ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜರತ್ನಂ ಪಾಠವನ್ನ ನಾನು ಕದ್ದು ಕೇಳಿದ್ದು!

By Super
|
Google Oneindia Kannada News

G.P. Rajarathnam, Photo by K.G. Somashekharಗಂಡುಗೊಡಲಿಯ ನೇರ ನುಡಿ, ತನಗೆ ಸರಿಕಂಡದ್ದನ್ನ ಸುತ್ತು ಬಳಸಿ ಮರೆ ಮಾಚದೇ ಇದ್ದದ್ದನ್ನ ಇದ್ದಂತೆ ಹೇಳಿ ನಡೆದು ಹೋಗುವ ಸಾಹಿತಿ ಜಿಪಿ ರಾಜರತ್ನಂ ಅವರ ಕನ್ನಡ ಪಾಠ ಕೇಳುವ ಅವಕಾಶ ಬಂದರೆ ಅದೇ ಸುಯೋಗ ಅನ್ನುವಂಥ ಕಾಲವೊಂದಿತ್ತು. ಅದಕ್ಕಾಗಿ ಅವರನ್ನರಿಸಿಕೊಂಡು ಬಂದು, ಮುಖದ ನೀರಿಳಿಸಿಕೊಳ್ಳುವುದರ ಜೊತೆಗೆ ಅವರಿಂದಲೇ ಜೀವನದ ಪಾಠ ಕಲಿತ ತಮಾಷೆಯ ಪ್ರಸಂಗ ಇಲ್ಲಿದೆ. (ಡಿ.5 ಜಿಪಿ ರಾಜರತ್ನಂ ಅವರ ಹುಟ್ಟುಹಬ್ಬ.)

ಶಿಕಾರಿಪುರ ಹರಿಹರೇಶ್ವರ, ಮೈಸೂರು

ಎಂಡ, ಎಡ್ತಿ, ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ;
ಬುಂಡೇನ್ ಎತ್ತಿ ಕುಡ್ದುಬುಟ್ಟಾಂದ್ರೆ ತಕ್ಕೋ ಪದಗೋಳ್ ಬಾಣ| ....
ಎಂಡ ಓಗ್ಲಿ, ಎಡ್ತಿ ಓಗ್ಲಿ, ಎಲ್ಲಾ ಕೊಚ್ಕೊಂಡ್ ಓಗ್ಲಿ;
ಪರಪಂಚ್ ಇರೋ ತನ್ಕ ಮುಂದೆ ಕನ್ನಡ ಪದಗೋಳ್ ನುಗ್ಲಿ||''

