• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಿಕೆಯೊಂದರ (ದು)ಸಾಹಸದ ಸ್ಮರಣೆ

By Staff
|

ಒಂದು ದಿನಪತ್ರಿಕೆಯೇ ಆಗಲಿ ಮಾಸಪತ್ರಿಕೆಯೇ ಆಗಲಿ ಅದರ ಉಸಿರಿನ ಹಿಂದೆ ಸಂಪಾದಕರು ಮತ್ತು ಪ್ರಕಾಶಕರ ಹೆಂಡಂದಿರ ಸಹಕಾರ, ಸಂಯಮವಿದ್ದೇ ಇರುತ್ತದೆ. ಪತ್ರಿಕೆಯ ಯಶಸ್ಸಿಗೆ ಸಂಪಾದಕ ಮತ್ತು ಪ್ರಕಾಶಕರನ್ನು ಹಾಡಿಹೊಗಳುವ ಮಂದಿಕೊನೆಗೆಅವರ ಮಡದಿಯರನ್ನು ಸ್ಮರಿಸುವುದೇ ಮರೆತಿರುತ್ತಾರೆ. ಅಂಥ ಸ್ಮರಣೆಗೆ ನಾಂದಿ ಹಾಡಿದ ಕಾರ್ಯಕ್ರಮದ ವರದಿ ಇಲ್ಲಿದೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

Shikaripura Harihareshwaraಮೊನ್ನೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದ ಶಿವಮೊಗ್ಗಕ್ಕೆ ಹೋಗಿದ್ದೆ, ಹೆಂಡತಿ ನಾಗಲಕ್ಷ್ಮಿಯೊಡನೆ. ಒಂದು ಪತ್ರಿಕೆಯ ಹತ್ತನೆಯ ವಾರ್ಷಿಕ ಸಮಾರಂಭ ಅದು. ಸತತವಾಗಿ ನೂರಾ ಇಪ್ಪತ್ತು ಸಂಚಿಕೆಗಳನ್ನು ಪ್ರಕಟಿಸಿದ, ಮಿತ ಆಯ-ವ್ಯಯದ, ಆ ಸಣ್ಣ ಪ್ರಮಾಣದ ಮಾಸಪತ್ರಿಕೆಯ ಸಾಹಸ ಮೆಚ್ಚತಕ್ಕದ್ದೇ. ಚಂದಾದಾರರನ್ನೇ ಅವಲಂಬಿಸಿದ, ಅಭಿಮಾನಿ ಓದುಗರನ್ನೇ ಆಶ್ರಯಿಸಿದ, ಒಂದು ಸಂಕುಲದ ಭಾಷಿಗರ ಬರಹಗಾರರನ್ನ ಪ್ರೋತ್ಸಾಹಿಸುವ, ಆ ಜನಾಂಗದವರಲ್ಲಿನ ಆಗುಹೋಗುಗಳನ್ನ ದಾಖಲಿಸುವ, ತಮ್ಮತಮ್ಮವರಲ್ಲಿನ ಹಿಂದಿನ ಈಗಿನ ಮುಂಬರುತ್ತಿರುವ ಸಾಧಕರನ್ನ ಪರಿಚಯಿಸುವ, ಪ್ರತಿಭಾವಂತರನ್ನ ಗುರುತಿಸುವ, ಬೆಳೆವ ಕುಡಿಗಳಿಗೆ ನೀರೆರೆದು ಪೋಷಿಸುವ ಆಡುಂಬೊಲಗಳನ್ನು ಹಸನಾಗಿಸುತ್ತಿರುವ ಪತ್ರಿಕೆ ಆ ಸಂಕೇತಿ ಸಂಗಮ'.

