ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನೆಂಬ ಜಲಪುಷ್ಪವ ನೀವು ಕಂಡಿರಾ..

By Staff
|
Google Oneindia Kannada News

ರಸಾತ್ಮಕನಾದುದರಿಂದ ಆ ರಸದ ಸಂಕೇತವಾಗಿ ತಿಂಗಳ ಚಂದ್ರನು ನೀರಿನ ಹೂವು. ಬಳ್ಳಿಯಲ್ಲಿ ಬಿಟ್ಟ ಹೂವು ನೋಡುಗನಿಗೆ ಎಷ್ಟೊಂದು ಸಂತೋಷ ತರುವುದಿಲ್ಲವೇ? ಹಾಗೆಯೇ, ಪ್ರಪಂಚದ ಎಲ್ಲ ಜೀವಿಗಳಿಗೆ ನೀರು ಏನೇನು ಸೌಖ್ಯ ತರಬಲ್ಲದೋ ಆ ಎಲ್ಲ ಪರಿಣತಿಯನ್ನ, ವೈಶಿಷ್ಟ್ಯವನ್ನ ಉಳ್ಳ ಈ ತಂಗದಿರ ಚಂದ್ರ, ಜಗತ್ತಿಗೇ ಆಹ್ಲಾದವನ್ನು ಉಂಟುಮಾಡುವ ಹುಣ್ಣಿಮೆಯ ಸೋಮ, ಚಂದ್ರ - ನಿಜಕ್ಕೂ ನೀರಿನ ಹೂವು ! ಈ ಗುಟ್ಟನ್ನ ಬಲ್ಲವನ ಜೀವನ ಹಸನಾಗಿರುತ್ತದೆ; ಬಾಳು ಹೂವಿನ ಹಾಸಿಗೆ ಆಗಿರುತ್ತದೆ; ಅಂಥವರ ಮನೆ ತುಂಬ ಮಕ್ಕಳು, ಸಾಕುಪ್ರಾಣಿಗಳು, ಸಂಪತ್ತು, ಎಲ್ಲಕ್ಕೂ ಮೇಲಾಗಿ ಶಾಂತಿ, ನೆಮ್ಮದಿ ತುಂಬಿರುತ್ತದೆ!

ಇಲ್ಲಿ ನೀರು ಮತ್ತು ಬೇರೆ ಬೇರೆ ವಸ್ತು- ವಿಶೇಷಗಳನ್ನು ಪರಸ್ಪರ ಆಧಾರ- ಆಧಾರ್ಯ ಭಾವದಿಂದ ನೋಡಿ, ಇವುಗಳ ಸಮಷ್ಟಿ ಪ್ರಭಾವವೇ ಈ ಜಗತ್ತು ವ್ಯವಸ್ಥಿತವಾಗಿ ನಿಂತಿರುವುದಕ್ಕೆ ಕಾರಣ- ಎಂಬುದನ್ನು ಪ್ರತಿಪಾದನೆ ಮಾಡಲಾಗಿದೆ. ಆಯತನ ಎಂದಾಗ ಆಶ್ರಯ, ಇಂಬು, ಸ್ಥಾನ, ಕಾರಣ- ಎಂದು ಬಗೆಯಬೇಕು. ಅವಶ್ಯಕತೆ ಬಿದ್ದೆಡೆಗಳಲ್ಲಿ ಊಹೆಗೂ, ಕಲ್ಪನೆಗೂ ಕಡಿವಾಣ ಹಾಕಬೇಡಿ. ವೇದ, ಉಪನಿಷತ್ತು ಮುಂತಾದ ಶ್ರುತಿಗಳು, ಸ್ಮೃತಿಗಳು ಅಲ್ಲಲ್ಲಿ ಈ ಬಗ್ಗೆ ಹೇಳಿರುವುದರ ಹಿನ್ನೆಲೆಯಲ್ಲಿ ಈ ಮಂತ್ರಭಾಗವನ್ನು ಅರ್ಥೈಸಿ, ಫಲವನ್ನು ಪಡೆಯೋಣ.

