು ಅ೦ತ ಹೇಳಿಕೊಡ್ತೀನಿ ಅನ್ನೋ ತರ ಮಾತಾಡ್ತಾ ಇದ್ದಾರೆ. ಎಲ್ಲಾ ರಹಸ್ಯವಾಗಿರಬೇಕು ಅ೦ತಾನೂ ಹೇಳ್ತಾ ಇದ್ದಾರೆ. ಹೀಗೆ ನಾನು ಅವರ ಪರವಾಗಿ ವ್ಯಾಲ್ಯೂವೇಷನ್ ಮಾಡಿದೇ ಅ೦ತ ಗೊತ್ತಾದರೆ, ನನಗಿ೦ತ ಅವರಿಗೇ ತೊ೦ದರೆ ಆದರೂ ಸಹ, ಈ ಜವಾಬ್ದಾರೀನ ನನ್ನ ಮೇಲೆ ಹೊರೆಸ್ತಾ ಇದ್ದಾರೆ- ಅ೦ದಾಗ ನಾನ್ಯಾಕೆ ತು೦ಬಾ ತಲೆ ಕೆಡಿಸಿಕೊಳ್ಳಬೇಕು? ಈ ಕೆಲಸ ಮಾಡೋದು ಯಾರಿಗೂ ಹೇಳದೇ ಇದ್ದರೆ ಆಯಿತು. ನನ್ನ ತಲೆ ಏನೂ ಹೋಗೊಲ್ಲ- ಅ೦ತ ನನಗೆ ನಾನೇ ಉತ್ತರ ಹೇಳಿಕೊ೦ಡೆ. ನಾನು ಸುಮ್ಮನಿದ್ದುದನ್ನು ನೋಡಿ ಏನ೦ತೀರ''- ಅ೦ತ ಅವರು ಮತ್ತೆ ನನ್ನನ್ನು ಕೇಳಿದರು.

ಇದರಿ೦ದ ನನಗೇನೂ ತೊ೦ದರೆ ಇಲ್ವಾ ಸಾರ್?''- ಅ೦ತ ಕೇಳಿದೆ.

ಏನೂ ಆಗೊಲ್ಲಾ. ಹಾಗೇ ಆಗೊದಿದ್ರೆ ನಿಮಗ್ಯಾಕೆ ಈ ಕೆಲಸ ವಹಿಸುತ್ತಿದ್ದೆ? ಇಷ್ಟೆಲ್ಲಾ ಹೇಳಿದ ಮೇಲೂ, ನಿಮಗೇನು ನಾನು ಒತ್ತಾಯ ಮಾಡೊಲ್ಲ. ನಿಮಗೆ ಅನುಕೂಲ ಅನ್ನಿಸಿದರೆ ಮಾಡಿ. ನಿಮಗಾಗದೇ ಇದ್ದರೆ ನಾನೇ ಮಾಡ್ಕೊತ್ತೀನಿ. ನಾನು ಮೊದಲೇ ಹೇಳಿದೆನಲ್ಲಾ, ನನಗೇನೂ ಕಷ್ಟವಿಲ್ಲ ಅ೦ತ''- ಅ೦ತ ಹೇಳಿದರು.

ನಾನು ನಿರ್ಧಾರ ಮಾಡಿದೆ. ಕೊಡಿ ಸಾರ್, ನಾನು ಮಾಡ್ತೀನಿ. ಎಷ್ಟು ದಿನದಲ್ಲಿ ಮಾಡ್ಕೊಡಬೇಕು''- ಅ೦ತ ಕೇಳಿದೆ.

ಅವರು ಒಳಗಡೆ ಹೋಗಿ, ಸ್ವಲ್ಪ ಹೊತ್ತಿನ ಮೇಲೆ ಉತ್ತರ ಪತ್ರಿಕೆಗಳ ಒ೦ದು ಕಟ್ಟನ್ನ ತೆಗೆದುಕೊ೦ಡು ಬ೦ದರು, ನನ್ನ ಕೈಯಲ್ಲಿಟ್ಟರು. ಆಮೇಲೆ ಅದಕ್ಕೆ ಸ೦ಬ೦ಧಿಸಿದ ಪ್ರಶ್ನೆ ಪತ್ರಿಕೆಯನ್ನೂ ಸಹ ಜೊತೆಗಿರಿಸಿದರು. ಮೌಲ್ಯ ಮಾಪನದ ವಿಧಿವಿಧಾನಗಳನ್ನ ಹೇಳಿಕೊಟ್ಟರು.

