• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕವಿ ದೃಷ್ಟಿ ಅನಂತ, ಅಮೆರಿಕಾದಲ್ಲೂ ಕಂಡ ವಸಂತ

By ಶಿಕಾರಿಪುರ ಹರಿಹರೇಶ್ವರ
|

ಕನ್ನಡ ನಾಡಿನಲ್ಲಿ, ಭಾರತದ ಹಲವಾರು ಕಡೆ ಸುಗ್ಗಿಯಲ್ಲಿ ವಸಂತ ಉತ್ಸವ ನಡೆಸುವುದು ಸಂಪ್ರದಾಯ. ಸ್ನೇಹಿತರು ಬಂಧುಗಳು ಒಂದೆಡೆ ಸೇರಿ ಹಾಡು, ಹಸೆ, ಆಟ, ನಾಟಕ, ನೃತ್ಯ ಹೀಗೆ ಸಂತೋಷವಾಗಿ ದಿನ ಕಳೆಯುವುದೇ ಈ ಸುಗ್ಗಿ ಹಬ್ಬದ ವೈಶಿಷ್ಟ್ಯ. ಪ್ರಕೃತಿಯಲ್ಲಿ ಆಗುವ, ಹಠಾತ್ತನೆ ಗೋಚರಿಸುವ ಬದಲಾವಣೆ ; ಅದರಿಂದ ಜನಗಳ ಮೇಲೆ ಹಕ್ಕಿ, ಪ್ರಾಣಿಗಳ ಮೇಲೆ ಆಗುವ ಪರಿಣಾಮ, ರಮ್ಯಜೀವನದ ಸೂಕ್ಷ್ಮ ಅಂಶಗಳನ್ನ ಗುರುತಿಸುವುದು - ಇವನ್ನೆಲ್ಲ ನಮ್ಮ ಕನ್ನಡದ ಹಿಂದಿನ ಕವಿಗಳು ಈ ಮಧುಮಾಸದ ಬಣ್ಣನೆಯಲ್ಲಿ ತುಂಬಿದ್ದಾರೆ.

‘ಎತ್ತಣ ಮಾಮರ, ಎತ್ತಣ ಕೋಗಿಲೆ’ ಧೋರಣೆ ಬಲಿಯತೊಡಗಿದಾಗ ಕವಿಗಳು ವಸಂತವನ್ನು ಕುರಿತು ಬರೆಯುವ ಪರಿ ಬದಲಾಯಿಸಿತು.

‘ಒಂದು ವೇಳೆ ಆ ವಸಂತ-

ಮಾಸದಲ್ಲೇ ನೀ ಹಾಡಲು

ಕೇಳುವ ಕವಿಯಿಲ್ಲವೀಗ ;

ನಿನ್ನ ಕುರಿತು ಕವಿತೆ ಬರೆದು

ಓದುವುದು ಸಲ್ಲದೀಗ.

ಅಯ್ಯೋ, ನಿನಗೆ ಹೇಗೆ ಗೊತ್ತು

ಸಾಹಿತ್ಯದೊಳಾದ ಕ್ರಾಂತಿ!’

- ಡಾ. ಜಿ.ಎಸ್‌. ಎಸ್‌. (‘ ಕೋಗಿಲೆಗೆ ಉಪದೇಶ’ ಅನಾವರಣ)

ಈ ಹಿನ್ನೆಲೆಯಲ್ಲಿ ಊರಿನಿಂದ ದೂರ ಬಂದು ನೆಲಸಿದ , ಅಮೆರಿಕಾದ ಕೆಲವು ಕನ್ನಡ ಕವಿಗಳು ವಸಂತವನ್ನು ಕಂಡ ಬಗೆಯನ್ನು ಈಗ ನೋಡೋಣ ;

‘ಚೈತ್ರದ ನಡುಹಗಲಿನ / ಸುಡು ಬಿಸಿಲಿನ

ಸೂರ್ಯನ ಪಳಗಿಸಿ/

ಚಂದ್ರನಂತೆ ತಂಪಾಗಿಸುವ’

