ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯಾಸಕ್ತರಿಗೆ ಮಾಹಿತಿ ಒದಗಿಸುವ ಒಂದು ಉತ್ತಮ ಆಕರ ಸಂಪುಟ!

By Staff
|
Google Oneindia Kannada News

*ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

Kannadasampada.comಅಂತರ್ಜಾಲದಲ್ಲಿ ಕನ್ನಡ ತಾಣಗಳು ಮೊದಲು ಬೆರಳೆಣಿಕೆಯಷ್ಟು ಇದ್ದವು; ಈಗ, ಸಮೃದ್ಧವಾಗಿವೆ- ಎನ್ನುವಷ್ಟು ತುಂಬಾ ಇವೆ. ಅದರ ಪಟ್ಟಿಯನ್ನು ನಾನಿಲ್ಲಿ ಕೊಡ ಹೊರಟಿಲ್ಲ. ಇದೇ ದಟ್ಸ್‌ಕನ್ನಡ.ಕಾಮ್‌ ‘ವೆಬ್‌ ಜಾಲದಲ್ಲಿ ನಾವು’ ವಿಭಾಗಕ್ಕೆ ಭೇಟಿಯಿತ್ತರೆ, ‘ಬರಹ’ದ ‘ಅಂತರ್ಜಾಲದಲ್ಲಿ ಕನ್ನಡ ತಾಣಗಳು’ ವಿಭಾಗವನ್ನು ಸಂದರ್ಶಿಸಿದರೆ, ಕೆಲವು ಕನ್ನಡ ಸಂಘಗಳ ಜಾಲತಾಣಗಳಲ್ಲಿ, ಕೆಲವು ಕನ್ನಡ ಅಂತರಜಾಲೀಯ ದೈನಿಕ/ನಿಯತಕಾಲಿಕಗಳಲ್ಲಿ ಕೊಡುವ ಕುಣಿಕೆಗಳನ್ನು ಜಗ್ಗಿದರೆ- ನಿಮಗೆ ಈ ಆಟದ ವಿಶಾಲ ಮೈದಾನದ ಹೆಬ್ಬಾಗಿಲು ತೆರೆದಂತಾಗುತ್ತದೆ. ಬಗೆ ಬಗೆಯ ಉದ್ದೇಶ, ವಿಧಾನ ಮತ್ತು ವ್ಯಾಪ್ತಿಯನ್ನುಳ್ಳ ಹಲವಾರು ಜಾಲತಾಣಗಳು ಕ್ರೀಡೆ ಮತ್ತು ಮನೋಲ್ಲಾಸಕ್ಕೆ ಈ ಸಾಧನಕೇರಿಯಲ್ಲಿ ದಾರಿಯುದ್ದಕ್ಕೂ ಗೋಚರಿಸುತ್ತವೆ. ಅಲ್ಲಿ ಒಳಹೊಕ್ಕಾಗ, ಮನೆಯಲ್ಲಿಯೇ ಕುಳಿತು, ಚಿಕ್ಕ ದೊಡ್ಡ ಪುಸ್ತಕ ಭಂಡಾರವೊಂದಕ್ಕೆ ನೀವು ಕಾಲಿಟ್ಟಂತೆ ಭಾಸವಾಗಲೂ ಬಹುದು. ಈ ಜಾಲತಾಣಗಳ ಸರಣಿಯಲ್ಲಿ ಹೊಚ್ಚ ಹೊಸದಾಗಿ ಸೇರ್ಪಡೆಯಾಗಿರುವ ಒಂದು ಗಮನಾರ್ಹ ನಿಲ್ದಾಣವೆಂದರೆ : ಬೆಂಗಳೂರಿನ ಯಂತ್ರೋಪಕರಣಗಳ ಪ್ರಖ್ಯಾತ ಕಾರ್ಖಾನೆ, ಹಿಂದೂಸ್ತಾನ್‌ ಮೆಷೀನ್‌ ಟೂಲ್ಸ್‌ನ (ಎಚ್‌.ಎಂ.ಟಿ.ಯ) ಕನ್ನಡ ಸಂಘದವರ http://www.kannadasampada.com.

ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಸುಲಭಸಾಧ್ಯ ಮಾಹಿತಿ ನೀಡುವುದು ಈ ಜಾಲತಾಣದ ಉದ್ದೇಶ. ಪ್ರಾಚೀನ ಮತ್ತು ಆಧುನಿಕ ಕನ್ನಡ ಬರಹಗಾರರ ಪರಿಚಯದ ಕೆಲಸವನ್ನು ಇಲ್ಲಿ ಮೊದಲು ಆರಂಭಿಸಿದ್ದಾರೆ. ಈ ಕಾರ್ಯವನ್ನು ನಿರಂತರವಾಗಿ ಮುಂದುವರೆಸುವುದರೊಂದಿಗೆ, ಇನ್ನಿತರ ಶಾಖೆಗಳಿಗೂ ಗಮನ ಹರಿಸುವ ಆಶಯ ಇವರಿಗೆ ಇದೆ. ಮಾಹಿತಿಕೋಶ (ಡಾಟಾ ಬೇಸ್‌)ವೊಂದನ್ನು ಅಳವಡಿಸುವುದು, ಅದರ ಮೂಲಕ ಹೆಚ್ಚಿನ ಮಾಹಿತಿ ಒದಗಿಸುವುದು, ಓದುಗ ನೋಡುಗರಿಗೆ ಸುಲಭವಾಗಿ ಮಾಹಿತಿ ಹುಡುಕಲು ಒಂದು ಒಳ್ಳೆಯ ವ್ಯವಸ್ಥೆ ಕಲ್ಪಿಸಿಕೊಡುವುದು- ಈ ಕೆಲಸಗಳನ್ನು ಹಮ್ಮಿಕೊಂಡು ಎಚ್‌.ಎಂ.ಟಿ.ಯ ‘ಡಬ್ಲ್ಯುಡಬ್ಲ್ಯುಡಬ್ಲ್ಯು.ಕನ್ನಡಸಂಪದ.ಕಾಮ್‌’ ಹೊರ ಹೊರಟಿದೆ. ಈ ಸಾಹಸದ ಕೆಲಸದಲ್ಲಿ ಪಾಲ್ಗೊಂಡು, ಜಾಲತಾಣದ ಪರಿಧಿಯನ್ನು ವಿಸ್ತರಿಸಲು ಸಹಾಯ, ಸಲಹೆ, ಸೂಚನೆಗಳಿಗಾಗಿ ಕನ್ನಡದ ಅಭಿಮಾನಿಗಳಿಗೆ ಕಳಕಳಿಯ ಕರೆಯನ್ನಿತ್ತಿದೆ.

ಎಚ್‌.ಎಂ.ಟಿ.ಯ ‘ಕನ್ನಡಸಂಪದ’ ಪ್ರಾರಂಭಗೊಂಡದ್ದು 1980ರಲ್ಲಿ. ಇಲ್ಲಿನ ಉದ್ಯೋಗಿಗಳು ತಮ್ಮ ಔದ್ಯೋಗಿಕ ಯಾಂತ್ರಿಕ ವಿಚಾರಗಳಲ್ಲಿ ಪ್ರಗತಿ ಸಾಧಿಸಿ, ತಮ್ಮ ಉದ್ಯಮಕ್ಕೆ ಲಾಭ ಕೀರ್ತಿ ರಕ್ಷಣೆ ಉನ್ನತಿಯನ್ನು ಪಡೆಯುವುದರ ಜೊತೆ ಜೊತೆಗೆ ಕನ್ನಡದ ಕೈಂಕರ್ಯವನ್ನೂ ಗಣನೀಯ ಪ್ರಮಾಣದಲ್ಲಿ ನಡೆಸಿಕೊಂಡು ಬರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ವಿಷಯ.

ಈ ಕನ್ನಡಸಂಪದದ ವ್ಯಾಪ್ತಿಯಲ್ಲಿ ಪ್ರತಿ ತಿಂಗಳೂ ನಡೆಯುತ್ತಿರುವ ಉಪನ್ಯಾಸ ಮಾಲಿಕೆಗಳು, ವಾರ್ಷಿಕ ಸಂಗೀತ ನಾಟಕ ಸಾಹಿತ್ಯ-ಉತ್ಸವಗಳು, ಕಮ್ಮಟಗಳು, ವಿಚಾರ ವೇದಿಕೆಗಳು, ಸ್ಪರ್ಧೆಗಳು, ಪ್ರಕಟಿತ ನಿಯತಕಾಲಿಕ ಸಂಚಿಕೆಗಳು, ಕನ್ನಡೇತರರಿಗೆ ಕನ್ನಡ ತರಗತಿಗಳು, ಸಾಹಿತ್ಯ ಹಾಗೂ ವೈಜ್ಞಾನಿಕ ವಿಷಯಗಳ ವೈಚಾರಿಕ ಸಮಾವೇಶಗಳು, ನೀನಾಸಂ ಜೊತೆಗೂಡಿ ನಡೆಸಿದ ಸಾಹಿತ್ಯ ಕಮ್ಮಟ- ಎಚ್‌.ಎಂ.ಟಿ. ಕನ್ನಡಸಂಪದದ ಹೆಗ್ಗಳಿಕೆಗಳು!

