ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ಹೇಳಿದ್ದು !

By * ಎಸ್‌.ಕೆ.ಹರಿಹರೇಶ್ವರ, ಮೈಸೂರು
|
Google Oneindia Kannada News

Shikaripura Harihareshwara
ಸಾಕು ರೀ ಸುಮ್ಮನಿರಿ ಸ್ವಲ್ಪ, ಬಿಡಿ, ಕೊಚ್ಚಬೇಡಿ ಬಡಾಯಿ;
ಗಂಡಸರೇ ಹೀಗೆ, ಗೊತ್ತು ನಿಮ್ಮ ಈ ಎಲ್ಲ 'ಹಾಯ್‌ ಹಾಯಿ’;
ಅರ್ಥವಿದೆಯೇನಿದಕೆ ಬರೀ (ಬ್ಯೂಟಾಟಿಕೆಯ?) ಬೂಟಾಟಿಕೆಯ ಬಾಯಿ-
ಪುಸಲಾಯಿಸಲೆಂದೆ ಕೊಡಲು ತಂದ ಹಾಗಿದೆ ನಿಮ್ಮ ಹಾರ ತುರಾಯಿ!

ನಿಮಗೇನು ತಿಳಿದೀತು ಹೆಂಗಸರ ಮನದಾಳ
ಹೆಜ್ಜೆ ಹೆಜ್ಜೆಗೂ ನಾವು ಅನುಭವಿಸುವ ತಳಮಳ, ತಾಳ;
ಇರಲು ಆದೀತೆ? ನೀವು ಬಿಡುವಿರೇನು ನಾವು ನಿರಾಳ-
ಮನಸಲ್ಲಿ, ನೆಮ್ಮದಿಯ ನೆರಳಲ್ಲಿ ಸಾಗಿಸಲು ಬಾಳ?

ನೀವು ಗಂಡಸರು- ಎಲ್ಲವೂ ನಿಮ್ಮ ಮೂಗಿನ ನೇರ
ನಡೆಯಬೇಕೆಂದೇ ನಿಮ್ಮ ಹಠ ; ಥೇಟ್‌ ಮಗುವಿನ ಥರಾ !
ನಿಮಗೆ ಎಲ್ಲಿದೆ ತೃಪ್ತಿ ? ನಿಮ್ಮ ಬಯಕೆ ಅಪಾರ ;
ಒಬ್ಬ ಹೆಂಡತಿಯಲ್ಲಿ ಬಗೆ ಬಗೆಯ ಬಯಕೆಯ ಜಾರ!!

ಸಹನೆಯಲಿ ತಾಯಿ, ಕೇಳಿಯಲಿ ರಂಭೆ ಅಪ್ಸರೆ,
ಮನೆಯ ಕೆಲಸಕೆ ದಾಸಿ, ಬರುವ ದೂರವಾಣಿಗೆ ಉತ್ತರೆ,
ಸಲಹೆ ಸೂಚನೆ ಕೊಟ್ಟು ಹೊಣೆ ಹೊರುವ ಮಂತ್ರಿಣಿ ಸಿಕ್ಕರೆ?-
ಈ ಎಲ್ಲ ಅವತಾರ ಎತ್ತಬೇಕೆ ನಾವು? ಇದು ಕನಸಿನ ಸಕ್ಕರೆ!

ಹುಡುಗ, ಎಷ್ಟು ಬೆಳೆದರೂ ಆ ಗಿಡುಗ ಹುಡುಗನೇ ಅಂತೆ ;
ಹುಡುಗಿಯೋ ಯಾವಾಗಲೂ ಅವಳು ತಾಯಿಯೇ ಅಂತೆ, ಗೊತ್ತೆ !
ಅಂಗಾಂಗ, ರಕ್ತ ಮಾಂಸ ಅವಳ ನರ ನಾಡಿ, ಒಳ ಹೊರಗು-
ಎಲ್ಲ ಭಿನ್ನ ; ಕೇಳಿಲ್ಲವೇ ಕುಜ-ಶುಕ್ರ ಗ್ರಹದ ಕಥೆಯ ಮಿಥ್ಯೆ?

'ಅತ್ತಿಯ ಹಣ್ಣನು ಕಂಡೆ, ಬಿಳಿ ಕಾಗೆಯನೂ ಕಂಡೆ;
ನೀರೊಳಾಡುವ ಮೀನ ಹೆಜ್ಜೆಗಳನೂ ನಾನು ಕಂಡೆ!’-
ನೆನಪಿದೆಯ ವ್ಯಾಸ ಹೇಳಿದ ಮಾತು, ಬಿಸಿಯಾಯ್ತೆ ಮಂಡೆ?
ನಾರಿಯರ ಮನಸಂತೂ ಸಿಗದ, ಸಿಕ್ಕರೂ ಹಿಡಿಯಲಾಗದ ಬೆಂಕಿ ಉಂಡೆ!

English summary
Kannada poetry : A poem on women by Shikaripura Harihareshwara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X