• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೀರ್ಥಸ್ನಾನವ ಮಾಡಿದರುಂಟು ಫಲ!

By Staff
|

ಗುರುಕುಲವಾಸದ ಶಿಷ್ಯನನ್ನು ಅಲ್ಲೇ ಸ್ನಾನಮಾಡಲು ಬಿಟ್ಟು, ನಾವು ಇತ್ತ ತೀರ್ಥಸ್ನಾನದ ಕಡೆ ಮರಳೋಣ. ನಾರಾಯಣ ಭಟ್ಟ ತನ್ನ ‘ತ್ರಿಸ್ಥಲೀಸೇತು’ವಿನಲ್ಲಿ (1.183) ಉದ್ಧರಿಸುವ ಈ ಬ್ರಹ್ಮಾಂಡ ಪುರಾಣದ (5.23.4) ‘ಮನದಲ್ಲಿ ಗೂಡುಕಟ್ಟಿದ ಕೆಟ್ಟದನು ತೀರ್ಥಸ್ನಾನವಾದರೂ ಏನು ಶುದ್ಧಿಗೈದೀತು’ (ಚಿತ್ತಂ ಅನ್ತರ್ಗತಂ ದುಷ್ಟಂ ತೀರ್ಥಸ್ನಾನೈರ್‌ ನ ಶುದ್ಧ್ಯತಿ।’) ಎಂಬುದನ್ನೇ ಬೇರೆ ಬೇರೆ ರೀತಿ ಸುಭಾಷಿತಗಳೂ, ದಾಸರ ಪದಗಳೂ, ಶರಣರ ವಚನಗಳೂ ಮನೋಜ್ಞವಾಗಿ ತಿಳಿಹೇಳುವುದು ನಮಗೆ ನೆನಪಿವೆ.

ಪುಣ್ಯನದಿಯೇ ಇರಬಹುದು, ಅಲ್ಲಿ ಸ್ನಾನ ಮಾಡಿದ ಮಾತ್ರಕ್ಕೇ ‘ಪುಣ್ಯಗಳಿಸಿದೆ!’ ಎಂದು ಬೇಕಾದರೆ ನಂಬಿಕೊಳ್ಳಿ; ಆದರೆ, ‘ಪಾಪ ಕಳೆದುಹೋಯಿತು!’ ಎಂಬ ಭ್ರಮೆ ಮಾತ್ರ ಬೇಡ- ಎಂದು ಇವರೆಲ್ಲರ ಹಿತವಚನ. ಮೋಹ ಮಾಯಾ ರಾಗ ಮದ ಮಲ ಮಾನ ದಂಭ ದ್ವೇಷಗಳು ಮನುಷ್ಯನಿಗೆ ಬಲವಾಗಿ ಅಂಟಿಕೊಳ್ಳುವ, ಸುಲಭವಾಗಿ ಕಳಚಿಕೊಳ್ಳದ ಜಿಡ್ಡುಗಳು. ಒಳಗೆ ಕೊಳೆ ತುಂಬಿರುವಾಗ ಬೆಳಕಿಗೆ ಅಲ್ಲಿ ಅಡಿಯಿಡಲೂ ತೆರಪಿಲ್ಲವಲ್ಲ. ಅವನ್ನು ಮೊದಲು ತೊಳೆದುಕೊಳ್ಳಬೇಕು. ಏಕೆಂದರೆ, ಒಂದು ಸುಭಾಷಿತ ಚಮತ್ಕಾರವಾಗಿ ಹೇಳುತ್ತದೆ:

