ಮಳೆಯೇ ಸರ್ವ ಜನಾಶ್ರಯಮ್‌

ಮಳೆ : ‘ಮಳೆ ಚಿರತೆಯ ಚರ್ಮಕ್ಕೆ ಹೊಡೆದೀತು ; ಕಪ್ಪು ಚುಕ್ಕೆಗಳನ್ನ ತೊಳೆದೀತೇ?’ ಮತ್ತು ‘ಮಳೆ ಬಿದ್ದರೆ ಒಂದೇ ಮನೆಯ ಮಾಡಿನಮೇಲೆ ಬೀಳುವುದಿಲ್ಲ ’ ಎಂಬ ಆಫ್ರಿಕನ್‌ ಗಾದೆಗಳು ಗಮನಾರ್ಹ. (‘ಗಾದೆಗಳು ಅನುಭವದ ಹೆಣ್ಣುಮಕ್ಕಳು’ ಎಂದೊಂದು ಆಫ್ರಿಕನ್‌ ಗಾದೆಯೂ ಇದೆ!)

‘ಮಳೆಯೇ ಸರ್ವ ಜನಾಶ್ರಯಮ್‌’ ಎನ್ನುವ ಸೋಮೇಶ್ವರಶತಕದ ಪಾಲ್ಕುರಿಕೆ ಸೋಮನಾಥ, ‘ಒಣಗಲ್‌ ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನದು ಆಪತ್ತಿನೋಳ್‌?’ ಎಂದು ಪ್ರಶ್ನಿಸುತ್ತಾನೆ. ‘ಕೊಡುವರ್‌ ಕೊಂಬರು ಮರ್ತ್ಯರೇ?’- ಎಂದು ಕೇಳುವಾಗ, ‘ಗಿಡವೃಕ್ಷಂಗಳಿಗಾರು ನೀರನ್‌ ಎರೆವರ್‌ ನಿತ್ಯಂ ಮಹಾರಣ್ಯದೊಳ್‌’ ಎನ್ನುತ್ತಾ ಮಳೆಯನ್ನು ಕೊಂಡಾಡುತ್ತಾನೆ. ಆದರೆ, ಮಳೆ ಬಿಟ್ಟಮೇಲೆ ಅದರ ಕೆಳಗೆ ನಿಲ್ಲುವುದು ತರವಲ್ಲ : ‘ಮಳೇ ಹನಿ ಬಿಟ್ಟರೂ, ಮರದ ಹನಿ ಬಿಡಲಿಲ್ಲ !’

ಮಳೆ ಬೇಕೇ ಬೇಕು- ಎನ್ನುತ್ತಾ , ‘ಮಳೆಯಿಲ್ಲದ ಬೆಳೆ(ಪೈರೂ), ತಾಯಿಯಿಲ್ಲದ (ಮತಿಯಿಲ್ಲದ) ಕೂಸೂ ಸಮ’, ‘ಬೆಳೆಗೆ ಮಳೆ ಬರೆ ಲೇಸು’, ‘ ಸುರುವರಿಗೆ ಮಳೆಯು ಬರುವಾಸೆ’ ಎಂದೆಲ್ಲಾ ಸಾರುತ್ತಾ, ಸಕಾಲದಲ್ಲಿ ಎಷ್ಟು ಮಳೆ ಬಂದರೂ ಅಷ್ಟು ಒಳ್ಳೆಯದು ಎನ್ನುವುದಕ್ಕೆ, ‘ಮಳೆ ಬಂದರೆ ಕೇಡಲ್ಲ , ಮಗ ಉಂಡರೂ ಕೇಡಲ್ಲ’ ಎಂದು ಹೇಳುತ್ತಾರೆ. ಇದರಿಂದ ಬಂತು : ‘ಅರಸನಿಲ್ಲದ ನಾಡು, ವರುಷವಿಲ್ಲದ ಬೆಳೆಯು। ಹರುಷವಿಲ್ಲದವಳ ಮನೆವಾರ್ತೆ ಅರನಾರಿ। ಪುರುಷನಂತಕ್ಕು- ಸರ್ವಜ್ಞ।।’