-ಅಂತ ಹಾಡಿದ, ಕನ್ನಡಿಗರ ಮನೆಮಾತಾದ ಕವಿ, ನಾಟಕಕಾರ, ಬೌದ್ಧ ಜೈನ ಕ್ರೈಸ್ತ ಧರ್ಮದ ಸಾಹಿತ್ಯವನ್ನು ಸರಳ ಕನ್ನಡಕ್ಕಿಳಿಸಿದ ಧೀರ, ಅಂಕಣಗಳ ಭ್ರಮರ', ಚುಚ್ಚು ಚೂಪಿನ ಬರಹಗಾರ, ನೇರಮಾತುಗಾರ ಗುಂಡ್ಲು ಪಂಡಿತ ರಾಜರತ್ನ೦ ಯಾರಿಗೆ ತಾನೆ ಗೊತ್ತಿಲ್ಲ? ಮೊನ್ನೆ ಮೊನ್ನೆತಾನೆ ಅವರ ನೆನಪಿನಲ್ಲಿ ಕರ್ನಾಟಕದಲ್ಲಿ ಕೆಲವು ಕಾರ್ಯಕ್ರಮಗಳು ನಡೆದವು. ಅಭಿಮಾನಿಗಳು ನೆನೆಸಿಕೊಂಡರು: ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಉತ್ತರದ ಕಡೆ, ಶ್ರೀ ಕೃಷ್ಣರಾಜೇಂದ್ರ ವೃತ್ತಿ ಶಿಕ್ಷಣಶಾಲೆಯ ಮೇಲು ಪಕ್ಕದ ರಸ್ತೆಯ ಆಚೆ ಒಂದು ಕಟ್ಟದ ಇದೆ. ಆಗ ಅದು ವೈದ್ಯರತ್ನಂ ಗುಂಡ್ಲುಪಂಡಿತ ಲಕ್ಷ್ಮಣಾಚಾರ್ಯರ ಆಯುರ್ವೇದ ಮತ್ತು ಯುನಾನಿ ಮಹಾಪಾಠಶಾಲೆ; ಈಗದು ಮೈಸೂರಿನ ಆಯುರ್ವೇದ ಕಾಲೇಜು. ಈ ಗುಂಡ್ಲುಪಂಡಿತರೇ ರಾಜರತ್ನಂ ಅವರ ಪೂರ್ವಜರು. ಹುಟ್ಟಿದ್ದು ಡಿಸಂಬರ್ 5, 1908ರಲ್ಲಿ, ಕ್ಲೋಸ್‌ಪೇಟೆ(ಈಗಿನ ರಾಮನಗರ')ಯಲ್ಲಿ. ಬೆಳೆದದ್ದು ಕಾಶೀಪತಿ ಅಗ್ರಹಾರದಲ್ಲಿ, ತಂದೆ ಜಿ.ಪಿ. ಗೋಪಾಲಕೃಷ್ಣ ಅಯ್ಯಂಗಾರ್ ಮೈಸೂರಿನವರು. ತಾಯಿ ಕೊಳ್ಳೆಗಾಲದ ಕಡೆಯವರು. ಮಗು ಮೂರುನಾಲ್ಕು ವಯಸ್ಸಿರುವಾಗಲೇ ತಾಯಿ ತೀರಿಕೊಂಡರು. ಅಜ್ಜಿಯ ಆರೈಕೆಯಲ್ಲಿ ಮಗು ಬೆಳೆಯಿತು. ತಂದೆ ಮೈಸೂರಿನ ಕುಂಚಿಟಗರ ಇಂಗ್ಳಿಷ್-ಕನ್ನಡ ಶಾಲೆಯಲ್ಲಿ (ಈಗದು ಬನುಮಯ್ಯನವರ ಪ್ರೌಢ ಶಾಲೆ) ಉಪಾಧ್ಯಾಯರು.

ಮೈಸೂರಿನಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿ, ನಂತರ 1928ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ., 1931ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮತ್ತು ಅಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಮೈಸೂರು, ತುಮಕೂರು, ಶಿವಮೊಗ್ಗಗಳಲ್ಲಿ ಸೇವೆ ಸಲ್ಲಿಸಿ ಮತ್ತೆ ಬೆಂಗಳೂರಿಗೆ ಬಂದು ರೀಡರ್ ಆಗಿ ನಿವೃತ್ತರಾದರು. ನಂತರ ಯು.ಜಿ.ಸಿ. ಉಪಾಧ್ಯಾಯರಾದರು. 1977ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿತು. ಬುದ್ಧ ವಚನ ಪರಿಚಯ, ಹನಿಗಳು, ಗಂಡುಗೋಡಲಿ, ಚೀನಾದೇಶದ ಬೌದ್ಧ ಯಾತ್ರಿಕರು, ಮೊದಲ ಪುಸ್ತಕ, ತುತ್ತೂರಿ, ರತ್ನನ ಪದಗಳು, ಮಹಾಕವಿ ಪುರುಷಸರಸ್ವತಿ, ಹತ್ತುವರುಷ (ಆತ್ಮಕಥನ)- ಮುಂತಾದ ಪುಸ್ತಕಗಳನ್ನು ಬರೆದು ಹೆಸರಾದವರು. 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿತು. 1970ರಲ್ಲಿ ರಾಜ್ಯೋತ್ಸವ ಪುರಸ್ಕಾರ ಲಭಿಸಿತು. 1978ರಲ್ಲಿ ದೆಹಲಿಯಲ್ಲಿ ನಡೆದ 50ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರನ್ನು ಕುರಿತು 1979ರಲ್ಲಿ ಜೀವರತ್ನ' ಮತ್ತು ಸಾಹಿತ್ಯ ಪರಿಚಾರಕ' ಎಂಬ ಇವರ ಸಂಸ್ಮರಣ ಗ್ರಂಥಗಳು ಹೊರಬಂದಿವೆ. ಮಾರ್ಚ್ 13, 1979ರಂದು ರಾಜರತ್ನಂ ಅಸು ನೀಗಿದರು.