ಮೋ ಮಾ ರಾ ಮ ಮ ಮಾ ದಂ ದ್ವೇ।
ಹ ಯಾ ಗ ದ ಲ ನಂ ಭ ಷ।
ಯಾರಲ್ಲಿ ಕೊಂಚವೂ ಇರದೋ, ಅವರೇ।
ಸೇರುವರು ಆ ಕಡೆಗೆ ಕೊನೆಗೆ ಬೆಳಕಿನೆಡೆಗೆ !
(ಮೋ ಮಾ ರಾ ಮ ಮ ಮಾ ದಂ ದ್ವೇ। ಹ ಯಾ ಗ ದ ಲ ನಂ ಭ ಷ:। ಯಸ್ಯ ಏತಾನಿ ನ ವಿದ್ಯನ್ತೇ, ಸ ಯಾತಿ ಪರಮಾಂ ಗತಿಮ್‌।। - ಸುಭಾಷಿತ ರತ್ನ ಭಾಂಡಾಗಾರ 188.38) ಮಹಾಭಾರತದಲ್ಲೂ ಹಲವಾರು ಕಡೆ ಇಂಥ ಮಾತುಗಳು ಇದ್ದರೂ ನಮ್ಮ ಮನ ಸೆಳೆಯುವ ಒಂದು ಸುಂದರ ಅಭಿವ್ಯಕ್ತಿ ಹೀಗಿದೆ ನೋಡಿ:ಆತ್ಮವೇ ಒಂದು ನದಿ,
ಹರಿಯ ಬಿಡು, ಸಂಯಮದ ನೀರ ಪೂರ ತುಂಬಿ;
ಸತ್ಯ ಆಳದ ಮಡುವು,
ಶೀಲ ದಡ, ಇಕ್ಕೆಲದಿ ದಯೆಯಲೆಗಳಪ್ಪಳಿಸಲಿ;
ಅಭಿಷೇಕ ಮಾಡಲ್ಲಿ,
ಕಳೆ ಕೊಳೆಯ ತೊಳೆ ತೊಳೆದು ಹೊಳೆದು ನೀ ಶುದ್ಧನಾಗು;
ಒಳಗಿನಾತ್ಮಕ್ಕಂತು
ಬರಿ ಮುಳುಗಿ ಎದ್ದರೆ ತಾನೆ ನೀರಲಿ ಏನು ಬಂತಯ್ಯ ಭಾಗ್ಯ!
(ಆತ್ಮಾ ನದೀ, ಸಂಯಮತೋಯ ಪೂರ್ಣಾ, ಸತ್ಯ ಹೃದಾ, ಶೀಲ ತಟಾ, ದಯಾ ಊರ್ಮಿ:। ತತ್ರ ಅಭಿಷೇಕಂ ಕುರು, ಪಾನ್ಡುಪುತ್ರ, ನ ವರುಣಾ ಶುದ್ಧ್ಯತಿ ಚ ಅನ್ತರಾತ್ಮಾ ।। - ಮ.ಭಾ.12.218.25). ಹೋಗಿ, ಬೇಗ ಹೋಗಿ ಅಲ್ಲಿ ಮೀಯಿರಿ ಎನ್ನುತ್ತದೆ ವ್ಯಾಸಭಾರತ. ಎಲ್ಲಿಗೆ ಹೋಗುವುದು? ಮಾನಸತೀರ್ಥಕ್ಕೆ. ದಡವನ್ನು ದಾಟಬೇಕೇನು? ಅಲ್ಲಿಗೆ ಅವಶ್ಯ ಹೋಗಿ:ಅಮರರಾಗುವ ಬಯಕೆ ತುಡಿಯುತಿಹುದೇ ತುಂಬ?
ಹೋಗಿ ಮೀಯಿರಿ ಮಾನಸದ ತೀರ್ಥದಲಿ ನೀವು ಬೇಗ;
ವೇದ ದೇವವೂ ಆಗಿ, ದೇವ ವೇದವೂ ಆಗಿ,
ಅಮೃತ್ತತ್ವವ ಪಡೆವುದೆಂದರೆ ಅಲ್ಲಿ ಮಿಂದಾಗ!
ಜ್ಞಾನವೇ ಮಡು, ಮುಳುಗಿ ಧ್ಯಾನ ತುಂಬಿದ ನೀರಿನಾಳದಲಿ ಇಳಿದು,
ಅತಿ ಒಲವು, ಹಗೆ ಹೊಳೆಯ ಕಳೆ ಕೊಳೆಯ ತೊಳೆದು.
ಮೀಯುವಿರಾದರೆ ನೀವು, ಮನಸ್ಸಿನೀ ತೀರ್ಥದಲಿ
ಹೋದೀರಿ ಆಚೆಯ ದಡಕೆ;ಹಾಗಿಲ್ಲದಿರೆ ಇಲ್ಲ!
(ಯಸ್ಮಿನ್‌ ದೇವಾಶ್ಚ ವೇದಾಶ್ಚ ಪವಿತ್ರಂ ಕೃತ್ಸ್ನಂ ಏಕತಾಮ್‌। ವ್ರಜೇತ್‌ ತನ್‌ ಮಾನಸಂ ತೀರ್ಥಂ, ತತ್ರ ಸ್ನಾತ್ವಾ ಅಮೃತೋ ಭವೇತ್‌।। ಜ್ಞಾನ ಹೃದೇ, ಧ್ಯಾನ ಜಲೇ, ರಾಗದ್ವೇಷ ಮಲಾಪಹೇ। ಯ ಸ್ನಾತಿ ಮಾನಸೇ ತೀರ್ಥೇ ಸ ಯಾತಿ ಪರಮಾಂ ಗತಿಮ್‌।। ಮಹಾಭಾರತ 12.330.16)ಯಾವುದು ತೀರ್ಥ? ಪರಮ ಪವಿತ್ರವಾದದ್ದು ಯಾವುದು?

