ದೇಹದಲ್ಲೂ ಉಂಟು ನೀರಿನ ಸೆಲೆ
ಮನುಷ್ಯನ ದೇಹವನ್ನೇ ತೆಗೆದುಕೊಳ್ಳಿ, ರಕ್ತದ ದ್ರವಾಂಶದಲ್ಲಿ ಸಮುದ್ರದ ನೀರಿನಲ್ಲಿನ ಈ ಲವಣಗಳ ದ್ರಾವಣವೇ ತುಂಬಿದೆಯೆಂದು ಬಲ್ಲವರ ಹೇಳಿಕೆ. ಈ ನೀರೇ ದೇಹದ ಬಹುಭಾಗವನ್ನು ಆವರಿಸಿಕೊಂಡಿರುವ ಚೈತನ್ಯಾಂಶ. ಇದೇ ‘ಜೀವ’ದ ಮೂರ್ತರೂಪ. ಹಾಗಾಗಿ, ‘ನನ್ನ ಜೀವವೇ ನಿನ್ನ ಜೀವ ; ನನ್ನ ಪ್ರಾಣವೇ ನಿನ್ನ ಪ್ರಾಣ’ ಎನ್ನುತ್ತಾ, ‘ಅಸ್ಮಿನ್ ಬಿಂಬೇ ಸುಖಂ ಚಿರಂ ತಿಷ್ಠನ್ತು ಸ್ವಾಹಾ’- ಎಂದು ಪ್ರಾಣ ಪ್ರತಿಷ್ಠಾಪನೆ ಮಾಡುತ್ತೇವಲ್ಲ, ಆ ದೇವರ ಮೂರ್ತಿಗೆ, ಪ್ರತಿಮೆಗೆ, ಶಿವಲಿಂಗಕ್ಕೆ, ನಮ್ಮ ‘ಜೀವ’ವನ್ನೇ ಧಾರೆಯೆರೆಯುವುದರ ಒಂದು ಸಂಕೇತ- ಈ ‘ಅಭಿಷೇಕ’!
****
ವೈದಿಕ ವಾಂಗ್ಮಯದಲ್ಲಿ ‘ರುದ್ರ’ ಎಂಬ ಪದ ‘ಶಿವ’ನಿಗೆ ಅನ್ವಯಿಸುವ ಮುನ್ನ ಯಾವ ಯಾವ ನಿಷ್ಪತ್ತಿಗೆ ಒಳಗಾಗಿ, ಏನೇನು ವಿಶೇಷಾರ್ಥಗಳನ್ನು ಅದು ಹೊಮ್ಮಿಸಿತು- ಎಂಬುದರ ಬಗ್ಗೆ ವಿಪುಲ ಚರ್ಚೆ ವಿದ್ವಾಂಸರಲ್ಲಿ ನಡೆದಿದೆ. ಅವುಗಳಲ್ಲಿ ಒಂದಾದ, ನಿಮ್ಮ ಗಮನವನ್ನು ಸೆಳೆಯಬೇಕೆಂದಿರುವ ‘ಶತರುದ್ರೀಯ’ ಈ ಲೇಖನದ ವಸ್ತು. ಆದರೆ, ಅದರ ಪೀಠಿಕೆಯಾಗಿ, ಸ್ವಲ್ಪ ಅತ್ತ ಇತ್ತ ಮೊದಲು ಕಣ್ಣಾಡಿಸೋಣ:
ಯಾರು ಈ ರುದ್ರ?
