ಅನಕೃ ಭಾಷಣ ಕೇಳುವುದೇ ರೋಮಾಂಚಕ ಅನುಭವ
ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸುತ್ತಾ ಯೌವನವನ್ನು ದಾಟಿ ಬಾಲ್ಯಕ್ಕೆ ಜಾರಿದರೆ ನೆನಪುಗಳಿಗೆಲ್ಲಿ ಕೊನೆ? ಕನ್ನಡದ ಖ್ಯಾತಿ ಸಾಹಿತಿಗಳನ್ನು ಕಣ್ಣಾರೆ ಕಂಡು ಭಾಷಣ ಕೇಳಿದ್ದು, ಮಾರವಾಡಿ ಮಕ್ಕಳಿಗೆ ಮನೆಪಾಠ ಮಾಡಿದ್ದು, ನಾಟಕ ಕಂಪನಿಗೆ ಮನೆ ಬಾಡಿಗೆ ನೀಡಿದ್ದು ಮತ್ತು ಬರೆಯಲು ಬಾರದ ನಿತ್ಯಸುಮಂಗಲಿಗಾಗಿ ಘೋಸ್ಟ್ ರೈಟರ್ ಆಗಿದ್ದು.. ಒಂದೇ ಎರಡೇ. ಕಾಲಚಕ್ರ ಒಮ್ಮೆಯಾದರೂ ಹಿಂದಕ್ಕೆ ಓಡಬಾರದೆ?
ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು
ಶಿವಮೊಗ್ಗಕ್ಕೆ ಬಂದು ಕರ್ನಾಟಕಸಂಘದಲ್ಲೋ ಬೇರೆಲ್ಲೋ ಕಾರ್ಯಕ್ರಮಕೊಡುತ್ತಿದ್ದ ಸಾಹಿತಿಗಳೆಲ್ಲ ಸಾಮಾನ್ಯವಾಗಿ ನಮ್ಮ ಶಾಲೆಗೆ ಬಂದು ಭಾಷಣ ಮಾಡಿ ಹೋಗುತ್ತಿದ್ದರು- ಅಂತ ಹಿಂದೆ ಹೇಳಿದೆನಲ್ಲ, ಆ ಕರ್ನಾಟಕ ಸಂಘದ ಸಾಹಿತ್ಯಕ ಕಾರ್ಯಕ್ರಮಗಳು ಅವಿಸ್ಮರಣೀಯವಾಗಿರುತ್ತಿದ್ದವು. ಅನಕೃ, ರಾಜರತ್ನ೦, ಬೇಂದ್ರೆ- ಅವರೆಲ್ಲರನ್ನು ಮೊದಲು ಕಂಡದ್ದು ಕೇಳಿದ್ದು ಅಲ್ಲೇ.
ಪ್ರಖ್ಯಾತ ಕಾದಂಬರಿಕಾರ ಅನಕೃ ಅವರು ಎಷ್ಟು ಬಹುಶ್ರುತರು, ಎಷ್ಟು ದೊಡ್ದ ಚಿಂತಕರು, ಎಂತಹ ಪ್ರಭಾವೀ ಮಾತುಗಾರರೆಂಬುದನ್ನ ಶಿವಮೊಗ್ಗೆಯ ಜನ ಬಲ್ಲರು. ಅಲ್ಲಿನ ಕರ್ನಾಟಕ ಸಂಘ ಆಯೋಜಿಸುತ್ತಿದ್ದ ಅವರ ಭಾಷಣ ಕೇಳಲು ಎಷ್ಟೋ ಹೊತ್ತಿನ ಮುಂಚೆಯೇ ಸಭಾಂಗಣ ತುಂಬಿರುತ್ತಿತ್ತು. ಅವರ ಭಾಷಣವೆಂದರೆ- ಗಂಟೆಗಟ್ಟಲೆ ಕಾದು, ಕಿಕ್ಕಿರಿದು ನೆರೆದು, ಆನಂದದಿಂದ ಕಲೆತು, ಸಂತೋಷದಿಂದ ಕುಳಿತು, ಸಾವಧಾನದಿಂದ ಕೇಳಿ, ಮೆಲುಕು ಹಾಕುತ್ತ ಹೋಗುತ್ತಿದ್ದ ಜನಸ್ತೋಮ ನಮ್ಮ ಶಿವಮೊಗ್ಗೆಯ ಜನ.
