ಕನ್ನಡಸಂಪದದ ಅಭಿವೃದ್ಧಿಗೆ ಪೂರಕವಾಗಬಲ್ಲ ಕೆಲವು ಸಲಹೆಗಳು :
- ಪ್ರಾಚೀನ ಕನ್ನಡ ಸಾಹಿತ್ಯ ವಿಭಾಗದಲ್ಲಿ ಈಗ ಬಿಟ್ಟು ಹೋಗಿರುವ ಈ ಕವಿಗಳನ್ನು ಸೇರಿಸಬಹುದು :
ಚಾವುಂಡರಾಯ (ಕ್ರಿ.ಶ. 978) ; ಗುಣವರ್ಮ (ಮೊದಲನೆಯವನು) (900) ; ಕಂತಿ (1100) ; ಗುಣವರ್ಮ-2 (1235) ; ಸೋಮರಾಜ (1222) ; ಆಂಡಯ್ಯ (1235) ; ಕಮಲಭವ (1235) ; ಮಲ್ಲಿಕಾರ್ಜುನ (1245)- ಮುಂತಾದವರು. - ಪ್ರಾಚೀನ ಲಕ್ಷಣ ಶಾಸ್ತ್ರಕಾರರ ವಿಭಾಗವನ್ನು ಪ್ರಾರಂಭಿಸಿ, ಅದರಲ್ಲಿ ಇವರನ್ನು ಪರಿಚಯಿಸಬಹುದು: ಉದಯಾದಿತ್ಯ (ಕ್ರಿ.ಶ. 1150) ; ಕವಿಕಾಮ (1200) ; ಕೇಶಿರಾಜ (1260) ; ಸಾಳ್ವ (1550) ; ಭಟ್ಟಾ ಕಳಂಕ (1604) ; ಗುಣಚಂದ್ರ (1650) ; ತಿರುಮಲಾರ್ಯ (1645- 1706)- ಮುಂತಾದವರು.
- ನಡುಗನ್ನಡ ಸಾಹಿತ್ಯ ವಿಭಾಗವನ್ನು ಪ್ರಾರಂಭಿಸಿ, ಅದರಲ್ಲಿ ಇವರನ್ನು ಪರಿಚಯಿಸಬಹುದು : ಹರಿಹರ (ಕ್ರಿ.ಶ.1165) (ಇವನನ್ನು ಪ್ರಾಚೀನ ಕನ್ನಡ ಸಾಹಿತ್ಯ ವಿಭಾಗದಿಂದ ಇಲ್ಲಿ ಕರೆತರಬಹುದು!) ; ರಾಘವಾಂಕ (1225) ; ದೇವರ (ಜೇಡರ) ದಾಸಿಮಯ್ಯ (1040) ; ಪ್ರಭುದೇವ, ಬಸವೇಶ್ವರ, ಅಕ್ಕ ಮಹಾದೇವಿ, ಚನ್ನಬಸವ, ಸಿದ್ಧರಾಮ (ಎಲ್ಲರೂ 1160) ; ಕುಮಾರವ್ಯಾಸ, ಚಾಮರಸ (ಇಬ್ಬರೂ 1430) ; ಲಕ್ಷ್ಮೀಶ, ರತ್ನಾಕರವರ್ಣಿ, ಪುರಂದರದಾಸ, ಕನಕದಾಸ (ಎಲ್ಲರೂ 1550) ; ವಿರೂಪಾಕ್ಷ ಪಂಡಿತ (1584), ಷಡಕ್ಷರ ದೇವ (1650) ; ಸರ್ವಜ್ಞ (1700)- ಮುಂತಾದವರು.