ಎಲ್ಲದರೊಳು ನೀರು, ನೀರಿನೊಳಗೆಲ್ಲ

ನೀರಿನಲ್ಲಿ ಬೆಂಕಿ ಅಡಗಿದೆ. ಸೂಕ್ಷ್ಮ ರೂಪದಲ್ಲಿ ಇದೆ. ಈ ಸುಪ್ತ ಅಗ್ನಿ, ಗುಪ್ತ ಉಷ್ಣತೆ ಹಲವು ರೀತಿಗಳಲ್ಲಿ ಇರಬಹುದು. ಘನ ಅವಸ್ಥೆಯಲ್ಲಿದ್ದಾಗ ಎಷ್ಟು ತೀವ್ರವಾಗಿ ಮೈ ಕೊರೆಯಬಲ್ಲುದೂ ಅಷ್ಟೇ ತೀವ್ರವಾಗಿ ಸುಡಬಲ್ಲ ಅನಿಲ ರೂಪದ ಆವಿಯಾಗಿ, ನೀರು ವಹ್ನಿಗೆ, ಬೆಂಕಿಗೆ ಆಶ್ರಯ ಕೊಡುತ್ತದೆ. ಸಮುದ್ರದಲ್ಲಿ ಹುದುಗಿದ ಉಷ್ಣತೆಗೆ ಬಡಬಾನಲ ಎನ್ನುತ್ತಾರೆ. (ಇದಕ್ಕೆ ಔರ್ವ, ವಡವ ಮತ್ತು ವಡವಾನಲ ಎಂಬ ಹೆಸರುಗಳೂ ಉಂಟು. - ಅಮರ ಕೋಶ, ಸ್ವರ್ಗವರ್ಗ 66) ಬೇರ್ಪಡಿಸಿದರೆ ತಗುಲಿದೊಡನೆ ಸುಡುವ ಶಕ್ತಿಯುಳ್ಳ ಬಗೆ ಬಗೆಯ ಲವಣಗಳಿಗೆ, ಕ್ಷಾರಗಳಿಗೆ, ಬೆಂಕಿಯಂಥ ವಸ್ತುಗಳಿಗೂ ಇರಲು ನೀರು ಆಶ್ರಯ ಕೊಡುತ್ತದೆ.

ರಾಸಾಯನಿಕ ಕ್ರಿಯೆಗೆ ಒಳಪಡಿಸಿದಾಗ ಬೆಂಕಿಯಂಥ ಈ ಕ್ಷಾರ - ದ್ರಾವಣಗಳ ಗರ್ಭದೊಳಗಣ ಧಾತುಗಳು ವಿಭಜನಗೊಂಡು ಬೇರೊಂದು ಬಗೆಯ ಸಂಯೋಜನೆಯಾಗಿ ನೀರು ಹೊರಹೊಮ್ಮುವುದು, ಶಾಖ ಉತ್ಪನ್ನವಾಗುವುದು ಸಂಭವನೀಯವೆಂದು ವಿಜ್ಞಾನ ಹೇಳುತ್ತದೆ. ಈ ರಾಸಾಯನಿಕ ಸಮೀಕರಣಗಳನ್ನು ಗಮನಿಸಿ: (ಗಂಧಕದ) ಸಲ್ಫ್ಯೂರಿಕ್‌ ಆ್ಯಸಿಡ್‌ + ತಾಮ್ರದ ಹೈಡ್ರಾಕ್ಸೈಡ್‌ = ತಾಮದ ಸಲ್ಫೇಟ್‌ + ನೀರು; ಹೈಡ್ರೋಕ್ಲೋರಿಕ್‌ ಆ್ಯಸಿಡ್‌ + ಸೋಡಿಯಂ ಹೈಡ್ರಾಕ್ಸೈಡ್‌ = ಸೋಡಿಯಂ ಕ್ಲೋರೈಡ್‌ + ನೀರು; ನೈಟ್ರಿಕ್‌ ಆ್ಯಸಿಡ್‌ + ಪೊಟಾಸಿಯಂ ಹೈಡ್ರಾಕ್ಸೈಡ್‌ = ಪೊಟಾಸಿಯಂ ನೈಟ್ರೇಟ್‌ + ನೀರು.

ಉಷ್ಣ ರಸಾಯನ ಶಾಸ್ತ್ರ (ಥರ್ಮೋ ಕೆಮಿಸ್ಟ್ರಿ)ದಲ್ಲಿ ಕ್ರಿಯೋಷ್ಣ, ರಚನೋಷ್ಣ, ತಟಸ್ಥೋಷ್ಣ, ದ್ರಾವಕೋಷ್ಣ, ಸಂಯೋಜಿತ ಜಲೋಷ್ಣ, ದಹನೋಷ್ಣಗಳ ಅಧ್ಯಯನ ನಡೆಸುವಾಗ ಮೇಲೆ ಹೇಳಿದ ಮೇರೆಗೆ ಆಮ್ಲ ಮತ್ತು ಪ್ರತ್ಯಾಮ್ಲಗಳು ತುಂಬ ಜಲಮಿಶ್ರಿತ ದ್ರಾವಣದಲ್ಲಿ ಪರಸ್ಪರ ತಟಸ್ಥಗೊಳಿಸಿದಾಗ ಬಿಡುಗಡೆಯಾಗುವ ಉಷ್ಣದ ಪರಿಮಾಣ ಎಷ್ಟು ಕೆಲೋರಿ ಎಂಬುದನ್ನು ಕಂಡು ಹಿಡಿಯುತ್ತೇವೆ.