ನೆನಪಿದೆ : ಅವರನ್ನು ಕರೆತರಬೇಕಾಗಿದ್ದ ಬೆಂಗಳೂರಿನಿಂದ ಬರುವ ರೈಲು ತಡವಾಗಿ ಬರುತ್ತಿದೆ, ಇನ್ನೇನು ಇದೀಗ ಅನಕೃ ಬಂದರು, ಬಂದರು- ಎಂದು ಧ್ವನಿವರ್ಧಕದ ಮೂಲಕ ವ್ಯವಸ್ಥಾಪಕರು ಸಮಜಾಯಿಷಿ ಕೊಡುತ್ತಿದ್ದರು, ಮುಂದುಗಡೆ ಜಮಖಾನದ ಮೇಲೆ, ಸ್ಥಳವನ್ನು ಹೇಗೋ ಗಿಟ್ಟಿಸಿಕೊಂಡು ಕುಳಿತ, ಹುಡುಗರಾದ ನಮಗೆ ಎದ್ದು ಹೋಗಲೂ ಆಗದು (ಮತ್ತೆ ಈ ಆಯಕಟ್ಟಿನ ಜಾಗ ಸಿಗದು ಎಂಬ ಶಂಕೆ), ಸುಮ್ಮನೆ ಕುಳಿತಿರಲೂ ಆಗದು (ಸುಮ್ಮನೆ ಕುಳಿತುಕೊಳ್ಳುವ ವಯಸ್ಸೇ ಅದು?)- ಈ ಇಬ್ಬಂದಿಯಲ್ಲಿ ತೊಳಲಾಡಿದ್ದು ಎಷ್ಟೋ ಬಾರಿ.
ತರಾಸು ಅವರು ಅನಕೃ ಬಗ್ಗೆ ಬರೆಯುತ್ತ ನಮೂದಿಸುವ ಅನುಮಾನವೇ ನನಗೂ ನನ್ನ ಸ್ನೇಹಿತರಿಗೂ ಮೊದಲಬಾರಿ ಅನಕೃ ಭಾಷಣ ಕೇಳಲು ಹೋದಾಗ ಆಗಿತ್ತು. ಈ ಪ್ರಖ್ಯಾತ ಕಾದಂಬರಿಕಾರರು ಯಾರೊ ವಯಸ್ಸಾದವರು, ಅಥವಾ ಮಧ್ಯಮ ವಯಸ್ಸಿನವರು ಇರಬೇಕು; ಅವರ ಎತ್ತರ ಗಾತ್ರ ನಿಲುವು ಹೀಗೆಲ್ಲ ಇದ್ದಿರಬಹುದು ಅ೦ತೆಲ್ಲ ಊಹಿಸಿಕೊಂಡು ಹೋಗಿ ಕುಳಿತ ನಮ್ಮ ಮುಂದೆ, ಇನ್ನೂ ಕಾಲೇಜಿನಲ್ಲಿ ಓದುತ್ತಿರಬಹುದಾದ ಯುವಕನಂಥವನನ್ನು ಕರೆತಂದು ಕೂರಿಸಿದ್ದಾರಲ್ಲ- ಅಂತ ಮೊದಲು ಅನ್ನಿಸಿದ್ದೂ ಉಂಟು. ರಾಯರದ್ದು ಸದಾ ಯೌವನ ಮನೋಭಾವ, ಹಾಗಾಗಿ ಅವರು ಕಾಣಿಸಿಕೊಳ್ಳುತ್ತಿದ್ದುದೂ ಸದಾ ಯುವಕರಂತೆಯೇ.
ಮಾತನಾಡತೊಡಗಿದರೆ, ಅಬ್ಬಾ ಅದೇನು ವಾಗ್‌ಝರಿ! 1923ರಲ್ಲಿ, ತನ್ನ ಹದಿನಾರನೆಯ ವಯಸ್ಸಿನಲ್ಲೇ ಮದುವೆಯೋ ಮನೆಹಾಳೋ' ನಾಟಕವನ್ನ ಬರೆದರು. ಹೀಗಾಗಿತ್ತಂತೆ: ಹಳೆಯ ಕಂದಾಚಾರದ ನಾಟಕಗಳನ್ನೇ ಏಕೆ ಆಡುತ್ತಿದ್ದೀರಿ? ಇವುಗಳ ಚರ್ವಿತಚರ್ವಣದಲ್ಲೇ ನಿಮ್ಮ ಅಸಾಧಾರಣ ನಟನ ಸಾಮರ್ಥ್ಯ ವ್ಯರ್ಥವಾಗಬೇಕೆ? ರಂಗಮಂಚವೆನ್ನುವುದು ಸಮಾಜಸುಧಾರಣೆಗೆ ಹೇಳಿ ಮಾಡಿಸಿದ ಒಂದು ಮಾಧ್ಯಮ; ಬಳಸಿಕೊಳ್ಳಬಾರದೇಕೆ?''