ಭಾಷ್ಯಾಕಾರರ ಕಣ್ಣಲ್ಲಿ ಗಿರಿಶಂತ
‘ಗಿರಿಶಂತ ’ ಎಂದು ರುದ್ರನನ್ನು ಋಷಿ ಕರೆದುದನ್ನು ಭಾಷ್ಯಕಾರರು ನಾಲ್ಕಾರು ಬಗೆಯಲ್ಲಿ ಅರ್ಥ ಹೇಳಿದ್ದಾರೆ. ಅದರಲ್ಲಿ ನಾನು ಆರಿಸಿಕೊಂಡಿರುವ, ‘ಮಾತಿನಲ್ಲಿ ಇದ್ದುಕೊಂಡು ಸುಖವನ್ನು ಉಂಟುಮಾಡುವವನು’(ಗಿರಿ ವೈದಿಕ ಪ್ರಯೋಗೇ ಗಿರೌ ವಾಗರ್ಥೌ, ಶಂ ಸುಖಂ, ತ ತನೋತಿ, ಭಾವಯತಿ- ಇತಿ ಗಿರಿಶಂತ:) ಎಂಬುದು ಕವಿಯ ಇಂಗಿತವನ್ನು ಸೊಗಸಾಗಿ ಸೂಚಿಸುತ್ತದೆ. ಮುಂದೆ ರುದ್ರನನ್ನು ಇನ್ನೊಮ್ಮೆ ‘ಗಿರಿಶಂತ ’ ಎಂದು ಕರೆದಾಗ (ಯಾಂ ಇಷುಂ ಗಿರಿಶಂತ ಹಸ್ತೇ ಬಿಭರ್ಷಿ ಅಸ್ತವೇ । ಶಿವಾಂ ಗಿರಿತ್ರ ತಾಂ ಕುರು.....।। ), ಅಲ್ಲಿ ಅದಕ್ಕೆ ಬೇರೆ ಅರ್ಥ ‘ಗಿರಿ ಅಂದರೆ ಕೈಲಾಸವೆಂಬ ಪರ್ವತದಲ್ಲಿ ಇದ್ದುಕೊಂಡು ಎಲ್ಲರಿಗೂ ಸುಖಕರನಾಗಿರುವ ಶಂ-ಕರ ಅವನು!’ ಜೊತೆಗೆ, ಅವನು ‘ಗಿರಿತ್ರ’ ಮಾತುಕೊಟ್ಟು ತಪ್ಪದೇ ನಡೆಸುವವನು, ಕಾಪಾಡುವವನೂ(ಗಿರಿ ಗಿರೌ ಸ್ಥಿತ:, ತ್ರ ತ್ರಾಯತೇ, ರಕ್ಷತಿ) ಹೌದು.
ನೀರು ನಿನ್ನೊಳಗೋ, ನಿನ್ನೊಳಗೆ ನೀರೋ..
ಸ್ಥಾವರವಸ್ತುಗಳನ್ನು ಹೆಸರಿಸಿದ ಬಳಿಕ, ಜೀವಿಗಳಿಗೆ ಮುಖ್ಯವಾದ ‘ನೀರಿ ’ನ ವಿವರದ ಕಡೆ ಕವಿಯ ಗಮನ ಸ್ವಾಭಾವಿಕವಾಗಿಯೇ ಹರಿಯುತ್ತದೆ. ನೀನು ನೀರು; ನೀರೇ ನೀನು- ಎಂದು ಹೇಳುವ ರಭಸದಲ್ಲಿ ಕವಿ ಯಾವ ಯಾವ ರೀತಿಯ ನೀರಿನ ಆಕರಗಳನ್ನು ಪಟ್ಟಿ ಮಾಡುತ್ತಾನೆ, ಸಂಕೇತಗಳನ್ನು ಸೂಚಿಸುತ್ತಾನೆ, ಗಮನಿಸಿ( ಸಂಸ್ಕೃತ ಪದಗಳನ್ನು ಆವರಣ ಚಿಹ್ನೆಯಾಳಗೆ ಕುಳ್ಳಿಸಿರುವೆ.):
ವೇಗವಾಗಿ ಹರಿಯುವ ನೀರಿನಲ್ಲಿ ಇರುವ (ಶೀಘ್ರಿಯ)ಶಿವನೇ ನಿನಗೆ ನಮಸ್ಕಾರ; ನೀನು ಉದಕ ಪ್ರವಾಹ (ಶೀಭ) ; ಅಲ್ಲಿ, ಎಲ್ಲಾ ಪ್ರಾಣಿಗಳನ್ನೂ ಕೊಚ್ಚಿಕೊಂಡು ಹೋಗುವ ನಿನ್ನ ತರಂಗಗಳು ಅಲೆ(‘ಊರ್ಮಿ’)ಗಳು ಆರಂತೆ:
ಹಸಿವು, ನೀರಿನ ಬಯಕೆ, ಶೋಕ, ಮೋಹದ ನೆರಳು ;
ಗೂಡು ಹಣ್ಣಾಗುವ ಮುಪ್ಪು ಮತ್ತು ಸಾವು !