- ಕವಿಯನ್ನು ಪರಿಚಯಿಸುವಾಗ, ಅವನ/ಳ ಒಂದಾದರೂ ಪ್ರಸಿದ್ಧವಾದ ಪದ್ಯವನ್ನು ಮೂಲದಲ್ಲಿಯೇ ಉಲ್ಲೇಖಿಸಿ, ಹಳೆಗನ್ನಡದಲ್ಲಿದ್ದರೆ ಅದು ಸಾಮಾನ್ಯ ಓದುಗರಿಗೆ ಅರ್ಥವಾಗದಿರಬಹುದು ಎಂಬ ಕಾರಣಕ್ಕೆ, ಅದರ ಭಾವಾನುವಾದವನ್ನು ಮೂಲದೊಂದಿಗೇ ಕೊಡುವುದು ಒಳ್ಳೆಯದು. ನಿದರ್ಶನಕ್ಕೆ: ಶ್ರೀವಿಜಯ (ನೃಪತುಂಗ) ನಿಗೆ : ‘ಕಾವೇರಿಯಿಂದಮ್ ಆ ಗೋದಾವರಿವರಮ್ ಇರ್ಪ...’ - ಕವಿರಾಜಮಾರ್ಗ 1.36 ; ಆದಿಕವಿ ಪಂಪನಿಗೆ : ‘ಚಲದೊಳ್ ದುರ್ಯೋಧನಂ ನನ್ನಿಯಾಳ್ ಇನತನಯಂ ..’- ವಿಕ್ರಮಾರ್ಜುನ ವಿಜಯ 14.64; ‘ಪರಮ ಜಿನೇಂದ್ರವಾಣಿಯೆ ಸರಸ್ವತಿ ಬೇರದು ಪೆಣ್ಣ ರೂಪಮಂ ಧರಿಯಿಸಿ...’ - ಆದಿಪುರಾಣ 1.9; ಇತ್ಯಾದಿ. ಈಗ ಕೆಲವು ಕವಿಗಳಿಗೆ ಮಾತ್ರ ಈ ಕೃತಿ ಪರಿಚಯ ಮಾಡಿಕೊಟ್ಟಿದ್ದೀರಿ ; ಪ್ರತಿ ಕವಿಯನ್ನೂ ಈ ರೀತಿ ಉಲ್ಲೇಖಿಸುವುದು ಒಳ್ಳೆಯದು.
- ಪ್ರಾಚೀನ ಕನ್ನಡ ಸಾಹಿತ್ಯ ವಿಭಾಗದಲ್ಲಿ ಇರುವ ಮತ್ತು ಆಧುನಿಕ ಕನ್ನಡ ಸಾಹಿತ್ಯ ವಿಭಾಗದಲ್ಲಿ ಇರಬಹುದಾದ ಕೆಲವು ಅಕ್ಷರ ಸ್ಖಾಲಿತ್ಯ ಕಾಗುಣಿತ ಅಂಕಿ ಅಂಶಗಳ ದೋಷಗಳನ್ನು ಗುರುತಿಸಿ, ಸರಿಪಡಿಸಿ ತಿದ್ದುಕೊಳ್ಳಿ.
- ಯಾವ ಗ್ರಂಥದಿಂದ ಕವಿಗಳ ಈ ಪರಿಚಯಾತ್ಮಕ ವಿವರಗಳನ್ನು ಆಧರಿಸಿ ತೆಗೆದುಕೊಂಡಿದ್ದೀರಿ- ಎಂಬುದನ್ನು ವಿಭಾಗದ ಮೊದಲಲ್ಲಿಯೇ ಸೂಚಿಸಿರಿ. ಉದಾಹರಣೆಗೆ, ‘ಪ್ರಾಚೀನ ಕನ್ನಡ ಸಾಹಿತ್ಯ’ಕ್ಕೆ ನೀವು ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ : ಲೇಖಕ- ಪ್ರೊಫೆಸರ್ ಎಂ.ಮರಿಯಪ್ಪ ಭಟ್, ಕನ್ನಡ ಪ್ರಾಧ್ಯಾಪಕರು, ಮದ್ರಾಸು ವಿಶ್ವ ವಿದ್ಯಾಲಯ, ಭಾರತೀ ಪ್ರಕಾಶನ, ಕೃಷ್ಣಮೂರ್ತಿಪುರಂ, ಮೈಸೂರು, ಪ್ರಥಮ ಮುದ್ರಣ 1960’- ಗ್ರಂಥವನ್ನು ಅವಲಂಬಿಸಿದ್ದೀರಿ. ಅದನ್ನು ಆಕರವಾಗಿ ತಿಳಿಸಿ. (ಕನ್ನಡ ಕವಿ ಚರಿತೆ, ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಕೈಪಿಡಿ ಮುಂತಾದುವುಗಳೂ ನಿಮಗೆ ಸಹಾಯಕವಾಗಬಲ್ಲವು.) ಪರಾಮರ್ಶನ ಗ್ರಂಥಸೂಚಿ ಇದ್ದರೆ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗುತ್ತೆ . ಉಳಿದ ಸ್ವಂತ ಲೇಖನಗಳಿಗೆ, ಬರೆದವರನ್ನು ಲೇಖನಗಳ ಕೊನೆಯಲ್ಲಿ ಹೆಸರಿಸಿರಿ.