- ಎಂದು ಅಂದಿನ ಮೇರುರಂಗನಟ ವರದಾಚಾರ್ಯರನ್ನು ಅನಕೃ ಪ್ರಶ್ನಿಸಿದ್ದರು; ಅಂಥ ನಾಟಕಗಳೇ ಈಗ ಕನ್ನಡದಲ್ಲಿ ಇಲ್ಲವಲ್ಲಾ; ಯಾರಾದರೂ ಬರೆದುಕೊಟ್ಟರೆ ಪ್ರಯತ್ನಿಸಬಹುದು''- ಎಂದಿದ್ದರು ಆಚಾರ್ಯರು. ಹೇಳಿದ್ದನ್ನು ಮಾಡಿತೋರಿಸುವ ಛಲಗಾರ, ದಿಟ್ಟ ಸಾಹಸಿ, ಅನಕೃ ಮೂರಂಕದ ನಾಟಕವನ್ನ ರಾತೋರಾತ್ರಿ ಬರೆದು, ವರದಾಚಾರ್ಯರ ಕೈಯಲ್ಲಿ ಇಟ್ಟಿದ್ದರು. ವರದಾಚಾರ್ಯರು ನಾಟಕವನ್ನು ಓದಿ, ಲೇಖಕನನ್ನು ಅಪ್ಪಿಕೊಂಡು ಪ್ರಶಂಸಿಸಿದರು, ನಾಟಕ ರಂಗಪ್ರಯೋಗವಾಯಿತು; ಜಯಭೇರಿ ಹೊಡೆಯಿತು; ಅಲ್ಲೋಲ ಕಲ್ಲೋಲವನ್ನೂ ಉಂಟು ಮಾಡಿತು.. ಆಮೇಲೆ ಮೂಡಿಬಂದವು ನೋಡಿ ಅವರ ಚೂಪು ಲೇಖಣಿಯ ಮೊನೆಯಿಂದ ಒಂದೊಂದಾಗಿ- ಆಹುತಿ, ಗೋಮುಖ ವ್ಯಾಘ್ರ, ಬಣ್ಣದ ಬೀಸಣಿಗೆ, ರಜಪೂತ ಲಕ್ಷ್ಮಿ, ಸ್ವರ್ಣಮೂರ್ತಿ, ಹಿರಣ್ಯಕಶಿಪು, ಆದದ್ದೇನು?, ಪಾಲು, ಜ್ವಾಲಾಮುಖಿ, ಜೀವದಾಯಿಯ ಸಮಸ್ಯೆ, ಧರ್ಮಸಂಕಟ, ಗುಬ್ಬಚ್ಚಿಗೂಡು, ಸೂತಪುತ್ರ ಕರ್ಣ, ಶ್ರೀರಾಮ ಪಾದುಕಾ ಪಟ್ಟಭಿಷೇಕ, ವಿಶ್ವಧರ್ಮ, ಅನುಗ್ರಹ, ಜಗಜ್ಜೋತಿ ಬಸವೇಶ್ವರ, ಕಿತ್ತೂರ ರಾಣಿ ಚೆನ್ನಮ್ಮ, ರಾಜನರ್ತಕಿ, ಮಾಗಡಿ ಕೆಂಪೇಗೌಡ, ರಾಷ್ಟ್ರಧುರೀಣ- ನಾಟಕಗಳು.
ಕತೆ, ಕಾದಂಬರಿ, ನಾಟಕ, ಪ್ರಬಂಧ- ಹೀಗೆ ಹಲವು ಪ್ರಕಾರಗಳಲ್ಲಿ ಮಿಂಚಿದ, ಕನ್ನಡದ ಅಮೋಘ ಕಾದ೦ಬರಿ ಸಾರ್ವಭೌಮನೆಂದೇ ಹೆಸರು ಮಾಡಿದ ಈ ಚಿಂತಕನ ಬಾಳು ಒಂದು ಅವಿರತ ಸಾಹಸ ಯಾತ್ರೆ. ಹುಡುಗನಾಗಿದ್ದ ನನಗೆ ಆಗ ಅರ್ಥವಾಗುತ್ತಿರಲಿಲ್ಲ ಪ್ರಗತಿಶೀಲ ಸಾಹಿತ್ಯ ಪ್ರಕಾರದಲ್ಲಿ ಅವರು ನಡೆಸಿದ ಆಂದೋಳನಗಳು. ಇರಲಿ, ಅಬ್ಬಾ ಅದೇನು ಮಾತುಗಾರಿಕೆ! ಅನಕೃ ಭಾಷಣಗಳನ್ನು ಕೇಳುವುದೇ ಒಂದು ರೋಮಾಂಚಕರ ಅನುಭವ.