ಶ್ರಾವಣ- ಭಾದ್ರಪದ ಮಾಸಗಳು ಸೇರಿ ವರ್ಷ ಋತು. ಮಳೆಗಾಲದ ಬಿಸಿಲು ಬೇಡದ ಇರುಸು ಮುರುಸು. ‘ಮಳೆಗಾಲದ ಬಿಸಿಲನ್ನ ನಂಬಬಾರದು, ನಗೆಗಾರನ ಮಾತ ನಂಬಲಾಗದು ’. ಹೇಗೆ? ಕೇಳಿ : ‘ಬಚ್ಚಲಿಲ್ಲದ ಮನೆಯು, ಕೆಚ್ಚಲಿಲ್ಲದ ಪಶುವು। ನೆಚ್ಚಗಿಲ್ಲದವಳ ಮನೆವಾರ್ತೆ ಶ್ರಾವಣದ। ಕಿಚ್ಚಿನಂತಕ್ಕು- ಸರ್ವಜ್ಞ।।’ ಸುಮ್ಮ ಸುಮ್ಮನೆ ಮಳೆ ಬಾರದು. ‘ಲಗಾನ್‌’ನ ಭುವನ್‌ ಮತ್ತು ಗೌರಿಯಾಂದಿಗೆ ‘ಕಾಲೇ ಮೇಘಾ, ಕಾಲೇ ಮೇಘಾ ಪಾನೀ ತೋ ಬರಸೋ’ ಎನ್ನುತ್ತಾ ಹಾರೈಸಬಹುದು, ಅಷ್ಟೆ . ‘ಕಪ್ಪೆ ಕೂಗಿ ಮಳೆ ಬರಿಸಿದ ಹಾಗೆ’. ಎಷ್ಟು ಬೀಳುತ್ತೆ ಯಾವಾಗ ಬೀಳುತ್ತೆ- ಹೇಳುವುದು ಕಷ್ಟ . ‘ಮಳೆ, ಮಾರು (= ದ್ವೇಷಭಾವನೆ), ಮರಣ ಯಾರೂ ಅರಿಯರು!’ ಆಕಾಶ ನೋಡದೆ, ಪುಸ್ತಕದಲ್ಲಿರುವುದನ್ನ ನಂಬಿ ಫಲ ಹೇಳುವುದರಿಂದ ಬಂತೋ ಏನೋ: ‘ಮಳೆ ಜೋಯಿಸನ ಮಿಂಡ, ಕತ್ತೆ ಗುಡಿಗಾರನ ಮಿಂಡ.’

ಜ್ಯೋತಿಷ್ಯದ ಮಾತು ಬಂತಲ್ಲ ; ಅದನ್ನೇ ಸ್ವಲ್ಪ ಮುಂದುವರಿಸಲೇ? ಒಂದು ಗಾದೆ ಇದೆ: ‘ಆದ್ರಿ ಮಳೆ ಗುಡುಗಿದರೆ ಆರು ಮಳೆ ಇಲ್ಲ’- ಅಂತ. ಸಾಮಾನ್ಯವಾಗಿ ಚಾಂದ್ರಮಾನ ಆಷಾಡ ಮಾಸದಲ್ಲಿ ಸೂರ್ಯ ಆರ್ದ್ರಾ ನಕ್ಷತ್ರ ಪ್ರವೇಶ ಮಾಡಿದಾಗ ಭಾರತದಲ್ಲಿ ಮಳೆ ಬರುತ್ತೆ. ಹಾಗೆ ಪ್ರೇವೇಶಿಸಿದ ಕಾಲದ ತಿಥಿ ವಾರ ಆ ದಿನದ (ಅಂದರೆ ಚಂದ್ರ ಇರುವ) ನಕ್ಷತ್ರ ಇತ್ಯಾದಿಗಳೆಲ್ಲದರ ಒಟ್ಟು ಪ್ರಭಾವ ಆ ಪ್ರದೇಶದಲ್ಲಿ ಮುಂದೆ ಬೀಳುವ ಮಳೆಯ ಮುನ್ಸೂಚನೆ ಕೊಡುತ್ತೆ- ಎಂದು ಒಂದು ನಂಬಿಕೆ. ಇನ್ನೊಂದು (ಅವೈಜ್ಞಾನಿಕ ಎಂದು ಕೆಲವರ, ಚರ್ಚಾಸ್ಪದ ಎಂದು ಹಲವರ) ಅಭಿಪ್ರಾಯ ಈ ಗಾದೆಗೆ ಮೂಲ. ಆ ಮಳೆ ಗುಡುಗು ಮಿಂಚು ಏನೂ ಇಲ್ಲದೆ, ಧಾರಾಕಾರವಾಗಿ ಜಿನುಗಿನ ಸೋನೆ ಮಳೆಯಾಗಿ ಸುರಿದರೆ ಒಳ್ಳೆಯದು; ಹಾಗೆ ಆಗದೆ, ಏನಾದರೂ ಗುಡುಗಿ, ಮಳೆ ಬಿದ್ದರೆ. ಆ ಪ್ರದೇಶದಲ್ಲಿ ಮುಂದೆ ವರ್ಷವಿಡೀ ಸರಿಯಾಗಿ ಮಳೆ ಬೀಳದು- ಎಂಬ ನಂಬಿಕೆ ನಮ್ಮಲ್ಲಿದೆ. ‘ಗುಡುಗಿದರೆ ಮೋಡ, ಅಡಗಿದ ಮಳೆ’, ಹಿಂದಿಯಲ್ಲಿ ‘ಜೋ ಗರಜತೇ ಹೈಂ, ವೋ ಬರಸತೇ ನಹೀಂ’ಗೆ ಸಮ. ಇದಕ್ಕೆ ಬಾಲಂಗೋಚಿಯಾಗಿ ‘ಆರಿದ್ರೆ ವೇಳೆಗೆ ಆದೋನೇ ಗಂಡ!’ ಅಂತ ಇದೆ. ಚಿಟಿ ಚಿಟಿ ಮಳೆ ಬಿಡದೆ ಸುರಿಯುತ್ತಿದ್ದಾಗ, ಮನೆ ಬಿಟ್ಟೂ ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕತೆ ಹೇಳುತ್ತಾ ಇದು?, ಎಂದು ರಸಿಕರ ಪ್ರಶ್ನೆ!

