ಲಕ್ಷ್ಮಿ ಎಲ್ಲಿದ್ದಾಳು : ಪುಟ-2

Goddess Lakshmi
ಕಮಲಕ್ಕೂ ಲಕ್ಷ್ಮಿಗೂ ಅದೇನೋ ನಂಟು

''ಕಮಲಾ"" ಎಂದೇ ಇವಳ ಇನ್ನೊಂದು ಹೆಸರೂ ಕೂಡ. ಪದ್ಮ ಪುರಾಣದಲ್ಲಿ ವೇಷಮರೆಸಿಕೊಂಡು ಯಾರನ್ನೋ ಎಚ್ಚರಿಸಲು ಬಂದಾಗ ''ಯಾರಮ್ಮ ನೀನು"" ಎಂದು ಕೇಳಿದಾಗ , ಲಕ್ಷ್ಮಿ ''ನಾನು ಕಮಲೆ"" ಎನ್ನುತ್ತಾಳೆ. (ಈ ಪ್ರಬಂಧದ ಕೊನೆಗೆ ಬರುವ ಕನ್ನಡ ಕವಿ ರನ್ನನ ಗದಾಯುದ್ಧದ ಕಥಾನಕದಲ್ಲೂ ''ನೀನು ಯಾರು "" ಎಂದು ಕೇಳಿದ ಪ್ರಶ್ನೆಗೆ ''ನಾನು ಕಮಲೆ"" ಎಂದೇ ಅವಳ ಉತ್ತರ !) ವಿಷ್ಣು ಸೂರ್ಯನಾದಾಗ ಲಕ್ಷ್ಮಿ ಕಮಲ ಆಗುತ್ತಾಳೆ - ಎಂದು ''ಪುನಶ್‌ ಚ ಪದ್ಮಾತ್‌ ಉತ್ಪನ್ನೋ ಆದಿತ್ಯೋ ಅಭೂತ್‌ ಹರಿ:"" ವಿಷ್ಣುಪುರಾಣ(1.9.143) ಹೇಳುತ್ತದೆ.

ರೇಷ್ಮೆಯಂತೆ ನುಣುಪು, ನವಿರು. ಕಣ್ಣಿಗೆ ತಂಪು ಎನಿಸುವ ನಸುಗೆಂಪು ಬಣ್ಣ. ಸರೋವರದ ನೀರಲ್ಲಿ ಅಗಲ ಅಗಲ ಎಲೆಗಳ ಮೇಲೆ ಮಧ್ಯದಲ್ಲಿ ರಾಜಠೀವಿಯಲ್ಲಿ ಎದ್ದು ನೆಟ್ಟಗೆ ನಿಂತು, ಅರುಣೋದಯದ ವೇಳೆಯಲ್ಲಿ , ಅತ್ತ ಸೂರ್ಯ ಮೇಲೆ ಮೇಲೇರಿ ಬಂದಂತೆಲ್ಲ ಇತ್ತ ಮೆಲ್ಲನೆ ಬಿರಿದು ಸುಗಂಧವನ್ನು ಸುತ್ತಲೂ ಹರಡಿ ಕಂಗೊಳಿಸುವ ಆ ಕಮಲದ ಹೂವು ವೇದಕಾಲದಋಷಿ- ಕವಿ-ದೃಷ್ಟಾರನನ್ನು ಆಕರ್ಷಿಸದೇ ಬಿಟ್ಟೀತೆ ? ದೈವತ್ವವನ್ನು ಎಲ್ಲೆಡೆ ಕಾಣುವ ಭಾವುಕ ಬ್ರಹ್ಮಜ್ಞನಿಗೆ ಈ ಹೂವೇ ಭಗವಂತವಾಯಿತು ! ನಕ್ಷತ್ರ, ನದಿ, ಭೂಮಿಯಂತೆ ಹೂವನ್ನೂ ಸಹ ದಿವ್ಯ ದೇವತೆಯ ರೂಪದಲ್ಲಿ ಕಂಡ. ರಾಜ-ಪುಷ್ಪ ''ಕಮಲಾ"" ಎಂದೇ ಲಕ್ಷ್ಮಿಗೆ ಹೆಸರಿಸಿದ!

ಒಡನೆಯೇ ಹಿಂಬಾಲಿಸಿ ದಂಡು ದಂಡಾಗಿ ಬಂದವು: ಪದ್ಮಾಲಯಾ, ಪದ್ಮ- ಅಕ್ಷೀ, ಪದ್ಮ- ದಳ-ಆಯತಾಕ್ಷೀ, ಪದ್ಮ- ಸುಂದರೀ, ಪದ್ಮ- ಗಂಧಿನೀ, ಪದ್ಮ - ಪ್ರಿಯೆ, ಪದ್ಮ- ಹಸ್ತೆ. ಪದ್ಮ-ಮಾಲಿನಿ- ಇತ್ಯಾದಿ ಕೆಂದಾವರೆಗೆ ಸಂಬಂಧಿಸಿದ ಅಂದ ಚಂದದ ಹೆಸರುಗಳು.