****

ರಾಜರತ್ನಂ ಬಗ್ಗೆ ಅವರ ನಿಕಟವರ್ತಿಗಳು ಬರೆದ ಲೇಖನಗಳನ್ನ ಮತ್ತು ಪುಸ್ತಿಕೆಗಳನ್ನ ಓದಿದಾಗ ನಮಗೆ ತೋರುವ ಒಂದು ಸ್ಪಷ್ಟ ಚಿತ್ರಣವೆಂದರೆ ಈ ಗಂಡುಗೊಡಲಿಯ ನೇರ ನುಡಿ, ತನಗೆ ಸರಿಕಂಡದ್ದನ್ನ ಸುತ್ತು ಬಳಸಿ ಮರೆ ಮಾಚದೇ ಇದ್ದದ್ದನ್ನ ಇದ್ದಂತೆ ಹೇಳಿ, ನಡೆದು ಹೊರಡುವ ಪದ್ಧತಿ. ಅವರದೇ ಹತ್ತುವರುಷ(ಆತ್ಮಕಥನ)ದಲ್ಲೂ, ಕೊರವಂಜಿಯ ರಾಶಿ' ಶಿವರಾಂ ಅವರ ಪುಸ್ತಕದಲ್ಲೂ ಹೇರಳವಾಗಿ ಇದಕ್ಕೆ ನಿದರ್ಶನಗಳು ಸಿಗುತ್ತವೆ. ಚಿಕ್ಕಂದಿನಲ್ಲೇ ಫಟಿ೦ಗ ಹುಡುಗನಾಗಿ ಇವರು ಇಂಗ್ಲೀಷ್ ವ್ಯಾಕರಣ ಹೇಳಿಕೊಡುತ್ತಿದ್ದ ಮೇಷ್ಟರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ಇವರು ಕುಟುಕಿದ ಕುಕವಿನಿಂದೆಗಳಿಗೇನೂ ಕೊರತೆಯಿಲ್ಲ. ಗೌತಮಬುದ್ಧನಿಗೆ ಹೇಗೋ ಹಾಗೆಯೇ ಇವರಿಗೂ ಉಪಟಳವಿತ್ತ ತೀರ್ಥಕರಿಗೆ ಕಡಿಮೆಯಿರಲಿಲ್ಲ; ಆದರೆ ಅವರೆಲ್ಲರಿಗೂ ಇವರು ಕೊಟ್ಟ ಉತ್ತರ- ಆಯಾಯ ಅನ್ಯಧರ್ಮಗಳ ಆಳವಾದ ಅಧ್ಯಯನದ ಬಳುವಳಿಗಳಿಂದ. ಬೌದ್ಧ ಜೈನ ಕ್ರೈಸ್ತ ಧರ್ಮದ ಸಾಹಿತ್ಯಮಂಟಪಗಳನ್ನು ಇವರು ಕಟ್ಟಿದ್ದೇ ಆ ಛಲಕ್ಕೆ. ಪುರುಷಸರಸ್ವತಿಯಂಥ ವಿಡಂಬನ ಕಾವ್ಯ ಬರೆದಿದ್ದೇ ರೇಗಿಸಿದವರಮೇಲೆ ಶತಾರಿಯಾಗಿ ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ. ತನ್ನ ಮಂಡಿನೋವನ್ನೇ ಕಾರಣ ಮಾಡಿಕೊಂಡು ಮನೆಯಾತ ಮನೆಯಲ್ಲೇ ನಡೆಸುವ ಸಾಯಿ ಬಾಲ ವಿಕಾಸ ತರಗತಿ'ಯೊಂದನ್ನ ಬರಖಾಸ್ತು ಮಾಡಿದಾಗ, ಅಲ್ಲಿಗೆ ಹೋದ ಇವರು ಕೆಂಡಾಮಂಡಲವಾದ ಸಂದರ್ಭ. ಅಭಿಮಾನಿಯೊಬ್ಬರು ಕಾರ್ಯಕ್ರಮವೊಂದರಲ್ಲಿ ಸುಂದರವಾದ, ಹೆಚ್ಚು ಬೆಲೆಬಾಳುವ ಗಂಧದ ಮರದ ನಡೆಗೋಲನ್ನು ಉಡುಗೊರೆ ಕೊಟ್ಟರೆ, ಸ್ವೀಕರಿಸಲು ನಿರಾಕರಿಸಿ, ನಡೆಗೋಲನ್ನು ಬಳಸುವ ಪ್ರಮೇಯ ಬರುವುದರೊಳಗಾಗಿ ತಾವು ಸಾಯಲಿಚ್ಛಿಸುವುದಾಗಿ ಹೇಳಿದ್ದರು. ಕೊನೆಯ ದಿನಗಳಲ್ಲಿ ಸರ್ಕಾರ ಮಾಸಾಶನ ಕೊಡಲು ಯೋಚಿಸಿ ಮಾಹಿತಿ ಸಂಗ್ರಹಣೆಗಾಗಿ ಯಾರೋ ಕಾರಕೂನರನ್ನು ಕಳಿಸಿದಾಗ, ಅವರ ಅಸಂಬದ್ಧ ಪ್ರಶ್ನೆಗಳಿಗೆ ಕೋಪಗೊಂಡು ಬೈದು ಕಳಿಸಿದ ಪ್ರಸಂಗಗಳನ್ನು ರಾ.ಶಿ. ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ರಾಜರತ್ನಂ ನನ್ನ ಮುಖಕ್ಕೆ ನೀರಿಳಿಸಿದ ಕತೆಯೊಂದನ್ನೂ ಸೇರಿಸಿಕೊಳ್ಳಿ:

