ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರ ಹೂವು ಯಾರು,ನಿಮಗೆ ಗೊತ್ತೇನು?

By Staff
|
Google Oneindia Kannada News

ಲಹರಿ- 2

ನೀರ ಹೂವು ಯಾರು, ನಿಮಗೆ ಗೊತ್ತೇನು?

(‘ಮಂತ್ರಪುಷ್ಪ’ದ ಒಂದು ಕನ್ನಡ ಭಾಷ್ಯ)

  • ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
ಸಾಮಾನ್ಯವಾಗಿ, ಸಾಂಪ್ರದಾಯಿಕವಾಗಿ ನಾವು ನಡೆಸುವ ಎಲ್ಲಾ ಪೂಜೆಗಳ ಅಂತ್ಯಭಾಗದಲ್ಲಿ ‘ಮಂತ್ರಪುಷ್ಪ’ವೆಂಬ ವೇದಘೋಷವನ್ನು ಮಾಡುವುದು ವಾಡಿಕೆ. ಪಲ್ಲವಿ, ಅನುಪಲ್ಲವಿಗಳಿಂದ ಕೂಡಿದ ಈ ಮಂತ್ರ ಪಠನವನ್ನು ಕೇಳುವುದೇ ಒಂದು ಆನಂದ. ಹೇಳುವ ಕ್ರಮವನ್ನು ಅರಿತ ಹತ್ತಾರು ಮಂದಿ ಸಂಸ್ಕೃತಜ್ಞರು ಒಕ್ಕೊರಳಲ್ಲಿ ಸ್ವರಗಳ ಏರಿಳಿತಗಳ ಸಮಶೃತಿಯಲ್ಲಿ ಈ ಮಂತ್ರಪುಷ್ಪವನ್ನು ವಾಚಿಸಿದರಂತೂ ಒಂದು ಅಪೂರ್ವ ವಿದ್ಯುತ್‌ ತರಂಗ- ತಾಡಿತ ವಾತಾವರಣವೇ ಅಲ್ಲಿ ಮೂಡಿತೋ ಏನೋ ಎಂದು ಕೆಲವರಿಗೆ ಭಾಸವಾಗುವುದುಂಟು.

ಯಾವ ಭೇದಭಾವನೆಗೂ ಎಡೆಗೊಡದೆ, ಎಲ್ಲಾ ಬಗೆಯ ಹಿಂದೂ ಧಾರ್ಮಿಕ ಚಟುವಟಿಕೆಗೂ ಒಪ್ಪಿಗೆಯಾದ, ಆಸ್ತಿಕರೂ ನಾಸ್ತಿಕರೂ ಮೆಚ್ಚಬಹುದಾದ, ಅನೂಚಾನವಾಗಿ ಬಳಕೆಯಲ್ಲಿರುವ ಈ ಮಂತ್ರಪುಷ್ಪದ ಮಹತ್ವವೇನು? ಇಲ್ಲಿನ ವೇದಕಾಲೀನ ಪದಗುಂಫನಗಳ ವಾಚ್ಯ, ಸೂಚ್ಯ, ಸಂಕೇತಗಳ- ಅರ್ಥವೇನು? ಇದನ್ನು ತಿಳಿಯಲು ಶ್ರೀ ಸಾಯಣ ಆಚಾರ್ಯರ ಮತ್ತು ಶ್ರೀ ಭಟ್ಟ ಭಾಸ್ಕರ ಅವರ ಭಾಷ್ಯಗಳನ್ನು ಅವಲಂಬಿಸಿ, ನಿಮ್ಮೊಂದಿಗೆ ಇಲ್ಲಿ ಪ್ರಯತ್ನಿಸುತ್ತೇನೆ :