ಡಾ।। ಹೆಮ್ಮಿಗೆ ರಂಗಾಚಾರ್‌(‘ರಂಗ’) ಅವರು

ಚೈತ್ರದ ಉರಿಬಿಸಿಲಿನಲ್ಲಿ

ಸುಟ್ಟು ಬಂದರವಾದ ಕಂದು ಬಯಲುಗಳಲ್ಲಿ ’

ಮತ್ತೆ ‘ಭಾದ್ರಪದ’ದಲ್ಲಿ

‘ಕಾಡು ತರಗಣಿಗಳ ಹಸಿರು

ಹಂದರದ ಹಬ್ಬುವು’

ದನ್ನು ಮುಂಗಾಣುತ್ತಾರೆ. (ನೆಲದ ಕರೆ, ಪು.40)

‘ನಿರಾಶೆಯ ಬೆಂಗಾಡಿನಲ್ಲಿ ಅವಿತು

ಪುನಃ ಪುನಃ ಮೊಳೆವ ಆಸೆಯಂತೆ

ಸಾವಿನ ಬೀಸುಕೋಲನು ತಪ್ಪಿಸಿ

ಹೇಗೆ ಹುದುಗಿತ್ತು ಈ ಜೀವ ?’

-ಎಂದು ಪ್ರಕೃತಿ ರಹಸ್ಯದತ್ತ ಬೊಟ್ಟು ಮಾಡುತ್ತಾರೆ.

‘ನೆಟ್ಟಗೋಡಿರುವ ನಿನ್ನ ಬೈತಲೆಯಲ್ಲೆನ್ನ

ಬೆರಳು ಜಾರಿಸಬೇಕು’

- ಎಂದು ನಲ್ಲೆಯ ಎಲ್ಲ ನೆನಪುಗಳು ಮೆರವಣಿಗೆ ಹೊರಟಾಗ ಹೇಳುವ ಕವಿ ಡಾ. ಹಾ. ಮು. ಪಟೇಲರಿಗೆ (ಮಾಗಿ) ಸುಗ್ಗಿಯಲ್ಲೊಮ್ಮೆ

‘ನಮ್ಮ ಎರೇ ಹೊಲದ ನಡುವೆ /

ಒಂದೇ ಸಾಲು ನೇಗಿಲು ಹಾಯಿಸಿದ ಹಾಗೆ’

( ‘ ನಿನ್ನೊಲವಿನಡಿಯಲ್ಲಿ’, ಶೂದ್ರ ಪುಟ 33)

- ಎಂಬ ಸಾದೃಶ್ಯ.

ಹಿತ್ತಲಲ್ಲೇ ಪಾತಿ ಮಾಡಿ ನೆಟ್ಟ,‘ಇಂಥ ಬೀಜ ಬಿತ್ತಿದರೆ ಮಕ್ಕಳಿಗೆ ಒಳ್ಳೆಯದಾಗಲಿಕ್ಕಿಲ್ಲ’ ಎನ್ನುವ ಒಳದನಿ ಅವ್ವನಿಗೂ ಸುಳಿವು ಸಿಕ್ಕದ ‘ನುಗ್ಗೇ ಗಿಡ’ ಕವಿಯ ಎತ್ತರಕ್ಕೂ ಬೆಳೆಯ ತೊಡಗಿ,

‘ವಸಂತದಿರುಳಿನಲ್ಲಿ ನನ್ನ ಗಿಡ

ಗಾಳಿಯ ತೋಳುಗಳಲ್ಲಿ ಮುಲು ಮುಲು ತಂದಾಗ

ನನಗೆ ಪುಳಕವಾಗುತ್ತಿತ್ತು.’

