• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

''ಜೀ.ವಿ.''ಅವರು ಮಾಡಿಸಿದ ಬೇಂದ್ರೆ ದರ್ಶನ!- ಪುಟ 3

By Super
|

ಶ್ರೀ ವಿಶ್ವನಾಥ ಮರವಂತೆ ಏರ್ಪಡಿಸಿದ ಕಾರ್ಯಕ್ರಮ

''.. .. ಅಲ್ಲಿಂದ ನಾವು ಸಭಾಗೃಹಕ್ಕೆ ತೆರಳಿದವು. ಈ ಕಾರ್ಯಕ್ರಮವನ್ನು ವಿಶೇಷ ಆಸಕ್ತಿಯಿಂದ ಸಂಘಟಿಸಿದ ಶ್ರೀ ವಿಶ್ವನಾಥ ಮರವಂತೆ ಅವರ ಮನೆ ಬದಿಯಲ್ಲಿಯೇ ಇದ್ದುದರಿಂದ ಅಲ್ಲಿಗೆ ಹೋದೆವು. ಅಲ್ಲಿ 'ಇಂಡಿಯಾ ಡೆವಲೆಪ್‌ಮೆಂಟ್‌ ರಿಲೀಫ್‌ ಫೌಂಡೇಶನ್‌"ದ ನಾಗರಾಜ ಪಾಟೀಲರ ಪರಿಚಯವಾಯಿತು. ಅವರು ಧಾರವಾಡದವರು. ನಾನು ಬೇಂದ್ರೆಯವರ ಬಗ್ಗೆ ಮಾತನಾಡುವ ಸುದ್ದಿ ತಿಳಿದು ಅವರ ವಯೋವೃದ್ಧ ತಂದೆಯವರೂ ನನ್ನ ಭಾಷಣ ಕೇಳಲು ಬಂದಿದ್ದರು. ಶ್ರೀ ಹರಿಹರೇಶ್ವರರು ಎರಡು ನೂರು ಮೈಲು ಡ್ರೆೃವ್‌ ಮಾಡಿಕೊಂಡು ಬಂದಿದ್ದರು. ಪ್ರೇಕ್ಷಕರ ಉತ್ಸಾಹ ನೋಡಿ ನನಗೆ ಮಾತಾಡಲು ಹೆಚ್ಚಿನ ಸ್ಫೂರ್ತಿ ಬಂತು.

ನಾನು ಪ್ರಾರಂಭದಲ್ಲಿ ಗುರುದ್ವಯರನ್ನು ವಂದಿಸಿ ನನ್ನ ಅಮೆರಿಕಾ ಪ್ರವಾಸ ಇಷ್ಟೊಂದು ಯಶಸ್ವಿಯಾಗಲು ಗುರುಗಳ ಕೃಪೆಯೇ ಕಾರಣವೆಂದು ಹೇಳಿದೆ. ನನ್ನ ಕೆಲವು ಕವಿತೆಗಳನ್ನು ಓದಿ ತೋರಿಸಿದೆ. ('ಪ್ರಣಯ ಕಾಗುಣಿತ", 'ಅಮೇರಿಕೆಯಲ್ಲಿ ಕನ್ನಡಿಗ") ನಂತರ ಗೋಕಾಕರ ಜೀವನದ ಕೆಲವು ರೋಚಕ ಘಟನೆಗಳನ್ನು ಹೇಳಿದೆ. ನನ್ನ ಪುಸ್ತಕದಲ್ಲಿ ಮೊದಲು ಬರೆದ ಗುಂಟಕಲ್‌ ನಿಲ್ದಾಣದ ಉಪಕತೆಯಿಂದ ಪ್ರಾರಂಭಿಸಿದೆ. ಅವರು ಬೇಂದ್ರೆಯವರ ಶಿಷ್ಯರಾದದ್ದು, ನಂತರ ಗುರುಗಳಿಗೆ ಪಾಠಹೇಳುವ ನಿಮಿತ್ತದಿಂದ ಕಲಿತದ್ದು, ಸಾಂಗಲಿ ಕಾಲೇಜು ಬಿಟ್ಟಾಗ ದೀಕ್ಷಿತರು ಸಹಾಯ ಮಾಡಿದ್ದು, ಜೀವನ ಒಡ್ಡಿದ ಪ್ರತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಹೊರಬಂದದ್ದು.

