ಅಮ್ಮನಂತೆ ನೀರು, ಸೋಂಕರಿಯದ ಮಮತೆಯವಳು

ಒಂದು ಪವಿತ್ರ ಉದ್ದೇಶಕ್ಕಾಗಿ ಬಳಸುವ ನೀರು, ಪರಿಶುದ್ಧವಾಗಿರಬೇಕು, ದೈವಾಂಶಪೂರಿತವಾಗಿರಬೇಕು. ನಮಗೆ ನಮ್ಮ ನದಿಗಳ ಬಗ್ಗೆ , ತಾಯಿಯ ಮೇಲೆ ಇದ್ದಂತೆ ತುಂಬಾ ಪೂಜ್ಯ ಭಾವನೆ. ಭಾರತದಲ್ಲಿಯೇ ಇರಲಿ, ವಿದೇಶದಲ್ಲೇ ಇರಲಿ, ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ವಾಸಿಸುತ್ತಿರಲಿ, ಹೊಳೆಯಿಂದಲೋ ಹೊನಲಿಂದಲೋ ತೊರೆಯಿಂದಲೋ ಕೊಳದಿಂದಲೋ ಕೆರೆಯಿಂದಲೋ ಭಾವಿಯಿಂದಲೋ ತಂದು, ಮುಂದಿರಿಸಿಕೊಂಡಿರುವ ನೀರಿನತ್ತ ತೋರುತ್ತ, ಆ ಪುಣ್ಯನದಿಗಳ ಅನುಗ್ರಹವನ್ನು ಆಶಿಸುತ್ತ ಕೇಳಿಕೊಳ್ಳುತ್ತೇವೆ :

‘ಓ ಗಂಗೆ ಯಮುನೆಯರೆ, ಉತ್ತುಂಗ ಹಿಮಮುಕುಟದಿಂದಿಳಿದು ಬಂದವರೆ,
ಮುಂದೆ ಕೂಡುತ ಒಳಸುಳಿದ ಪಾವಕಳೆ, ವಾಜಿನೀವತಿ ಸರಸ್ವತಿಯೆ,
ಗೋದೆ, ನರ್ಮದೆ, ಸಿಂಧು, ಕಾವೇರಿಗಳ ಹೊನಲಧಿಷ್ಠಾತ್ರಿ ದೇವಿಯರೆ,
ನಿಮ್ಮ ಒಲುಮೆಯ ಚಿಲುಮೆ ನೆಲೆಗೊಂಡು ಇಲ್ಲಿರಲಿ, ಈ ನೀರಲಿರಲಿ!’

(ಗಂಗೇ ಚ ಯಮುನೇ ಚೈವ, ಗೋದಾವರಿ ಸರಸ್ವತೀ। ನರ್ಮದೇ ಸಿಂಧು ಕಾವೇರಿ, ಜಲೇಸ್ಮಿನ್‌ ಸನ್ನಿಧಿಂ ಕುರು।।)

‘ಇದೊ ಕೇಳಿ, ಸ್ವೀಕರಿಸಿ, ನಿಮ್ಮ ಗುಣಗಾನಗಳ,
ಗಂಗೆ ಯಮುನೆಯೆ, ಸರಸ್ವತಿಯೆ, ಶುತುದ್ರಿ ನದಿಯೆ,
ಇರಾವತಿಯೇ, ಮರುದ್‌ವೃಧಳೆ, ಅಸಿಕ್ನಿಯೇ, ವಿತಸ್ತಳೇ,
ವಿಪಾಶಳೇ, ಸಿಂಧುವೇ ಬಂದೆನ್ನ ಅನುಗ್ರಹಿಸಿ ಇಲ್ಲಿ ನೆಲಸಿ!’