(‘ನುಗ್ಗೇ ಗಿಡದ ದುರಂತ ಕತೆ’ ಶೂದ್ರ ಪು.5)

‘ವನರಾಜಿಯ ಮಡಿಲಲ್ಲಿ ಆತ್ಮಸಂಧಾನ’ಕ್ಕೆ ಹೊರಟ ಚಿ. ಉದಯಶಂಕರರಿಗೆ

‘ವಸಂತ ಮಳೆಬಿಲ್ಲ ಹೂಡಿ

ಧರೆಗಿಳಿಸಿದ ಧಾರೆ ಧಾರೆ ಮಳೆಗೆ

ಗಿಡಮರ ಬಳ್ಳಿಯಲ್ಲಿ ಫಲ ಪುಷ್ಪರಾಗ’

(‘ಸಮರಸ’, ಅನುಬಂಧ ಪು.40)

ತುಂಬಿದ

‘ಕಾಡಿನ ಉದ್ದಗಲಕ್ಕೂ/

ಮುಗ್ಧ ಜೀವಜಂತುಗಳ ಹೆಜ್ಜೆ ಹಾಡು/

ಶೃತಿಗೆ ಲಯಬದ್ಧ ಗಾಳಿ ಹೊಡೆತ’

ಕಂಡು, ಕೇಳಿ ವಿನೂತನ ಆಮೋದ.

ಹಸಿರು ಹಂದರದಲ್ಲಿ ಮನದ ಮಲ್ಲಿಗೆ ಬರಿಯುವದನ್ನ ಬಣ್ಣಿಸುತ್ತ,

‘ಚೈತ್ರದ ಹೊಸ ಹೊಸ ಸುಗ್ಗಿ

ಚಿತ್ರ ಬರೆದು ನೆಲದಾಗ ಹೂ ಮಗ್ಗಿ

ಹಾಡಿ ಕೋಗಿಲ ಮಾಮರದಾಗ’

(ಮಲ್ಲಿಗೆ ಅರಳ್ಯಾವು, ಪು.1)

ಎನ್ನುವ ವಿಮಲಾ ಚನ್ನಬಸಪ್ಪ ಅವರು ‘ವರುಷಗೊಮ್ಮೆ ಹೊಸತು ಸುಗ್ಗಿ’ ಬಂದಾಗ ‘ನನ್ನಿ ನೆನಪು ನುಗ್ಗಿ’ ಹಾರುವದನ್ನ ಹಾಡುತ್ತಾರೆ. (ನೋಡಿ: ‘ಹೂವಿಗೊಂದು ದುಂಬಿ ಎರಗಿ’ ಚನ್ನ, ಪು.77)

ಇನಿಯ ರಾಯ ನಕ್ಕರೇನೇ ಮನೆ ಮನ ಚಂದವಾದೀತೆನ್ನುವ ಎಲ್ಲ ಹೆಣ್ಣಿನ ಒಳದನಿಯನ್ನ

‘ಮುಗುಳಿನಲಿ ಅಡಗಿದಾ ಎಲೆ ಕೊನರಿದಾಗಲೇ

ಇಲ್ಲಿಹುದು ವಸಂತ....

ಹೃದಯದಲಿ ಅಡಗಿದು ನಗೆ ಮೊಗದಲರಳಿದರೆ

ಬೆಳಗುವುದು ಚಂದ್ರಹಾಸ’

(‘ನಿನ್ನ ಸಹವಾಸ, ಚನ್ನ, ಪು.23’)

-ದಲ್ಲಿ ಕಾಣುತ್ತೇವೆ. ಇದಕ್ಕೆ ಪೂರಕವಾಗಿ ಆ ‘ಭ್ರಮರ’ಕ್ಕೆ

‘ಹಸಿರು ಎಲೆಗಳ ಪಚ್ಚದ ತೋರಣ

ನಿನ್ನಯ ಅರಮನೆಗೆ

ಹೊಸ ಮೊಗ್ಗೆಯ ಹೂ ಬಳ್ಳಿಯ

ಗೊಂಚಲ ಪರಿಮಳ ಗೊನೆಗೊನೆಗೆ’

(‘ದುಂಬಿಗೆ’, ನುಡಿ ಎನ್ನ ವೀಣೆ, ಪು.27)

ಎಂದು ಜೀವನ ವಸಂತ ಕುಸುಮದ ಮಧುರ ಪಕಳೆಗಳನ್ನು ಪರಿಚಯಿಸುತ್ತಾರೆ.