ಬೆಳಗ್ಗೆ ಕಾರ್ಯಕ್ರಮವನ್ನು ನಾನು ಉದ್ಘಾಟಿಸಿದ ಕ್ಷಣದಿಂದ ಹಿಡಿದು, ರಾತ್ರಿ ಸುಮಾರು ಒಂಬತ್ತರ ವೇಳೆಯವರೆಗೆ ನಿರಂತರವಾಗಿ ಸಾಹಿತ್ಯಸಲ್ಲಾಪಗಳು, ಚರ್ಚಾಗೋಷ್ಠಿಗಳು, ವಿಚಾರಸಂಕಿರಣಗಳು ಅಲ್ಲಿ ಸಮಾವೇಶಗೊಂಡಿದ್ದವು. ವಾಸ್ತವಿಕವಾಗಿ ಏನೂ ಇಲ್ಲದ೦ತಿದ್ದ ಒಂದು ನಿರ್ವಾತ ಪರಿಸ್ಥಿತಿಯಿಂದ ಒಡಮೂಡಿ, ಮಜ್ಜಿಗೆಯೊಳಗಣ ಬೆಣ್ಣೆಯಂತೆ ಮೆಲ್ಲನೆ ತೇಲಿಕೊಂಡು ಸಾಗಿ, ಈಗ ಮೈತುಂಬಿಕೊಂಡು ಹದಿವಯಸ್ಸಿನ ಕಿಶೋರಾವಸ್ಥೆಗೆ ಕಾಲಿಡುತ್ತಿರುವ ಬೆಡಗಿ ಹುಡುಗಿಯೋಪಾದಿಯಲ್ಲಿ ಎದುರುನಿಂತ ಪತ್ರಿಕೆಯಾಗಿತ್ತು- ಆ ಸಂಕೇತಿ ಸಂಗಮ; ಅದರ ಬೆರಗನ್ನು ಮೆಚ್ಚುತ್ತಾ ವೇದಿಕೆಯನ್ನು ಅಲಂಕರಿಸಿದವರೆಲ್ಲರೂ ಬೆಚ್ಚನೆಯ ಮಾತಿನ ಕುಚ್ಚುಗಳಿಂದ ಮಾತಿನ ಮಂಟಪಗಳನ್ನ ಕಟ್ಟುತ್ತಿದ್ದರು.

ಮಡಿಲು ಜಗ್ಗಿ ನೆಲಮುಟ್ಟುವಷ್ಟು ಹರಕೆಯ ತುಂಬುಸೇಸೆಗಳನ್ನ ಶಿರಬಾಗಿದವರ ತಲೆಯ ಮೇಲಿರಿಸಿ, ಹರಿವಾಣ ತುಂಬಿ ತುಳುಕುವಷ್ಟು ಹಾರೈಕೆಗಳನ್ನ, ಗಂಗಾಳ ತುಂಬಿ ಹೊರಚೆಲ್ಲುವಷ್ಟು ಆಶೀರ್ವಚನ ಸುಧಾಸೇಚನಗಳನ್ನ, ತಾಟು ತುಂಬುವಷ್ಟು ಆಶಯನುಡಿಗಳನ್ನ ಮನೆಯ ಹಬ್ಬಕ್ಕೆ ದೂರದಿಂದಲೇ ಹರಸಿದ ಹಿರಿಯರು ತುಂಬು ಸಂತೋಷದಿಂದ ಕಳುಹಿದ್ದರು. ಸಮಾರಂಭಗಳೇ ಹೀಗೆ; ಬಂದವರಿಗಿಂತ ಬಾರದೇ ಉಳಿದವರು, ಅನಿವಾರ್ಯ ಕಾರಣಗಳಿಗಾಗಿ ತಪ್ಪಿಸಿಕೊಂಡವರು ತಮ್ಮನ್ನು ಒಪ್ಪಿಸಿಕೊಳ್ಳುವ, ನೆಪ್ಪುಗಳನ್ನು ಹಂಚಿಕೊಳ್ಳುವ ಒಂದು ಕ್ರಮ ಇದು. ಇನ್ನು ಕೆಲವರಂತೂ- ನಾನು ಬರಲಿಲ್ಲವೆ೦ದು ಬೇಸರಿಸುವುದು ಬೇಡ; ನೀವು ತೊಡಗಿರುವ ಕಡಲ ಈಜುವೋಟದಲ್ಲಿ ಅಡೆತಡೆಗಳನ್ನ ಲೆಕ್ಕಿಸದೆ ಮುನ್ನಡೆಯಿರಿ; ಜೊತೆಗಿದ್ದೇನೆ ಎಂಬುದರ ಸಂಕೇತವಾಗಿ, ಇಗೋ ಕೊಳ್ಳಿ, ಹತ್ತು ಸಾವಿರ ರೂಪಾಯಿನ ಒಂದು ಚೆಕ್'- ಎಂದು ಬರೆದು, ಬರಿ ಬೆಣ್ಣೆ ಮಾತಿನ ಸಣ್ಣವರನ್ನ ತಣ್ಣಗಾಗಿಸಿದವರೂ ಇದ್ದರು. ಇರಲಿ ಬಿಡಿ, ಬಗೆ ಬಗೆಯ ಬಣ್ಣದ ಜನ, ಜಗತ್ತೇ ಹಾಗೆ.