ನಿನ್ನ ಈ ಅಲೆಗಳಿಗಿದೋ ನನ್ನ ನಮನ !
-ಎನ್ನುತ್ತಾನೆ, ಕವಿ. ಗಾಳಿಯಲ್ಲಿನ ಅಲೆಯಿಂದಾಗುವ ‘ಶಬ್ದ’ಕ್ಕೆ ‘ಶಬ್ದೋ ನಿನಾದ ನಿನದ ಧ್ವನಿ ಧ್ವಾನ ರವ ಸ್ವನಾ:’ ಎಂಬ ಏಳು ಪರ್ಯಾಯ ಪದಗಳು. ‘ಶಬ್ದವಿಲ್ಲದ ನೀರು (ಅವಸ್ವನೀ), ಅಗಾಧವಾದ ಆಳವಾದ ಆಕರದಲ್ಲಿರುವ (ಹೃದಯ್ಯ) ಗಂಭೀರರೂಪೀ ನೀರು ನೀನು, ಶಿವನೇ. ಧಾರಾಕಾರವಾಗಿ ಹರಿಯುವ (‘ಸ್ರೋತ’) ನೀರೂ ನೀನೇ. ಸ್ವಲ್ಪವೇ ನೀರು ಹರಿವ ಕಾಲುವೆ (ಕಾಟ್ಯ), ನೀರು ಧುಮುಕುವ ಪ್ರದೇಶ(ನೀಪ)ವೂ ನೀನೇ. ಕೆಸರಿನ ಪ್ರದೇಶ(ಸೂದ್ಯ)ವಾದರೇನಂತೆ, ಆ ಕೆಸರಿ(‘ಪಂಕ’)ನಲ್ಲಿ ಹುಟ್ಟಿ(‘ಜ’)ದ್ದರೂ ಅರ್ಚನೆಗೆ ಕಮಲವೇ ಶ್ರೇಷ್ಠವಲ್ಲವೇ ? ಸರೋವರ (ಸರಸ್)ವೂ ನಿನ್ನದೇ ತಾಣ.
ಈಗಾಗಲೇ ಗಮನಿಸಿದಂತೆ, ಹರಿವ ನದಿ ತಾನೂ ಶುದ್ಧಗೊಂಡು, ತನ್ನಲ್ಲಿ ಮೀಯುವವರನ್ನೂ ಶುದ್ಧಗೊಳಿಸುತ್ತದೆ ಎಂಬ ನಮ್ಮ ನಂಬಿಕೆ ಬಹು ಪ್ರಾಚೀನವಾದದ್ದು. ನದಿಗೆ ಅಭಿಮಾನೀ ದೇವತೆ(ನಾದ್ಯ)ನೂ ನೀನೇ. ನೀನಿದ್ದೇ ಎಲ್ಲಾ ನದಿಗಳೂ ತೀರ್ಥವಾಗಿ(ತೀರ್ಥ್ಯ)ವಾಗಿ ಪರಿಣಮಿಸಿರುವುದು ಎಂಬ ಸೂಚನೆ ಕೊಡುತ್ತಾನೆ, ಕವಿ. ನಮ್ಮಲ್ಲಿ ‘ತೀರ್ಥ’ ಎಂಬ ಪದ(‘ಧರ್ಮ’ ಎಂಬ ಪದದಂತೆ) ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಹಲವಾರು ಅರ್ಥಗಳನ್ನು ಸ್ಫುರಿಸುವ ವಿಶೇಷ ಪದ! ಅದರ ಬಗ್ಗೆ ಹಿಂದಿನ ಲೇಖನದಲ್ಲಿ ಸ್ವಲ್ಪ ವಿವೇಚಿಸಿದ್ದೇವೆ. ಇಲ್ಲಿ ಗೌರವಾನ್ವಿತ, ಶ್ರೇಷ್ಠ, ಪವಿತ್ರ- ಎಂಬ ಅರ್ಥ ಉಚಿತ.












Click it and Unblock the Notifications