‘ನಾನೂ ಅಮೆರಿಕನ್‌ ಆಗಿಬಿಟ್ಟೆ’ ಖ್ಯಾತಿಯ ಡಾ.ಮೈ.ಶ್ರೀ. ನಟರಾಜರಿಗೆ

‘ಅಮೆರಿಕೆಯಲ್ಲಿ ವಸಂತ

ಬಂದಿಹನೆಂದು ಮನಸಲಿ

ಮಹದಾನಂದವಾಯ್ತು’.

ಕಾರಣಗಳು ಹಲವಾರು. ಮುಖ್ಯವಾಗಿ,

‘ರಗಳೆ ಇಲ್ಲದೆ ಹಗಲು

ಕಾರು ಸ್ಟಾರ್ಟಾಗಿ,

ತಣ್ಣೀರ ನಲ್ಲಿಯಲಿ

ಕೈ ಕೊರೆತ ನಿಂತು

ಮುಚ್ಚಿ ಸಿಡಿದೆದ್ದ

ಕಿಟಕಿಗಳೆಲ್ಲ ತೆರೆದು

ಮನಸಾರೆ ಉಸಿರಾಡುವಂತಾಯ್ತು !’

(‘ಅಮೆರಿಕೆಯಲ್ಲಿ ವಸಂತ’

ನಾನೂ ಅಮೆರಿಕನ್‌ ಆಗಿಬಿಟ್ಟೆ, ಪು.8)

ಆಸೆಗಳು ಬಗೆ ಬಗೆಯವು; ಕಾಲ ದೇಶ ಸನ್ನಿವೇಶವನ್ನನುಸರಿಸಿ ಅವು ತಳೆಯುವ ವೇಷಗಳೋ ಹಲವು ವಿಧಗಳು. ಜ್ಯೋತಿ ಮಹದೇವ್‌ (‘ಸುಪ್ತದೀಪ್ತಿ’) ಅವರಿಗೆ ಈ ಅಭಿಲಾಷೆಗಳನ್ನು ಇನಿಯನೊಂದಿಗೆ ಹೇಳಿಕೊಳ್ಳುವ ಹಂಚಿಕೊಳ್ಳುವ ತೂಗಿಕೊಳ್ಳುವ ಒಂದು ಮಹದಾಸೆಯೂ ಉಂಟು:

ನಿಮ್ಮೊಲವ ಮಾಮರದ ತಣ್ಣೆಳಲ ತಂಪಿನಲಿ

ಕಂಪ ಬೀರುವ ಮಲ್ಲೆಯಾಗರಳುವಾಸೆ;

ಹಿತವಾಗಿ ಮರ ತಬ್ಬಿ, ಚಪ್ಪರದ ತೆರ ಹಬ್ಬಿ,

ಮಲ್ಲಿಗೆಯ ಸೊಂಪಿನೊಲು ಇರುವ ಹಿರಿದಾಸೆ!

ಚೈತ್ರ ತಾ ಕಾಲಿಡಲು ಮಾಮರವು ಕೆಂಪೇರೆ,

ತಳಿರ ಮರೆಯಲಿ ಕೋಗಿಲೆಯಾಗುವಾಸೆ;

ಹೃದಯಸಿಂಹಾಸನದ ಪ್ರೀತಿ ಪಂಜರದಲ್ಲಿ

ಸವಿಮಾತ ಗಿಣಿಯಾಗಿ ಉಲಿಯುತಿರುವಾಸೆ! ....

ಇನಿತೆಲ್ಲ ಕೇಳಿದರೂ, ನನಗಾಗಿ ತುಡಿಯುತಿಹ

ನಿಮ್ಮ ಜೀವದ ಜೀವ ನಾನಾಗುವಾಸೆ!

