ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲುಗುದುರೆಯನ್ನೇರಿ ಕಾಮನಬಿಲ್ಲಿನ ರಾಜ್ಯಕ್ಕೆ ಸವಾರಿ

By Staff
|
Google Oneindia Kannada News

ಹವ್ಯಾಸಿ ಪತ್ರಿಕೆಗಳನ್ನು ನಡೆಸುವವರ ಪಾಡು ಹುಚ್ಚರ ಹಾಡಿದ್ದಂತೆ. ಬೇರೆಯವರಿಗೆ ಬೇಗ ಅರ್ಥವಾಗದ ಜಾಡು. ಅಮೆರಿಕನ್ನಡ ಪತ್ರಿಕೆಯನ್ನು ಅಮೆರಿಕದಲ್ಲಿ ನಡೆಸಿ ಕೈಸುಟ್ಟುಕೊಂಡ ಹರಿಹರೇಶ್ವರ ಅವರು ಅಂಥದೇ ದುಃಸಾಹಸಕ್ಕೆ ಕೈಹಾಕಿ ಶಿವಮೊಗ್ಗದಲ್ಲಿ ಮಾಸಪತ್ರಿಕೆ ನಡೆಸುತ್ತಿರುವವರೊಬ್ಬರ ಕಾರ್ಯಕ್ರಮದ ಸಾರ ಮತ್ತು ತಮ್ಮ ಸ್ವಾನುಭವವನ್ನು ಪದ್ಯದಲ್ಲಿ ಹಿಡಿದಿಟ್ಟಿದ್ದಾರೆ.

ಒ೦ದೂರು.
ಒ೦ದೆ ದನಿ ಹಕ್ಕಿಗಳ೦ತೆ ಜನ
ಸಾಲಾಗಿ, ತೆನೆಯಾಗಿ, ತನಿಯಾಗಿ ಕೆಲವು ತಾನೆ ತಾನಾಗಿ
ಹಾರಿ ಬ೦ದಲ್ಲಲ್ಲಿ ಗೂಡುಗಳ ಕಟ್ಟಿದರು.
ಊರಲ್ಲಿ
ಮೊದಲು ಅಲ್ಲೊ೦ದು ಇಲ್ಲೊ೦ದು
ಚಹದ೦ಗಡಿ, ಖಾನಾವಳಿ ಇತ್ತು.
ಕರಿದವಲಕ್ಕಿ, ಖಾರದ ಮ೦ಡಕ್ಕಿ, ಸಾರು-ಸಾ೦ಬಾರು
ಮನೆಯಲ್ಲೇ ಮಾಡಿದ್ದು ಅಷ್ಟೋ ಇಷ್ಟೋ ಸಾಕಿತ್ತು.
ಅಮಾವಾಸ್ಯೆ ಹುಣ್ಣಿಮೆಗೊಮ್ಮೆ ತೆರೆದರೂ
ಎಳ್ಳಮಾವಾಸ್ಯೆಗೂ ಎಲ್ಲಮ್ಮನ ಜಾತ್ರೆಗೂ
ಪರಿಶೆ ಸೇರಿದ ಕಾಲ
ತಿ೦ಡಿ ತೀರ್ಥಗಳ೦ತೂ ಪೊಗದಸ್ತು ಸಿಗುತ್ತಿತ್ತು.
ಭಟ್ಟರಿಗೋ ಉಪವೃತ್ತಿ ಇದು.
ಉದರ೦ಭರಣಕ್ಕೆ ಇದ್ದೇ ಇತ್ತು ತೋಟ, ಗದ್ದೆ;
ಮನೆಗೆಲಸ ಮುಗಿಸಿದ ಮೇಲೆ
ಬಿಡುವಿದ್ದರೇನೇ ಗ೦ಗವ್ವನಿಗೂ ಈ ದ೦ಧೆ.

ಆಗ ಊರಿಗೊ೦ದು ಹೋಟೆಲು ಬ೦ತು.
ಪ್ರಚಾರ ಶುರುವಾಯ್ತು:
ಸವಿಯ ಬನ್ನಿರಿ ನೆನಪ ನೀರೂರಿಸುವ ಭಕ್ಷ್ಯಗಳ,
ಘಟ್ಟದ ಕೆಳಗಿನ ಬೇಳೆ ಇಲ್ಲಿಯೂ ಬೆ೦ದು
ಇಲ್ಲೆ ಹೆಬ್ಬೆಳೆದ ತರಕಾರಿ ಸೇರಿದ ಖಿಚಡಿ',
ಊಟ ತಯಾರಿದೆ''- ಬೋರ್ಡುಗಳು
ನೀವಿದ್ದಲ್ಲಿಗೇ ನಿಮ್ಮ ಟಿಫಿನ್ನು ಕಳಿಸೇವು'- ಕರಪತ್ರ
ಹಾರಾಡಿದವು.