ಕೊನೆ ಯಾವುದಣ್ಣ ಸಿರಿತನಕೆ

' ಶ್ರೀ"ಎಂಬುದನ್ನು ಅರ್ಥೈಸುವುದು ಬಲುಕಷ್ಟ. ಸಿರಿ, ಸಂಪತ್ತು, ಗೌರವವನ್ನು ಉಂಟುಮಾಡುವ ಭಾವ, ಸೌಂದರ್ಯ ರಾಶಿ- ಹೀಗೆ ಒಳ ತಿರುಳನ್ನು ಸ್ಫುರಿಸುವ ಪರ್ಯಾಯ ಪದಗಳನ್ನು ಎಷ್ಟೇ ಹುಡುಕಿದರೂ ಕೊನೆಗೆ ಸೋಲುತ್ತೇವೆ. ಸೌಂದರ್ಯ, ವಿಶಿಷ್ಟ ರೀತಿಯ ಕಾಂತಿ, ಎಲ್ಲರನ್ನು ಆಕರ್ಷಿಸುವ ಸಂಪತ್ತೇ ಅದು- ಎನ್ನುವ ಭಾವವನ್ನು ಮೊದಲು ಗಮನಿಸೋಣ:

ಕತ್ತಲು ಮತ್ತು ಹಗಲಿನ ನಡುವೆ ಹೋರಾಟ ನಿರಂತರವಾಗಿ ಇದ್ದದ್ದೇ. ಹಗಲು(ಶಕ್ತಿ) ಮತ್ತು ಕತ್ತಲು (ಪ್ರತಿ-ಶಕ್ತಿ) ಬೆರೆಯುವ , ಕಲೆಯುವ (ಕಡೆಯುವ)ಒಂದು ಹುಣ್ಣಿಮೆಯ ಸಂಜೆಯನ್ನು ಊಹಿಸಿಕೊಳ್ಳಿ. ಆ ಸಂಧ್ಯೆಯ ಚೇತೋಹಾರೀ, ದೃಶ್ಯವನ್ನು ಮನಸ್ಸಿಗೆ ತಂದುಕೊಳ್ಳಿ. ನಸುಗೆಂಪು ಬಣ್ಣದ ಆ ಸೌಂದರ್ಯ ರಾಶಿ ಇದ್ದಕ್ಕಿದ್ದಂತೆ ಆ ಬಾನಿನೊಳಗಿಂದ ಆವಿರ್ಭವಿಸಿ, ಆ ನಿರಭ್ರ ನಭವನ್ನೆಲ್ಲಾ ತುಂಬಿ ಬಿಡುತ್ತದೆ. ಏನೇನೋ ಬಣ್ಣಗಳ ಓಕುಳಿಯಾಟ ಭೂಮಿ ಆಕಾಶ ಬೆರೆಯುವ ಎಡೆಯಲ್ಲಿ. ಆಮೇಲೆ , ಮೆಲ್ಲ ಮೆಲ್ಲನೆ ತುಂಬಿದ ಚಂದಿರ ದಿಗಂತದ ಆ ಅಂಚಿನಿಂದ ಮೂಡಿ ಮೇಲೇರಿ ಬಂದಂತೆಲ್ಲ ನೀಲಾಕಾಶ ಹಾಲು ಚೆಲ್ಲಿದ, ಹಾಲೇ ತುಂಬಿದ ಕಡಲಾಗಿ ಬಿಡುತ್ತದೆ !

ಕತ್ತಲು ಹಗಲಿನೊಡನೆ ಸೆಣಸಿ, ಹಗಲೇ ಗೆಲ್ಲುವ ಅರುಣೋದಯದ ಸಂಧ್ಯೆಯ ವೇಳೆಯಲ್ಲೂ ಈ ಅಪೂರ್ವ ಸೌಂದರ್ಯರಾಶಿ ಉರಿಗೆಂಪಿನ ಉಷೆಯ ರೂಪದಲ್ಲಿ ಆರ್ವಿಭವಿಸುವುದನ್ನೂ ಕವಿ ಮನಸ್ಸಿನ ವೇದಕಾಲೀನ ಋಷಿ ಗಮನಿಸಿದ.