(‘ನನ್ನಾಸೆ’, ಭಾವಲಹರಿ ಕವನ ಸಂಕಲನ, ಪುಟ 60)

ಅಂಥ ವಸಂತನನ್ನು ಕವಯಿತ್ರಿ ಕಾತುರದಿಂದ ನಿರೀಕ್ಷಿಸುವುದುಂಟು; ಬಾರೆಯಾ ವಸಂತ ಎಂದು ಹಲುಬುವುದುಂಟು;

‘ಓ ವಸಂತ, ನಿನ್ನಾಗಮನದ ಆಸೆಯ

ಕೊನರುಗಳೇ ತುಂಬಿದ ಹೆಮ್ಮರದಡಿಯ

ನೆಳಲಲಿ ಇದ್ದರೂ ಮುದುಡುತಿಹುದು,

ಸೊರಗುತಿಹುದು ಎನ್ನ ಒಲವ ಬಳ್ಳಿಯಿದು.’

ಎಂದು ಕೊರಗುವುದೂ ಉಂಟು. ಮಾಂದಳಿರ ತಂಪು, ಮಲ್ಲಿಗೆಯ ಕಂಪು, ಕೋಗಿಲೆಯ ಇಂಪು, ಗಿಣಿಗಳ ಚಿಲಿಮಿಲಿಯ ಉಲಿ, ಕಣ್ಗೆ ಹಸಿರು, ಬಾಯ್ಗೆ ಪಸೆಯ ಇನಿಗಳಿಗಾಗಿ ಹಂಬಲಿಸಿ, ತೊಳಲಾಡುವುದುಂಟು. ಎದೆಯ ಭಾವಗಳೆಲ್ಲ ಒಣಗಿಹೋದೀತೆಂಬ ಅಂಜಿಕೆ ಕಾಡುವುದುಂಟು. ಆಗ ‘ಸುಪ್ತದೀಪ್ತಿ ಕರೆಯುತ್ತಾರೆ:

‘ಇರುಳ ಮಡಿಲಿನಲಿ ನಾ ಓರ್ವಳೇ ಬಿಕ್ಕಿರಲು

ಮಧುಮಾಸ ಓಡಿ ಬಾ, ಸಂತೈಸಲೆನ್ನ ನಿನ್ನೊಕ್ಕೊರಲು!’

ಹೀಗೆ ಸಂಕೇತಗಳೂ ಪ್ರತಿಮೆಗಳೂ ನೇರ ನುಡಿಗಳೂ ಎಷ್ಟೂ ಸಾರ್ಥಕವಾಗಿ ಅನಿಸಿಕೆಗಳಿಗೆ ಪೋಷಕವಾಗಿದೆಯೆಂಬುದನ್ನ ಗಮನಿಸಿದಾಗ, ಅಮೆರಿಕದ ಈ ಕನ್ನಡ ಕವಿಗಳ ವಸಂತದ ನೋಟ ರಮ್ಯ ವಸ್ತು ನವ್ಯದ ನಡುವೆ ತೂಗಾಡುತ್ತದೆ ಎನಿಸುತ್ತದೆ.

ಬನ್ನಿ, ಈ ವಸಂತದ ಚೆಲುವನ್ನು ಊರಿಂದ ದೂರಹೋಗಿ, ಯಾವುದಾದರೊಂದು ಉದ್ಯಾನ ವನ ವಿಹಾರದಲ್ಲಿ ಪ್ರಕೃತಿಯ ಮಡಿಲಲ್ಲಿ ಸುಖಿಸೋಣ; ಅದು ಸಾಧ್ಯವಾಗದಿದ್ದಲ್ಲಿ, ಮನಸ್ಸಿಗೆ ಹತ್ತಿರವಾದವರೊಡಗೂಡಿ ಸಂಗೀತ ಸಾಹಿತ್ಯ ಕ್ರೀಡೆ ಉಲ್ಲಾಸ ಮನರಂಜನೆಯ ಹಬ್ಬದ ವಾತಾವರಣದಲ್ಲಿಯೇ ಕಲ್ಪನೆಯ ಕಡಿವಾಣ ಕಳಚಿ, ಕವಿಗಳೊಡನೆ ವಿಹರಿಸಿ, ಕೊಂಚ ಅನುಭವಿಸಿ, ಆನಂದಿಸೋಣ !

ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ, ಬಂದ ವಸಂತ...

English summary
S.K.Harihareshwara, California writes about vasanta(spring) according to kannada poets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more