'ಭಾರತ ಸಿಂಧು ರಶ್ಮಿ" ಮಹಾಕಾವ್ಯದ ಹಿನ್ನೆಲೆಯ ಬಗ್ಗೆ ಹೇಳಿದೆ. ನಂತರ ಬೇಂದ್ರೆಯವರ ಬಗ್ಗೆ ಮಾತಾಡಿದೆ. ಅವರ ಬಗ್ಗೆ ನಾನು ಬರೆದ ಕೆಲವು ಮಹತ್ವದ ಕವಿತೆಗಳನ್ನು ಓದಿ ತೋರಿಸಿದೆ. ತಾವು ಪಟ್ಟ ಪಾಡನ್ನೆಲ್ಲ ಹಾಡನ್ನಾಗಿ ಬೇಂದ್ರೆ ಹೇಗೆ ಪರಿವರ್ತಿಸಿದರೆಂಬುದನ್ನು ವಿವರಿಸಿದೆ. ಅವರ 'ನಾಕು ತಂತಿ", 'ಪರಾಶರ ರೂಪ" ಮೊದಲಾದ ಕವಿತೆಗಳನ್ನು ಓದಿ ಅರ್ಥ ವಿವರಿಸಿದೆ. 'ಕುಣಿಯೋಣು ಬಾರ"ದಲ್ಲಿಯ 'ಆಕಾಗಿ ಈಕಾಗಿ", ' ರುದ್ರವೀಣೆ"ಯಲ್ಲಿ ಬರುವ ' ಸಾಯಲಾರದರಳುತಿವೆ", ' ನೀ ಹೀಂಗ ನೋಡಬ್ಯಾಡ ನನ್ನ "ದಲ್ಲಿಯ ' ಹುಣ್ಣಿಮೆ ಚಂದ್ರನ ಹೆಣಾ ಬಂತೋ ಮುಗಿಲಾಗ ತೇಲತ ಹಗಲ" ಅರ್ಥವಿವರಣೆ, ನನ್ನ ಮುಂಬರಲಿರುವ '' ಬೇಂದ್ರೆಸ್ಮರಣೆ "" ಪುಸ್ತಕದಲ್ಲಿಯ ಕೆಲ ಹೃದಯ ಭೇದಿಸುವ ಸಂಗತಿಗಳ ಬಗ್ಗೆ ಹೇಳಿದೆ.

ಅಲ್ಲಿಯ ರಸಿಕರ ಮುಂದೆ ಮಾತನಾಡುವಾಗ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿ ಒಂಭತ್ತು ಗಂಟೆಗೆ ನಾನು ನನ್ನ ಭಾಷಣ ಮುಗಿಸಿದೆ. ಅಧ್ಯಕ್ಷ ಸ್ಥಾನದಿಂದ ಹರಿಹರೇಶ್ವರ ಅವರು ರೋಚಕವಾಗಿ ಮಾತನಾಡಿದರು. ಹರಿಹರೇಶ್ವರರ ಕನ್ನಡ ಪ್ರೇಮ ಅನನ್ಯವಾಗಿದೆ. ಕುವೆಂಪು ಅವರ ಆಧ್ಯಾತ್ಮ ಗೀತಗಳ ಹತ್ತು (10)ಸಿಡಿ ಕೊಂಡಿದ್ದರು. ಬೇರೆ ಲೇಖಕರ ಪುಸ್ತಕಗಳನ್ನೂ ಕೊಂಡಿದ್ದರು ( ತಂದಿದ್ದರು). ಅವನ್ನೆಲ್ಲ ಅಲ್ಲಿ ಬಂದ ಶ್ರೋತೃಗಳಿಗೆ ಪ್ರಶ್ನೆ ಕೇಳಿ ಸರಿ ಉತ್ತರ ಕೊಟ್ಟವರಿಗೆ ಸಿಡಿ ಹಾಗೂ ಪುಸ್ತಕ ಬಹುಮಾನವಾಗಿ ಕೊಟ್ಟರು. ಈ ಕಾರ್ಯಕ್ರಮಕ್ಕೆ ರಸಮಂಜರಿ ಎಂದು ಕರೆದರು.

