ಮೋಡದ ಒಡಲಿನಲಿ ಮೇಘಪುಷ್ಪ ಮೂಡಿದೆ

ಮೋಡ ನೀರಿನ ಇನ್ನೊಂದು ರೂಪ, ವಿಶೇಷ ಆಯಾಮ. ನೀರಿಗೆ ‘ಮೇಘಪುಷ್ಪ ’ ಎಂದಮೇಲೆ, ಬಾನಾಡಿಯಾದ ಈ ಮುಗಿಲ ಬಗ್ಗೆ ಇನ್ನು ಹೆಚ್ಚು ವಿವರಣೆ ಬೇಕಿಲ್ಲ. ಇನ್ನು ಮನಸ್ಸಿನ ಅಧಿಷ್ಠಾತೃ ಪ್ರಭಾವ- ಬಿಂದು, ಚಂದ್ರಮ. ನೀರಿನ ಶೈತ್ಯ ನಿಶಾಕರನ ಬಳುವಳಿಯೆಂಬುದು ಒಂದು ನಂಬಿಕೆ. ತೇವ, ತಂಪು, ತಂಪಾದ ಕಿರಣಗಳನ್ನು ಸೂಸುವವನೆಂದು ರಜನೀಕಾಂತ ಚಂದ್ರನಿಗೂ ನೀರಿಗೂ ಸಂಬಂಧ.

ದೂರ ದೂರದ ಮಿನುಗು ತಾರೆಗಳು? ನಕ್ಷತ್ರವೆಂದರೇನು? ಭೂಮಿಯನ್ನು ಕೇಂದ್ರವಾಗಿರಿಸಿಕೊಂಡು ವಿಶ್ವದ ಒಂದು ಕೃತಕ ಖಗೋಳವನ್ನು ಕಲ್ಪಿಸಿಕೊಳ್ಳಿ. ಈ ಖಗೋಳದಮೇಲೆ ಚಂದ್ರನ ಪಥವನ್ನು ಒಂದು ದೀರ್ಘ ವೃತ್ತವಾಗಿ ಊಹಿಸಿಕೊಳ್ಳಿ. ಈ ವೃತ್ತದ ಪರಿಧಿಯನ್ನು ಇಪ್ಪತ್ತೇಳು ಸಮಭಾಗಗಳನ್ನಾಗಿ ವಿಂಗಡಿಸಿ. ಒಂದೊಂದು ಭಾಗವನ್ನೂ ಒಂದೊಂದು ‘ನಕ್ಷತ್ರ’ ಎಂದು ಕರೆದರು. ಆಯಾಯ ಭಾಗದ ಸುತ್ತ ಮುತ್ತ ಇರುವ ಎಲ್ಲ ಚುಕ್ಕೆಗಳನ್ನು, ತಾರೆಗಳನ್ನು ಒಟ್ಟುಗೂಡಿಸಿ, ಆ ಗುಂಪಿಗೆ ಒಂದೊಂದು ಹೆಸರಿಟ್ಟು, ಕೃತ್ತಿಕೆಯಿಂದ ಮೊದಲುಗೊಂಡು, ರೇವತಿ, ಅಶ್ವಿನಿ, ಭರಣಿಯವರೆಗೆ ಇಪ್ಪತ್ತೇಳು ನಕ್ಷತ್ರಗಳನ್ನು ಭಾರತೀಯ ಖಗೋಳಶಾಸ್ತ್ರಜ್ಢರು ಗುರುತಿಸಿದರು.