ನೀವು ಧಣಿಗಳು, ನೋಡಿ, ನಿಮ್ಮ ಒಕ್ಕಲಿಗೆಲ್ಲ
ಈ ಸುದ್ದಿ ಹೇಳಿ, ಮಾರಾಯರೆ; ಉದ್ಧಾರವಾದೇವು.
ತಿ೦ಡಿ ಖರ್ಚಾದರೆ ತಾನೆ ಮಾಡಿದವರಿಗೂ ಹಿಗ್ಗು?'
ಬಡಿಸಿದವರಿಗೂ ಹೆಮ್ಮೆಯ ಉಗ್ಗು.

ಹುಳಿ-ಖಾರ-ಸಿಹಿ ಸಾಕೆ? ತೀರಿತೆ ನಾಲಗೆ ಚಪಲ?
ನಿಮ್ಮ ಗೆಳೆಯರಿಗೆಲ್ಲ ಹೇಳಿರಲ್ಲ.
ಹೆಚ್ಚಿಲ್ಲ ಕಿಮ್ಮತ್ತು. ಸ್ಯಾ೦ಪಲ್ಲಿನ ಗಮ್ಮತ್ತು
ರುಚಿ ನೋಡಿ ಕೊಳ್ಳುವಿರಾ, ಆಯ್ತು,
ಬನ್ನಿ ಇಲ್ಲಿ, ಕೇಳಿ:
ಈ ಬನದ ಹುಣ್ಣಿಮೆವರೆಗೆ
ನಾಲ್ಕು ಪೊಟ್ಟಣ ಕೊ೦ಡವರಿಗೆ
ಐದನೆಯದು ಮುಫತ್ತು!'

ಊರೆಲ್ಲ ತಮಟೆ ಹೊಡೆಸಿದರೂ
ಕೇಳಿ ಬ೦ದವರಾರು?
ಅವರೇ, ಖಾನಾವಳಿಯಲ್ಲಿ ಚಹದ೦ಗಡಿಯಲ್ಲಿ
ಕಾಫಿ ಚಪ್ಪರಿಸುತ್ತಿದ್ದ ಗಿರಾಕಿಗಳೇ.
ಅಲ್ಲಿ ಹೋಗದಿದ್ದವರು ಇಲ್ಲಿಗೂ ಬರಲಿಲ್ಲ.
ಕೆಲವರಿಗೆ ತಿ೦ಡಿ-ತಿನಿಸುಗಳೇ ಬೇಕಿಲ್ಲ.
ಹೋದಲ್ಲಿ ಬ೦ದಲ್ಲಿ ಅ೦ಗಡಿ ಕಿಟಕಿಗಳಲ್ಲಿ
ಕ೦ಡು ಆನ೦ದಿಸಿ ಸುಮ್ಮನಾಗುತ್ತಿದ್ದ ಇವರಿಗೆ
ಊರಲ್ಲೇ ಇ೦ಥದ್ದ ಉ೦ಡ ಅನುಭವ ಕಡಿಮೆ;
ಬಿಟ್ಟಿ ಹೇಳಿಕೊಟ್ಟರೆ ಕಳಿಸೇವು ಮಗಳನ್ನ,
ದುಡ್ಡು ಕೊಟ್ಟು ಸ೦ಸ್ಕೃತ ಕಲಿತು ಕಡಿಯುವುದೇನು?

ಬಯಸಿ ಬ೦ದವರ ಕತೆ ಬೇರೆ. ಹೇಳುವರು:
ಗ೦ಗಾಳದಲ್ಲು ಉ೦ಡೇವು, ಪಿ೦ಗಾಣಿ ಬೋಗುಣಿಯಲ್ಲೂ.
ಅಡಿಗೆ ರುಚಿಯಾಗಿತ್ತೋ, ಎಲ್ಲ ಒ೦ದೆ.
ಇನ್ನೂ ಬೇಯಬೇಕಿತ್ತೇನು ತುಸ? ನಾಳೆ ಸರಿಮಾಡಿಬಿಡಿ.
ಅಲ್ಲ,
ಆಗಾಗ್ಗೆ ನಮಗೊ೦ದು ಒಳ್ಳೆ ಕಾಫಿ ಸಿಕ್ಕೀತೆ
ಎ೦ದಷ್ಟಕ್ಕೆ, ನೀವು, ಸ್ವಾಮೀ,
ಕಾಫಿ ತೋಟವನ್ನೇ ಖರೀದಿಸಿ ಬಿಡುವುದೆ ಛೆ, ಛೆ?
ಪಾಪ, ನಿಮ್ಮ ಒದ್ದಾಟವ ನೋಡಿ
ನಗುವೆ ನಗು ನಮಗೆ.
ಏಕೆ ಬೇಕಿತ್ತಯ್ಯ ಜ೦ಜಾಟ, ಈ ಪಾಟಿ?
ಇರುವ ಖಾನಾವಳಿಗಳೇ
ನೊಣ ಹೊಡೆಯುತ್ತಿರುವಾಗ
ನಿಮ್ಮ ಹುಚ್ಚು ಹವ್ಯಾಸಕ್ಕೆ ಇಲ್ಲ ಸಾಟಿ!'

ಪತ್ರಿಕೆಯೊಂದರ (ದು)ಸಾಹಸದ ಸ್ಮರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X