ಕ್ಷೀರ ಸಾಗರ, ಸಮುದ್ರ-ಮಥನ, ಸುರ-ಅಸುರರು ಸೇರಿ ಕಡೆಯುವುದು, ' ಶ್ರೀ"ಯ ಆವಿರ್ಭಾವ, ಅಲ್ಲೇ ಚಂದ್ರನ ಹುಟ್ಟು, ಜೊತೆಜೊತೆಗೆ ಅಪೂರ್ವ ಹಾಗೂ ಶ್ರೇಷ್ಠ ಪ್ರಾಣಿಗಳು(ಕಾಮಧೇನು ಹಸು, ಐರಾವತ ಆನೆ, ಉಚ್ಜೆೈಶ್ರವಸ್ಸು ಕುದುರೆ), ಮರ(ಪಾರಿಜಾತ), ಮಣಿ (ಕೌಸ್ತುಭ), ವೈದ್ಯ(ಧನ್ವಂತರಿ), ಅಮೃತ ಮತ್ತು ಕಾಲಕೂಟ (ಹಾಲೇ ಹಾಲಲ್ಲಿ ಹಾಲಾಹಲ ವಿಷ!)-ಗಳು ಎದ್ದು ಬಂದ ಕತೆಯ ಸಂಕೇತಗಳನ್ನು ಮೇಲೆ ಹೇಳಿದ ಋಷಿ- ಕವಿಯ ಕಾಣ್ಕೆ, ದರ್ಶನ ಧ್ವನಿಸುತ್ತದೆ. ಪುರಾಣಗಳು ಈ ಕತೆಗೆ ಇನ್ನೂ ಬಣ್ಣ ಕೊಟ್ಟು ಮುಂದುವರೆಸಿದವು.

ಶ್ರೇಷ್ಠ ವಸ್ತುಗಳಿಗೆ , ವ್ಯಕ್ತಿಗಳಿಗೆ ದೈವಾಂಶವನ್ನು ಆರೋಪಿಸುವುದು ಭಾರತೀಯ ಸಹಜ ಮನೋಭಾವ. ಆ ಕಾರಣಕ್ಕಾಗಿಯೇ-

ಅಸಾಮಾನ್ಯ ಪ್ರಭೆ, ಶಕ್ತಿ ಎಲ್ಲೆಲ್ಲಿ ತೋರುವುದೋ,
ಎಲ್ಲಿ ಸುಡುಗತ್ತಲನು ತೂರಿ ಬರುವುದೋ ಬೆಳಕು,
ಸುಖ ದುಃಖ ನೊರೆ- ಅಲೆಯ ಈ ಕಡಲ ಒಡಲಿನಲಿ
ಬಿಡುಗಡೆಯ ಆ ಕಡೆಗೆ ನಡೆಯೆ ಸೇತುವೆಯಾಂದ
ಹೂಡಿ, ಬೆಂಗಾಡಿನ ನಡುವೆ ಹೆದ್ದಾರಿ ತೋಡುವನೋ,
ಅಡ್ಡ ಕಳೆ ಕೊಳೆ ಮುಳಿವನ್ನ ಕುಟ್ಟಿ ಹುಡಿ ಹುಡಿ ಮಾಡಿ
ಹತ್ತಲೆತ್ತರ ಬೆಟ್ಟ ಮೆಟ್ಟಲನು ಕಟ್ಟುವನೋ,
ಬೀಸುವುದೋ ಎಲ್ಲಿ ಶಾಂತಿಯ ಕಂಪು, ನೆಮ್ಮದಿಯ ತಂಪು-
ಅಲ್ಲೆಲ್ಲ ದೈವಾಂಶ ತೇಜದ ಬೀಜ ಮೊಳೆವುದ ಕಾಣ !

- ಎಂದು ಉತ್ತಮಿಕೆಯನ್ನು ನಾವು ಗೌರವಿಸುವುದು, ಪೂಜಿಸುವುದು. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ '' ಯದ್‌ ಯದ್‌ ವಿಭೂತಿಮತ್‌ ಸತ್ತ ್ವಂ ಶ್ರೀಮದ್‌ ಊರ್ಜಿತಂ ಏವ ವಾ । ತತ್‌ ತದ ಏವ ಅವಗಚ್ಛ ತ್ವಂ ಮಮ ತೇಜೋ ಅಂಶ- ಸಂಭವಮ್‌ ।। ""(ಗೀತಾ 40.41)- ಎಂದಿರುವುದು.

ಈ ದೃಷ್ಟಿಯಿಂದ ನೋಡಿದಾಗ, ಸಮುದ್ರಮಥನ ಕಾಲದಲ್ಲಿ ಈ ನಮ್ಮ ಲಕ್ಷ್ಮಿಯ ಒಡ ಹುಟ್ಟಿದವರ ಸಂಕೇತಕ್ಕೆ ಅರ್ಥ ಸ್ವಲ್ಪ ಹೊಳೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+