ಬೆಂಕಿಯಾಳಗೂ ಉಂಟು ನೀರಿನ ಸೆಲೆಯು

ಆಸ್ಫೋಟಿತವಾದಾಗ ಸರ್ವನಾಶಕ ಅಗ್ನಿ ತಾಂಡವ ಆಡಿತಲ್ಲ, ಆ ಅನಿಲಾಸ್ತ್ರದ ಮೂಲ ಧಾತು - ಜನಜನಕ ಅಥವಾ ಹೈಡ್ರೋಜನ್‌ ! ಹೀಗೆ ಬೆಂಕಿಯಲ್ಲಿ ನೀರಿಗೆ ಆಶ್ರಯ ಇರುವುದನ್ನು ವಿಚಾರ ಮಾಡಬಹುದು.

ಗಾಳಿಯೇ ಅಗ್ನಿಯ ಮೂಲಕ ನೀರಿಗೆ ಕಾರಣ ಎಂದು, ಅನಿಲ ಸಲಿಲ ಅನಲಗಳ ಸಾಹಚರ್ಯವನ್ನು ಶ್ರುತಿ ಹೇಳುತ್ತದೆ. (ವಾಯೋರ್‌ ಅಗ್ನಿ:, ಅಗ್ನೇರ್‌ ಆಪ:। - ತೈತ್ತಿರೀಯ ಬ್ರಾಹ್ಮಣ.) ವಾಯು (ಮತ್ತು ಅದರ ವಿಶಿಷ್ಟ ಅಂಗವಾದ ಆಮ್ಲಜನಕ, ಆಕ್ಸಿಜನ್‌) ಜೀವಿಸಲು ಪ್ರಾಣಿಗೆ, ಸಸ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೆಚ್ಚು ಹೇಳಬೇಕಿಲ್ಲ.

ಜಲಚರ ಪ್ರಾಣಿಗಳೂ, ನೀರೊಳಗಣ ಸಸ್ಯಗಳೂ ನೀರಿನಲ್ಲಿ ಕರಗಿದ ಗಾಳಿಯನ್ನು ಮತ್ತೆ ಬೇರ್ಪಡಿಸಿಕೊಂಡು, ತಮಗೆ ಬೇಕಾದ ಈ ಪ್ರಾಣಾಧಾರಕ ಅನಿಲವನ್ನು ಹೇಗೆ ಪಡೆಯುತ್ತವೆ - ಎಂಬುದನ್ನ ವಿಜ್ಞಾನ ನಮಗೆ ಮನವರಿಕೆ ಮಾಡಿ ಕೊಡುತ್ತದೆ. ಹೀಗಾಗಿ, ಗಾಳಿಗೆ ನೀರು ಒಂದು ಆಶ್ರಯ ಸ್ಥಾನ. ಗಾಳಿಯಲ್ಲಿ ತೇವ ಕರಗಿ, ತಂಗಾಳಿ ಬೀಸಿ ಬಂದುದನ್ನ ಯಾರು ತಾನೆ ಅನುಭವಿಸಿ, ಸುಖಪಟ್ಟಿಲ್ಲ? ಪ್ರಾಣಾಧಾರಕ ಮೂಲಭೂತ ವಸ್ತುಗಳ ಶ್ರೇಣಿಯಲ್ಲಿ ಮೊದಲು ಗಾಳಿ, ನಂತರ ನೀರು ತಾನೆ? ಇವೆರಡರ ಪರಸ್ಪರ ಆಧಾರ ತಿಳಿದಿರಬೇಕಾದ ಅವಶ್ಯ ವಿಚಾರ - ಎಂಬುದು ಮಾತಿನ ಸಾರ.

ಸೂರ್ಯನಿಗೂ ನೀರಿಗೂ ಇರುವ ನಂಟು ಸರ್ವ ವಿದಿತ. ಹಿಮವನ್ನು ನೀರಾಗಿಸಿ, ನೀರನ್ನು ಆವಿಯಾಗಿಸಿ ಇತ್ತಣಿಂದ ಅತ್ತ, ಎತ್ತೆತ್ತಲೋ ಎತ್ತಿ ಕೊಂಡೊಯ್ಯುವ, ಧರಿಸುವ, ಕೆಲಸವನ್ನು ತನ್ನ ಪ್ರಖರ ಕಿರಣಗಳಿಂದ ತಪನ, ಸೂರ್ಯ ಮಾಡುತ್ತಾನೆ. ಮಳೆ ಉಂಟಾಗುವುದು ಸೂರ್ಯನಿಂದಲೇ ತಾನೆ? (ನೋಡಿ: ಆದಿತ್ಯಾತ್‌ ಜಾಯತೇ ವೃಷ್ಟಿ :) ಹಾಗಾಗಿ ಇಳೆಗೆ ಬೀಳುವ ಮಳೆಯ ನೀರಿಗೆ ಅವನೇ ಕಾರಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X