***
ಹೇಗೋ ನನಗೆ ಒಬ್ಬರು ಚಿಕ್ಕ ಕಿರಾಣಿ ಅಂಗಡಿ ಮಾರವಾಡಿಗಳ ಪರಿಚಯವಾಯಿತು. ಅವರಿಗೆ ಇಬ್ಬರು ತುಂಟ ಮಕ್ಕಳು. ಅವರಿಗೆ ಪಾಠ ಹೇಳಿಕೊಡಲು ನನ್ನನ್ನು ಕೇಳಿಕೊಂಡರು. ದಿನವೂ ಸಂಜೆ ಅಲ್ಲಿಗೆ ಹೋಗಿ ಬರುತ್ತಿದ್ದೆ. ಆಗ ನಾನು ತಳೆಯುತ್ತಿದ್ದ ಉಪಾಧ್ಯಾಯನ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೆ. ಗುಜರಾತೀ ಯಜಮಾನರಿಗೆ ಅನುಮಾನ; ನನ್ನ ಮೇಲಲ್ಲ- ತನ್ನ ಮಕ್ಕಳ ಮೇಲೆ. ಎಲ್ಲಿ ಟ್ಯೂಷನ್ ಮಾಷ್ಟರಿಗೆ ಚಳ್ಳೆ ಹಣ್ಣು ತಿನ್ನಿಸಿ, ಬಿಟ್ಟು ಹೋದ ಹಿಂದಿನ ಮೇಷ್ಟರುಗಳಿಗೆ ಆದ ಥರಾನೇ ನನಗೂ ತುಂಟ ಮಕ್ಕಳು ಇವರಿಗೂ ಗತಿ ಕಾಣಿಸುತ್ತಾರೋ- ಅಂತ ಗುಮಾನಿ.
ಅಂಗಡಿಗೆ ಸೇರಿದಂತೆ ಹಿಂದೆ ಮಾಲೀಕನ ಮನೆಯಿತ್ತು. ಅಲ್ಲಿ ಒಂದು ಕೋಣೆಯಲ್ಲಿ ಈ ಪಾಠಪ್ರವಚನ ನಡೆಸಬಹುದಿತ್ತೇನೋ. ಆದರೆ, ಅವನಿಗದು ಇಷ್ಟವಿರಲಿಲ್ಲ. ಹಾಗಾಗಿ, ಅಂಗಡಿಯಲ್ಲಿ ಎಲ್ಲರಿಗೆ ಕಾಣಿಸುವ ಹಾಗೆ, ಮೂಲೆಯಲ್ಲಿ ಮಕ್ಕಳಿಗೂ ನನಗೂ ಒಂದು ಜಾಗ. ಅಲ್ಲೇ ಕುಳಿತು, ಪಾಠ ಪ್ರವಚನ. ಅಂಗಡಿಗೆ ಗಿರಾಕಿಗಳು ಬಂದರೆ ಅವರನ್ನು ನಯವಿನಯದಿಂದ ಹೇಗೆ ಮಾತನಾಡಿಸಿ, ಅವರಿಗೆ ಬೇಕಾದ ವಸ್ತುಗಳನ್ನ ಮಾರುವುದು; ಇರುವುದನ್ನೇ ಹೇಗೆ ಉತ್ಕೃಷ್ಟ ಎಂದು ಬಣ್ಣಿಸಿ, ಕೊಳ್ಳುವಂತೆ ಮಾಡುವುದು; ತನ್ನಲ್ಲಿ ಇಲ್ಲದ್ದನ್ನ ಹೇಗೆ ತಮ್ಮ ಸಂಬ೦ಧಿಕರಲ್ಲಿ ಇನ್ನೊಬ್ಬರ ಅಂಗಡಿಯಿಂದ ತರಿಸಿಕೊಡುವುದು; ಇಲ್ಲ' ಎಂದು ಎಂದೂ ಹೇಳದೇ ಇರುವುದು- ಅಂಗಡಿ ಮಾಲೀಕನ ಈ ಎಲ್ಲ ಗುಣಗಳು ನಿಜಕ್ಕೂ ನನಗೆ ಬೆರಗು ಗೊಳಿಸುತ್ತಿದ್ದವು. ಎಲ್ಲೋ ದೂರ ಗುಜರಾತಿನಿಂದ ಬಂದು ಇಲ್ಲಿ ನೆಲಸಿದ್ದರೂ, ಎಷ್ಟು ಬೇಗ ಇಲ್ಲಿನವರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಳ್ಳುವ ಪ್ರವೃತ್ತಿ ಈ ವ್ಯಾಪಾರಿಗಳದ್ದು- ಎಂದು ನಾನು ನನ್ನ ಗೆಳೆಯರೊಂದಿಗೆ ಹೇಳಿ ಚರ್ಚಿಸುತ್ತಿದ್ದೆ. ಈ ನಾಟಕದ ಅ೦ಕಕ್ಕೂ ನಾಲ್ಕೈದು ತಿಂಗಳ ನಂತರವೇ ತೆರೆ ಬಿತ್ತು.
