ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯರ ಪ್ರಾರ್ಥನಾ ಸಭೆ

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ಸ್ಯಾಕ್ರಮೆಂಟೋ : ಕ್ಯಾಲಿಫೋರ್ನಿಯಾದ ರಾಜಧಾನಿಯಾದ ಸ್ಯಾಕ್ರಮೆಂಟೋ ನಗರದಲ್ಲಿ, ಇಲ್ಲಿನ ಹಲವಾರು ಭಾರತೀಯ ಸಂಘ ಸಂಸ್ಥೆಗಳು ಒಂದೆಡೆ ಸೇರಿ, ಸೆ.14ರ ಶುಕ್ರವಾರ ಸಂಜೆ ಒಂದು ವಿಶೇಷ ಪ್ರಾರ್ಥನಾ ಸಭೆಯನ್ನು ನಿಯೋಜಿಸಿದ್ದವು. ನ್ಯೂಯಾರ್ಕಿನಲ್ಲಿ, ವಾಷಿಂಗ್ಟನ್‌ ಡಿಸಿಯಲ್ಲಿ ಮತ್ತು ಪೆನ್‌ಸಿಲ್ವೇನಿಯಾದಲ್ಲಿ ಇತ್ತೀಚೆಗೆ ನಡೆದ ದುಷ್ಕರ್ಮಿಗಳ ವಿಧ್ವಂಸಕ ಕೃತ್ಯವನ್ನು ಖಂಡಿಸುವ, ಅಲ್ಲಿ ಸಾವು ನೋವಿಗೆ ತುತ್ತಾದವರ, ಬಗ್ಗೆ ಸಂತಾಪ ಸೂಚಿಸುವ, ತಪ್ಪಿಸಿಕೊಂಡಿರುವವರ ವಿಚಾರವಾಗಿ ಕಳವಳಿಸುವ ಮತ್ತು ರಾಷ್ಟ್ರದ ಇನ್ನಿತರ ಪ್ರಜೆಗಳೊಂದಿಗೆ 'ಭಾರತೀಯ ಸಂಜಾತರಾದ ನಾವೆಲ್ಲರೂ ಒಗ್ಗಟ್ಟಿನಿಂದ ಒಂದಾಗಿ ನಿಮ್ಮೊಂದಿಗಿದೆ ಇದ್ದೇವೆ’- ಎಂದು ಘೋಷಿಸುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿತ್ತು.

ಸ್ಯಾಕ್ರಮೆಂಟೋ ನಗರ ಮತ್ತು ಅದರ ಸುತ್ತಮುತ್ತಣ ಪ್ರದೇಶದಲ್ಲಿ ಹಲವಾರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು ಇವೆ; ಇವುಗಳ ಪ್ರತಿನಿಧಿಗಳೂ, ಸದಸ್ಯರೂ, ಸಾರ್ವಜನಿಕರೂ ಪಾಲುಗೊಂಡ ಈ ಐಕ್ಯತಾ ಸಭೆಯಲ್ಲಿ ಭಾರತದ ವಿವಿಧ ಭಾಷೆ, ರಾಜ್ಯ ಮತ್ತು ಧರ್ಮಗಳ ಜನರು ಸೇರಿದ್ದರು. ಅ್ಲಗೆ ಬಂದಿದ್ದ ವಿದೇಶವಾಸೀ ಭಾರತೀಯರು ತಾವು ಹುಟ್ಟಿ ಬೆಳೆದ ಭಾರತ ದೇಶದಲ್ಲಿಯೇ ಈ ಬಗೆಯ ಭಯೋತ್ಪಾದಕ ದುಷ್ಟರ ಆಕ್ರಮಣ, ಆದರಿಂದಾದ, ಆಗಿರುವ, ಆಗುತ್ತಿರುವ ಅಪಾರ ಹಾನಿಯನ್ನು ನೆನೆಸಿಕೊಂಡರು. ಅಂಥಹ ಉಗ್ರರ ದಾಳಿ ಈಗ ಇಲ್ಲಿರುವ ನಮ್ಮ ಮನೆ ಬಾಗಿಲಿಗೇ ತಟ್ಟುವಂತಾಗಿದೆ, ಅದನ್ನು ಎದುರಿಸಲು ಇಲ್ಲಿನ ಇತರ ಪ್ರಜೆಗಳೊಂದಿಗೆ ತಾವು ಭಾರತೀಯರು ಒಂದಾಗಿದ್ದೇವೆ - ಎಂದು ಐಕ್ಯತೆಯ ಕಹಳೆಯೂದಿದರು.