ಈ ‘ಮಂತ್ರಪುಷ್ಪ ’ ಎಂಬುದು ಕೃಷ್ಣ ಯಜುರ್ವೇದ ತೈತ್ತಿರೀಯ ಅರಣ್ಯಕದಲ್ಲಿನ ಅಬೀಷ್ಟಕ ಎಂಬ ಒಂದು ಮಂತ್ರಭಾಗ. ಇದು ನೀರನ್ನು ಕುರಿತದ್ದು. ನೀರಿಗೆ ಇರುವ ಜಲ, ವಾರಿ, ಸಲಿಲ, ಉದಕ, ತೋಯ, ಘನರಸ ಮುಂತಾದ ಹಲವು ಹೆಸರುಗಳನ್ನೂ ಅವುಗಳ ಅರ್ಥವ್ಯಾಪ್ತಿಯನ್ನೂ ಈ ಮೊದಲೇ ನಾವು ಮನಗಂಡಿದ್ದೇವೆ. ನೀರಿನ ಗುಣಾತಿಶಯಗಳನ್ನು ಮೆಚ್ಚುತ್ತಾ ಈ ಹೊನಲಲ್ಲಿ ಈಜುತ್ತಾ ಮುಂದೆ ಬಂದಾಗ, ನೀರಿನ ಬಗ್ಗೆ ಸ್ವಾರಸ್ಯಕರವಾದ ಸ್ತುತಿಪರವಾದ ಮಾತುಗಳ ಗಿಡ ಮರ ಬಳ್ಳಿ ಹೂಗಳುಳ್ಳ ನಡುಗಡ್ಡೆಯ ರೂಪದ ಈ ‘ಮಂತ್ರಪುಷ್ಪ ’ವನ್ನು ಸಂಧಿಸುತ್ತೇವೆ.

ನೀರಿಗೆ ಸಂಬಂಧಿಸಿದಂತೆ ಹೊಗಳಿಕೆಯ ಹಲವಾರು ವಿಚಾರಪರ ಒಕ್ಕಣಿಕೆಗಳು ವೇದಗಳಲ್ಲಿ, ಉಪನಿಷತ್ತುಗಳಲ್ಲಿ, ನಂತರ ಬಂದ ಸ್ಮೃತಿಗಳಲ್ಲಿ , ಧರ್ಮಶಾಸ್ತ್ರ ಗ್ರಂಥಗಳಲ್ಲಿ ಇವೆ. (ನೋಡಿ : ಯೋ ಅಪ್ಸು ಚಂದ್ರಮಾ ಇವ। - ಋಗ್ವೇದ 8.82.8; ಯೋ ಅಪ್ಸೌ ಅಗ್ನಿರ್‌ ಅತಿ ತಂ ಸೃಜಾಮಿ। - ಆಥರ್ವ 16.1. 7; ಆಪೋ ಜ್ಯೋತೀ ರಸೋ ಅಮೃತಂ ಬ್ರಹ್ಮಾ। - ಮಹಾನಾರಾಯಣ ಉಪ. 13.1; ಇಮಾ ಆಪ: ಸರ್ವೇೕಷಾಂ ಭುತಾನಾಂ ಮಧ್ವಾಸಾಂ ಅಪಾಂ ಸರ್ವಾಣಿ ಭೂತಾನಿ ಮಧು। - ಛಾನ್ದೋಗ್ಯ ಉಪ. 2. 5.2.; ಅಗ್ನೇರ್‌ ಆಪೋ ಅದ್ಭ್ಯ: ಪೃಥಿವೀ। - ತೈತ್ತಿರೀಯ ಉಪ. 2. 1. 1; ಆಪೋ ರಸಗುಣಾ: ಸ್ಮೃತಾ:.। - ಮನುಸ್ಮೃತಿ 1. 78; ಆಪೋ ನಾರಾ ಇತಿ ಪ್ರೋಕ್ತಾ।- ಮನು 1.10 ಇತ್ಯಾದಿ)

ಅವೆಲ್ಲದರ ಸಾರವಾಗಿ, ಸೂಚ್ಯ ಸಂಕೇತವಾಗಿ, ನೀರೇ ಎಲ್ಲಕ್ಕೂ ಆಧಾರವೆಂಬ ಅದರ ಹೆಗ್ಗಳಿಕೆಯನ್ನು ಹಿಗ್ಗಿಸಿ ಹೇಳುವ ಹಾಡಾಗಿ ಒಂದು ಮಂತ್ರಭಾಗ ಒಡಮೂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X