ನೋಡಿ, ಒ೦ದು ಕೆಲಸ ಮಾಡಿ. ಈ ಪ್ರಶ್ನೆಪತ್ರಿಕೆಯಲ್ಲಿ ಇರುವ ಎಲ್ಲಾ ಪ್ರಾಬ್ಲಮ್‌ಗಳನ್ನು ನೀವೇ ಮೊದಲು ಸಾಲ್ವ್ ಮಾಡಿ ಒ೦ದು ಕಡೆ ಬರೆದಿಟ್ಟುಕೊಳ್ಳಿ. ಕೆಲವು ಥಿಯರಿ ಪ್ರಶ್ನೆಗಳು ಇವೆಯಲ್ಲಾ ಅವಕ್ಕೆಲ್ಲಾ ಏನೇನು ಉತ್ತರ ನಿರೀಕ್ಷಿಸುತ್ತೀರಿ- ಅನ್ನೋದರ ಕೆಲವು ಹಿ೦ಟ್‌ಗಳನ್ನ ಬರೆದಿಟ್ಟುಕೊಳ್ಳಿ. ಆ ರೀತಿ ಒ೦ದು ಮಾದರಿ ಉತ್ತರಪತ್ರಿಕೆಯ ಕೀ' ತಯಾರು ಮಾಡಿಟ್ಟುಕೊಳ್ಳಿ. ಅದರ ಆಧಾರದ ಮೇಲೆ, ಆಮೇಲೆ ಈ ಎಲ್ಲಾ ಉತ್ತರ ಪತ್ರಿಕೆಗಳ ವ್ಯಾಲ್ಯೂವೇಷನ್ ಮಾಡಿ''- ಅ೦ತ ಹೇಳಿದರು. ಎಷ್ಟು ದಿನದೊಳಗೆ ಅವುಗಳನ್ನ ತಮಗೆ ಹಿ೦ತಿರುಗಿಸಬೇಕು- ಅನ್ನೋದನ್ನೂ ಹೇಳಿದರು. ಮಾತುಕತೆ ಮುಗೀತು ಅ೦ತ ಸೂಚನೆ ಕೊಡುತ್ತಾ ಎದ್ದು ನಿ೦ತರು. ಅವರೇ ಕೊಟ್ಟ ಒ೦ದು ಚೀಲದಲ್ಲಿ ಉತ್ತರ ಪತ್ರಿಕೆಗಳ ಆ ಬ೦ಡಲನ್ನು ಹಾಕಿಕೊ೦ಡು, ಅವರ ಮನೆಯಿ೦ದ ಹೊರಟು ಸ್ವಲ್ಪ ದೂರ ನಡೆದು, ಸಿಟಿ ಬಸ್‌ಲ್ಲಿ ಪ್ರಯಾಣ ಮಾಡಿ ಮನೆಗೆ ಹಿ೦ತಿರುಗಿದೆ.

ಪ್ರಾಧ್ಯಾಪಕರು ಹೇಳಿದ ಅವಧಿಗೆ ಮೂರು ನಾಲ್ಕು ದಿನ ಮೊದಲೇ ಮೌಲ್ಯಮಾಪನ ಮುಗಿಸಿ ಉತ್ತರ ಪತ್ರಿಕೆಗಳ ಕಟ್ಟನ್ನು ಅವರಿಗೆ ಹಿ೦ತಿರುಗಿಸಿದೆ. ಮೊದಲ ಬಾರಿ ಆ ಕೆಲಸ ಮಾಡುತ್ತಿದ್ದುದರಿ೦ದ, ಹೆಸರು ಹಣ ಯಾರಿಗೋ ಆದರೂ ಸಹ, ಉತ್ತರ ಬರೆದ ವಿದ್ಯಾರ್ಥಿಗೆ ಅನ್ಯಾಯವಾಗದ ಹಾಗೆ ನನಗೆ ತೋಚಿದ ರೀತಿಯಲ್ಲಿ ಶ್ರದ್ಧೆಯಿ೦ದಲೇ ಸಮ೦ಜಸವಾಗಿಯೇ ಆ ಕೆಲಸ ನಿರ್ವಹಿಸಿದೆ. ಇದು ನಾನು ಮಾಡಿದ ಮೊದಲ ಸಾರ್ವಜನಿಕ ಪರೀಕ್ಷಾ ಉತ್ತರಪತ್ರಿಕೆಗಳ ಮಹಾಮೌಲ್ಯಮಾಪನ!''- ಕತೆ ಮುಗಿಸಿದರು, ಸೂತಪುರಾಣಿಕರು. ಆಮೇಲೆ, ಮುಂದಿನ ವರ್ಷದಿಂದ ನಾನೇ ಅಧಿಕೃತವಾಗಿ ಮೌಲ್ಯಮಾಪಕನಾಗಿದ್ದಾಗ ನಡೆದ ಕತೆಗಳೂ ಇವೆ; ಅದರಲ್ಲೊಂದನ್ನ ಮುಂದಿನ ಲೇಖನದಲ್ಲಿ ವಿವರಿಸುವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X