(ಇಮಂ ಮೇ ಗಂಗೇ ಯಮುನೇ ಸರಸ್ವತಿ, ಶುತುದ್ರಿ ಸ್ತೋಮಂ ಸಚತಾ ಪರುಷ್ಣ್ಯಾ। ಅಸಿಕ್ನ್ಯಾ ಮರುದ್‌ವೃಧೇ ವಿತಸ್ತಯಾ, ಆರ್ಜಿಕೀಯೇ ಶ್ರುಣು ಹಿ ಆ ಸುಷೋಮಯಾ।।- ಸಿಂಧುಕೃತ್‌ ಪ್ರೆೃಯಮೇಧ ಋಷಿ, ಋಗ್ವೇದ 10.75.5) ಇಲ್ಲಿ ಹೆಸರಿಸಿದ ಶುತುದ್ರಿ (ಸಟ್ಲೆಜ್‌), ಪರುಷ್ಣಿ (ಇರಾವತಿ, ರಾವಿ), ಅಸಿಕ್ನಿ (ಚೇನಾಬ್‌), ವಿತಸ್ತಾ (ರಿkುೕಲಮ್‌), ಆರ್ಜಿಕೀಯಾ (ವಿಪಾಶಾ, ಬೀಸ್‌) ಮತ್ತು ಸುಷೋಮಾ (ಸಿಂಧು, ಇಂಡಸ್‌) ಇವು ಆ ನದಿಗಳಿಗೆ ವೇದಕಾಲೀನ ಹೆಸರುಗಳು. (ನೋಡಿ: ನಿರುಕ್ತ 2.26). ಹೆಚ್ಚು ಪಂಜಾಬಿನಲ್ಲಿ ಉಳಿದವು ಕಾಶ್ಮೀರದಲ್ಲಿ ಹರಿಯುವ ನದಿಗಳು! ಭಾರತದ ಐಕ್ಯಕತೆಯ ಘೋಷಣೆಗೆ ಇದಕ್ಕಿಂತ ಬೇರೆ ಉತ್ಕೃಷ್ಟ ನಿದರ್ಶನ ಬೇಕೆ?

ಶಾಂತಿಯ ಮೊದಲ ಮೆಟ್ಟಿಲು ನೀರೇನೇ..

ವೈದಿಕ ಮತಾವಲಂಬಿಗಳು ತಮ್ಮ ಮನೆಯಲ್ಲಿ ನಡೆಯುವ ವಿವಾಹ, ಚೌಲ, ಉಪನಯನ, ಸಮಾವರ್ತನ, ಸೀಮಂತ ಇತ್ಯಾದಿ ಮಂಗಲಕಾರ್ಯಗಳ ಮುನ್ನಾದಿನ ‘ಉದಕ ಶಾಂತಿ’ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುವುದುಂಟು. ‘ನೀರೇ ಶ್ರದ್ಧೆಯ ಇನ್ನೊಂದು ರೂಪ. ಆ ಶ್ರದ್ಧೆಯಿಂದಲೇ ಎಲ್ಲಾ ಯಜ್ಞಗಳು ಪ್ರಾರಂಭವಾದರೆ, ನಿರ್ವಿಘ್ನವಾಗಿ ಕೊನೆಗೊಳ್ಳುತ್ತವೆ. ದೇವತೆಗಳಿಗೂ ಅದು ಪ್ರಿಯ. ಆದ್ದರಿಂದ ನೀರನ್ನು ಪವಿತ್ರಗೊಳಿಸಿಕೊಂಡು ತನ್ಮೂಲಕ ಶಾಂತಿಯನ್ನು ಆಶಿಸಬೇಕು’ (ಅಥ ವೈ ಭವತಿ ಶ್ರದ್ಧಾ ವ ಆಪ:, ಶ್ರದ್ಧಾಂ ಏವ ಆರಭ್ಯೇತಿ.. .. ತಸ್ಮಾತ್‌ ಪವಿತ್ರೇಣ ಶಾಂತಿ ಉದಕಂ ಕರೋತಿ- ಇತಿ ಬ್ರಾಹ್ಮಣಮ್‌।- ಬೋಧಾಯನ ಗೃಹ್ಯ ಶೇಷ ಸೂತ್ರ 1.14.1-2), ಎಂದಿದೆ.