ಅವರು ಕೇಳಿದ ಕೆಲ ಪ್ರಶ್ನೆಗಳು ಹೀಗಿದ್ದವು. 1. ಗೋಕಾಕರ ಯಾವ ಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. (ಭಾರತ ಸಿಂಧೂ ರಶ್ಮಿ) ; 2. ಬೇಂದ್ರೆಯವರ ಪ್ರಥಮ ಕವನ ಸಂಗ್ರಹದ ಹೆಸರೇನು ? ಅದನ್ನು ಯಾರು ಪ್ರಕಟಿಸಿದರು ? ("ಗರಿ ". ' ಅದನ್ನು ಪ್ರಕಟಿಸಿದವರು ಶಿವಮೊಗ್ಗಾ ಕರ್ನಾಟಕ ಸಂಘ, ' ಶಿವಮೊಗ್ಗೆಯವನಾದ ನನಗೆ ಅಭಿಮಾನವಾಗುತ್ತದೆ. " - ಅರ್ಧ ಉತ್ತರ ಹರಿಹರೇಶ್ವರರೇ ಹೇಳಿದರು) ; 4. ಮಾಸ್ತಿಯವರ ಯಾವ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂತು ? (ಚಿಕ್ಕವೀರರಾಜೇಂದ್ರ) ; 5. ಮಾಸ್ತಿಯವರ ಒಂದು ಗೀತ ನಾಟಕದ ಹೆಸರು ಹೇಳಿರಿ ? (ಯಶೋಧರಾ) ; 6. ಬಿ.ಎಂ. ಶ್ರೀಯವರ ಪ್ರಸಿದ್ಧ ಅನುವಾದ ಕವನವಾವುದು ? (ಉತ್ತರ ಬರಲಿಲ್ಲ. ಕಾರ್ಡಿನಲ್‌ ನ್ಯೂಮನ್ನರ ' ಕರುಣಾಳು ಬಾ ಬೆಳಕೆ "(ಲೀಡ್‌ ಕೈಂಡ್‌ಲೀ ಲೈಟ್‌") ನಾನು ಕೆಲವೊಮ್ಮೆ ವಾರಾಂತ್ಯದ(ವೀಕ್‌-ಎಂಡ್‌) ಪುರೋಹಿತನಾಗಿ ಕೆಲಸ ಮಾಡುತ್ತೇನೆ. ಕೆಲ ಸಲ ದೇವರ ಪೂಜೆಯಲ್ಲಿ ಈ ಹಾಡು ಬಳಸಿದ್ದುಂಟು- ಎಂದರು ಶ್ರೀ ಹರಿಹರೇಶ್ವರ).

ಇನ್ನು ಅವರು ಬೇರೆ ಮಾದರಿಯ ಪ್ರಶ್ನೆ ಕೇಳಿದರು. ' ಜೀವಿಯವರು ಗೋಕಾಕ ಬೇಂದ್ರೆಯವರ ಬಗ್ಗೆ ಮಾತನಾಡಿದ್ದು ಕೇಳಿದಿರಿ. ಅದರಲ್ಲಿ ನಿಮಗೆ ರೋಚಕವೆನಿಸಿದ ಸಂಗತಿಯಾವುದು? ಒಬ್ಬರು : ಗೋಕಾಕರ ಗುಂಟಕಲ್‌ ರೈಲ್ವೇ ನಿಲ್ದಾಣದ ಘಟನೆ ( ಇದನ್ನು ಹಾ.ಮಾ. ನಾಯಕರು ' ಸುಧಾ"ದಲ್ಲಿ ಬರೆದ ಲೇಖನದಲ್ಲಿ ಉದ್ಧರಿಸಿದ್ದಾರೆ), ಇನ್ನೊಬ್ಬರು : ಬೇಂದ್ರೆ ' ಹುಬ್ಬಳ್ಳಿಯಾಂವಾ " ಕವಿತೆಯ ವಿವರಣೆ, ಮತ್ತೊಬ್ಬರು : ಬೇಂದ್ರೆಯವರ 'ನಾಕು ತಂತಿ " , ' ಪರಾಶರರೂಪಾ" ಪದ್ಯಗಳ ಅರ್ಥ ವಿವರಣೆ - ಎಂದರು. ಎಲ್ಲರಿಗೂ ಬಹುಮಾನ ನೀಡಿದರು. ತಮ್ಮ ಕೈ ಚೀಲದಲ್ಲಿದ್ದ ಎಲ್ಲ ಪುಸ್ತಕಗಳನ್ನು ಖಾಲಿ ಮಾಡಿದರು.