ಬಲ್ಲವರಿಗೆ ಇಲ್ಲಿ ಬೆರಗೇನೂ ಇಲ್ಲ ; ಅಂಥವರಿಗೆ, ಕಾಡಿಗೆ ಹೊರಟು ನಿಂತ ಶ್ರೀರಾಮನಿಗೆ ವಾಲ್ಮೀಕಿಯ ಸೀತೆ ಹೇಳಿದಂತೆ, ‘ಇಲ್ಲಿ ಹೊಸದೇನನ್ನೂ ನಿಮಗೆ ತಿಳಿಹೇಳುವೆನೆಂಬ ದಾಷ್ಟ್ಯವಿಲ್ಲ ; ನೆನಪಿಸುತ್ತಿದ್ದೇನೆ, ಅಷ್ಟೆ!’ (ಸ್ನೇಹಾತ್ ಚ ಬಹುಮಾನಾತ್ ಚ, ಸ್ಮಾರಯೇ ನ ತು ಶಿಕ್ಷಯೇ!- ವಾ. ರಾಮಾಯಣ ಅರಣ್ಯಕಾಂಡ. 7.24).
ರುದ್ರ! ‘ಅಳಿಸುತ್ತಾನೆ, ಕಣ್ಣೀರು ಬರಿಸುತ್ತಾನೆ’ (ರೋದಯತಿ, ರುದಿರ್ ಅಶ್ರುವಿಮೋಚನೇ, ಇತಿ ರುದ್ರ:) ಎಂದು ಕೆಲವರೂ, ‘ತಾನೇ ಅಳುತ್ತಾನೆ’ (ರುದತಿ ಇತಿ ರುದ್ರ:) ಎಂದು ಇನ್ನು ಕೆಲವರೂ ಹೇಳುವುದುಂಟು. ರುದ್ರ ಆವಿರ್ಭವಿಸಿ ಅತ್ತಿದ್ದೇಕೆ, ಅಳುವುದೇಕೆ? ಸಂಸಾರಬಂಧನದ, ನಮ್ಮ ಈ ಬಿಟ್ಟೂ ಬಿಡಲಾರದ ಜಂಜಾಟವನ್ನು ಕಂಡು ಮನಕರಗಿ ಅವನಿಗೆ ಅಳು ಬಂದಿರಬೇಕು! ಅಳಿಸಿದ್ದೇಕೆ? ತಪ್ಪೆಂದು ಗೊತ್ತಾದಮೇಲೂ ಮಾಡುವವರು ಅದನ್ನು ಬಿಟ್ಟು ಬಿಡದೆ, ಸರಿದಾರಿಗೂ ಹೋಗದೆ, ಹೋಗಲೊಲ್ಲದವರಿದ್ದಾರಲ್ಲ- ಅವರನ್ನು ಹೆದರಿಸಿ, ಬೆದರಿಸಿ, ಅವಶ್ಯಕತೆ ಬಿದ್ದರೆ ಶಿಕ್ಷಿಸಿ, ಹಿಂಸಿಸಿ ಅಳಿಸುತ್ತಾನೇನೋ! ಅಂತೂ, ಅತ್ತು ಆಳುವ ದೇವರು, ನಮ್ಮ ರುದ್ರ!
ಸಂಸಾರವೆಂಬ ದುಃಖವನ್ನು (ರುದಂ) ಕರಗಿಸಿ, ನೀರಾಗಿಸಿಬಿಡುತ್ತಾನೆ (ದ್ರಾವಯತಿ), ಆದ್ದರಿಂದ ರುದ್ರ; ತಡೆಯುವಿಕೆ(ರೋಧಕ), ಹಿಡಿಯುವಿಕೆ (ಬಂಧಕ) ಮತ್ತು ನೀರ ಮಡುವಿನ ಸುಳಿಯಂತೆ ಸೆಳೆಯುವಿಕೆ (ಮೋಹಕ) ಶಕ್ತಿಗಳುಳ್ಳ ಕಾರಣಕ್ಕಾಗಿ ರುದ್ರ; (ಹೀಗೆಲ್ಲಾ ಯೋಚಿಸುವುದಕ್ಕೆ , ಬರೆಯುವುದಕ್ಕೆ?) ವಿಶೇಷ ಜ್ಞಾನವನ್ನು (ರುತಿಂ) ಅನುಗ್ರಹಿಸುವವನು (ರಾತಿ), ಹೀಗಾಗಿ ರುದ್ರ- ಎಂದೆಲ್ಲ ಕೂದಲನ್ನ ಜಗ್ಗಿ, ಎಳೆದಾಡಿ, ಸೀಳಿ ಕಗ್ಗಂಟನ್ನು ಬಿಡಿಸಲು ಪ್ರಯತ್ನಿಸಬಹುದು. ಇರಲಿ, ಅಂತೂ ರುದ್ರನಿಗೂ ನೀರಿಗೂ ನಂಟು ಉಂಟು!