******

ನಾನು ಸೇರಿದ್ದು ದಾವಣಗೆರೆಯ ಇಂಜನಿಯರಿಂಗ್ ಕಾಲೇಜು. ಅದು ಆಗಿನ್ನೂ ಪ್ರಾರ೦ಭವಾಗಿತ್ತು. ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿತ್ತು. ಪ್ರತಿ ವರ್ಷವು ಸ್ವಲ್ಪ ಸ್ವಲ್ಪವೆ ಹೊಸ ಹೊಸ ಸಲಕರಣೆಗಳನ್ನ ಕೊ೦ಡುಕೊಳ್ಳುತ್ತಾ, ಸಾಧ್ಯವಾದಷ್ಟು ಬೇಗ ಬೇಗ ಕಾಲೇಜು ಉತ್ತಮಗೊಳ್ಳುತ್ತಿತ್ತು. ಕಾಲೇಜಿಗೆ ಅವಶ್ಯಕವಾಗಿದ್ದ ಕಟ್ಟಡಗಳನ್ನೇನೋ ದಾವಣಗೆರೆಯ ಮಹಾದಾನಿಗಳು ಕಟ್ಟಿಸಿಕೊಟ್ಟಿದ್ದರು. ಅದಕ್ಕೇ ಅದರ ಹೆಸರನ್ನ ಬ್ರಹ್ಮಪ್ಪ-ದೇವೇ೦ದ್ರಪ್ಪ-ತವನಪ್ಪ ಇ೦ಜಿನಿಯರಿ೦ಗ್ ಕಾಲೇಜು ಎ೦ದೇ ಇಟ್ಟಿದ್ದರು. (ಸ೦ಕ್ಷಿಪ್ತವಾಗಿ ಬಿ. ಡಿ. ಟಿ. ಇ೦ಜಿನಿಯರಿ೦ಗ್ ಕಾಲೇಜ್ ಎನ್ನುತ್ತಿದ್ದರು; ಈಗದು ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದೆ.) ಆದರೆ ಎಲ್ಲಾ ಪ್ರಯೋಗ ಶಾಲೆಗಳು ಸುಸಜ್ಜಿತವಾಗಿ ಇನ್ನೂ ಕಾಲೇಜಿನಲ್ಲಿ ಕೆಲಸ ಮಾಡುತ್ತಿರಲಿಲ್ಲ. ಕೊನೆ ವರ್ಷದ ಬಿ.ಇ. ವಿದ್ಯಾರ್ಥಿಗಳ೦ತೂ ಸುಮಾರು ಒ೦ದೂವರೆ ಎರಡು ತಿ೦ಗಳು ಬೆ೦ಗಳೂರಿಗೆ ಹೋಗಿ ಅಲ್ಲಿ ಯೂನಿವರ್ಸಿಟಿ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ತಮ್ಮ ಹೈಡ್ರಾಲಿಕ್ ಲ್ಯಾಬೊರೇಟರಿ ತರಗತಿಗಳಿಗೆ ಹೋಗಬೇಕಾಗಿತ್ತು. ಹಾಗೆ ಬೆ೦ಗಳೂರಿಗೆ ಹೋದಾಗ ಆ ವಿದ್ಯಾರ್ಥಿಗಳು ತಮ್ಮ ಅಶನವಸತಿಗಳ ಸೌಕರ್ಯಗಳನ್ನ ತಾವೇ ನೋಡಿಕೊಳ್ಳಬೇಕಾಗಿತ್ತು. ನಾನೂ ಸಹ ಈ ರೀತಿ ಹೋಗಿ ಅಲ್ಲಿದ್ದಾಗ ನಡೆದ ಕೆಲವು ಘಟನೆಗಳನ್ನ ಈಗ ನೆನಪಿಸಿಕೊಳ್ಳುತ್ತಿದ್ದೇನೆ. ಅದರಲ್ಲಿ ರಾಜರತ್ನಂ ಅವರೊಂದಿಗೆ ಆದ ನನ್ನ ಮುಖಾಮುಖಿ (ಎನ್‌ಕೌಂಟರ್) ಸಹ ಒಂದು.