ಇರುಳು ಹಗಲೆನ್ನದೆ, ಗಾಳಿ ಮಳೆಯೆನ್ನದೆ, ಕುಳಿರು ಬಿಸಿಲೆನ್ನದೆ, ಉಬ್ಬರ ಇಳಿತಗಳನ್ನೂ ಲೆಕ್ಕಿಸದೆ, ಹೇಗೆ ಪತ್ರಿಕೆಯನ್ನು ತೂಗಿಸಿಕೊಂಡು ದುರ್ಗಮ ಗಿರಿ ಕಾಂತಾರ ಮರು ಜಾತ್ರಿರ್ ಹೋಷಿಯಾರ್, ಲಂಗಿತ ಹಬೆ ದುಸ್ತರ ಪರಬಾರ್'- ಎನ್ನುತ್ತ, ಅಗ್ನಿವೀಣೆಯನ್ನು ಮೀಟುತ್ತ, ಅಂಬಿಗರಾಗಿ ಹಾಯಿದೋಣಿಯನ್ನು ನಡೆಸಿಕೊಂಡು ಪ್ರಕಾಶಕರು ಮತ್ತು ಸಂಪಾದಕರು ಇಲ್ಲಿಯವರೆಗೆ ಬಂದದ್ದನ್ನು ವೇದಿಕೆ ಹತ್ತಿದವರೆಲ್ಲರೂ ಶ್ಲಾಘಿಸಿದರು.

ನಮಗಂತೂ, ನಾವು ಎ೦ಬತ್ತಮೂರರಿಂದ ಕೈಕಚ್ಚುವವರೆಗೆ ಕೈಸುಟ್ಟುಕೊಳ್ಳುವವರೆಗೆ, ಆ ದಶಕಗಳ ಅವಧಿಯಲ್ಲಿ ಅಮೆರಿಕನ್ನಡವನ್ನು ನಡೆಸಿದ ನೆನಪೇ ದಟ್ಟವಾಗಿ ಅಲ್ಲಿ ಮರುಕಳಿಸುತ್ತಿತ್ತು. ಅವರಂತೆ, ನಾವೂ ಏನೆಲ್ಲ ಕನಸುಗಳನ್ನ ಕಟ್ಟಿಕೊಂಡು ಆ ದಿನಗಳಲ್ಲಿ ಆಗ ಮೂಡಿದ, ಮನವನ್ನು ಕಾಡಿದ, ಸೆಳೆದಾಡಿಸಿದ ಆ ಬಿಸಿಲುಗುದುರೆಯನ್ನೇರಿ ಕಾಮನಬಿಲ್ಲಿನ ರಾಜ್ಯಕ್ಕೆ ಸವಾರಿಹೊರಟಿದ್ದೆವು, ಅಮೆರಿಕದ ಕನ್ನಡಿಗರನ್ನು ನಮ್ಮ ಜೊತೆಗೆ ಕರೆದೊಯ್ಯ ತೊಡಗಿದ್ದೆವು. ಹೌದು, ಹವ್ಯಾಸಿಗಳ ಪಾಡೇ ಹಾಗೆ; ಹುಚ್ಚರ ಹಾಡೇ ಹಾಗೆ. ಬೇರೆಯವರಿಗೆ ಬೇಗ ಅದು ಅರ್ಥವಾಗದ ಜಾಡು. ಒಳ್ಳೆಯ ಕಾಫಿ ಸಿಕ್ಕರೆ ಸಾಕು ಎಂದುಕೊಂಡ ಹುಂಬರು ಕಾಫಿಯ ತೋಟವನ್ನೇ ಕೊಂಡುಕೊಂಡಾಯ್ತು. ನಾವೂ ತೆಗೆದಿದ್ದೆವು ಒಂದು ಖಾನಾವಳಿಯನ್ನ. ಆದದ್ದನ್ನ ನೆನೆಸಿಕೊಂಡೆವು: (ಇಲ್ಲಿದೆ ಓದಿ ಕವನ).