ಅಂಬೆಯರ ರಕ್ಷಕನಮ್ಮ ನಮ್ಮ ತ್ರಿಯಂಬಕ
ರುದ್ರನ ಇನ್ನೊಂದು ಹೆಸರು ‘ತ್ರ್ಯಂಬಕ’ ಅಥವಾ ‘ತ್ರಿಯಂಬಕ’. ಜಗಜ್ಜನನಿ, ಮಹಾತಾಯಿ, ಶಿವೆ(ಶಕ್ತಿ)ಯಾಡನೆ ಕೂಡಿದ್ದನಾದ್ದರಿಂದ ಶಿವನು ಸ- ಅಂಬ, ಸಾಂಬಶಿವ. ಈ ಪರಶಿವ ‘ತ್ರ್ಯಂಬಕ’ ಆದುದಾದರೂ ಹೇಗೆ, ಗೊತ್ತೆ ? ಮೂವರು ಅಂಬೆ (ಲೋಕಮಾತೆ)ಯರನ್ನು ರಕ್ಷಿಸುವನಾದ್ದರಿಂದ ಅವನು ತ್ರ್ಯಂಬಕ. ಯಾರು ಈ ಲೋಕಜನನಿಯರು? ಸಂಸ್ಕೃತದಲ್ಲಿ ದ್ಯೌ(=ಅನ್ತರಿಕ್ಷ), ಆಪ (=ನೀರು) ಮತ್ತು ಪೃಥಿವೀ(=ಭೂಮಿ) ಈ ಮೂರೂ ಶಬ್ದಗಳೂ ಸ್ತ್ರೀಲಿಂಗದಲ್ಲಿ ಇವೆ. ಈ ಮೂವರೂ ದೇವಿಯರನ್ನು, ಅಂಬೆಯರನ್ನು ಪಾಲಿಸುವವನೇ ‘ತ್ರ್ಯಂಬಕ’! (ಮಹಾಭಾರತ, ದ್ರೋಣಪರ್ವ, 202.130).
ಹೀಗೆ, ನೀರು ನೆಲ ನಭವನ್ನು ಹೊತ್ತವನನ್ನು ನೆನೆಸಿಕೊಂಡು, ಸಾವನ್ನು ಗೆಲ್ಲುವ ಹುಸಿ ಬಯಕೆಯಿಂದ ಹಾಡುವ ಈ ‘ಮೃತ್ಯುಂಜಯ’ ಮಂತ್ರವನ್ನು ಕೇಳಿ:
ತ್ರ್ಯಂಬಕನ ಭಜಿಸಿವೆನು, ಸುಗಂಧಿ ಪುಷ್ಟಿವರ್ಧನನನ್ನು
ಮೃತ್ಯು ಕೊಂಡೊಯ್ಯದ ರೀತಿ, ನನ್ನ ನೀ ಉಳಿಸೋ!
ಅಮೃತದ ಸೆಲೆಯಿಂದ ಬೇರ್ಪಡದೆ ಇರುವಂತೆ,
ತೊಟ್ಟು ಕಳಚಿದ ಕಳಿತ ಹಣ್ಣಿನಂದದಿ ಬಿಡಿಸಿ ಇರಿಸೋ!
(ತ್ರ್ಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ಧನಮ್। ಉರ್ವಾರುಕಂ ಇವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾ ಅಮೃತಾತ್।। -ಶುಕ್ಲಯಜುರ್ವೇದ 3.6)