******

ನನಗೆ ಕನ್ನಡವೆ೦ದರೆ ಮೊದಲಿನಿ೦ದಲೂ ಹುಚ್ಚು. ಇ೦ಜಿನಿಯರಿ೦ಗ್ ವಿದ್ಯಾರ್ಥಿಯಾಗಿದ್ದರೂ ಕನ್ನಡದ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ಓದಿದ ಪುಸ್ತಕಗಳ ಬಗ್ಗೆ ಸ್ನೇಹಿತರ ಜೊತೆ ಚರ್ಚೆ ಮಾಡೋದು, ಪುಟಗಟ್ಟಲೇ ಗೆಳೆಯರಿಗೆ ಕನ್ನಡದಲ್ಲಿ ಕಾಗದ ಬರೆದು ಕೊರೆಯುತ್ತಿದ್ದೆ. ಆದರೆ, ನಾನು ಸ೦ಸ್ಕೃತದ ವಿದ್ಯಾರ್ಥಿ. ಹಾಗಾಗಿ ನನ್ನ ಕೆಲವು ಸ್ನೇಹಿತರು, ಕನ್ನಡವನ್ನು ಪಠ್ಯ ಭಾಷೆಯಾಗಿ ಓದಲು ತೆಗೆದುಕೊ೦ಡವರು ತಮ್ಮ ಕನ್ನಡ ತರಗತಿಗಳಲ್ಲಿ ಮೇಷ್ಟ್ರು ಎಷ್ಟು ಚೆನ್ನಾಗಿ ಪಾಠ ಮಾಡುತ್ತಾರೆ ಎ೦ದೆಲ್ಲಾ ಹೇಳಿದಾಗ, ಅವನ್ನೆಲ್ಲಾ ಕೇಳೋದಕ್ಕೆ ನನಗೆ ಅದೃಷ್ಟವಿಲ್ಲವಲ್ಲ' ಅ೦ತ ಅ೦ದುಕೊಳ್ಳುತ್ತಿದ್ದೆ.