***

ಸಾಹಿತ್ಯಪತ್ರಿಕೆಗಳಲ್ಲಿ ನೂರಾರು ಸಸಿಗಳು ಕುಡಿಯಲ್ಲೇ ಕಮರಿಹೋಗಿರುವುದು ಐತಿಹಾಸಿಕ ದುರಂತ, ಆದರೂ ಕಟು ಸತ್ಯ. ವ್ಯವಹಾರಶೂನ್ಯತೆಯ ಬಲಿಪಶುಗಳಾಗಬೇಡಿ- ಎಂದು ಚೀರಿ ಹೇಳಬೇಕೆನ್ನಿಸಿತು, ನಮಗಿಬ್ಬರಿಗೂ ಶಿವಮೊಗ್ಗದಲ್ಲಿ ಆ ದಿನ.

ಇಂತಹ ಪತ್ರಿಕೆಗಳ ಉದ್ದೇಶಗಳು ಘನವಾಗಿರುತ್ತವೆ; ಸಮಾಜದ ಉನ್ನತಿಯೇ ಕಲಶಪ್ರಾಯದ ಸನ್ನುತ ಧ್ಯೇಯವಾಗಿ ಇಲ್ಲಿ ರಾರಾಜಿಸುತ್ತಿರುತ್ತದೆ. ಶಾಸಕಾಂಗ ನ್ಯಾಯಾಂಗ ಆಡಳಿತಾಂಗಗಳು ಮಾಡಲಾಗದ ಎಚ್ಚರಿಸುವ ಚಚ್ಚರದ ಜವಾಬ್ದಾರಿಯ ಹೊಣೆಯನ್ನ ತಾನು ಹೊತ್ತಿರುವೆನೆಂಬ ಹೆಮ್ಮೆ, ಕೆಲವೊಮ್ಮೆ ಭ್ರಮೆ, ಈ ಪತ್ರಿಕೋದ್ಯಮದ ನೇತಾರರಿಗಿರುತ್ತದೆ, ಸಂವಹನವೇ ಜೀವಾಳವಾಗಿರುವ ಸುದ್ದಿ ಮಾಧ್ಯಮದ ಈ ಜನಕ್ಕೆ ಸಾಮಾನ್ಯ ಸಂಗತಿಗಳೆಂದರೆ ಒಂದು ತರಹಾ ಕೊಂಚ ಅಸಡ್ಡೆ. ಸುಗ್ಗಿಯೆಂದರೆ ಸ್ವಲ್ಪ ಕುಗ್ಗುವ ಮನೋಭಾವ. ಎಲ್ಲರಿಗೂ ಗೊತ್ತಿರುವ ಮಾಹಿತಿಯನ್ನ ಮತ್ತೆ ಹೇಳುವುದೆಂದರೆ, ಹಳೆಯ ಕೂಳನ್ನ ಮಿರುಮಿರುಗುವ ಎಷ್ಟೇ ಹೊಸ ಪಿಂಗಾಣಿ ಬೋಗುಣಿಯಲ್ಲಿ ತಂದಿರಿಸಿದರೂ, ಇವರಿಗೆ ಅಗ್ಗದ ಸರಕಿಗೆ, ಮುಗ್ಗಲು ದಿನಸಿಗೆ ಒಗ್ಗದ ಬಿಮ್ಮನಸಿಯ ಮನಸ್ಸಿನಂತೆ ರವಷ್ಟು ಜುಗುಪ್ಸೆ. ಅವರಿವರಿಗೆ ತುಸು ಚುರುಕು ಮುಟ್ಟಿಸುವುದರಲ್ಲೇ ಪತ್ರಿಕೆಗಳವರಿಗೆ ಏನೋ ಒಂದು ತರಹಾ ಮಜಾ. ಸತ್ತ ನಾಯಿಯನ್ನ ಎಬ್ಬಿಸಿ ಬಡಿದರೆ ಬಂದೀತೇನು ಸ್ವಾಮಿ, ಖುಷಿ? ಹತ್ತುತ್ತಿರುವವರ ಕಾಲೆಳೆದರೆ, ಹೇಗೆ ಬೀಳದೆ ನಿಭಾಯಿಸಿಯಾರೆಂದು ಖುದ್ದು ನೋಡುವ ಜಿದ್ದು. ಮೇಲೆ ಹತ್ತಿದವರ ಒಳಕೋಣೆಗಳಲ್ಲಿನ ಕಪಾಟುಗಳಲ್ಲಿ ಅಸ್ತಿಪಂಜರಗಳ ಹುಡುಕಾಟ, ತಡಕಾಟ, ಎಲ್ಲಾ ಕ್ಷೇತ್ರಗಳ ಮುತ್ಸದ್ದಿಗಳ ಮೇಲೂ ಇವರ ಒಂದು ಕಣ್ಣು ಇದ್ದೇ ಇದ್ದು, ಅವರನ್ನ ಮುಖಾಮುಖಿಯಾಗಿ ಎದುರುಗೊಂಡು ಬಗ್ಗುಬಡಿಯುವುದರಲ್ಲೂ ಇವರು ನಿಷ್ಣಾತರು.