ಪ್ರಾರಂಭದಲ್ಲಿ ಶಿಕಾರಿಪುರ ಹರಿಹರೇಶ್ವರ ಅವರು ಸ್ವಸ್ತಿವಾಚನ ಮಾಡಿದರು; 'ನಮಗೆ ಅನ್ನ, ನೀರು, ನೆರಳು ನೀಡುತ್ತಿರುವ ಹಾಗೂ ನಮ್ಮ ಪುರೋಭಿವೃದ್ಧಿಗೆ ಆಶ್ರಯ, ಆಯತನವಾಗಿರುವ ಅಮೆರಿಕಾ ಸಂಯುಕ್ತ ಸಂಸ್ಥಾನ, ರಾಷ್ಟ್ರ ಕ್ಷೋಭೆ - ರಹಿತವಾಗಿರಲಿ, ಉಗ್ರಗಾಮಿ ದೃಷ್ಟರ ದಮನವಾಗಿ ದೇಶದಲ್ಲಿ ಎಲ್ಲೆಡೆ ಶಾಂತಿ ನೆಲೆಸಲಿ ! ’ -- ಎಂದು ಹಾರೈಸಿದರು.

ಆತ್ಮ ಹೇಗೆ ಅವಿನಾಶಿ ? : ನಗರದ ಶ್ರೀಲಕ್ಷ್ಮೀನಾರಾಯಣ ಮಂದಿರದ ರಾಘವಾನಂದ ಶರ್ಮ ಅವರು ಗತಿಸಿದವರ ಕುಟುಂಬದವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಲು ದೇವರಲ್ಲಿ ಬೇಡಿಕೊಂಡರು. ವೇದಾಂತ ಸಮಾಜದ ಪರಿವ್ರಾಜಕರಾದ ಶ್ರೀಪ್ರಪನ್ನಾನಂದ ಸ್ವಾಮಿಗಳು ಭಗವದ್ಗೀತೆಯಿಂದ ಕೆಲವು ಶ್ಲೋಕಗಳನ್ನು ಉದ್ಧರಿಸಿ, ಆತ್ಮ ಹೇಗೆ ಅವಿನಾಶಿ ಎಂಬುದನ್ನು ವಿವರಿಸುತ್ತಾ, ಗತಿಸಿದವರ ಆತ್ಮಕ್ಕೆ ಶಾಂತಿ ಕೋರಿದರು.

ಉತ್ತರ ಅಮೆರಿಕದ ಬ್ರಾಹ್ಮಣ ಸಮಾಜದ ಅಧ್ಯಕ್ಷ , ಜನಕ್‌ ಸಿಧ್ರಾ ಅವರು ಸಭಿಕರನ್ನು ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವಿಶ್ವ ವಾಣಿಜ್ಯ ಕೇಂದ್ರ ಗೋಪುರಗ ಮತ್ತು ಕೇಂದ್ರ ರಕ್ಷಣಾಲಯದ ಮೇಲಿನ ದಾಳಿಯಲ್ಲಿ, ಅಪಹೃತ ವಿಮಾನಗಳ ಅಪಘಾತದಲ್ಲಿ ದಿವಂಗತರಾದವರ ಆತ್ಮಕ್ಕೆ ಶಾಂತಿ ಕೋರಲು, ಎಲ್ಲರೂ ಎದ್ದು ನಿಂತು, ಎರಡು ನಿಮಿಷ ಮೌನವ್ರತ ಆಚರಿಸಲು ಕೇಳಿಕೊಂಡರು.