ಹರಿವ ನೀರಿಗೆ, ಸರೋವರಕ್ಕೆ, ಅನ್ತರ್ಜಲವೊಂದು ಚಿಮ್ಮಿ ಬುಗ್ಗೆಯಾಡಿದೆಯೆಂಬ ಸೋಜಿಗದ ತಾಣಕ್ಕೆ, ಸಮುದ್ರ ತೀರಕ್ಕೆ ಮಾತ್ರಾ ಸೀಮಿತಗೊಳಿಸಿ, ‘ತೀರ್ಥ’ದ ಅರ್ಥವೈಶಾಲ್ಯವನ್ನು ಮೊಟಕುಮಾಡಬೇಡಿ- ಎಂದು ಚಿಂತಕರು ಬೇಡಿಕೊಳ್ಳುತ್ತಾರೆ. ಹೇಳುತ್ತಾರೆ: ‘ಸತ್ಯ, ಕ್ಷಮೆ, ಇಂದ್ರಿಯ ನಿಗ್ರಹ, ಸರ್ವ ಪಶು-ಪ್ರಾಣಿಗಳಮೇಲೂ ದಯೆ, ಪ್ರಾಮಾಣಿಕತೆ, ದಾನ, ಸಂಯಮ, ಸಂತೋಷ, ಬ್ರಹ್ಮಚರ್ಯ, ಹಿತಕರವಾಗಿ ಮಾತನಾಡುವುದು, ತಿಳುವಳಿಕೆ, ಎದೆಗಾರಿಕೆ ಮತ್ತು ತಪಸ್ಸು- ಇವುಗಳು ‘ತೀರ್ಥ’ಕ್ಕೆ ಉದಾಹರಣೆಗಳಾದರೂ ಎಲ್ಲಕ್ಕೂ ಮಿಗಿಲಾದದ್ದು ಎಂದರೆ, ಪರಿಶುದ್ಧವಾದ ಮನಸ್ಸೇನೇ!’ (ಸತ್ಯಂ ತೀರ್ಥಂ, ಕ್ಷಮಾ ತೀರ್ಥಂ, ತೀರ್ಥಂ ಇಂದ್ರಿಯನಿಗ್ರಹ:। ಸರ್ವಭೂತದಯಾ ತೀರ್ಥಂ, ತೀರ್ಥಂ ಆರ್ಜವಂ ಏವ ಚ।। ದಾನಂ ತೀರ್ಥಂ, ದಮಸ್‌ ತೀರ್ಥಂ, ಸಂತೋಷಂ ತೀರ್ಥಂ ಉಚ್ಯತೇ। ಬ್ರಹ್ಮಚರ್ಯಂ ಪರಂ ತೀರ್ಥಂ, ತೀರ್ಥಶ್ಚ ಪ್ರಿಯವಾದಿತಾ।। ಜ್ಞಾನಂ ತೀರ್ಥಂ, ಧೃತಿಸ್‌ ತೀರ್ಥಂ, ತಪಸ್‌ ತೀರ್ಥಂ ಉದಾಹೃತಮ್‌। ತೀರ್ಥಾನಾಂ ಅಪಿ ತತ್‌ ತೀರ್ಥಂ ವಿಶುದ್ಧಿರ್‌ ಮನಸ: ಪರಾ।।- ಕಾಶೀ ಖಂಡ 6.28.42)

ಮತ್ಸ್ಯಪುರಾಣವೂ ಇದನ್ನೇ ಎತ್ತಿ ಹಿಡಿಯುತ್ತದೆ: ‘ಸತ್ಯ, ದಯೆ, ಇಂದ್ರಿಯ ನಿಗ್ರಹಗಳೇ ತೀರ್ಥಗಳಿಗೆ ಉದಾಹರಣೆಯಾದರೂ, ಎಲ್ಲರಿಗೂ ಎಲ್ಲ ಬಗೆ ಜನಗಳಿಗೂ ಸಮಾಧಾನ ಚಿತ್ತವೆಂಬುದೇ ಶ್ರೇಷ್ಠವಾದ ತೀರ್ಥ!’ (ಸತ್ಯಂ ತೀರ್ಥಂ, ದಯಾ ತೀರ್ಥಂ, ತೀರ್ಥಂ ಇಂದ್ರಿಯ ನಿಗ್ರಹ:। ವರ್ಣಾಶ್ರಮಾನಾಂ ಗೇಹೇ’ಪಿ ತೀರ್ಥಂ ಶಮ ಉದಾಹೃತ:। - ಮತ್ಸ್ಯಪುರಾಣ 22.80). ‘ನೆಮ್ಮದಿ, ಸಮಾಧಾನವೇ ಶ್ರೇಷ್ಠವಾದ ತೀರ್ಥ’- ಎಂಬ ಮಾತಿನಲ್ಲಿ ಎಷ್ಟೊಂದು ಅರ್ಥ ಕರಗಿ, ಅಡಗಿದೆಯಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more