ಸಾಹಿತ್ಯಪತ್ರಿಕೆಗಳಲ್ಲಿ ರಾಜಕೀಯಕ್ಕೆ ಎಡೆಯಿಲ್ಲವೆಂಬುದು ಅರ್ಧಸತ್ಯ. ಅಲ್ಲಿ ಬುದ್ಧಿಜೀವಿಗಳ ಮುಸುಕಿನ ಗುದ್ದಾಟವೇ ಬೇರೆ ತರಹ. ಕೆಲವೊಮ್ಮೆ, ಹೆಂಗಸರ ಮಾತಿನ ಒಳ ಅರ್ಥ ಗಂಡಸರಿಗೆ ಸುತರಾಂ ತಿಳಿಯಗೊಡದೆ೦ದು ಹೇಳುತ್ತಾರಲ್ಲ, ಹಾಗೆ ಎಂದು ಬೇಕಾದರೆ ಅ೦ದುಕೊಳ್ಳಿ. ಆ ಅವನೇ? ಅವನು ಕವಿಯೇ ಅಲ್ಲವೆಂದು, ಸಾಹಿತಿಯೇ ಅಲ್ಲವೆಂದು ನಾನು ಬಗೆದಿರೆ, ಅವನ ಬಗ್ಗೆ ನಾನು ಮುನಿಯುವುದೆಂದರೆ ಏನರ್ಥ- ಎನ್ನುವ ಕೆಲವು ಮಹಾಕವಿಪುಂಗವರೂ, ಸ್ವತ: ಏನೂ ಸೃಜನಾತ್ಮಕವಾಗಿ ಬರೆಯಲಾಗದ ವಿಮರ್ಶಕರೂ ಇಲ್ಲವೇ? ನೆಲ್ಲಕ್ಕಿ ಅನ್ನ ಕೆನೆ ಮೊಸರು ಬಲ್ಲೆ; ಅಲ್ಲಿಹುದು, ಆದರೂ ಏಕೊಲ್ಲೆ? ಇಲ್ಲದಕೆ, ಅವು ನನ್ನಲ್ಲಿಲ್ಲದಕೆ ಒಲ್ಲೆ! ಅಥವಾ, ಇದನ್ನು ಗಮನಿಸಿ: ನಲ್ಲ ಒಲ್ಲಿ(=ಅಂಗವಸ್ತ್ರ)ಯನೊಲ್ಲ. ನಲ್ಲ ಬೋನೊಲ್ಲ(ಬೋನ=ಅನ್ನ, ಆಹಾರ); ಅಲ್ಲ(=ಶುಂಠಿ)ವನೂ ಒಲ್ಲ, ಮೊಸರೊಲ್ಲ; ಯಾಕೊಲ್ಲ? ಇಲ್ಲ, ಅದಕೊಲ್ಲ- ಸರ್ವಜ್ಞ!