ಎಚ್‌.ಎಂ.ಟಿ. ಕನ್ನಡಸಂಪದ ಕನ್ನಡನಾಡಿಗೆ ನೀಡಿರುವ ಬಳುವಳಿ ಕಡಿಮೆಯೇನಿಲ್ಲ; ಸಂಪದದ ಪ್ರಧಾನ ಪೋಷಕ ಶ್ರೀ ರಾಮಾನುಜ ಅವರು ಈಗ ಭಾರತೀಯ ವಿದ್ಯಾ ಭವನದ ಬೆಂಗಳೂರು ಶಾಖೆಯ ಪ್ರಧಾನರು. ಸಂಪದದ ಅಧ್ಯಕ್ಷರೂ, ಎಲ್ಲ ಚಟುವಟಿಕೆಯ ಜೀವನಾಡಿಯೂ ಆಗಿರುವ ಶ್ರೀ ಎಂ.ನರಸಿಂಹ ಅವರು ಉದಯಭಾನು ಕಲಾಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಪ್ರಮುಖರು. ಸಂಪದದ ಮೊದಲ ದಿನಗಳಲ್ಲಿ ಅಧ್ಯಕ್ಷರಾಗಿದ್ದ (ದಿವಂಗತ) ಶ್ರೀ ಎಚ್‌.ಸೂರ್ಯನಾರಾಯಣ ಅವರು ತಮಿಳುನಾಡಿನ ಚೆನ್ನೈ ನಗರದ ಹೆಸರಾಂತ ಐನಾವರಮ್‌ ಕನ್ನಡಸಂಘದ ಸಂಸ್ಥಾಪಕ ಸಂಘಟಕರು. ಹಿಂದೆ ಕಾರ್ಯದರ್ಶಿಗಳಾಗಿದ್ದ ಶ್ರೀ ಶ್ರೀಧರ ಅವರು ಸುಜಯ್‌ನೆಟ್‌ ಟೆಕ್ನಾಲಜೀಸ್‌ ಗಣಕ ಕೇಂದ್ರದ ಮುಖ್ಯಸ್ಥರು; ಈ ‘ಕನ್ನಡಸಂಪದ’ ಜಾಲತಾಣದ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿರುವವರೂ ಅವರೇನೇ. ಸಂಪದ ಪೋಷಿಸಿ, ಕನ್ನಡಕ್ಕಿತ್ತ ಪ್ರತಿಭಾವಂತರ ಕೊಡುಗೆಯ ಪಟ್ಟಿ ಹಿರಿದು; ಕೆಲವರನ್ನು ಹೆಸರಿಸುವುದಾದರೆ, ಹಿನ್ನೆಲೆ ಗಾಯಕಿ ಬಿ.ಆರ್‌.ಛಾಯಾ, ವಿಮರ್ಶಕ ಎಸ್‌.ಆರ್‌.ವಿಜಯಶಂಕರ, ಕವಿ ಜಯಸಿಂಹ, ಕತೆಗಾರ ಅವಿನಾಶಿ, ಬರಹಗಾರ ಅಶೋಕ್‌ ಡಿ. ನಾಯಕ್‌, ಲೇಖಕ ಡಾ.ಕೆ.ಎನ್‌.ಪ್ರಸಾದ್‌, ಸಾಹಿತಿ ಯು.ಆರ್‌.ಮಧ್ಯಸ್ಥ- ಮೊದಲಾದವರು.