******
ದುರ್ಗಿಗುಡಿಯಲ್ಲಿ ನಮ್ಮ ಸ್ವಂತ ಮನೆ. ಮುಂಭಾಗದ ಮನೆಯನ್ನು ಬಾಡಿಗೆ ಕೊಟ್ಟು, ಹಿಂಭಾಗದಲ್ಲಿನ ಹೊರಮನೆ(ಔಟ್‌ಹೌಸ್)ಯನ್ನು ಬಾಡಿಗೆ ಕೊಟ್ಟಿದ್ದೆವು. ಯಾರು ಯಾರೋ ವಿವಿಧ ರೀತಿ ನೀತಿಯ, ಬಗೆಬಗೆಯ ಮನೋಭಾವದ ಜನ ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದರು. ಸ್ನೇಹಪರರು-ತಮ್ಮಪಾಡಿಗೆ ತಾವು ಇದ್ದವರು, ಮಾನವೀಯತೆಯನ್ನು ಮೆರೆಯುವವರು-ಅಸಹನೆಯ ವಿಗ್ರಹಗಳು, ಜಿಪುಣರು-ಧಾರಾಳಿಗಳು ಇದ್ದರು. ಹೀಗೆ, ನೀಲಿ ಅಕಾಶನೀಲಿ ಹಳದಿ ಅರಿಸಿನ ಕಾವಿ ಖಾಕಿ ಖಾದಿ ಹಸಿರು ಪಾಚಿ ಹೊಗೆ ಕಿತ್ತಳೆ ಕೆಂಪು ರಕ್ತಗೆಂಪು ತಿಳಿಗೆಂಪು ನಸುಗೆಂಪು ಕೇಸರಿ ಕಂದು ಎಣ್ಣೆಗೆಂಪು ಊದು ಬೂದು ನೇರಳೆ ಕಪ್ಪು ಕಾಡಿಗೆ ಕರಿ ಕಾಡುಗಪ್ಪು ಮೋಡಗಪ್ಪು ಶ್ಯಾಮಲ ಗೋದಿ ಕೆನೆ ಧವಳ ಬಿಳಿ- ಮುಂತಾದ ಬಣ್ಣ ಬಣ್ಣದ ಮನಸ್ಸಿನ ಜನ, ಒಬ್ಬೊಬ್ಬರದೂ ಒಂದೊಂದು ಕತೆ. ಒಂದೊಂದೂ ವಾರದ ಬರಹಕ್ಕೆ ಗ್ರಾಸ ಒದಗಿಸುವ ಸ್ವಾರಸ್ಯಕರ ಘಟನೆಗಳ ಮಾಲೆ. ಒಂದನ್ನು ಈಗ ನಿಮ್ಮ ಮುಂದಿಡುವೆ:
ಒಂದು ನಾಟಕ ಕಲಾ ಮಂಡಲಿ'ಯವರಿಗೆ ನಮ್ಮ ಮುಂದಿನ ಭಾಗದ ಮನೆಯನ್ನು ಒಂದೆರಡು ತಿಂಗಳು ಬಾಡಿಗೆಗೆ ಕೊಟ್ಟಿದ್ದೆವು. ಮೊದಲು ಒಂದೆರಡು ತಿಂಗಳು ಬಾಡಿಗೆಯನ್ನೇನೋ ಅವರು ಕೊಟ್ಟರು; ಆಮೆಲೆ ಬಹುಶ: ಕಲೆಕ್ಷನ್ ಡಲ್ ಆಗುತ್ತಾ ಹೋಯಿತು ಅಂತ ಕಾಣುತ್ತೆ; ಅದರ ಪ್ರಭಾವ ನಮ್ಮ ಹಣಕಾಸಿನ ವ್ಯವಹಾರದ ಮೇಲೂ ಆಗ ತೊಡಗಿತು. ನಾಟಕದ ಕಂಪನಿಯ ನಟನಟಿಯರು ಒಬ್ಬೊಬ್ಬರಾಗಿ ತಮ್ಮತಮ್ಮ ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಹೋಗತೊಡಗಿದರು. ಮಾಲಿಕರು ನಮ್ಮ ಮನೆ ಖಾಲಿ ಮಾಡಿದರು. ಇಲ್ಲ; ಇದ್ದಬದ್ದ ತಮ್ಮ, ನಾಟಕದ ವೇಷ ಭೂಷಣ ರಂಗಸಜ್ಜಿಕೆಗಳ ಸಾಮಾನು ಸರಂಜಾಮುಗಳನ್ನು ಗಾಡಿಗಳಲ್ಲಿ ಹೇರಿಕೊಂಡು ಒಂದು ರಾತ್ರಿ ನಮ್ಮ ಮನೆ ಬಿಟ್ಟರು. ನಮ್ಮ ಊರಿನಲ್ಲೇ ಇನ್ನೆಲ್ಲೋ ಒಂದು ಕಡೆ ಹೋಗಿ, ಕಂಪನಿಯ ಆ ಮಾಲಿಕ ನಟಸಾರ್ವಭೌಮರೂ, ಅವರ ಮನದನ್ನೆ ನಟೀಶಿರೋಮಣಿಯೂ ತಾತ್ಕಾಲಿಕವಾಗಿ ಬಿಡಾರಹೂಡಿದರು. ಆಮೇಲೆ, ಅವರು ಬಾಕಿ ಉಳಿಸಿಕೊಂಡಿದ್ದ ಬಾಡಿಗೆ ವಸೂಲಿ ಮಾಡಲು ನಾನೂ ನನ್ನ ತಮ್ಮನೂ ಪಟ್ಟ ಪರದಾಟ ಒಂದು ನೀಳ್ಗತೆಗೆ ಆಹಾರವಾದೀತು.