ಇರಲಿ, ರಥ ಎಲ್ಲೆಲ್ಲೋ ಅಡ್ಡಾದಿಡ್ಡಿ ಸಾಗಿತು. ಪ್ರಸ್ತುತ ವಿಷಯಕ್ಕೆ ಬರೋಣ. ಬಹಳ ಮುಖ್ಯವಿಷಯಗಳನ್ನ ಚರ್ಚಿಸುತ್ತ, ಶಿವಮೊಗ್ಗದಲ್ಲಿ ಆ ದಿನದ ಸಮಾರಂಭ ಕಳೆಗಟ್ಟಿತು. ಮುಂಬರುವ ದಿನಗಳಲ್ಲಿ ಪತ್ರಿಕೆಯ ಇತೋಪ್ಯತಿಶಯದ ಸರ್ವಾಂಗೀಣ ಅಭಿವೃದ್ದಿಗೆ ನೀಲಿನಕಾಶೆ ಸಿದ್ಧವಾಯಿತು. ಜನಾಂಗ ತನ್ನ ಒಗ್ಗಟ್ಟಿನ ತಾರಕಮಂತ್ರವನ್ನು ಪುನರುಚ್ಚರಿಸಿತು. ಕುಲಬಾಂಧವರು ಬೇರೆ ಬೇರೆ ಕಡೆ ವಲಸೆ ಹೋಗಿ, ಅಲ್ಲಲ್ಲಿ ನೆಲಸಿದುದೇ ಕಾರಣವಾಗಿ ಒಳಪ೦ಗಡಗಳಾಗಿ ಒಡೆದಿರುವುದನ್ನ ಮತ್ತೆ ಕೂಡಿಸಿಕೊಳ್ಳುವ, ಒಂದುಗೂಡುವಿಕೆಯ ಭಗೀರಥಪ್ರಯತ್ನಕ್ಕೆ ನಾಂದಿಹಾಡಿ, ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಹಬಾಳ್ವೆ, ನಾವೆಲ್ಲ ಒಂದೇ- ಎನ್ನುವ ಹರ್ಷ ಉಲ್ಲಾಸ ಮಳೆಗರೆಯಿತು. ದಿನದುದ್ದಕ್ಕೂ ಸಂಪಾದಕರನ್ನ, ಪ್ರಕಾಶಕರನ್ನ ಅವರುಗಳ ಸಾಹಸ ಸಾಧನೆಗಳನ್ನ ಹೊಗಳುತ್ತಲೇ ಕಾರ್ಯಕ್ರಮ ಮುಂದುವರಿದಿತ್ತು. ಸಮಾರೋಪದ ಕಾರ್ಯಕ್ರಮ ಸಂಪನ್ನವಾಯಿತು.

ಸಭೆಯಲ್ಲಿ ಕೊನೆಯವರೆಗೂ ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬಾಕೆಗೆ ವೇದಿಕೆಯ ಮೇಲಿನಿಂದ ಹೊಮ್ಮಿ ಬರುತ್ತಿದ್ದ ಶ್ರೀವಾಣಿಗಳಲ್ಲಿ ಏನೋ ಒಂದು ಕೊರತೆ ಇದ್ದ೦ತೆ ಭಾಸವಾಗಿ ಬಾಧಿಸುತ್ತಿತ್ತು. ಕೊನೆಗೆ ತಡೆಯಲಾರದೆ, ಅಧ್ಯಕ್ಷ ಭಾಷಣಕ್ಕೆ ಕ್ಷಣಕಾಲ ಮುನ್ನ, ಎರಡು ನಿಮಿಷ ಮಾತನಾಡಲು ಅನುಮತಿಯನ್ನ ಕೇಳಿ ಪಡೆದಳು; ಆ ಹೆಂಗಸು ವೇದಿಕೆ ಹತ್ತಿದಳು.