ನಾಯಿ ಬೆಕ್ಕು ಜಗಳ ಆಡಿದಷ್ಟು ಗಲಾಟೆಯ ಶಬ್ದದ ಭಾರೀ ಮಳೆ ಸುರಿಯಬಹುದು; ಇಲ್ಲವೇ ತುಂತುರು ಜಿನುಗಬಹುದು. ‘ತುಂತುರು ಮಳೆಯಿಂದ ತೂಬಿನ ಕೆರೆ ತುಂಬೀತೇ’ ಎಂದಾಗ ‘ನಾಲ್ಪೇ ಸುಖಂ ಅಸ್ತಿ’ ಎಂಬ ಮಾತು, ‘ನ ಹಿ ತಾಪಯಿತುಂ ಶಕ್ಯಂ ಸಾಗರಾಂಭಸ್‌ ತೃಣೋಲ್ಕಯಾ’ (ಹುಲ್ಲಿನ ಕಿಚ್ಚಿನಿಂದ ಸಾಗರದ ನೀರನ್ನು ಕಾಯಿಸಲಾದೀತೇ?) ಎಂಬ ಅಭಿಪ್ರಾಯದಿಂದ, ದೊಡ್ಡ ಕೆಲಸಕ್ಕೆ ತಕ್ಕ ಪ್ರಮಾಣದ ಉಪಕರಣ, ಸಾಧನ ಬೇಕು ಎನ್ನುವುದು ಮನದಟ್ಟಾಗುತ್ತೆ. ಇದನ್ನೇ ಚೀನೀ ಗಾದೆ, ‘ಗಾಡಿ ತುಂಬ ಇರುವ ಕಟ್ಟಿಗೆಗೆ ಬೆಂಕಿ ಬಿದ್ದಾಗ ಒಂದು ಪುಟಾಣಿ ಲೋಟಾ ಏನು ಮಾಡೀತು, ಎಷ್ಟು ಆರಿಸೀತು?’ ಎಂದು ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ ‘ಹನಿಗೂಡಿದರೆ ಹಳ್ಳ; ತೆನೆಗೂಡಿದರೆ ಬಳ್ಳ’ವೂ ಇನ್ನೊಂದು ದಡದಲ್ಲಿ ಇದೆ; ‘ಒಂದೊಂದೇ ಹೆಜ್ಜೆ ಇಡೋಣ; ಯೋಜನದುದ್ದ ಪ್ರಯಾಣ ಮಾಡೋಣ’ವನ್ನು ಇದು ಸಮರ್ಥಿಸುತ್ತದೆ. ಇದನ್ನೇ ‘ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:’(ಹನಿ ಹನಿ ಬಿದ್ದು ಕೊಡ ತುಂಬಿತು) ಎಂದಿರುವುದು. ಇದೇನೇ ಆಫ್ರಿಕನ್‌ ಗಾದೆಯಾಂದರಲ್ಲಿ ‘ದಿನಾ ಸ್ವಲ್ಪ ಸ್ವಲ್ಪವೇ ಬೀಳಲಿ; ಮಳೆ ಬಿದ್ದರೆ ಹೊಳೆ ತುಂಬುತ್ತೆ’; ಹಿಂದಿಯಲ್ಲಿ ‘ಬೂಂದ್‌ ಬೂಂದ್‌ ಪೆ ತಾಲಾಬ್‌ ಭರ್‌ ಜಾತಾ ಹೈ’; ಇಂಗ್ಲೀಷಿನಲ್ಲಿ ‘ಮೆನಿ ಎ ಪಿಕ್ಲ್‌, ಮೇಕ್ಸ್‌ ಎ ಮಿಕ್ಲ್‌!’- ಎಂಬ ರೂಪಗಳಲ್ಲಿ ಇದೆ. ಆದರೆ, ‘ವಿನಿಯೋಗಕ್ಕೆ ಕಡಿಮೆಯಾದರೂ ಹನಿಯೋಗಕ್ಕೆ ಕಡಿಮೆಯೇನಿಲ್ಲ’ ಎನ್ನುವಲ್ಲಿ , ದೇವಸ್ಥಾನದಲ್ಲಿ ವಿತರಿಸುವ ಪ್ರಸಾದ ಮತ್ತು ತೀರ್ಥದ ಬಗ್ಗೆ ಆಡುತ್ತಿದ್ದಾರೆಂಬುದು ಗೊತ್ತಾಗಬೇಕು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+