ಇರಲಿ, ನಾಟಕದವರಿಗೆ ಮನೆ ಬಾಡಿಗೆ ಕೊಟ್ಟಿದ್ದುದರ ಪ್ರಯೋಜನಗಳೂ ನಮಗೆ ಕಡಿಮೆ ಏನಿರಲಿಲ್ಲ. ಒಂದು: ರಾತ್ರೆಯ ರಾಜ ರಾಣಿ ವಿದೂಷಕರು ಹಗಲಿನಲ್ಲಿ ಹೇಗೆ ರಂಗತಾಲೀಮು ನಡೆಸುತ್ತಾರೆ- ಎಂಬುದರ ನೇರ ಪರಿಚಯ ನನಗೆ ಕಣ್ಣಾರೆ ಆಯ್ತು. ಎರಡು: ಪೋಷಕಪಾತ್ರ ವಹಿಸುತ್ತಿದ್ದ ಒಬ್ಬಿಬ್ಬರು ಮಾತಾಳಿ ಯುವಕರ ಗೆಳೆತನ, ಆತ್ಮೀಯತೆ ಸಿಕ್ಕಿತು; ಅವರ ಮೂಲಕ ಕಂಪನಿ ನಾಟಕ ಮಂಡಲಿಯ ಬಣ್ಣದ ಬದುಕಿನ ಸ್ವಾರಸ್ಯಕರ ಕತೆ ಉಪಕತೆಗಳು ಸಿಕ್ಕವು; ತಿಳಿಯಿತು: ನಾಟಕಕಾರರ ಜೀವನವೋ ಕೆಲವು ಮಾತ್ರ ಸುಖಾಂತಗಳು, ಇನ್ನು ಹಲವು ನ೦ಬಲಸಾಧ್ಯವಾದ ದುರೂಹ್ಯ ಖೇದಾಂತ ವಿಷಾದಾಂತ ದು:ಖಾಂತ ದುರಂತ ರುದ್ರ ನಾಟಕಗಳು- ಅಂತ. ಮೂರು: ನಾಟಕದ ಮನೆಯವರು ಏನಾದರೂ ವಿಶೇಷ ಅಡಿಗೆ ಮಾಡಿದ್ದರೆ, ಅದನ್ನು ಜಾಸ್ತಿ ಮಾಡಿದ್ದರೆ, ನಮ್ಮ ಮನೆಗೂ ಉಳಿದ ಬಾಬತ್ತು ಸರಬರಾಜು ಆಗುತ್ತಿತ್ತು.
******
ಪ್ರೌಢಶಾಲೆಯಲ್ಲಿ ಓದುತ್ತಿದ್ದ ಆ ದಿನಗಳಲ್ಲಿ ನಾನು ಒಂದು ರೀತಿಯ ಅದೃಶ್ಯ-ಪ್ರೇತ ಬರೆಹಗಾರ (ಘೋಸ್ಟ್ ರೈಟರ್') ಸಹ ಆಗಿದ್ದೆ. ನಂಬಿದರೆ ನಂಬಿ, ಇಲ್ಲದಿದ್ದರೆ ಬಿಡಿ- ಆ ನನ್ನ ಬರೆಹಗಳೆಲ್ಲ ಪ್ರೇಯಸಿಯೊಬ್ಬಳು ಪ್ರೇಮಿಗೆ ಬರೆಯು(ಸು)ತ್ತಿದ್ದ ಪ್ರೇಮಪತ್ರಗಳು. ಯಾರಿಗಾಗಿ ಅವನ್ನು ಬರೆಯುತ್ತಿದ್ದೆನೋ ಅವಳು ಈಗ ಜೀವಂತವಾಗಿ ಇರಲಾರಳಾದ್ದರಿಂದ, ಧೈರ್ಯವಾಗಿ ಈ ಪ್ರಸಂಗವನ್ನು ಇಲ್ಲಿ ಬರೆದು ಪ್ರಕಾಶಿಸಬಹುದೆಂದು ಕಾಣುತ್ತೆ.