ನೀರಿನಲ್ಲಿ ಮುಳುಗೇಳಬೇಕು; ಶುದ್ಧಿಗೊಂಡು ಹೊರಬಂದಮೇಲೇ ಉಳಿದೆಲ್ಲ ಧಾರ್ಮಿಕ ಕ್ರಿಯೆಗಳು. (‘ಸ್ನಾತೋ ಅಧಿಕಾರೀ ಭವತಿ, ದೈವೇ, ಪಿತ್ರ್ಯೇ ಚ ಕರ್ಮಣಿ।’- ವಿಷ್ಣು ಸ್ಮೃತಿ). ಈಗಲೂ ಹಾಗೆಯೇ ನಡವಳಿಕೆ. ಅಷ್ಟೇ ಅಲ್ಲ, ವಿಧಿವತ್ತಾಗಿ ನೀರಲ್ಲಿ ಸ್ನಾನ ಮಾಡುವುದೂ ಸಹ ಒಂದು ಅತ್ಯವಶ್ಯಕ ಧಾರ್ಮಿಕ ಕ್ರಿಯೆಯಾಗಿತ್ತು ಮೊನ್ನೆ ಮೊನ್ನೆಯವರೆಗೆ; ಸಾಂಪ್ರದಾಯಿಕರಲ್ಲಿ ಹಲವರಲ್ಲಿ ಇನ್ನೂ ಹಾಗೆ ಉಳಿದಿದೆ ಕೂಡ. ‘ಸ್ನಾತಕೋತ್ತರ ವಿದ್ಯಾಭ್ಯಾಸ’ ಎಂಬ ಪದಗುಚ್ಛವನ್ನು ‘ಪದವಿ(ಡಿಗ್ರಿ) ಗಳಿಸಿದ ಬಳಿಕ ನಡೆಸುವ ಉನ್ನತ ವ್ಯಾಸಂಗ’ಕ್ಕೆ ಬಳಸುತ್ತೇವೆ; ಕಾರಣ ಗೊತ್ತೆ ? ಗುರುಕುಲ ವಾಸ ವಿದ್ಯಾಭ್ಯಾಸ ಪದ್ಧತಿಯಲ್ಲಿ, ‘ಪದವಿ’ಗೆ ಸಮಾನವಾದ ವ್ಯಾಸಂಗ ಮುಗಿಸಿ, ವಿದ್ಯಾರ್ಥಿ ಮನೆಗೆ ಮರಳುವ ವೇಳೆ, ಗುರುವಿನ ಇಂಗಿತವನ್ನು ಹೀಗೆ ಹೇಳುತ್ತಾರೆ:

ಹಸು- ಕರುಗಳನೋಜನಿಗೆ ಇತ್ತು, ಅವನ ಅನುಮತಿ ಹೊತ್ತು,
ಕಲಿವುದಿಂದಿಗೆ ಮುಗಿಸಿದೆನೆಂದು ‘ಸ್ನಾನ’ಮಾಡು!

(ಸ್ನಾಯೀತ ಗುರು ಅನುಜ್ಞಾತೋ ದತ್ವಾ ಅಸ್ಮೈ ದಕ್ಷಿಣಾ ಹಿ ಗಾಮ್‌।। - ವೀರಮಿತ್ರೋದಯ ಸಂಸ್ಕಾರಪ್ರಕಾಶ). ಇದನ್ನೇ ಸ್ಮೃತಿಯೂ ಹೇಳುವುದು: ‘ವೇದಾಭ್ಯಾಸವೆಲ್ಲವನ್ನೂ ಮುಗಿಸಿದ ಮೇಲೆ, ಬ್ರಹ್ಮಚಾರಿ ವ್ರತವನ್ನು ಸಮಾಪ್ತಿಗೊಳಿಸಲು, ಗುರುವಿಗೆ ಶ್ರೇಷ್ಟವಾದುದೇನಾದರೂ ಕೊಟ್ಟು , ಅವನ ಅನುಜ್ಞೆಯಂತೆ ಸಮಾವರ್ತನ ಸ್ನಾನ ಮಾಡಬೇಕು’(ಗುರವೇ ತು ವರಂ ದತ್ವಾ ಸ್ನಾಯಾದ್‌ ವಾ ತದ್‌ ಅನುಜ್ಞಯಾ। ವೇದಂ ವ್ರತಾನಿ ವಾ ಪಾರಂ ನೀತ್ವಾ ಉಭಯಂ ಏವ ವಾ।। - ಯಾಜ್ಞವಲ್ಕ್ಯ ಸ್ಮೃತಿ, ಆಚಾರ ಅಧ್ಯಾಯ 51)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+