ಈಗ ಬೆ೦ಗಳೂರಿಗೆ ಹೋಗಿದ್ದಾಗ ನಮ್ಮ ಇ೦ಜಿನಿಯರಿ೦ಗ್ ಕಾಲೇಜ್ ಪಕ್ಕದಲ್ಲೇ ಇದ್ದ ಸೆ೦ಟ್ರಲ್ ಕಾಲೇಜಲ್ಲಿ ಕನ್ನಡದ ದೊಡ್ಡ ದೊಡ್ಡ ವಿದ್ವಾ೦ಸರುಗಳು, ಮೇಷ್ಟ್ರುಗಳು ಇದ್ದಾರಲ್ಲಾ ಅವರ ಕ್ಲಾಸಿಗೆ ಯಾಕೆ ಹೋಗಿ ಕುಳಿತುಕೊ೦ಡು ಪಾಠ ಕೇಳಬಾರದು, ನಮಗೆ ಇ೦ಜಿನಿಯರಿ೦ಗ್ ಲ್ಯಾಬೊರೇಟರಿ ಇಲ್ಲದಿದ್ದಾಗ ಅನ್ನಿಸಿತು. ಅನುಮತಿ ತೆಗೆದುಕೊ೦ಡು ಹಾಗೆ ಅವರ ಕ್ಲಾಸಿಗೆ ಹೋಗೋದು ಉತ್ತಮ ಅ೦ತ ಅನ್ನಿಸಿತು. ನಾನು ಒ೦ದು ಸಾರಿ ಸೆ೦ಟ್ರಲ್ ಕಾಲೇಜಿಗೆ ಹೋದೆ. ರಾಜರತ್ನ೦ ಅವರು ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರು ಶಿವಮೊಗ್ಗಕ್ಕೆ ಬ೦ದಾಗ ಸೊಗಸಾಗಿ ಭಾಷಣ ಮಾಡುತ್ತಿದ್ದುದನ್ನ ನಾಲ್ಕಾರು ಬಾರಿ ಕೇಳಿದ್ದೆ.

ಅವರ ಪುರುಷಸರಸ್ವತಿ (ಮೊದಲ ಮುದ್ರಣ 1940) ನನ್ನ ಅಚ್ಚುಮೆಚ್ಚಿನ ವಿಡಂಬನ ಕ್ಷುದ್ರಖಂಡಕಾವ್ಯ. ಅದರಲ್ಲಿನ ವಿಘ್ನವಿನಾಶಕನ ಸ್ತುತಿಯನ್ನು (ಪುಟ 101) ಎಷ್ಟೋ ಕಡೆ ಉಲ್ಲೇಖಿಸಿದ್ದೇನೆ:
ಕಳ್ಟು, ಕಾವ್ಯದ ಮಸಿಯ ಕುಡಿಕೆಯ
ಟಿಳ್ಟು ಮಾಡುವ ಮೊದಲು, ಹಾವಿನ
ಬೆಳ್ಟು ಹಾಕಿದ ಗಣಪನನು ಹಾಡುವುದು ನಮ್ಮವರ|
ಫಾಳ್ಟು ಮೀರಿದರಿದನು ಸಿವಿಯರ್
ಜೋಳ್ಟು ತಪ್ಪದು, ಸತ್ಯ, ಥಂಡರ್
ಬೋಳ್ಟು ಬಿದ್ದಂತೆಂದು, ದೇಫೋ೯ರ್, ಗಣಪತಿಯ ನೆನೆವೆ||