ಸೊಪ್ಪು ತರಕಾರಿ ಹೂವು ಮಾರುತ್ತಿದ್ದ ಆ ತರುಣಿ ಹೆಂಗಸು ಒಬ್ಬಳು ನಿತ್ಯಸುಮಂಗಲಿ. ಅವಳಿಗೆ ಒಬ್ಬಿಬ್ಬರು ಖಾಯಂ ಪ್ರೇಮಿಗಳು, ಸ್ಥಾವರರು; ಬೇರೆಯವರು ತಾತ್ಕಾಲಿಕವಾಗಿ ಯಾರೋ ಬಂದು ಹೋಗುತ್ತಿದ್ದ ಜಂಗಮ ಜಾರರೂ ಇದ್ದರೇನೋ ಗೊತ್ತಿಲ್ಲ. ಸಾಮಾನ್ಯವಾಗಿ ಈ ರಸಿಕ ವಿಟರು ಅಲ್ಲಿಯೇ ಸುತ್ತಮುತ್ತ ಇದ್ದ ಹೋಟೆಲಗಳಲ್ಲಿ ಕೆಲಸಮಾಡುತ್ತಿದ್ದ ಪ್ರಬಂಧಕರು, ಅಡಿಗೆಭಟ್ಟರು, ಮಾಣಿಗಳು. ಒಂದಂತೂ ಸ್ವಯಂವೇದ್ಯವಾಗಿತ್ತು- ಆ ಪ್ರೇಮಿಗಳು ಓದು ಬರಹ ಬಲ್ಲವರಾಗಿದ್ದರು. ಈ ವಾರಾಂಗನೆಗೆ ಸೊಗಸಾದ ಕನ್ನಡ ಮಾತನಾಡಲು ಬಂದರೂ ಬರೆಯಲು ಆತ್ಮವಿಶ್ವಾಸ ಕಮ್ಮಿ. ಎಲ್ಲಿ ಕಾಗುಣಿತ ತಪ್ಪಾಗಿ ಏನೋ ಬರೆಯಲು ಹೋಗಿ ಇನ್ನೇನೋ ಬರೆದು, ಕ್ಷೇಮ ಕ್ಷಾಮ'ವಾಗಿ ರಸಾಭಾಸವಾಗಿ ಬಿಡುತ್ತೋ ಹಂತ ಹನುಮಾನ'.
ಬಹಳ ದಿನ ಆಯ್ತು, ನೀನು ಬಂದು. ಮತ್ತೆ ಯಾವಾಗ ಬರ್ತೀಯಾ?''- ಅಂತ ಈ ಬೆಲೆವೆಣ್ಣು ಕೇಳೋದು. ಏನೇನು ತಂದು ಕೊಡ್ತೀನಿ- ಅಂತ ಹಿಂದಿನ ಆ ರಸನಿಮಿಷಗಳಲ್ಲಿ ನಲ್ಲ ಆಶ್ವಾಸನೆ ಕೊಟ್ಟಿದ್ದನೋ, ಅದನ್ನ ಲಲ್ಲೆಮಾತಾಡಿ ಈಗ ಜ್ಞಾಪಿಸೋದು. ಯಾವಾಗ ಮನೆಗೆ ಬಂದರೆ ಒಳ್ಳೇದು' ಅ೦ತಾನೂ ಒಂದು ಥರಾ ಸಲಹೆ ಸೂಚನೆ ಕೊಡೋದು- ಇವೇ ಸಾಮಾನ್ಯವಾಗಿ ಆ ಸುಂದರಾಂಗಿಯ ಈ ನೆನಪೋಲೆಗಳ ಮುಖ್ಯ ವಿಷಯ.