ಇಲ್ಲಿಯವರೆಗೂ ನೀವು ಈ ಪತ್ರಿಕೆಯ ಸಾಧನೆಯ, ಅದಕ್ಕೆ ಕಾರಣರಾದವರ ಬಗ್ಗೆ ಹೊಗಳಿ ಹಾಡಿದ ಮಾತುಗಳನ್ನೆಲ್ಲ ಕೇಳಿದಿರಿ. ನಮಗೂ ಸ೦ತೋಷವಾಯಿತು. ಇದೇ ಹಾದಿಯಲ್ಲಿ ಸ್ವಲ್ಪಕಾಲ ನಡೆದ ಅನುಭವ ಇದ್ದುದರಿಂದ ನಮಗೆ ಇಂತಹ ಸಾಹಸದ ಬಗ್ಗೆ ಗೌರವ, ಹೆಮ್ಮೆ ಮತ್ತು ಸಂತೋಷ ಬಹುಶ: ನಿಮ್ಮಲ್ಲಿ ಹಲವರಿಗಿಂತ ಇಮ್ಮಡಿ ಮುಮ್ಮಡಿ ನಾಲ್ಮಡಿ ಆಗುತ್ತಿದೆ. ಆದರೆ, ನೀವೆಲ್ಲ ಒಂದು ಅಂಶವನ್ನು ಏಕೆ ಮರೆತಿರೋ ನನಗಂತೂ ತೋಚುತ್ತಿಲ್ಲ. ಸಂಪಾದಕರಿಗೆ ಪ್ರಕಾಶಕರಿಗೆ ಹೆಗಲೆಣೆಯಾಗಿ ಸಮಸಮನಾಗಿ ಈ ಹತ್ತು ವರ್ಷಕಾಲ ದುಡಿದು, ಈ ಕೀರ್ತಿಗೆ ನಿಜಕ್ಕೂ ಸಮಾನಭಾಜನರಾದ ಸಂಪಾದಕರ ಹೆಂಡತಿ ಮತ್ತು ಪ್ರಕಾಶಕರ ಹೆಂಡತಿ ದಯವಿಟ್ಟು ವೇದಿಕೆಗೆ ಬರುತ್ತಿರಾ?''- ಎಂದು ಕೇಳಿಕೊಂಡಳು. ನಾಚುತ್ತಾ, ನಾಚುತ್ತಾ ಅವರಿಬ್ಬರೂ ವೇದಿಕೆಯನ್ನು ಹತ್ತಿದರು.

ಆಮೇಲೆ, ವೇದಿಕೆಯ ಮೂಲೆಯಲ್ಲಿ ಉದ್ಘಾಟನೆಯ ದೀಪಸ್ತಂಭಕ್ಕೆ ಅಲ೦ಕರಿಸಿದ್ದ ಮಲ್ಲಿಗೆ ಮಾಲೆಯನ್ನು ತುಂಡರಿಸಿ, ಆಕೆ ಅವರಿಬ್ಬರ ಮುಡಿಗೆ ಮಲ್ಲಿಗೆಯ ವೇಣಿಯನ್ನಾಗಿ ಆ ಹಾರವನ್ನು ಮುಡಿಸಿದಳು. ಜೊತೆಗೆ ಹಣದ ಉಡುಗೊರೆಗಳನ್ನೂ ಅವರ ಕೈಗಳಲ್ಲಿತ್ತು, ಅವರನ್ನು ಅಪ್ಪಿಕೊಂಡಳು. ಸಭಿಕರೆಲ್ಲ ಉಘೇ ಉಘೇ' ಎಂದು ಹರ್ಷೋದ್ಗಾರ ಮಾಡುತ್ತಿರಲು, ಚಪ್ಪಾಳೆಗಳ ಅಲೆಗಳ ನಡುವೆ, ಹುಚ್ಚು ಸಾಹಸಕ್ಕೆ ಕೈಹಾಕಿದ ಗಂಡಂದಿರನ್ನು ಮಕ್ಕಳಂತೆ ನೋಡಿಕೊಂಡಿರುವ ಆ ಸತೀಮಣಿಯರು ಅನಿರೀಕ್ಷಿತ ಆನಂದದಿಂದ ಕಣ್ಣೀರಿಡುತ್ತಿರಲು, ಅವರಿಗೆ ಶುಭ ಹಾರೈಸಿ, ಕೆಳಗಿಳಿದು, ಬಂದು ಸಭೆಯಲ್ಲಿ ಕುಳಿತಳು. ಹೀಗೆ, ಮರೆತ ಉಪಕಾರಸ್ಮರಣೆಯನ್ನ ನೆನಪಿಸಿದುದಕ್ಕಾಗಿ ಅಂದು ಹೆಂಗೆಳೆಯರ ಮೆಚ್ಚುಗೆಯನ್ನ ಆ ಸಭಿಕಳು ಕಬಳಿಸಿಬಿಟ್ಟಳು!

ಬಿಸಿಲುಗುದುರೆಯನ್ನೇರಿ ಕಾಮನಬಿಲ್ಲಿನ ರಾಜ್ಯಕ್ಕೆ ಸವಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more