ವ್ಯಾಕವಿಲ್‌ ನಗರದ ಕಮಿಷನರ್‌ ಆಗಿರುವ, ಇಂದರ್‌ಜಿತ್‌ ಕಲ್ಲಿರಾಯ್‌, ತಾವು ಇಂಗ್ಲೆಂಡಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅ್ಲಯೂ ಹೇಗೆ ಇಂಥ ದುಷ್ಕರ್ಮಿಗಳು ಭಾರತೀಯರಿಗೆ ತೊಂದರೆ ಕೊಡುತ್ತಿದ್ದರು, ಜನರು ಹೇಗೆ ಅದನ್ನು ಎದುರಿಸಿದರು ಎಂಬುದನ್ನು ವಿವರಿಸಿದರು. ಪೊಲೀಸ್‌ ಅಧಿಕಾರಿ, ಕಮಾಂಡರ್‌ ರಿಕ್‌ ಷಿರೋಷಿ ಅವರು ಇಲ್ಲಿ ಹುಟ್ಟಿ ಬೆಳೆದು ವಾಸಿಸುತ್ತಿರುವ ಮೂರನೆ ತಲೆಮಾರಿನ ಜಪಾನೀ ಅಮೆರಿಕನ್ನರು. ಅವರು, ತಮ್ಮ ಭಾಷಣದಲ್ಲಿ , 'ಈ ದೇಶ ವಲಸೆ ಬಂದ ಆಗಮಿಕರ ನಾಡು. ಹಿಂದೆ ಪರ್ಲ್‌ ಹಾರ್ಬರ್‌ ದುರ್ಘಟನೆ ನಡೆದು ಯುದ್ಧ ಪ್ರಾರಂಭವಾದಾಗ, ಯಾರು ಯಾರೋ ಅಮಾಯಕ ನಿರಪರಾಧೀ ವಿದೇಶೀಯರು ಹೇಗೆ ಇಲ್ಲಿನ ಕೆಲವು ಬಿಳಿ ಜನರ ತಪ್ಪು ಅಭಿಪ್ರಾಯ, ಗೇಲಿ ಕೋಪ ತಾಪ ತಿಕ್ಕಾಟ ತಾಕಲಾಟಗಳಿಂದ ಮಾನಹಾನಿ ಆಸ್ತಿಪಾಸ್ತಿಗಳ ನಾಶಕ್ಕೆ ತುತ್ತಾದರು’ - ಎಂಬುದನ್ನು ಹೃದಯಂಗಮವಾಗಿ ಬಣ್ಣಿಸಿದರು. ಈಗಿನ ಸನ್ನಿವೇಶದಲ್ಲಿ ಆ ಬಗೆಯ ದುರ್ವರ್ತನೆ ಪುನಃ ಸಂಭವಿಸದಿರುವಂತೆ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ, ಮತ್ತು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ನಿಮ್ಮ ಹಿತರಕ್ಷಣೆಗೆ ಸದಾ ಸಿದ್ಧ - ಎಂದರು. ಅಚಾತುರ್ಯ ಘಟನೆಗಳು ನಡೆಯದಂತೆ ಜಾಗೃತರಾಗಿರಲು ಸಾಧನೋಪಾಯಗಳನ್ನೂ ಅವರು ತಿಳಿ ಹೇಳಿದರು.

ನೊಂದವರ ದುಃಖವನ್ನು ಅರಿಯಬಲ್ಲೆವು : ಸಿಖ್‌ ಸಮಾಜದ ಪ್ರತಿನಿಧಿ ಸರಜಿತ್‌ ಕೌರ್‌ ಅವರು ಶುದ್ಧ ಪಂಜಾಬಿಯಲ್ಲಿ ಮಾತನಾಡಿ 'ಭಾರತೀಯರಾದ ನಾವೆಲ್ಲ ಒಂದೇ, ಒಗ್ಗಟ್ಟಿನಿಂದ ಇರಬೇಕು, ಇಲ್ಲಿನ ಇನ್ನುಳಿದ ಪ್ರಜೆಗಳೊಂದಿಗೆ ಸಹಕರಿಸಿ ನಡೆಯಬೇಕು ಮತ್ತು ಶಾಂತಿ ಸೌಹಾರ್ದತೆಗೆ ಇದು ಎಷ್ಟು ಆವಶ್ಯಕ’ - ಎಂಬುದನ್ನು ಬಿನ್ನವಿಸಿದರು. ಕೊನೆಯಲ್ಲಿ ರಾಷ್ಟ್ರದಲ್ಲಿ ಶಾಂತಿಗಾಗಿ 'ಆರ್ದಾಸ್‌’ ಪ್ರಾರ್ಥನೆಯನ್ನು ವಿಧಿವತ್ತಾಗಿ ನಡೆಸಿದರು. ಸಿಖ್‌ ಸಮಾಜದ ಇನ್ನೊಬ್ಬ ಪ್ರತಿನಿಧಿ, ನವತೇಜ್‌ ರಿಯಾರ್‌ ಮಾತನಾಡಿ, 'ಪಂಜಾಬಿನಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ಉಗ್ರರ ದಾಳಿಯನ್ನು ಎದುರಿಸುತ್ತಿರುವ ನಾವು ಭಾರತೀಯರು, ಇಲ್ಲಿ ಆಕ್ರಮಣಕ್ಕೆ ಬಲಿಯಾಗಿ ನೊಂದವರ ತೊಂದರೆಗೊಂಡವರ ದುಃಖವನ್ನು ಅರಿಯಬಲ್ಲೆವು, ನಾವು ತನು ಮನ ಧನಗಳೊಂದಿಗೆ ಅವರ ಜೊತೆಯಲ್ಲಿ ಇದ್ದೇವೆ’ - ಎಂದರು.