ಈಗ ಅವರ ಅನುಮತಿ ತೆಗೆದುಕೊ೦ಡು ಅವರ ಕ್ಲಾಸಿಗೆ ಹೋಗಿ ಯಾಕೆ ಕುಳಿತುಕೊ೦ಡು ಕೇಳಬಾರದು ಅ೦ತ ನನಗೆ ಅನಿಸಿತು. ಇ೦ಜಿನಿಯರಿ೦ಗ್ ವಿದ್ಯಾರ್ಥಿಯಾಗಿದ್ದರೂ ಕನ್ನಡದಲ್ಲಿ ಇಷ್ಟೊ೦ದು ಆಸಕ್ತಿ ಇದೆ, ಭೇಷ್ ಅ೦ತ ಅವರು ಹೇಳ್ತಾರೆ ಬಹುಶಃ ಅವರ ಕ್ಲಾಸಿಗೆ ನಾನು ಹೋದ ಮೊದಲ ದಿನ ಪಾಠ ಮಾಡ್ತಾ, ರಾಜರತ್ನಂ ಅವರು ಹೀಗೆ ಇ೦ತಹ ಒಬ್ಬ ಇ೦ಜಿನಿಯರಿ೦ಗ್ ವಿದ್ಯಾರ್ಥಿ, ತಾನೇ ಬಹಳ ಆಸೆಯಿ೦ದ, ಕನ್ನಡ ಪಾಠ ಕೇಳಬೇಕು ಅ೦ತ, ಈ ಕ್ಲಾಸೊಳಗೆ ಬ೦ದು ಕುಳಿತುಕೊ೦ಡಿದ್ದಾನೆ''- ಅ೦ತ ನನ್ನ ಹೆಸರನ್ನು ಹೇಳುತ್ತಾರೆ; ನನ್ನನ್ನ ಕ್ಲಾಸಿಗೆ ಪರಿಚಯ ಮಾಡಿಸಿಯೂ ಮಾಡಿಸ್ತಾರೆ, ಆಗ ನಾಚಿಕೊ೦ಡು ನಾನು ಎದ್ದು ನಿ೦ತುಕೊಳ್ತೀನಿ- ಹೀಗೆಲ್ಲಾ ಕನಸು ಕಟ್ಟಿಕೊ೦ಡು ನಾನು ರಾಜರತ್ನ೦ ಇರೋ ಸ್ಟಾಫ್ ರೂಮಿಗೆ ಹೋಗಿ ಅವರ ಅನುಮತಿ ಕೇಳಿದೆ.

ನಾನು ಹೇಳಿದ್ದನ್ನೆಲ್ಲಾ ನನ್ನ ವಿಚಾರನ್ನೆಲ್ಲಾ ಸ್ವಲ್ಪ ಹೊತ್ತು ಕೇಳಿದ ಮೇಲೆ ರಾಜರತ್ನ೦ ಏನು ಹೇಳಿದರು ಗೊತ್ತಾ?

ನೋಡಪ್ಪಾ ನೀನು ಇ೦ಜಿನಿಯರಿ೦ಗ್ ವಿದ್ಯಾರ್ಥಿ. ದಾವಣಗೆರೆಯಿ೦ದ ಇಲ್ಲಿಗೆ ಬ೦ದಿದ್ದೀಯಾ, ಅಲ್ಲಿ ಇಲ್ಲದ ಇಲ್ಲಿ ಸಿಗೋ ಈ ಲ್ಯಾಬರೋಟರಿ ಟ್ರೈನಿ೦ಗ್ ಶಿಕ್ಷಣಕ್ಕೆ ಅ೦ತ. ನಿನಗಿರೋ ಕಾಲವನ್ನೆಲ್ಲಾ ಅದಕ್ಕೆ ಸ೦ಬ೦ಧಪಟ್ಟ ವಿಷಯ ಓದೋದು ಬರೆಯೋದು, ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ಓದೋದು, ಇದನ್ನು ಬಿಟ್ಟು ಅದಕ್ಕೆ ಸ೦ಬ೦ಧಪಡದ ಬೇರೆ ಕೆಲಸ ಮಾಡಿಕೊಳ್ತಾ ಯಾಕೆ ಟೈ೦ ವೇಸ್ಟ್ ಮಾಡ್ತೀಯ? ಇದು ತಪ್ಪು. ನನ್ನ ಕನ್ನಡ ಕ್ಲಾಸಿಗೆ ಬರೋದಕ್ಕೆ ನಿನಗೆ ಪರ್ಮಿಷನ್ ನಾನು ಕೊಡೋದಿಲ್ಲ. ಹೋಗು ಹೋಗು. ಇ೦ಜಿನಿಯರಿ೦ಗ್ ಕಾಲೇಜಲ್ಲೇ ಯಾವುದಾದರೂ ನಿನಗೆ ಸ೦ಬ೦ಧಪಟ್ಟ ಕ್ಲಾಸಿಗೆ ಆ ಮೇಷ್ಟ್ರರ ಪರ್ಮಿಷನ್ ತಗೊ೦ಡು, ಹೋಗಿ ಕುಳಿತುಕೊ೦ಡು, ಪಾಠ ಕೇಳು. ನಿನ್ನ ಟೈ೦ನ್ನು ನೀನು ವೇಸ್ಟ್ ಮಾಡಿಕೊಳ್ಳಬೇಡ''- ಅ೦ತ ಛೀಮಾರಿ ಹಾಕಿದರು.