8. ಇನ್ನು ಏನು ಸುಲಭವಾಗಿ ಮಾಡಬಹುದು ? ಈಗಿರುವ ಪರಿಚಯಾತ್ಮಕ ಬರಹಗಳು ಸಂಕ್ಷಿಪ್ತವಾಗಿದ್ದರೂ ಅವು ಕೈಗಂಬಗಳಂತೆ ನಿಂತು ಹೆಚ್ಚಿನ ಮಾಹಿತಿಯತ್ತ ದಾರಿ ತೋರಬಲ್ಲವು. ಲೇಖನಗಳ ಪರಾಮರ್ಶನ ಸೂಚಿಯನ್ನು ಪಟ್ಟಿ ಮಾಡಿ ಪ್ರತಿ ಲೇಖನದ ಕೊನೆಯಲ್ಲಿ ಕೊಡಬಹುದು. ( ನಿದರ್ಶನಕ್ಕೆ : ರಂ ಶ್ರೀ ಮುಗಳಿಯವರ ‘ ಕನ್ನಡ ಸಾಹಿತ್ಯ ಚರಿತ್ರೆ’ಯ ಅನುಬಂಧದಲ್ಲಿ ಪ್ರಮುಖ ಗ್ರಂಥಕಾರರ ಇಂಥಹದೊಂದು ಒಳ್ಳೆಯ ಅಭ್ಯಾಸ ಸೂಚಿ ಇದೆ, ನೋಡಿ.) ಆಯಾಯ ಕವಿಯ ಅಥವಾ ಕೃತಿಯ ಬಗ್ಗೆ ಬೇರೆ ಜಾಲ ತಾಣವೋ , ಲೇಖನವೋ ಪ್ರಕಟಿತವಾಗಿದ್ದರೆ ಅದನ್ನಲ್ಲಿ ಕುಣಿಕೆ ಹಾಕಬಹುದು. ನಿದರ್ಶನಕ್ಕೆ ಡಾ. ಯು.ಆರ್. ಅನಂತ ಮೂರ್ತಿಗಳ ಪುಟದ ಕೊನೆಯಲ್ಲಿ ಅವರ ಲೇಖನ-ಕೃತಿಗಳಿಗೇ ಮೀಸಲಾದ ‘www.kannadasaahithya.com ಉಲ್ಲೇಖಿಸಬಹುದು. ದ.ರಾಬೇಂದ್ರೆ ಅವರ ಪುಟದ ಅಡಿಯಲ್ಲಿ ‘ ಅಂಬಿಕಾತನಯದತ್ತರ’ ಜಾಲತಾಣವನ್ನು ಹೆಸರಿಸಬಹುದು. ಕಾರಂತರ ಬಗ್ಗೆ, ಡಿ.ವಿ.ಜಿಯವರ ಬಗ್ಗೆ ಭೈರಪ್ಪನವರ ಬಗ್ಗೆ ಒಂದೊಂದು ವಿಶೇಷ ಸಂಚಿಕೆಗಳನ್ನೇ ತಂದ ಷಿಕಾಗೋ ಪ್ರದೇಶದ ಕನ್ನಡ ಸಂಘದ ‘ ಸಂಗಮ’ದ ಜಾಲ ತಾಣವನ್ನು ಸಂಪರ್ಕಿಸಲು ಕೊಂಡಿ ಹಾಕಬಹುದು. www.vishvakannada.comದ ಪ್ರತಿ ಸಂಚಿಕೆಯಲ್ಲಿಯೂ ಒಬ್ಬೊಬ್ಬರು ಹೆಸರಾಂತ ಸಾಹಿತಿಗಳ ಬಗ್ಗೆ ಸಮೀಕ್ಷಣಾತ್ಮಕ ಲೇಖನ ಪ್ರಕಟವಾಗಿತ್ತಲ್ಲ. ಅವನ್ನು