ಶ್ರೀ ಹರಿಹರೇಶ್ವರ ಅವರು ಮಾತನಾಡುತ್ತ, '' ನಾನೂ ನಿಮ್ಮಂತೆ ' ಜೀವಿ"ಅವರ ಭಾಷಣ ಕೇಳಲು ಬಂದವನು. ಕನ್ನಡ ವಿಶ್ವ ಸಮ್ಮೇಲನದಲ್ಲಿ ಅವರ ಪರಿಚಯವಾಯಿತು. ಅವರ ' ನಾ ಕಂಡ ಬೇಂದ್ರೆ" ಪುಸ್ತಕ ನಾನು ಓದಿದ್ದೇನೆ. ಬಹಳ ಚೆನ್ನಾಗಿದೆ. ಬೇಂದ್ರೆ ಅಭಿಮಾನಿಗಳು ಕೊಂಡು ಓದಬೇಕಾದ ಪುಸ್ತಕ ಇದು "" ಎಂದರು. ನನ್ನ ಬಳಿ ಒಂದೇ ಪ್ರತಿಯಿತ್ತು. ಹದಿನಾರು ಜನ ಕೊಳ್ಳಲು ಮುಂದೆ ಬಂದರು. ಆಗ ಶ್ರೀ ಹರಿಹರೇಶ್ವರರು ಹೇಳಿದರು '' ಈ ಪುಸ್ತಕಕ್ಕೆ ಲೇಖಕರ ಹಸ್ತಾಕ್ಷರ(ಆಟೋಗ್ರಾಫ್‌)ಪಡೆದು ಹರಾಜು ಮಾಡುವೆ . ನಿಮ್ಮ ಬೇಂದ್ರೆ ಪ್ರೀತಿಯನ್ನು ನೋಡೋಣ."" ಎಂದರು. ಪುಸ್ತಕದ ಬೆಲೆ ನೂರು ರೂಪಾಯಿ. ಅಲ್ಲಿ ಡಾಲರ್‌ ಬೆಲೆ 18 ಎಂದು ಬರೆದಿತ್ತು. ಬಿಡ್ಡಿಂಗ್‌ 25ರಿಂದ ಶುರುವಾಯಿತು. 50 ಡಾಲರ್‌ ತಲುಪಿದಾಗ ಶ್ರೀ ಚೇತನ ಪಾಟೀಲ ಎಂಬ ಯುವ ಇಂಜಿನಿಯರ್‌ ಕೇಳಿದ . '' ನನ್ನ ಬಳಿ 50 ಡಾಲರ್‌ ಮಾತ್ರ ಇದೆ. ನನಗೆ ಚೆಕ್‌ ಕೊಡಲು ಅನುಮತಿ ನೀಡಬೇಕು ."" ಆಗ ಹರಿಹರೇಶ್ವರ ಅವರು '' ಆಗಲಿ "" ಎಂದರು. ಚೇತನ ಪಾಟೀಲರು ಆ ಪುಸ್ತಕವನ್ನು ಮನೆಗೊಯ್ಯುವ ಸಂಕಲ್ಪ ಮಾಡಿ ಬಿಟ್ಟಿದ್ದರು. ಅವರು 80 ಡಾಲರ್‌ (ಸು. 3.700 ರೂಪಾಯಿ) ಎಂದಾಗ ಇತರರು ಸ್ತಬ್ಧರಾದರು. ನಾನು ಸಹಿ ಮಾಡಿ ಪುಸ್ತಕವನ್ನು ಕೊಟ್ಟೆ. ಚೆಕ್‌ ಸ್ವೀಕರಿಸುವಾಗ ಹೇಳಿದೆ, '' ಇದು ಬೇಂದ್ರೆಯವರ ಹಿರಿಮೆಯನ್ನು ತೋರುತ್ತದೆ. ಮುಂಬೈಯ ಒಂದು ಸಭೆಯಲ್ಲಿ ಬೇಂದ್ರೆಯವರಿಗೆ ಸನ್ಮಾನ ಮಾಡಿ ಹಮ್ಮಿಣಿಯ ಚೆಕ್‌ ಕೊಟ್ಟಾಗ ಅವರು ಕೊಟ್ಟವರಿಗೆ 'ಚೆಕ್‌ ಮೇಟ್‌" ಅಂದಿದ್ದರು. ಅಲ್ಲಿ ಕೂಡ ಅವರು ಶ್ಲೇಷ ಬಳಸಿದ್ದರು. ಒಂದರ್ಥ ಚೆಕ್‌ ಕೊಟ್ಟ ಗೆಳೆಯ ಎಂದಾದರೆ, ಪ್ರೀತಿಯಿಂದ ಮನ ಗೆದ್ದವ ಎಂಬ ಅರ್ಥವೂ ಧ್ವನಿಸುತ್ತದೆ. ನನ್ನ ಜೀವನದಲ್ಲಿ ಇಂತಹ ಅನುಭವ ಪ್ರಥಮ ಬಾರಿ ಪಡೆಯುತ್ತಿದ್ದೇನೆ. ಈ ಅವಕಾಶವನ್ನು ತಂದುಕೊಟ್ಟ ಅಮೇರಿಕೆಯ ಕನ್ನಡಾಭಿಮಾನಿಗಳಿಗೆ ನಾನು ಚಿರ ಋಣಿ. ಕನ್ನಡ ಸಿಡಿ ಹಾಗೂ ಪುಸ್ತಕಗಳನ್ನು ಕೊಂಡು ಇತರರಿಗೆ ಹಂಚುವುದು ಸ್ತುತ್ಯ ಉಪಕ್ರಮ. ಇಂತಹ ಸತ್‌ ಸಂಪ್ರದಾಯವನ್ನು ಶುರುಮಾಡಿದ ಶ್ರೀ ಹರಿಹರೇಶ್ವರರಂತಹ ಕನ್ನಡಾಭಿಮಾನಿಗಳ ಬಳಗ ಬೆಳೆಯಲಿ ""- ಎಂದೆ.