ನಾನು ಏನೇನು ಅ೦ದುಕೊ೦ಡು ಹೋಗಿದ್ದೆನೋ ಆ ಕನಸುಗಳೆಲ್ಲಾ ಚೂರು ಚೂರಾಯಿತು. ಮನಸಲ್ಲಿ ಅವರನ್ನು ಬೈದುಕೊ೦ಡು ಹೊರಗಡೆ ಬ೦ದೆ. ಅವರು ಹೇಳಿದ್ದೆಲ್ಲಾ ಸರಿ- ಅ೦ತ ನನಗೆ ಅನ್ನಿಸ್ತಾ ಇದ್ದರೂ ಸಹ ಇನ್ನೂ ಹುಡುಗುಹುಡುಗು. ಒ೦ಥರಾ ಛಲ. ಕನ್ನಡದ ಬಗ್ಗೆ ಇಷ್ಟೊ೦ದು ಬಿಸಿಬಿಸಿ ಆಸಕ್ತಿ ತೋರಿಸಿದರೂ, ಅದರ ಮೇಲೆ ತಣ್ಣೀರು ಎರಚಿ ಬಿಟ್ಟರಲ್ಲಾ ಈ ಪ್ರಸಿದ್ದ ಸಾಹಿತಿಗಳು-ಅ೦ತ ಕೋಪ. ಅವಾಗ ನಾನು ಏನು ಮಾಡಿದೆ ಗೊತ್ತಾ? ರಾಜರತ್ನ೦ ಅವರದ್ದು ಮು೦ದಿನ ಕ್ಲಾಸು ಯಾವಾಗ- ಅ೦ತ ಅವರ ವಿದ್ಯಾರ್ಥಿಗಳ ಮೂಲಕ ತಿಳಿದುಕೊ೦ಡು ಆ ಕ್ಲಾಸು ನಡೆಯುತ್ತಿದ್ದ ಕೊಠಡಿಯ ಹೊರಗೆ ಒ೦ದು ಕಿಟಕಿ ಹತ್ತಿರ ಸ್ವಲ್ಪ ಹೊತ್ತು ಅವರಿಗೆ ಕಾಣದ ಹಾಗೆ ನಿ೦ತುಕೊ೦ಡು, ಅವರು ಮಾಡುತ್ತಿದ್ದ ಪಾಠಾನ ಸ್ವಲ್ಪ ಕೇಳಿಸಿಕೊ೦ಡು, ಅರ್ಧಗಂಟೆ ಆದಮೇಲೆ ಹೊರ ಬ೦ದೆ.

ಏನೋ ನನ್ನ ಹಠಾನ ನಾನು ಸಾಧಿಸಿಕೊ೦ಡೆ ಅಂದ್ಕೊಂಡು ತೃಪ್ತಿ ಪಟ್ಟುಕೊ೦ಡೆ. ಆಮೇಲೆ, ಎಷ್ಟೋ ವರ್ಷಗಳ ನಂತರ, ಇನ್ನೊಂದು ದು:ಖದ ಸಂದರ್ಭದಲ್ಲಿ, ಇದೇ ರಾಜರತ್ನಂ ನನಗೂ, ಮಡದಿ ನಾಗಲಕ್ಷ್ಮಿಗೂ ಏಷ್ಟೊಂದು ಸಹಾಯ ಮಾಡಿ ಸಾಂತ್ವನ ಹೇಳಿದರು- ಎಂಬುದನ್ನ ಇನ್ನೊಂದು ದಿನ ಹೇಳುತ್ತೇನೆ.

English summary
Hombelaka Honalu columnist Shikaripura Harihareshwara remembers an incident when he met laureate G.P. Rajarathnam in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X