ಇಲ್ಲಿ ಸ್ಮರಿಸಬಹುದು. ದಾಸ ವಾಙ್ಮಯವನ್ನು ವಿವರಿಸುವಾಗ www.haridasa.org ಜಾಲತಾಣವನ್ನು ಕಾಣಿಸಬಹುದು. ಶಿವಶರಣರ ಸಾಹಿತ್ಯಕ್ಕೆ ‘ ಗಣಕ ವಚನ ಸಂಪುಟಕ್ಕಾಗಿ’ www.vsna.com ಜಾಲತಾಣವನ್ನು ನೋಡಿರೆನ್ನಬಹುದು. ಕನ್ನಡ ಶಕ್ತಿಕೇಂದ್ರದ ಡಾ. ಚಿದಾನಂದ ಮೂರ್ತಿಗಳ ಆತ್ಮಕಥನಕ್ಕೆ, ಕುವೆಂಪು ಬಗ್ಗೆ ಡಾ. ಪ್ರಭುಶಂಕರ್ ಬರೆದ ಸುದೀರ್ಘ ಲೇಖನಕ್ಕೆ ‘ಪಂಡಿತ ಪುಟ’ವನ್ನು ಹೆಸರಿಸಬಹುದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಅನಿಕೇತನ’ ವನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿತ್ತು. ಅದರಲ್ಲೂ, ಈಗ ಕಣ್ಮರೆಯಾಗಿದ್ದ ‘ಕರ್ನಾಟಕ ಪತ್ರ’ದ ಮತ್ತು ‘ ಕಾಮನ ಬಿಲ್ಲಿನ’ ಜಾಲತಾಣಗಳಿಂದ ಕವಿ-ಕೃತಿಯ ಬಗ್ಗೆ ಈಗಾಗಲೇ ಬೆಳಕುಕಂಡ ಉತ್ತಮ ಲೇಖನಗಳನ್ನು ಉದ್ಧರಿಸಬಹುದು. (ಗಮನಿಸಿ- ಎಲ್ಲವನ್ನೂ ಇಲ್ಲಿ ಪಟ್ಟಿ ಮಾಡಿಲ್ಲ) - ಉದ್ಧರಿಸುವಾಗ ಆಯಾಯ ತಾಣಗಳ ನಿರ್ವಹಣಾಧಿಕಾರಿಗಳ ಲಿಖಿತ ಅನುಮತಿ ಪಡೆಯುತ್ತೀರಿ, ಗೊತ್ತು.
ಒಟ್ಟಾರೆ ಕನ್ನಡ ಸಂಪದ ಜಾಲತಾಣವು ಅಪೇಕ್ಷಿಸುವವರಿಗೆ ಒಂದು ಒಳ್ಳೆಯ ಆಕರ ಸಂಪುಟವಾಗಿ, ಉಲ್ಲೇಖಿಸಲು ಉಪಯುಕ್ತವಾದ ತಪ್ಪಿಲ್ಲದ ಖಚಿತ ಸಾಮಗ್ರಿಯನ್ನು ಒದಗಿಸುವ, ಎಲ್ಲರೂ ಸಂದರ್ಶಿಸುವ ಸಾಹಿತ್ಯಾಸಕ್ತರ ನಿಲುದಾಣವಾಗಲಿ - ಎಂದು ನನ್ನ ಹಾರೈಕೆ.