ತನಗೆ ತೋಚಿದ ಸ್ವಲ್ಪ ಒಕ್ಕಣೆ, ಅವಳೇ ಹೇಳಿ, ಆ ಪಣ್ಯಾಂಗನೆ ನನಗೆ ಇನ್‌ಸ್ಟ್ರ್ರಕ್ಷನ್ ಕೊಡುತ್ತಿದ್ದಳು: ನೀನು ನೋಡು, ಓದ್ತಾ ಇರೋನು. ಕತೆ ಕಾದ೦ಬರಿ ಓದ್ದೋನು. ಸಿನಿಮಾ ನಾಟಕ ನೋಡ್ದೋನು. ಅದೂ ಇದೂ ಸ್ವಲ್ಪ ಸೇರಿಸಿ, ಚೆನ್ನಾಗಿ ಬರಿ''- ಅಂತ ನನಗೆ ಪುಸಲಾಯಿಸೋಳು. ನಾನೋ, ಸಿಕ್ಕಿದ್ದು ಇದೇ ಛಾನ್ಸು- ಅಂತ ಹಾ ಪ್ರಿಯಾ, ಪ್ರಶಾಂತ ಹೃದಯಾ'-ತರಹಾ ಮಾತುಗಳನ್ನ ಅಲೊಂದು ಇಲ್ಲೊಂದು ಸೇರಿಸಿ, ಬರೆಯುತ್ತಿದ್ದೆ, ಅವಳು ಕೊಟ್ಟ ಎಕ್ಸರ್‌ಸೈಜ್ ಪುಸ್ತಕದ ಹಾಳೆಗಳ ಮೇಲೆ. ಅವಳಿಗೆ ಓದಿ ತೋರಿಸಿ, ಏನಾದರೂ ತಿದ್ದಬೇಕೆಂದು ಅವಳು ಹೇಳಿದರೆ, ಹಾಗೆ ಮಾಡುತ್ತಿದ್ದೆ. ಅವಳೂ ಸಿನೆಮಾ ನೋಡಿ, ಅಲ್ಲಿನ ಬೆಣ್ಣೆ ಮಾತುಗಳಿಗೆ ಮನಸೋತವಳೇ. ಹಾಗಂತಾರಲ್ಲ, ಹಾಗ೦ದರೆ ಏನು'- ಅಂತ ಅವಳಿಗೆ ಅರ್ಥವಾಗದ ಕನ್ನಡದ ಇಂಗ್ಲಿಷಿನ ಕೆಲವು ಪದಗಳನ್ನು ಒಂದೆರಡು ಬಾರಿ ಕೇಳಿ, ನನ್ನನ್ನ ಮುಜುಗರಕ್ಕೆ ಒಳಗಾಗಿಸಿಯೂ ಇದ್ದಳು. ಅಂತೂ ಅವಳ ಅಭಿಲಾಷೆಯನ್ನ ನನಗೆ ತೋಚಿದ ಹಾಗೆ ಬರೆಹಕ್ಕಿಳಿಸಿ, ಅವಳ ಕೈಯಲ್ಲಿ ಕೊಟ್ಟು ಬರುತ್ತಿದ್ದೆ- ಗುಟ್ಟಾಗಿ. ಅದನ್ನ ಹೇಗೆ ತನ್ನ ಪ್ರಿಯಕರನಿಗೆ ತಲುಪಿಸುತ್ತಿದ್ದಳೋ ದೇವರೇ ಬಲ್ಲ. ಸ್ವಲ್ಪ ದಿನಗಳ ನಂತರ ಮತ್ತೆ ಅವಳು ಕರೆದಾಗ, ನಾನು ಹೋದಾಗ, ಕಾಗದ ಬರೆಯತೊಡಗಿದಾಗ ನೆನಪಾದರೆ ಊಹಿಸಿಕೊಳ್ಳಬಹುದಾಗಿತ್ತು, ಹಿಂದೆ ಬಿಟ್ಟ ಕಮ್ಮಗೋಲನ ಸುಮಬಾಣ ಏನಾದರೂ ಪ್ರಯೋಜನಕ್ಕೆ ಬಂತಾ- ಅಂತ. ಆ ಕಡೆಯಿಂದ ಲಿಖಿತ ಉತ್ತರ ಬ೦ದದ್ದನ್ನ ನಾನು ಎಂದೂ ಕಾಣೆ. ಬಂದಿದ್ದರೂ ಅವಳೇ ಓದಿಕೊಳ್ಳುತ್ತಿದ್ದಳೋ ಏನೂ, ನನಗಂತೂ ಅದನ್ನು ಅವಳು ತೋರಿಸುತ್ತಿರಲಿಲ್ಲ, ನನ್ನ ಕೈಲಿ ಓದಿಸುತ್ತಲೂ ಇರಲಿಲ್ಲ. ಆ ಮಾರುತ್ತರದ ಪ್ರಸ್ತಾಪ ಮುಂದಿನ ಕಾಗದದಲ್ಲೂ ಎಲ್ಲೂ ಇರುತ್ತಿರಲಿಲ್ಲ. ಈ ಎಲ್ಲ ಉಕ್ತಲೇಖನಕ್ಕೆ ನನಗೆ ಸಿಗುತ್ತಿದ್ದುದು ಅವಳು ಮಾಡಿಕೊಡುತ್ತಿದ್ದ ರುಚಿರುಚಿಯಾದ ತಿಂಡಿಗಳು, ಅಷ್ಟೆ!












Click it and Unblock the Notifications