ಕನ್ನಡ ನಾಡಿನ ಕಲೆ, ಪ್ರವಾಸಿ ತಾಣಗಳು, ಪುಸ್ತಕಗಳು, ಉದ್ಯಮಗಳು, ಸುದ್ದಿ- ಹೀಗೆ ವಿವರಗಳನ್ನು ತಿಳಿಸುವ ಪುಟಗಳು ಈಗ ನಿರ್ಮಾಣದ ಹಂತದಲ್ಲಿವೆ, ನಿಜ. ಆದರೆ, ಈಗಾಗಲೇ ಕನ್ನಡ ಸಾಹಿತ್ಯದ ವಿಚಾರವಾಗಿ ಒಂದು ‘ಮಾಹಿತಿ ಕೋಶ’ ಒದಗಿಸುವ ಹಂಬಲದಲ್ಲಿ ಕನ್ನಡಸಂಪದ ಜಾಲತಾಣ ಈವರೆಗೆ ನಡೆದಿರುವ ಹೆಜ್ಜೆಗಳನ್ನು ಗುರುತಿಸೋಣ, ಸುಮಾರು ಇನ್ನೂರು ಮುದ್ರಿತ ಪುಟಗಳಷ್ಟು ಸಾಮಗ್ರಿಯನ್ನು ಸಮೀಕ್ಷಿಸೋಣ :

ಕನ್ನಡಸಂಪದದಲ್ಲಿ ಏನೇನಿದೆ?

‘ಪ್ರಾಚೀನ ಕನ್ನಡ ಸಾಹಿತ್ಯ’ ವಿಭಾಗದಲ್ಲಿ ನೃಪತುಂಗಾನುಮತಮಪ್ಪ ಶ್ರೀವಿಜಯಕೃತ ಕವಿರಾಜಮಾರ್ಗದಿಂದ ಹಿಡಿದು, ನಡುಗನ್ನಡದ ಹಂಪೆಯ ಹರಿಹರ (ಕ್ರಿ.ಶ.1165)ರವರೆಗೆ ಇಲ್ಲಿಗೆ ಬಂದಿದ್ದಾರೆ. ಹಳೆಗನ್ನಡದಲ್ಲಿ ಬರೆದನೆಂದು ಮುದ್ದಣ(1869- 1901)ನನ್ನೂ ಇಲ್ಲಿ ಕುಳ್ಳರಿಸಿದ್ದಾರೆ. ಒಂದೊಂದು ಪುಟದಲ್ಲಿ ಒಬ್ಬೊಬ್ಬ ಹೆಸರಾಂತ ಕವಿಯ ಪರಿಚಯಾತ್ಮಕ ಲೇಖನವಿದೆ. ಅವರವರ ಗದ್ಯ ಪದ್ಯ ಚಂಪೂಕಾವ್ಯ ಕೃತಿಗಳಲ್ಲಿ ವಿದ್ವಾಂಸರು ಗುರುತಿಸಿದ ವೈಶಿಷ್ಟ್ಯಗಳ ರೂಪರೇಷೆಯಿದೆ. ಕನ್ನಡದ ಮೊದಲ ಗದ್ಯಗ್ರಂಥ ಎನ್ನುವ ‘ವಡ್ಡಾರಾಧನೆ’ಯ ಶಿವಕೋಟ್ಯಾಚಾರ್ಯನಿದ್ದಾನೆ, ಯಶೋಧರಚರಿತೆಯ ಜನ್ನ ಇದ್ದಾನೆ. ಜನ್ನ ತನಗಿಂತ ಹಿರಿಯರಾದ ಆದಿಕವಿ ಪಂಪ, ಕವಿರತ್ನ ರನ್ನ, ಶಾಂತಿಪುರಾಣದ ಪೊನ್ನ ಮುಂತಾದವರನ್ನು ಹೀಗೆ ಹಾಡಿ ಹೊಗಳುತ್ತಾನಲ್ಲ :

‘‘ಎನಗೆ ಅನುಕೂಲಮಕ್ಕೆ ಗುಣವರ್ಮನ ಜಾಣ್ಣುಡಿ, ಪಂಪನ ಇಂಪು, ಪೊನ್ನನ ಬಗೆ, ನಾಗವರ್ಮನ ಬಹುಜ್ಞತೆ, ರನ್ನನ ಕಾಂತಿ, ನಾಗಚಂದ್ರನ ರಸಭಾವಮ್‌, ಅಗ್ಗಳನ ವಕ್ರತೆ, ನೇಮಿಯ ದೇಸೆ, ಪುಷ್ಪಬಾಣನ ಮೃದುಬಂಧಮ್‌ ಈ ಕವಿಗಳಲ್ತೆ ಜಿನೇಂದ್ರಪುರಾಣ ಕರ್ತೃಗಳ್‌।।’’

-ಇವರೆಲ್ಲ ಇಲ್ಲಿ ನೆರೆದಿದ್ದಾರೆ. ಇವರಲ್ಲದೆ ಕರ್ನಾಟ ಕೃತಿಗೆ ಸೀಮಾಪುರುಷರ್‌ ಎನಿಸಿದ ಇನ್ನೂ ಹಲವರು (ಒಟ್ಟು ಇಪ್ಪತ್ತೊಂದು) ಕವಿಗಳನ್ನು ಸಂಕ್ಷಿಪ್ತವಾಗಿ ಈ ವಿಭಾಗದಲ್ಲಿ ಪರಿಚಯಿಸಿದ್ದಾರೆ.