ಇದಕ್ಕಿಂತ ದೊಡ್ಡ ಅಚ್ಚರಿ ನನ್ನನ್ನು ಕಾಯುತ್ತಿತ್ತು. ಜಗದೀಶ ಮೈಯ್ಯಾ, ಮಹಾಬಲ ಶಾಸ್ತ್ರೀ, ಹಾಗೂ ಇತರ ಮಿತ್ರರು (ವಿಶ್ವನಾಥ ಮರವಂತೆ, ಯೋಗೇಶ, ಅರುಣ, ಧರ್ಮೇಂದ್ರ, ಪದ್ಮನಾಭ, ದೇವರಾಜ) ಕೂಡಿ 'ಇಂಡಿಯಾ ಡೆವಲಪ್‌ಮೆಂಟ್‌ ರಿಲೀಫ್‌ ಪೌಂಡೇಶನ್‌" ಮುಖಾಂತರ ಎಂಬ ನನ್ನ ಪ್ರಾಜೆಕ್ಟ್‌ಗೆ ಒಂದು ಸಾವಿರ ಡಾಲರ್‌ ಕಳಿಸಿಕೊಡುವುದಾಗಿ ಘೋಷಿಸಿದರು.

ಇದೆಲ್ಲ ಮುಗಿದಾಗ ರಾತ್ರಿ ಹತ್ತು ಗಂಟೆ. ಒಬ್ಬ ಶ್ರೋತೃ ಎದ್ದು ನಿಂತು ಕೇಳಿದರು, ''ಇಂದು ಶುಕ್ರವಾರ. ನಾಳೆ ನಮಗೆ ರಜೆ ಇದೆ. ನೀವು ಇನ್ನಷ್ಟು ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಬೇಕು ಎಂದು ಎಲ್ಲರ ಪರವಾಗಿ ನಾನು ಬಿನ್ನಹಿಸುತ್ತೇನೆ"" ಎಂದು. ಎಲ್ಲರೂ ಕರತಾಡನದಿಂದ ತಮ್ಮ ಸಮ್ಮತಿ ವ್ಯಕ್ತಪಡಿಸಿದರು. ಮತ್ತೆ ನಾನು ಭಾಷಣ ಮಾಡಲು ಎದ್ದು ನಿಂತೆ.