ಈ ಬಗೆಯ ಪರಿಗಣನೆಯಲ್ಲಿ, ಸೂರ್ಯ ತನ್ನ ಸಾಪೇಕ್ಷ ಸಂಚಾರದ ಕ್ರಾಂತಿಪಥದಲ್ಲಿ ಕೆಲವು ನಕ್ಷತ್ರಪುಂಜಗಳಲ್ಲಿ ಸಂಚರಿಸಿದಾಗ (ಉದಾಹರಣೆಗೆ, ಪುಷ್ಯಾ, ಆಶ್ಲೇಷಾ ಮುಂತಾದ ಮಹಾನಕ್ಷತ್ರಗಳಲ್ಲಿ) ಮಳೆ ಸುರಿಯುವುದನ್ನು ಭಾರತೀಯ ಖಗೋಳಶಾಸ್ತ್ರಜ್ಞರು ಅಂದೇ ಕಂಡಿದ್ದರು. ಈಗಲೂ ಕನ್ನಡನಾಡಿನಲ್ಲಿ ಹಲವೆಡೆ ಸೂರ್ಯನು ‘ಇರುವ’ ನಕ್ಷತ್ರಕ್ಕೆ ‘ಮಳೆನಕ್ಷತ್ರ’ ಎಂದು ಪಂಚಾಂಗಗಳಲ್ಲಿ ಬರೆದಿರುವುದನ್ನು ಕಾಣಬಹುದು. ರವಿಯು ಆರ್ದ್ರಾ ನಕ್ಷತ್ರವನ್ನು ‘ಪ್ರವೇಶಿಸುವ’ ಸೌರ-ಚಾಂದ್ರಮಾನ ತಿಥಿಯನ್ನು ವಾರವನ್ನೂ ಅವಲಂಬಿಸಿ, ಆ ಚಾಂದ್ರಮಾನ ಸಂವತ್ಸರದಲ್ಲಿ ಅನಾವೃಷ್ಟಿ, ಅಲ್ಪವೃಷ್ಟಿ ಅಥವಾ ಅತಿವೃಷ್ಟಿ, ಸುಭಿಕ್ಷಾ ಯಾ ದುರ್ಭಿಕ್ಷ ಸಂಭವವೆಂದು ಜ್ಯೋತಿಷ್ಕರು ಮುನ್ನುಡಿಯುತ್ತಾರೆ.

ವರಾಹಮಿಹಿರ ಏನನ್ನುತ್ತಾನೆ ಗೊತ್ತಾ ?

ವರಾಹಮಿಹಿರ (ಸುಮಾರು ಕ್ರಿ.ಶ.505)ನಂತೂ ತನ್ನ ಬೃಹತ್‌ ಸಂಹಿತೆಯಲ್ಲಿ (28.20) ಸೂರ್ಯ ಆರ್ದ್ರಾಕ್ಕೆ ಬಂದಾಗ ಮಳೆ ಸುರಿಯುವುದು ತಪ್ಪದು (‘ವೃಷ್ಟಿರ್‌ ಗತೇ ಅರ್ಕೇ ನಿಯಮೇನ ಚ ಆರ್ದ್ರಾಮ್‌’) ಎನ್ನುತ್ತಾನೆ. ನಕ್ಷತ್ರಕ್ಕೂ ನೀರಿಗೂ ಹೀಗೆ ಕಾರಣ ಕಲ್ಪಿಸಿಕೊಳ್ಳಲು ಅವಕಾಶವಾಯಿತು. ಸುರಿಮಳೆಯ ‘ವರ್ಷಾ’ಪದವೇ ‘ಸಂವತ್ಸರ’ಕ್ಕೂ ಸಂದಿತು. ಮಳೆಗಾಲದಿಂದ ಮಳೆಗಾಲಕ್ಕೆ ವರ್ಷಗಣನೆ ; ನೀರು ಹೆಪ್ಪುಗಟ್ಟುವ ಚಳಿಗಾಲ ; ಮಂಜು ಕರಗಿ ನೀರಾಗುವ ಕಾಲ, ತೇವಾಂಶ ಲವಲೇಶವಿಲ್ಲದ ಸುಡುಬಿಸಿನ ಬೇಸಗೆ- ಹೀಗೆ ಕಾಲಗಣನೆಗೂ ಈ ನೀರಿಗೂ ನಂಟು ಇದ್ದುದು ಉಂಟು.

ಈ ಎಲ್ಲ ವಿಚಾರಗಳನ್ನೂ , ನೀರ ಮಹತ್ವವನ್ನೂ ತಿಳಿದಿರಬೇಕಾದದ್ದು ಅವಶ್ಯಕ ಎಂದೂ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಹೇಗೆ ಎಡೆಬಿಡದ ಸಂಬಂಧ ಇರುತ್ತದೆಯೋ ಹಾಗೆಯೇ, ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಆಧಾರ- ಆಧಾರ್ಯ ಸಂಬಂಧ ಈ ನೀರಿಗೆ ನಂಟಾದ ವಸ್ತುಗಳ ಜೊತೆಗೆ ಇರುವುದನ್ನು ಗುರುತಿಸಬೇಕು- ಎನ್ನುತ್ತಾರೆ, ಈ ಮಂತ್ರದ ದ್ರಷ್ಟಾರ ಋಷಿ. ನೀರಮೇಲಣ ದೋಣಿಯಂತೆ ಲೋಕ ಇಲ್ಲಿ ತಳವೂರಿ ನಿಂತಿದೆ- ಎಂದು ಕವಿ ಭರತವಾಕ್ಯ ಹಾಡಿ, ಈ ಮಂತ್ರಭಾಗವನ್ನು ಮುಗಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+