ಈ ಪ್ರದೇಶದ ಪ್ರತಿನಿಧಿಗಳಾಗಿ ಹೋಗಿರುವ ಕೇಂದ್ರದ ಕಾಂಗ್ರೆಸ್‌ಮನ್‌ (ಸೆನೆಟರ್‌ ಮತ್ತು ರೆಪ್ರೆಸೆನ್‌ಟಿಟೀವ್‌ಗಳು) ಅವರುಗಳಿಗೆ ಮನವಿ ಪತ್ರವೊಂದನ್ನು ರಚಿಸಿ, ಬಂದಿರುವ ಎಲ್ಲ ಭಾರತೀಯರೂ ಅದಕ್ಕೆ ಸಹಿ ಹಾಕುವಂತೆ ಡಾಕ್ಟರ್‌ ಚಿತ್ರಾ ಲಕ್ಷ್ಮಣನ್‌ ಅವರು ಕೋರಿದರು. ಗುಜರಾತಿ ಸಮಾಜದ ಡಾಕ್ಟರ್‌ ದಕ್ಷಾ ಷಾ, ಉತ್ತರ ಅಮೆರಿಕಾ ಬ್ರಾಹ್ಮಣ ಸಮಾಜದ ಅಭಯಾನಂದ ಮಹಾರಾಜ್‌, ಶ್ರೀಲಕ್ಷ್ಮೀನಾರಾಯ ಮಂದಿರದ ವಿಶ್ವಸ್ಥ ಮಂಡಳಿಯ ಜುಗಳ್‌ ಕಿಶೋರ್‌, ಕೋಹಿನೂರ್‌ ಕ್ಲಬ್ಬಿನ ಪ್ರತಿನಿಧಿಗಳು, ರೋಸ್‌ವಿಲ್‌ ಗುರುದ್ವಾರದ ಪದಾಧಿಕಾರಿಗಳು ಮತ್ತು ಫಿಜಿ ಅಮೆರಿಕನ್‌ ಸಿವಿಲ್‌ ರೈಟ್ಸ್‌ ಅಸೋಸಿಯೇಷನ್‌ನ ಪ್ರತಿನಿಧಿಗಳು ಮುಂತಾದವರು ಸಭೆಯಲ್ಲಿ ಮಾತನಾಡಿದರು.

ಸುಮಾರು 200ಕ್ಕೂ ಹೆಚ್ಚು ಜನ ಬಂದಿದ್ದ, ಅಚ್ಚುಕಟ್ಟಾಗಿ ನಡೆದ ಈ ಸಭೆಯನ್ನು ಮಾನ್ಯ ಮದನ್‌ ಶರ್ಮಾ, ಸುಖ್‌ಜೈನ್‌ ಸಿಂಘ್‌ ಮತ್ತು ಜನಕ್‌ ಸಿಧ್ರಾ ಅವರು ಸಂಘಟಕರಾಗಿ ವ್ಯವಸ್ಥೆ ಮಾಡಿದ್ದರು.

ಕೆಲವು ವರ್ಷಗಳ ಹಿಂದೆ ನ್ಯೂಯಾರ್ಕ್‌ನ ವಿಶ್ವರಾಷ್ಟ್ರಗಳ ಒಕ್ಕೂಟ ಸಂಸ್ಥೆಯ ಆಶ್ರಯದಲ್ಲಿ ಒಂದು ವಿಶೇಷ ಸಂಗೀತ ಕಚೇರಿ ನಡೆದಿತ್ತು. ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರಾಚಾರ್ಯರು ರಚಿಸಿದ ಮತ್ತು ಪ್ರಖ್ಯಾತ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ಎಂ. ಎಸ್‌. ಸುಬ್ಬುಲಕ್ಷ್ಮೀ ಅವರು ಸುಶ್ರಾವ್ಯವಾಗಿ ಹಾಡಿದ ಮೈತ್ರಿಮ್‌ ಭಜತ.... ಎಂಬ ಗೀತೆ ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ಮನಸೆಳೆಯುತ್ತಿರುವ ಒಂದು ಅತ್ಯತ್ತಮ ಹಾರೈಕೆಯ ಬಿನ್ನಪ. ಶುಕ್ರವಾರ ನಡೆದ ಪ್ರಾರ್ಥನಾ ಸಭೆಯ ಮೊದಲ ಹಂತದಲ್ಲಿ ಎಲ್ಲ ಸಭಿಕರು ಹರಿಹರೇಶ್ವರ ಅವರೊಂದಿಗೆ ಆ ಮೈತ್ರಿ ಭಜತ... ಸಂಸ್ಕೃತ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

English summary
Attack on America : Prayer and unity meeting by Indians in Sacramento, California
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X