''ನನ್ನ ಕಣ್ಣಿನಲ್ಲಿ ಇಂದು ಆನಂದ ಬಾಷ್ಪ ಬರುತ್ತಿವೆ. ಸ್ವರ್ಗದಲ್ಲಿರುವ ನನ್ನ ಗುರು ವರಕವಿ ಬೇಂದ್ರೆ ನನ್ನನ್ನು ಹರಸುತ್ತಿದ್ದಾರೆ ಎಂದು ಭಾವಿಸುವೆ. ಇಂತ ಘಟನೆಗಳು ಗುರುಕಾರುಣ್ಯವಿಲ್ಲದೇ ಘಟಿಸುವುದಿಲ್ಲ. ನಾನು ಮತ್ತೆ ಮಾತಾಡುವ ಮೊದಲು ನೀವು ನನಗೆ ಎಷ್ಟು ಹೊತ್ತು ಮಾತಾಡಬೇಕು ತಿಳಿಸಿರಿ. ಬೇಂದ್ರೆ ಶಬ್ದ ಕೇಳಿದೊಡನೆ ನನ್ನ ಮೈಯಲ್ಲಿ ವಿದ್ಯುತ್‌ ಸಂಚಾರವಾಗುತ್ತದೆ. ನಾನು ಬೆಳಗಾಗುವವರೆಗೆ ಮಾತಾಡುತ್ತಾ ಹೋಗಬಹುದು. ನನ್ನ ಮಾತಿನ ಗಾಡಿಗೆ ನೀವೇ ಬ್ರೇಕ್‌ ಹಾಕಬೇಕು"" ಎಂದೆ.

ರಾತ್ರಿ ಹನ್ನೊಂದು ಮೂವತ್ತು ಆದಾಗ ನನ್ನ ಮಾತು ನಿಲ್ಲಿಸಿದೆ. ಬೇಂದ್ರೆಯವರ ಹಲವಾರು ಕವಿತೆಗಳನ್ನು ಅವುಗಳ ಹಿನ್ನೆಲೆಯನ್ನು ವಿವರಿಸಿದೆ. ಮರುದಿನ ನಾನು ಕ್ಯಾಲಿಫೋರ್ನಿಯಾ ಬಿಟ್ಟು ಮರಳಿ ಮಿನಿಯಾಪೊಲಿಸ್‌ಗೆ ಬರಲಿದ್ದೆ. ಕೆಲವರು ಶನಿವಾರ ಮುಂಜಾನೆ ನನ್ನನ್ನು ಕಾಣಲು ಬರುವವರಿದ್ದರು.

ನಾನು ರವಿ ಸವಣೂರ ಅವರ ಮನೆಗೆ ಹೋದೆ. ನಲಿನಿ ನಮಗಾಗಿ ಕಾಯುತ್ತಿದ್ದಳು. ರಾತ್ರಿ ಹನ್ನೆರಡು ಆದದ್ದರಿಂದ ಊಟದ ಶಾಸ್ತ್ರ ಮುಗಿಸಿದೆವು. ಮರುದಿನ ಬೆಳಗ್ಗೆ ಉದಯನ ಮನೆಗೆ ಬಂದೆ. ಮೂರು ವಾರಗಳ ನನ್ನ ಕ್ಯಾಲಿಫೋರ್ನಿಯಾ ವಾಸ್ತವ್ಯ ಮುಗಿದಿತ್ತು. ಮಿನಿಯಾಪೊಲಿಸ್‌ಗೆ ಮರಳಲು ನನ್ನ ಪ್ಯಾಕಿಂಗ್‌ ನಡೆಸಿದೆ. .. ..""

English summary
NRI Kannada section: Da. Ra. Bendre as seen by G.V. Kulakarni
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X