ಆಧುನಿಕ ಸಾಹಿತ್ಯ ವಿಭಾಗದಲ್ಲಿ ಕನ್ನಡ ಬರಹಗಾರರ ಬಗ್ಗೆ ಪರಿಚಯಾತ್ಮಕ ಲೇಖನಗಳಿವೆ. ಹೆಸರಾಂತ ಕವಿಗಳು (ಬೇಂದ್ರೆ, ಕುವೆಂಪು, ಪುತಿನ, ಅಡಿಗ, ಬಿ ಎಂ ಶ್ರೀ, ಗೋಕಾಕ್‌, ಗೋವಿಂದ ಪೈ, ನರಸಿಂಹಸ್ವಾಮಿ, ರಾಜರತ್ನಂ, ಸಿದ್ದಯ್ಯ ಪುರಾಣಿಕ ಮುಂತಾದವರು), ಕಾದಂಬರಿಕಾರರು (ಅನಕೃ, ಕಾರಂತ, ಬಿ.ವೆಂಕಟಾಚಾರ್ಯ, ಭೈರಪ್ಪ, ಯು.ಆರ್‌.ಅನಂತಮೂರ್ತಿ, ಭೂಸನೂರುಮಠ ಮುಂತಾದವರು), ಕತೆಗಾರರು (ಎಂ.ಎಸ್‌.ಪುಟ್ಟಣ್ಣ, ಮಾಸ್ತಿ, ಗೋರೂರು ರಾಮಸ್ವಾಮಿ ಅಯಂಗಾರ್‌ ಮುಂತಾದವರು), ನಾಟಕಕಾರರು (ಸಂಸ, ಪರ್ವತವಾಣಿ, ಗಿರೀಶ್‌ ಕಾರ್ನಾಡ್‌, ಬಿ. ಪುಟ್ಟಸ್ವಾಮಯ್ಯ ಮುಂತಾದವರು), ಸಂಶೋಧಕ ವಿದ್ವಾಂಸರು (ತೀನಂಶ್ರೀ, ಎ.ಆರ್‌.ಕೃಷ್ಣಶಾಸ್ತ್ರಿ, ಟಿ.ಎಸ್‌.ವೆಂಕಣ್ಣಯ್ಯ, ಚೆನ್ನಪ್ಪ ಉತ್ತಂಗಿ, ಎಂ.ಆರ್‌.ಶ್ರೀನಿವಾಸಮೂರ್ತಿ, ಫ.ಗು.ಹಳಕಟ್ಟಿ, ಶಂ.ಬಾ.ಜೋಷಿ ಮುಂತಾದವರು), ಧೀಮಂತ ಚಿಂತಕರು (ಎ. ಎನ್‌.ಮೂರ್ತಿರಾವ್‌, ಡಿ.ವಿ. ಗುಂಡಪ್ಪ ಮುಂತಾದವರು), ಕನ್ನಡ ಕಟ್ಟುವ ಕೆಲಸ ಮಾಡಿದವರು (ಆಲೂರು ವೆಂಕಟರಾಯರು, ಹರ್ಡೇಕರ್‌ ಮಂಜಪ್ಪ ಮುಂತಾದವರು)- ಹೀಗೆ ಒಟ್ಟು ಮೂವತ್ತೊಂಬತ್ತು ಕನ್ನಡಕ್ಕೆ ಕೀರ್ತಿತಂದ ಬರಹಗಾರರ ಬಗ್ಗೆ ಪರಿಚಯಾತ್ಮಕ ಲೇಖನಗಳಿವೆ.

ಕನ್ನಡಸಂಪದದ ಅಭಿವೃದ್ಧಿಗೆ ಪೂರಕವಾಗಬಲ್ಲ ಕೆಲವು ಸಲಹೆಗಳು :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X